ಮಲೆನಾಡಿಗೆ ಬಂದಿದೆ  ಒಂದು ಬಿದಿರಿನ ಕಾಗದ,

ಕಾಡು ಮನೆಯಲ್ಲೀಗ ದುಃಖದ ಸಾಗರ ಎಂಬುದು ಸದ್ಯದ ಸ್ಥಿತಿ.

ಹೂವರಳಿ ಒಣಗಿ ಸಾಯುವ ಇದೇ ಬಿದಿರು ಗಳುಗಳು ಮಣ್ಣು ಮೆತ್ತಿಕೊಂಡು ಬಯಲು ಸೀಮೆಯಲ್ಲಿ ಶತಮಾನಗಳಿಂದ ಉಳಿದಿವೆ, ಎಳೆ ಶಿಶುಗಳ ಅಳು ನಿಲ್ಲಿಸುವ ತೊಟ್ಟಿಲಾಗಿವೆ.  ವಿಚಿತ್ರವೆಂದರೆ ಪಶ್ಚಿಮ ಘಟ್ಟದ ಜೀವಜಾಲದ ತೊಟ್ಟಿಲಲ್ಲಿ  ನಕ್ಕು ನಲಿದಾಡಿ ಬೆಳೆದ  ಹೆಮ್ಮೆಯ ಬಿದಿರು ಈಗ ಅಲ್ಲಯೇ  ಹೆಣವಾಗಿ ಮಲಗುತ್ತಿದೆ.


ಕಾಡು ಬಿದಿರಿನ ಬೀಜಮೇಳಕ್ಕೆ ಜೀವಮಾನದ ಕಟ್ಟಕಡೆಗೆ ಕಾಲನ ಕರೆ ಬಂದಿದೆ. ಕಸುವಿನ ಮಣ್ಣಲ್ಲಿ ಮುಂಗಾರಿಗೆ ಮತ್ತೆ  ಹುಲ್ಲು ಚಿಗುರಾಗಿ ಮೊಳೆಯಬೇಕು, ಹೀಗಾಗಿ  ಹೊಸ ಬಿದಿರು ಬೆಳೆಗೆ ನಿಸರ್ಗ ಚಕ್ರದ ಸಿದ್ದತೆ ಸಾಗಿದೆ.  ಸಹಜ ಉಳುಮೆ ನಡೆದು ಬಿತ್ತನೆಯೂ ಶುರುವಾಗಿದೆ. ಹಳ್ಳ ಕೊಳ್ಳಗಳಲ್ಲಿ  ಬೀಜದಿಂದ ಬಿದಿರು ಬೆಳೆಯುವ ಮಹಾ ಕನಸು ಮೂಡಿದೆ. ಹೂವರಳಿ ಶಕ್ತಿ ಬೀಜಗಳಾಗಿ ಹಿಗ್ಗಿದ ಹೆಬ್ಬಿದಿರು( ಬಾಂಬೂಸಾ ಅರುಂಡೀನೆಸಿಯಾ) ಪಶ್ಚಿಮ ಘಟ್ಟದ ತುಂಬ  ಇಮ್ಮಡಿ ಉತ್ಸಾಹದಲ್ಲಿ ಚೆಂದದ ತೆನೆ ತೋರಣ ಕಟ್ಟಿದೆ. ಬಿದಿರು ಹಿಂಡುಗಳ ಫಲಿತ ಬೀಜಗಳೆಲ್ಲ ಇನ್ನೇನು  ಭೂ ತಾಯಿಯ ಮಡಿಲು ಸೇರುವ ಕ್ಷಣ ಎದುರಿದೆ.

ಹಸುರು ಹೊನ್ನಾಗಿ ಇಷ್ಟು ಕಾಲ  ನಳನಳಿಸಿ  ಜೀವ ಜಾಲದ  ತೊಟ್ಟಿಲಾದದ್ದು  ಇದು. ಕರಕುಶಲ ವಸ್ತುಗಳ ಆಧಾರ, ಬಡವರ ಮನೆ ನಿರ್ಮಾಣದ ಅಗತ್ಯ, ಕೃಷಿಕರ ಊರುಗೋಲಾಗಿ ಬಳಕೆ ಬಹುವಿಸ್ತಾರ. ಮೂಲನೆಲೆ ಮಲೆನಾಡು, ಆದರೂ  ಬಯಲು ನಾಡಿನ ತುಂಬ ಬಿದಿರಿಗೆ ಭಾರೀ ನೆಂಟರು. ಕಾಡಿನಂಗಳದಲ್ಲಿ ನಾಳಿನ ತಲೆಮಾರಿಗೆಂದು  ಬೀಜ  ಚೆಲ್ಲಿ ತಾನು  ಒಣಗುತ್ತ ಒಣಗುತ್ತ  ಬಾಣಂತಿಯಂತೆ ಬಸವಳಿದಿದೆ. ತಾನೇ ಹೆತ್ತ ಬೀಜಗಳ ಎದುರು ನಮ್ಮ ಕಾಡಿನ ಈ ದೊಡ್ಡ ಹುಲ್ಲು ಸಾವಿನ ಸೆರಗು ಹೊದ್ದಿದೆ. ಹಿಂಡಿಗೆ ಹಿಂಡೇ ಒಮ್ಮೆಗೆ ಒಣಗಿ ನಿಂತ ರೀತಿಯಲ್ಲಿ ಕಾಳ್ಗಿಚ್ಚಿಗೆ ಕೊರಳೊಡ್ಡುವ ಭೀತಿ ಕಾಣುತ್ತಿದೆ. ಮುಂಬರುವ ದಶಕ  ಸಾರ್ವತ್ರಿಕ ಬಿದಿರು ಬರ!. ಮಲೆನಾಡಿನ ಕಾಡು  ಸೂತಕದ ಮನೆ.

ಇದೇನು ಇದ್ದಕ್ಕಿದ್ದಂತೆ ಘಟಿಸಿದ ಸಂಗತಿಯಲ್ಲ, ಬಿದಿರು ಹೊಲದ ಇಂತಹುದೇ ಕಾಡು ಸುಗ್ಗಿ  ಈಗ ೪೫ ವರ್ಷಗಳ ಹಿಂದೆ ಜರುಗಿದ ಮಾತು ಕೇಳಿದ್ದೇವೆ. ಹಲವು ಹಿರಿ ಜೀವಗಳಿಗೆ ಬಿದಿರಕ್ಕಿ ಉಂಡ ನೆನಪುಗಳಿವೆ. ಬಿದಿರು ಕಾಡಿಗೆ ಬೆಂಕಿ ತಗಲಿದ ದಾಖಲೆಗಳಿವೆ. “ಬಿದಿರು ಹೂವರಳಿಸಿದರೆ  ಬರಗಾಲ’ ಎಂಬ ಭಯದ ಮಾತು ಮಲೆನಾಡಿನಲ್ಲಿದೆ. ೪೦-೪೫ ವರ್ಷಕ್ಕೆ ಒಮ್ಮೆ ಹೂವರಳಿಸುವ ಹೆಬ್ಬಿದಿರು ಸಂಭ್ರಮವನ್ನು ಬರಗಾಲದ ಜತೆ ಅರ್ಥಮಾಡಿಕೊಂಡಿದ್ದಕ್ಕೆ ಕಾರಣ ಸ್ವಾರಸ್ಯಕರ. ಮನುಷ್ಯನಿಗೆ ತನ್ನ ಜೀವಿತದಲ್ಲಿ ಒಂದೆರಡು ಸಾರಿ ಮಾತ್ರ  ಬಿದಿರು ಹೂವು ನೋಡುವ ಅವಕಾಶ. ಕಾಡಿನಲ್ಲಿ ಬಿದಿರು ಹೂವರಳಿಸಿದಂತೆ ಇತ್ತ ನಾಡಿನ ಜನ ವಿವಿಧ ರೋಗರುಜಿನೆಗಳಿಗೆ ತುತ್ತಾಗುತ್ತಿದ್ದರು. ಹೀಗಾಗಿ  ಬಿದಿರು ಹೂವನ್ನು ಭವಿಷ್ಯದ ಅಪಾಯದ ಸಂಕೇತವೆಂಬ ಊಹೆ.

ಬಿದಿರಕ್ಕಿ ತಿಂದು ಇಲಿಗಳು ಬೆಳೆಯುತ್ತವೆ, ನಂತರ ಪ್ಲೇಗ್ ಬರುತ್ತಿದ್ದ ಕತೆಗಳನ್ನು ನಾವು ಕೇಳುತ್ತೇವೆ. ಆದರೆ  ಬಿದಿರು ಹೂವರಳಿಸಿದ್ದಕ್ಕೆ ಬರಗಾಲ ಬಂದ ಅಧಿಕೃತ ದಾಖಲೆಗಳು ತೀರ ಕಡಿಮೆ. ಹೂವರಳಿಸಿದ ವರ್ಷಗಳಲ್ಲಿ  ಬಿದಿರಕ್ಕಿ ಸಂಗ್ರಹಕ್ಕೆ ಬರಗಾಲ ಪ್ರದೇಶದ ಜನ ತಂಡೋಪ ತಂಡವಾಗಿ ಮಲೆನಾಡಿಗೆ ವಲಸೆ ಬರುತ್ತಿದ್ದರು. ಅವರ ಜತೆಯಲ್ಲಿ  ಪ್ಲೇಗ್, ಮೈಲಿ ಬೇನೆಗಳು  ಒಕ್ಕರಿಸುತ್ತಿದ್ದವು. ರೋಗದಿಂದ ಹಳ್ಳಿ ಹಳ್ಳಿಗಳೇ  ಖಾಲಿಯಾಗುತ್ತಿದ್ದವು, ಅಪಾರ ಸಾವು ನೋವು ಸಂಭವಿಸುತ್ತಿದ್ದವು.  ಬಿದಿರಕ್ಕಿ ಆದ ವರ್ಷ ಇದು ನಡೆಯುತ್ತಿದ್ದುದರಿಂದ  ಬಿದಿರು ಹೂವರಳಿಸಿದರೆ ಜನರಲ್ಲಿ ಭಯ ಮೂಡುತ್ತಿತ್ತು. ಕಾಡಲ್ಲಿ ಬಿದಿರಕ್ಕಿ ಆದ ವರ್ಷ ಸಾಂಕ್ರಾಮಿಕ ರೋಗಗಳು ಹೆಚ್ಚುತ್ತಿದ್ದವು. ಬಯಲುಸೀಮೆ ಜನ ಮಲೆನಾಡಿಗೆ ವಲಸೆ ಬಂದು ವಿವಿಧ ರೋಗಗಳು ವ್ಯಾಪಿಸುತ್ತಿದ್ದ ಉಲ್ಲೇಖವಿದೆ. ಕ್ರಿ.ಶ. ೧೮೬೫-೬೬ರಲ್ಲಿ ಬಿದಿರು  ಹೂವರಳಿಸಿದಾಗ ಉತ್ತರ ಕನ್ನಡ ಪ್ರದೇಶಕ್ಕೆ ಬಯಲು ಸೀಮೆಯ ೫೦,೦೦೦ ಜನ ಬಂದು ಬಿದಿರಕ್ಕಿ ತಿಂದು ಬದುಕಿದರು!. ಕ್ರಿ.ಶ. ೧೮೯೩ರ ಮುಂಬಯಿ ಇಲಾಖೆಗೆ ಸೇರಿದ ಗ್ಯಾಝೇಟಿಯರ್‌ನಲ್ಲಿ ಕ್ರಿ.ಶ. ೧೮೭೬ರ ಭೀಕರ ಬರಗಾಲದಲ್ಲಿ ಬೆಳಗಾವಿ ಜಿಲ್ಲೆಯ ಬಡ ಜನರು ತಿನ್ನುತ್ತಿದ್ದ ಆಹಾರದ ಪಟ್ಟಿಯಿದೆ. ಅದರಲ್ಲಿರುವ ಮೊದಲ ಹೆಸರು ಬಿದರಕ್ಕಿಯದು!. ಬಿದಿರಕ್ಕಿ ಬಡ ಜನರ ಅನ್ನದ ಅಧಾರವಾಗಿ ಮಲೆನಾಡಿನ ಕಾಡುಗಳು  ಬಯಲುಸೀಮೆಯ ಜನರ ಬರಗಾಲದ  ಪುನರ್‌ವಸತಿ ತಾಣಗಳಾಗಿದ್ದವು.

ನಮ್ಮ ಪಶ್ಚಿಮ ಘಟ್ಟದಲ್ಲಿ ಬಿದಿರೆಂದರೆ ಅವಜ್ಞೆಗೆ ಗುರಿಯಾದ ಕಾಡು ಕಳೆ. ಸ್ವಾತಂತ್ರ್ಯದ ಹೊಸತರಲ್ಲಿ  ನೈಸರ್ಗಿಕ ಸಂಪನ್ಮೂಲ ಬಳಸಿ ಕೈಗಾರಿಕೆ ಬೆಳೆಸಿ ಎಂದ ನೆಹರು ನೀತಿಯಿಂದ ಅರಣ್ಯಾಧರಿತ ಕೈಗಾರಿಕೆಗಳು ಬೆಳೆದು ಬಂದವು. ಬಿದಿರು ಕಡಿಯಲು ಕಾಡು ಗುಡ್ಡಗಳಲ್ಲಿ ಲಾರಿ ಓಡಾಟ, ಹೊಸ ರಸ್ತೆ ನಿರ್ಮಾಣ,  ಕೊಳ್ಳದ ಬಿದಿರು ಸಂಪತ್ತು  ಕಾಗದ ಕಾರ್ಖಾನೆಗಳತ್ತ ಹೊರಟ ಕಾಲ ಅದು. ಚದರ ಕಿಲೋ ಮೀಟರ್‌ಗೆ ೧೫ ಜನರೂ ಇಲ್ಲದ ನಿರ್ಜನ ಅರಣ್ಯ. ಮಲೆನಾಡು ಪೂರ್ತಿ ಅಪ್ಪಟ ಅರಣ್ಯ ಜಿಲ್ಲೆ. ವನ್ಯ ಸಂಪತ್ತಿನ ಬಗೆಗೆ ಇದ್ದ ಕಳಕಳಿಯೂ ತೀರ ಕಡಿಮೆ. ಸ್ವತಃ ಅರಣ್ಯ ಇಲಾಖೆಗೂ ನೈಸರ್ಗಿಕ ಕಾಡು ಕಡಿಯುವುದು, ಸುಡುವುದು, ಶಿಸ್ತಿನಲ್ಲಿ ಸಾಗವಾನಿ ನೆಡುವ  ಏರು ಪ್ರಾಯ! ಕೃಷಿಕರಿಗೆ ಇತ್ತ  ಹೊಸ ಕೃಷಿ ಭೂಮಿ ಮಾಡುವ ಉತ್ಸಾಹ. ಕೃಷಿಗಾಗಿ ಅರಣ್ಯ ಭೂಮಿಯನ್ನು ಹೆಚ್ಚು ಹೆಚ್ಚು ನೀಡುವುದು ಸರಕಾರದ ಜನಪರ ಧೋರಣೆ. ಕೃಷಿ ವಿಸ್ತರಣೆಗೆ ಕಂದಾಯ ಇಲಾಖೆಗೆ ಕಾಡು ಭೂಮಿ ಹಸ್ತಾಂತರಿಸುವುದು ಅರಣ್ಯಾಧಿಕಾರಿಗಳ ದಕ್ಷತೆಯ ದೊಡ್ಡ  ಮಾನದಂಡ! ಬಿದಿರು ಕಡಿಯಲು ರಸ್ತೆಯಾದರೆ ಊರಿಗೆ ಚಕ್ಕಡಿ ಓಡಾಟ ಸಾಧ್ಯವಾಗುತ್ತದೆ, ಬಿದಿರಿಗೆ ಬೆಂಕಿ ಬಿದ್ದರೆ ಕೃಷಿ ಭೂಮಿ ಫಲವತ್ತತೆ ಹೆಚ್ಚಿಸಲು ಹೆಚ್ಚು ಹೆಚ್ಚು ಬೂದಿ ದೊರೆಯುತ್ತದೆಂಬ ಸರಳ ಲೆಕ್ಕಾಚಾರ ಮಲೆನಾಡಿನ ಮನೆಮನೆಯಲ್ಲಿದ್ದ ಕಾಲ ಆದು .

ಈಗ ಕಾಡಿನ ಕತೆ ಸಾಕಷ್ಟು ಬದಲಾಗಿದೆ, ನಾಡು ಹಿಗ್ಗಿದೆ. ಕಾಡು, ಕಣಿವೆಗಳು ಬಯಲಾಗಿ  ಚದರ ಕಿಲೋ ಮೀಟರ್ ಕ್ಷೇತ್ರದಲ್ಲಿ ೩೦೦-೪೦೦ ಜನಸಂಖ್ಯೆ ಏರಿ ಮಾನವ ಹಸ್ತಕ್ಷೇಪಗಳು ಮಿತಿಮೀರಿವೆ. ನಗರ ಬೆಳೆಯುತ್ತ ಮೂಲಭೂತ ಸಂಪರ್ಕ ಸುಧಾರಣೆಯಾಗುತ್ತಿದೆ, ಉರುವಲು, ಜಾನುವಾರು ಮೇವು,  ಬೃಹತ್ ಯೋಜನೆಗಳ ಪ್ರಹಾರಕ್ಕೆ ಅಪಾರ ನಾಶ ನಡೆದು  ಪರಿಸ್ಥಿತಿ ಬಿಗಡಾಯಿಸಿದೆ. ನದಿ ತೊರೆಗಳು ಬತ್ತಿವೆ, ಅಂತರ್ಜಲ ಕುಸಿದಿದೆ. ವನ್ಯಜೀವಿಗಳ ವಾಸದ ನೆಲೆಗೆ  ಇನ್ನಿಲ್ಲದ  ಆಘಾತ ಒದಗಿದೆ.

ಹೂವರಳಿಸುವ ಸಹಜ ಕ್ರಿಯೆಗೆ ಈಗ ಬಿದಿರಿಗೆ ಸಂಭ್ರಮವಿದ್ದರೂ ಇಡೀ ಕಾಡು ಕಂಗಾಲಾಗಿದೆ. ಕಾಡು ಕೊಳ್ಳದ ಚಿತ್ರ ತೆಗೆದು ಅಲ್ಲಿನ  ಬಿದಿರನ್ನು ಅಳಿಸಿದರೆ ಅರ್ಧ ಕಾಡಿಗೇ ಕಾಡೇ ಖಾಲಿ ಖಾಲಿ!  ಉತ್ತರ ಕನ್ನಡ, ಶಿವಮೊಗ್ಗ, ಚಿಕ್ಕಮಂಗಳೂರು ಪ್ರದೇಶದ ದಟ್ಟ ಕಾಡುಗಳಲ್ಲಿ ಪ್ರತಿ ಹೆಕ್ಟೇರ್‌ನಲ್ಲಿ ೧೦೦-೨೦೦ ಬಿದಿರು ಹಿಂಡುಗಳಿವೆ, ಪ್ರತಿ ಹಿಂಡುಗಳಲ್ಲಿ ನೂರಾರು ಬಿದಿರು ಹೆಮ್ಮರಗಳ ಎತ್ತರಕ್ಕೆ  ಹಸುರು ಛಾವಣಿ. ಈಗ ಒಣಗಿ ಮುಂದಿನ ಎರಡು ಮೂರು ವರ್ಷಗಳಲ್ಲಿ ನಾಶವಾಗಲಿವೆ. ರಾಜ್ಯದಲ್ಲಿ ೭೫೦೦ ಚದರ ಕಿಲೋ ಮೀಟರ್ ಕ್ಷೇತ್ರದಲ್ಲಿ ಬಿದಿರು ಕಾಡಿದೆ. ಇವುಗಳ ಪೈಕಿ  ೨೫೦೦ ಹೆಕ್ಟೇರ್ ಪ್ರದೇಶ  ರಾಷ್ಟ್ರೀಯ ಉದ್ಯಾನ ಹಾಗೂ ಅಭಯಾರಣ್ಯ ಪ್ರದೇಶಗಳ ವ್ಯಾಪ್ತಿಯಲ್ಲಿದೆ. ಇಲ್ಲಿ  ವಾರ್ಷಿಕ ೧೦೦೦-೨೫೦೦ ಮಿಲಿ ಮೀಟರ್ ಮಳೆ ಸುರಿಯುತ್ತದೆ. ಒಂದೊಂದು ಎಕರೆಯಲ್ಲಿ  ವರ್ಷಕ್ಕೆ  ೫೦-೮೦ಲಕ್ಷ ಲೀಟರ್ ಮಳೆ ನೀರು ಸುರಿಯುತ್ತದೆ. ಪ್ರವಾಹದ ಅಬ್ಬರದಲ್ಲಿ  ಕಾಡಿನ  ದಟ್ಟಣೆಯಿತ್ತು. ಇಷ್ಟುಕಾಲ ಕಡಿದಾದ ಕೊಳ್ಳಗಳಿಗೆ ಹಾನಿ ತಗಲದಂತೆ ಬೇಲಿಯಾಗಿ ಬಿದಿರು ನಿಂತಿತ್ತು. ನೆಲ, ಜಲ ಸಂರಕ್ಷಣೆಗೆ  ನೆರವಾಗಿತ್ತು. ಭೂಮಿ ಬಚಾವು ಮಾಡುವ ಸುಲಭ ಆಸ್ತ್ರ  ಈಗ ನಮ್ಮ ಕೈತಪ್ಪಿದೆ. ಕಡಿದಾದ ಕೊಳ್ಳಗಳಲ್ಲಿ  ನಿಸರ್ಗ ನೇಮಿಸಿದ  ಅಕ್ಕರೆಯ ಹಸುರು ನೌಕರರು  ಸುದೀರ್ಘ ರಜೆಗೆ ಹೊರಟಿದ್ದಾರೆ.

ಹೊಸ ಹೊಸ ಸಮಸ್ಯೆಗಳು ಎದುರಾಗಲಿವೆ. ನೆಲಕ್ಕೆ ಬಿದ್ದ ಬೀಜ ಮೊಳೆತು ಬೆಳೆಯಲು ಇನ್ನು ಕನಿಷ್ಟ ಹತ್ತಾರು ವರ್ಷ ಬೇಕು. ಕಾಡಿಗೆ ಮೇವಿಗೆ ಹೋಗುವ  ನಮ್ಮ ಜಾನುವಾರುಗಳು ಎಳೆ ಚಿಗುರು ತಿನ್ನುತ್ತವೆ. ಕಾಳ್ಗಿಚ್ಚು ಸಮಸ್ಯೆ ಉಲ್ಬಣಗೊಂಡು ಬೆಂಕಿ ಕಾವಲು ದೊಡ್ಡ ಸಮಸ್ಯೆ. ಮಣ್ಣಿನಲ್ಲಿ ಸತ್ವ ಇದ್ದರೆ ಮಾತ್ರ  ಭವಿಷ್ಯದಲ್ಲಿ ಗುಣಮಟ್ಟದ ಬಿದಿರು ಬೆಳೆಯುತ್ತದೆ. “ಬಿದಿರಿಗೆ ಬೀಜ ಕನಸು, ಅರಣ್ಯ ಇಲಾಖೆಗೆ ಕಡಿಯುವ ಮನಸು” ಎಂಬುದು ಇಂದಿನ ಸ್ಥಿತಿ. ರಾಜ್ಯ ಅರಣ್ಯ ಇಲಾಖೆಯ ಅರಣ್ಯ ಕಾರ್ಯಯೋಜನೆಯ ಮಾರ್ಗದರ್ಶಿಯಲ್ಲಿ ಬಿದಿರು ಕಟಾವಿಗೆ ನಿರ್ದೇಶನವಿದೆ. ಬಿದಿರು ಹೂವರಳಿಸುವ ಪೂರ್ವದಲ್ಲಿ  ಪ್ರತಿ ಹಿಂಡಿನಲ್ಲಿರುವ ಶೇಕಡಾ ೭೦-೮೦ ಬಿದಿರು ಗಳು ಕಡಿಯಬೇಕು. ಇನ್ನುಳಿದ ಆಯ್ದ ಶೇಕಡಾ ೩೦ರಷ್ಟನ್ನು ಹೂವರಳಲು  ಸಂರಕ್ಷಿಸಬೇಕು  ಎಂದು ಸೂಚಿಸಲಾಗಿದೆ.

ಕಳೆದ ಕ್ರಿ.ಶ. ೧೯೬೩ರಲ್ಲಿ ಮಲೆನಾಡಿನಲ್ಲಿ ಬಿದಿರು ಹೂವರಳಿಸಿದ ಸಂದರ್ಭದಲ್ಲಿ ದೊಡ್ಡ ಪ್ರಮಾಣದ ಬೆಂಕಿ ಅನಾಹುತವಾಗಿತ್ತು. ಈ ಹಿನ್ನೆಲೆಯಲ್ಲಿ  ಹೂವರಳುವ ಪೂರ್ವದಲ್ಲಿ  ವ್ಯಾಪಕ ಪ್ರಮಾಣದಲ್ಲಿ ಬಿದಿರು ಕಡಿಯುವ ನಿರ್ಧಾರ ಮಹತ್ವ ಪಡೆದಿದೆ. ಬೆಂಕಿ ತಡೆಗೆ ವಿಶೇಷ ಮುಂಜಾಗೃತೆ ವಹಿಸಬೇಕು. ಬಿದಿರು ಕಾಳುಗಳನ್ನು  ಸಂಗ್ರಹಿಸಿ  ಸಂರಕ್ಷಿಸಿ ಆಯ್ದ ಸ್ಥಳಗಳಲ್ಲಿ ಬಿತ್ತನೆ ಮಾಡುವ ಮೂಲಕ ಮುಂದೆ  ಹೊಸ ಸಸ್ಯ ಬೆಳೆಸಲು ಪ್ರಯತ್ನ ಮಾಡಬೇಕು  ಎಂಬುದು ಇಲಾಖೆಯ ಆಸೆ. ಹೇಳಿ ಕೇಳಿ ಇದು  ನಮ್ಮ ಕಾಡಿನ ಶೂನ್ಯ ಕೃಷಿಯ ಸಂಪಾದನೆ. ನಮ್ಮ  ಕರ್ನಾಟಕ ಅರಣ್ಯ ಇಲಾಖೆ  ರಾಜ್ಯದ ಬಿದಿರು ಬೆಳೆಯ ದೊಡ್ಡ ಜಮೀನ್ದಾರ!  ಬಿದಿರು ಸಂಪತ್ತು ಹಾಗೂ ಇವುಗಳ ಸುಸ್ಥಿರ ಬಳಕೆ, ಸಂರಕ್ಷಣೆ  ವಿಚಾರದಲ್ಲಿ  ಇಲಾಖೆಯ ಅರಿವು ಮಾತ್ರ ಸೀಮಿತ.  ಕಾರ್ಖಾನೆಗೆ ಗುತ್ತಿಗೆ ನೀಡುವದು, ಮೇದಾರರಿಗೆ ರಿಯಾಯತಿ ದರದಲ್ಲಿ ಬಿದಿರು ನೀಡುವುದೇ ಆದ್ಯತೆ ಕೆಲಸ.

ಬಿದಿರು ಸಂಪನ್ಮೂಲಗಳ ವಿಸ್ತ್ರತ ಆಧ್ಯಯನ, ಮಾಹಿತಿ ಸಂಗ್ರಹ, ನೈಸರ್ಗಿಕ ಸಂಪತ್ತು ರಕ್ಷಣೆ ವಿಚಾರದ  ಇಡೀ ಬಿದಿರು ವ್ಯವಹಾರ ಗಮನಿಸಿದರೆ ಅದು ಬಿದಿರಿನಷ್ಟೂ ನೆಟ್ಟಗಿಲ್ಲ! ಬಡ ಮೇದಾರರಿಗೆ ಅನುಕೂಲವಾಗಲೆಂದು ಸರಕಾರದ ರಿಯಾಯತಿ ದರದಲ್ಲಿ ಬಿದಿರು ನೀಡುತ್ತದೆ. ಪಾಪ ಆದು ಬಡವರ ಕೈತಪ್ಪಿ ಬಯಲು ನಾಡಿನ ಬಾಂಬೂ ಬಜಾರಗಳ ತುಂಬ ಮಾರಾಟಕ್ಕೆ ನಿಂತರೂ ಇಲಾಖೆ ಕಣ್ಣೆತ್ತಿ ನೋಡಿದ್ದಿಲ್ಲ! ಸಿಂದನೂರು, ಗಂಗಾವತಿ ದಾಟಿ ನೆರೆಯ ಆಂಧ್ರಕ್ಕೆ ಹೋದರೂ ಕೇಳುವವರಿಲ್ಲ. ಮಳೆಗಾಲದಲ್ಲಿ ಬಿದಿರು ಕಟಾವು ಮಾಡಬಾರದು, ಒಂದು ಹಿಂಡಿನಲ್ಲಿ  ಎಳೆಯ ಬಿದಿರು ಕಡಿಯಬಾರದು, ಕನಿಷ್ಟ ೮-೧೦ ಬಿದಿರು ಉಳಿಸಬೇಕು ಎಂಬ ನಿಯಮವೇನೋ ಲಾಗಾಯ್ತಿನಿಂದ ಇದೆ. ಕಟಾವು ನಿಯಮ ಮುರಿದ್ದಕ್ಕೆ ದಂಡ ವಿಧಿಸಿದ, ಸ್ವಯಂ ಸ್ಪೂರ್ತಿಯಿಂಂದ ಕಾನೂನು ಕ್ರಮ ಕೈಗೊಂಡ ದಾಖಲೆಗಳಿವೆಯೇ ಅರಣ್ಯ ಭವನವೇ ಹೇಳಬೇಕು! ಹೋಗಲಿ ಈಗ  ಬೆಂಕಿ ನಿಯಂತ್ರಣ ಕಾರಣ ಮುಂದೊಡ್ಡಿ ಅರಣ್ಯ ಕಾರ್ಯಯೋಜನೆಗಳಲ್ಲಿ  ಶೇಕಡಾ ೮೦ ಬಿದಿರು ಕಡಿಯಲು ಶಿಪಾರಸ್ಸು ನೀಡಿದ ಕ್ರಮ ಕೂಡಾ ಕೇವಲ ವ್ಯಾವಹಾರಿಕ ನೋಟದ್ದು. ಕಳೆದ ೧೯೯೯ರಿಂದ ಈವರೆಗೆ ಬಿದಿರು ಹೂವರಳಿಸಿದ ಚಿಕ್ಕಮಂಗಳೂರು, ಶಿವಮೊಗ್ಗ ಪ್ರದೇಶಗಳಲ್ಲಿ  ಪ್ರತಿ ಹಿಂಡಿನಲ್ಲಿ ಶೇಕಡಾ ೨೫, ಶೇಕಡಾ ೫೦, ಶೇಕಡಾ ೬೦ ಬಿದಿರುಗಳನ್ನು ಕಡಿದು ಅಲ್ಲಿನ ಪ್ರಯೋಗ ಫಲಿತಾಂಶ ಗಮನಿಸಿದ ಅನುಭವ ಇಲಾಖೆಗೆ ಬೇಕಿತ್ತು, ಕಲಿಯುವ ಮನಸ್ಸು ಕಾಡು ಕಾಯುವವರಲ್ಲಿ ಕಾಣುತ್ತಿಲ್ಲ. ತಜ್ಞರ ನೆರವು, ನೆಲಮೂಲ ಸಮಸ್ಯೆಗಳ ಅರಿವು ಬಿದಿರು ಬೆಂಕಿಯ ಸಮಸ್ಯೆಗೆ ಪರಿಣಾಮಕಾರಿ ಪರಿಹಾರ ಹೇಳಬಹುದು. ಅರಣ್ಯ ಭವನದ ತುಂಬ ಹಿರಿಯ ಅಧಿಕಾರಿಗಳ ದಂಡೇ ಇದೆ, ಆದರೆ ಕಾಡು ನೆಲದಲ್ಲಿ ಓಡಾಡುವ ಸಿಬ್ಬಂದಿಗಳ ದೊಡ್ಡ ಕೊರತೆಯಿದೆ. ಗಾರ್ಡ, ಫಾರೆಸ್ಟ್‌ಗಳ ಹುದ್ದೆಗಳು ಖಾಲಿ ಇವೆ. ಸೆಮಿನಾರು, ಮೀಟಿಂಗು, ಫೈಲುಗಳಲ್ಲಿ  ಸಮಯ ಜಾರುತ್ತಿದೆ. ಕಾಡು ನೋಡುವ ಪುರುಸೂತ್ತು  ಕಡಿಮೆಯಾಗಿದೆ.

ಬಿದಿರು ಹೂವರಳಿದ್ದು ಕಾಡಿನ ಸಂಭ್ರಮಕ್ಕಿಂತ ಸಂಕಟ ಹೆಚ್ಚಿಸಿದ್ದಂತೂ ಖಾತ್ರಿಯಾಗಿದೆ. ಸಂರಕ್ಷಣೆಯ ಇಡೀ ಸಮಸ್ಯೆಯನ್ನು ಕೇವಲ ಇಲಾಖೆಯ ಹೆಗಲಿಗೆ ಬಿಡುವದು ಸರಿಯಲ್ಲ.  ಸಂರಕ್ಷಣೆಗೆ ನಾವೂ ಸಹಾಯ ನೀಡಬೇಕಿದೆ. ಕಾಂಕ್ರೀಟು, ಕಬ್ಬಿಣದಲ್ಲಿ  ನಮ್ಮ ಬಳಕೆ ಬೆಳೆದರೂ  ಇದು ಇಂದಿಗೂ ಬಡವರ ಬಂಧು. ಬಯಲು ಸೀಮೆಗೆ ಮಳೆ ಚೆನ್ನಾಗಿ ಸುರಿದು  ರೈತರ ಕೈಯ್ಯಲ್ಲಿ ಹಣ ಓಡಾಡಿದರೆ ಅಲ್ಲಿನ ಬಾಂಬೂ ಬಜಾರಿನ ಬಿದಿರಿನ ಬೆಲೆ ಏರುತ್ತದೆ. ಹೂವರಳಿ ಒಣಗಿ ಸಾಯುವ ಇದೇ ಬಿದಿರಿನ ಗಳುಗಳೇ ಅಲ್ಲಿ ಮಣ್ಣು ಮೆತ್ತಿಕೊಂಡು ಮನೆಗಳಾಗಿ ಶತಮಾನಗಳಿಂದ  ಉಳಿದಿವೆ, ಎಳೆ ಶಿಶುಗಳ ಅಳು ನಿಲ್ಲಿಸುವ ತೊಟ್ಟಿಲಾಗಿವೆ. ವಿಚಿತ್ರವೆಂದರೆ ಪಶ್ಚಿಮ ಘಟ್ಟದ ಜೀವಜಾಲದ ತೊಟ್ಟಿಲಲ್ಲಿ ನಕ್ಕು ನಲಿದಾಡಿದ ಬೆಳೆದ ನಮ್ಮ ಹೆಮ್ಮೆಯ ಬಿದಿರು ಈಗ ಅಲ್ಲಿಯೇ  ಹೆಣವಾಗಿ ಮಲಗುತ್ತಿದೆ. ಬೆಂಕಿ, ಜಾನುವಾರುಗಳಿಂದ ಬಚಾವು ಮಾಡಿ ಮತ್ತೆ ಹಸುರು ನಗು ಮೂಡಲು ನೀವೇನು ಮಾಡುವಿರಿ? ಕೃಷಿಕರ ಮನೆ ಮನೆಯೆದುರು ಬಡ ಬಿದಿರಿನ ಪ್ರಶ್ನೆಯಿದೆ.