ಜಮಖಂಡಿ, ಬೀಳಗಿ, ರಾಮದುರ್ಗ, ಸವದತ್ತಿ ಪ್ರದೇಶದ ಕಾಡುಗುಡ್ಡ ಅಲೆಯುವಾಗ ರೈತರು  ಬೇರಿನ ಬಗೆಗೆ ಮಾತಾಡುತ್ತಿದ್ದರು. ಕಲ್ಲುಗುಡ್ಡದಲ್ಲಿ ಬೆಳೆಯುವ ಇಲ್ಲಿನ ನೈಸರ್ಗಿಕ ಸಸಿಗಳು ಕಾಂಡ ಬೆಳೆಸುವದಕ್ಕಿಂತ ಹೆಚ್ಚಿನ ಕಾಳಜಿ ಬೇರು ಬೆಳೆಸಲು ನೀಡುತ್ತವೆ! ಆಳಕ್ಕೆ ಬೇರಿಳಿಸಿ ಸದೃಢ ಬೇರು ಹೊಂದಿದ ತರುವಾಯದಲ್ಲಿ ಭೂಗತದಿಂದ ಹೊರಕ್ಕೆ ತಲೆಯಾಡಿಸುತ್ತವೆ. ಬರಗಾಲ, ಬಿಸಿಲಿನ ಪ್ರಖರತೆ ಮಧ್ಯೆ ಬದುಕಿ ಬೆಳೆಯುವ ಸಸ್ಯಜಾಣ್ಮೆ ಇದು.


ನಮ್ಮ ಸೊಪ್ಪಿನ ಬೆಟ್ಟದಲ್ಲಿ ಸಸಿ ಬೆಳೆಸುವ ಕೆಲಸ ಅರಂಭಿಸಿ ಆರೆಂಟು ವರ್ಷಗಳಾಗಿವೆ. ನೆಟ್ಟ ಸಸಿಗಳಲ್ಲಿ ಹಲವು ನೆಲಕಚ್ಚಿವೆ, ಒಂದಿಷ್ಟು ಅತ್ತ ಸಾಯದೇ ಇತ್ತ ಬೆಳೆಯದೇ ಅಂತೂ  ಬದುಕಿವೆ. ಶಿವಣೆ, ಗೇರು, ಮುರುಗಲು ಹೀಗೆ ಕೆಲವು ಜಾತಿ ಕೊಂಚ ಮೇಲೆದ್ದು ನೆಡುವ  ಆಸಕ್ತಿ  ಉಳಿಸಿವೆ. ಎರಡು ಮೂರು ಅಡಿ ಆಳದ ಕುಳಿ ತೆಗೆದು ಸೊಪ್ಪು ಗೊಬ್ಬರ ಹಾಕಿ ಚೆನ್ನಾಗಿ ಬೆಳೆಯಲೆಂದು ನಾಟಿಮಾಡಿದವು ಬೇಸಿಗೆಯಲ್ಲಿ ಒಣಗಿದ್ದಾದರೂ ಹೇಗೆ? ಇಷ್ಟೆಲ್ಲ ಆರೈಕೆ ಮಾಡಿಯೂ ಮುನಿಸಿ ಮಡಿದಿದ್ದೇಕೆ? ಕಾಡಿನೊಳಗಡೆ ನೈಸರ್ಗಿಕವಾಗಿ ಒಂದಕ್ಕೊಂದು ಹೊಂದಿ ಮರ ಬೆಳೆಯುತ್ತದೆ, ಆದರೆ ಮರಗಳೆಡೆಯಲ್ಲಿ ಸ್ವತಃ ನಾವು ನೆಟ್ಟ ಸಸಿಗಳು ಏಕೆ ಚಿಗುರಿ ನಿಲ್ಲುತ್ತಿಲ್ಲ? ಸಸ್ಯ  ಭಾಷೆ  ತಟ್ಟನೆ ಅರ್ಥವಾಗಲಿಲ್ಲ.

ಶಾಲೆಯ ವನಮಹೋತ್ಸವದಲ್ಲಿ ಈ ವರ್ಷ ಗಿಡ ನೆಟ್ಟ ಸ್ಥಳದಲ್ಲಿ ಮತ್ತೆ ಮರುವರ್ಷ ಗಿಡ ನೆಡಬಹುದೆಂದು  ಕಲಿತಿದ್ದೆ!  ಕುಳಿ ತೆಗೆಸುವ ಕೆಲಸವಿಲ್ಲದೇ  ಸಸಿ ಸತ್ತ ಹಳೆಯ ಕುಳಿ ಕಿದಕಿ  ಸಸಿ ನೆಡುವ ಹೊಸ ತಯಾರಿ ಆರಂಭಿಸಿದೆ. “ಸಸಿ ನೆಟ್ಟರೆ ಮರವಾಗುತ್ತದೆಎಂದು ಉಪದೇಶ ಮಾಡುವವರನ್ನು ಒಮ್ಮೆ ಕರೆದು ಪ್ರಾತ್ಯಕ್ಷಿಕೆ ನಡೆಸುವಂತೆ ಅಲ್ಲಿನ ದೃಶ್ಯ. ಹಳೆಯ ಕುಳಿಯಲ್ಲಿದ್ದ ಫಲವತ್ತಾದ ಮಣ್ಣು, ಸತ್ವಾಂಶ ಲಪಟಾಯಿಸಲೆಂದು ಅಕ್ಕಪಕ್ಕದ ಕೌಲು, ಮತ್ತಿ, ಹುನಾಲು, ಬಸರಿ, ಹೊನ್ನೆ, ಇಪ್ಪೆ, ನೇರಲು ಹೀಗೆ ಹತ್ತಾರು ಜಾತಿ ಹೆಮ್ಮರಗಳ ಬಿಳಿ, ಕೆಂಪು, ಹಳದಿ, ಗುಲಾಬಿ ಹೀಗೆ ಬಣ್ಣ ಬಣ್ಣದ ಅಸಂಖ್ಯ ಎಳೆ ಬೇರುಗಳ ಜಾಲ ಅಸಡಾಬಸಡಾ ಮುಖ ತೂರಿದ್ದವು. ಹೆಚ್ಚು ಕಡಿಮೆ ಸಸಿ ಸತ್ತ  ಎಲ್ಲ ಕುಳಿಗಳಲ್ಲೂ  ಹತ್ತಿರದ ಮರದ ಅಡ್ಡಬೇರು ಅಸ್ತಿತ್ವ ಸಾಧಿಸಿದ್ದವು. ಈಗಾಗಲೇ ನೈಸರ್ಗಿಕವಾಗಿ ಬೆಳೆದಿರುವ ಗಿಡ ಮರಗಳ ಮಧ್ಯೆ ಮತ್ತೆ ಅರಣ್ಯೀಕರಣ ಮಾಡುವಾಗ ಎದುರಿಸಬಹುದಾದ ಭೂಗತ ಬೇರಿನ ವಿಚಿತ್ರ ಸಮಸ್ಯೆಯಿದು.

ಮೂಲ ಕೆದಕಿದರೆ ಇಡೀ ಸಮಸ್ಯೆಗೆ ಕಾರಣ ನಮ್ಮ ಬಳಿಯೇ ಇತ್ತು. ಸಸಿ ನೆಡಲೆಂದು ಬೇಸಿಗೆಯಲ್ಲಿ ಎರಡು ಮೂರು ಅಡಿ ಚೌಕದ ಕುಳಿ ತೆಗೆಯುತ್ತೇವೆ. ಕುಳಿ ತೆಗೆಯುವಾಗ ಅಕ್ಕಪಕ್ಕದ ಮರದ ಬೇರು ಭೂಗತದಲ್ಲಿ ಪ್ರತ್ಯಕ್ಷ, ಅಗೆತಕ್ಕೆ  ಅಡ್ಡಿಯಾಗುವ ಈ ಅಡ್ಡಬೇರು ಕತ್ತರಿಸಿ ಕುಳಿ ತೆಗೆಯುವ ಕೆಲಸ ಮುಗಿಯುತ್ತದೆ. ಮಳೆಗಾಲದಲ್ಲಿ ಪುನಃ ಮಣ್ಣುತುಂಬಿ ಸಸಿ ನೆಡುತ್ತೇವೆ, ಗೊಬ್ಬರ ಎರಚುತ್ತೇವೆ.  ಆದರೆ ನೆಟ್ಟ ಗಿಡಕ್ಕೆ ಬೆಳೆಯುವ ಉತ್ಸಾಹ ಕೆಲವು  ದಿನ  ಮಾತ್ರ. ಆರಂಭದಲ್ಲಿ  ಚಿಗುರಿ ಬೆಳವಣಿಗೆ ತೋರಿದ ಸಸ್ಯ ಕ್ರಮೇಣ ಬೆಳವಣಿಗೆ ಕುಂಠಿತ. ಕುಳಿ ತೆಗೆಯುವಾಗ ಕತ್ತರಿಸಿದ ಬೇರಿನ ತುದಿಯ ಹಳೆಯ  ಗಾಯ ನೆನಪಿಸಿಕೊಂಡ ಮರಗಳು ಇಮ್ಮಡಿ ಉತ್ಸಾಹದಲ್ಲಿ ಮಳೆಗಾಲದಲ್ಲಿ ನೂರಾರು ಬೇರಿನ ಜಾಲ ಬೆಳೆಸಿ ಬದುಕುವ ಪೈಪೋಟಿ ಆರಂಭಿಸುತ್ತವೆ. ಹೊಸ ಸಸಿ ಬುಡದ ಸತ್ವಾಂಶ ಕಬಳಿಸಲು ಜಗಳ ಅರಂಭ. ಬೇರು ಕತ್ತರಿಸಿದಕ್ಕೆ ಸಸಿಕುಳಿಯಲ್ಲಿ ಬೇರಿಳಿಸುವ ಸೇಡು. ಪಂದ್ಯದಲ್ಲಿ ಬಲಿಷ್ಠ ಉಳಿಯುತ್ತಾನೆಂಬ ನಿಸರ್ಗ ನಿಯಮ ಸಾಬೀತು!  ಮರ ಗಿಡಗಳಿಲ್ಲದ  ಬಯಲಲ್ಲಿ  ನೆಟ್ಟ ಮಾವು  ಅಕ್ಕಪಕ್ಕದ ಮರಗಳ ಬೇರಿನ ಪ್ರಹಾರದಿಂದ ಬಚಾವಾಗಿ ಬಿಸಿಲು ಮೆಂದು ಎರಡೇ ವರ್ಷಕ್ಕೆ ಫಲ ನೀಡಬಹುದು, ಮರಗಳ ಮಧ್ಯೆ ನೆಟ್ಟವು ೧೦-೨೦ ವರ್ಷ ಕಳೆದರೂ  ಪೈಪೋಟಿ   ಎದುರಿಸಲಾಗದೇ ಕೊರಗಿ ಕಮರುವದನ್ನು ಕಂಡಿದ್ದೇವೆ. ಬಹುಶಃ ಇಂತಹ ಪ್ರಮೇಯ ಗಮನಿಸಿಯೇ ೮೦ರ ದಶಕದ ಅರಣ್ಯೀಕರಣದಲ್ಲಿ ರಿಪ್ಪಿಂಗ್ ಯಂತ್ರ, ಜೆಸಿಬಿ ಬಳಸಿ ಕಾಡುಗುಡ್ಡ ಉಳುಮೆ ನಡೆಸಿ ನೈಸರ್ಗಿಕ ಗಿಡದ ಬೇರುಗಳನ್ನೂ ಕಿತ್ತೆಸೆದು ಅರಣ್ಯ ಇಲಾಖೆ ಹೊಸ ನೆಡುತೋಪು ಬೆಳೆಸುವ ಕೆಲಸ ನಡೆಸಿತ್ತು! ಹಳೆ ಬೇರು ಕಿತ್ತೆಸೆದ ಬಳಿಕವಷ್ಟೇ ಎಕಜಾತಿ ತೋಪು ಎದ್ದು ನಿಂತಿವೆ.

ಅರಣ್ಯೀಕರಣ ಮಾದರಿಯಲ್ಲಿ ಎಡೆ ಸಸಿ( ಗ್ಯಾಪ್ ಪ್ಯ್ಲಾಟಿಂಗ್) ನಾಟಿಯ ವಿಧಾನವಿದೆ. ತೇಗದ ನೆಡುತೋಪಿನ ನಡುವೆ ಖಾಲಿ ಜಾಗಗಳಲ್ಲಿ ಸಸಿ ಊರುವದು ಇವುಗಳಲ್ಲೊಂದು. ನೆಡುವದಷ್ಟೇ  ನಮ್ಮ ಕೆಲಸ ಎಂದು ಹಲವು ದಶಕಗಳಿಂದ ಮಾದರಿ ಅರಣ್ಯೀಕರಣ ನಡೆದಿದೆ. ನಾಟಿ ಮಾಡಿದ ೩೦ ವರ್ಷಕ್ಕೂ ಈ ಗಿಡಗಳು  ಗಿಡಗಳಾಗಿಯೇ ಉಳಿದು ಮರದ ನೆರಳಲ್ಲಿ ಜೀವ ಹಿಡಿದುಕೊಂಡಿರುತ್ತವೆ. ಅರಣ್ಯ ಇಲಾಖೆ ಯಾವತ್ತೂ ಈ ಮಾದರಿಯಲ್ಲಿ ಸಸಿ ನೆಡುವ ಪ್ರಯೋಜನದ ಬಗೆಗೆ  ಚಿಂತಿಸಿಲ್ಲ, ನೆಡುವ ಕೆಲಸ ಬಿಟ್ಟಿಲ್ಲ. ವರ್ಷದ ಅರಣ್ಯೀಕರಣ ಲೆಕ್ಕಕ್ಕೆ ಇಲ್ಲಿ ಲಕ್ಷಾಂತರ ಸಸಿಗಳು ಸೇರಬಹುದು, ಆದರೆ ಬೆಳೆಯುವದು ಸಾವಿರವೂ ಇಲ್ಲ.  ಪಾಪ! ದುರ್ಬಲ ಸಸಿಗಳನ್ನು ಹೆಮ್ಮರಗಳು ಸದಾ ಹಣೆಯುತ್ತವೆ, ಹಂಗಿಸುತ್ತವೆ, ಬೇರು ಬಿಟ್ಟು ಬಸವಳಿಸುತ್ತವೆ. ಹೊಸ ಸಸಿ ನೆಡುವ ಉಮೇದಿಯಲ್ಲಿ ನಿಂತವರು ಬೇರು ಹೇಳಿದ ಇಂತಹ ಪಾಠ ಆಲಿಸಬೇಕು. ಬೇರು ಕತ್ತರಿಸಿದರೆ ಪ್ರತಿಕ್ರಿಯಿಸುವ ಗಿಡ ಮರಗಳ ಸಂಧಿಯ ಫಲವತ್ತಾದ ಮಣ್ಣಿನಲ್ಲಿ ಬೀಜ ಬಿದ್ದಾಗ ಒಪ್ಪಿಕೊಳ್ಳುತ್ತವೆ, ತೆಪ್ಪಗಿರುತ್ತವೆ. ಅಕ್ಕಪಕ್ಕದ ಮರಗಳಿಗೆ ಸುಳಿವು ಸಿಗದಂತೆ ಮೊಳೆತು ತಾಯಿಬೇರಿಳಿಸಿ ಮರದ ಜತೆ ಹೊಸ ಗಿಡ ಚಿಗಿತು ಪೈಪೋಟಿ ನಡೆಸುತ್ತದೆ. ಮರಗಳ ಜತೆ ಗಿಡ ಸೇರಿ ಕಾಡು ಕೂಡುತ್ತದೆ. ಕಾಡನ್ನು ಅದರ ಪಾಡಿಗೆ ಬಿಟ್ಟಾಗ ಇದೆಲ್ಲ ಘಟಿಸುತ್ತದೆ. ಮನುಷ್ಯ ಹೋಗಿ ಗಿಡ ನೆಡಲು ಗುಂಡಿ ತೆಗೆದಾಗ ಸಮಸ್ಯೆ ಶುರುವಾಗುತ್ತದೆ. ಮಣ್ಣು ಸಸಿಗಿಂತ ಬೀಜಗಳನ್ನು ಹೆಚ್ಚು ಪ್ರೀತಿಸಿದಂತೆ  ಕಾಣುತ್ತದೆ. ಅದಿಲ್ಲದಾಗ (ಬೀ)ಜಗಳ ಆರಂಭವಾಗುತ್ತದೆ.

ಎಲ್ಲೆಡೆಯೂ ಬೇರಿನ ತಾಕತ್ತು  ಬದುಕು ಬೆಳವಣಿಗೆಯ ಬೆಂಬಲವಾಗಿದೆ. ತಾಯಿ ಬೇರು ನೀರಿನ ಆಸರೆ ಹುಡುಕಿ ಭೂಗತಕ್ಕೆ ಇಳಿಯುವದಂತೂ ಸೋಜಿಗ. ಮಧ್ಯಪ್ರದೇಶ, ಉತ್ತರ ಪ್ರದೇಶಗಳಲ್ಲಿ ಪ್ರಸಿದ್ಧ ಸಾಲ್ ಮರದ  ಎರಡು ವರ್ಷದ ಎಳೆ ಸಸಿಗಳು ಮೂರೂವರೆ ಮೀಟರ್ ಆಳಕ್ಕೆ ಬೇರಿಳಿಸುತ್ತವೆ. ಕಾಡು ತಾಳೆಯ ಪುಟ್ಟ ನೆಡುತೋಪು ಮಾಡೋಣವೆಂದು ಇತ್ತೀಚೆಗೆ ಸಸಿ ಕೀಳಲು ಕಾಡಿಗೆ ಹೋಗಿದ್ದೆ. ಭೂಮಿಯ ಮೇಲೆ ಎರಡು ಇಂಚು ಬೆಳೆದ ಎಳೆ ಸಸಿಯ ಬೇರುಗಳು ಬರೋಬ್ಬರಿ ಒಂದೂವರೆ ಅಡಿ ಆಳಕ್ಕೆ ಇಳಿದಿದ್ದವು! ತೆರೆದ ಬಾವಿಗೆ ನೀರಿಂಗಿಸಲು  ಸಲಹೆ ನೀಡಲೆಂದು ಶಿರಸಿಯ ಶಿವಳ್ಳಿ ಎಂಬ ಹಳ್ಳಿಗೆ ಹೋದಾಗ ಬಾವಿಯ ತುಂಬ ಬೇರಿನ ಜಾಲ ಅಚ್ಚರಿ ಹುಟ್ಟಿಸಿತ್ತು. ಮರದ ಈ ಬೇರುಗಳ  ಮೂಲ ಬಸರಿ ಜಾತಿಯ ಹೆಮ್ಮರ, ಅದು ೨೫೦ ಮೀಟರ್ ದೂರದಲ್ಲಿತ್ತು, ಬಾವಿ ನೀರು ಕುಡಿಯಲೆಂದು ಅಷ್ಟುದೂರ ಭೂಗತ ಯಾನ ನಡೆಸಿತ್ತು !

ಜಮಖಂಡಿ, ಬೀಳಗಿ, ರಾಮದುರ್ಗ, ಸವದತ್ತಿ ಪ್ರದೇಶದ ಕಾಡುಗುಡ್ಡ ಅಲೆಯುವಾಗ ರೈತರು  ಬೇರಿನ ಬಗೆಗೆ   ಮಾತಾಡುತ್ತಿದ್ದರು. ಕಲ್ಲುಗುಡ್ಡದಲ್ಲಿ ಬೆಳೆಯುವ  ಇಲ್ಲಿನ ನೈಸರ್ಗಿಕ ಸಸಿಗಳು ಕಾಂಡ ಬೆಳೆಸುವದಕ್ಕಿಂತ ಹೆಚ್ಚಿನ ಕಾಳಜಿ ಬೇರು ಬೆಳೆಸಲು ನೀಡುತ್ತವೆ! ಆಳಕ್ಕೆ ಬೇರಿಳಿಸಿ ಸದೃಢ ಬೇರು ಹೊಂದಿದ ತರುವಾಯದಲ್ಲಿ  ಭೂಗತದಿಂದ ಹೊರಕ್ಕೆ ತಲೆಯಾಡಿಸುತ್ತವೆ. ಬರಗಾಲ, ಬಿಸಿಲಿನ ಪ್ರಖರತೆ ಮಧ್ಯೆ ಬದುಕಿ ಬೆಳೆಯುವ ಸಸ್ಯಜಾಣ್ಮೆ ಇದು. ನಮ್ಮ  ಕಾಡುಗಳಲ್ಲಿನ ಕಲ್ಲು ಅಶ್ವತ್ಥ, ಕಲ್ಲತ್ತಿ, ಕುರುಡು ನಂದಿಯಂತಹ ಗಿಡಗಳು ಯಾವತ್ತೂ  ಬೇರಿಳಿಸಿ ಬೆಳೆಯಲು ಹಿಡಿಮಣ್ಣು ಇಲ್ಲದ ಕಲ್ಲುಗುಡ್ಡ ಪ್ರೀತಿಸಿ ಸಸ್ಯ ವಿಸ್ಮಯ ಪ್ರದರ್ಶಿಸುತ್ತವೆ. ಪಶ್ಚಿಮಘಟ್ಟದ ಕಾಡಿನ ಕಲ್ಲುಬಾಳೆಯಂತೂ ವರ್ಷದಲ್ಲಿ ನಾಲ್ಕು ತಿಂಗಳು ಮಳೆ ಸುರಿಯುತ್ತದೆಂಬ ಆಸೆ ಬಗಲಲ್ಲಿಟ್ಟುಕೊಂಡು ಕಲ್ಲುಬಂಡೆಯಲ್ಲಿ ಜೀವನ ಸಾಗಿಸುತ್ತದೆ, ಬಿಸಿಲಿನ ಕಾವುಸಹಿಸಿ ಬೇರು ಬದುಕಿಸುತ್ತದೆ. ಕರಾವಳಿಯ ಕೆಂಪುಕಲ್ಲಿನ ಹಾಸಿನಲ್ಲಿ ಒಂದು ಬುಟ್ಟಿ ಮಣ್ಣುಹಾಕಿ ಕೃಷಿಕರು ಬಾಳೆ ಬೆಳೆಸುತ್ತಾರೆ.  ಇವರು  ಬಾಳೆ ಬೇರು ಕಲ್ಲು ಕರಗಿಸುತ್ತದೆಎಂದು ಹೇಳುವದು  ಕೇಳಿದ್ದೇನೆ. ಎರಡು ಮೂರು ವರ್ಷ ಬಾಳೆ ಕೃಷಿ ಮಾಡಿದರೆ ಕಲ್ಲುಮಣ್ಣು ಮಿದುವಾಗಿ ಅಡಿಕೆ ಕೃಷಿಗೆ ಯೋಗ್ಯವಾಗಿ ಮಾರ್ಪಡುತ್ತದಂತೆ! ಬಾಳೆ ಬೇರಿಗೆ ಕಲ್ಲು ಕರಗಿಸುವ ಶಕ್ತಿ ಇದೆಯೇ? ತಿಳಿದವರು ಹೇಳಬಹುದು. ಬೇರಿನ ಕತೆಗಳೇ  ಹಾಗೇ ಅಲ್ಲಿ ಕಲ್ಲು ಕರಗುವ ಸಮಯವಿದೆ, ಭೂಗತದ ವ್ಯಥೆಗಳಿವೆ. ಮರ, ಸಸಿ ನೋಡಿದಾಗ ನಮಗೆ ಬೇರು ನೆನಪಾಗಬೇಕು. ಮಳೆ ಆರ್ಭಟಕ್ಕೆ ಬಿರುಗಾಳಿಗೆ ಕಿತ್ತು ಬಿದ್ದ ಮರದಲ್ಲಿ ಕಣ್ಣರಳಿಸಿ ಬೇರು ನೋಡಿದರೆ ಅಲ್ಲಿ ಪಾಠಗಳಿವೆ, ಕಾಡು ಬೇರಿನ ಪೈಪೋಟಿ, ಜಗಳ, ಒಳಜಗಳದ  ಭೂಗತ ಮುಖಗಳಿವೆ.