ಶೈಕ್ಷಣಿಕ ಪ್ರಗತಿ ಏರುತ್ತಿರುವಂತೆ ಕೃಷಿಯೇತರ ಕ್ಷೇತ್ರಗಳೆಡೆಗೆ ನಗರ ವಲಸೆ ಹೆಚ್ಚಿದೆ. ಮಾಹಿತಿ ತಂತ್ರಜ್ಞಾನ ಕ್ರಾಂತಿ ಬಳಿಕವಂತೂ  ಗ್ರಾಮೀಣ ಯುವಪಡೆ ಸಾಫ್ಟವೇರ್ ಹಿಂದೆ ಓಡತೊಡಗಿತು. ಒಂದು ಎಕರೆ ಕೃಷಿಯಲ್ಲಿ ವರ್ಷಕ್ಕೆ ನಿವ್ವಳ ೫೦ ಸಾವಿರ ಉಳಿಯದಿದ್ದಾಗ ಮಾಸಿಕ ೪೫-೫೦ಸಾವಿರ ಏಣಿಸುವ ಕಂಪ್ಯೂಟರ್ ಮಕ್ಕಳು ಪರಂಪರೆ ಕೃಷಿಯನ್ನು ತೂಕಕ್ಕೆ ಒಡ್ಡಿದರು! ಒಟ್ಟೂ ಆದಾಯ, ಖರ್ಚಿನ ತುಲನೆಯಲ್ಲಿ ಬೇಸಾಯ ಬಡವಾಯಿತು. ಮುಗ್ದತೆ, ಪರಿಶ್ರಮ, ಸಹಬಾಳ್ವೆ ನೋಟ ಕ್ಷೀಣಿಸಿದವು, ಗೆಲ್ಲುವ ಜಿದ್ದಿನಲ್ಲಿ ಜಗಳ ಹುಟ್ಟಿದವು. ಗಿಡ ಗೆಳೆತನದಲ್ಲಿ ನೆಮ್ಮದಿ ಕಂಡವರು ಒತ್ತಡಗಳಲ್ಲಿ ನರಳಿದರು, ನೆಲ ಮರೆತು ಗಡಿಬಿಡಿಯ ವೇಗಕ್ಕೆ ಹೆದ್ದಾರಿಗೆ ಏರಿದರು. ಬದುಕು ಕಟ್ಟುವ ಅವಕಾಶಗಳಿದ್ದರೂ ನೆಲ ನಂಬಿ ನಡೆಯುವ ವಿಶ್ವಾಸ, ಉತ್ಸಾಹ ಕುಸಿಯಿತು. ಉಣ್ಣುವ ಅನ್ನದ ಮೂಲ ಅರ್ಥವಾಗದಂತೆ ಮಕ್ಕಳನ್ನು ಬೆಳೆಸುವ ಪರಿಪಾಟ ಬೆಳೆಯಿತು. ಶಾಲೆಯ ಪಾಠಗಳಲ್ಲಿ ಮಣ್ಣಿನಲ್ಲಿ ಬೇರಿಳಿಸಿ ಬದುಕಿನ ದಾರಿ ತೋರಿಸಿದ ಕೃಷಿಕರಿಗಿಂತ ರಾಜಕೀಯ ಮುತ್ಸದ್ಧಿಗಳ ಜೀವನ ಓದುವದು ಪರೀಕ್ಷೆಯಾಯಿತು. ಸಮವಸ್ತ್ರ ಧರಿಸಿ, ಟೈ ಕಟ್ಟಿಸಿ ಮಕ್ಕಳನ್ನು ಶಾಲೆಗೆ ಹೊರಡಿಸಿ ಹಳ್ಳಿ ಬದುಕು ಧಿಕ್ಕರಿಸಲು ಹೇಳಿದೆವು. ಇದ್ದೊಬ್ಬ ಮಗನನ್ನು ನಗರ ನೌಕರಿಗೆ ಕಳಿಸಿದವರು ‘ಕೃಷಿ ನಿರ್ವಹಿಸಲೂ ಜನಗಳಿಲ್ಲ’ ಎಂದು ಸಬೂಬು ಹೇಳುತ್ತ ಕಾಲಹರಣ ಮಾಡಿದರು.

ಕಂಪ್ಯೂಟರ್ ಊಟಕ್ಕೆ ನೆರವಾಗಬಹುದೇ ಹೊರತು ಅದು ಯಾವತ್ತೂ  ಉಣ್ಣುವ ಅನ್ನವಾಗುವದಿಲ್ಲ!  ಆದರೆ ನಮ್ಮ ನೆಲದ ಸಾಧ್ಯತೆಗಳನ್ನು ಹುಡುಕುವಕ್ಕಿಂತ ಮುಂಚೆ ಮಕ್ಕಳಿಗೆ ಪಲಾಯನಕ್ಕೆ ವೀಸಾ ಕೊಡಿಸಿದ್ದೇವೆ. ಬೀಜ ಊರಿ, ಮೊಳಕೆ ಮೂಡಿ, ಚಿಗುರಾಗಿ ಮರವಾಗಿ ಫಲ ನೀಡುವಷ್ಟು ಕಾಲ ಕಾಯುವ ಸಂಯಮ ಯಾರಿಗೂ ಇಲ್ಲ! ಧಿಡೀರ್ ದುಡ್ಡು ಎಲ್ಲರ ಕನಸು. ಹಳ್ಳಿಗಳು ಖಾಲಿಯಾಗಲು ಇಷ್ಟು ಸಾಕು. ಮನೆ ಮನೆಗಳ ಮಧ್ಯೆ ಗೋಡೆ ಎದ್ದಿದೆ, ಹದ ಮಳೆಗೆ ಹೊಲದ ತುಂಬ ನೆರೆಯುತ್ತಿದ್ದ ರೈತರು ವ್ಯಾಜ್ಯ ಹಿಡಿದು  ನ್ಯಾಯಾಲಯಗಳಲ್ಲಿ  ಜಮಾಯಿಸಿದ್ದಾರೆ. ಕೆಲವರು  ವೈವಿಧ್ಯಮಯ ಕೃಷಿ, ಸಸ್ಯ ಬೆಳೆಸುತ್ತ, ಕೃಷಿ ಶಿಸ್ತು ಆರಾಧಿಸುತ್ತ ನೆಲ ನಂಬಿದ್ದಾರೆ. ಫಂಡು ನಂಬಿ ಕೃಷಿ ಸಂಶೋಧನೆ ನಡೆಸುವ ತಜ್ಞರ ದಂಡು  ಅಧ್ಯಯನ ಕಳಕಳಿಯನ್ನು  ಹರಾಜಿಗೆ ಹಾಕುತ್ತಿದೆ. ಪರಂಪರೆ ಕಲಿಸಿದ  ಕೃಷಿ ಜ್ಞಾನಗಳಲ್ಲಿ ಸುಸ್ಥಿರ ದಾರಿ ಹುಡುಕಿದ ರೈತರು ಸೈನ್ಸ್‌ನ ಮುಖ ನೋಡಿ ನಕ್ಕಿದ್ದಾರೆ, ಸೋತಿದ್ದಾರೆ, ಖುಷಿಯ ಕ್ಷಣ ಹುಡುಕಿದ್ದಾರೆ.

ಕೃಷಿ ನೆಲವೆಂಬ ಹಳ್ಳಿ ಮೂಲೆ ನಿತ್ಯ ಹರಾಜು ಕಟ್ಟೆಯಂತೆ ಕಾಣುತ್ತಿದೆ. ಮಕ್ಕಳ ವಿಳಾಸಗಳಷ್ಟೇ ಬದಲಾಗುತ್ತಿದ್ದ ನೆಲೆಯಲ್ಲಿ ಈಗ ಹಿರಿಯರು  ಕೃಷಿ ಹಸುರು ಮರೆತು ನಗರಮುಖೀ  ದಾರಿ ಅರಸಿದ್ದಾರೆ.  ‘ಕಂಪ್ಯೂಟರ್ ಊಟ, ಹಳ್ಳಿ ಮಾರಾಟ!’ ಪ್ರಸ್ತುತ ಕೃಷಿ ತಲ್ಲಣಗಳಲ್ಲಿ ಕೇಳಿದ  ಒಂದು ಸಾಲು ಸವಾಲು ಅಷ್ಟೇ! ಅಡಿಕೆ ಪತ್ರಿಕೆಯ ಮೂಡೆಬಳ್ಳಿ ಹಾಗೂ ಉದಯವಾಣಿ ಪತ್ರಿಕೆಯ ಬಹುಧಾನ್ಯ ಅಂಕಣಗಳಿಂದ ಆಯ್ದ ಬರೆಹಗಳು ಇಲ್ಲಿವೆ. ಈ ನನ್ನ  ಬರೆಹಗಳನ್ನು ಪ್ರಕಟಿಸಿದ ಪತ್ರಿಕೆಗಳ ಸಂಪಾದಕರಿಗೆ ಹಾಗೂ ಇದನ್ನು ಈಗ ಚೆಂದದ ಪುಸ್ತಕವಾಗಿ ಪ್ರಕಟಿಸುತ್ತಿರುವ ಮಿತ್ರ ಡಾ. ಎಂ,ಬೈರೇಗೌಡರಿಗೆ ಕೃತಜ್ಞತೆಗಳು.