೮೦ ಕಿಲೋ ಭಾರ ಹೊರುತ್ತಾರೆ, ಕಲ್ಲು ಕರಗಿಸುತ್ತಾರೆ, ನೇಗಿಲ ಜತೆ ಪಳಗಿ ಭೂಮಿ ಬಂಗಾರ ಮಾಡುತ್ತಾರೆಂದು ಹಾಡಿ ಹೊಗಳಿದ ಊರಲ್ಲಿ ಕೃಷಿ ದುಡಿಮೆಯ ಮಹತ್ವ ಅರಿಯದಷ್ಟು ನೌಕರಿ ನಂಬಿದ ವಿದ್ಯಾವಂತರಿಗೆ ಅಂಧತ್ವ ಬಂದಿದೆ. ಈಗ ಕೃಷಿ ಹೇಳಿಕೊಳ್ಳಲಾಗದ ವಿಚಿತ್ರ ಸಮಸ್ಯೆಯಲ್ಲಿ ತೊಳಲಾಡುತ್ತಿದೆ. ಪಿತ್ರಾರ್ಜಿತ ಆಸ್ತಿ ಪಾಲುಎಂದು ಭೂಮಿ ಸಮಸ್ಯೆಯನ್ನು ಕಾನೂನು ದೃಷ್ಟಿಯಲ್ಲಿ ಮಾತ್ರ ನೋಡಲು ನಮ್ಮ ಶಿಕ್ಷಣ ಹೇಳುತ್ತಿದೆ. ಬೆವರಿಳಿಸುವ ಒಕ್ಕಲು ಇರುವ ಭೂಮಿಯಲ್ಲಿ ಈಗೀಗ ದಿನಬೆಳಗಾದರೆ ವಕೀಲರು, ಕೋರ್ಟುಗಳು ಬಂದು ನಿಂತಿವೆ!


ಕರಾವಳಿ ಹಳ್ಳಿಯಲ್ಲಿ ಅಧ್ಯಯನ ನಡೆಸುತ್ತಿದ್ದೆ. ಕೃಷಿ ಬದುಕಿನ ಸಮೀಕ್ಷೆ ಮಾಡಬೇಕಿತ್ತು. ಯಾರಾದರೂ ಊರಿನ ಹುಡುಗರು ಸಿಕ್ಕರೆ ಅವರಿಂದಲೇ ಕೆಲಸ ಮಾಡಿಸಬಹ್ಮದೆಂದು ಯೋಚಿಸಿದೆ. ಊರುಕೇರಿ ಹುಡುಕಿದರೂ ೨೫-೩೫ರ ಹರೆಯದವರು ಸಿಗಲಿಲ್ಲ, ಯುವಕರಿಗೆ ದುರ್ಭೀನು ಹಿಡಿದು ಹುಡುಕುವ ಪ್ರಮೇಯ! ಅಂತೂ ಕೊನೆಗೆ ಒಬ್ಬ ಸಿಕ್ಕಿದ, ಮತ್ತೆ ತಿಂಗಳ ಬಳಿಕ ಬೇರೆಲ್ಲೋ ಜಮೀನು ಖರೀದಿಸಿದೆ ಎಂದು ಊರು ಬಿಟ್ಟು ದೂರ ಹೋದ! ಮುದುಕರು ಮಾತ್ರ ಕಾಲದ ನೆನಪು ಮಾಡಿಕೊಳ್ಳುತ್ತ ಎಲೆ ಅಡಿಕೆ ಜಗಿಯುತ್ತ ಅಲ್ಲಿ ಉಳಿದಿದ್ದರು. ಬೇರು ಕಿತ್ತು ಒಯ್ಯಲಾಗದ ಹೆಮ್ಮರದ ಹಾಗೇ ನಿಂತಿದ್ದರು. ಮಕ್ಕಳು, ಮೊಮ್ಮಕ್ಕಳ ಹೊಸ ತಲೆಮಾರು ಮುಂಬೈ, ಗುಜರಾತ್, ಬೆಂಗಳೂರು ಎಂದು ದೇಶದ ಮೂಲೆ ಮೂಲೆಗೆ ರವಾನೆಯಾಗಿತ್ತು.

‘ನಿಮ್ಮ ತಂದೆ, ತಾಯಿ ವೃದ್ಧರು, ಅವರ ಯೋಗಕ್ಷೇಮ ನೋಡಲು ನೀವೊಬ್ಬರಾದರೂ ಹಳ್ಳಿ ತೋಟ ನೋಡಿಕೊಂಡು ಊರಲ್ಲಿ ಇರಬಹುದಿತ್ತಲ್ಲ’ ಎಂಬ ಪ್ರಶ್ನೆ ಕೇಳುವುದಕ್ಕಾಗಿ ಒಬ್ಬ ಹುಡುಗನನ್ನು ಹುಡುಕಿ ಹೋಗಿದ್ದೆ. ‘ನಾವು ಐದು ಜನ ಸಹೋದರರು, ಇನ್ನುಳಿದ ನಾಲ್ಕು ಜನ ಶಿಕ್ಷಕರು, ಬ್ಯಾಂಕ್ ಸಿಬ್ಬಂದಿ ಎಂದು ಬೇರೆ ಬೇರೆ ಕ್ಷೇತ್ರದಲ್ಲಿದ್ದಾರೆ. ನಾನು ೧೦ ವರ್ಷಗಳಿಂದ ಇಡೀ ಕುಟುಂಬದ ಕೃಷಿ ಜವಾಬ್ದಾರಿ ನೋಡುತ್ತಿದ್ದೆ, ನಾನೂ ಹೀಗೆ ಹಳ್ಳಿಯಲ್ಲಿದ್ದರೆ ನಾಳೆ ನನ್ನ ಹೆಂಡತಿ ಮಕ್ಕಳು ಕಷ್ಟ ಅನುಭವಿಸಬೇಕಾಗುತ್ತದೆ’ ಎಂದರು.ಭೂಮಿ ನಂಬಿ ತಂದೆ ತಾಯಿ ಜತೆ ಬದುಕಿದರೆ ಭವಿಷ್ಯ ಹೇಗೆ ತೊಂದರೆಗೆ ಸಿಲುಕುತ್ತದೆ? ಅರ್ಥವಾಗಲಿಲ್ಲ. ಸಮಸ್ಯೆ ಬಿಡಿಸಿದಾಗ ವಿಷಯ ಬಹಿರಂಗವಾಯ್ತು. ಇನ್ನು ಹತ್ತಾರು ವರ್ಷಕ್ಕೆ ತಂದೆ ಸಾವಿನ ಬಳಿಕ ಭೂಮಿ ಹಿಸ್ಸೆಯಾಗಬಹುದು, ಆಗ ಪಿತ್ರಾರ್ಜಿತ ಆಸ್ತಿಯಲ್ಲಿ ತಮಗೂ ಭಾಗವಿದೆ ಎಂದು ಸಹೋದರರೆಲ್ಲ ತಕರಾರು ಎತ್ತುತ್ತಾರೆ. ಕೃಷಿ ಕೆಲಸ, ವೃದ್ಧ ತಂದೆ ತಾಯಿಗಳ ಆರೈಕೆ ವೆಚ್ಚಗಳನ್ನು ಕೃಷಿ ಆದಾಯದಿಂದ ನಿಭಾಯಿಸಬೇಕು. ನೌಕರಿ ಪಡೆದ ಸಹೋದರರು ನಯಾಪೈಸೆ ಹಣ ಮನೆಗೆ ನೀಡುವದಿಲ್ಲ. ಇತ್ತ ಕೃಷಿ ಕೆಲಸ ನೋಡಿಕೊಂಡು ಏನಾದರೂ ಸ್ವಯಂ ಉದ್ಯೋಗ ಮಾಡಲೂ ಆಗುವದಿಲ್ಲ, ಭೂಮಿ ಹಿಸ್ಸೆಯಾಗುವ ಕಾಲಕ್ಕೆ ನನಗೆ ಎಲ್ಲರಂತೆ ಕೆಲವು ಗುಂಟೆ ಕ್ಷೇತ್ರ ಸಿಗುತ್ತದೆ, ಮೂಲದಿಂದ ಕೃಷಿ ನಂಬಿದ್ದಾನೆಂದು ಯಾರೂ ಹೆಚ್ಚಿನ ಆಸ್ತಿ ನೀಡುವದಿಲ್ಲ, ಕಟ್ಟ ಕಡೆಗೆ ಎಲ್ಲರಿಗೂ ಸಿಗುವಷ್ಟೇ ಭೂಮಿ ತನಗೂ ಸಿಗುವದಾದರೆ ನಾನು ಇಲ್ಲಿದ್ದು ಏಕೆ ಜೀತ ಮಾಡಬೇಕು? ಸಹೋದರರಿಗೆ ನಾಳೆ ಹಂಚಬೇಕಾದ ನಾಲ್ಕಾರು ಎಕರೆ ಕೃಷಿ ನಿರ್ವಹಿಸುವ ವೃಥಾ ಪರಿಶ್ರಮ ಏಕೆ? ಬೇರು ಮೂಲದ ಸಮಸ್ಯೆಗೆ ಇಂದಿಗೂ ಉತ್ತರವಿಲ್ಲ. ಹೀಗಾಗಿ ಹಳ್ಳಿಯಲ್ಲಿ ಉಳಿಯುವ ಮನಸ್ಸು ಹಲವರಿಗೆ ಇಲ್ಲ.

ಕೊಳ್ಳೆಗಾಲದ ಕೃಷಿಕರೊಬ್ಬರದು ಇಂತಹುದೇ ಕತೆ. ಮೂರು ಮಕ್ಕಳ ಕುಟುಂಬ. ಒಬ್ಬ ಹಳ್ಳಿಯಲ್ಲಿ ಕೃಷಿ ಮಾಡುತ್ತಿದ್ದ, ಇನ್ನುಳಿದವರು ಬೆಂಗಳೂರು ಸೇರಿದರು. ಕೃಷಿ ಉತ್ಪನ್ನದಲ್ಲಿ ಬದುಕುವುದೇ ಕಷ್ಟ ಎಂಬ ಸ್ಥಿತಿಯಿತ್ತು. ಬರಗಾಲ, ಬೆಲೆ ಕುಸಿತದಿಂದ ಕುಟುಂಬ ಕಂಗಾಲಾಗಿತ್ತು. ಕೃಷಿ ನಂಬಿ ಊರಲ್ಲಿ ಬದುಕಿದ್ದವನ ಮಗಳ ಮದುವೆಗೆ ಎರಡು ವರ್ಷದ ಹಿಂದೆ ಎರಡು ಲಕ್ಷ ರೂಪಾಯಿ ಹಣ ಬೇಕಾಯಿತು. ನಗರ ಸೇರಿ ವ್ಯವಹಾರ ಜಾಣತನ ಕಲಿತವರು ಮದುವೆಗೆ ಹಣ ಹೊಂದಿಸುವ ಸರಳ ಸೂತ್ರ ಹೇಳಿದರು. ‘ನಮ್ಮ ಅವಿಭಕ್ತ ಕುಟುಂಬದ ಭೂಮಿಯಲ್ಲಿ ನಿನ್ನ ಹಿಸ್ಸೆಗೆ ಎರಡು ಎಕರೆ ಹೊಲ ಬರುತ್ತದೆ, ಆ ಹೊಲ ಅಡವಿಟ್ಟು ಮಗಳ ಮದುವೆಗೆ ಸಾಲ ಪಡೆದುಕೊಳ್ಳಬಹುದು, ನಮ್ಮ ಭೂಮಿಗೂ ಮದುವೆ ಸಾಲ ಅಂಟಿಸಬೇಡ’ ಎಂದು ಎಲ್ಲರೂ ಹೇಳಿದರು. ಇಷ್ಟು ಕಾಲ ನಾವೆಲ್ಲ ಒಂದು ಎಂದು ಭೂಮಿಯಲ್ಲಿ ಬೆವರಿಳಿಸಿ ರಾಗಿ, ಜೋಳ ಬೆಳೆಯುತ್ತಿದ್ದಾತನಿಗೆ ಸಹೋದರರ ಸಲಹೆ ಅಚ್ಚರಿ ಮೂಡಿಸಿತು.  ಹೊಲದ ಸಾಲ ಮಾಡಿ ಮಗಳ ಮದುವೆ ಮುಗಿಸಿದರು.

೨೦ ವರ್ಷಗಳಿಂದ ಕೃಷಿ ನಂಬಿದ ಕೊಳ್ಳೆಗಾಲದ ದಂಪತಿಗಳು ಈಗ ಬದುಕಿಗಾಗಿ ಬೆಂಗಳೂರು ಸೇರಿದ್ದಾರೆ. ಗಂಡನಿಗೆ ಉದ್ಯಾನವೊಂದರ ವಾಚ್‌ಮನ್ ಕೆಲಸ, ಹೆಂಡತಿಗೆ ಗಾರ್ಮೆಂಟ್ ಫ್ಯಾಕ್ಟರಿಯ ದುಡಿಮೆ ಸಿಕ್ಕಿದೆ. ಇಬ್ಬರಿಂದ ತಿಂಗಳಿಗೆ ೭,೦೦೦ ರೂಪಾಯಿ ಆದಾಯವಿದೆ. ವಸತಿ, ಊಟಕ್ಕೆ ೩,೦೦೦ ರೂಪಾಯಿ ಖರ್ಚಾಗುತ್ತಿದೆ. ಪ್ರಥಮ ವರ್ಷದ ೪೦,೦೦೦ ರೂಪಾಯಿ ಉಳಿತಾಯ ಈ ಕೃಷಿಕರಿಗೆ ಅಚ್ಚರಿ ಮೂಡಿಸಿದೆ, ಮಗಳ ಮದುವೆಯ ಸಾಲ ತೀರಿಸುವ ಭರವಸೆ ಮೂಡಿಸಿದೆ. ಇಷ್ಟೆಲ್ಲ ವರ್ಷಗಳಿಂದ ಕೃಷಿಯಲ್ಲಿದ್ದರೂ ವರ್ಷಕ್ಕೆ ಒಂದು ಜತೆ ಚೆಂದದ ಬಟ್ಟೆ ಖರೀದಿಸಲು ಯೋಚಿಸಬೇಕಿತ್ತು, ಸದಾ ಹಣದ ಮುಗ್ಗಟ್ಟು ಕಾಡುತ್ತಿತ್ತು. ಈಗ ಹಣ ಕೈಗೆ ಸಿಗುತ್ತಿದೆ. ಮುಂದೆ ಬೆಂಗಳೂರಲ್ಲಿ ಒಂದು ಸ್ವಂತ ಮನೆ ಮಾಡಬೇಕು ಎಂದು ಡಿಗ್ರಿ ಓದದ ಇವರು ನಗರ ಓದಿ ಠರಾವು ಮಂಡಿಸಿದ್ದಾರೆ. ಒಳ್ಳೆ ವಾತಾವರಣ ಇಲ್ಲ, ನೆಂಟರು, ಬಂಧು ಬಳಗದ ಸಂಪರ್ಕವಿಲ್ಲ ಎಂಬ ಬೇಸರವಿದೆ. ನಗರದ ಬದುಕಿನಲ್ಲಿ ಹಳ್ಳಿ ಹೋಲಿಸಲಾಗದು ಆದರೂ ಇಲ್ಲಿ ಇರುವದು ಅನಿವಾರ್ಯ ಎನ್ನುತ್ತಾರೆ.

ಕಟ್ಟಕಡೆಗೆ ಬದುಕಿನ ಒಂದು ಸತ್ಯ ಎಲ್ಲೆಡೆ ಢಾಳಾಗಿದೆ. ನಾಳೆ ಚೆನ್ನಾಗಿರಲು ಇಂದು ಹಣ ಗಳಿಕೆ ಬೇಕು, ತಮ್ಮದೇ ಎಂದು ನಂಬಿ ಬೇರೂರುವ ಭೂಮಿ ಬೇಕು. ಶಿಕ್ಷಣ ಪ್ರಗತಿಯತ್ತ ಸಾಗಿದ ಬಳಿಕ ಹಳ್ಳಿ ಬದಲಾಗಿದೆ, ದುಡಿಯುವ ಅವಕಾಶ ಎಲ್ಲರಿಗೆ ತೆರೆದಿದೆ. ನಗರ ನೌಕರಿ ಸೆಳೆತ ಸಹಜವಾಗಿದೆ. ಹಣ ನಮ್ಮ ಬದುಕಿನ ಅನೇಕ ಸಂಗತಿಗಳನ್ನು ನಿರ್ಧರಿಸುವ ಅಂಶವಾಗಿದೆ. ೮೦ ಕಿಲೋ ಭಾರ ಹೊರುತ್ತಾರೆ, ಕಲ್ಲು ಕರಗಿಸುತ್ತಾರೆ, ನೇಗಿಲ ಜತೆ ಪಳಗಿ ಭೂಮಿ ಬಂಗಾರ ಮಾಡುತ್ತಾರೆಂದು ಹಾಡಿ ಹೊಗಳಿದ ಊರಲ್ಲಿ ದುಡಿಮೆಯ ಕಿಮ್ಮತ್ತು ಅರಿಯದಷ್ಟು ವಿದ್ಯಾವಂತರಲ್ಲಿ ಅಂಧತ್ವ ಬಂದಿದೆ. ಕೃಷಿ ವಿಚಿತ್ರ ಸಮಸ್ಯೆಯಲ್ಲಿ ತೊಳಲಾಡುತ್ತಿದೆ. ‘ಪಿತ್ರಾರ್ಜಿತ ಆಸ್ತಿ ಪಾಲು’ ಎಂದು ಈ ಸಮಸ್ಯೆಯನ್ನು ಕಾನೂನು ದೃಷ್ಟಿಯಲ್ಲಿ ಮಾತ್ರ ನೋಡಲು ನಮ್ಮ ಶಿಕ್ಷಣ ಹೇಳುತ್ತಿದೆ. ಬೆವರಿಳಿಸುವ ಒಕ್ಕಲು ಇರುವ ಭೂಮಿಯಲ್ಲಿ ಈಗೀಗ ವಕೀಲರು, ಕೋರ್ಟುಗಳು ಬಂದು ನಿಂತಿವೆ!. ವ್ಯಕ್ತಿಗೆ ನ್ಯಾಯ ನೀಡುವ ಭರಾಟೆಯಲ್ಲಿ ಕೃಷಿಯ ನ್ಯಾಯ ಮರೆತಿದೆ. ಒಂದು ಕಾಲಕ್ಕೆ ಹಳ್ಳಿ ಯುವಕರ ವಿಳಾಸಗಳು ಕಾಲೇಜು ಓದಿನ ಬಳಿಕ ಬದಲಾಗುತ್ತಿತ್ತು. ಈಗ ಯುವಕರಷ್ಟೇ ಅಲ್ಲ ಅವರ ಪಾಲಕರಿಗೂ ನಗರ ಪ್ರೀತಿ ಹೆಚ್ಚಿದೆ. ಹಳ್ಳಿಯಲ್ಲಿದ್ದೂ ಊಳುವವ ಒಡೆಯನಾಗದ ಕಾರಣಕ್ಕೆ ಸಂಬಂಧಗಳು ಹಳಸುತ್ತಿವೆ. ಹಣದ ಹುಡುಕಾಟದಲ್ಲಿ ಪ್ರೀತಿಸುವವರಿಲ್ಲದೇ ಹಸಿರಾಡುವ ಭೂಮಿ ಹೆಣವಾಗುತ್ತಿದೆ.