ಬಾಂಗ್ಲಾದಲ್ಲಿ ರಿಕ್ಷಾ ಎಳೆಯುವವರ ಸ್ಥಿತಿ ಸುಧಾರಣೆಗೆ ಅಲ್ಲಿನ ಗ್ರಾಮೀಣ ಬ್ಯಾಂಕ ೧೯೮೦ ರಲ್ಲಿ ಸ್ವಸಹಾಯ ಸಂಘ ಸ್ಥಾಪಿಸಿದ್ದನ್ನು ಕೇಳುತ್ತೇವೆ. ಕರಾವಳಿಯ ಸಣ್ಣಪುಟ್ಟ ಗುಡಿಗಳು ಶತಮಾನಗಳಿಂದ ಭಕ್ತರಿಗೆ  ಸಾಲ ನೀಡುತ್ತ ಬಡವರ ಕಷ್ಟ ಪರಿಹರಿಸುತ್ತಿದ್ದ  ವಿಶಿಷ್ಟ ಪರಂಪರೆ ಇಲ್ಲಿದೆ.


ಪೂಜಾರಿ ಸಾಲ ಕೇಳಿದ್ದೇವೆ, ಇದು ದೇವರ ಸಾಲ! ಕಾಣಿಕೆ ಡಬ್ಬಿಹಣ ಸಾಲವಾಗಿ ಗ್ರಾಮೀಣ ಬದುಕಿನ ಸಂಕಷ್ಟ ನಿವಾರಣೆಗೆ ನೆರವಾಗುವ ವಿಶೇಷ. ರಾಜ್ಯದ ಉತ್ತರ ಕನ್ನಡ ಜಿಲ್ಲೆ ಕುಮಟಾ ತಾಲೂಕಿನ ಹಳಕಾರು ಹಳ್ಳಿಯಲ್ಲಿ ಅಂಕನಕುಳಿ ಜಟಕ ಹಾಗೂ ನಾಗದೇವತೆ ಎಂಬ ಎರಡು ದೇವರ ಗುಡಿಗಳಿವೆ. ಸುತ್ತಲಿನ ಹತ್ತಾರು ಸಮುದಾಯದ ಜನ ಭಕ್ತಿಯಿಂದ ಪೂಜಿಸುವ ಈ ದೇವರು ವರ ಕೊಡುತ್ತಾನೋ, ಪ್ರತ್ಯಕ್ಷನಾಗುತ್ತಾನೋ ಗೊತ್ತಿಲ್ಲ!. ಆದರೆ ಅಗತ್ಯವಿದ್ದವರಿಗೆ ಸಾಲವನ್ನಂತೂ ನೀಡುತ್ತಾನೆ. ದೇವರು ಕಷ್ಟ ಪರಿಹಾರಕ ಎಂಬುದಕ್ಕೆ ಕಳೆದ ೬೦ ವರ್ಷಗಳಿಂದ  ಇಲ್ಲಿ ಪುರಾಮೆದೆ.

ಊರಿನ ದೇವಸ್ಥಾನದಲ್ಲಿ ವಿವಿಧ ಜನಾಂಗದವರೆಲ್ಲ ಸೇರಿ ವಾರ್ಷಿಕ ಗಡಿಪೂಜೆ ಮಾಡುತ್ತಾರೆ. ಪೂಜೆಯ ಅನುಕೂಲಕ್ಕಾಗಿ ಹಳ್ಳಿಯ ಪ್ರತಿ ಮನೆಯವರೂ ಸೂಲಗೆ(ಅಕ್ಕಿ ಅಳೆಯುವ ಪಾತ್ರೆ) ಅಕ್ಕಿ ನೀಡುತ್ತಿದ್ದರು. ಸಂಗ್ರಹವಾದ ಅಕ್ಕಿಯಿಂದ ಅಡುಗೆ ಮಾಡಿ ಹಬ್ಬದ ಸಂಭ್ರಮದ ಊಟ ನಡೆಯುತ್ತಿತ್ತು. ಇಡೀ ದಿನ ಹಳ್ಳಿಗರನ್ನು ಸೇರಿಸಲು ನೆರವಾಗುವ ಗಡಿಹಬ್ಬ ಹಳ್ಳಿಯನ್ನು ಒಂದು ಆಂತರಿಕ ಆಡಳಿತ ವ್ಯವಸ್ಥೆಯಾಗಿ ಬಂಧಿಸಿದೆ. ಕಾಲ ಬದಲಾದಂತೆ ಸೂಲಗೆ ಅಕ್ಕಿ ಬದಲು ಒಂದು ಆಣೆ ನೀಡುವ ರೂಢಿ ಬಂತು. ಇದರಿಂದ ಪೂಜೆ, ಊಟ ನಿರ್ವಹಣೆ. ಸಂಗ್ರಹವಾದ ಹಣ ಹಬ್ಬದ ಊಟದ ಖರ್ಚಿನ ಬಳಿಕ ಮಿಕ್ಕಿ ಉಳಿಯುತ್ತಿತ್ತು. ಇದನ್ನು ಎಲ್ಲಾದರೂ ತೊಡಗಿಸಿದರೆ ದೇವಸ್ಥಾನದ ಅಭಿವೃದ್ಧಿಗೆ ಅನುಕೂಲವಾಗುತ್ತದೆ ಎಂಬ ವಿಚಾರ ಬಂತು. ಹಣ ಉತ್ಪಾದಕ ಉದ್ದೇಶಗಳಿಗೆ ಬಳಕೆಯಾಗಬೇಕು ಎನ್ನುವ ಯೋಚನೆ ಬಂದಿದ್ದೇ ಅಗತ್ಯವಿದ್ದವರಿಗೆ ಸಾಲ ನೀಡಲು ಈ ಹಣ ಬಳಸಬಹುದೆಂದು ಹಿರಿಯರು ತೀರ್ಮಾನಿಸಿದರು. ಕಾಣಿಕೆ ಹಣ ಸಾಲದ ಬಂಡವಾಳವಾಯಿತು. ಆರಂಭದಲ್ಲಿ ಅತ್ಯಂತ ಬಡ ಕುಟುಂಬದವರು ೧೦೦-೧೨೫ ರೂಪಾಯಿ ಸಾಲ ಪಡೆದರು. ಪ್ರತಿ ವರ್ಷ ಅಕ್ಷತತದಿಗೆ ದಿನ ಶೇಕಡಾ ೧೦ ಬಡ್ಡಿ ಸಹಿತ ಸಾಲ ಮರುಪಾವತಿ ಮಾಡಬೇಕೆಂಬ ಒಪ್ಪಂದ ವಿಧಿಸಲಾಯಿತು. ತಪ್ಪಿದರೆ ದಂಡದ ಬಡ್ಡಿ ತೆರಬೇಕು ಎಂಬ ನಿಯಮ ಹೇರಲಾಯಿತು. ಭಕ್ತರ ಸಮೂಹದ ಹಿರಿಯರೊಬ್ಬರು ದೇವಾಲಯ ಆಡಳಿತ ನೋಡಿಕೊಳ್ಳುತ್ತ ಹಣದ ನಿರ್ವಹಣೆ ಆರಂಭಿಸಿದರು.

ದೇವರ ಸಾಲ ಸರಕಾರದ ಪೂಜಾರಿ ಸಾಲದಂತೆ ಯಾವತ್ತೂ ಹಳ್ಳ ಹಿಡಿದಿಲ್ಲ, ಸಬ್ಸಿಡಿ ಉದ್ದೇಶಕ್ಕೆ ಮುಡುಪಾಗಿಲ್ಲ. ಆಶ್ಚರ್ಯವೆಂದರೆ ಸಾಲ ಪಡೆದವರೆಲ್ಲ ಸಮಯಕ್ಕೆ ಸರಿಯಾಗಿ ಹಿಂದಿರುಗಿಸಿದ್ದಾರೆ. ಒಬ್ಬನೇ ಒಬ್ಬ ಕಟ್ಟಬಾಕಿದಾರನಾಗಿ ಉಳಿಯಲಿಲ್ಲ ಬಡ್ಡಿ ಹಣದಿಂದ ಕ್ರಮೇಣ ದೇವಾಲಯದ ಆದಾಯ ಹೆಚ್ಚಿದೆ. ದೇವರ ಹಣದಲ್ಲಿ ಸಾಲ ಪಡೆದು ಉದ್ಯೋಗ ಮಾಡಿದರೆ ಯಶಸ್ಸು ಸಾಧ್ಯವೆಂಬ ನಂಬಿಕೆ ಬೆಳೆದಿದೆ. ಪ್ರತಿ ವರ್ಷವೂ ಅಕ್ಷತ ತದಿಗೆ ದಿನ ಹಣ ಹಿಂದಿರುಗಿಸುವಾಗ ತಾನು ಪಡೆದ ಸಾಲದಿಂದ ಹೇಗೆ ಅಭಿವೃದ್ಧಿಯಾದೆ ಎಂಬ ಮಾತನ್ನು ಸಾಲಗಾರರು ಪ್ರಾಸಂಗಿಕವಾಗಿ ಮಾತಾಡುತ್ತಾರೆ. ಹೀಗಾಗಿ ವಾರ್ಷಿಕ ಹಬ್ಬ ವೃತ್ತಿ ಯಶೋಗಾಥೆಗಳ ದರ್ಶನ ನೀಡುತ್ತದೆ. ಹೊಸ ಉದ್ಯೋಗಿಗಳಲ್ಲಿ ವಿಶ್ವಾಸ ಹೆಚ್ಚಿಸಿದೆ. ದೇವರ ಸಾಲಗಾರರ ಸಂಖ್ಯೆ ಹೆಚ್ಚುತ್ತಿದೆ. ನಾಗದೇವತೆ ಹಣದಲ್ಲಿ ತಲಾ ೫೦೦ ರೂಪಾಯಿಗಳಂತೆ ೪೮ ಜನ ಹಾಗೂ ಅಂಕಣಕುಳಿ ಜಟಕ ದೇವರಲ್ಲಿ ೩೫೦ ರೂಪಾಯಿಯಂತೆ ೪೨ ಜನ ಸಾಲ ಪಡೆದಿದ್ದಾರೆ! ವರ್ಷದಿಂದ ವರ್ಷಕ್ಕೆ ಸಾಲ ಬೇಡಿಕೆ ಹೆಚ್ಚುತ್ತಿದೆ. ದೇವಾಲಯ ಅಭಿವೃದ್ದಿಯಾಗುತ್ತಿದೆ.

ಇಷ್ಟು ಕಡಿಮೆ ಹಣದಿಂದ ಏನು ಸಾಧನೆ ಸಾಧ್ಯ ಎಂಬ ಪ್ರಶ್ನೆ ಹುಟ್ಟಬಹುದು. ಹಿಂದುಳಿದ ಜನರ ವರ್ಗಕ್ಕೆ ಇದು ದೊಡ್ಡ ಮೊತ್ತ! ಇಷ್ಟು ಹಣವನ್ನು ಪಡೆಯಲು ಕಾಲದಿಂದ ಮನೆಯ ಧಾನ್ಯ, ಪಾತ್ರೆ ಮಾರುವ ಸ್ಥಿತಿ ಇತ್ತು. ೫೦೦ ರೂಪಾಯಿ ಸಂಗ್ರಹಿಸಲು ಒಬ್ಬ ಕೂಲಿಕಾರ ೧೦ ದಿನ ದುಡಿದರೂ ಸಾಧ್ಯವಾಗುವದಿಲ್ಲ. ಒಮ್ಮೆ ದೇವರ ಸಾಲವಾಗಿ ಇಷ್ಟು ಹಣ ಸಿಕ್ಕಾಗ ಆತ ಅದನ್ನು ಕುಡಿತ, ಜೂಜು ಇತ್ಯಾದಿ ಕಾರ್ಯಗಳಿಗೆ ವಿನಿಯೋಗಿಸುವುದಿಲ್ಲ. ದೇವರ ಹಣವಾದ್ದರಿಂದ ಕೆಟ್ಟ ಚಟಗಳಿಗೆ ತೊಡಗಿಸಲು ಎದೆಯೊಳಗೆ ಭಯ ಕಾಡುವುದರಿಂದ ನಮ್ಮ ಬ್ಯಾಂಕುಗಳು ನೀಡಲಾಗದ ಸಂಸ್ಕಾರವನ್ನು ಹಳ್ಳಿ ಮೂಲೆಯ ನಂಬಿಕೆ ನೀಡುತ್ತದೆ. ಸಾಲ ಮರುಪಾವತಿಯೂ ಸಾಂಗವಾಗುತ್ತದೆ. ಇದಕ್ಕಿಂತ ಮುಖ್ಯವಾಗಿ ಹಬ್ಬದ ದಿನ ಊರವರೆಲ್ಲ ಸೇರಿದಾಗ ಸಾಲ ಏಕೆ ಪಡೆಯಲಾಗುತ್ತದೆ ಎಂಬ ವಿಚಾರ ಕೂಲಂಕಷವಾಗಿ ತಿಳಿದ ನಂತರವೇ ಮಂಜೂರಿ ಹಣ ದೊರೆಯುತ್ತದೆ.

ವಿವರ ಗಮನಿಸಿದರೆ ಇಂದಿನ ಸ್ವಸಹಾಯ ಸಂಘಗಳ ರೀತ್ಯಾ ಕಾಣುತ್ತದೆ. ಗ್ರಾಮೀಣ ಆರ್ಥಿಕ ವ್ಯವಸ್ಥೆ, ಸಂಘಟನೆ ಪೂರಕವಾಗಿ ಕೆಲಸ ಮಾಡಿದ್ದು ಕಾಣುತ್ತದೆ. ಬಾಂಗ್ಲಾದಲ್ಲಿ ರಿಕ್ಷಾ ಎಳೆಯುವವರ ಸ್ಥಿತಿ ಸುಧಾರಣೆಗೆ ಅಲ್ಲಿನ ಗ್ರಾಮೀಣ ಬ್ಯಾಂಕ್  ೧೯೮೦ರಲ್ಲಿ ಸ್ವಸಹಾಯ ಸಂಘ ಸ್ಥಾಪಿಸಿದ್ದನ್ನು ಇಂದು ಸ್ವಸಹಾಯ ತರಬೇತಿ ಕಾರ್ಯಕ್ರಮಗಳಲ್ಲಿ ಕೇಳುತ್ತೇವೆ. ನಮ್ಮ ಎಲ್ಲಾ ಉದಾಹರಣೆಗಳೂ ಅಲ್ಲಿಂದ ಆರಂಭವಾಗುತ್ತವೆ. ಕರಾವಳಿಯ ಸಣ್ಣಪುಟ್ಟ ಗುಡಿಗಳು ಶತಮಾನಗಳಿಂದ ಸಾಲ ನೀಡಿಕೆಯನ್ನು ಪರಂಪರೆಯಾಗಿ ಬೆಳೆಸಿದ ವಿಶೇಷ ನಾವು ಗಮನಿಸಬೇಕು! ಯೋಜನೆಗಳು ಮೇಲುಸ್ತರದಿಂದ ಆದರೆ ಅಭಿವೃದ್ದಿಯಾಗುವುದಿಲ್ಲ, ಕೆಳಹಂತದಲ್ಲಿ ರಚನೆಯಾಗಬೇಕು ಎಂದು ಸ್ವಸಹಾಯದ ಮಹತ್ವ ಹೇಳುತ್ತೇವೆ. ಬಾವಿಯಲ್ಲಿ ಬಿದ್ದವರಿಗೆ ಆಹಾರ ನೀಡುವುದಕ್ಕಿಂತ ಹಗ್ಗ ನೀಡುವುದು ಮುಖ್ಯವಾದುದು. ನಾವು ಬಡತನವನ್ನು ಮೇಲೆತ್ತಲು ನೀಡುವ ಹಗ್ಗ ಕೂಡ ಸ್ಥಳೀಯ ಮಾದರಿ ಬಳಸಿದಾಗ ಅಭ್ಯುದಯ ಪರಿಣಾಮ ಹೆಚ್ಚು. ನಮ್ಮ ಸ್ವಸಹಾಯ ಸಂಘಗಳಿಗೆ ನೆಲದ ಪಾಠ ಹೇಳುವ ತಾಕತ್ತು ಜನಪದ ಪರಂಪರೆಗೆ ಇದೆ. ಕಣ್ತೆರೆದು ನೋಡುವ ತಾಕತ್ತು ನಮ್ಮೆಲ್ಲರಿಗೆ ಬರಬೇಕು.