ನಮಗೆ ಕಾಡೇ ನದಿಗಳ ತಾಯಿ, ಬ್ರಿಟೀಷರಿಗೆ ನದಿಯೇ ಮರ ಒಯ್ಯುವ ಮಾಯೆ! ನದಿಯಂಚಿನ ಕಾಡನ್ನು ದೇವರ ಕಾಡು ಎಂದು ನಾವು ಪೂಜಿಸಿದೆವು, ಮರ ಬೆಳೆದು ಕಟಾವಾದ ಬಳಿಕ ಸಾಗಣೆಗೆ ನದಿ ಅನುಕೂಲ ಎಂದು ಅವರು ಸಾಗವಾನಿ ನೆಡುತೋಪಿಗೆ ನೆಲ ಆಯ್ಕೆಗೆ ನದಿ ಕಣಿವೆಗೆ ಪ್ರಾಶಸ್ತ್ಯ ನೀಡಿದರು! ಹೀಗಾಗಿ ನಮ್ಮ ನದಿಯಂಚಿನಲ್ಲಿ  ಸಾಮಿಲ್, ನೆಡುತೋಪು ವ್ಯಾಪಿಸಿದವು. ಅರಣ್ಯ ಕಾರ್ಯ ಯೋಜನೆ ರೂಪಿಸುವಾಗ ಮುಂದಿನ ೪೦-೫೦ ವರ್ಷಕ್ಕೆ ಮರ ಎಷ್ಟು ಬೆಳೆಯುತ್ತದೆಂಬುದನ್ನು  ಲೆಕ್ಕ ಹಾಕಲು ಬ್ರಿಟೀಷರು ಜಾಣರಿದ್ದರು, ಆದರೆ ಮರ ಎಳೆಯಲು ಕೋಣ, ಆನೆ, ನದಿ ಪ್ರವಾಹಗಳ ಬದಲು ದೈತ್ಯಶಕ್ತಿಯ ಲಾರಿ ಬರಬಹುದೆಂದು ಊಹಿಸಿರಲಿಲ್ಲ! ಹೀಗಾಗಿ ಅವರ ಯೋಜನೆಗಳಲ್ಲಿ ನಾಟಾ ಸಾಗಣೆಗೆ ನದಿಯನ್ನೇ ಶಿಪಾರಸ್ಸು ಮಾಡಿದ್ದರು.


ನದಿಯಲ್ಲಿ ಮೀನು ಬೇಟೆ ಗೊತ್ತು. ಪಶ್ಚಿಮ ಘಟ್ಟದ ನದಿಗಳಲ್ಲಿ ಮರ ಬೇಟೆ ಯೋಜನೆ ಆರಂಭಿಸಿದವರು ಬ್ರಿಟೀಷ್‌ರು! ಘಟ್ಟದ ಸೀಮೆಯಲ್ಲಿ ಹುಟ್ಟಿ ಅರಬ್ಬಿ ಸಮುದ್ರದತ್ತ ಅಬ್ಬರದಲ್ಲಿ ಹರಿಯುವ ನದಿ ಪ್ರವಾಹವನ್ನು ನಾಟಾ ಸಾಗಣೆಯ ಅಸ್ತ್ರವಾಗಿ  ಬಳಸಿದ್ದು ಶತಮಾನದ ಸಾರಿಗೆ ಕತೆ. ಹಡಗು ನಿರ್ಮಾಣ, ರೇಲ್ವೆ ಸ್ಲೀಪರ್, ಮನೆ ನಿರ್ಮಾಣಗಳಿಗೆ ತೇಗ, ಬೀಟೆ ಮರಗಳಿಗೆ ಬೇಡಿಕೆಯಿತ್ತು. ಕಾಡು ಕೊಳ್ಳಗಳಲ್ಲಿ  ನೈಸರ್ಗಿಕವಾಗಿ  ಹೆಮ್ಮರಗಳು ಬೆಳೆದಿದ್ದವು. ರಸ್ತೆ, ವಾಹನ ಸೌಕರ್ಯವಿಲ್ಲದ ಕಾಲಕ್ಕೆ ಘಟ್ಟದಲ್ಲಿ ಮರ ಸಾಗಿಸುವದು  ಕಷ್ಟ, ಅಪಾರ ಮಾನವಶ್ರಮ ವಿನಿಯೋಗ. ಓಡಿ(ವಡ್ಡಿ?)ಕೋಣ, ಆನೆಗಳ ಸಹಾಯದಿಂದ ಮರದ ದಿಮ್ಮಿಗಳನ್ನು ಎಳೆದು ನದಿ ಮಡುವಿಗೆ ಎಸೆಯುತ್ತಿದ್ದರು, ಮಳೆ ಪ್ರವಾಹದಲ್ಲಿ ಅವು ಕರಾವಳಿಯತ್ತ  ಸುಲಭದಲ್ಲಿ ತೇಲಿ ಸಾಗುತ್ತಿದ್ದವು. ಆಯಕಟ್ಟಿನ ಜಾಗಗಳಲ್ಲಿ ಅವನ್ನು ಹಿಡಿದು  ಸಂಗ್ರಹಿಸಿ ಹಡಗಿನ ಮುಖೇನ ವಿದೇಶಕ್ಕೆ ರವಾನೆ. ಡಿಸೈಲ್, ಪೆಟ್ರೋಲ್ ಖರ್ಚಿಲ್ಲ, ಮಳೆ ನೀರು  ಮರ ಸಾಗಣೆ  ಶಕ್ತಿಯಾಗಿ ಬಳಕೆಯಾಗುತ್ತಿತ್ತು.

ಕ್ರಿ,ಶ ೧೮೫೦ರ ಪೂರ್ವದಲ್ಲಿ ಮರ ಕಟಾವಿನ ಪರವಾನಗಿ ಪಡೆದು ಖಾಸಗಿ ವರ್ತಕರು ನೈಸರ್ಗಿಕ ತೇಗ, ಸೀಸಂ ಮರ ಒಯ್ಯುತ್ತಿದ್ದರು. ಕ್ರಮೇಣ ಅತ್ಯುತ್ತಮ ಮರಗಳು ಖಾಲಿಯಾಗತೊಡಗಿದವು. ಮರ ಕಟಾವು, ಸಂರಕ್ಷಣೆಯನ್ನು ವೈಜ್ಞಾನಿಕವಾಗಿಸಲು ಅರಣ್ಯ ಕಾರ್ಯ ಯೋಜನೆ (Working Plan) ಆರಂಭವಾಯಿತು. ಕೆನರಾ ಜಿಲ್ಲೆಯಲ್ಲಿ   ಟಿ. ಆರ್.ಡಿ ಬೆಲ್  ಅರಣ್ಯ ಅಧಿಕಾರಿ,  ಕ್ರಿ.ಶ. ೧೮೯೫ರಲ್ಲಿ  ಅವರು ಕಾಳಿ ಕಣಿವೆಯ ಗುಂದದಲ್ಲಿ ಕಾರ್ಯ  ಯೋಜನೆ ರೂಪಿಸಿದ್ದರು. ಅದರಲ್ಲಿ ಯಾವ ಗಾತ್ರದ ಮರ ಕಟಾವು ಮಾಡಬೇಕು? ಕಾಡಿನಲ್ಲಿ  ಈ ಗಾತ್ರದ ಎಷ್ಟು ಮರಗಳಿವೆ? ವರ್ಷಕ್ಕೆ ಎಷ್ಟು ಕಡಿಯಬಹುದು? ಮುಂತಾಗಿ ವಿವರ ನೀಡುತ್ತಾರೆ. ಮರ ಸಾಗಿಸುವ ವಿಧಾನದ  ಬಗೆಗೆ ವಿವರಿಸುವಾಗ ಕಾಳಿ ನದಿ ಮುಖೇನ ಕಡವಾಡದ ಸನಿಹದ ಕಟ್ಟಿಗೆ ಡಿಪೋಗೆ ಸಾಗಿಸುವ ಮಾರ್ಗ ತಿಳಿಸುತ್ತಾರೆ. ಮರ ಕಟಾವು ನಡೆಸುವ ಪ್ರತಿ ಕಂಪಾರ್ಟಮೆಂಟ್ ಸನಿಹದಲ್ಲಿ ಯಾವ ಹಳ್ಳವಿದೆ ಎಂದು ವಿವರ ಒದಗಿಸುತ್ತಾರೆ. ಆಗ ರಸ್ತೆ ಸಂಪರ್ಕವಿಲ್ಲದ ಕಾರಣ ಮರ ಸಾಗಣೆಗೆ ನದಿ ಅನಿವಾರ್ಯ! ಕಾಳಿ, ಗಂಗಾವಳಿ, ಅಘನಾಶಿನಿ, ಶರಾವತಿ, ನೇತ್ರಾವತಿ ಹೀಗೆ ಮುಂತಾದ ನದಿಗಳನ್ನು ಮರ ಸಾಗಿಸಲು ಶೂನ್ಯ ಬಂಡವಾಳದ ಮೋಟಾರ್‌ನಂತೆ ಬಳಸಿದ್ದರು. ಕರಾವಳಿ ಸೀಮೆಯಲ್ಲಿ  ಕಿಲೋ ಮೀಟರ್‌ಗೆ ಒಂದು ನದಿ, ಹಳ್ಳಗಳು ಹರಿಯುತ್ತಿದ್ದುದರಿಂದ ಮರ ಒಯ್ಯಲು ನೆರವಾಗಿದ್ದವು. ಅರಣ್ಯ ಕಾರ್ಯ ಯೋಜನೆಗಳಲ್ಲಿ ಯಾವ ಸ್ಥಳದಲ್ಲಿ  ನದಿಗೆ ಮರ ಹಾಕಿ ಏಲ್ಲಿ ಅವನ್ನು ಸಂಗ್ರಹಿಸಬಹುದೆಂಬ ಮಾರ್ಗದರ್ಶಿ ಮಾಹಿತಿಗಳಿವೆ.

ಕ್ರಿ,ಶ ೧೮೫೬ರ ಬಳಿಕ ಕರಾವಳಿ ಹಾಗೂ ಘಟ್ಟದ ನಡುವೆ ಚಕ್ಕಡಿ ಓಡಾಡುವ ರಸ್ತೆಗಳಾದವು. ಶತಮಾನದ ಹಿಂದೆ ಕಲ್ಲಿದ್ದಲು ಬಳಸಿ ಚಲಿಸುವ (ಒಡ್ಡರ ಬಂಡಿ!) ಲಾರಿಯೇನೋ ರಸ್ತೆಗಿಳಿಯಿತು, ಲಾರಿಯ ಚಕ್ರಕ್ಕೆ ಟಯರ್ ಜತೆಗೆ ( ರಿಮ್‌ನಂತೆ) ಮರ ಬಳಕೆಯಾಗಿತ್ತು! ಘಟ್ಟ  ಇಳಿಯುವಾಗ ಚಕ್ರಕ್ಕೆ ಬಳಸಿದ ಮರ ಘರ್ಷಣೆಯಿಂದ ಕಿಡಿಗಳು ಹುಟ್ಟುತ್ತಿದ್ದವು. ಮರದ ರಿಮ್‌ಗಳು ಬಿಸಿಯಾಗುವದನ್ನು  ತಪ್ಪಿಸಲು ಲಾರಿಯ ಕ್ಲೀನರ್ ಘಟ್ಟದ ರಸ್ತೆಯಲ್ಲಿ  ಕೆಳಗಿಳಿದು  ಲಾರಿ ಜತೆಗೆ ನಡೆಯುತ್ತ  ಟಯರ್‌ಗೆ ನೀರು ಸಿಂಪಡಿಸಬೇಕಿತ್ತು. ಹೀಗಾಗಿ ಮರದ ಭಾರವನ್ನು  ಇಂತಹ ಲಾರಿಯಲ್ಲಿ ಹಾಕಲು ಸಾಧ್ಯವಿರಲಿಲ್ಲ. ಸರಿಸುಮಾರು ಕ್ರಿ,ಶ ೧೯೨೫-೩೦ರ ಕಾಲಕ್ಕೂ  ಮರ ಸಾಗಣೆಗೆ  ನದಿ  ನಂಬಿದ್ದರು.

ಇಷ್ಟೆಲ್ಲ ಕತೆ ಹೇಳಿದ ಬಳಿಕ ಮರವಿಲ್ಲದ ಕರಾವಳಿಯಲ್ಲಿ ನದಿ ದಂಡೆಯಲ್ಲಿ ಸಾಮಿಲ್  ಉದ್ದಿಮೆಗಳು ಬೆಳೆದು ಬಂದಿದ್ದೇಕೆ ಎಂಬ  ಫಕ್ಕಾ ಹಕೀಕತ್ತು ತಿಳಿದಿರಬಹುದು. ನಾಟಾವನ್ನು  ನದಿ ನೀರಿನಲ್ಲಿ  ನೆನಸಿಟ್ಟರೆ ಬಿರುಕು ಬರುವದಿಲ್ಲ, ಹುಳ ತಿನ್ನುವದಿಲ್ಲ ಎಂಬ ತಿಳುವಳಿಕೆಯಿದೆ. ನದಿಯಂಚಿನಲ್ಲಿ ಸಾಮಿಲ್ ಆರಂಭಿಸಿದರೆ ಪ್ರವಾಹದಲ್ಲಿ ನಾಟಾ ಪಡೆಯುವದಕ್ಕೆ, ಮರ ನೆನೆಹಾಕುವದಕ್ಕೆ ತುಂಬ ಅನುಕೂಲ. ಹೀಗಾಗಿ ಕಾಡು ಮರ ತೇಲಿ ಬರುವದನ್ನೇ ಕಾಯುತ್ತ  ಕರಾವಳಿ ಪೇಟೆ ಸನಿಹದ ನದಿಯಂಚಿನಲ್ಲಿ ಸಾಮಿಲ್ ಸಾಲುಗಟ್ಟಿದವು. ನೀರಿನಲ್ಲಿ ತೇಲಿ ಬಂದ ನಾಟಾ  ನಂತರ ಹಡಗಿನಲ್ಲಿ  ತೇಲಿ (ತೇಲುವ ಹಡಗಾಗಿಯೂ) ಸಾಗಿದವು.

ನಮಗೆ ಕಾಡೇ ನದಿಗಳ ತಾಯಿ, ಬ್ರಿಟೀಷರಿಗೆ ನದಿಯೇ ಮರ ಒಯ್ಯುವ ಮಾಯೆ! ನದಿಯಂಚಿನ ಕಾಡನ್ನು ದೇವರ ಕಾಡು ಎಂದು ನಾವು ಪೂಜಿಸಿದೆವು, ಮರ ಬೆಳೆದು ಕಟಾವಾದ ಬಳಿಕ ಸಾಗಣೆಗೆ ನದಿ ಅನುಕೂಲ ಎಂದು ಅವರು ಸಾಗವಾನಿ ನೆಡುತೋಪಿಗೆ ನೆಲ ಆಯ್ಕೆಗೆ ನದಿ ಕಣಿವೆಗೆ ಪಾಶಸ್ತ್ಯ ನೀಡಿದರು! ಹೀಗಾಗಿ ನಮ್ಮ ನದಿಯಂಚಿನಲ್ಲಿ  ಸಾಮಿಲ್, ನೆಡುತೋಪು ವ್ಯಾಪಿಸಿದವು. ಅರಣ್ಯ ಕಾರ್ಯ ಯೋಜನೆ ರೂಪಿಸುವಾಗ ಮುಂದಿನ ೪೦-೫೦ ವರ್ಷಕ್ಕೆ ಮರ ಎಷ್ಟು ಬೆಳೆಯುತ್ತದೆಂಬುದನ್ನು  ಲೆಕ್ಕ ಹಾಕಲು ಬ್ರಿಟೀಷರು ಜಾಣರಿದ್ದರು, ಆದರೆ ಮರ ಎಳೆಯಲು ಕೋಣ, ಆನೆ, ನದಿ ಪ್ರವಾಹಗಳ ಬದಲು ದೈತ್ಯಶಕ್ತಿಯ ಲಾರಿ ಬರಬಹುದೆಂದು ಊಹಿಸಿರಲಿಲ್ಲ!. ಬಹುಶಃ ಅಂತಹುದೊಂದು ಕಲ್ಪನೆ ಸಾಧ್ಯವಾಗಿದ್ದರೆ  ಕಡಿದಾದ ಕಣಿವೆ ಕೊಳ್ಳ ಬಿಟ್ಟು ರಸ್ತೆಯಂಚಿನಲ್ಲಿ ಇನ್ನಷ್ಟು ಸಾಗವಾನಿ ಬೆಳೆಸುತ್ತಿದ್ದರು. ನದಿಯಂಚಿನ ನೈಸರ್ಗಿಕ ಕಾಡು ಅಷ್ಟರ ಮಟ್ಟಿಗೆ  ಸಂರಕ್ಷಿತವಾಗುತ್ತಿತ್ತು. ನಮಗೆ ಸ್ವಾತಂತ್ರ್ಯ ಬಂದ ಹೊಸತರಲ್ಲಿ ನೈಸರ್ಗಿಕ ಸಂಪನ್ಮೂಲ ಬಳಸಿ, ಕಾರ್ಖಾನೆ ಬೆಳೆಸಿ ಎಂದು ನೆಹರು  ಘೋಸಿದರು. ಕ್ರಿ.ಶ. ೧೯೫೦-೭೦ರ ಕಾಲಕ್ಕೆ ಪಶ್ಚಿಮ ಘಟ್ಟದಲ್ಲಿ ಅರಣ್ಯಾದರಿತ ಕೈಗಾರಿಕೆಗಳು ಒಂದರ ನಂತರ ಒಂದರಂತೆ ಆರಂಭವಾದವು. ಆಗ ಲಾರಿಗಳು ರಸ್ತೆಗಿಳಿದವು. ಅಷ್ಟು ಕಾಲ ನದಿ ಪ್ರವಾಹದಲ್ಲಿ ಮಳೆಗಾಲದಲ್ಲಿ ಮಾತ್ರ ತೇಲುತ್ತಿದ್ದ ನಾಟಾ ಈಗ ಲಾರಿ ಏರಿ ವರ್ಷವಿಡೀ ಸಂಚರಿಸುವ ಸಾಧ್ಯತೆಯಾಯಿತು. ಘಟ್ಟದ ದಾರಿಯಲ್ಲಿ  ಲಾರಿಯ ಭರ್ಜರಿ ಸಪ್ಪಳ ಕೇಳಿದಾಗ ಇನ್ನೂ ಮೋಟಾರು ನೋಡದ ಹಳ್ಳಿಗರು ಹೌಹಾರಿದರು. ಚಕ್ಕಡಿ ಓಡಾಡುವ ರಸ್ತೆಯಲ್ಲಿ ಲಾರಿ ಬಂದವು. ಈ ಲಾರಿಯವರು  ಮಕ್ಕಳನ್ನು ಹಿಡಿದು ಒಯ್ಯುತ್ತಾರೆ, ಆಣೆಕಟ್ಟೆಗಳಿಗೆ ಮಕ್ಕಳನ್ನು ಬಲಿ ಹಾಕುತ್ತಾರೆ ಎಂದು ಜನ ಮಾತಾಡುತ್ತಿದ್ದರು! ಲಾರಿ ಸಪ್ಪಳ ಕೇಳಿದರೆ ಜನ ಭಯಗೊಳ್ಳುತ್ತಿದ್ದರು.

ನಮ್ಮಲ್ಲಿ ಲಾರಿ ಎಷ್ಟು  ಭಯ ಹುಟ್ಟಿಸಿತ್ತೆಂದರೆ ನನ್ನದೇ ಒಂದು ಸ್ವಾರಸ್ಯಕರ ಘಟನೆಯಿದೆ.  ೧೯೭೫ರಲ್ಲಿ ಹುಲೇಕಲ್ ಎಂಬ ಹಳ್ಳಿಯಿಂದ ಶಿರಸಿಗೆ ಹೊರಟಿದ್ದೆವು, ಬಸ್ ಇರಲಿಲ್ಲ. ಸಂಜೆಯಾಗಿತ್ತು, ನಮ್ಮನ್ನು ನೋಡಿ ಲಾರಿಯವರು ಕೈಬೀಸಿ ಕರೆದರು, ಶಿರಸಿಗೆ ಕರೆದೊಯ್ಯುತ್ತೇವೆಂದು ಕೂಗಿದರು, ನಾವು ದಿಕ್ಕಾಪಾಲಾಗಿ ಓಡಿದೆವು! ಲಾರಿ ಹೋದ ಬಳಿಕ ತೆಪ್ಪಗೆ ಅದರ ಹಿಂದೆ ೧೫ ಕಿಲೋ ಮೀಟರ್ ನಡೆದು ಪೇಟೆ ಸೇರಿದೆವು!  ಅವತ್ತು ಮಕ್ಕಳನ್ನು ಹಿಡಿಯುವ ಲಾರಿ ಬಂದದ್ದು  ಎಷ್ಟು ನಿಜವೋ ಗೊತ್ತಿಲ್ಲ, ಎಷ್ಟು ಮಕ್ಕಳನ್ನು ಹಿಡಿದರೆಂಬುದೂ ತಿಳಿದಿಲ್ಲ. ಆದರೆ ಘಟ್ಟ ಏರಿ ಕಾಡು ಕೊಳ್ಳ ಸುತ್ತಿದ ಲಾರಿಗಳು ಅರಣ್ಯಾಧರಿತ ಕೈಗಾರಿಕೆಗೆಂದು  ನಮ್ಮ ಕಾಡಿನ ಹಿರಿಯಜ್ಜನಂತಹ ಹೆಮ್ಮರಗಳನ್ನೇ ಹೊತ್ತೊಯ್ದವು! ನದಿ ಮಳೆಗಾಲದಲ್ಲಿ ಮಾಡುತ್ತಿದ್ದ ಕೆಲಸವನ್ನು ಇವು ವರ್ಷವಿಡೀ ನಡೆಸಿದವು.