ಹತ್ತು ವರ್ಷ ಹಿಂದೆ ಉತ್ತರ ಕನ್ನಡದ ಜೊಯಿಡಾ ತಾಲೂಕಿನ ಡೇರಿಯೇ ಹಳ್ಳಿಗೆ ಹೋಗಿದ್ದೆ. ಅಲ್ಲಿನ ಮನೆಯ ಯಜಮಾನ ಗಣಬಾ ಗಾವಡೆಯಲ್ಲಿ ಕುಟುಂಬದ ಸದಸ್ಯರ ಹೆಸರು ಹೇಳಲು ವಿನಂತಿಸಿದೆ. ಆತ ತಡಬಡಿಸಿದ…. ಏಕೆಂದರೆ ೧೧೪ ಜನರ ಮಹಾ ಕುಟುಂಬ ಅದು! ಇವರ ಮನೆಯ ಮಕ್ಕಳಿಗಾಗಿಯೇ ಅಲ್ಲಿ ಒಂದು ಕಿರಿಯ ಪ್ರಾಥಮಿಕ ಶಾಲೆ, ಅಂಗನವಾಡಿಗಳಿದ್ದವು. ೫೦ ಎಕರೆ ಭತ್ತದ ಗದ್ದೆ, ವರ್ಷಕ್ಕೆ ಮನೆ ಮಂದಿಯ  ಊಟಕ್ಕೆ ೩೫೦ ಕ್ವಿಂಟಾಲ್ ಅಕ್ಕಿ ಬೇಕು. ಮನೆಗೆ ಬಟ್ಟೆ ತರಬೇಕೆಂದರೆ ಯಜಮಾನ ಒಂದೇ ಬಣ್ಣದ ನೂರಾರು ಮೀಟರ್ ಬಟ್ಟೆ ತರುತ್ತಿದ್ದರು. ಎಲ್ಲರಿಗೂ ಸಮಾನ ಗುಣಮಟ್ಟದ ವಸ್ತ್ರ ನೀಡುತ್ತ ಎಲ್ಲರನ್ನೂ ಒಂದೇ ದೃಷ್ಟಿಯಿಂದ ಕಾಣುತ್ತಿದ್ದರು!  ಇವರ ಮನೆ ಮಂದಿ ಎಲ್ಲಾದರೂ ಮಧುವೆ ಮನೆಗೆ ಹೋದರೆ ಡೇರಿಯೇ ಕುಟುಂಬದವರು ಯಾರು? ಎಂಬುದನ್ನು ವಸ್ತ್ರದ ಬಣ್ಣ ನೋಡಿ ಸುಲಭದಲ್ಲಿ ಗುರುತಿಸಬಹುದಿತ್ತು.

ರಾಯಚೂರಿನ ಹಳ್ಳಿ ಅಡ್ಡಾಡುತ್ತಿದ್ದೆ. ಜತೆಗಿದ್ದ ಗೌಡರ ಮಗ ದುಃಖ ಹೇಳಿಕೊಳ್ಳುತ್ತಿದ್ದರು. ‘ಮನೆತನಾ ಅಂದ್ರ…..ಸೀಮೆಗೆ ಹೆಸರಾಗಿತ್ರಿ, ಊರಾನ ಮಂದಿ ನ್ಯಾಯ ಕೇಳಾಕ  ಬರ್ತಿದ್ರು, ನಮ್ಮ ಮನೆ ಯಜಮಾನ ಊರಿಗೆ ಯಜಮಾನ ಆಗಿದ್ದ, ಅಂವ ಹೇಳಿದ್ ಮಾತು ಮೀರಿ ಯಾರೂ ಹೆಜ್ಜೆ ಹಾಕ್ತಿರಲಿಲ್ಲ, ಏನಾದ್ರು ತೀರ್ಮಾನ ಆಗೋವಾಗ ‘ಗೌಡ್ರು…. ಏನಂತಾರ?’ ಅನ್ನೋದಕ್ಕ ಮಹತ್ವ ಇತ್ತು….. ಈಗ ಊರಿಗೆ ತಲೆ ಬಗ್ಗಿಸಿ ನಡೀಬೇಕಾಗದ’ ಎಂದರು. ಮಾತು ಕೇಳಿದರೆ ಏನೋ ದೊಡ್ಡ ಅನಾಹುತವಾಗಿದೆ ಎಂದು ಊಹಿಸಿದೆ. ವಿಷಯ ಕೆದಕಿದೆ. ೪೫ ಜನರ ದೊಡ್ಡ ಕುಟುಂಬ, ನೂರಾರು ಎಕರೆ ಹೊಲ, ನ್ಯಾಯ ತೀರ್ಮಾನಗಳಲ್ಲಿ ಮಹತ್ವದ ಪಾತ್ರ ವಹಿಸುತ್ತಿದ್ದ ಈ ಸಂಸಾರದಲ್ಲಿ ಮನೆ ಮಂದಿಗೆ ಕೂಡಿ ಬಾಳಲಾಗದೇ ಇತ್ತೀಚಿನ ವರ್ಷಗಳಲ್ಲಿ ‘ಹಿಸ್ಸೆ’ ಆಗಿದ್ದರು. ವಿಶಾಲ ಮನೆ ಒಡೆದು, ನಾಲ್ಕಾರು ಭಾಗವಾದವು. ಗೌಡರನ್ನು ನಂಬಿ ನಡೆಯುತ್ತಿದ್ದ ಊರು ಒಡೆದ ಮನೆಯನ್ನು ನ್ಯಾಯ ತಕ್ಕಡಿಯಲ್ಲಿ ತೂಗತೊಡಗಿತು. ಊರಿನ ಮಂದಿಯೆದುರು ಮಾತಾಡುವಾಗ ಇದ್ದ ಧೈರ್ಯ, ನ್ಯಾಯ ದೃಷ್ಟಿ, ಸಂಘಟನಾ ಶಕ್ತಿಗಳು ಇದ್ದಕ್ಕಿದ್ದಂತೆ ಊನವಾದವು.

‘ಊರು ಆಳೋ ಗೌಡ…. ಈಗ ಮನೆ ಒಡೆದಾನ’ ಎಂಬುದು ಬೀದಿಯ ಮಾಮೂಲಿ ಮಾತಾಯಿತು. ಕೂಡಿ ಬಾಳಿದರೆ ಸುಖಾ ಇದೆ, ಶಕ್ತಿ ಇದೆ ಎಂದು ಅರಿತವರಿಗೆ ಮನೆ ಒಡೆದ ಬಳಿಕ ಮನದ ಸ್ಥೈರ್ಯವೂ ಅಡಗಿತು. ಊರಿಗೆ ಊರೇ ಕೊಂಡಾಡುವಂತೆ ಇದ್ದವರಿಗೆ ಆಡುವ ಬಾಯಿಗೆ ಬೀಳುವಂತಾಯಿತು. ಸೀಮೆಯನ್ನು ಸಂಘಟನಾ ಶಕ್ತಿಯಲ್ಲಿ ಕೂಡಿಸಿದ ಮನಸ್ಸು ಈ ಸೋಲಿಗೆ ಕೊರಗತೊಡಗಿತು. ನೋವು ರಾಯಚೂರಿನ ಒಂದು ಕುಟುಂಬದ್ದಲ್ಲ, ನಮ್ಮ ಬಹುತೇಕ ಹಳ್ಳಿಗಳಲ್ಲಿ ಕಂಡುಬರುವ ಸಂಗತಿಗಳಿವು. ಗೌಡರು, ಪಟೇಲರು, ದೊಡ್ಡಮನೆಗಳೆಲ್ಲವೂ ಕಳೆದ ಮೂರು ದಶಕಗಳ ಈಚೆಗೆ ಬದಲಾಗಿವೆ.

ಈಗ ಹತ್ತು ವರ್ಷಗಳ ಹಿಂದೆ ಉತ್ತರ ಕನ್ನಡದ ಜೊಯಿಡಾ ತಾಲೂಕಿನ ಕುಣಬಿ ಜನಾಂಗದ ಡೇರಿಯೇ ಹಳ್ಳಿಗೆ ಹೋಗಿದ್ದೆ. ಅಲ್ಲಿನ ಮನೆಯ ಯಜಮಾನ ಗಣಬಾ ಗಾವಡೆಯಲ್ಲಿ ಕುಟುಂಬದ ಸದಸ್ಯರ ಹೆಸರು ಹೇಳಲು ವಿನಂತಿಸಿದೆ. ಆತ ತಡಬಡಿಸಿದ….. ಏಕೆಂದರೆ ೧೧೪ ಜನರ ಮಹಾ ಕುಟುಂಬ ಅದು! ಇವರ ಮನೆಯ ಮಕ್ಕಳಿಗಾಗಿಯೇ ಅಲ್ಲಿ ಒಂದು ಕಿರಿಯ ಪ್ರಾಥಮಿಕ ಶಾಲೆ, ಅಂಗನವಾಡಿಗಳಿದ್ದವು. ೫೦ ಎಕರೆ ಭತ್ತದ ಗದ್ದೆ, ವರ್ಷಕ್ಕೆ ಮನೆ ಮಂದಿಯ ಊಟಕ್ಕೆ ೩೫೦ ಕ್ವಿಂಟಾಲ್ ಅಕ್ಕಿ ಬೇಕು. ಕುಟುಂಬದ ಯಜಮಾನ ಎಲ್ಲರನ್ನು ಪ್ರೀತಿಯಿಂದ ನಡೆಸಿಕೊಂಡು ಹಿರಿಯಜ್ಜನ ಹಿಡಿತದಲ್ಲಿ ಸಂಸಾರ ಬೆಳೆದಿತ್ತು. ಮನೆ ಮಂದಿಗೆ ಬಟ್ಟೆ ತರಬೇಕೆಂದರೆ ಯಜಮಾನ ಒಂದೇ ಬಣ್ಣದ ನೂರಾರು ಮೀಟರ್ ಬಟ್ಟೆ ತರುತ್ತಿದ್ದರು. ಎಲ್ಲರಿಗೂ ಸಮಾನ ಗುಣಮಟ್ಟದ ವಸ್ತ್ರ ನೀಡುತ್ತ ಎಲ್ಲರನ್ನೂ ಒಂದೇ ದೃಷ್ಟಿಯಿಂದ ಕಾಣುತ್ತಿದ್ದರು. ಮನೆ ಮಂದಿ ಎಲ್ಲಾದರೂ ಮದುವೆ ಮನೆಗೆ ಹೋದರೆ ಡೇರಿಯೇ ಕುಟುಂಬದವರು ಯಾರು? ಎಂಬುದನ್ನು ವಸ್ತ್ರದ ಬಣ್ಣ ನೋಡಿ ನಾವು ಸುಲಭದಲ್ಲಿ ಗುರುತಿಸಬಹುದಿತ್ತು. ‘ಒಂದು ಸೂರು ಮಂದಿ ನೂರು’ ಎಂದು ಕೃಷಿ ಕೆಲಸ, ಕೂಲಿಯಲ್ಲಿ ಜೀವನ ನಡೆಸಿದ ಮನೆತನದಲ್ಲಿ ಶೈಕ್ಷಣಿಕ ಬದಲಾವಣೆಗಳಾದವು. ಪೇಟೆ ಪ್ರಪಂಚ ಅರ್ಥವಾಗತೊಡಗಿತು. ಮಕ್ಕಳು ಓದಿ ಬೆಳೆದಂತೆ ಅವರ ಮನಃ ಪರಿವರ್ತನೆಗಳಾದವು. ಉಡುಗೆ, ಊಟದ ಆಸಕ್ತಿ ಬದಲಾಯಿತು, ಕನಸುಗಳು ಬೆಳೆದವು. ನೂರಾರು ಮೀಟರ್ ಒಂದೇ ಬಣ್ಣದ ಬಟ್ಟೆ ತರುತ್ತಿದ್ದ ಯಜಮಾನ ಈಗ ಅದರ ಬದಲು ಹಣ ನೀಡ ತೊಡಗಿದರು. ಬಟ್ಟೆ ಬದಲಾಯಿತು, ಮನಸ್ಸು ಕ್ರಮೇಣ ಬದಲಾಗ ತೊಡಗಿತು. ಪಾರಿವಾಳದ ಸಂಸಾರದಂತೆ ಕೂಡಿ ಬಾಳಿದ ಕುಟುಂಬ ಈಗ ಒಡೆದಿದೆ.

‘ಚಿಕ್ಕ ಕುಟುಂಬ ಚೊಕ್ಕ ಕುಟುಂಬ’ ಜಾಹೀರಾತು ನಮ್ಮ ಅವಿಭಕ್ತ ಕುಟುಂಬದ ಮನಸ್ಸನ್ನು ಅತಿಯಾಗಿ ಕಾಡಿವೆ. ನೂರಾರು ಜನ ಕೂಡಿ ಬಾಳಬೇಕೆಂಬ ಕಾರಣಕ್ಕೆ ಎದೆಯ ಕನಸುಗಳನ್ನು ಹತ್ತಿಕ್ಕಬೇಕು, ತಲೆಬಗ್ಗಿಸಿ ನಡೆಯಬೇಕು, ಒಳ್ಳೆಯ ಶಿಕ್ಷಣ ಪಡೆಯುವ ಆಸೆಯಿದ್ದರೆ ತಂದೆತಾಯಿ ಅಷ್ಟೇ ಅಲ್ಲ ಇಡೀ ಮನೆ ಮಂದಿಯ ಪ್ರೋತ್ಸಾಹ ಬೇಕು! ಬದುಕಿಗೆ ಮಿತಿಯ ಬೇಲಿ ಹಾಕಬೇಕು, ಇದು ಇವತ್ತಿನ ವ್ಯವಸ್ಥೆಯಲ್ಲಿ ಅಸಾಧ್ಯದ ಮಾತು. ಇಂದು ಸರಕಾರದ ಪಡಿತರ ಚೀಟಿ, ಮನೆ, ಸಬ್ಸಿಡಿ, ಸಾಲ ಹೀಗೆ ಇನ್ನಿತರ ಸೌಲಭ್ಯ ಪಡೆಯಲು ಚಿಕ್ಕ ಕುಟುಂಬಗಳು ಅನುಕೂಲ. ಇಡೀ ಭೂಮಿಯೆಲ್ಲ ಯಜಮಾನನ ಹೆಸರಿರುವಲ್ಲಿ ನೂರಾರು ಜನರಿದ್ದಾರೆ, ಬಡತನವಿದೆ ಎನ್ನುವದಕ್ಕಿಂತ ಇವರಿಗೆ ೫೦ ಎಕರೆ ಜಮೀನಿದೆ ಎಂಬುದು ಮುಖ್ಯವಾಗುತ್ತದೆ. ಕುಟುಂಬದ ಸದಸ್ಯರೆಲ್ಲ ಒಂದೇ ಮನೆಯಲ್ಲಿ ವಾಸವಾಗಿರುವ ದಾಖಲೆಯಿರುವಾಗ ಸರಕಾರದ ಮನೆ ನಿರ್ಮಾಣ ಸೌಲಭ್ಯಗಳು ಸಿಗುವದಿಲ್ಲ. ಹೀಗಾಗಿ ಕೂಡಿ ಬಾಳಿದರೆ ಸಿಗುವ ಸುಖಕ್ಕಿಂತ ಮನೆ ಒಡೆಯುವಲ್ಲಿಯೇ ಎಲ್ಲರ ಲಾಭ!. ಇದರ ಪರಿಣಾಮ ಕಾಲದ ಅವಿಭಕ್ತ ಕುಟುಂಬಗಳು ಛಿದ್ರ  ಛಿದ್ರವಾಗಿವೆ. ಮನೆಯ ಜತೆಗೆ ಮನಸ್ಸು ಒಡೆದಿವೆ.

ದಿನವಿಡೀ ಕೃಷಿ ಕೆಲಸದಲ್ಲಿ ತಲ್ಲೀನವಾದ ಗ್ರಾಮೀಣ ಜೀವನದಲ್ಲಿ ಸಹಬಾಳ್ವೆ ಅನಿವಾರ್ಯ ಆಯ್ಕೆ. ಈಗ ಅಧಿಕ  ಸಂಪಾದನೆ, ನಗರ ನೌಕರಿಯ ಸಹಜ ಆಸೆಯಲ್ಲಿ ಮನಸ್ಸು ಓಡಿದೆ. ಒಂದು ಕಾಲಕ್ಕೆ ೪೦-೫೦ ಜನ ಒಂದಾಗಿ ಬಾಳುವದು ಸಾಮಾನ್ಯವಾದ ನೆಲೆಯಲ್ಲಿ ಇವತ್ತು ಕೂಡು ಕುಟುಂಬಗಳನ್ನು ಅಚ್ಚರಿಯಿಂದ ನೋಡುವಂತಾಗಿದೆ. ಯಜಮಾನರ ಪ್ರಾಮಾಣಿಕತೆ, ಎಲ್ಲರನ್ನು ಕೂಡಿಸಿ ಮುನ್ನಡೆಸುವ ಸಂಯಮ ಶಕ್ತಿ ಉಳಿದಿರುವಲ್ಲಿ ಇಂತಹ ಕುಟುಂಬ ನೋಡಬಹುದು. ‘ಇವತ್ತು ಕೂಡು ಕುಟುಂಬ ನಡೆಸುವದೆಂದರೆ ಒಂದರ್ಥದಲ್ಲಿ ಸಮ್ಮಿಶ್ರ ಸರಕಾರ ನಡೆಸಿದಂತೆ…..! ಯಾವಾಗ ಯಾರು ಬೇಕಾದರೂ ಬೆಂಬಲ ವ್ಹಾಪಸ್ ಪಡೆಯಬಹುದು’ ವನವಾಸಿ ಜನಾಂಗದ ಅವಿಭಕ್ತ ಕುಟುಂಬದ ಯಜಮಾನರೊಬ್ಬರು ಹೇಳಿದ ಮಾತು ಮಾರ್ಮಿಕವಾಗಿದೆ. ಹತ್ತಾರು ದಿಕ್ಕು, ವಿವಿಧ ಸಂಸ್ಕಾರ ಮೂಲದಿಂದ ಹೆಣ್ಣನ್ನು ಮನೆ ತುಂಬಿಸಿಕೊಳ್ಳುತ್ತಾರೆ. ಎಲ್ಲರೂ ಕೂಡಿ ಬಾಳುವ ಆಸೆಯಿದ್ದಾಗ ಸಂಸಾರ ಸರಾಗ. ಅನುಮಾನ, ಅಪನಂಬಿಕೆ ಬೆಳೆದಂತೆ ಮನಸ್ಸು ಹಾಳಾಗಲು ಆರಂಭವಾಗುತ್ತದೆ. ಹಿಂದೆ ಮನೆಯ ಯಜಮಾನರ ಹಿಡಿತ  ಮನೆಮಂದಿಯನ್ನು ಒಂದಾಗಿ ಹಿಡಿದಿತ್ತು. ಯಾರೂ ಎದುರು ನಿಂತು ಪ್ರಶ್ನಿಸುವ ಪ್ರಮೇಯವಿರಲಿಲ್ಲ. ಆದರೆ ಇವತ್ತು ಸ್ವಂತ ಮಕ್ಕಳೇ ತಂದೆ ತಾಯಿಯ ಜತೆ ಕೂಡಿ ಬಾಳದಷ್ಟು ವ್ಯವಸ್ಥೆ ಸಿನಿಕವಾಗಿದೆ. ಸಹಬಾಳ್ವೆಯ ಚಿತ್ರಗಳು ಸುಳ್ಳೇ ಸುಳ್ಳು ಎನ್ನುವಂತೆ ನೆಲ ಅಣಕಿಸುತ್ತಿದೆ. ಇಂದು ನೂರಾರು ಜನ ಒಟ್ಟಿಗೆ ಬಾಳಿದರೆ ಮುಂದೆ ನಿರ್ವಹಣೆ ಕಷ್ಟವಾಗಬಹುದೆಂದು ಕೆಲವರು ದೂರ ದೂರ ಜಮೀನು ಖರೀದಿಸಿ, ಮಕ್ಕಳಿಗೆ ಶಿಕ್ಷಣ, ನೌಕರಿ ಒದಗಿಸಿ ಎಲ್ಲರೂ ಅವರವರ ದುಡಿಮೆಯಲ್ಲಿ ಸುಖ ಕಾಣುವ ಸೂತ್ರ ಹುಡುಕಿದ್ದಾರೆ. ಭೂಮಿ, ಮನಸ್ಸು ಒಡೆಯುವದಕ್ಕಿಂತ ಹೀಗಾದರೂ ಕೂಡಿರುವದು ಕ್ಷೇಮ ಎಂಬ ತಿಳುವಳಿಕೆಯಿದೆ.

ಅಪರೂಪದ ಅವಿಭಕ್ತ ಕುಟುಂಬ ನೋಡಿದಾಗ ಅವರ ಮನೆಗೆ ವರ್ಷಕ್ಕೆ ೩೦೦ ಕ್ವಿಂಟಾಲ್ ಅಕ್ಕಿ ಬೇಕು, ೧೦೦ ಡಬ್ಬಿ ಬೆಲ್ಲ ಬೇಕು, ೨-೩ ಕ್ವಿಂಟಾಲ್ ಬೇಳೆಕಾಳು ಬೇಕು ಎಂದು ಮನೆ ಮಂದಿ ಲೆಕ್ಕ ಹಾಕಿ ಆಹಾರ ಬಳಕೆ ಅಂದಾಜಿಸುತ್ತೇವೆ. ನಮ್ಮ ಮನಸ್ಸು ವಸ್ತು, ಹಣಗಳನ್ನು ಅಳೆಯಲು ಪಳಗಿದೆ. ಆದರೆ ಇಷ್ಟೆಲ್ಲ ಜನರನ್ನು ಕೂಡಿಸಿ ಮುನ್ನಡೆಸಲು ಅಡುಗೆ ಮನೆಯಲ್ಲಿ ಮಹಿಳೆ ಎಷ್ಟು ಶ್ರಮ ಪಡುತ್ತಾಳೆ, ಮಕ್ಕಳು ಎಂತಹ ತ್ಯಾಗ ಮಾಡುತ್ತಾರೆ, ವಿವಿಧ ಮನಸ್ಥಿತಿಯ ಮಂದಿಯನ್ನು ಒಟ್ಟಿಗೆ ಜೋಡಿಸಿ ನೌಕೆ ನಡೆಸಲು ಯಜಮಾನ ಎಂತಹ ಮುತ್ಸದ್ದಿಯಾಗಬೇಕು ಎಂಬುದನ್ನು ಮರೆಯುತ್ತೇವೆ. ಕೂಡಿ ಬಾಳುವ ಪರಂಪರೆಯ ಕುಟುಂಬ ಶಕ್ತಿ, ಸಂಸ್ಕಾರಗಳನ್ನು ಇವತ್ತು ಸಮಾಜ ಕಳಕೊಂಡಿದೆ.