ಹಳ್ಳಿಯಲ್ಲಿ ತಯಾರಾಗುವ ಮಿಡಿಮಾವಿನ ಉಪ್ಪಿನಕಾಯಿ, ಹಲಸಿನ ಸಂಡಿಗೆ, ತೊಡೆದೇವು, ಹಪ್ಪಳ, ಶ್ಯಾವಿಗೆ, ಅಕ್ಕಿರೊಟ್ಟಿ, ದ್ರವರೂಪದ ಬೆಲ್ಲ, ಹುಣಸೆ ತೊಕ್ಕು ಹೀಗೆ ಆಹಾರ ಉತ್ಪನ್ನಗಳಿಗೆ ಹೆಸರು ಮಾತ್ರದಿಂದ ಜನರನ್ನು ಗೆಲ್ಲುವ ತಾಕತ್ತಿದೆ. ಹಳ್ಳಿಗಾಡಿನ ಮಹಿಳೆಯರು ಅನುಭವ ಮಾರ್ಗದಲ್ಲಿ ಕಂಡುಕೊಂಡ ಆಹಾರ ರುಚಿ ಯಾವ ಪ್ರಚಾರದ ಅಗತ್ಯವಿಲ್ಲದೇ ಮತ್ತೆ ಮತ್ತೆ ಜನರನ್ನು ಸೆಳೆಯಬಲ್ಲದು. ಕೋಕಂ ಜ್ಯೂಸ್, ನೆಲ್ಲಿ ಜ್ಯೂಸ್, ಕರಬೂಜ್ ಜ್ಯೂಸ್, ಎಳ್ಳುನೀರು, ಒಂದೆಲಗದ ತಂಬಳಿ ಸೇರಿದಂತೆ ನೂರಾರು ವಿಧದ ಪಾನೀಯಗಳು ಹಳ್ಳಿಯಲ್ಲಿವೆ. ವಿವಿಧ ಋತುಮಾನಗಳಲ್ಲಿ ಬಳಸುವ ಪಾನೀಯಗಳ ಹಿಂದೆ ಆರೋಗ್ಯ ಪಾಠಗಳಿವೆ. ಜಾಗತೀಕರಣ ಗೆಲ್ಲುವ ದಾರಿಯಿದೆ.

ಉತ್ತರ ಕರ್ನಾಟಕದಲ್ಲಿ ಬಿಳಿಜೋಳದ ರೊಟ್ಟಿ ಊಟ ಅತ್ಯಂತ ಜನಪ್ರಿಯ. ಊಟಕ್ಕೆ ತರಹೇವಾರು ಪಲ್ಯ, ಚಟ್ನಿಗಳು ದೇಸೀ ಸೊಗಡಿನ ಗಮ್ಮತ್ತು. ಖಡಕ್ ರೊಟ್ಟಿ ಹಾಗೂ ಬ್ಯಾಡಗಿ ಮೆಣಸಿನ ಖಾರ ಮರೆತು ಇಲ್ಲಿನ ಹಳ್ಳಿ ಊಟ ಯೋಚಿಸಲಾಗದು. ಆದರೆ ನಗರದಲ್ಲಿ ತಲೆ ಎತ್ತಿದ ಚೆಂದದ ಹೊಟೆಲ್‌ಗಳು ಈ ಪ್ರದೇಶದಲ್ಲಿ ಮೈಸೂರು, ಬೆಂಗಳೂರು, ಉಡುಪಿ ಶೈಲಿಯ ಊಟ ನೀಡಲು ಆರಂಭಿಸಿದ್ದವು. ‘ರೊಟ್ಟಿ ಇಲ್ಲದ ಊಟ ಹ್ಯಾಂಗ್ ಆಗ್ತೇತ್ರಿ?’ ಪ್ರಶ್ನೆ ಹೋಟೆಲ್‌ಗಳ ತಲೆ ಬಿಸಿ ಮಾಡಿದವು. ಇಷ್ಟು ಕಾಲ ‘ಊಟ ಸಿಗುತ್ತದೆ’ ಎಂದಷ್ಟೆ ಬೋರ್ಡು ತಗಲಿಸಿದವರು ಈಗ ಜನರ ರುಚಿ ರಹಸ್ಯ ಅರಿತ ಬಳಿಕ ‘ನಮ್ಮಲ್ಲಿ ಬಿಳಿಜೋಳದ ರೊಟ್ಟಿ ಸಿಗುತ್ತದೆ’ ಎಂಬ ಸಾಲು ಸೇರಿಸಿದರು! ಅಷ್ಟೇಕೆ  ಡೆಲ್ಲಿಯಿಂದ ಬಾಂಬೆವರೆಗೂ ಊಟಕ್ಕೆ ಚಪಾತಿ, ಪೂರಿ ನೀಡುವುದೇ ತಮ್ಮ ಊಟದ ವಿಶೇಷವೆಂದ ಕಾಮತ್ ಹೊಟೆಲ್‌ಗಳೂ ಈಗ ಉತ್ತರ ಕರ್ನಾಟಕದಲ್ಲಿ ರೊಟ್ಟಿ ಊಟ ಸಿಗುತ್ತದೆಂದು ಬೋರ್ಡು ತಗಲಿಸಿವೆ. ಪಿಜ್ಜಾ, ಪಾನಿಪುರಿ, ಗೋಬಿ ಮಂಚೂರಿ, ಪರೋಟಾ ಹೀಗೆ ಉತ್ತರ ಭಾರತದ ಅಡುಗೆ ವಿಶೇಷಗಳು ಎಷ್ಟೇ ಬರಲಿ ನಮ್ಮ ನಾಲಗೆ ಮಾತ್ರ ಖಾನಾವಳಿ, ಹಳ್ಳಿಮನೆ ಅಡುಗೆಯನ್ನು ಬಿಟ್ಟುಕೊಡಲು ಸಿದ್ದವಿಲ್ಲ.
ಹಳ್ಳಿಯಲ್ಲಿ ಬೆಳೆದವರೇ ಉದ್ಯೋಗ ನಿಮಿತ್ತ ನಗರ ಸೇರಿದ್ದಾರೆ. ಒಂದಿಷ್ಟು ಕಾಲ ಇದ್ದಬಿದ್ದ ರುಚಿಗೆ ಮರುಳಾದರೂ ಕೊನೆಗೆ ನಗರದ ಮಾಮೂಲಿ ಊಟಕ್ಕೆ ಬೇಜಾರು ಹುಟ್ಟಿಕೊಳ್ಳುವುದು ಸಹಜ. ಆಗ ಹಾಸನದ ಜನಕ್ಕೆ ಮುದ್ದೆ ಬೇಕು, ಮಂಗಳೂರಿನ ಮಂದಿಗೆ ಕುಚ್ಚಿಗೆ ಅಕ್ಕಿಯ ಅನ್ನ ಬೇಕು, ರೊಟ್ಟಿ ಇಲ್ಲದಿದ್ದರೆ ಊಟವೇ ಇಲ್ಲ ಎಂದು ಬಯಲು ಸೀಮೆಯ ಜನ ನೆಲದ ಅಡುಗೆ ನೆನಪು ಹುಡುಕಿ ಹೊರಟಾಗ ದೇಸೀ ರುಚಿ ಸಿದ್ದಗೊಳಿಸುವ ಬಾಣಸಿಗರಿಗೆ ಬಲ, ಕೃಷಿ ಮಾರುಕಟ್ಟೆ ವಿಸ್ತರಣೆಗೆ ಬೆಂಬಲ! ಬೆಳೆ ಸಂರಕ್ಷಣೆ ಬಗೆಗೆ ದೊಡ್ಡ ದೊಡ್ಡ ಮಾತಾಡುವ ನಾವು ದೇಸೀ ಅಡುಗೆ ವಿಶೇಷಗಳ ಮುಖೇನ ಗ್ರಾಮೀಣ ಉತ್ಪನ್ನಗಳಿಗೆ ಮಾರುಕಟ್ಟೆ ಮಾರ್ಗದ ಅವಕಾಶ ಅರ್ಥಮಾಡಿಕೊಳ್ಳಬೇಕು. ನಮ್ಮ ಅಡವಿ, ಕೃಷಿ ಉತ್ಪನ್ನಗಳನ್ನೇ ಬಳಸಿ ತಯಾರಿಸುವ ಅಡುಗೆಗಳ ಬಗೆಗೆ ಇತ್ತೀಚಿನ ಜನಪ್ರಿಯತೆ ಗಮನಿಸಿದರೆ ಗೆಲ್ಲುವ ದಾರಿಗಳು ಗೋಚರವಾಗುತ್ತದೆ. ಟಿ.ವಿ. ರೇಡಿಯೋ, ಪತ್ರಿಕೆಗಳಂತೂ ಅಡುಗೆ ವಿಶೇಷಗಳನ್ನು ಪ್ರಚಾರ ಮಾಡಲು ಪ್ರತ್ಯೇಕ ಕಾರ್ಯಕ್ರಮಗಳನ್ನೇ ಪ್ರಸ್ತುತಪಡಿಸುತ್ತಿವೆ. ಇಂತಹ ಕಾರ್ಯಕ್ರಮಗಳಲ್ಲಿ ದೇಸೀ ಅಡುಗೆ ಪ್ರಾಧಾನ್ಯತೆ ಪಡೆಯುತ್ತಿವೆ. ನಮ್ಮ ಅಡುಗೆ ಮನೆ ಹೊಸರುಚಿ ಜನಮನ ಗೆದ್ದರೆ ಅದನ್ನು ತಯಾರಿಸಲು ಬಳಸುವ ನಮ್ಮ ಕೃಷಿ ಉತ್ಪನ್ನಗಳಿಗೆ ಮಾರುಕಟ್ಟೆ ಸಾಧ್ಯವಾಗುತ್ತದೆ.
ಹಳ್ಳಿಯಲ್ಲಿ ತಯಾರಾಗುವ ಮಿಡಿಮಾವಿನ ಉಪ್ಪಿನಕಾಯಿ, ಹಲಸಿನ ಸಂಡಿಗೆ, ತೊಡೆದೇವು, ಹಪ್ಪಳ, ಶ್ಯಾವಿಗೆ, ಅಕ್ಕಿರೊಟ್ಟಿ, ದ್ರವರೂಪದ ಬೆಲ್ಲ, ಹುಣಸೆ ತೊಕ್ಕು ಹೀಗೆ ಆಹಾರ ಉತ್ಪನ್ನಗಳಿಗೆ ಹೆಸರು ಮಾತ್ರದಿಂದ ಜನರನ್ನು ಗೆಲ್ಲುವ ತಾಕತ್ತಿದೆ. ಹಳ್ಳಿಗಾಡಿನ ಮಹಿಳೆಯರು ಅನುಭವ ಮಾರ್ಗದಲ್ಲಿ ಕಂಡುಕೊಂಡ ಆಹಾರ ರುಚಿ ಯಾವ ಪ್ರಚಾರದ ಅಗತ್ಯವಿಲ್ಲದೇ ಮತ್ತೆ ಮತ್ತೆ ಜನರನ್ನು ಸೆಳೆಯಬಲ್ಲದು. ಕೋಕಂ ಜ್ಯೂಸ್, ನೆಲ್ಲಿ ಜ್ಯೂಸ್, ಕರಬೂಜ್ ಜ್ಯೂಸ್, ಎಳ್ಳುನೀರು, ಒಂದೆಲಗದ ತಂಬಳಿ ಸೇರಿದಂತೆ ನೂರಾರು ವಿಧದ ಪಾನೀಯಗಳು ಹಳ್ಳಿಯಲ್ಲಿವೆ. ವಿವಿಧ ಋತುಮಾನಗಳಲ್ಲಿ ಬಳಸುವ ಪಾನೀಯಗಳ ಹಿಂದೆ ಆರೋಗ್ಯ ಪಾಠಗಳಿವೆ. ಕೋಕೋ ಕೋಲಾ, ಪೆಪ್ಸಿಗಳ ಅಬ್ಬರದ ಜಾಹೀರಾತಿನ ಎದುರು ಈಗಲೂ ಇವು ಜನಪ್ರಿಯತೆ ಉಳಿಸಿಕೊಂಡಿವೆ. ಹಳ್ಳಿಯಂಚಿನ ಪುಟ್ಟ ಪೇಟೆಗಳಲ್ಲಿ ದೊರೆಯುವ ಎಷ್ಟೋ ಸ್ಥಳೀಯ ಪಾನಿಯಗಳು ದೂರದ ನಗರ ತಲುಪಿಲ್ಲ. ಇಂತಹ ಆಹಾರ – ಪಾನೀಯಗಳನ್ನು ಗುರುತಿಸಿ ನಗರಕ್ಕೆ ಪರಿಚಯಿಸಲು ಅವಕಾಶ ಬಳಸಿಕೊಂಡರೆ ಉದ್ಯೋಗ ಸೃಷ್ಟಿ ಸಾಧ್ಯವಿದೆ.
ತುಂಗಾಮೂಲ ಉಳಿಸಿ ಆಂದೋಲನ ಒಮ್ಮೆ ಶಿವಮೊಗ್ಗೆಯಲ್ಲಿ ಕವಿಗೋಷ್ಠಿ ಆಯೋಜಿಸಿತ್ತು. ಕಾರ್ಯಕ್ರಮದಲ್ಲಿ ಪಾಲ್ಗೊಂಡ ಸಾಹಿತಿ ಯು.ಆರ್. ಅನಂತಮೂರ್ತಿ ತುಂಗಾ ನದಿ ಸಂಸ್ಕೃತಿ ಬಗೆಗೆ ಮಾತಾಡುತ್ತ ತೀರ್ಥಹಳ್ಳಿಯಲ್ಲಿ ಮಾಡುತ್ತಿದ್ದ “ಇಬ್ಬನಿ ಹಿಟ್ಟನ್ನು” ನೆನಪಿಸಿಕೊಂಡರು. ಇವರ ಬಳಿಕ ಮಾತಿಗೆ ನಿಂತ ಬಹುತೇಕ ಕವಿಗಳು, ಭಾಷಣಕಾರರು ಇಬ್ಬನಿ ಹಿಟ್ಟನ್ನು ಕೊಂಡಾಡಿದರು. ಇದೊಂದು ಸಿಹಿ ತಿಂಡಿ ಎಂಬುದು ಮಾತ್ರ ಅವತ್ತಿನ ಕಾರ್ಯಕ್ರಮದಲ್ಲಿ ತಿಳಿಯಿತಾದರೂ ಮುಂದಿನ ಯಾವ ವಿವರವೂ ಯಾರಲ್ಲಿಯೂ ಸಿಗಲಿಲ್ಲ. ಪ್ರಶ್ನಿಸಿದಾಗ ‘ಅದು ತೀರ ಹಳ್ಳಿಗಾಡಿನ ತಿಂಡಿ, ಈಗ ಯಾರೂ ಮಾಡುವುದಿಲ್ಲ’ ಎಂದು ಹಳ್ಳಿಗರೇ ಹೇಳಿದರು! ಆ ಕಾರ್ಯಕ್ರಮದಲ್ಲಿ ಪ್ರಸ್ತಾಪಿಸಲ್ಪಟ್ಟ ‘ಇಬ್ಬನಿಹಿಟ್ಟು’ ಸೇರಿದ ನೂರಾರು ಜನರಿಗೆ ಹಳ್ಳಿ ರುಚಿಯ ನೆನಪು ತಂದಿದ್ದು ನಿಜ. ರುಚಿ ನೋಡುವ ಕುತೂಹಲ ಮೂಡಿಸಿತು. ಮಲೆನಾಡಿನ ಆಲೆಮನೆ ಸಂದರ್ಭದಲ್ಲಿ ತಯಾರಿಸುವ ಇದು ನಗರದ ಹೊಟೆಲ್ ಮೆನುಗೆ ಸೇರಲು ಯೋಗ್ಯವಿದೆ. ರುಚಿ ನೆನಪುಗಳು ಇಂತಹ ದೇಸೀ ರುಚಿಗೆ ಮರುಜೀವ ನೀಡಬೇಕಿದೆ. ಇಂತಹ ವಿಶೇಷ ಭಕ್ಷ್ಯಗಳ ಮಾಹಿತಿ ಸಂಗ್ರಹ, ತಯಾರಿ ಮುಖೇನ ಹೈಟೆಕ್ ಸಿಟಿಯಲ್ಲೂ ದೇಸೀ ಸೊಗಡು ಬೀರಬಹುದು.
ನಾವು ಪ್ರವಾಸ ಹೊರಡುವಾಗ ಇಂತಹ ದೇವಸ್ಥಾನಕ್ಕೆ ಭೇಟಿ ನೀಡಬೇಕು, ಜಲಪಾತ ನೋಡಬೇಕು, ಸಮುದ್ರ ತೀರದಲ್ಲಿ ನಡೆದಾಡಬೇಕು ಎಂದು ಯೋಚಿಸುತ್ತೇವೆ. ಆದರೆ ಅಲ್ಲಿನ ಅಡುಗೆ ವಿಶೇಷಗಳ ಸ್ವಾದ ಅರಿಯಲು ಮರೆಯುತ್ತೇವೆ. ಇತ್ತೀಚೆಗೆ ನಿಧಾನಕ್ಕೆ ನಮ್ಮ ಪ್ರವಾಸಿ ಸ್ಥಳಗಳಲ್ಲಿ ಗ್ರಾಮೀಣ ಅಡುಗೆಯನ್ನು ಪರಿಚಯಿಸುವ ಪ್ರಯತ್ನ ಆರಂಭವಾಗಿದೆ. ಚಿಂತಾಮಣಿ ಮಸಾಲೆ ಕಡ್ಲೆ, ಕಿನ್ನಾಳದ ಪುರಿ ಹಾಗೂ ಇಳಕಲ್ ಚಟ್ನಿ, ಬಾಂಡ್ರಾವಿಯ ಮಿರ್ಚಿ ಹಾಗೂ ಇಡ್ಲಿ, ದಾವಣಗೆರೆಯ ಬೆಣ್ಣೆ ದೋಸೆ, ತುಮಕೂರಿನ ಕಾಯಿ ಇಡ್ಲಿ, ಪುತ್ತೂರಿನ ನೀರು ದೋಸೆ, ಹೊನ್ನಾವರ ಗುಣವಂತೆ ತುಪ್ಪದ ದೋಸೆ, ಶಿರಸಿ ರಾಗಿಹೊಸಳ್ಳಿಯ ಬನ್ಸ್, ಬೆಳಗಾವಿಯ ಕುಂದಾ, ಧಾರವಾಡದ ಫೇಡಾ, ಗೋಕಾಕದ ಕರದಂಟು ಈಗಾಗಲೇ ಜನರನ್ನು ಗೆದ್ದ ಆಯ್ದ ಆಹಾರಗಳು. ಸರಕಿನ ಹಿಂದೆ ರೈತ ಉತ್ಪನ್ನಗಳ ಬೆಂಬಲವಿದೆ. ರಾಗಿಹೊಸಳ್ಳಿಯ ಬನ್ಸ್ ಇನ್ನಷ್ಟು ಜನಪ್ರಿಯವಾಗುವಾಗ ಅದಕ್ಕೆ ಸ್ಥಳೀಯವಾಗಿ ಬೆಳೆಯುವ ‘ಮೆಟ್ಲಿ ಬಾಳೆ’ ನಾಟಿ ತಳಿಗೆ ಜೀವ ಬರುತ್ತದೆ. ಚಿಂತಾಮಣಿಯ ಮಸಾಲೆ ಕಡ್ಲೆಯ ಹಿಂದೆ ನೆಲಗಡಲೆಯ ಗೆಲುವಿದೆ. ಇಂತಹ ಶುಚಿ-ರುಚಿಯ ಆಹಾರಗಳು ಜನರಿಗೆ ಸುಲಭ ಲಭ್ಯವಾದರೆ ಇನ್ಯಾವುದೋ ಪರದೇಸೀ ಆಹಾರಕ್ಕೆ ಓಡುವವರನ್ನು ಸೆಳೆದು ನಿಲ್ಲಿಸಬಹುದು.
ನಮ್ಮ ನೆಲದ ಉತ್ಪನ್ನಗಳೇ ಸಂಸ್ಕರಿತಗೊಂಡು ಜನಮನ ಗೆಲ್ಲುವ ಸುಲಭ ಸಾಧ್ಯತೆಗಳನ್ನು ಗುರುತಿಸುವದು ಕೃಷಿಯಲ್ಲಿ ಗೆಲ್ಲುವ ದಾರಿಯಾಗುತ್ತದೆ. ದೇಸೀ ಆಹಾರ ಪರಂಪರೆಯನ್ನು ಹೈಟೆಕ್ ಸಿಟಿಯಲ್ಲಿ ಪರಿಚಯಿಸಬೇಕು, ಹಳ್ಳಿ ಕೃಷಿ ಉತ್ಪನ್ನಗಳ ಸಂಸ್ಕರಣೆ ದೊಡ್ಡ ಲಾಭ ಹಳ್ಳಿಗೆ ದೊರಕಿಸುವ ಪ್ರಯತ್ನಗಳು ಬೇಕು. ಪರದೇಸೀ ರುಚಿಗೆ ಪರಿಪಾಟಲು ಅನುಭವಿಸುತ್ತಿರುವ ನಗರವಾಸಿಗಳಿಗೆ ದೇಸೀ ರುಚಿಯನ್ನು ಹಳ್ಳಿ ಮನೆಯ ಪ್ರೀತಿಯಲ್ಲಿ ಕಟ್ಟಿಕೊಡುವವರು ಪ್ರಸ್ತುತ ಜಾಗತೀಕರಣ ವಿರುದ್ಧ ಹೋರಾಡುವ ಇಂದಿನ ಚೆನ್ನಮ್ಮರಾಗುತ್ತಾರೆ, ಕೃಷಿ ವಹಿವಾಟಿನ ಮಹತ್ವದ ಕೊಂಡಿಯಾಗುತ್ತಾರೆ.