ನಮ್ಮ ಪ್ರೊಪೆಸರ್‌ಗಳು ಪ್ರಾಜೆಕ್ಟ್ ಮಾಡಬೇಕು ಎಂದು ಪ್ರಾದ್ಯಾಪಕರ ದಂಡನ್ನು ಫಂಡಿನ ಹಿಂದೆ ಓಡಲು ಬಿಟ್ಟ ಕೃಷಿ ವಿಶ್ವವಿದ್ಯಾಲಯದ ಉಪ ಕುಲಪತಿಗಳಿದ್ದಾರೆ. ಆಚೆ ಕಲಿಸಲು ಸಮಯವಿಲ್ಲ, ಸಂಶೋಧನೆ ಕ್ಷೇತ್ರಕಾರ್ಯಕ್ಕೆ ಬಿಡುವಿಲ್ಲದವರು ಕೃಷಿ ಉತ್ಸವ, ಮೇಳಗಳಲ್ಲಿ ಮಾಹಿತಿಗೆ ಗಾಳ ಹಾಕಲು ಹಾಜರಾಗುತ್ತಾರೆ. ಮಧ್ಯಾಹ್ನ ಊಟದ ಖರ್ಚಿಗೆ ದುಡ್ಡಿಲ್ಲವೇನೋ ಎಂಬಂತೆ ವರ್ತಿಸುವ ಈ ಸಂಶೋಧಕರ ಪ್ರೊಜೆಕ್ಟ್ ರಿಪೋರ್ಟ್ ಕಸಿದು ನೋಡಿದರೆ ಹಣ ಬಿಡುವ ಹೈಬ್ರಿಡ್ ತಳಿ ಕಾಣುತ್ತದೆ!


ಬೀಜಮೇಳ, ಫಲಪುಷ್ಪ ಪ್ರದರ್ಶನ, ಕೃಷಿ ಉತ್ಸವ, ಮೂಲಿಕಾ ಮೇಳ ಹೀಗೆ ಗ್ರಾಮೀಣ ಜ್ಞಾನ ವಿನಿಮಯ ಕಾರ್ಯಕ್ರಮಗಳು ಇತ್ತೀಚಿನ ವರ್ಷಗಳಲ್ಲಿ ಹೆಚ್ಚುತ್ತಿವೆ. ಆಸಕ್ತ ಕೃಷಿಕರು, ವಿವಿಧ ಸ್ವಯಂ ಸೇವಾ ಸಂಸ್ಥೆಗಳು, ಕೃಷಿಕಪರ ಸಂಘಟನೆಗಳು ರೈತ ಮೂಲದ ಮಾಹಿತಿ ಸಂಗ್ರಹ ಹಾಗೂ ಜನಜಾಗ್ರತಿ ಕಾರ್ಯಗಳಲ್ಲಿ ನಿರತವಾಗಿವೆ, ಕೃಷಿ ಉತ್ಸವಗಳು ರೂಪುಗೊಳ್ಳುತ್ತಿವೆ. ಅಧಿಕಾರಿಶಾಹಿಯ ಸರಕಾರಿ ಕಾರ್ಯಕ್ರಮಗಳಿಗಿಂತ ಭಿನ್ನವಾದ ಇವು ಜನ ಸಹಭಾಗಿತ್ವದ ವಿಶೇಷವಾಗಿ ಜನಮನ್ನಣೆ ಗಳಿಸುತ್ತಿವೆ. ಕೃಷಿ-ಅರಣ್ಯ ಕ್ಷೇತ್ರಗಳ ವೈವಿಧ್ಯಗಳ ದರ್ಶನ ನೀಡುವ ಕಾರ್ಯಕ್ರಮಗಳು ಜನರಲ್ಲಿ ಸಂರಕ್ಷಣೆ ಪ್ರಜ್ಞೆ ಮೂಡಿಸಲು ಸಹಾಯಕವಾಗಿವೆ. ಆಸಕ್ತರು ಮಾಹಿತಿ ಅರಸಿ ಎಲ್ಲೋ ಹಳ್ಳಿ ಮೂಲೆ ಅಲೆಯುವ ಬದಲು ಇಂತಹ ಕಾರ್ಯದಲ್ಲಿ ಪಾಲ್ಗೊಂಡರೆ ಅನಾಯಾಸವಾಗಿ ಮಾಹಿತಿ ಸಂಪರ್ಕ ಸಾಧ್ಯವಾಗುತ್ತದೆ. ರಚನಾತ್ಮಕ ಮನಸ್ಸು, ಕಲಿಕೆ ಆಸಕ್ತಿಯ ಜನ ಯಾವ ಆಮಂತ್ರಣಕ್ಕೆ ಕಾಯದೇ ಮಾಧ್ಯಮ ಮಾಹಿತಿ ಮಾತ್ರದಿಂದ ಭಾಗವಹಿಸುತ್ತಾರೆ. ಸಂರಕ್ಷಣೆ ಕಾರ್ಯಕ್ಕೆ ಹೆಗಲು ನೀಡುತ್ತಾರೆ. ಬಿತ್ತಿ ಬೆಳೆದ ಅನುಭವ ಜ್ಞಾನ ವಿನಿಮಯ ನಡೆಯುತ್ತದೆ.

ಕಳೆದ ೫-೬ ವರ್ಷಗಳಿಂದ ಕರ್ನಾಟಕದಲ್ಲಿ ಜೀವ ವೈವಿಧ್ಯ, ಕೃಷಿ ವೈವಿಧ್ಯ ಸಂರಕ್ಷಣೆ ಹಿನ್ನೆಲೆಯಲ್ಲಿ ಹಲವು ಕಾರ್ಯಕ್ರಮಗಳು ಜರುಗಿವೆ. ಮಲೆನಾಡು, ಬಯಲು ಸೀಮೆಗಳಲ್ಲಿ ಬೀಜ ಸಂರಕ್ಷಕರ ಜಾತ್ರೆಗಳಿಗೆ ಮೆರಗು ಬಂದಿದೆ. ತಳಿ ಸಂರಕ್ಷಣೆ ಮಾಡಬೇಕು ಎಂಬ ಕಳಕಳಿಯಲ್ಲಿ ಶ್ರಮಿಸುವ ವ್ಯಕ್ತಿ, ಸಂಸ್ಥೆಗಳಿಲ್ಲದೇ ಇನ್ನೊಂದು ವರ್ಗ ಸದಾ ಇಂತಹ ಕಾರ್ಯಕ್ರಮಗಳಿಗಾಗಿ ಕಾಯುತ್ತಿರುತ್ತದೆ. ರಾಜ್ಯದ ಕೃಷಿ ವಿಶ್ವ ವಿದ್ಯಾಲಯದ ಆಯ್ದ ವಿಜ್ಞಾನಿಗಳು, ಪ್ರತಿಷ್ಠಿತ ಸಂಶೋಧನಾ ಸಂಸ್ಥೆಗಳ ತಜ್ಞರು ಹೆಗಲಿಗೊಂದು ಕೆಮರಾ ಹಾಕಿಕೊಂಡು ವಾಸನೆ ಹಿಡಿದು ಕಾರ್ಯಕ್ರಮಕ್ಕೆ ಮುದ್ಧಾಂ ಓಡಿ ಬರುತ್ತಾರೆ. ಇವರಲ್ಲಿ ನಿಜವಾದ ವಿಷಯ ಆಸಕ್ತಿ, ಕಲಿಕಾ ಶ್ರದ್ಧೆ, ಸಂಶೋಧನಾ ಪ್ರಜ್ಞೆ ಮಾತ್ರದಿಂದ ಬರುವವರ ಸಂಖ್ಯೆ ಎಷ್ಟು? ಅನುಮಾನವಿದೆ. ಯಾವುದೋ ರಿಸರ್ಚ್ ಪ್ರಾಜೆಕ್ಟ್‌ಗೆ ಮಾಹಿತಿ ಸಂಗ್ರಹಿಸಬೇಕು, ಸ್ಪೆಸಿಮನ್ಸ್ ಸಂಗ್ರಹಿಸಬೇಕು ಎಲ್ಲಕ್ಕಿಂತ ಮುಖ್ಯವಾಗಿ ಸಂಶೋಧನೆಯನ್ನು ಸುಲಭದಲ್ಲಿ ಮುಗಿಸಬೇಕು, ಮುಂದಿನ ಸಂಶೋಧನೆಗೆ ಹೊಸ ವಿಷಯ ಹುಡುಕಬೇಕು, ಫಂಡು ಹುಡುಕಬೇಕು ಎಂದು ಲೆಕ್ಕಹಾಕುವವರು ಜಾಸ್ತಿ. ಬೇರು ಮೂಲದ ಮಾಹಿತಿ ನೀಡಬಲ್ಲ ನೂರಾರು ಜನ ಕಾಲು ಮುರಿದಂತೆ ಕೂಡ್ರುವ ಇಲ್ಲಿ ಬಂದರೆ ತಮ್ಮ ರೊಟ್ಟಿ ಜಾರಿ ಸುಲಭದಲ್ಲಿ ತುಪ್ಪಕ್ಕೆ ಬಿದ್ದಂತಾಗುತ್ತದೆ! ಒಂದೆರಡು ವರ್ಷ ಅಲೆದರೂ ಮಾಡಲಾಗದ್ದು ದಿನದಲ್ಲಿ ಮುಗಿಸಲು ಸಾಧ್ಯವಾಗುತ್ತದೆ ಎಂಬುದು ಪಾಲ್ಗೊಳ್ಳುವಿಕೆಯ ಮುಖ್ಯಕಾಳಜಿ!.

‘ನಿಮಗೆ ಈ ಮಾಹಿತಿ ಏಕೆ? ನಿಮ್ಮ ಪ್ರಾಜೆಕ್ಟ್ ವಿವರಗಳೇನು? ಎಷ್ಟು ವರ್ಷಗಳಿಂದ ಸಂಶೋಧನೆ ಮಾಡುತ್ತಿದ್ದೀರಿ? ಈ ವರೆಗೆ ಏನೇನು ಮಾಹಿತಿ ಸಂಗ್ರಹಿಸಿದ್ದೀರಿ? ರೈತರಿಗೆ ಮಾಹಿತಿ ಒದಗಿಸಲು ನಿಮ್ಮಲ್ಲಿ ಯಾವ ವ್ಯವಸ್ಥೆ ಇದೆ?….. ನಿಮ್ಮ ವಿಶ್ವವಿದ್ಯಾಲಯದ ಅಧಿಕೃತ ಪತ್ರ ಕೊಟ್ಟು ಮಾತಾಡಿ….. ವಿವರ ನೀಡಬೇಕೋ ..ಬೇಡವೋ ಪರಿಶೀಲಿಸಿ ಆಮೇಲೆ ಹೇಳುತ್ತೇನೆ’ ಎಂದು ಥೇಟ್ ಸರಕಾರಿ ಕೆಂಪುಪಟ್ಟಿ ಶೈಲಿಯಲ್ಲಿ ನಮ್ಮ ಯಾವ ಕೃಷಿಕರೂ ಯಾವ ಮುಲಾಜಿಲ್ಲದೇ ವಿಜ್ಞಾನಿಗಳನ್ನು ಇಲ್ಲಿ ಕೇಳುವದಿಲ್ಲ! ನಮ್ಮ ಬಾಸ್‌ಗಳ ಸಹಿ ಹಾಕಿಸಿ ಉತ್ತರಿಸುತ್ತೇನೆಂದು ಸಾಗ ಹಾಕುವದಿಲ್ಲ. ‘ಕಾಫಿ ಕುಡಿತೀರಾ? ಊಟ ಆಯ್ತಾ?’ ಎಂದು ವಿಚಾರಿಸಿ ಅವರು ಕೇಳುವ ಮಾಹಿತಿಗಳನ್ನೆಲ್ಲ ಕಣ್ಮುಚ್ಚಿ ನೀಡುತ್ತಾರೆ. ವಿಜ್ಞಾನಿಗಳು, ಸಂಶೋಧಕರು ಎಂದರೆ ನಮ್ಮ ಹಳ್ಳಿ ಜನಕ್ಕೆ ಇವತ್ತಿಗೂ ಬಹಳ ಗೌರವವಿದೆ. ಸಂಶೋಧನೆಯ ಮಾಹಿತಿ ನಾಳೆ ನಮ್ಮ ಏಳ್ಗೆಗೆ ನೆರವಾಗುತ್ತದೆ ಎಂಬ ಮುಗ್ಧ ತಿಳುವಳಿಕೆಯಿದೆ. ಆದರೆ ಸಂಶೋಧಕರು, ವಿಜ್ಞಾನಿಗಳಲ್ಲಿ ಎಷ್ಟು ಜನ ನಂಬಿಕೆಗೆ ಅರ್ಹರಾಗಿದ್ದಾರೆ? ಹುಡುಕಬೇಕು.

ನಮ್ಮ ಪ್ರತಿಷ್ಠಿತ ವಿಶ್ವವಿದ್ಯಾಲಯಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಕೆಲ ವಿಜ್ಞಾನಿಗಳ ಕಾರ್ಯ ವೈಖರಿಯನ್ನು ಅನುಮಾನದಿಂದ ನೋಡಲು ಕಾರಣವಿದೆ. ರೈತರ ಜೊತೆ ತಮಗೆ ಅಗತ್ಯವಿರುವ ಮಾಹಿತಿ ಸಂಗ್ರಹಣೆ ಸಂದರ್ಭದಲ್ಲಿ ಇವರು ವ್ಯಕ್ತಪಡಿಸುವ ನಾಟಕೀಯ ವಿಧೇಯತೆ ಹಿಂದೆ ಇರುವ ಅಸಲಿ ಮುಖವೇ ಬೇರೆ! ನೂರಾರು ರೈತರು ಕಷ್ಟಪಟ್ಟು ಸಂಗ್ರಹಿಸಿದ ನಾಟಿ ಬೀಜವನ್ನೋ, ತಳಿ ವೈವಿಧ್ಯದ ಚಿತ್ರ ತೆಗೆದು ಸುಲಭದಲ್ಲಿ ದಾಖಲಿಸಿ ಕಾಲೇಜು/ಫಂಡಿಂಗ್ ಏಜನ್ಸಿ ಎದುರು ಉಪನ್ಯಾಸ ನೀಡುವ ಮಹನೀಯರು ಇಲ್ಲಿದ್ದಾರೆ. ಒಂದು ಗ್ರಾಮೀಣ ಸಂಘಟನೆಯಲ್ಲಿ ಕೃಷಿ, ಅರಣ್ಯ ಮೇಳ ಹೇಗೆ ನಡೆಯಿತು? ಸಂಘಟನೆ ಹಿಂದಿನ ಪರಿಶ್ರಮವನ್ನು ಕನಿಷ್ಠ ಸೌಜನ್ಯಕ್ಕೂ ವಿಚಾರಿಸದೇ ಪೋಟೋ ಹೊಡೆಯಲು ಬರುವ ಫಟಿಂಗರ ಹಾಗೇ ವರ್ತಿಸುತ್ತಾರೆಂದರೆ ಇಂತಹ ವಿಜ್ಞಾನಿಗಳನ್ನು ಯಾವ ತಕ್ಕಡಿಯಲ್ಲಿಟ್ಟು ನೋಡಬೇಕು? ಈಗ ಕಾಲ ಬದಲಾಗುತ್ತಿದೆ, ಸಂಶೋಧನೆ ಹಿಂದಿನ ಸತ್ಯವನ್ನು ಅರಿಯುವ ದಾರಿಗಳು ಹಲವಿದೆ. ಶಿಕ್ಷಣ ಜಾಗ್ರತಿಯಿಂದಾಗಿ ನಿಧಾನಕ್ಕೆ ಇಂತಹ ವರ್ತನೆಯನ್ನು ಪ್ರಶ್ನಿಸುವ ಸಂದರ್ಭಗಳು ಹೆಚ್ಚುತ್ತಿರುವಾಗ ಪ್ರೊಜೆಕ್ಟ್ ಫಂಡು ಪ್ರೇರಿತ ಕಾಯಂ ಸಂಶೋಧಕರ ವೈಖರಿ ಬದಲಾಗಬೇಕು.

‘ನಾವು ನೀಡಿದ ನಾಟಿ ಭತ್ತ ಎಲ್ಲಿ ಬೆಳೆದಿದ್ದಾರೆ?’ ಎಂದು ಭತ್ತ ಸಂಶೋಧನಾ ಕೇಂದ್ರಕ್ಕೆ ಮೂರು ವರ್ಷದ ಹಿಂದೆ ಕರಾವಳಿ ಕೃಷಿಕರೊಬ್ಬರು ಹೋಗಿ ವಿಚಾರಿಸಿದ್ದರು. ಸಂಶೋಧನೆಗೆಂದು ಸಂಗ್ರಹಿಸಿದ ಭತ್ತಗಳನ್ನು ಸಣ್ಣ ಸಣ್ಣ ಪ್ರಾತ್ಯಕ್ಷಿಕಾ ತಾಕುಗಳಲ್ಲಿ ಬೆಳೆದು ಇಳುವರಿ ಲೆಕ್ಕ ನಡೆಯುತ್ತಿತ್ತು, ೪೫ ಲಕ್ಷ ರೂಪಾಯಿ ವೆಚ್ಚದಲ್ಲಿ ತಳಿ ಸಂರಕ್ಷಣೆಯ ಸಂಶೋಧನೆ ಸಾಗುತ್ತಿತ್ತು. ನೂರಾರು ವರ್ಷಗಳಿಂದ ಕರಾವಳಿಯ ಗಜನಿ ಭೂಮಿಯ ಉಪ್ಪು ನೀರಿನಲ್ಲಿ ಬೆಳೆಯುತ್ತಿದ್ದ ಕಗ್ಗ ಭತ್ತವನ್ನು ಸಿಹಿ ನೀರಿನಲ್ಲಿ ಬೆಳೆಯಲಾಗಿತ್ತು! ತಮ್ಮ ಸಂಶೋಧನೆಯ ಅನುಕೂಲಕ್ಕೆಂದು ಇರುವ ಸಣ್ಣ ಹೊಲದಲ್ಲಿ ವಿಜ್ಞಾನಿ ಎಲ್ಲ ಜಾತಿಯ ಭತ್ತ ಬೆಳೆಯುವದಕ್ಕೂ, ರೈತರು ಮಣ್ಣು ಗುಣ ಗಮನಿಸಿ ನೂರಾರು ವರ್ಷಗಳಿಂದ ಯಾವ ತಳಿ ಎಲ್ಲಿ ಬೆಳೆಯಬೇಕೆಂದು ನಿರ್ಧರಿಸಿ ಫಲ ಅನುಭವಿಸುತ್ತಿರುವದಕ್ಕೂ ವ್ಯತ್ಯಾಸವಿದೆ. ಕೃಷಿ ತಳಿ ವಿಚಾರದಲ್ಲಿ ರೈತ ಎತ್ತರದಲ್ಲಿದ್ದರೂ ನಮ್ಮ ವ್ಯವಸ್ಥೆಯಲ್ಲಿ ಆತ ವಿಜ್ಞಾನಿಯಲ್ಲ! ತಳಿ ಸಂರಕ್ಷಣೆಯಲ್ಲಿ ಎಂತಹ ಮಹತ್ವದ ಕೊಡುಗೆ ರೈತರದ್ದಾದರೂ ಈಗಲೂ ನಾಲ್ಕು ಬೀಜ ಸಂಗ್ರಹಿಸಿ ತಮ್ಮ ಸಂಶೋಧನೆಯೆಂದು ದಾಖಲಿಸಿಕೊಳ್ಳುವ ಪಟಾಲಮ್ಮುಗಳಿವೆ. ಇಂತಹವರ ಬಗೆಗೆ ಪ್ರಶ್ನೆಗಳು, ಅನುಮಾನಗಳು ಹುಟ್ಟಲು ಇಷ್ಟು ಸಾಕು.

ಪ್ರಾಧ್ಯಾಪಕರಾಗಿ ಸೇರಿ ಪಾಠಕ್ಕಿಂತ ಪ್ರಾಜೆಕ್ಟ್‌ಗಳಲ್ಲೇ ಕಳೆದು ಹೋದವರ ದಂಡು ಕರ್ನಾಟಕದ ಕೃಷಿ ವಿಶ್ವವಿದ್ಯಾಲಯಗಳಲ್ಲಿ ಎಲ್ಲೆಂದರಲ್ಲಿ ತುಂಬಿದೆ. ಕಲಿಯಲು ಬಂದ ವಿದ್ಯಾರ್ಥಿಗಳನ್ನು ಸರಪಳಿ ಬಿಗಿದಂತೆ ರಿಸರ್ಚ್‌ಗಳಲ್ಲಿ ಜೀತಕ್ಕೆ ಬಳಸುವುದೂ ಮಾಮೂಲಿಯಾಗಿದೆ. ‘ನಮ್ಮ ಪ್ರೊಪೆಸರ್‌ಗಳು ಪ್ರಾಜೆಕ್ಟ್ ಮಾಡಬೇಕು’ ಎಂದು ಪ್ರಾದ್ಯಾಪಕರ ದಂಡನ್ನು ಫಂಡಿನ ಹಿಂದೆ ಓಡಲು ಬಿಟ್ಟ ಕೃಷಿ ವಿಶ್ವವಿದ್ಯಾಲಯದ ಉಪ ಕುಲಪತಿಗಳಿದ್ದಾರೆ. ಆಚೆ ಕಲಿಸಲು ಸಮಯವಿಲ್ಲ, ಸಂಶೋಧನೆಯ ಕ್ಷೇತ್ರಕಾರ್ಯಕ್ಕೆ ಬಿಡುವಿಲ್ಲದವರು ಕೃಷಿ ಉತ್ಸವ, ಮೇಳಗಳಲ್ಲಿ ಮಾಹಿತಿಗೆ ಗಾಳ ಹಾಕಲು ಹಾಜರಾಗುತ್ತಾರೆ. ಮಧ್ಯಾಹ್ನ ಊಟದ ಖರ್ಚಿಗೆ ದುಡ್ಡಿಲ್ಲವೇನೋ ಎಂಬಂತೆ ವರ್ತಿಸುವ ಈ ಸಂಶೋಧಕರ ಪ್ರೊಜೆಕ್ಟ್ ರಿಪೋರ್ಟ್ ಕಸಿದು ನೋಡಿದರೆ ಹಣ ಬಿಡುವ ಹೈಬ್ರಿಡ್ ತಳಿ ಕಾಣುತ್ತದೆ, ಅದರಲ್ಲಿ ವರ್ಷಕ್ಕೆ ಕನಿಷ್ಟ ೪೫-೫೦ ಲಕ್ಷ ವಿನಿಯೋಗ ವ್ಯವಹಾರ, ಇದು ರೈತರ ಮಾಹಿತಿ ಹುಡುಕಲು ಹೊರಟ ಹಲವರ  ನಿಜ ಮುಖ.