ನಮ್ಮ  ಕಳವೆ ಗ್ರಾಮದ ಅಂಚಿನಲ್ಲಿ ದಬ್ಬೆಹಳ್ಳ ಹರಿದಿದೆ. ಶಿರಸಿ ಲಿಂಗದಕೋ(ಣ)ಳದಲ್ಲಿ ಹುಟ್ಟಿದ ಪುಟ್ಟ  ತೊರೆ, ಇದಕ್ಕೆ ದಬ್ಬೆಹಳ್ಳ ಎಂಬ ಹೆಸರು ಏಕೆ ಬಂತು ಎಂಬುದಕ್ಕೆ ಅಧಿಕೃತ ದಾಖಲೆಗಳಿಲ್ಲ. ಜಲಪಾತದಂತೆ ನೀರು ಧುಮ್ಮಿಕ್ಕುವ ಕೆಲವು ಪ್ರದೇಶಗಳಿದ್ದು ‘ದಬದಬೆ ಹಳ್ಳ’ ಜನರ ಬಾಯಲ್ಲಿ  ದಬ್ಬೆ ಹಳ್ಳವಾಗಿರುವ ಸಾಧ್ಯತೆಯಿದೆ. ಇನ್ನೊಂದು ವಿಶೇಷವೆಂದರೆ ಶತಮಾನಗಳ ಹಿಂದಿನಿಂದಲೂ ಇಲ್ಲಿ ಮಳೆಗಾಲದ ಓಡಾಟಕ್ಕೆ ಹಳ್ಳಕ್ಕೆ ಹಳ್ಳಿಗರು ಬಿದಿರು, ಅಡಿಕೆ ದಬ್ಬೆಯಿಂದ ಸಾರ ನಿರ್ಮಿಸುತ್ತಿದ್ದರು. ದಡದಿಂದ ದಡಕ್ಕೆ ಸುಮಾರು ೮೦-೧೦೦ ಅಡಿ ಉದ್ದಕ್ಕೆ ನಿರ್ಮಿಸುತ್ತಿದ್ದ ಈ ದಬ್ಬೆಸಾರ ಹಳ್ಳದ ದಂಡೆ ಹೆಮ್ಮರಗಳ ಟೊಂಗೆಗಳ ಆಶ್ರಯದಲ್ಲಿ ತಂತಿಯಲ್ಲಿ ನೇತಾಡುತ್ತಿತ್ತು. ಅಬ್ಬರದ ಮಳೆ, ಹಾವಸೆಗಟ್ಟಿದ ಟೊಂಗೆ ಏರಿ ಜೀವಭಯ ಮರೆತು ಸಾರಕಟ್ಟುವದು ಸಾಹಸ, ಊರಿನ ಮಂಜುನಾಥ ಭಟ್, ಮಧುಕೇಶ್ವರ ಭಟ್, ಗಿರಿಯಾ ಗೌಡ, ಗುರುಪಾದ ಭಟ್, ಶ್ರೀಧರ ಹೆಗಡೆ, ಮಾದೇವ ಭಟ್ಟ ಮುಂತಾದವರು ಕಾಯಕದಲ್ಲಿ ಪಳಗಿದ್ದರು. ಮಳೆಗಾಲ ಆರಂಭವಾಯಿತು ಎನ್ನುವಾಗ ಕತ್ತಿ ಹಿಡಿದು ಸಾರದ ಕೆಲಸ ಶುರುಮಾಡುತ್ತಿದ್ದರು. ಸಾರದಿಂದ ಕೆಳಕ್ಕೆ  ನೋಡಿದರೆ ೨೫-೩೦ ಅಡಿ ತಗ್ಗಿನಲ್ಲಿ  ಹಳ್ಳ. ಹರಿಯುವ  ಹಳ್ಳ,  ಸಾರ ನೋಡುತ್ತ ಊರಿನ ಮಕ್ಕಳು ಬೆಳೆಯಬೇಕು. ಯಾವ ಅಂಜಿಕೆಯಿಲ್ಲದೇ ನಾವು ಓಡಾಡುತ್ತಿದ್ದೆವು, ಸೊಪ್ಪಿನ ಹೊರೆ, ಅಕ್ಕಿಚೀಲ ಹೊತ್ತು ಹಿರಿಯರು ನಡೆಯುತ್ತಿದ್ದರು. ಕೆಲವರು ಸರ್ಕಸ್ ಕಂಪನಿಯವರಂತೆ ಬೈಸಿಕಲ್  ಹೊಡೆಯುತ್ತಿದ್ದರು.

ಶಾಲೆಗೆ ಹೋಗುವ ದಿನಗಳಲ್ಲಿ ಒಮ್ಮೆ ಎರಡು ಕೈಯಲ್ಲಿ ಭಾರದ ಚೀಲ ಹೊತ್ತು ದಬ್ಬೆಸಾರದ ಮಧ್ಯಭಾಗ ಬಂದಿದ್ದೆ, ಅಡ್ಡಕ್ಕೆ ಹಾಕಿದ ಬಿದಿರು ಗಳು ಲಟಕ್ಕೆಂದು ಮುರಿಯಿತು! ಮುಂದೆ ದಾಟಲು ಧೈರ್ಯವಿಲ್ಲ, ಹಿಂದಕ್ಕೆ ಮರಳಲೂ ಸಾಧ್ಯವಾಗದೇ ಭಯದಿಂದ ನಡುಗುತ್ತಿದ್ದೆ. ಕೆಳಗಡೆ ಹಳ್ಳದಲ್ಲಿ ಕೆಂಪು ನೀರು  ತುಂಬಿ ಹರಿಯುತ್ತಿತ್ತು. ಇಂತಹ ವೇಳೆಗೆ ಸಹಪಾಟಿ  ಹುಡುಗರು  ಧೈರ್ಯ ತುಂಬಿ ಸಾರ ದಾಟಿಸಿದ್ದರು! ಮುಂದೆ ಕೆಲವು ದಿನ ದುರಸ್ತಿ ಸಾಧ್ಯವಾಗಿರಲಿಲ್ಲ,  ಆ ವೇಳೆಗೆ ಮುರಿದ ಸಾರದಲ್ಲಿ ಸರಾಗ ದಾಟುವದನ್ನು ಅಭ್ಯಾಸ ಮಾಡಿಕೊಂಡಿದ್ದೆವು! ಕಾಡು ಬಿದಿರು ಕ್ರಿ.ಶ. ೧೯೬೫ರ ಸುಮಾರಿಗೆ ಹೂವರಳಿಸಿದ ಬಳಿಕ ಸಾರಕ್ಕೆ ಗಳುವಿನ ಕೊರತೆಯಾಯಿತು, ಬಳಿಕ ಅಡಿಕೆ ದಬ್ಬೆ ಸಾರ  ಅನಿವಾರ್ಯವಾಯ್ತು. ಮಳೆಗಾಲದಲ್ಲಿ ದ್ವೀಪವಾಗುತ್ತಿದ್ದ ಊರಿಗೆ ಇದು ಸಂಪರ್ಕ ಸೇತು! ಬಹುಶಃ ಅಡಿಕೆ ದಬ್ಬೆ ಸಾರ ನೋಡಿಯೇ ಹಳ್ಳವನ್ನು ದಬ್ಬೆಹಳ್ಳವೆಂದು ಕರೆದಿರಬಹುದೆಂದು ಅನೇಕರು ಹೇಳುತ್ತಾರೆ. ಸುಮಾರು ೯೦ ವರ್ಷದ ಹಳೆಯ ಬ್ರಿಟಿಷ್ ನಕ್ಷೆಯಲ್ಲಿಯೂ ಹಳ್ಳಕ್ಕೆ ದಬ್ಬೆಹಳ್ಳವೆಂದು ಕರೆಯಲಾಗಿದೆ!

ಮಣ್ಣು ಕರಡಿ!

ಮಳೆಗಾಲ ಮುಗಿದರೆ ನಮ್ಮೂರಿನ ಜನಕ್ಕೆ ಏನೋ ತಡೆ ಕಳಚಿದ ಖುಷಿ, ಸಾರದ ಹಂಗು ಮರೆತು ಹಳ್ಳದಾಟಿ ಪ್ರಯಾಣಿಸುವ ಖುಷಿಯಿತ್ತು. ಮಳೆಗಾಲದ ಪ್ರವಾಹಕ್ಕಿಂತ ಅಗಸ್ಟ್ ಹೊತ್ತಿಗಿನ ಒರತೆ ನೀರಿನ ಹರಿವಿನ ವೇಗ ಹೆಚ್ಚು, ‘ಸೆಳವು ‘ ಎಂದು ಇದನ್ನು ಕರೆಯುತ್ತಿದರು. ಚಕ್ಕಡಿ ಮಾರ್ಗ ಹಳ್ಳಕ್ಕೆ ಸೇರುವ ಸ್ಥಳದಲ್ಲಿ ಅಗಲವಾಗಿ ಹಳ್ಳ ಹರಿಯುವ ಜಾಗ ಗುರುತಿಸಿದ್ದರು, ಇದು ‘ದಾಟ್‌ಸಾಲು’ ಎಂದು  ಕರೆಯುತ್ತಿದ್ದ ಜಾಗ. ನೀರಿನ ಸೆಳೆತವೂ ಅಷ್ಟಾಗಿಲ್ಲದ ಈ ಜಾಗದಲ್ಲಿ ಸಣ್ಣಪುಟ್ಟ ಪ್ರವಾಹದಲ್ಲೂ ಮಕ್ಕಳೂ ದಾಟುತ್ತಿದ್ದರು. ಮಣ್ಣಿನ ಬಣ್ಣ ಹೊತ್ತ ಕೆಂಪುನೀರು ನೋಡಿದರೆ ಹೆದರಿ ತಲೆತಿರುಗುವ ಹಲವರನ್ನು ಹೊಳೆದಾಟುವಾಗ ನೋಡಿದ್ದೇವೆ. ಹೊಳೆಯಲ್ಲಿ ‘ಮಣ್ಣು-ಕರಡಿ’ ಹೋಗುತ್ತಿದೆಯೆಂದು ನಾವು ಮಾತಾಡುತ್ತಿದ್ದೆವು. ಮಣ್ಣು ಕರಗಿ ಹೋಗುವದನ್ನು ‘ಮಣ್ಣು ಕರಡಿ’ ಎನ್ನುತ್ತಿದ್ದೆವು. ಭತ್ತದ ಗದ್ದೆಯಲ್ಲಿ ಕೊರಡು ಹೊಡೆದು ಹೊಳೆಗೆ ಬಿಟ್ಟಾಗ ನೀರಿನ ಬಣ್ಣ ಬದಲಾಗುತ್ತಿತ್ತು. ನದಿ ದಂಡೆಯಲ್ಲಿ ತೋಟ ಬೆಳೆಸಲು ಜಾಗ ಮಾಡುವವರು ಧರೆಯ ಮಣ್ಣನ್ನು ಕುಸಿದು ನೀರಿಗೆ ಸೇರಿಸುತ್ತಿದ್ದರು. ಮಳೆಯ ಅಬ್ಬರದಿಂದಲೂ ಮಣ್ಣು ಕೊಚ್ಚಿ ಬರುತ್ತಿತ್ತು. ಮಳೆಗಾಲವಿಡೀ ನೀರು ಕೆಂಪಾಗಿರುವದು ಸಹಜವಾಗಿತ್ತು. ನಮಗೆ ಶಾಲೆಯ ಪಾಠಗಳಲ್ಲಿ ಮಣ್ಣು ಸವೆತದ ಬಗೆಗೆ ಹೇಳುತ್ತಿದ್ದರು, ಆದರೆ ಹೊಳೆ ನೀರಿನ ಬಣ್ಣದ ಪ್ರಾತ್ಯಕ್ಷಿಕೆ ಪಾಠ ಯಾವತ್ತೂ ಹೇಳಲಿಲ್ಲ. ನದಿ ನೋಡುವ ನಮಗೆ ಸುಲಭದಲ್ಲಿ ಮಣ್ಣು ನೀರಿನ ಕಾರಣ ಅರಿವಿಗೆ ಬರುತ್ತಿತ್ತು.

ಮಳೆ ನೀರಿಗೆ ನೆತ್ತರಿನ ಬಣ್ಣ ಮಣ್ಣು ಕರಡಿ

ಪೇಟೆ ಕೆಲಸಕ್ಕೆ ಹೊರಟವರು ಹಳ್ಳದಾಟಿ ನೀರ್ನಹಳ್ಳಿ ಕ್ರಾಸ್‌ನಲ್ಲಿ ಬಸ್ಸೇರಿ ಶಿರಸಿ ತಲುಪಿ ಸಾಯಂಕಾಲ ಮರಳುತ್ತಿದ್ದರು. ಮಧ್ಯಾನ್ಹ ಹಳ್ಳದಾಟಿದ ಅನುಭವದಲ್ಲಿ ರಾತ್ರಿ ದಾಟಸಾಲಿನಲ್ಲಿ ಹೆಜ್ಜೆ ಹಾಕುತ್ತಿದ್ದರು. ಆಗ ಬಹುತೇಕ ಜನರ ಕೈಯಲ್ಲಿ ಟಾರ್ಚ್ ಇರಲಿಲ್ಲ, ಕಾಡು ಪ್ರಾಣಿಗಳಂತೆ ಅಂದಾಜಿನಲ್ಲಿ ಹೆಜ್ಜೆ ಹಾಕುತ್ತಿದ್ದೆವು. ಹಳ್ಳ ಇಳಿದು ನಾಲ್ಕು ಹೆಜ್ಜೆ ನಡೆದಾಗ ಅನುಮಾನ,  ನಾಲ್ಕು ತಾಸು ಮುಂಚೆ  ಪಾದವೂ ಮುಚ್ಚದಷ್ಟು ನೀರಿದ್ದ ಜಾಗದಲ್ಲಿ ಮೊಣಕಾಲುವರೆಗೆ ನೀರು ಬಂದಿರುತ್ತಿತ್ತು. ತಟ್ಟನೆ ಹಿಂದೆ  ಸರಿದು ಪರಾಂಭರಿಸಿದರೆ ಶಿರಸಿಯಲ್ಲಿ ಮಳೆ ಸುರಿದರೆ ಒಮ್ಮೆಲೇ ಹಳ್ಳ ಉಕ್ಕೇರುತ್ತಿದ್ದ ಸಂಗತಿ ಗಮನಕ್ಕೆ ಬರುತ್ತಿತ್ತು!. ರಾತ್ರಿ ತಡಬಡಿಸಿಕೊಂಡು ಪುನಃ  ಸುತ್ತುಬಳಸಿ ದಬ್ಬೆಸಾರ ದಾಟ ಬೇಕಿತ್ತು. ಸಾರದ ಕೆಳಗೆ ತುಂಬಿ ಹರಿವ ನೀರಿನ ಸಪ್ಪಳ ಕೇಳಿದರೆ ನಡುಕ. ನದಿ ಹರಿವನ್ನು ನೋಡಿಕೊಂಡು ನೀರಿನ ಸಪ್ಪಳ ಕೇಳುವದಕ್ಕೂ, ಕತ್ತಲಿನಲ್ಲಿ ಪ್ರವಾಹ ಮಟ್ಟವನ್ನು ಸಪ್ಪಳ ಮಾತ್ರದಲ್ಲಿ ಅಂದಾಜಿಸುವದಕ್ಕೂ ವ್ಯತ್ಯಾಸವಿದೆ,  ತಣ್ಣಗೆ ಹರಿವ ಹೆಬ್ಬಾವಿನಂತೆ ಅರಿವಿಲ್ಲದೇ ಅದು ನುಂಗಿ ಬಿಡಬಹುದು. ಆದರೆ ಯಾವತ್ತೂ ಅಂತಹ ಅವಘಡ ನಡೆದಿಲ್ಲ. ೨೦ ವರ್ಷ ಹಿಂದೆ ಬೇಸಿಗೆಯಲ್ಲಿ  ಇದು ಸಂಪೂರ್ಣ ಬತ್ತುವದು ನಾವು ನೋಡಿಲ್ಲ,  ಒಂದು ಪ್ರಮಾಣದಲ್ಲಿ ನೀರು ಯಾವತ್ತೂ ಹರಿಯುತ್ತಿತ್ತು. ಬೇಸಿಗೆ ಸಮಯದಲ್ಲಿ ದಾಟಸಾಲು ದಾಟಲಾಗದಷ್ಟು ನೀರು  ಕಾಣಿಸಿತು ಎಂದರೆ  ‘ಶೀಲಿಗರು ಭತ್ತದ ಗದ್ದೆಗೆ ನೀರಿಗಾಗಿ ಈ ಹೊಳೆಗೆ ಒಡ್ಡುಕಟ್ಟಿದ್ದಾರೆಂದು!’ ಹಿರಿಯರು  ಹೇಳುತ್ತಿದ್ದರು.

ಹಳ್ಳದಾಟುವ ಸ್ಥಳದಿಂದ ಸುಮಾರು ಕಿಲೋ ಮೀಟರ್ ಕೆಳಗೆ  ಶೀಲಿಗ ಜನಾಂಗದ ಜಮೀಯಿನುಗಳಿವೆ, ನೀರಾವರಿಗಾಗಿ ನಿರ್ಮಿಸಿದ ಅವರ ಒಡ್ಡುಗಳಿಂದ ಶೇಖರಣೆಯಾದ ನೀರು ದಾಟ್‌ಸಾಲಿನಲ್ಲಿ ಎರಡಡಿ ನಿಂತಿರುತ್ತಿತ್ತು. ಸುಮಾರು ಕ್ರಿ.ಶ. ೧೯೮೮ರ ಕಾಲಕ್ಕೆ ಒಡ್ಡಿನ ನೀರು ಸೈಕಲ್ ದಾಟಿಸಲು ತೊಂದರೆ ನೀಡುತ್ತದೆಂದು  ಕೆಲವರು ಸಬೂಬು ತೆಗೆದು ಶೀಲಿಗರನ್ನು ಗದರಿಸಿದ್ದರು. ಯಾವತ್ತೂ ಹೆದರಿ ನಡೆಯುವ ಈ ಜನಗಳು ನಮ್ಮ ಊರವರನ್ನು ಕಂಡಾಕ್ಷಣ ಮತ್ತೆ ಗಡಿಬಿಡಿಯಲ್ಲಿ ಮಾಯವಾಗುತ್ತಿದ್ದರು, ಜನ ಒಡ್ಡು ಒಡೆಯಲು ಹೇಳುತ್ತಾರೆ, ಬೈಯ್ಯುತ್ತಾರೆಂಬ ಭಯ ಅವರಿಗಿತ್ತು. ಪ್ರೌಢಶಾಲೆಗೆ ಹೋಗುವ ನಾವು ಹಿರಿಯರು ಕಲಿಸಿದ ಚಾಳಿಯಂತೆ ಕೆಲವೊಮ್ಮೆ ಈ ಜನಗಳಿಗೆ ಒಡ್ಡು ಒಡೆಯಲು ಆದೇಶಿಸುತ್ತಿದ್ದೆವು!.  ಕ್ರಮೇಣ  ಒಡ್ಡಿನ ಎತ್ತರ ಕೊಂಚ ತಗ್ಗಿಸಿದ ಬಳಿಕ ಓಡಾಟಕ್ಕೆ ಅನುವಾಯಿತು.

ಜಾರುಕಟ್ಟುಜಾಣ್ಮೆ

ಕಾಡಿಗೆ ಜಾನುವಾರು ಹೊಡೆದುಕೊಂಡು ಕಪ್ಪರಮನೆ ಅಡವಿಗೆ ಹೋಗಿ ಮಧ್ಯಾನ್ಹ ನೀರು ಕುಡಿಸಿ ಹಳ್ಳದ ದಡದಲ್ಲಿ ನಿಲ್ಲಿಸುತ್ತಿದ್ದರು. ‘ಈಚಲುಸೋಗೆ’ ಬಯಲು ಇದಕ್ಕೆ ಪ್ರಶಸ್ತ ಸ್ಥಳ.  ಅಲ್ಲಿನ ಬಯಲಲ್ಲಿ ಈಚಲು ಗಿಡಗಳಿದ್ದರಿಂದ ಹೀಗೆ ಕರೆಯುತ್ತಿದ್ದರು. ಅಲ್ಲಿ ಹೊಳೆಸ್ನಾನ ಮಾಡುತ್ತ, ದನಕರು ಮೈಗೆ ನೀರು ಹಾಕುವ ಸಂಭ್ರಮವಿತ್ತು. ದನಗಾಹಿಗಳ ಜತೆಗೆ ಅಡ್ಡಾಡುವಾಗ, ಜೇನು ಹುಡುಕಲು ಹೋಗುವಾಗ ಶೀಲಿಗರ ಒಡ್ಡಿನ ಸಮೀಪ ದರ್ಶನವಾಯ್ತು. ಸುಮಾರು ೧೨೦-೧೪೦ ಅಡಿ ಅಗಲ ಒಡ್ಡನ್ನು ಸ್ವತಃ ಪರಿಶ್ರಮದಿಂದ ನಿಮಿಧಸಿದ್ದರು. ಹೊಳೆಯ ಕಲ್ಲುಗಳನ್ನು ಒಡೆದು ಓರಣವಾಗಿ ಜೋಡಿಸಿ ನಿರ್ಮಿಸಿದ ಜಾರುಕಟ್ಟು  ನಮ್ಮೂರಿನ ದೊಡ್ಡ ಆಣೆಕಟ್ಟೆ. ನೈಸರ್ಗಿಕ ಕಲ್ಲುಹಾಸಿನ ಎತ್ತರ ಪ್ರದೇಶದಲ್ಲಿ ನಿರ್ಮಿಸಿದ ಒಡ್ಡು ಎಂತಹ ಮಳೆಗಾಲದಲ್ಲೂ ಒಡೆಯುತ್ತಿರಲಿಲ್ಲ! ಬಾಂದಾರವೆಂಬ ಕಿಂಡಿತಡೆ ಆಣೆಕಟ್ಟೆಯ ಈಗಿನ ಇಂಜಿನಿಯರಿಂಗ್ ವಿಧಾನ ಎಲ್ಲರಿಗೂ ಗೊತ್ತು. ಬೇಸಿಗೆಯಲ್ಲಿ ನೀರಿನ ಅಗತ್ಯವಿದ್ದಾಗ ಬಾಗಿಲು ಹಾಕಬಹುದು, ಮಳೆಗಾಲದಲ್ಲಿ ತೆರೆದಿಡಬಹುದು ಎಂದು ಸರಳವಾಗಿ ನಿರ್ಮಿಸುವಾಗ ವಿವರಿಸುತ್ತಾರೆ.

ಚಿತ್ರ-೩

‘ನೀರು ಬೇಕಾದರೆ ಬಾಗಿಲು ಹಾಕಬಹುದು, ಬೇಡವಾದರೆ ತೆರೆಯಬಹುದು’ ಎಂಬ ಮಾತು ಕೇಳಿ ಸ್ವಿಚ್ ಹಾಕಿದಾಗ ಕರೆಂಟ್ ಬಂದಷ್ಟೇ ಸರಳವೆಂದು ಭಾವಿಸಬಾರದು. ಬೇಸಿಗೆಯಲ್ಲಿ ಒಡ್ಡುಕಟ್ಟುವವರಿಗೆ ಮಳೆಗಾಲದ ಪ್ರವಾಹದ ಹರಿವು, ನೀರಿನ ಸ್ವರೂಪದ ಅಂದಾಜು ಬೇಕಾಗುತ್ತದೆ. ಅಬ್ಬರದ ಮಳೆಯಲ್ಲಿ ನೀರಿನ ಜತೆಗೆ ಮರ, ಕಸಕಡ್ಡಿಗಳು ತೇಲಿ ಬರುತ್ತವೆ. ಸಾಮಾನ್ಯವಾಗಿ ಹಳ್ಳದ ಅಂಚಿನಲ್ಲಿ ಅಡಿಕೆ, ತೆಂಗಿನ ತೋಟಗಳಿರುತ್ತವೆ. ಅಲ್ಲಿನ ಸೋಗೆ, ಕಸ ಕಡ್ಡಿಗಳೆಲ್ಲ ಪ್ರವಾಹದಲ್ಲಿ ತೇಲಿ ಕಿಂಡಿ ಆಣೆಕಟ್ಟೆ ಬಾಗಿಲುಗಳಲ್ಲಿ ಶೇಖರಣೆಯಾಗುತ್ತವೆ, ಇದ್ದಕ್ಕಿದ್ದಂತೆ ನೀರಿಗೆ ತಡೆಯಾಗುತ್ತದೆ. ಕ್ಷಣಾರ್ಧದಲ್ಲಿ ಪ್ರವಾಹದ ನೀರು ಉಕ್ಕೇರಿ ಜಮೀನು ಕೊಚ್ಚಿ ಹೋದ ಉದಾಹರಣೆಗಳಿವೆ. ಇಂತಹ ಬಾಂದಾರಗಳ ಕಂಬಗಳನ್ನು ರೈತರು ಕಿತ್ತೆಸೆದ ನಿದರ್ಶನಗಳಿವೆ. ಆದರೆ ಜಾರುಕಟ್ಟು ಗೆಲ್ಲಲು ಮುಖ್ಯಕಾರಣ ಪ್ರವಾಹದ ನೀರು ಒಡ್ಡಿನ ಮೇಲಿಂದ ಧುಮ್ಮಿಕ್ಕಿ ಸರಾಗವಾಗಿ ಮುಂದೆ ಹರಿಯುತ್ತದೆ, ಪ್ರವಾಹದಲ್ಲಿ ದೊಡ್ಡ ದೊಡ್ಡ ಮರದ ದಿಮ್ಮಿಗಳು ತೇಲಿ ಬಂದರೂ ದಾಟಿ ಹೋಗುತ್ತವೆ. ನೀರಿಗೆ ಅಡ್ಡವಾಗಿ ಒಡ್ಡು ಕಟ್ಟುವಾಗ ಮಲೆನಾಡಿನಲ್ಲಿ ಅನುಸರಿಸುವ ಈ ವಿಶಿಷ್ಟ ಕ್ರಮವನ್ನು ಶೀಲಿಗರು ಬಳಸಿದ್ದರು. ಅಗತ್ಯ ನೀರನ್ನು ತಡೆ ಹಿಡಿದು ಕಾಲುವೆ ಮುಖೇನ ಜಮೀನಿಗೆ ಒಯ್ಯುತ್ತಿದ್ದರು. ಎರಡು ಕಿಲೋ ಮೀಟರ್ ಉದ್ದದ ಕಾಲುವೆ ಕೆಲವೆಡೆ ೮-೧೦ಅಡಿ ಆಳ, ಈಗಲೂ ಇವರ ಸಾಹಸ ದರ್ಶನವನ್ನು ನದಿ ದಡದಗುಂಟ ನೋಡಬಹುದು. ಪ್ರತಿ ವರ್ಷ ಮಳೆಗಾಲ ಬಳಿಕ ಸೊಪ್ಪು, ಮಣ್ಣು ಹಾಕಿ ಚಿಕ್ಕಪುಟ್ಟ ದುರಸ್ತಿ ಕಾರ್ಯ ಮಾಡುತ್ತಿದ್ದರು. ಒಡ್ಡು ನೋಡಿ ಇವರ ಕೃಷಿ ಭೂಮಿ ನೋಡಿದರೆ ಅಚ್ಚರಿಯಾಗುತ್ತಿತ್ತು. ಇಷ್ಟೆಲ್ಲ ದೊಡ್ಡ ಒಡ್ಡುಕಟ್ಟಿ ಕೇವಲ ೫-೬ಎಕರೆ ನೀರಾವರಿ ಮಾಡಿದ್ದರು! ಗುಡ್ಡಗಾಡಿನ ಪ್ರದೇಶದಲ್ಲಿ ಸಮತಟ್ಟಾದ ನೆಲ ಕಡಿಮೆ, ಅರಣ್ಯ ಜಾಸ್ತಿ, ಅಲ್ಲಿ ಹೆಚ್ಚಿನ ಕೃಷಿ ಭೂಮಿಯೂ ಇರಲಿಲ್ಲ.  ಹೆಚ್ಚು ಕಡಿಮೆ ಸುಮಾರು ೪೫ ವರ್ಷಗಳಿಂದ ಶೀಲಿಗರ ಒಡ್ಡು  ದಬ್ಬೆಹಳ್ಳಕ್ಕೆ ಅಡ್ಡವಾಗಿ ನಿಂತು ಕೃಷಿಗೆ ನೆರವಾಗುತ್ತಿತ್ತು. ದಬ್ಬೆಹಳ್ಳ, ದಬ್ಬೆಸಾರ ಹಾಗೂ ಶೀಲಿಗರ ಒಡ್ಡುಗಳು ನಮ್ಮ ಬದುಕನ್ನು ನೀರಿನ ಸುತ್ತ  ಸೆಳೆದವು.

 

ಮರ ಮಲಗಿ ಬೇಲಿಯಾಯ್ತು!

ನಗರದಲ್ಲಿ ಮನೆ ಕಟ್ಟಲು ಕಲ್ಲು, ಉರುವಲು, ನಾಟಾಗಳು ನಮ್ಮ ಕಾಡಿನಿಂದ ಸರಬರಾಜಾಗುತ್ತಿದ್ದವು. ಮೂರು ನಾಲ್ಕು ವರ್ಷಕ್ಕೊಮ್ಮೆ ಅರಣ್ಯ ಇಲಾಖೆ ಒಣ ಮರ ಕಟಾವು ಮಾಡುತ್ತಿತ್ತು. ನಾಟಾ ಸಾಗಿಸಲು ಎಲ್ಲೆಂದರಲ್ಲಿ ರಸ್ತೆಗಳಾದವು. ಬಡ ಜನಗಳು ಕಪ್ಪರಮನೆ ಕಾಡಿನ ಜಂಬೆಓಡು (ಕಾಡು ಜಂಬೆ ಕಾಯಿಯ ಸಿಪ್ಪೆ) ಸಂಗ್ರಹಿಸಿ ಚೀಲ ತುಂಬಿ  ಉರುವಲಿಗೆಂದು ಚಕ್ಕಡಿಗಾಡಿಗಳಲ್ಲಿ  ಶಿರಸಿಗೆ ಒಯ್ದು ಮಾರುತ್ತಿದ್ದರು. ಅಲ್ಲಿನ ಜುಮ್ಮಿನ ಮರಗಳನ್ನು ಬುಡಸಹಿತ ಕಡಿದು ಕಾಯಿಕೊಯ್ದು ಹಳ್ಳಿಗನೊಬ್ಬ ಪೇಟೆಗೆ ಒಯ್ಯುವುದು ಕಲಿತ, ಮೀನಿನ ಅಡುಗೆಗೆ ಕೊಂಕಣಿಗರು ಇದನ್ನು ಸಾಂಬಾರವಾಗಿ ಬಳಸುತ್ತಿದ್ದರು. ಇಡೀ ಮರ ಮುಳ್ಳುಗಳ ಬೀಡು, ಕಾಳುಮೆಣಸಿನ ಗಾತ್ರದ ಈ ಕಾಯಿ ಮರವೇರಿ ಕೊಯ್ಯುವದಕ್ಕೆ ಸಾಧ್ಯವಿಲ್ಲ, ಬೇರೆ ದಾರಿ ಕಾಣದೇ ಸಂಗ್ರಹಕ್ಕೆ ಮರವನ್ನೇ ಕತ್ತರಿಸುತ್ತಿದ್ದರು! ಕನಿಷ್ಟ ನೂರಾರು ಮರಗಳು ಬಲಿಯಾದವು. ಕೃಷಿಕರು ಎಳೆಯ ಜುಮ್ಮಿನಗಿಡ ಕಡಿದು ಗುದ್ದಲಿ, ಕೊಡಲಿ ಕಾವು ಹಾಕಲು  ಬಳಸುತ್ತಿದ್ದರು. ಈಗ ಮರವನ್ನೇ ಕಡಿಯುವ ಮನುಷ್ಯ ಹುಟ್ಟಿದಂತಾಯಿತು. ಬಿಡಕಿಬೈಲಿನ ಹುಲಿಯಾ ಗೌಡ  ಎಂಬ ಮುದುಕ ಹಸಿ ಹುಲ್ಲು ಕೊಯ್ದು ಪೇಟೆಗೆ ಒಯ್ಯುತ್ತಿದ್ದರು. ಅವರ ಎತ್ತುಗಳಿಗೆ ಪೇಟೆಗೆ ಹೋಗುವದು ಎಷ್ಟು ರೂಢಿಯಾಗಿತ್ತೆಂದರೆ ಹುಲ್ಲಿನ ಹೊರೆ ತುಂಬಿ ಗಾಡಿ ಕಟ್ಟಿದರೆ ಸರಾಗ ನಡೆದು  ಶಿರಸಿ ಬಿಡ್ಕಿಬಯಲು ಸೇರುತ್ತಿದ್ದವು. ಎಷ್ಟೋ ಸಾರಿ ಈ ಗಾಡಿ ಮುದುಕ ಬೀಡಿ ಸೇದುತ್ತ, ಮೀನು ಖರೀದಿಸುತ್ತ  ದಾರಿಯಲ್ಲಿ ಹಿಂದಿನಿಂದ ನಡೆದು ಬರುತ್ತಿದ್ದರೆ  ಚಾಲಕನ ಹಂಗಿಲ್ಲದೇ ಗಾಡಿ ಎಳೆದು ಮನೆಯತ್ತ ಮರಳುತ್ತಿದ್ದವು.

 

ಅಡಿಕೆ ಅಟ್ಟಕ್ಕೆ ಈಚಲು ಗರಿಗಳನ್ನು ಹಾಕುವ ಪದ್ದತಿಯಿತ್ತು, ಈ ಈಚಲ ಸೋಗೆಯನ್ನು  ದಬ್ಬೆಹಳ್ಳದಂಚಿನ ಈಚಲಸೋಗೆ ಬಯಲಿನಿಂದ ತರುತ್ತಿದ್ದರು. ಗೋಬರ್ ಅನಿಲಸ್ಥಾವರ ಹಳ್ಳಿ ಪ್ರವೇಶಿಸದ ೯೦ರ ಪೂರ್ವದಲ್ಲಿ ಕಾಡಿನಿಂದ ಚಕ್ಕಡಿಗಾಡಿಗಳಲ್ಲಿ ಕಟ್ಟಿಗೆ ತರುವ ಪರಿಪಾಟವಿತ್ತು. ಕಾಡಿನಲ್ಲಿ ಮುರಿದು ಬಿದ್ದ ಒಣ ಕಟ್ಟಿಗೆ ಸಂಗ್ರಹಿಸುತ್ತಿದ್ದರು. ಪ್ರತಿ ಮನೆ ಬಚ್ಚಲಿನಲ್ಲೂ ನಿತ್ಯ ಒಂದೊಂದು ಹೆಣ ಸುಡಲು ಬೇಕಾದಷ್ಟು ಕಟ್ಟಿಗೆ ಉರಿಯುತ್ತಿತ್ತು. ಮಳೆಗಾಲದಲ್ಲಿ ಇಡೀ ದಿನ ಹೊಡತಲು ಉರಿಯಬೇಕು, ಅಲ್ಲಿ ಕಂಬಳಿ ಕೊಪ್ಪೆ ಒಣಗಿಸುತ್ತಿದ್ದರು. ಅಡಿಕೆ ಬೇಯಿಸುವದು, ಆಲೆಮನೆಯಲ್ಲಿ ಬೆಲ್ಲ ತಯಾರಿಗೆ ಕಾಡು ಕಟ್ಟಿಗೆ ಅವಲಂಬನೆ. ಕಪ್ಪರಮನೆ ಕಾಡಿನಂಚಿನಲ್ಲಿ ಕೃಷಿ ಮಾಡಿದ ಶೀಲಿಗರು ಜಮೀನಿನ ಬೇಲಿಗೆ ಮರಗಳನ್ನೇ ಕಡಿದು ಮಲಗಿಸಿ ಟೊಂಗೆಗಳನ್ನು ನಾಟಾಕ್ಕೆ ಚಾಚಿ ನಿಲ್ಲಿಸುವ ವಿಚಿತ್ರ ಪರಿಪಾಠ ಅನುಸರಿಸಿದ್ದರು. ಹೀಗಾಗಿ ಕೃಷಿ ಭೂಮಿ ಸುತ್ತ ಲಕ್ಷ್ಮಣ ರೇಖೆಯಂತೆ ಅಪ್ಪುಗೆಗೂ ಸಿಲುಕದ ದೊಡ್ಡ ದೊಡ್ಡ ಒಣ ಮರಗಳು ಯಾವತ್ತೂ ಮಲಗಿರುತ್ತಿದ್ದವು! ಇಲ್ಲಿನ ಕಾಡಲ್ಲಿ ಸರಿಯಾದ ರಸ್ತೆಯಿರಲಿಲ್ಲ, ಇಲ್ಲಿನ ಒಬ್ಬ ಬೈಸಿಕಲ್ ಯಜಮಾನ ಮುಳ್ಳು, ಜಂಬೆ ಓಡು ತಗಲಿ ಪದೇ ಪದೇ ಸೈಕಲ್ ಪಂಕ್ಚರ್ ಆಗುವುದನ್ನು ನೋಡಿ  ಬೇಜಾರಾಗಿದ್ದ, ಕೊನೆಗೆ ಪರಿಹಾರ  ಕಾಣದೇ ಟಯರ್‌ನ ಒಳಗಡೆ  ಟ್ಯೂಬಿನ ಬದಲು ಭತ್ತ ಹುಲ್ಲಿನ ಸಿಂಬೆ ಸೇರಿಸಿ ಸೈಕಲ್ ಹೊಡೆಯುತ್ತಿದ್ದ ದಿನಗಳಿವೆ!.

 

ಹೊನ್ನೆ ಸೊಪ್ಪಿನ ಹೊಸ ರುಚಿ!

ಒಂದೊಂದು ಮನೆಯವರದೂ ಗೋಶಾಲೆ ದರ್ಬಾರು! ಪ್ರತಿಯೊಬ್ಬರೂ ೨೦-೨೫ ಜಾನುವಾರು ಸಾಕುತ್ತಿದ್ದರು. ಮಳೆಗಾಲದಲ್ಲಿ ಹೂಟಿ ಎತ್ತುಗಳು ಪರ ಊರುಗಳಿಂದ ಮೇವಿಗಾಗಿ ಬರುತ್ತಿದ್ದವು. ಕಾಡಿನ ಮೇವು ಅವಲಂಬಿಸಿ ಬದುಕಿದ್ದ ನಮ್ಮೂರ ಹಸುಗಳು ಹಸುರು ಕಂಡಲ್ಲಿ ಯಥೇಚ್ಚ ನುಗ್ಗುತ್ತಿದ್ದವು. ಈ ನಾಟಿ ಜಾನುವಾರುಗಳ ಉಪಟಳ ತಡೆಗೆ ಶೀಲಿಗರಂತೆ ಮರದ ಬೇಲಿಗಳೇ ಲಾಯಕ್ಕೆನ್ನುತ್ತಿದ್ದರು ! ‘ಕೂಡುಕೊಟ್ಟಿಗೆ’ ಪರಿಪಾಠವಿತ್ತು. ಸಂಜೆ ದೊಡ್ಡಿಗೆ ಮರಳಿದ ಕೆಲವು ದನಕರುಗಳನ್ನು ಮಾತ್ರ ಹಗ್ಗದಿಂದ ಕಟ್ಟಿ ನಿಲ್ಲಿಸುವದು, ಇನ್ನುಳಿದವನ್ನು ಕುರಿಗಳಂತೆ ತರುಬಿ ನಿಲ್ಲಿಸುವ ವಿಧಾನ. ‘ನಿಮ್ಮಲ್ಲಿ ಎಷ್ಟು ದನಕರು ಇದೆ?’ ತಟ್ಟನೆ ಯಾರಿಗೂ ಕೇಳಿದರೆ ಉತ್ತರಿಸಲು ಸಾಧ್ಯವಿರಲಿಲ್ಲ. ಕಾಡು ಮೇವು ಅವಲಂಬಿಸಿ ಸಾಕಣೆ ನಡೆಯುತ್ತಿದ್ದರಿಂದ ಕೃಷಿಕರಿಗೆ ಸಾಕುವದು ಹೊರೆಯೆನಿಸಲಿಲ್ಲ.ಮಳೆಗಾಲದಲ್ಲಿ ದೂರದ ಊರುಗಳಿಂದ ಹೂಟಿ ಎತ್ತುಗಳು ಮೇವಿಗಾಗಿ ಬರುತ್ತಿದ್ದವು. ಕಾಡಲ್ಲಿ ಮೇವು ತಿಂದು, ಅಲ್ಲಿಯೇ ಸಗಣಿ ಹಾಕಿ ದೊಡ್ಡಿಗೆ ಮರಳುವ ಇವುಗಳಿಂದ ಗೊಬ್ಬರ, ಹೈನಿನ ಯಾವ ಹೆಚ್ಚಿನ ಪ್ರಯೋಜನವಿರಲಿಲ್ಲ. ಹಬ್ಬಹರಿದಿನಗಳಲ್ಲಿ ಕಡವು ಕಜ್ಜಾಯಕ್ಕೆ ತುಪ್ಪ ಬೇಕು, ಮಕ್ಕಳಿರುವ ಮನೆಯಲ್ಲಿ ನಿತ್ಯ ಹಾಲು, ಮೊಸರು, ಮಜ್ಜಿಗೆ ಬೇಕು ಎಂಬ ಬಯಕೆಯಿತ್ತು. ಈಗಿನಂತೆ ಹಾಲಿನ ಡೇರಿಗಳಿರಲಿಲ್ಲ. ಹಸಿಸೊಪ್ಪು, ತೆರಕು, ಕರಡಗಳನ್ನು ದೊಡ್ಡಿಗೆ ಹಾಸಿ ಕೃಷಿಗೆ ಗೊಬ್ಬರ ತಯಾರಿಸುತ್ತಿದ್ದರು. ಗೊಬ್ಬರಕ್ಕಾಗಿ ದನಸಾಕಬೇಕೆಂಬ ಉದ್ದೇಶ  ಎಲ್ಲರಲ್ಲಿ ಎದ್ದು ಕಾಣುತ್ತಿತ್ತು, ಆದರೆ ಸಾಕಿದ ದನಕರುಗಳಿಂದ ಸಮರ್ಥವಾಗಿ ಗೊಬ್ಬರ ಪಡೆಯಲು ಮೇವಿಗೆ ಕಾಡಿಗೆ ಬಿಡುತ್ತಿರುವದರಿಂದ ಸಾಧ್ಯವಿರಲಿಲ್ಲ.

 

ಚಿತ್ರ-೪

ದನ ಕಾಯುವವರು ಕಾಡು, ನದಿದಂಡೆಯಲ್ಲಿ ಬಿದ್ದ ಸಗಣಿ ಸಂಗ್ರಹಿಸಿ ಹೊಳೆಯಂಚಿನಲ್ಲಿ ಗೊಬ್ಬರ ಮಾಡಿ ಮಾರುತ್ತಿದ್ದರು. ಜಾನುವಾರು ಸಾಕಿದ ಕೃಷಿಕರು ಪೈಪೋಟಿಯಲ್ಲಿ ಇವನ್ನು ಖರೀದಿಸುತ್ತಿದ್ದರು. ಇದು ದನಕಾಯುವವರ  ಹೆಚ್ಚುವರಿ ಆದಾಯ. ದನಗಾಹಿಗಳು ನಿತ್ಯ ಸಾಯಂಕಾಲ ಜಾನುವಾರುಗಳೊಂದಿಗೆ ಮರಳುವಾಗ ಹುಲ್ಲುಹೊರೆ, ಬಿದಿರಿನ ಗಳು, ಏಣಿ, ಗುದ್ದಲಿಕಾವು, ಕೂಗಲಬಳ್ಳಿ ಬುಟ್ಟಿ ಮಾಡಿ ತರುತ್ತಿದ್ದರು. ದನಕಾಯುವ ಕೆಲಸ ಹುಡುಗರ ಪಾಳಿಯಾದಾಗ ಕೈಯಲ್ಲಿ ಕೊಡಲಿಯಿರುತ್ತಿತ್ತು. ಹೊನ್ನೆ, ಹುನಾಲು, ಜಂಬೆ ಮುಂತಾದ ಮರಗಳಲ್ಲಿ ಮಿಸರಿಜೇನು  ತೆಗೆಯುವದು ಈಗ ಉಮೇದಿ ಕೆಲಸ. ನಾಲ್ಕು ಚಮಚೆ ಜೇನು ಸಿಗದಿದ್ದ ಈ ಮಿಸರಿ ತೆಗೆಯಲು ದೊಡ್ಡ ದೊಡ್ಡ ಮರ, ಟೊಂಗೆಗಳನ್ನು ಕಡಿದು ಉರುಳಿಸುತ್ತಿದ್ದರು. ಮಿಸರಿ ತೆಗೆಯುವ ವೇಳೆಗೆ ಜಾನುವಾರುಗಳು ಕಣ್ತಪ್ಪಿಸಿ ಕೃಷಿ ಭೂಮಿಗೆ ನುಗ್ಗುತ್ತಿದ್ದವು,  ಆಗ ಹಿರಿಯರು ವಿಪರೀತ ಗದರಿಸುತ್ತಿದ್ದರು. ಜಾನುವಾರು ಇಂತಹ ಸಮಯದಲ್ಲಿ  ದಿಕ್ಕಾಪಾಲಾಗಿ ಓಡದಿರಲೆಂದು ಕಾಡು ಕಣಗಿಲು, ಹೊನ್ನೆ ಸೊಪ್ಪು ಕಡಿದು ಮರಗಳ ಸುತ್ತ ತರುಬುತ್ತಿದ್ದರು. ಹುಲ್ಲು ಬಿಟ್ಟು ಮರದ ಸೊಪ್ಪಿನ ಹೊಸ ರುಚಿ ಅನುಭವಿಸಿದ ದನಕರುಗಳು ಕೊಡಲಿ ಹಿಡಿದು ಮರ ಏರಿದರೆ ಹುಲ್ಲು ಮೇಯುವದು ಮರೆತು ಮರದ ಸುತ್ತಲೂ ಜಮಾಯಿಸುತ್ತಿದ್ದ ದ್ರಶ್ಯ ಈಗಲೂ ಕಣ್ಣಿಗೆಕಟ್ಟಿದಂತಿದೆ. ದನಕರುಗಳಿಗೆ  ಹೊನ್ನೆಸೊಪ್ಪು ತಿನ್ನಿಸಿದ್ದರೆ ಅವುಗಳ ಹಲ್ಲು ಹುಳಿಯಾಗಿ  ಆ ದಿನಗಳಲ್ಲಿ ಭತ್ತದ ಹುಲ್ಲು, ಕರಡ ತಿನ್ನಲು ಸಾಧ್ಯವಾಗುತ್ತಿರಲಿಲ್ಲ. ಸಾಯಂಕಾಲ ದೊಡ್ಡಿಗೆ ಬಂದ ದನಕರುಗಳು ಸಾಮೂಹಿಕವಾಗಿ ಸತ್ಯಾಗ್ರಹ ಮಾಡಿದಂತೆ ಹುಲ್ಲು ತಿನ್ನದೇ ನಿಲ್ಲುತ್ತಿದ್ದವು, ಇದನ್ನು ಗಮನಿಸಿದ ಹಿರಿಯರು ದನಕಾಯುವವ ಇಂದು ಹೊನ್ನೇ ಸೊಪ್ಪು ಕಡಿದು ಹಾಕಿದ್ದಾನೆಂದು ಪತ್ತೆ ಹಚ್ಚುತ್ತಿದ್ದರು. ದನ ಮೇಯಿಸುತ್ತಿದ್ದ ಗುಡ್ಡೆಗಳಲ್ಲಿ ಹೊನ್ನೆ ಮರಗಳು ಹೇರಳವಾಗಿದ್ದವು, ಇಂತಹ ಜಾಗವನ್ನು ‘ಹೊನ್ನೆ ಮರದ ಅಣೆ’ ಎಂದು ವಾಡಿಕೆಯಲ್ಲಿ ಕರೆಯುತ್ತಿದ್ದರು. ನಿರಂತರ ಸೊಪ್ಪು ಕಡಿತಕ್ಕೆ  ಹೊನ್ನೆ ಮರಗಳು  ಒಣಗಿ ಬೋಳಾಗುತ್ತಿದ್ದವು.

 

ನಮ್ಮ ಊರಿನ ಗಿರಿಯಾ ಗೌಡರು ಕ್ರಿ,ಶ ೧೯೮೫-೮೭ರ ಸುಮಾರಿಗೆ ಆಡು ಸಾಕಲು ಆರಂಭಿಸಿದ್ದರು. ಆಡಿಗೂ, ಕುರಿಗೂ ವ್ಯತ್ಯಾಸ ತಿಳಿಯದ ಮಲೆನಾಡಿನ ನಮ್ಮೂರ ಜನ ಇವನ್ನು ಕುರಿಯೆಂದು ಕರೆಯುತ್ತಿದ್ದರು!  ಆಗಷ್ಟೇ ಶಾಲೆಬಿಟ್ಟ ಅನಂತ ಗೌಡ ಆಡು ಕಾಯಲು ಉಮೇದಿಯಲ್ಲಿ ಹೊರಟರು. ಗೊಣಗಲು ಮುಳ್ಳುಗಳೆಂದರೆ  ಇವುಗಳಿಗೆ ಇಷ್ಟ. ಬಹುತೇಕ ಗುಡ್ಡಗಳು ಮುಳ್ಳಿನ ಬೀಡು. ಇವನ್ನು ಮೇಯುತ್ತ ಆಡಿನ ಹಿಂಡು ಬೆಳೆಯಿತು. ರಜಾ ದಿನಗಳಲ್ಲಿ  ಅವನ ಜತೆ ಹೋಗಿ ಬಿದಿರಿನ ಅಂಡೆ ಪಟಪಟ ಬಾರಿಸುತ್ತ ಗುಡ್ಡದಲ್ಲಿ ಯಕ್ಷಗಾನ ಕುಣಿಯುತ್ತಿದ್ದೆವು.  ಕೈ ಕೊಡಲಿ ಹಿಡಿದು ಹೋಗುತ್ತಿದ್ದ ಅನಂತ ಮಿಸರಿ ಜೇನು ತೆಗೆಯುತ್ತಿದ್ದನು, ಜೇನು ಸವಿದು ಮೇಣ ಸಂಗ್ರಹಿಸುತ್ತಿದ್ದೆವು. ಇವನ್ನು ಸೋರುವ ಪಾತ್ರೆಯ ರಂದ್ರ ಮುಚ್ಚಲು, ವಾಟೆ ಗಳದ ಕೊಳಲು ತಯಾರಿಗೆ ಬಳಸುತ್ತಿದ್ದೆವು. ಮಿಸರಿ ಮೇಣ ಬಳಸಿ  ಯಕ್ಷಗಾನದ ಮೀಸೆ, ಗಡ್ಡ ಮಾಡಬಹುದು ಎಂಬ ಹೊಸ ಸಂಶೋಧನೆ ಅನಂತನದು!. ಗಂಡು  ಆಡಿನ  ಕಪ್ಪು ಕೂದಲು ಕತ್ತರಿಸಿ ಅದನ್ನು ಮಿಸರಿ ಮೇಣಕ್ಕೆ ಅಂಟಿಸಿ ಮೀಸೆ, ಗಡ್ಡ ತಯಾರಿಸುವ ಪ್ರಯತ್ನ ಆರಂಭ! ಚಳಿಗೆ ಮೇಣ ಗಟ್ಟಿಯಾಯಿತೆಂದು ಕರಗಿಸಲು ಸ್ನಾನದ ಒಲೆಯಂಚಿನಲ್ಲಿ ಮೇಣ ಇಟ್ಟು ಮರೆತಿದ್ದನು. ಬೆಂಕಿಯ ಬಿಸಿಗೆ ಬೇಗ ಕರಗಿ ಮೇಣ ಒಲೆ ಮಣ್ಣಿಗೆ ಮೆತ್ತಿಕೊಂಡಿತು, ಹುಡುಗುತನದಲ್ಲಿ ಮೀಸೆ, ಗಡ್ಡ ಪಡೆಯುವ ನಮ್ಮ ಕನಸು ಭಗ್ನವಾಯಿತು !

 

ಜೇನುಮರದ ಗುಡ್ಡಕ್ಕೆ  ಸಾಗವಾನಿ ಬಂ(ಭೂ)ತಪ್ಪ !

‘ಟೆಟ್ರಾಮೆಲಸ್ ನ್ಯೂಡಿಪ್ಲೋರಾ’ ಮರಕ್ಕೆ ಹಳ್ಳಿಗರು ಜೇನುಮರ, ಪಡೆಮರ, ಸತ್ನಾಲ್‌ಮರ ಎಂದು ಕರೆಯುತ್ತಾರೆ. ಹೆಜ್ಜೇನುಗಳು ಮರದ ಟೊಂಗೆಗಳಿಗೆ ನೇತು ಬೀಳುತ್ತವೆ. ದೈತ್ಯಗಾತ್ರದಲ್ಲಿ ಬೆಳೆಯುವ ಇದು ಕಾಡಿನ ಇನ್ನುಳಿದ ಜಾತಿಗಳಿಗಿಂತ ಭಿನ್ನ, ಮೃದು ಜಾತಿಯ ಮರ, ಇಮಾರತುಗಳಿಗೆ ಬಳಸುವದಿಲ್ಲ. ಒಂದೇ ಮರಕ್ಕೆ  ಉತ್ತರ ಕನ್ನಡದ ಯಲ್ಲಾಪುರ ಕಾಡಿನಲ್ಲಿ ೫೦೦ಕ್ಕೂ ಹೆಚ್ಚು ಜೇನುಗಳು ಬಂದ ದಾಖಲೆಯಿದೆ. ಜೇನಿಗೆ ಆಶ್ರಯ ನೀಡುವ ವಿಶೇಷ ಗುಣದಿಂದ ಮರವನ್ನು ಹಳ್ಳಿಗರು ಪೂಜ್ಯ ಭಾವನೆಯಿಂದ ನೋಡುತ್ತಾರೆ. ನಮ್ಮ ಊರಿನ ಅತ್ಯಂತ  ಎತ್ತರದ ಗುಡ್ಡ ದಬ್ಬೆಹಳ್ಳದ ‘ಜೇನುಮರದ ಅಣೆ’. ಏಣು, ಚೂಪಾಗಿರುವ ಪ್ರದೇಶ ಎಂಬ ಹಿನ್ನಲೆಯಲ್ಲಿ ಕಡಿದಾದ ಗುಡ್ಡಕ್ಕೆ ವಾಡಿಕೆಯ ಹೆಸರು ಇದು. ಕ್ರಿ.ಶ. ೧೯೬೫-೭೦ರ ಅವಧಿಯಲ್ಲಿ ಸುಮಾರು ೨೦೦ ಎಕರೆ ಪ್ರದೇಶದ ಕಾಡು ಕಡಿದು ತೇಗ ಬೆಳೆಸಲು ಅರಣ್ಯ ಇಲಾಖೆ ಮುಂದಾಯಿತು. ನೈಸರ್ಗಿಕ ಮರಗಳನ್ನು ಕಟಾವು ಮಾಡಿ ಸಾಲಿನಲ್ಲಿ ತೇಗ ಬೆಳೆಸುವ ಕೆಲಸ ಆರಂಭವಾಯಿತು. ಸಾಲಿನಿಂದ ಸಾಲು ನಿಖರವಾಗಿರಲೆಂದು ಬಿದಿರಿನ ಗೂಟಗಳನ್ನು ಇಡೀ ಗುಡ್ಡದಲ್ಲಿ ಸಸಿ ನಾಟಿಗೆ ಮುನ್ನ ಗುರುತಿಗಾಗಿ ಊರಲಾಗಿತ್ತಂತೆ! ಆಗ ಜೇನುಮರವನ್ನು ಕಡಿಯದೇ ಪೂಜ್ಯ ಭಾವನೆಯಿಂದ  ಉಳಿಸಿದ್ದರು, ಆದರೆ ಸುತ್ತಲಿನ ಮರಗಳನ್ನು ಕಡಿದಿದ್ದರಿಂದ ಗಾಳಿ ಪ್ರಹಾರಕ್ಕೆ  ಒಂಟಿ ಜೇನು ಮರವೂ ವರ್ಷಗಳಲ್ಲಿ ಮುರಿದು ಬಿತ್ತು. ಗುಡ್ಡಕ್ಕೆ ಈಗ ಜೇನುಮರದ ಅಣೆಯೆಂಬ ಹೆಸರಿದೆಯಾದರೂ ಅಲ್ಲಿ ಜೇನುಮರವಿಲ್ಲ. ಆದರೆ ಈಗಲೂ ನಮ್ಮೂರಿನ ಒಕ್ಕಲ ಮಕ್ಕಳು ಮರ ನೆನಪಿಸಿಕೊಳ್ಳುತ್ತಾರೆ, ಮಳೆಗಾಲ ಆರಂಭದಲ್ಲಿ ಗಡಿಹಬ್ಬ ಮಾಡುವಾಗ ಜೇನುಮರದ ಭೂತಪ್ಪನಿಗೆ ಕೋಳಿ ಕಡಿಯುವ ಪದ್ದತಿಯಿದೆ!.

 

ಚಿತ್ರ-೫

 

ಗುಡ್ಡಗಳಲ್ಲಿ  ಈಗ ಸಾಗವಾನಿ ಮರಗಳು ತುಂಬಿವೆ. ಇದನ್ನು ಹಳ್ಳಿಗರು ಸಾಗವಾನಿ ಕುಂಬ್ರಿ ಎನ್ನುತ್ತಾರೆ. ರಾಗಿ ಕುಂಬ್ರಿ, ಭತ್ತದ ಕುಂಬ್ರಿ, ಮೊಗೆಕುಂಬ್ರಿಯಂತೆ  ಸಾಗವಾನಿ ನೆಡುತೋಪನ್ನು ಕುಮರಿಯಾಗಿ ಕಂಡಿದ್ದಾರೆ. ಲಾಗಾಯ್ತಿನಿಂದಲೂ ಕಾಡಿನ ನೈಸರ್ಗಿಕ ಗಿಡ ಮರ ಕಡಿದು ಬೆಂಕಿ ಹಾಕಿದ ನೆಲದ ಬೂದಿಯಲ್ಲಿ  ಆಹಾರ ಧಾನ್ಯ ಬೆಳೆಯುವ ಪರಂಪರೆ ಅರಣ್ಯ ಜಿಲ್ಲೆಗಳಲ್ಲಿತ್ತು. ಹಕ್ಲು, ಕುಮರಿ, ಕುಮರಿಗುಡ್ಡೆ ಹೆಸರುಗಳಿಂದ ಈಗಲೂ ಇಂತಹ ಕೃಷಿ ನೆಲೆ ಗುರುತಿಸಲಾಗುತ್ತದೆ. ಅರಣ್ಯ ಇಲಾಖೆ ಸಾಗವಾನಿ ಬೆಳೆಸಲು ಬೆಂಕಿ ಹಾಕಿದ್ದು, ಬಳಿಕ ಸಸಿ ನೆಟ್ಟಿದ್ದು ಜನಪದರಿಗೆ ಸರಕಾರಿ ಕುಮರಿಯಂತೆ ಕಂಡಿರಬಹುದು.  ಸಾಗವಾನಿ ಸಸಿಗಳ ನಡುವೆ ಆಗ ಕೆಲವು ನೀಲಗಿರಿ ಸಸಿಗಳು ನಮ್ಮೂರ ಗುಡ್ಡ ಏರಿದವು. ಎಲೆಯ ವಿಶಿಷ್ಟ ವಾಸನೆ ಇಷ್ಟವಾಯಿತು. ಆದರೆ ಪ್ರೌಢ ಶಾಲೆಗೆ ಹೋಗುವ ಸಂದರ್ಭದಲ್ಲಿ ನಮಗೆ ನೀಲಗಿರಿಯ ಇನ್ನಷ್ಟು  ಪರಿಚಯವಾಯಿತು. ಬಾಳೆಗದ್ದೆ ಅರಣ್ಯ ಕ್ಷೇತ್ರದಲ್ಲಿ ನೀಲಗಿರಿ ನೆಡುತೋಪು ಇತ್ತು. ಇದು ಕಳಮೆಂದ ಶಿರಸಿಗೆ ಹೋಗುವ ರಸ್ತೆಯಲ್ಲಿ  ಸುಮಾರು ಒಂದೂವರೆ ಕಿಲೋ ಮೀಟರ್ ಅಕ್ಕಪಕ್ಕ ನೀಲಗಿರಿ ಸಾಮ್ರಾಜ್ಯ. ನೇರಕ್ಕೆ ಬೆಳೆದ ಮರಗಳನ್ನು ಬಗ್ಗಿಸಿ ಆಗ ನೀಲಗಿರಿ ಸೊಪ್ಪು ಸಂಗ್ರಹಿಸಿ ಏಣ್ಣೆ ತಯಾರಿಸುವ ಕೆಲಸ ನಡೆಯುತ್ತಿತ್ತು. ಎಲೆಗಳನ್ನು ಕುದಿಸಿ ಭಟ್ಟಿ ಇಳಿಸುವಲ್ಲಿ ೧೫-೨೦ ಜನ ದುಡಿಯುತ್ತಿದ್ದರು. ಸುಮಾರು ಕ್ರಿ.ಶ. ೧೯೮೭ರ ಕಾಲಕ್ಕೆ ನೆಡುತೋಪಿನ ಮರಗಳನ್ನು ಸಂಪೂರ್ಣ ಕಡಿದು  ಮರಗಳ ತೊಗಟೆ ತೆಗೆದು ಲಾರಿಯಲ್ಲಿ ಸಾಗಿಸಿದರು. ನೆಡುತೋಪಿನ ನೆಲದಲ್ಲಿ ಉಳಿದ ಸೊಪ್ಪು, ಟೊಂಗೆ, ತೊಗಟೆಗಳಿಗೆ ಬೆಂಕಿ ಹಚ್ಚಿದರು. ಸುಮಾರು ಒಂದು ವಾರಕಾಲ ರಸ್ತೆಯಲ್ಲಿ ಹೋಗುವವರು ದಟ್ಟ ನೀಲಗಿರಿ ಹೊಗೆಯಲ್ಲಿ ಹೋಗಬೇಕಿತ್ತು. ಪರಿಣಾಮ ದಾರಿಯಲ್ಲಿ ಶಾಲೆಗೆ ಹೋಗುವ ಮಕ್ಕಳಿಗೆಲ್ಲ ಒಮ್ಮೆಗೆ ಥಂಡಿಜ್ವರ ತಗಲಿತ್ತು. ನಂತರ ಈ ಜಾಗದಲ್ಲಿ ಗಾಳಿ ಗಿಡಗಳ ನೆಡುತೋಪು ಮಾಡಿದರು, ಇನ್ನುಳಿದ ೫-೬ ಎಕರೆಯಲ್ಲಿ ಶ್ರೀಗಂಧ ನೆಟ್ಟರು! ಬಹುತೇಕ ಗಿಡಗಳು  ಸತ್ತು ಹೋದವು, ಉಳಿದು ಬೆಳೆದವನ್ನು ರಕ್ಷಿಸಲು ಇಲಾಖೆಗೆ ಸಾಧ್ಯವಾಗಲಿಲ್ಲ. ಈಗಂತೂ ಎಲ್ಲೆಡೆ ಶ್ರೀಗಂಧದ ಪುನರುತ್ಪತ್ತಿ  ಬಹಳ ಚೆನ್ನಾಗಿದೆ, ಕಾಯುವವರ ಶಕ್ತಿ ಬಹಳ ಕಳೆಗುಂದಿದೆ.

 

ಭಟ್ಟ ಸುಟ್ಟರೂ ಜನಿವಾರ ಸುಡಲಿಲ್ಲ!

ಕಾಡಲ್ಲಿ ಜಾನುವಾರು ಮೇಯಿಸುತ್ತಿದ್ದವರಿಗೆ ಸಾಗುವಾನಿ ಕುಂಬ್ರಿ ನಿಧಾನಕ್ಕೆ ಅಡಚಣೆ ತಂದೊಡ್ಡಿತು. ಎಳೆ ಸಸಿಗಳನ್ನು ದನಕರು ನಾಶಮಾಡುತ್ತವೆಂದು ಫಾರೆಸ್ಟ್ ಗಾರ್ಡಗಳು ತಗಾದೆ ತೆಗೆದರು. ಕಪ್ಪರಮನೆ ಅಡವಿ, ಈಚಲಸೋಗೆ ಬಯಲಿನಲ್ಲಿ ಅಡ್ಡಾಡುತ್ತಿದ್ದವರಿಗೆ ನಿಧಾನಕ್ಕೆ ತಡೆ ಬಿತ್ತು. ಜಾನುವಾರು ಮೇವಿಗೆ ಏನುಮಾಡುವದು? ಸಮಸ್ಯೆ ಎದುರಾಯಿತು. ಭತ್ತದ ಗದ್ದೆ, ಅಡಿಕೆ ತೋಟ, ಸೊಪ್ಪಿನಬೆಟ್ಟ ಭೂಮಿಗೆ ಹೊಂದಿಕೊಂಡು ಮೈನರ್ ಜಂಗಲ್ಲುಗಳಿದ್ದವು. ಇಲ್ಲಿ ಹೇಳುವವರು ಕೇಳುವರು ಯಾರೂ ಇರಲಿಲ್ಲ. ಅರಣ್ಯ ಇಲಾಖೆಗೆ ಕಾಡು ಕಡಿದು ತೇಗ ನೆಡುವ ವಿಧಾನ ತಿಳಿದಿತ್ತೆ ಹೊರತು ಅರಣ್ಯವೇ ಇಲ್ಲದ  ಇಂತಹ ಬೋಳುಗುಡ್ಡಗಳಲ್ಲಿ ಸಸಿ ಬೆಳೆಸುವ  ಆದ್ಯತೆ  ಆಗ ಇರಲಿಲ್ಲ.  ಅಲ್ಲೊಂದು ಇಲ್ಲೊಂದು ಹುನಾಲು, ಮತ್ತಿ, ನೇರಲೆ, ಹೊನ್ನೆ, ಅಣಲೆ ಮರಗಳಿದ್ದವು. ಕಾರೆ, ಗೊಣಗಲು ಮುಳ್ಳು ಕಂಟಿಗಳು ಬೆಳೆಯುತ್ತಿದ್ದವು. ತಮಗೆ ಅನುಕೂಲವಾದ ಜಾಗದಲ್ಲಿ ಕೃಷಿಕರು ಮುಳ್ಳು ಕಂಟಿಗಳನ್ನು ಕಡಿದು ಅದನ್ನೇ ಬೇಲಿಯಾಗಿಸಿ ಬೇಣ ಮಾಡಿದರು. ‘ಹುಲ್ಲಿನ ಬೇಣ’ ಎಂದು ಕರೆಯಲ್ಪಡುವ ಈ ಜಾಗ ಸರಕಾರದ್ದಾಗಿತ್ತು. ಮಳೆಗಾಲದಲ್ಲಿ ಮಧ್ಯಾನ್ಹ ಮೂರು ಗಂಟೆಯವರೆಗೆ ಉಳುಮೆ ಮಾಡಿ  ಬಳಿಕ ಹೂಟಿ ಎತ್ತು ಮೇವಿಗೆ ಹೋಗಬೇಕು. ಕೇವಲ ಎರಡು ಮೂರು ತಾಸಿನಲ್ಲಿ  ಹೂಟಿ ಎತ್ತಿನ ಹೊಟ್ಟೆ ತುಂಬಬೇಕು. ಇದಕ್ಕೆ  ಹಸುರು ಮೇವಿಗೆ ಬೇಣಗಳಲ್ಲಿ ಎತ್ತುಗಳನ್ನು ಮೇಯಿಸುತ್ತಿದ್ದರು. ಯಾರು ಎಲ್ಲಿಯವರೆಗೆ ಬೇಲಿ ಹಾಕಿದ್ದಾರೋ ಅಲ್ಲಿಯವರೆಗೆ ಅವರ ಬೇಣ ಎಂಬ ಗಡಿ ವಾಡಿಕೆಗೆ ಬಂದಿತು. ಮಳೆಗಾಲಕ್ಕೆ ಮುನ್ನ ಬೇಲಿ ದುರಸ್ತಿ,  ಗದ್ದೆನಾಟಿ ಕೆಲಸ ಮುಗಿದು ಆಗಸ್ಟ್-ಸೆಪ್ಟೆಂಬರ್ ಕಾಲಕ್ಕೆ ಬೇಣದ ಮುಳ್ಳು ಕೀಳುವ ಕೆಲಸ ನಡೆಯುತ್ತಿದ್ದವು.

 

 

ಚಿತ್ರ-೬

 

ಬೇಣದಲ್ಲಿ ಸೊಪ್ಪು ಕಡಿಯುವಾಗ ಅಡ್ಡವಾಗಿ ನೆಲಕ್ಕೆ ಬಾಗಿದ ಟೊಂಗೆ ಮಾತ್ರ ಕಡಿಯಬೇಕು, ನೇರಕ್ಕೆ ಬೆಳೆಯಬಹುದಾದ ಕಾಂಡ ಕಡಿಯಬಾರದು ಎಂದು ಹಿರಿಯರು ಕಡಿತಕ್ಕೆ ನಿಯಂತ್ರಣ ಹೇರಿದರು. ಜಾನುವಾರು ಮೇವಿನ ಒತ್ತಡದಿಂದ ಕುರುಚಲಾಗಿದ್ದ ಮತ್ತಿ, ಹುನಾಲು, ಕವಲು, ನೇರಲು, ನೆಲ್ಲಿ, ಅಣಲೆ ಗಿಡಗಳು ರಕ್ಷಣೆಯಿಂದ ಇಮ್ಮಡಿ ಉತ್ಸಾಹದಲ್ಲಿ ಬೆಳೆದವು. ಮಳೆಗಾಲದಲ್ಲಿ ಹಸುರುಸೊಪ್ಪು, ಬಳಿಕ ಕರಡ(ಹುಲ್ಲು)ಪಡೆಯುವ ಪ್ರದೇಶವಾಗಿ ಬದಲಾದವು. ಮೇವಿಗೆ ಯೋಗ್ಯವಾದ ಹುಲ್ಲು ಬೆಳೆಯಲು ಬೇಣಕ್ಕೆ ಬೆಂಕಿ ಹಾಕುವದು ಪದ್ದತಿ. ಕರಡ ಕಟಾವಿನ ಬಳಿಕ ಎಪ್ರಿಲ್-ಮೇ ತಿಂಗಳ ಸಾಯಂಕಾಲ ಬೇಣ ಯಜ್ಞಕ್ಕೆ ಚಿಕ್ಕಮಕ್ಕಳಾದ ನಾವೂ ಓಡುತ್ತಿದ್ದೆವು. ೧೦-೨೦ಅಡಿಯೆತ್ತರ ಬೆಂಕಿಯ ಧಗಧಗ ಉರಿ, ಚಟಪಟ ಸಪ್ಪಳ, ಕ್ರಿಮಿಕೀಟಗಳ ಹಾರಾಟ, ಅವುಗಳನ್ನು ಹಿಡಿಯಲು ಹೊಗೆಯಲ್ಲಿ ಹಾರುವ ಪಕ್ಷಿಗಳನ್ನು ನೋಡುವ ಖುಷಿ ನಮಗಿತ್ತು. ‘ಬೆಂಕಿ ಹಾಕದಿದ್ದರೆ ಕಹಿಗಡ್ಡೆ ಎಂಬ ಹುಲ್ಲು ಬೆಳೆಯುತ್ತದೆ, ಅದನ್ನು ದನಕರು ತಿನ್ನುವದಿಲ್ಲ’ ಎಂಬ ಮಾತನ್ನು ಹಿರಿಯರು ವಿವರಿಸುತ್ತಿದ್ದರು. ‘ಭಟ್ಟ ಸುಟ್ಟರೂ ಭಟ್ಟನ ಜನಿವಾರ ಸುಡುವದಿಲ್ಲ! ಹಾಗೆಂದರೆ ಏನು?’ ಬಹುತೇಕ ಎಲ್ಲೆಡೆ ಒಗಟು ಕೇಳುತ್ತಿದ್ದರು. ‘ಬೇಣಕ್ಕೆ ಬಿದ್ದ ಬೆಂಕಿ’ ಎಂಬುದು ಇದಕ್ಕೆ ಉತ್ತರ! ಹುಲ್ಲಿನ ಬೇಣಕ್ಕೆ ಬೆಂಕಿ ಹಾಕಿದಾಗ ಅಲ್ಲಿನ ಎಲ್ಲ ಭಾಗ ಕರಕಲಾಗಿದ್ದರೂ ಜನ ಓಡಾಡುತ್ತಿದ್ದ ಕಾಲುದಾರಿ ಎದ್ದು ಕಾಣುತ್ತಿತ್ತು. ಬೆಟ್ಟದ ಕಾಲುದಾರಿಯನ್ನು ಭಟ್ಟನ ಜನಿವಾರವಾಗಿಸಿ ಸೊಗಸಾದ ಒಗಟು ಹಣೆದಿದ್ದರು. ಇದು ಬೇಣಕ್ಕೆ ಬೆಂಕಿ ಹಾಕಲು ಪಳಗಿದ ಮಲೆನಾಡಿನವರಿಗೆ ಮಾತ್ರ ಅರ್ಥವಾಗುತ್ತಿತ್ತು.

 

ಬಾಯ್ಬೇಲಿಯಲ್ಲಿ ಮರ ಸಮೃದ್ಧಿ

ಹುಲ್ಲಿಗಾಗಿ ಬೆಂಕಿ ಹಾಕುತ್ತ, ಸೊಪ್ಪಿಗಾಗಿ ಗಿಡದ ಟೊಂಗೆ ಕಡಿಯುತ್ತಿದ್ದ ಬೇಣ ರೈತರ ಸುಪರ್ಧಿಯಲ್ಲಿ  ಬೆಳೆಯಿತು. ಗಿಡ ಬೆಳೆದಂತೆ ಹುಲ್ಲು ಬೆಳೆಯುವ ಪ್ರಮಾಣ ಕಡಿಮೆಯಾಯಿತು. ಕಳೆದ ಕ್ರಿ.ಶ, ೧೯೯೮ರ ಬಳಿಕವಂತೂ ತೆರಕು ಸಂಗ್ರಹಿಸುವ ನೆಲೆಯಾಗಿ ಬೇಣಗಳು ರೂಪಾಂತರವಾದವು. ಮತ್ತಿ, ನಾಲು, ನೆಲ್ಲಿ, ಹೊನ್ನೆಯಂತಹ ವಿಶೇಷ ಜಾತಿ ಗಿಡಗಳು ಮರಗಳಾಗಿ ನಳನಳಿಸಿದವು. ಇದು ಇಂತವರ ಬೇಣ ಎಂಬ ತಿಳುವಳಿಕೆ, ಬಾಯ್ಬೇಲಿ ರಕ್ಷಣೆ ಮೂಲವಾಯಿತು. ಸರಕಾರಿ ಜಾಗದ ಖಾಸಗಿ ಕಾಡನ್ನು ಸುಮಾರು ೨೫೦ ಎಕರೆ ಪ್ರದೇಶದಲ್ಲಿ ನೋಡಬಹುದು. ಪ್ರಮುಖವಾಗಿ ಗಿರಿಯಾ ಗೌಡ, ಗಜಾನನ ಭಟ್, ಮಂಜುನಾಥ ಭಟ್, ಪರಮೇಶ್ವರ ಭಟ್, ದತ್ತಗೋವಿಂದ ಭಟ್,  ನರಸಿಂಹ ಭಟ್ ಕುಟುಂಬದವರು ಸಂರಕ್ಷಿಸಿದರು. ಇಲ್ಲಿನ ತೆರಕು ಸಂಗ್ರಹಿಸಿ ಅಡಿಕೆ ತೋಟಕ್ಕೆ ಹಾಕುವದು ವಾರ್ಷಿಕ ಕೆಲಸ, ಹೇರಳ ಪ್ರಮಾಣದಲ್ಲಿ ತೆರಕು ಬೀಳುತ್ತಿದ್ದರಿಂದ ಸಂಗ್ರಹಿಸಿದ್ದನ್ನು  ಮಳೆಗಾಲ ಪೂರ್ವದಲ್ಲಿ  ಒಯ್ಯುವದು ಕಷ್ಟವಾಗುತ್ತಿತ್ತು. ಗಿಡಗಳ ನೆರಳಿನ ಕಾರಣ ಹುಲ್ಲಿನ ಬೆಳವಣಿಗೆ ಕಡಿಮೆಯಾಗಿ ಬೇಣಕ್ಕೆ ಬೆಂಕಿ ಹಾಕುವ ಪದ್ದತಿ ಕೈಬಿಟ್ಟರು. ಬಯಲು ಪ್ರದೇಶಗಳಲ್ಲಿ ಗೇರು, ಮಾವಿನ ಸಸಿ ನೆಡುವ ಕೆಲಸ ನಡೆದವು. ಗಿಡ ಬೆಳೆಸುವ ಪ್ರೀತಿ ಎಷ್ಟು ಗಾಢವಾಗಿತ್ತೆಂದರೆ ಯಾರಾದರೂ ಒಂದು ಗಿಡ ಕಡಿದರೆ ದೊಡ್ಡ ಜಗಳ ನಡೆಯುತ್ತಿತ್ತು. ರಸ್ತೆ ಪಕ್ಕದ ಗಿಡಗಳ ಸೊಪ್ಪು ಕಡಿಯುವಾಗ ಸಿಕ್ಕಾಪಟ್ಟೆ ಟೊಂಗೆ ಕಡಿದರೆ ತಕ್ಷಣ ಗದರಿಸುತ್ತಿದ್ದರು. ಒಂದು ಕಾಲದಲ್ಲಿ ಬೆನ್ನು ಹೊರೆ ಸೊಪ್ಪು, ತಲೆಹೊರೆಸೊಪ್ಪು ತಂದು ದೊಡ್ಡಿಗೆ ಹಾಕುತ್ತಿದ್ದವರು ಕ್ರಮೇಣ ಸೊಪ್ಪಿನ ಗೊಬ್ಬರಕ್ಕೆ ವಿದಾಯ ಹೇಳಿದರು, ತೆರಕಿನ ಗೊಬ್ಬರ ನೆಚ್ಚಿದರು. ಮನೆ ಮನೆಗಳಲ್ಲಿ ಕ್ರಿ.ಶ. ೧೯೯೪ರ ಬಳಿಕ ಗೋಬರ್ ಅನಿಲ ಸ್ಥಾವರ ರಚನೆಗೊಂಡವು, ದೊಡ್ಡಿಯ ಸ್ವರೂಪ,  ಗೊಬ್ಬರ ತಯಾರಿಕಾ ವಿಧಾನ ಸಾಕಷ್ಟು ಬದಲಾಯಿತು. ಕಾಡಿನಿಂದ ಚಕ್ಕಡಿಯಲ್ಲಿ ಕಟ್ಟಿಗೆ ತರುವ ಪ್ರಮಾಣ ನಿಂತಿತು.

ಚಿತ್ರ-೭

 

ಅಡಿಕೆ ತೋಟಕ್ಕೆ ಕೆನರಾ ಪ್ರಿವಿಲೇಜ್  ಆಕ್ಟ್ ಅನ್ವಯ ಬ್ರಿಟಿಷ್ ಕಾಲದಲ್ಲಿ ಸೊಪ್ಪಿನ ಬೆಟ್ಟ ಸೌಲಭ್ಯ ನೀಡಲ್ಪಟ್ಟಿವೆ. ಎಕರೆ ಅಡಿಕೆ ತೋಟಕ್ಕೆ ೭-೯ಎಕರೆ ಬೆಟ್ಟಗಳಿವೆ. ಇಲ್ಲಿನ ಮರಗಳ ಸೊಪ್ಪು ಕಡಿದು ತೋಟಕ್ಕೆ ಮುಚ್ಚುವದು ಪಾರಂಪರಿಕ ಪದ್ದತಿ. ವರ್ಷ ಬಿಟ್ಟು ವರ್ಷಕ್ಕೆ ತೋಟಕ್ಕೆ ಸೊಪ್ಪಿನ ಮುಚ್ಚಿಗೆ ಮಾಡಿಸುವದು ಪರಿಪಾಠ. ಮರಗಳ ಟೊಂಗೆಗಳನ್ನು ಸಂಪೂರ್ಣ ಕಡಿದು ಸೊಪ್ಪು ಸಂಗ್ರಹಿಸುವ ಕೆಲಸ ನಡೆಯುತ್ತಿತ್ತು. ಇಲ್ಲಿ ತೋಟಕ್ಕೆ ಸೊಪ್ಪು ಬೇಕು ಎಂಬುದರಷ್ಟೇ ಮಹತ್ವ ಅಡುಗೆ,  ಸ್ನಾನದ ಒಲೆಗೆ ಕಟ್ಟಿಗೆ ಬೇಕು ಎಂಬುದಾಗಿತ್ತು! ಸೊಪ್ಪು ಕಡಿಸಿದರೆ ಕಟ್ಟಿಗೆ ಸಂಗ್ರಹವಾಗುತ್ತಿತ್ತು. ಒಂದು ಎಕರೆ ಅಡಿಕೆ ತೋಟಕ್ಕೆ ಮುಚ್ಚಲು ಸುಮಾರು ೧೦೦ ಹೊರೆ ಒಣಸೊಪ್ಪು ಬೇಕಾಗಬಹುದು, ಇವನ್ನು ಸಂಗ್ರಹಿಸಲು ಬೆಟ್ಟದ ೬೦-೭೦ಮರಗಳ ಸೊಪ್ಪು ಕಡಿಯಲಾಗುತ್ತದೆ. ಸೊಪ್ಪು ಕಡಿಯಲು ಮರ ಏರುವ ನಿಪುಣ ಕೆಲಸಗಾರರು ಬೇಕು. ಕುಂದಾಪುರ, ಕುಮಟಾ ಪ್ರದೇಶಗಳಿಂದ ಬರುತ್ತಿದ್ದ ಶೆಟ್ಟರು, ಹಾಲಕ್ಕಿಗರು ಇದನ್ನು ಮಾಡುತ್ತಿದ್ದರು. ಬದಲಾದ ಪರಿಸ್ಥಿತಿಯಲ್ಲಿ ಕ್ರಿ.ಶ. ೧೯೯೦ರ ಬಳಿಕ ಕರಾವಳಿಯಿಂದ ಬರುತ್ತಿದ್ದ ಕೂಲಿಗಳ ಸಂಖ್ಯೆ ಇಳಿಮುಖವಾಯಿತು. ಸ್ಥಳೀಯ ಕೂಲಿಕಾರರು ಅಷ್ಟೊಂದು ಪ್ರಮಾಣದಲ್ಲಿ ದೊರೆಯದ್ದರಿಂದ ಪ್ರತಿ ವರ್ಷ ಸೊಪ್ಪು ಕಡಿಯುವ ಪದ್ದತಿ ಕೈ ಬಿಟ್ಟಿತು. ಕಳವೆ ಮಂಜುನಾಥ ಭಟ್ಟರಂತೂ  ತಮ್ಮ ೧೨ ಎಕರೆ ಬೆಟ್ಟ ಕಡಿಯುವದನ್ನು ೨೫ ವರ್ಷಗಳ ಹಿಂದೆ ನಿಲ್ಲಿಸಿದರು. ಇಲ್ಲಿ ಹೇರಳ ಪ್ರಮಾಣದ ತೆರಕು ದೊರೆಯುತ್ತಿದೆ. ಇದೇ ಪ್ರದೇಶದ ಚಳ್ಳೆಮರಕ್ಕೆ ಲಕ್ಷಾಂತರ ಮಿಲ್ಕವೀಡ್ ಪಾತರಗಿತ್ತಿಗಳು ವಲಸೆ ಬಂದು ಕ್ರಿ.ಶ. ೧೯೯೯ರಲ್ಲಿ ಪಾತರಗಿತ್ತಿಗಳ ಮಹಾ ಜಾತ್ರೆ ನಡೆಸಿದ್ದವು.

ಚಿತ್ರ-೮

 

ಊರ ಗುಡ್ಡಕ್ಕೆ ಅಕೇಸಿಯಾ ಹಸುರು!

ಕಳವೆ ಊರಿನ ಸನಿಹ ಕಿರಿಯ ಪ್ರಾಥಮಿಯಿಕ ಶಾಲೆಯಿದೆ, ಕ್ರಿ.ಶ. ೧೯೯೦ರ ಒಂದು ದಿನ ಬುಲ್ಡೋಜರ್ ಯಂತ್ರವೊಂದು ಅಲ್ಲಿ ಬಂದು ನಿಂತಿತು. ಎಂದೂ ನೋಡದ ದೈತ್ಯಗಾತ್ರ, ದೊಡ್ಡ ದೊಡ್ಡ ಚಕ್ರ ನೋಡುತ್ತ ಹುಡುಗರು ಪ್ರದಕ್ಷಿಣೆ ಹಾಕುತ್ತಿದ್ದೆವು. ಯಂತ್ರದ ಸನಿಹದಲ್ಲಿ ಯಾರೊಬ್ಬರೂ ಇರಲಿಲ್ಲ, ರಸ್ತೆ ಪಕ್ಕದಲ್ಲಿದ್ದ ಯಂತ್ರ ಹುಡುಗರ ಚೇಷ್ಟೆಗೆ ಆಹಾರವಾಯಿತು. ಯಂತ್ರದ ಡ್ರೈವಿಂಗ್ ಸೀಟ್‌ನಲ್ಲಿ ಕುಳಿತ ನರಸಿಂಹ ದೀಕ್ಷಿತನಂತೂ ದೊಡ್ಡ ಲೆಕ್ಚರ್ ಆರಂಭಿಸಿದನು. ‘ಇದನ್ನು ಹಾಳು ಮಾಡುವದಾದರೆ ಹೇಗೆ?’ ಎಂಬುದು ಮುಖ್ಯ ಸವಾಲು. ಬೈಕು, ಕಾರು ಎಲ್ಲರಿಗೆ ಪರಿಚಿತ. ಪಂಕ್ಚರ್ ಮಾಡುವದು ತಿಳಿದಿತ್ತು. ಈ ದೊಡ್ಡ ಯಂತ್ರ ಅನಾಥವಾಗಿದ್ದೂ  ಹುಡುಗಾಟದ ಹುಡುಗರಿಗೆ ಏನೂ ಮಾಡಲಾಗದೇ  ಈಗ ಸುರಕ್ಷಿತವಾಗಿತ್ತು. ಅದರ  ಒಂದು ನಟ್‌ಬೋಲ್ಟ್ ಕಳಚುವದೂ ನಮಗೆ ಸಾಧ್ಯವಿರಲಿಲ್ಲ! ನಮಗೆ ಬುಲ್ಡೋಜರ್ ಮೇಲಿನ ಸಿಟ್ಟಿಗೆ ಯಾವ ಕಾರಣವೂ ಇರಲಿಲ್ಲ, ಹುಡುಗಾಟದ ಮನಸ್ಸು ಹಾಗೇ ಲೆಕ್ಕಹಾಕಿತ್ತು ಅಷ್ಟೇ!  ಕೆಲ ದಿನಗಳಲ್ಲಿ ಅದು ಗ್ರಾಮದ ಹಾರ್ನಳ್ಳಿ ಪ್ರದೇಶದ ಬೋಳು ಗುಡ್ಡದ ಉಳುಮೆ ಆರಂಭಿಸಿತು. ನೈಸರ್ಗಿಕ ಗಿಡ ಮರಗಳನ್ನು ಬೇರು ಸಮೇತ ಕಿತ್ತೆಸೆಯಿತು. ನಂತರ ನೆಡುತೋಪು ಬೆಳೆಸುವ ಕೆಲಸ ನಡೆಯಿತು. ನಮಗೆ ಬುಲ್ಡೋಜರ್ ಹಾಳು ಮಾಡಲಾಗಲಿಲ್ಲ, ನಮಗೆ ಅರಿವಿಲ್ಲದೇ ಸಸ್ಯ ಸಮೃದ್ಧ ಗುಡ್ಡವನ್ನು  ಆ ಯಂತ್ರ ನುಂಗಿ ನೀರು ಕುಡಿಯಿತು.

ಚಿತ್ರ-೯

 

ಅಕೇಸಿಯಾ ನಾಟಿಯಾಯಿತು, ನೆಡುತೋಪು ಮಾಡಿದ ಪ್ರಥಮ ವರ್ಷ ಭರ್ಜರಿ ಹುಲ್ಲು ಬೆಳೆಯಿತು. ಅಕೇಸಿಯಾ ನೆಟ್ಟರೆ ಹುಲ್ಲು ಬೆಳಿತದೆ ಎಂದು ಭಾವಿಸುವಂತಾಯಿತು. ಜಾನುವಾರು ಪ್ರವೇಶಕ್ಕೆ ಆಸ್ಪದ ನೀಡದೆ ಬೇಲಿ ಹಾಕಿದ್ದರಿಂದ ಹುಲ್ಲು ಬೆಳೆದಿತ್ತು. ನೆಡುತೋಪಿನ ಮೇವು ಸಂಪತ್ತು ಕಂಡು ದಂಗಾದ ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ಬೇಸಿಗೆ ಬೆಂಕಿ ಬರುವದರೊಳಗೆ ಕಡಿಯಬೇಕೆಂದು ಕಾಡು ಹುಲ್ಲು ಮಾರಾಟಕ್ಕೆ ಪತ್ರಿಕೆಯಲ್ಲಿ ಟೆಂಡರ್ ಕರೆದಿದ್ದರು!. ಮುಂದೆ ಗಿಡ ಬೆಳೆದಂತೆ  ಕ್ರಮೇಣ ಹುಲ್ಲು ಬೆಳೆಯುವ ಪ್ರಮಾಣ ಕಡಿಮೆಯಾಗುತ್ತ ೩-೪ವರ್ಷ ಕಳೆದಾಗ  ಹಿಡಿಹುಲ್ಲೂ  ಬೆಳೆಯಲಿಲ್ಲ. ಜಾನುವಾರುಗಳಿಗೆ ತೀವ್ರ ಸಮಸ್ಯೆಯಾಯಿತು. ೨೫-೩೦ ದನಕರು ಸಾಕುತ್ತಿದ್ದವರು ಈಗ ಹೂಟಿ ಎತ್ತಿನ ಜೋಡಿ, ಹಾಲಿಗೆ ಆಕಳು, ಎಮ್ಮೆ ಮಾತ್ರ ಉಳಿಸಿಕೊಂಡು ಇನ್ನುಳಿದವನ್ನು ಮಾರಾಟ ಮಾಡಿದರು. ಭತ್ತದ ಹುಲ್ಲು ಸಾಕಷ್ಟು ಇಲ್ಲದಿದ್ದರಿಂದ ನಮ್ಮೂರ ಹಸುಗಳ ಹಾಲು ಪಡೆಯಲು ದಾಸನಕೊಪ್ಪ, ಹಾನಗಲ್, ಮುಂಡಗೋಡ ಭಾಗದ ೫೦-೬೦ಕಿಲೋ ಮೀಟರ್ ದೂರದ ಬಯಲುಸೀಮೆ ಹುಲ್ಲು ಬರಬೇಕಾಯಿತು! ಕಾಡಿನಲ್ಲಿ ದನಕರು ಮೇಯಿಸುವ ಪ್ರಮಾಣ ಸ್ವಲ್ಪ ಕಡಿಮೆಯಾಗಿ ದೊಡ್ಡಿಯಲ್ಲಿ ಕಟ್ಟಿ ಸಾಕುವ ಪರಿಪಾಠ ಆರಂಭವಾಯಿತು. ಈ ವೇಳೆಗೆ ಮನೆ ಮನೆಗಳಲ್ಲಿ ಗೋಬರ್ ಅನಿಲ ಸ್ಥಾಪನೆಯಾದ್ದರಿಂದ ಸ್ಥಾವರಕ್ಕೆ ಸಗಣಿ ಸಂಗ್ರಹ ಅಗತ್ಯವಾಗಿತ್ತು. ನಾಟಿ ದನಗಳ ಸ್ಥಾನದಲ್ಲಿ ಜರ್ಸಿ, ಹೊಲಿಸ್ಟಿನ್ ಮುಂತಾದ ವಿದೇಶಿ ತಳಿಗಳು ಬಂದವು.

 

ಅಕೇಸಿಯಾ ಬಂದ ಬಳಿಕ ಪಾರಿಸಾರಿಕ ಪರಿಣಾಮಗಳಲ್ಲಿ ಬೋಳುಗುಡ್ಡಕ್ಕೆ ನಿತ್ಯಹರಿದ್ವರ್ಣ ಸಸ್ಯ ಬಂದಿದ್ದು ಮೇಲ್ನೋಟಕ್ಕೆ ಕಾಣುವ ಸಂಗತಿ. ಕೆಳ ಹಂತದಲ್ಲಿ ಬೆಳೆಯುತ್ತಿದ್ದ ಮೂಲಿಕೆ, ಬಳ್ಳಿ, ಕೆಲವು ಔಷಧ ಸಸ್ಯಗಳು ಕಡಿಮೆಯಾದವು. ಗುಡ್ಡದಲ್ಲಿ ನರ್ತಿಸುತ್ತಿದ್ದ ನವಿಲುಗಳು ಕೃಷಿಕರ ಬೇಣ ಸೊಪ್ಪಿನ ಬೆಟ್ಟ, ಕೆರೆಯಂಚುಗಳಲ್ಲಿ ನೆಲೆ ಹುಡುಕಿದವು. ಮೇವು ಹುಡುಕಿ ಕೃಷಿ ಭೂಮಿಗೆ ಬರುವ ಜಿಂಕೆಗಳನ್ನು  ಬೀಡಾಡಿ ನಾಯಿಗಳು ಬೆನ್ನತ್ತಿದ್ದವು. ಮಳೆಗಾಲದಲ್ಲಿ ಅಕೇಸಿಯಾ ತೋಪಿನಲ್ಲಿ ವಿಪರೀತ ಜೀರುಂಡೆಗಳು ಕಾಣುತ್ತಿವೆ, ಇವುಗಳ ಸ್ವರ ಕೇಳಿದರೆ ಯಾರೂ ದಂಗಾಗಬೇಕು. ಲಾರ್ವಾ ಅವಸ್ಥೆಯಲ್ಲಿ ಬೇರಿನ ರಸ ಹೀರಿ ಬದುಕುವ ಜೀರುಂಡೆ  ಸಂಖ್ಯಾಸ್ಪೋಟಕ್ಕೂ, ಅಕೇಸಿಯಾಕ್ಕೂ ಯಾವ ಸಂಬಂಧವಿದೆ? ಅಧ್ಯಯನ ಗಮನಿಸಬೇಕು. ಇನ್ನು ಅಕೇಸಿಯಾ ಸಸಿ ನೆಡುವ ಸಂದರ್ಭದಲ್ಲಿ ಮಣ್ಣು ನೀರಿನ ಸಂರಕ್ಷಣೆ ಹೆಜ್ಜೆಯಾಗಿ ಚಂದ್ರಬರಾವು, ಟ್ರೆಂಚ್‌ಗಳನ್ನು ರಚಿಸಲಾಗಿತ್ತು. ಅಲ್ಲಿ ನೀರು ಇಂಗುತ್ತಿದ್ದರೂ ಅಂತರ್ಜಲ ಹಚ್ಚಳವಾದದ್ದು ಗಮನಕ್ಕೆ ಬರಲಿಲ್ಲ. ಆದರೆ ಗಿಡ ಬೆಳೆಸುವ ಪೂರ್ವದ ಮಳೆಗಾಲಗಳಲ್ಲಿ ಬೋಳು ಗುಡ್ಡದಿಂದ ಹುಟ್ಟುತ್ತಿದ್ದ ಒರತೆ, ಹರಿಯುತ್ತಿದ್ದ ನೀರು  ಈಗ ಆ ಪ್ರಮಾಣದಲ್ಲಿರಲಿಲ್ಲ. ಅಕೇಸಿಯಾ ನೀರು ಹೀರುತ್ತದೆಂಬ ಸಾರ್ವತ್ರಿಕ ಮಾತು ಸಹಜವಾಗಿ ಊರಲ್ಲಿಯೂ ಕೇಳಿಸಿತು.

ಊರ ಗುಡ್ಡಗಳಲ್ಲೆಲ್ಲ ಅಕೇಸಿಯಾ ಹಸುರು ತೇರು, ಸಸಿ ನೋಡಿ ಸಿಟ್ಟು ಮಾಡಿದ್ದ ಕೃಷಿಕರೂ ಕ್ರಮೇಣ ಬರಬರುತ್ತ ಅಕೇಸಿಯಾ ಪ್ರೇಮಿಗಳಾದರು. ಚಪ್ಪರಕ್ಕೆ ಗಳು, ಅಡಿಕೆ ಅಟ್ಟದ ಎಳೆ, ಬೇಲಿಗೂಟ, ಮನೆ ನಿರ್ಮಾಣ ಎಂದು ಬಳಸಲು ಆರಂಭಿಸಿದರು. ಕಾಡು ಗಿಡ ಕಡಿದರೆ ಬೈಯ್ಯುತ್ತಿದ್ದ ಇಲಾಖೆಯ ಸಿಬ್ಬಂದಿ  ಅಕೇಸಿಯಾ ಕಡಿತ ಕಂಡರೆ ಸ್ವಲ್ಪ ಮೆತ್ತಗಾದರು. ಸ್ವಂತಕ್ಕೆ ಒಣಗಿದ್ದನ್ನು ಬಳಸಲು ರಿಯಾಯತಿ ತೋರಿಸಿದರು. ಅಡುಗೆ ಮನೆಗೂ ಅಕೇಸಿಯಾ ಬಂದು ಅನ್ನ ಬೇಯಿಸಿತು. ಹೊಸ ಅಡಿಕೆ ತೋಟ ಮಾಡಿದವರು ಹಾಕಿದ ಗೊಬ್ಬರವನ್ನು ಕಳೆಗಳು ನುಂಗುತ್ತಿವೆಯೆಂದು ಅಲವತ್ತು ಕೊಳ್ಳುತ್ತಿದ್ದರು, ಬಳಕೆ ನೋಡಿ ಕಳೆ ನಿಯಂತ್ರಣಕ್ಕೆ ಅಕೇಸಿಯಾ ತೆರಕು ಪ್ರಾಶಸ್ತ್ಯವೆಂದರು! ಎರಡು ವರ್ಷವಾದರೂ ಮಣ್ಣಿನಲ್ಲಿ ಕರಗದ ಎಲೆಗಳು ತೋಟದ ಕಳೆ ತಿಂದವು. ದೊಡ್ಡಿಗೆ ಅಕೇಸಿಯಾ ತೆರಕು ಹಾಕಿ ಗೊಬ್ಬರ ಮಾಡುವುದು ರೂಢಿಗೆ ಬಂದಿತು. ಗೋಬರ್ ಅನಿಲ ಸ್ಥಾವರದಿಂದ ಬರುವ ಸಗಣಿ ರಾಡಿಯನ್ನು ಎಲೆಗಳ ಮೇಲೆ ಚೆಲ್ಲಿದರೆ ೪-೫ ತಿಂಗಳಲ್ಲಿ ಫಲವತ್ತಾದ ಗೊಬ್ಬರ ತಯಾರಿಸುವ ಕಲೆ ಕರಗತವಾಯಿತು. ಅಡಿಕೆ, ಏಲಕ್ಕಿ ಸಸಿ ಕಣಕ್ಕೆ ನೆಲ್ಲಿಸೊಪ್ಪು, ತೆಂಗಿನ ಮರಕ್ಕೆ ಕಾಸರಕ, ಭತ್ತದ ಬಿಳಿಕೊಳೆ ರೋಗ ತಡೆಯಲು ಮುಕ್ಕಡಕ, ಭತ್ತದ ಗಿಡ ಹಸುರಾಗಲು ತೂಬರಗೂಟ, ಭತ್ತದ ಪಣತಕ್ಕೆ ಲಕ್ಕಿಸೊಪ್ಪು,  ಕುಡಿವ ನೀರಿನ ಬಾವಿಗೆ ನೆಲ್ಲಿ ಮರದ ಹಲಗೆ, ಎತ್ತಿನಗಾಡಿಯ ಬಿರಿಕುಂಟೆ(ಬ್ರೇಕ್ ಲೈನರ್!)ಗೆ ಹೊಳೆಗೇರು, ದೊಡ್ಡಿ ಗೊಬ್ಬರಕ್ಕೆ ಮತ್ತಿ, ಹುನಾಲು, ಕವಲುಸೊಪ್ಪು ಹೀಗೆ ನೆಲದ ಸಸ್ಯ ಬಳಕೆ ಮಹತ್ವ ಅರಿತ ರೈತರು ಲಾಗಾಯ್ತಿನ ದೇಸೀ ಸಸ್ಯ ಪ್ರೀತಿ ನೆನಪಿಸುತ್ತಿದ್ದರು. ದಿನವಿಡೀ ಅಕೇಸಿಯಾ ನೆಡುತೋಪಿನಲ್ಲಿ ನಡೆದು ಬಹು ಬಳಕೆಯ ದಾರಿ ಅರಿತಿದ್ದರೂ ವೈವಿಧ್ಯಮಯ ಸಸ್ಯ ಕಂಡವರು ಎಕಜಾತಿಗೆ ಮರುಗಿದರು.

 

ಮಾತು ಕರಗಿತು, ಕೆಲಸ ಕರೆಯಿತು

ಅಡಿಕೆ ಪತ್ರಿಕೆಯಲ್ಲಿ ಶ್ರೀಪಡ್ರೆ ನೆಲಜಲ ಉಳಿಸಲು ನೂರು ವಿಧಿ ಲೇಖನ ಮಾಲೆಯನ್ನು ಕ್ರಿ.ಶ. ೧೯೯೬ರ ಸಪ್ಟೆಂಬರ್‌ದಿಂದ ಆರಂಭಿಸಿದ್ದರು. ಪತ್ರಿಕೆಯ ಲೇಖಕರ ಬಳಗದಲ್ಲಿ ಕಾರ್ಯನಿರ್ವಹಿಸುತ್ತಿದ್ದವನಿಗೆ ಉತ್ತರ ಕನ್ನಡದ ನೀರಿನ ಕತೆ ಬರೆಯುವ ಕಾರ್ಯ ಒಪ್ಪಿಸಿದರು. ಆಗಷ್ಟೇ ಕರ್ನಾಟಕದಲ್ಲಿ ಹಳ್ಳಿಗರು ಉಳಿಸಿದ ಕಾಡಿನ ಬಗೆಗೆ ಅಧ್ಯಯನ ಮಾಡಲು ಕುಮಟಾದ ಮೂರೂರಿನಲ್ಲಿ  ಮಾಹಿತಿ ಸಂಗ್ರಹ ನಡೆದಿತ್ತು. ಮಳೆಗಾಲ ಮುಗಿದು ೧೫-೨೦ದಿನಕ್ಕೆ ತೋಟಕ್ಕೆ ನೀರು ನೀಡಲು ಪರದಾಡುವ ಚಿತ್ರಗಳು ಗೋಚರಿಸಿದವು. ಕರೆಂಟ್ ಇಲ್ಲದಿದ್ದರೆ ತೋಟ ಒಣಗುವ ಸಂದರ್ಭವಿತ್ತು. ಇಲ್ಲಿನ ಮೂರೂರು, ಕಲ್ಲಬ್ಬೆ, ಹೊಸಾಡ ಗ್ರಾಮಗಳ ೩೫೦ಎಕರೆ ತೋಟಕ್ಕೆ ೪೫೦ ಪಂಪ್‌ಸೆಟ್‌ಗಳಿದ್ದವು!. ಎರಡು ಮೂರು ಗುಂಟೆ ಅಡಿಕೆ ತೋಟವಿದ್ದವರೂ ಬಾವಿ ತೆಗೆಸಿ, ಪಂಪ್ ಮುಖೇನ ನೀರಾವರಿ ನಡೆಸುತ್ತಿದ್ದರು. ಅಡಿಕೆ ತೋಟದ ನಡುವೆ ಹರಿದ ಹಳ್ಳಕ್ಕೆ ಚಳಿಗಾಲದಲ್ಲಿ ಒಡ್ಡು ಹಾಕುತ್ತಿದ್ದ ಹಳೆಯ ಪದ್ದತಿ ಮರೆತಿದ್ದರು. ಮೊಸಳೆಗುಂಡಿ (ಮೊಸಳೆಯಿದ್ದ ಸ್ಥಳ) ಎಂಬ ಪ್ರದೇಶ ಹೂಳು ತುಂಬಿ ಆಳ ಕಣ್ಮರೆಯಾಗಿತ್ತು. ಅಲ್ಲಿ ಬೇಸಿಗೆಯಲ್ಲಿ ವಾಲಿಬಾಲ್ ಆಡುತ್ತಿದ್ದರು! ಅರಣ್ಯನಾಶ, ನೀರಿನ ಸಮಸ್ಯೆ ಬಗೆಗೆ ಒಂದು ನೋಟ ದೊರೆಯಿತು. ಆಗಷ್ಟೇ ಶ್ರೀಪಡ್ರೆ ‘ನೀರಿಂಗಿಸೋಣ’ ಕಾರ್ಯಕ್ರಮ ಆರಂಭಿಸಿದ್ದರು. ಜಲಜಾಗೃತಿ ಮೂಡಿಸಲು ಹಳ್ಳಿಗಳಲ್ಲಿ ವರ್ಣಪಾರದರ್ಶಿಕೆ ಪ್ರದರ್ಶನ ನಡೆದವು.  ಶಿರಸಿಗೆ ಬಂದು ಶ್ರೀಪಡ್ರೆ ಭಾಷಣಕ್ಕೆ ನಿಂತರೆ ಸ್ಲೈಡ್ ಬಿಡುವ ಕೆಲಸ ನನ್ನದು. ಪರಿಣಾಮ ನೀರಿನ ಮಾಹಿತಿಗಳು ತಲೆಯಲ್ಲಿ ಇಂಗಿದವು.

ಚಿತ್ರ-೧೦

 

ಅದು ಕ್ರಿ.ಶ ೨೦೦೧, ಯಲ್ಲಾಪುರ ಗೇರಾಳದ ಭಾಸ್ಕರ ಹೆಗಡೆ ಜಲಸಂರಕ್ಷಣೆ ಮಾಹಿತಿ ನೀಡಲು ಬೀಸಗೋಡಿಗೆ ಆಹ್ವಾನಿಸಿದರು. ಭಾಷಣ ಮಾಡುವ ಕಲೆ ತಿಳಿದಿತ್ತು, ಕೆರೆ ನೀರಾವರಿ ಇತಿಹಾಸ ಸ್ವಲ್ಪ ಓದಿದ್ದೆ. ಕ್ರಿ.ಶ. ೧೮೦೧ರಲ್ಲಿ ಬುಕಾನನ್ ಸಂಚರಿಸಿದ ಮಾರ್ಗದಲ್ಲಿ ಕ್ರಿ.ಶ. ೨೦೦೧ರಲ್ಲಿ ಮರುಪಯಣ ಮಾಡುವಾಗ ಕರಾವಳಿ, ಮಲೆನಾಡಿನ ನೀರಿನ ಜ್ಞಾನದ ಅರಿವಾಗಿತ್ತು. ಬರೋಬ್ಬರಿ ಒಂದು ತಾಸು ಭಾಷಣ ಮಾಡಿದೆ, ಚಿತ್ರ ತೋರಿಸಿದೆ. ‘ಮಾತು ಚೆನ್ನಾಗಿ ಆಡ್ತೀರಿ, ನೀವು ಎಷ್ಟು ಜಲಸಂರಕ್ಷಣೆ ಕೆಲಸ ಮಾಡಿದ್ದೀರಿ?’ ಪ್ರಶ್ನೆಗೆ ತಬ್ಬಿಬ್ಬಾದೆ. ನೀರು ಕಾಡಿನ ಮಾತಾಡುತ್ತ  ಸೆಮಿನಾರು ಓಡಾಡುವದು ಸುಲಭದ ಕೆಲಸ, ಹಳ್ಳಿಗಳಲ್ಲಿ ಭಾಷಣ ಮಾಡುವಾಗ ನೇರ ಅನುಭವವಿಲ್ಲದಿದ್ದರೆ ಮಾತು ಕೃಷಿತಕವಾಗುತ್ತದೆ. ನೀರಿಂಗಿಸಲು ಸಾವಯವ ವಸ್ತು ಹೇಗೆ ಮುಖ್ಯವೋ ನೀರಿನ ಕುರಿತು ಮಾತಾಡುವ ನಮಗೆ ಸ್ವಂತ ಅನುಭವಗಳು ಬೇಕು. ‘ಪ್ರತಿ ವರ್ಷ ಜಲಸಂರಕ್ಷಣೆಯ ಕೆಲಸ ಮಾಡಿಸಬೇಕು, ಅನುಭವ ಪಾಠ ಹೇಳಬೇಕು’ ನಿರ್ಧಾರ ಬಲಿಯಿತು. ಅಡಿಕೆ ತೋಟದಂಚಿಗೆ ನಮ್ಮ ೧೨ ಎಕರೆ ಸೊಪ್ಪಿನ ಬೆಟ್ಟವಿದೆ. ತೋಟಕ್ಕೆ ಸೊಪ್ಪು ಕಡಿಯುವದು, ತೆರಕು ಸಂಗ್ರಹಿಸುವದು, ಹುಲ್ಲು ಕಡಿಯುವದು, ಮುಳ್ಳು ಗಿಡ ಕಡಿಯುವ ಕೆಲಸ ಮಾಡುತ್ತಿದ್ದೆವು. ಹಳೆಯ ಮರ ಬಿಟ್ಟರೆ ಹೊಸ ಗಿಡ ಇರಲಿಲ್ಲ. ತಗ್ಗಿನಲ್ಲಿದ್ದ ತೋಟ ತೀವ್ರ ನೀರಿನ ಸಮಸ್ಯೆಯಿಂದ ಒಣಗುತ್ತಿತ್ತು. ಮಳೆಗಾಲಕ್ಕೆ ಹಸುರಾಗಿ, ಬೇಸಿಗೆಗೆ ಒಣಗಿ ನಿಲ್ಲುತ್ತಿತ್ತು.  ಇಳುವರಿ ತೀವ್ರ ಕುಸಿಯಿತು. ಪ್ರತಿ ವರ್ಷ ಬೆಳೆ ಬಂದಾಗ ಚರ್ಚೆ ಮಾಡುತ್ತಿದ್ದೆವು, ಪರಿಹಾರದ ದಾರಿ ನೋಡಿರಲಿಲ್ಲ.

 

ಕ್ರಿ.ಶ. ೧೯೯೧, ಊರಿಗೆ ವಿದ್ಯುತ್  ಬಂದ ವರ್ಷ. ಆಗ ೩ ಅಶ್ವಶಕ್ತಿಯ ಪಂಪ್ ಖರೀದಿಸಿ ತೋಟದಲ್ಲಿ ಕೆರೆ ತೆಗೆಸಿದೆವು. ೧೨-೧೫ ಅಡಿ ಆಳ ತೆಗೆದರೂ ಅಗತ್ಯ ನೀರು ಸಿಗಲಿಲ್ಲ. ಒಮ್ಮೆ ತೋಟ ನೋಡಲು ಬಂದ ನೀರ್ನಹಳ್ಳಿ ಈಶಣ್ಣ ‘ನಿಮ್ಮ ತೋಟಕ್ಕೆ ಕಿಡ್ನಿಯೇ ಇಲ್ಲ, ಕಾಲುವೆ ಆಳ ಮಾಡಿಸಿದರೆ ಮಳೆಗಾಲದ ಜವುಳು ಕಡಿಮೆಯಾಗಿ ತೋಟ ಸುಧಾರಿಸುತ್ತದೆ’ ಎಂದರು. ಒಂದು ಒಂದೂವರೆ ಅಡಿಯಿದ್ದ ಕಾಲುವೆಯನ್ನು ಎರಡು ಮೂರು ಅಡಿ ಆಳ ಮಾಡಿದೆವು. ಮುಂದಿನ ಎರಡು ಮೂರು ವರ್ಷಗಳಲ್ಲಿ ಕಾಳುಮೆಣಸು ಚೆನ್ನಾಗಿ ಬೆಳೆಯಿತು. ಆದರೆ ಬೇಸಿಗೆಯಲ್ಲಿ ತೋಟ ಒಣಗುವ ಸಮಸ್ಯೆ  ಉಲ್ಬಣವಾಯಿತು. ಬೇಸಿಗೆಯಲ್ಲಿ ನೀರಾವರಿ ಮಾಡಿದರೆ ಮಾತ್ರ ತೋಟ ಬಚಾವು! ಆದರೆ ನಮ್ಮಲ್ಲಿ ನೀರಿರಲಿಲ್ಲ. ಗುಡ್ಡದಲ್ಲಿ ನೀರಿಂಗಿಸಿದರೆ ಅಂತರ್ಜಲ ಏರುತ್ತದೆಂಬ ಪಾಠವನ್ನು ಮಾಡಿ ನೋಡಲು ಕ್ರಿ.ಶ. ೨೦೦೧ರ ಏಪ್ರಿಲ್‌ದಲ್ಲಿ ಪ್ರಯತ್ನ ಆರಂಭಿಸಿದೆವು. ಇಳಿಜಾರಿಗೆ ಅಡ್ಡವಾಗಿ ಅಗಳ ತೆಗೆದು ನೀರು ಹಿಡಿಯುವ ಪ್ರಯತ್ನ ಆರಂಭಿಸಿದೆವು. ೮-೧೦ಅಡಿ ಉದ್ದ, ೩ ಅಡಿ ಅಗಲ, ೩ ಅಡಿ ಆಳದ ರಚನೆ ಮಾಡಿದೆವು. ಓಡುವ ನೀರು ನಡೆಯುವಂತೆ ಮಾಡುವ ಈ ವಿಧಾನ ೪ ಎಕರೆ ಪ್ರದೇಶದಲ್ಲಿ ರಚನೆಯಾಯಿತು. ಸುಮಾರು ೫೦ ರೂಪಾಯಿ ಕೂಲಿದರವಿದ್ದ ಕಾಲಕ್ಕೆ ಆ ವರ್ಷ ೧.೨೭೫ ರೂಪಾಯಿ ವಿನಿಯೋಗ. ಮಳೆ ಬಂದಾಕ್ಷಣ ನೀರು ತುಂಬುವ ನೋಟ ನೋಡುವ ಚಡಪಡಿಕೆ, ರಾತ್ರಿ ಟಾರ್ಚ ಹಿಡಿದು ಇಂಗುಕುಳಿ ನೋಡಲು ಹೋದ ದಿನಗಳಿವೆ. ಭೂಮಿಗೆ ನೀರಿಂಗುವದು ನೋಡುವದು ಖುಷಿಯ ಕೆಲಸವಾಯಿತು.

 

 

 

ಚಿತ್ರ-೧೧

‘ಸೊಪ್ಪಿನ ಬೆಟ್ಟದಲ್ಲಿ ಗೇರು ನೆಡಬಹುದು’ ಸಾಲ್ಕಣಿ(ಬೈರಿಮನೆ)ಯ ದತ್ತಾತ್ರೇಯ ಹೆಗಡೆ ಬೆಟ್ಟಕ್ಕೆ ಹೋದಾಗ ಗಮನಕ್ಕೆ ಬಂದಿತು. ವೆಂಗುರ್ಲಾ-೪ ಹಾಗೂ ವೆಂಗುರ್ಲಾ-೫ ತಳಿಯ ೨೫೦ ಕಸಿ ಗೇರು ನೆಟ್ಟೆವು. ಪ್ರತಿ ಗಿಡದ ಬುಡಕ್ಕೆ ಮಳೆ ನೀರು ನಿಲ್ಲಲು ಚಂದ್ರಬರಾವು ಮಾದರಿ ರೂಪಿಸಿದೆವು. ಕಳೆದ ೨೦೦೨ರ ಅಗಸ್ಟ್‌ದಲ್ಲಿ ನೆಟ್ಟ ಸಸಿಗಳು ಸಮೃದ್ಧವಾಗಿ ಬೆಳೆಯುತ್ತಿವೆ. ‘ನೆಟ್ಟದ್ದು ಗೇರು, ಬಚ್ಚಿಟ್ಟದ್ದು ನೀರು’ ಎಂಬಂತೆ ಪ್ರತಿ ಗಿಡದ ಬುಡದಲ್ಲೂ ನೂರಾರು ಲೀಟರ್ ನೀರು ಹಿಡಿಯುವ ರಚನೆಗಳು ಅಂತರ್ಜಲ ಸುಧಾರಣೆಗೆ ನೆರವಾದವು. ಮಳೆಗಾಲದ ಆರಂಭ ಹಾಗೂ ಮಧ್ಯ ಭಾಗದಲ್ಲಿ ರಚನೆಯಲ್ಲಿ ಶೇಖರವಾಗುವ ಹೂಳು, ಕಸಕಡಿಗಳನ್ನು ತೆಗೆದು ಗಿಡದ ಬುಡಕ್ಕೆ ಹಾಕುವದರಿಂದ ರಚನೆ ಹೆಚ್ಚು ವರ್ಷ ಜಲಕೊಯ್ಲಿಗೆ ನೆರವಾಗುತ್ತದೆ. ಒಮ್ಮೆಗೆ ಒಬ್ಬ ಕೆಲಸಗಾರ ಕೇವಲ ಎರಡು ತಾಸಿನಲ್ಲಿ ೨೫೦ ಗಿಡಗಳಿಗೂ ಈ ಕೆಲಸ ಮುಗಿಸಬಹುದು. ಈಗ ಪ್ರತಿ ವರ್ಷವೂ ಸೊಪ್ಪಿನಬೆಟ್ಟದಲ್ಲಿ  ಜೆಸಿಬಿ ಯಂತ್ರದ ಸಹಾಯದಿಂದ ನೀರಿಂಗಿಸುವ ರಚನೆ ಮಾಡುತ್ತಿದ್ದೇನೆ. ಕೇವಲ ಮೂರು ವರ್ಷ ಪ್ರಯತ್ನದಿಂದ ವರ್ಷವಿಡೀ ನೀರು ನೀಡುವ ಕೆರೆ ಬೆಟ್ಟದಲ್ಲಿ ನಿರ್ಮಿಸಲು ಸಾಧ್ಯವಾಗಿದೆ. ೪೦-೪೫ ಜಾತಿಯ ಅಪ್ಪೆ ಮಾವಿನ ಸಸಿಗಳನ್ನು  ಸೊಪ್ಪಿನ ಬೆಟ್ಟದ ನೆತ್ತಿಯಲ್ಲಿ ನೆಟ್ಟು  ನೀರಾವರಿ ಮಾಡಿದ್ದೇವೆ.

 

 

ನಗರದ ಜತೆ ನೀರಿನ ಜಗಳ

‘ಬೇಸಿಗೆ ಭತ್ತ ಒಣಗಿ ಹೋಗ್ತಿದೆ, ಅಡಿಕೆಗೆ ನೀರಿಲ್ಲ’ ಕೋಟೆಬಳ್ಳಿಯ ರಾಮ ಗೌಡ ಕ್ರಿ.ಶ. ೧೯೯೫ರ ಮಾರ್ಚ್‌ದಲ್ಲಿ ಮನೆಗೆ ಬಂದು ನೋವು ತೋಡಿಕೊಂಡರು. ವಿಚಾರಿಸಿದರೆ ಶಿರಸಿ ನಗರಸಭೆಯವರು ಒಡ್ಡು ಒಡೆದ ವಿಚಾರ ಗಮನಕ್ಕೆ ಬಂತು. ನಗರ ಸಭೆಗೆ ಈ ಹಳ್ಳಿಗರ ಒಡ್ಡು ಒಡೆಯುವ ಧೈರ್ಯ ಹೇಗೆ ಬಂತು ಎಂದು ಸಿಟ್ಟು ಬಂತು. ಕ್ರಿ.ಶ. ೧೯೬೯ರಲ್ಲಿ ಬಾಳೆಗದ್ದೆ ಸನಿಹ ಕೆಂಗ್ರೆ ಹಳ್ಳಕ್ಕೆ ಪಂಪ್ ಜೋಡಿಸಿ ೧೩ಕಿಲೋ ಮೀಟರ್ ದೂರದ ಶಿರಸಿಗೆ ಕುಡಿಯುವ ನೀರು ಒಯ್ದಿದ್ದರು. ಆರಂಭದಲ್ಲಿ ೯೦ ಅಶ್ವಶಕ್ತಿಯ ಪಂಪ್ ಹಾಕಿದ ನಗರಸಭೆ ಜನಸಂಖ್ಯೆ ಬೆಳೆದಂತೆ  ೧೭೫ ಅಶ್ವಶಕ್ತಿಯ ಪಂಪ್ ಕೂಡ್ರಿಸಿತು. ಈಗ ಕೆಂಗ್ರೆ ಹಳ್ಳ ಬೇಸಿಗೆಯಲ್ಲಿ ಕೆಳಗಡೆ ಹರಿಯುವದಕ್ಕಿಂತ ಮೇಲಕ್ಕೆ ಪಂಪ್ ಆಗುವ ಪ್ರಮಾಣವೇ ಅಧಿಕವಾಗಿತ್ತು. ಕ್ರಮೇಣ  ಬೇಸಿಗೆಯಲ್ಲಿ ಕೆಂಗ್ರೆಹಳ್ಳ ಬತ್ತತೊಡಗಿತು, ನಗರ ನೀರಿನ ವ್ಯವಸ್ಥೆಗೆ ತೊಂದರೆಯಾಯಿತು. ಮೇಲ್ಬಾಗದ ದಬ್ಬೆಹಳ್ಳಕ್ಕೆ ಶೀಲಿಗರು ಒಡ್ಡುಕಟ್ಟಿದ್ದರಿಂದ ಹಳ್ಳದ ನೀರು ಕಡಿಮೆಯಾಗಿದೆಯೆಂದು ಲೆಕ್ಕ ಹಾಕಿದ ನಗರಸಭೆಯವರು ಕ್ರಿ,ಶ ೧೯೯೬ರ ಮೇ ತಿಂಗಳಿನಲ್ಲಿ ಹಳ್ಳದಗುಂಟ ನಡೆದು ಬಂದು  ಒಡ್ಡುಗಳನ್ನು ಒಡೆದಿದ್ದರು. ಆಗಷ್ಟೇ ತೆನೆ ತುಂಬುತ್ತಿದ್ದ ಪೈರು ನೀರಿಲ್ಲದೇ ಒಣಗಿದವು. ‘ಕುಡಿಯುವ ನೀರಿಗೆ ಯಾರೂ ಅಡ್ಡಿ ಮಾಡಬಾರದು, ಇದು ಅನಧಿಕೃತ ಒಡ್ಡು!’ ನಗರಸಭೆ ಅಧಿಕಾರಿಗಳು ದರ್ಪದ ಮಾತಾಡಿದರು. ಪಟ್ಟಣದ ನೀರಿಂಗಿಸಲು ಬತ್ತುವ ಹಳ್ಳಗಳು! ಎಂದು  ಸ್ಥಳೀಯ ಧ್ಯೇಯನಿಷ್ಟ ಪತ್ರಕರ್ತ ದಿನ ಪತ್ರಿಕೆಗೆ ಲೇಖನ ಬರೆದು ತೆಪ್ಪಗೆ  ಉಳಿಯಬೇಕಾಯಿತು.

ಚಿತ್ರ-೧೨

 

ಹಳ್ಳಿಗರಿಗೆ ಕೃಷಿಗೆ ನೀರು ಬೇಕು, ನಗರಕ್ಕೆ ಕುಡಿಯಲು ನೀರು ಬೇಕು. ನಗರದ ಸನಿಹದ ನದಿಗಳಲ್ಲಿ ನೀರಿಗಾಗಿ ಸಂಘರ್ಷ ಮಾಮೂಲಿ. ನಗರ ನೀರು ಸರಬರಾಜಿಗೆ ಇಂದಿಗೂ ಎಲ್ಲೆಡೆ ಕೇಂದ್ರೀಕೃತ ವ್ಯವಸ್ಥೆ ಬಳಕೆಯಲ್ಲಿದೆ. ನದಿ, ಜಲಾಶಯಕ್ಕೆ ಪಂಪ್ ಹಾಕಿ ನೀರು ಒಯ್ಯುವ ಸರಳ ಕ್ರಮ ರೂಢಿಯಾಗಿದೆ. ಕೃಷಿ ನೀರಾವರಿಗೆ ಪ್ರತ್ಯೇಕ ಯೋಜನೆಗಳಿಲ್ಲದ ಮಲೆನಾಡಿನಲ್ಲಿ ಇತ್ತೀಚಿನ ವರ್ಷಗಳಲ್ಲಿ ಹೊಳೆ, ಹಳ್ಳಗಳಿಗೆ ಪಂಪ್ ಕೂಡ್ರಿಸಿ ಕೃಷಿ ನೀರಾವರಿ ಮಾಡಲಾಗುತ್ತದೆ. ಪರವಾನಗಿ ಇಲ್ಲದೇ ನೀರೆತ್ತುವ ಈ ಕ್ರಮ ಅಪರಾಧವೇನೋ ಹೌದು,  ಆದರೆ ನೀರಾವರಿಗೆ ಪರ್ಯಾಯ ವ್ಯವಸ್ಥೆಗಳಿಲ್ಲದ್ದರಿಂದ  ಹೊಳೆದಂಡೆಯಲ್ಲಿ ಪಂಪ್ ಹಾಕುವದು ಸುಲಭದ ದಾರಿ. ಬಾಳೆಗದ್ದೆ ಸನಿಹದ ಶಿರಸಿ ನೀರು ಪೂರೈಕೆ ಯೋಜನೆ ಚರ್ಚೆ ನಿಧಾನಕ್ಕೆ ಕ್ರಿ.ಶ. ೧೯೯೫ರಲ್ಲಿ ಒಡ್ಡು ಒಡೆದ ದಿನದಿಂದಲೇ ಶುರುವಾಗಿತ್ತು. ನೀರಿನ ಸಮಸ್ಯೆ ತೀವ್ರವಾದಾಗ ನಗರಸಭೆ ಒಡ್ಡು ಒಡೆಯುವದು, ನದಿದಂಡೆಯ ಪಂಪ್‌ಗಳ ವಿದ್ಯುತ್ ಸಂಪರ್ಕ ತೆಗೆಯುವ ಕೆಲಸ ಮಾಡುತ್ತಿತ್ತು. ಕ್ರಿ.ಶ. ೨೦೦೨ರ ಜೂನ್ ವೇಳೆಗೆ ಸಮೀಕ್ಷಾ ಕಾರ್ಯವೊಂದು ನದಿ ದಡದಲ್ಲಿ ಆರಂಭವಾಯಿತು. ದಿನಕ್ಕೆ ನಗರಕ್ಕೆ ೧೪ಲಕ್ಷ ಗ್ಯಾಲನ್ ನೀರು ಅಗತ್ಯವೆಂದು ಏಷ್ಯನ್ ಡೆವಲಪ್‌ಮೆಂಟ್ ಬೋರ್ಡನಿಂದ ೩೨ ಕೋಟಿ ರೂಪಾಯಿ ಯೋಜನೆ ಸಿದ್ದವಾಯಿತು. ಕೆಂಗ್ರೆ ಹಳ್ಳಕ್ಕೆ ೬ ಮೀಟರ್ ಎತ್ತರದ ಒಡ್ಡುಕಟ್ಟಿ ನೀರು ಸಂಗ್ರಹಿಸಿ ನಗರಕ್ಕೆ ಒಯ್ಯುವ ಉಮೇದಿ. ೮೮೦೦ ಹೆಕ್ಟೇರ್ ಜಲಾನಯನ ಕ್ಷೇತ್ರದಲ್ಲಿ ಬಿದ್ದ ನೀರು ಕೆಂಗ್ರೆ ಪಂಪ್‌ಹೌಸ್ ಮುಖೇನ ಹರಿಯುವದರಿಂದ ಸಾಕಷ್ಟು ನೀರಿದೆ ಎಂದು ತಜ್ಞರು ಲೆಕ್ಕ ಹಾಕಿದ್ದರು. ಆದರೆ ಮಳೆಗಾಲದಲ್ಲಿ ಪ್ರವಾಹ, ಬೇಸಿಗೆಯಲ್ಲಿ ಬತ್ತುವದು ನದಿಯ ಸ್ಥಿತಿಯಾಗಿತ್ತು. ಕ್ರಿ.ಶ. ೧೯೯೫ರಿಂದ ಏಪ್ರಿಲ್, ಮೇ ತಿಂಗಳಿನಲ್ಲಿ ಹಳ್ಳ ಒಣಗುತ್ತಿದ್ದನ್ನು  ಹಳ್ಳಿಗರು ಗಮನಿಸಿದ್ದರು. ಈಗ ಕೇವಲ ೮ ಲಕ್ಷ ಗ್ಯಾಲನ್ ನೀರು ನೀಡಲು ಅಸಾಧ್ಯವಾದ ಹಳ್ಳ ೧೪ ಲಕ್ಷ ಗ್ಯಾಲನ್ ನೀರು ನೀಡಲು ಸಾಧ್ಯವೇ ಇಲ್ಲವೆಂದರು. ಆದರೆ ನಮ್ಮ ಮಾತು ಯಾರೂ  ಕೇಳುವವರಿರಲಿಲ್ಲ.

 

ಕ್ರಿ.ಶ. ೨೦೦೨ರ ಜೂನ್ ೧೫ರಂದು ಕೆಂಗ್ರೆ ಜಲಾನಯನ ಕ್ಷೇತ್ರದ ರೈತರ ತುರ್ತು ಸಭೆ ನೀರ್ನಹಳ್ಳಿ ಮಾಧ್ಯಮಿಕ ಶಿಕ್ಷಣಾಲಯದಲ್ಲಿ ನಡೆಸಲು ಹೊಸ್ಮನೆ ಮಂಜುನಾಥ ಹೆಗಡೆ  ಜತೆ ಕೂಡಿ ನಿರ್ಧರಿಸಿದೆ.  ನಗರಕ್ಕೆ ನೀರು ಒದಗಿಸುವ ಎಡಿಬಿ ಯೋಜನೆಗೆ ಸಭೆಯಲ್ಲಿ ತೀವ್ರ ವಿರೋಧ ವ್ಯಕ್ತವಾಯಿತು. ನಗರದವರು ಹಳ್ಳಿಗರ ನೀರು ಕಸಿಯುತ್ತಾರೆಂದು ಸಂಘಟಿತರಾದರು, ಕೆಂಗ್ರೆ ಜಲಾನಯನ ಹಿತರಕ್ಷಣಾ ಸಮಿತಿ ರಚನೆಯಾಯಿತು. ನೀರ್ನಹಳ್ಳಿ ಸೀತಾರಾಮ ಹೆಗಡೆ ಅಧ್ಯಕರು, ನಾನು ಸಂಚಾಲಕನಾಗಿದ್ದೆ.  ಜನಜಾಗೃತಿ ಸಭೆ, ಚಳುವಳಿ, ಸಮೀಕ್ಷೆ ಹೀಗೆ ವಿವಿಧ ಮಾರ್ಗಗಳಲ್ಲಿ ವಿರೋಧ ಹೆಚ್ಚಿತು. ನಗರಸಭೆಯ  ಅಂದಿನ ಪೌರಾಯುಕ್ತ ಮಹೇಂದ್ರಕುಮಾರ್‌ರಂತೂ ‘ನಗರಕ್ಕೆ ನೀರು ನೀಡದಿದ್ದರೆ ಹಳ್ಳಿಗರು ಶಿರಸಿ ಪೇಟೆಗೆ ಬರಬಾರದು, ಇಲ್ಲಿ ಅಡಿಕೆ ಮಾರಾಟ ಮಾಡಬಾರದು’  ವಿಚಿತ್ರ ಹೇಳಿಕೆ ನೀಡಿದರು! ಚಳವಳಿಯ ಕಾವು ಏರಿತು. ಯೋಜನೆಯ ವಿಮರ್ಶೆ ನಡೆಯಿತು. ನಗರದ ನೀರಿನ ಅಪವ್ಯಯದ ವಿವಿಧ ಮುಖಗಳ ಅನಾವರಣ ಮಾಡಿದೆವು. ನಗರದ ಕೆರೆಗಳ ಹೂಳು ತೆಗೆಸಿ ಅಂತರ್ಜಲ ಹೆಚ್ಚಿಸಲು ಆಗ್ರಹಿಸಿದೆವು.   ಕೆಂಗ್ರೆಯಲ್ಲಿ ೧೭೫ ಅಶ್ವಶಕ್ತಿಯ ಪಂಪ್ ನಗರಕ್ಕೆ ನೀರು ನೀಡುತ್ತಿದೆ, ಮತ್ತೆ ಅಲ್ಲಿ ಆಣೆಕಟ್ಟು ನಿರ್ಮಿಸುವ ಬದಲು ನೀರು ಸರಬರಾಜಿಗೆ ಪರ್ಯಾಯ ದಾರಿ ಹುಡುಕಬೇಕೆಂದು ಆಗ್ರಹಿಸಿದೆವು. ಸತತ ೫-೬ ತಿಂಗಳ ಕಾಲ ನಡೆದ ಹೋರಾಟದ ಪರಿಣಾಮ ಕೆಂಗ್ರೆ ಯೋಜನೆ ಸ್ಥಗಿತವಾಯಿತು.  ಇದಕ್ಕೆ  ಹಲವರು ಸಹಕಾರ ನೀಡಿದರು. ಹೋರಾಟದ ಮಾರ್ಗದಲ್ಲಿ ಕಾಲ ಕಳೆದ ನಾವು ಈಗ ನಗರದಲ್ಲಿ ನೀರಿಂಗಿಸಲು ಮಾರ್ಗದರ್ಶನ ನೀಡಲು ಮುಂದಾದೆವು. ಸ್ವತಃ ೫-೬ಜನ ಕೆಲಸಗಾರರನ್ನು ಸೇರಿಸಿಕೊಂಡು ಇಂಜಿನಿಯರ್ ಹುಣಸೆಕೊಪ್ಪ ರಾಜೇಂದ್ರ ಹೆಗಡೆ, ಜಿ.ಎಮ್. ಹೆಗಡೆ ಗಡಿಕೈ ಸಹಕಾರದೊಂದಿಗೆ ಮಳೆಕೊಯ್ಲಿನ ಕೆಲಸ  ಆರಂಭವಾಯಿತು. ಆಸಕ್ತರಿಗೆ ಶಿರಸಿ ನಗರದಲ್ಲಿ ಉಚಿತವಾಗಿ ನೀರಿಂಗಿಸಲು ಮಾರ್ಗದರ್ಶನ ನೀಡುವ ಕೆಲಸವನ್ನು ಕಳೆದ ೨೦೦೩ರಿಂದ ಆರಂಭಿಸಿದೆವು. ಈವರೆಗೆ ಸುಮಾರು ೩೦೦ಕ್ಕೂ ಹೆಚ್ಚು ಮನೆಗಳಲ್ಲಿ ನೀರಿಂಗಿಸುವ ರಚನೆಗಳಾಗಿವೆ. ನೀರಿಂಗಿಸಿ ಎಂದು ಭಾಷಣ ಮಾಡುವದಕ್ಕಿಂತ  ಸ್ವತಃ ಕಾರ್ಯದಲ್ಲಿ ತೊಡಗಿಸಿಕೊಂಡಾಗ ಅನುಭವ ಪಾಠ ದೊರಕಿದೆ.

 

ಜಡ್ಡಿಕೆರೆಗೆ ಜೀವಕಳೆ

ಕರೆಜಡ್ಡಿ ಎಂಬುದು ಗ್ರಾಮದ ಹಾರ್ನಳ್ಳಿ ಪ್ರದೇಶದಲ್ಲಿದೆ. ಸ.ನಂ. ೧೪೮ರಲ್ಲಿನ ಕೆರೆಗೆ ನೀರಾವರಿ ಕರ ನೀಡುವಂತೆ ಕ್ರಿ.ಶ. ೧೯೮೯ರಲ್ಲಿ ಸರಕಾರ ಆದೇಶಿಸಿತು. ೧೦ ಜನ ರೈತರು ೩ ಸಾವಿರ ರೂಪಾಯಿ ನೀಡಬೇಕೆಂದು ನೋಟಿಸಿನಲ್ಲಿತ್ತು. ಇದು ಯಾವ ಕೆರೆಯೆಂದು ಹುಡುಕಿದರೆ ಅಲ್ಲಿ ಕೆರೆಯೇ ಇರಲಿಲ್ಲ! ಹುಲ್ಲುಜಡ್ಡು ಆವರಿಸಿತ್ತು. ಕುಂಟುನೇರಳೆ, ನೀರತ್ತಿ ಗಿಡಗಳು ತುಂಬಿದ್ದವು. ಮಳೆಗಾಲದಲ್ಲೂ ನೀರು ನಿಲ್ಲದ ಸಮತಟ್ಟಾದ ಜಾಗವಾಗಿತ್ತು. ಸುಮಾರು ೭೦ ವರ್ಷದಿಂದ ಈ ಕೆರೆ ಇದೇ ಸ್ಥಿತಿಯಲ್ಲಿತ್ತು ಎಂದು ಊರಿನ ಹಿರಿಯ ಸೀತಾರಾಮ ಭಟ್ ಹೇಳಿದ್ದರು.  ಹೀಗಾಗಿ ಕೆರೆ ಇದ್ದ ಪ್ರದೇಶಕ್ಕೆ ಲಾಗಾಯ್ತಿನಿಂದ ಕೆರೆಜಡ್ಡಿ ಎಂಬ ಹೆಸರು ಬಳಕೆಯಲ್ಲಿತ್ತು. ಹಳೆ ಕೆರೆಗಳ ಹೂಳು ತೆಗೆಯುವ ಕೆಲಸಗಳನ್ನು ಸರಕಾರ  ಆರಂಭಿಸಿತ್ತು. ಕ್ರಿ.ಶ. ೨೦೦೩ರಲ್ಲಿ ವಿಶ್ವೇಶ್ವರ ಹೆಗಡೆ ಕಾಗೇರಿ ಶಾಸಕರಾಗಿದ್ದರು. ಸುಮಾರು ಒಂದು ಕಾಲು ಎಕರೆ ವಿಸ್ತೀರ್ಣದ ಕೆರೆಯ ಹೂಳು ತೆಗೆಯಲು ನೆರವಾಗುವಂತೆ ಅರ್ಜಿ ಸಲ್ಲಿಸಿದೆವು. ಒಂದು ಲಕ್ಷ ರೂಪಾಯಿ ಮಂಜೂರಿಯಾಯಿತು. ಇದನ್ನು ಗ್ರಾಮಸ್ಥರೇ ಸೇರಿ ದುರಸ್ತಿ ಮಾಡಿಸಬೇಕು ಎಂಬುದು ಉದ್ದೇಶ. ಕಾಮಗಾರಿ ಮಂಜೂರಿಯಾಗಿ ಕೆಲಸ ಸರಿಯಾಗದಿದ್ದರೆ ಟೀಕಿಸುವ ನಾವು ಸ್ವತಃ ಸರಿ ಮಾಡಲು ಹೆಜ್ಜೆಯಿಡಬೇಕು. ‘ಸರಕಾರದ ಹಣ ಸಮಯಕ್ಕೆ ಬರುವದಿಲ್ಲ, ಮಂಜೂರಿಯಾದಷ್ಟು ಹಣ ನೀಡುವದಿಲ್ಲ, ಒಮ್ಮೆ ಹಣ ನೀಡದಿದ್ದರೆ ಮುಂದಾದವರಿಗೆ ನಷ್ಟವಾಗುತ್ತದೆ’ ಮಾತು ಕೇಳಿದವು. ಗುತ್ತಿಗೆದಾರರಿಂದ ಕೆರೆ ಹೂಳು ತೆಗೆಸುವುದು, ಸ್ಥಳೀಯ ದೇವಾಲಯದ ಒಂದು ಭಾಗದ ಪ್ಲಾಸ್ಟರಿಂಗ್  ಕೆಲಸ ಇದರ ಜತೆಗೆ ಪೂರೈಸುವುದೆಂಬ ಲೆಕ್ಕಾಚಾರ ನಡೆಯಿತು. ಕೆರೆಯ ಕೆಲಸ ನಾವೇ ಮಾಡಿಸಬೇಕು, ಹೆಚ್ಚು ಉಳಿದ ಹಣವನ್ನು  ದೇವಾಲಯದ ಕೆಲಸಕ್ಕೆ ಬಳಸುವ ನಿರ್ಧಾರಕ್ಕೆ ಒತ್ತು ನೀಡಿ ಕೆಲಸ ಶುರುವಾಯಿತು. ೨೨೦ ಅಡಿ ಉದ್ದ, ೧೬೦ ಅಡಿ ಅಗಲ, ೩ ಅಡಿ ಆಳದ ಕೆರೆ ರೂಪುಪಡೆಯಿತು. ಸುಮಾರು ೭೫ ಲಕ್ಷ ಲೀಟರ್ ನೀರು ಸಂಗ್ರಹಣಾ ಸಾಮರ್ಥ್ಯದ ಅಚ್ಚುಕಟ್ಟಾದ ರಚನೆ ಕೆರೆಜಡ್ಡಿಯಲ್ಲಿ ಮೈದಳೆಯಿತು. ಕೆರೆಯ ಸುತ್ತ ಹೊರ ಅಗಳ ನಿರ್ಮಿಸಿ, ಕಲ್ಲು ಹಲಗೆಗಳನ್ನು  ಇಟ್ಟೆವು. ಕೆಲಸ ನಡೆಯುವ ಪ್ರತಿ ಹಂತದಲ್ಲಿ  ವೀಕ್ಷಣೆ ನಡೆಸಿ ನಿರ್ಮಾಣ ವ್ಯವಸ್ಥಿತವಾಗುವಂತೆ ಗಮನ ನೀಡಿದೆವು. ದೇವಾಲಯದ ಪ್ಲಾಸ್ಟರಿಂಗ್ ಮುಗಿಯಿತು. ಮತ್ತೆ  ಉಳಿದ ೧೫,೦೦೦ ರೂಪಾಯಿಗಳಲ್ಲಿ ಶಾಂತೇಶ್ವರ ದೇವಾಲಯಕ್ಕೆ ಅಡುಗೆ ಪಾತ್ರೆ ಖರೀದಿಯಾಯ್ತು! ಮದುವೆ, ಸಮಾರಂಭದ ವಿಶೇಷ ದಿನಗಳಲ್ಲಿ ೫೦೦-೬೦೦ಜನ ಸೇರಿದರೆ  ಊರಿನ ಮನೆ ಮನೆಗೆ ಹೋಗಿ ದೊಡ್ಡ ದೊಡ್ಡ ಪಾತ್ರೆ ಸಂಗ್ರಹಿಸಬೇಕಿತ್ತು. ಅಡುಗೆ ಪಾತ್ರೆ ಖರೀದಿಸಿದರೆ ವಿಶೇಷ ಸಂದರ್ಭಕ್ಕೆ ಅನುಕೂಲ  ಎಂದು ನಿರ್ಧರಿಸಿದೆ. ಈಗ ಇದು ಬಹಳ ನೆರವಾಗಿದೆ.

ಚಿತ್ರ-೧೩

ಚಿತ್ರ-೧೪

 

ಮಳೆ ಆರಂಭವಾಯಿತು, ಜಡ್ಡಿಕೆರೆಗೆ ನೀರು ಭರ್ತಿಯಾಯಿತು. ದಂಡೆಯ ಮಣ್ಣು ಮಳೆ ಪ್ರಹಾರಕ್ಕೆ ಮತ್ತೆ ಪುನಃ ಕೆರೆ ಪಾತ್ರ ಸೇರಿವುದು ತಪ್ಪಿಸಲು ದಂಡೆಯಲ್ಲಿ ರಾಗಿ ಬಿತ್ತಿದೆವು. ನೀರ್ನಹಳ್ಳಿ ಸೀತಾರಾಮ ಹೆಗಡೆ ಪ್ಯಾರಾಗ್ರಾಸ್ ಹಾಕಲು ಸೂಚಿಸಿ ಬೀಜ ಕಳಿಸಿದರು. ವಿವಿಧ ಜಾತಿಯ ಹುಲ್ಲು ನೆಟ್ಟೆವು. ಫಲವತ್ತಾದ ಕೆರೆಹೂಳಿನ ಮಣ್ಣಲ್ಲಿ ಹಸುರುಹುಲ್ಲು ಈಗಲೂ ಸಮೃದ್ಧವಾಗಿ ವರ್ಷವಿಡೀ ಇರುತ್ತದೆ. ಕೆರೆದಂಡೆಯ ಮಣ್ಣನ್ನು ಹುಲ್ಲಿನ ಬೇರು ಹಿಡಿದಿವೆ. ಮಳೆಗಾಲ ಆರಂಭದಲ್ಲಿ ತುಂಬುವ ಕೆರೆಯಲ್ಲಿ ಮಾರ್ಚವರೆಗೆ ನೀರಿರುತ್ತದೆ. ಆದರೆ ಈ ನೀರು ಕೃಷಿ ಭೂಮಿಗೆ ನೇರ ಹರಿಯುವದಿಲ್ಲ, ನಿಂತು ಇಂಗುವಂತಹ ಇಂಗುಕೆರೆಯಾಗಿದೆ. ಇದರಿಂದ ಅಡಿಕೆತೋಟದ ಅಂಚಿನಲ್ಲಿರುವ ಹಳೆಯ ಕೆರೆಗೆ ಇನ್ನಷ್ಟು ನೀರಿನ ಬಲ ದೊರಕಿದೆ. ಕೆರೆ ನಿರ್ಮಾಣದ ಗುದ್ದಲಿಪೂಜೆಗೆ ಜನಪ್ರತಿನಿಧಿಗಳನ್ನು ಕರೆಯುತ್ತೇವೆ, ನಿರ್ಮಾಣದ ಬಳಿಕ ಮರೆಯುತ್ತೇವೆ. ಹಾರ್ನಳ್ಳಿ ಕೆರೆ ನಿರ್ಮಾಣ ಯಶಸ್ಸಿನ ಸುದ್ದಿ ಜನಪ್ರತಿನಿಧಿ, ಅಧಿಕಾರಿಗಳಿಗೆ ತಲುಪಿತು. ಕೆರೆ ನೋಡುವ ಆಸಕ್ತಿ ಸ್ವತಃ ವ್ಯಕ್ತಪಡಿಸಿದರು. ಶಿರಸಿಯ ಸಹಾಯಕ ಆಯುಕ್ತರಾದ ನೂರ್ ಮನ್ಸೂರ್‌ರಂತೂ ಕೆರೆದಂಡೆಯಲ್ಲಿ ಗಂಟೆಗಳ ಕಾಲ ಕೂತರು. ಕೇವಲ ಒಂದು ಲಕ್ಷ ರೂಪಾಯಿಯಲ್ಲಿ ಇಷ್ಟೇಲ್ಲ ದೊಡ್ಡಕೆರೆ ಅಚುಕಟ್ಟಾಗಿ ನಿರ್ಮಿಸಲು ಸಾಧ್ಯವಾಗಿದ್ದಕ್ಕೆ ಸಂತಸ ಪಟ್ಟರು. ‘ ಕೆರೆ ನಿರ್ಮಿಸಿದ ಗಾತ್ರ ನೋಡಿದರೆ ೪-೫ಲಕ್ಷ ರೂಪಾಯಿ ಖರ್ಚು ಮಾಡಿದಲ್ಲಿಯೂ ಇಷ್ಟು ದೊಡ್ಡ ಕೆರೆ ನಿರ್ಮಿಸಿದ್ದು ಕಂಡಿಲ್ಲ! ಗ್ರಾಮಸ್ಥರು ಸ್ವತಃ ಆಸಕ್ತಿವಹಿಸಿದರೆ ಊರಿನಕೆರೆ ಹೇಗೆ ಬದಲಿಸಬಹುದೆಂಬುದು ಇಲ್ಲಿ ಸಾಬೀತಾಗಿದೆ’ ತಾಲೂಕಾ ಪಂಚಾಯತ್ ಸದಸ್ಯೆ ಮತ್ತಿಘಟ್ಟದ ಶೋಭಾ ಹೆಗಡೆ ಕೆರೆ ಎದುರು ಸತ್ಯ ತೆರೆದಿಟ್ಟರು. ‘ನೀರ ನೆಮ್ಮದಿಗೆ ಪತ್ರ್ರಿಕೋದ್ಯಮ’ ಎಂಬ ಕಾರ್ಯಕ್ರಮ ಶಿರಸಿಯಲ್ಲಿ ಮೇ ೨೦೦೪ರಲ್ಲಿ ನಮ್ಮ ಮಾಧ್ಯಮ ಸಂಸ್ಕೃತಿ ಅಭಿವೃದ್ಧಿ ಕೇಂದ್ರದ ಮುಖೇನ ಸಂಘಟಿಸಿದ್ದೆವು. ಶ್ರೀ’ಪಡ್ರೆ  ನೇತ್ರತ್ವದಲ್ಲಿ ರಾಜ್ಯದ ವಿವಿಧ ಭಾಗದಲ್ಲಿ ಜಲಸಂರಕ್ಷಣೆ ಕುರಿತು ಬರಹ ಬರೆಯುತ್ತಿರುವ ೩೦ ಬರೆಹಗಾರರು ಭಾಗವಹಿಸಿದರು. ಕ್ಷೇತ್ರಭೇಟಿಯಲ್ಲಿ ಎಲ್ಲರೂ ಕೆರೆ ವೀಕ್ಷಿಸಿದರು. ಜಡ್ಡಿಕೆರೆಗೆ ಜೀವಕಳೆ ತುಂಬಿದ ಸಂತಸ ನೋಡಲು ಜಲಸಂರಕ್ಷಣೆಯ ಅಧ್ಯಯನ ಪ್ರವಾಸಕ್ಕೆ ನೂರಾರು ಜನ ಕಳವೆ ದಾರಿ ಹಿಡಿದರು.

 

 

ಮಣ್ಣು ಮಾತಾಡಿತು, ಹುಲ್ಲು ಬದಲಾಯಿತು

ಚಳಿಗಾಲದಲ್ಲಿ ಎಲೆ ಉದುರಿಸುವ ಮರ ಜಾತಿಗಳು ನಮ್ಮ ಸೊಪ್ಪಿನ ಬೆಟ್ಟಗಳಲ್ಲಿವೆ. ವಾಟೆಮರ ನವೆಂಬರ್‌ದಲ್ಲಿ ಎಲೆ ಉದುರಿಸಲು ಆರಂಭಿಸುತ್ತದೆ. ಬಳಿಕ ಅಣಲೆಮರದ ಸರದಿ, ತರುವಾಯದಲ್ಲಿ ಕೌಲು, ಹುನಾಲು, ಮತ್ತಿ, ತಾರಿ, ನೇರಳೆಗಳು ಎಲೆ ಕಳಚುತ್ತವೆ. ಗುಡ್ಡದ ತುತ್ತ ತುದಿಯ ಒಣ ಪ್ರದೇಶದ ಮರಗಳು ಬೇಗ ಎಲೆ ಉದುರಿಸಿದರೆ ತಗ್ಗಿನ ತಂಪಿನ ನೆಲೆಗಳಲ್ಲಿರುವವು ಮುಂದಿನ ೧೫-೨೦ದಿನಗಳ ತರುವಾಯ ಎಲೆ ಉದುರಿಸುತ್ತವೆ. ನೆಲದಲ್ಲಿ ನೀರಿನ ಅಂಶ ಹೆಚ್ಚಿದಂತೆ ಎಲೆ ಉದುರಿಸುವ ಕೆಲಸ ನಿಧಾನವಾಗುತ್ತದೆ. ಅಡಿಕೆ ತೋಟದ ಒಳಕಂಟ, ಕೆರೆ, ಹೊಳೆಯಂಚಿನಲ್ಲಿರುವ ಮತ್ತಿ, ಹುನಾಲು ಮರಗಳಲ್ಲಿ  ಈ ಚಿತ್ರವನ್ನು  ನೋಡಬಹುದು. ನಮ್ಮ ಸೊಪ್ಪಿನ ಬೆಟ್ಟದಲ್ಲಿ ಪ್ರತಿ ಮಳೆಗಾಲದಲ್ಲಿ  ಒಂದು ಚದರ್ ಮೀಟರ್ ಜಾಗದಲ್ಲಿ ಸುಮಾರು ೨೩೦೦-೨೬೦೦ಲೀಟರ್ ನೀರು ಸುರಿಯುತ್ತದೆ. ಒಂದು ಎಕರೆಯಲ್ಲಿ ೭೫-೮೦ಲಕ್ಷ ಲೀಟರ್ ಸುರಿಯುತ್ತದೆ! ನೀರು ಹಿಡಿಯಲು ಚಂದ್ರಬರಾವು, ಕಟ್‌ಅಗಳ ರಚನೆಗಳನ್ನು ನಿರ್ಮಿಸಿದ ವರ್ಷಗಳಲ್ಲಿ  ಭೇಟಿ ನೀಡಿದವರು ಎಷ್ಟು ಲಕ್ಷ ಲೀಟರ್ ನೀರು ಭೂಮಿಗೆ ಇಂಗಿಸಿದ್ದೀರಿ? ಪ್ರಶ್ನಿಸುತ್ತಿದ್ದರು. ಮಳೆ ಸುರಿಯುವ ಅಂದಾಜು ಹೇಳಬಹುದು, ಇಂಗಿಸಿದ ನೀರಿನ ನಿಖರ ಲೆಕ್ಕ ಹೇಳುವುದನ್ನು ಸಧ್ಯಕ್ಕೆ ವಿಜ್ಞಾನಿಗಳಿಗೆ ಬಿಡೋಣ!

ಚಿತ್ರ-೧೫

 

ಮರ ಎಲೆ ಉದುರಿಸುವ ವೈಖರಿಯಲ್ಲಿ ನೀರಿನ ಕತೆ ವಿವರಿಸಿದೆ. ನೀರಿಂಗಿಸುವ ಕೆಲಸ ಮಾಡಿದ ಬಳಿಕ ಬೆಟ್ಟದ ತಗ್ಗು ಪ್ರದೇಶದಿಂದ ಅರ್ಧಭಾಗದ ಮರಗಳು ನಿಧಾನಕ್ಕೆ ಎಲೆ ಉದುರಿಸುವ ಸೋಜಿಗ ತೋರಿಸಿದೆ. ಅತ್ಯಂತ ತಂಪಿನ ಪ್ರದೇಶದಲ್ಲಿ ಬೆಳೆಯುವ ಅಕ್ಕಲಕಾರ ಸಸ್ಯ ಗುಡ್ಡದ ತುದಿಯಲ್ಲಿ  ಬೇಸಿಗೆಯಲ್ಲಿ ಕಾಣಿಸಿದೆ. ಬೋಳು ನೆಲದಲ್ಲಿ ಬೂರ್‌ಕರಡ ಬೆಳೆಯುತ್ತಿತ್ತು ಈಗ ಅಲ್ಲಿ  ತಂಪು ನೆಲದ ಹುಲ್ಲುಗಳಾದ ಮರದಾಳಿ, ಜಲಗಗಳು ಬೆಳೆದಿದ್ದವು. ಸಸ್ಯಗಳ ಆರೋಗ್ಯ, ಸೊಪ್ಪು ಉತ್ಪಾದನಾ ಪ್ರಮಾಣ ಹೆಚ್ಚಿತು. ನೆಲದ ತುಂಬ ನೀರಿಂಗಿಸುವ ರಚನೆ ಮಾಡಿದ್ದರಿಂದ ಹುಲ್ಲು ಕಡಿಮೆಯಾಗುತ್ತದೆಂದು ಊಹಿಸಿದ್ದೆವು, ಇಮ್ಮಡಿ ಪ್ರಮಾಣದಲ್ಲಿ  ಹುಲ್ಲು ಬೆಳೆಯಿತು! ಬೆಂಕಿ ಹಾಕುವದು, ಜಾನುವಾರು ಮೇಯಿಸುವ ಕೆಲಸಗಳನ್ನು ಕೈಬಿಟ್ಟಿದ್ದರಿಂದ ಮಣ್ಣಿನ ಆರೋಗ್ಯ ಸುಧಾರಿಸಿತು. ಒಂದು ಎಕರೆ ಸೊಪ್ಪಿನ ಬೆಟ್ಟದ ಜಾಗದಲ್ಲಿ ತೆರಕು ತೆಗೆಯಲಿಲ್ಲ, ಹುಲ್ಲು ಕಡಿಯಲಿಲ್ಲ, ಬೆಂಕಿ ಹಾಕಲಿಲ್ಲ, ಸೊಪ್ಪು ಕಡಿಯದಿದ್ದರೆ ಏನಾಗುತ್ತದೆ? ಕಳೆದ ಮೂರು ವರ್ಷಗಳಿಂದ ಮುಳ್ಳುಕಂಟಿ ಸಹ ಕಡಿಯಲು ಪ್ರವೇಶಿಸದ ಜಾಗದಲ್ಲಿ  ಎರಡು ನವಿಲುಗಳು ತತ್ತಿ ಇಟ್ಟು ಪ್ರತಿ ವರ್ಷ ಮರಿಮಾಡುತ್ತಿವೆ, ನೆಲದ ಎರೆಹುಳು ಬೇಟೆಗೆ ಬರುವ ಕಾಡು ಹಂದಿ ಅಲ್ಲಿನ ಬಹುತೇಕ ನೆಲವನ್ನು ಉಳುಮೆ ಮಾಡಿದೆ! ನಮ್ಮ ಸುತ್ತಲಿನ ಪರಿಸರದ ಸೂಚಕಗಳು ಮಣ್ಣು ನೀರಿನ ಅಂತರಂಗವನ್ನು  ಚೆನ್ನಾಗಿ ಹೇಳುತ್ತವೆ.

 

ಪುರಾತನ ಕೆರೆಗಳಿಗೆ ಪುಟ್ಟ ನಮನ

ಕರ್ನಾಟಕದ ಕೆರೆ ನೀರಾವರಿ ಇತಿಹಾಸದ ಬಗೆಗೆ ಸಂಶೋಧನಾ ಗ್ರಂಥವನ್ನು ಹಂಪಿ ಕನ್ನಡ ವಿಶ್ವವಿದ್ಯಾಲಯ ಪ್ರಕಟಿಸಿದೆ. ಬೆಂಗಳೂರಿನ ವಿಜ್ಞಾನಿ ಎಸ್.ಟಿ. ಸೋಮಶೇಖರರೆಡ್ಡಿ ಕೆರೆ ನೀರಾವರಿ ಪರಂಪರೆಯ ಬಗೆಗೆ ಅಧ್ಯಯನ ಪುಸ್ತಕ ಬರೆದಿದ್ದಾರೆ. ಜಲಸಂರಕ್ಷಣೆಯ ಪರಂಪರೆಯ ನೋಟ ಅರಿಯಲು ಇಂತಹ ಪುಸ್ತಕಗಳನ್ನು ಓದಬೇಕು, ಆಗ ಕೆರೆ ಎಂದರೆ ನೀರು, ನೀರಾವರಿ ಎಂದಷ್ಟೇ ನೋಡುವ ದೃಷ್ಟಿ ಬದಲಾಗುತ್ತದೆ., ಪರಂಪರೆಯ ದ್ರಶ್ಯ ಕಾಣುತ್ತದೆ. ಕ್ರಿ.ಶ. ೧೮೦೧ರ ಫೆಬ್ರುವರಿ ೧೮ರಂದು ಭಟ್ಕಳಕ್ಕೆ ಬಂದ ಪ್ರವಾಸಿ ಪ್ರಾನ್ಸಿಸ್ ಬುಕಾನನ್ ಇಲ್ಲಿನ ಕುಂಬಾರ ಹಳ್ಳದ ಮಣ್ಣಿನ ಒಡ್ಡು ನಿರ್ಮಾಣದ ಬಗೆಗೆ ವಿವರಿಸುತ್ತಾರೆ. ಪುನಃ ಈ ಸ್ಥಳಕ್ಕೆ ಕ್ರಿ.ಶ. ೨೦೦೧ರಲ್ಲಿ ನಾನು ಹೋಗಿದ್ದಾಗ ಈಗಲೂ ಒಡ್ಡು ನಿರ್ಮಿಸುತ್ತಿರುವ ರೈತ ಜ್ಞಾನ ಅಚ್ಚರಿ ಹುಟ್ಟಿಸಿತು. ೨೦೦ ವರ್ಷಗಳ ಹಳೆಯ ದಾಖಲೆ ಓದಿ ಈಗ ಒಡ್ಡು ನೋಡಿದಾಗ ಸಿಗುವ ಖುಷಿ ವಿವರಿಸಲು ಶಬ್ದಗಳು  ಸಿಗುವದಿಲ್ಲ. ಶಾಸನ, ಜನಪದ ಕತೆಗಳು ಕೆರೆ ನಿರ್ಮಾಣದ ಬಗೆಗೆ ನಮಗೆ ಧಾರಾಳ ಸಿಗುತ್ತವೆ. ಕೆರೆ ನೀರಾವರಿ ಪುಸ್ತಕ ಓದುವಾಗ ಕರ್ನಾಟಕದ ಪುರಾತನ ಕೆರೆಗಳ ವಿವರ ಸಂಗ್ರಹಿಸಿದೆ. ಕುತೂಹಲದಿಂದ ಹಳೆಯ ಕೆರೆ ನೋಡಲು ಪ್ರವಾಸ ಮಾಡಿದೆ. ಕದಂಬರ ಕಾಲದಲ್ಲಿ ೪ನೇ ಶತಮಾನದಲ್ಲಿ ನಿರ್ಮಿಸಿದ ಶಿರಸಿಯ ಗುಡ್ನಾಪುರ (ಗುಡ್ಡತಟಾಕ)ಕೆರೆ ಎರಡು ಗುಡ್ಡಗಳ ನಡುವೆ ಇಳಿಜಾರಿಗೆ ಅಡ್ಡವಾಗಿದೆ. ಸ್ಥಳೀಯ ಕಲ್ಲು, ಮಣ್ಣುಗಳನ್ನು ಬಳಸಿ ನಿರ್ಮಿಸಿದ ಕೆರೆ ಇಷ್ಟು ವರ್ಷಗಳ ಕಾಲ ಸುರಕ್ಷಿತವಾಗಿ ಉಳಿದದ್ದು ನಿರ್ಮಾಣ ಸಾಧ್ಯತೆ ಹೇಳುತ್ತದೆ, ಕಾಂಕ್ರೀಟ್, ಕಬ್ಬಿಣಕ್ಕಿಂತ ಮಣ್ಣಿನ ಬಗೆಗೆ ವಿಶ್ವಾಸ ಮೂಡಿಸುತ್ತದೆ.

ಚಿತ್ರ-೧೬

 

ಶಿಕಾರಿಪುರದ ತಾಳಗುಂದದ ಪ್ರಣವೇಶ್ವರ ಗುಡಿಯನ್ನು ಸ್ಥಳೀಯರು ಪಣ್ಣಮ್ಮನ ಗುಡಿಯೆನ್ನುತ್ತಾರೆ. ಕೆರೆ ನೀರಾವರಿ ಇತಿಹಾಸ ಪ್ರಣವೇಶ್ವರ ಗುಡಿಯ ಪಕ್ಕ ಕಾಕುತ್ಸ್ಥವರ್ಮನ ಶಾಸನವಿರುವ ದಾಖಲೆ ಹೇಳುತ್ತದೆ. ದೇವಾಲಯ ನಿರ್ಮಿಸಿ ೪ನೇ ಶತಮಾನದಲ್ಲಿ ಕೆರೆ ನಿರ್ಮಿಸಿದ ವಿವರಗಳಿವೆ. ಇದು ಕರ್ನಾಟಕ ಅತ್ಯಂತ ಪುರಾತನ ಕೆರೆಗಳಲ್ಲಿ ಎರಡನೆಯದು! ಈಗ ಹೋಗಿ ನೋಡಿದರೆ ದೇವಾಲಯ, ಶಾಸನ, ಕೆರೆ ನೋಡಬಹುದು. ಬೇಸಿಗೆಯಲ್ಲಿ ಕೆರೆ ನೀರು ಬಳಸಿ ಭತ್ತ ಬೆಳೆಯುತ್ತಾರೆ. ೧೭೦೦ವರ್ಷಗಳ ಹಿಂದೆ ಕಣಿವೆಯಲ್ಲಿ ನಿರ್ಮಿಸಿದ ಮಣ್ಣಿನ ಒಡ್ಡು ಈಗಲೂ  ಗಟ್ಟಿಯಾಗಿದೆ!. ಮಲೆನಾಡಿನ ಕಣಿವೆಗಳಲ್ಲಿ ಕೆರೆ ನಿರ್ಮಾಣ ಯೋಗ್ಯ ಜಾಗ ಆಯ್ಕೆ ವಿಚಾರದಲ್ಲಿ ಕಲಿಯುವದು ಬಹಳವಿದೆ. ಹಳೆಯ ಕೆರೆಗಳು  ಪಾಠ ಹೇಳುವಷ್ಟು  ಪ್ರಭಾವಿಯಾಗಿವೆ.  ಇದಲ್ಲದೇ ರಾಜ ಮಹಾರಾಜರು  ಗುಡ್ಡದ ತುತ್ತ ತುದಿಯಲ್ಲಿ  ಕೋಟೆ ನಿರ್ಮಿಸಿ  ‘ಕೋಟೆಕೆರೆ’ ರೂಪಿಸಿದ್ದಾರೆ. ಕೋಟೆಕೆರೆಗಳು ಜಲಸಂರಕ್ಷಣೆಯ ಕಾಲದ ಕತೆ ವಿವರಿಸುತ್ತವೆ. ಅಧ್ಯಯನ ದೃಷ್ಟಿಯಿಂದ ಈ ಸ್ಥಳಗಳನ್ನು ಗಮನಿಸಿದರೆ ಜಲ ಸಂರಕ್ಷಣೆಗೆ ಹೊಸ ಸ್ಪೂರ್ತಿ ದೊರೆಯುತ್ತದೆ.

ಕಣಿವೆ ಕೆರೆ ವಿ’ಜಯ

ಕ್ರಿ,ಶ ೨೦೦೫ರ ಜೂನ್ ೫, ಬೆಳಿಗ್ಗೆ ಶಿರಸಿಯ ಉಪ ಅರಣ್ಯ ಸಂರಕ್ಷಣಾಧಿಕಾರಿ ವಿಜಯಮೋಹನ್ ರಾಜ್  ಮನೆಗೆ ಬಂದರು. “ವಿಶ್ವ ಪರಿಸರ ದಿನ ಅದು, ಯಾವತ್ತಿನ  ಭಾಷಣ ಬಿಟ್ಟು ಬೇರಾವುದಾದರೂ ಹೊಸ ಸಂಗತಿ ನೋಡುವ ಇಚ್ಛೆ  ನಮ್ಮದು’ ಎಂದರು. ಕಳವೆ, ಗುಮ್ಮನಮನೆ, ಹೆಗ್ಗಾರ್ ಪ್ರದೇಶಗಳಲ್ಲಿ ರೈತರು ಬೆಳೆಸಿದ ಕಾಡು ನೋಡುವ ಕಾರ್ಯಕ್ರಮ ರೂಪಿಸಿದೆ. ಸಾವಿರಾರು ಎಕರೆ ಪ್ರದೇಶದಲ್ಲಿ ಯಾವ ಬೇಲಿ, ಸಸಿ ನಾಟಿಯ ಅಗತ್ಯವಿಲ್ಲದೇ ಸಂರಕ್ಷಣೆ ಮಾತ್ರದಿಂದ ರೈತರು ಕಾಡು ಬೆಳೆಸಿದ್ದರು. ೨೫-೩೦ ವರ್ಷಗಳ ಹಿಂದೆ ಬೋಳು ಗುಡ್ಡವಾಗಿದ್ದ ಮೈನರ್ ಜಂಗಲ್ಲುಗಳು  ಸಸ್ಯ ಸಮೃದ್ಧವಾಗಲು ಹಳ್ಳಿಗರ ಬಾಯ್ಬೇಲಿ ಶಕ್ತಿ ಮುಖ್ಯವಾಗಿತ್ತು. ಬೆಂಕಿ ನಿಯಂತ್ರಣ, ಸೊಪ್ಪು ಕಡಿತದ ಶಿಸ್ತು, ಗಿಡಕಟಾವು ನಿಷೇಧದ ಹೆಜ್ಜೆಗಳು ಸ್ಥಳೀಯ ಸಸ್ಯ ಅಭಿವೃದ್ದಿಗೆ ನೆರವಾಗಿದ್ದವು. ಅಗಳ ನಿರ್ಮಿಸಿ, ಮೂರು ವರ್ಷ ಕಾವಲುಗಾರರನ್ನು ನೇಮಿಸಿ ಅಕೇಸಿಯಾ ಬೆಳೆಸುವದಕ್ಕಿಂತ ರೈತ ವಿಧಾನ ನೋಡಲು ಪ್ರವಾಸ ಮಾಡಿದೆವು. ಶಿರಸಿಗೆ ಬರುವ ಪೂರ್ವದಲ್ಲಿ ವಿಜಯ್‌ಮೋಹನ್‌ರಾಜ್ ಗದಗದಲ್ಲಿ ಅಧಿಕಾರಿಯಾಗಿದ್ದವರು. ಅಲ್ಲಿ ಡಿ.ಆರ್. ಪಾಟೀಲ್ ಜತೆಗೂಡಿ ಕಪ್ಪತಗುಡ್ಡದ ಪ್ರದೇಶಗಳಲ್ಲಿ ಜಲಸಂರಕ್ಷಣೆಯ ವಿಶೇಷ ಕೆಲಸ ಮಾಡಿದ್ದರು. ಗದಗದ ಮಾಗಡಿ ಕೆರೆಗೆ ಕಾಯಕಲ್ಪ ನೀಡಲು ಪ್ರಯತ್ನಿಸಿ ಯಶಸ್ವಿಯಾಗಿದ್ದರು. ಗದಗದ ಈಚಲ ಹಳ್ಳಕ್ಕೆ ಮರುಜೀವ ನೀಡಲು ಜನಜಾಗೃತಿ ಮೂಡಿಸಲು ಪಾಟೀಲರು  ರಾಜಸ್ಥಾನದ ರಾಜೇಂದ್ರಸಿಂಗ್‌ರನ್ನು  ಕರೆಸುವಾಗ ವಿಜಯ್‌ಮೋಹನ್ ರಾಜ್ ಈ ಪ್ರಕ್ರಿಯೆಗಳಲ್ಲಿ ಶ್ರಮಿಯಿಸಿದ್ದರು. ವನ್ಯಜೀವಿ ಛಾಯಾಗ್ರಾಹಕರು, ನೈಸರ್ಗಿಕ ಅರಣ್ಯಗಳ ಬಗೆಗೆ ಆಸಕ್ತಿ ಉಳ್ಳವರು. ‘ಜನ ಉತ್ತಮವಾಗಿ ಸಸಿ ಬೆಳೆಸಿದ್ದಾರೆ, ಇಲಾಖೆ ಮಾಡಲಾಗದ್ದನ್ನು ಮಾಡಿದ್ದಾರೆ. ಇವರಿಗೆ ಈಗ ಅರಣ್ಯ ಇಲಾಖೆ ಏನು ಮಾಡಬಹುದು?’ ಚರ್ಚಿಸಿದೆವು. ಈ ಸ್ಥಳದಲ್ಲಿ  ನೀರಿಂಗಿಸುವ ಕೆಲಸ ಮಾಡಬೇಕು, ಹಣ್ಣು ಹಂಪಲು ನೀಡುವ ಇನ್ನಷ್ಟು ಸಸ್ಯ ಬೆಳೆಸಬಹುದೆಂಬ ಯೋಚನೆ ಆರಂಭವಾಯಿತು.

ಚಿತ್ರ-೧೭

 

ಜಪಾನ್ ನೆರವಿನ ಸುಸ್ಥಿರ ಅರಣ್ಯ ಹಾಗೂ ಜೀವವೈವಿಧ್ಯ ಸಂರಕ್ಷಣೆ ಯೋಜನೆ ಆಗಷ್ಟೇ ಜಾರಿಯಾಗಿತ್ತು. ನೆಡುತೋಪು ನಿರ್ಮಿಸುವಾಗ ಮಣ್ಣು ನೀರಿನ ಸಂರಕ್ಷಣೆಗೆ ಹಣ ವಿನಿಯೋಗಿಸಲು ನಿರ್ದೇಶನವಿತ್ತು. ನೀರಿಂಗಿಸಲು ಯಾವ ಮಾದರಿ ರಚನೆ  ಮಾಡಬಹುದು? ನಮ್ಮ ಸೊಪ್ಪಿನ ಬೆಟ್ಟದಲ್ಲಿ ಅಧಿಕಾರಿಗಳ ಜತೆ  ಒಮ್ಮೆ ಚರ್ಚೆ ನಡೆಯಿತು. ಚಂದ್ರಬರಾವು, ಕಟ್‌ಅಗಳ ಮಾದರಿಗಳು  ಅನುಕೂಲ. ಇದರ ಜತೆಗೆ ಕಣಿವೆ ಪ್ರದೇಶದಲ್ಲಿ ಕೆರೆ ನಿರ್ಮಿಸಬಹುದು, ಎರಡು ಗುಡ್ಡದ ನಡುವೆ ನೀರು ನಿಲ್ಲಿಸಬಹುದಾದ ಬಯಲಿರುವ ಆಯಕಟ್ಟಿನ ಜಾಗದಲ್ಲಿ ಕೆರೆ ಮಾಡಬಹುದು. ಕದಂಬರ ಕಾಲದಲ್ಲಿ ನಿರ್ಮಿಸಿದ ಕೆರೆಗಳು ಈಗಲೂ ಸುಸ್ಥಿತಿಯಲ್ಲಿರುವಾಗ ಮಣ್ಣಿನ ಒಡ್ಡಿನ ರಚನೆ ಮಾಡುವ ಅಗತ್ಯ ವಿವರಿಸಿದೆ. ಕೆರೆಗೆ ಜಾಗ ಆಯ್ಕೆ, ಒಡ್ಡಿನ ಸ್ವರೂಪದ ಬಗೆಗೆ ಸಲಹೆ ನೀಡುವದು ನನ್ನ ಕೆಲಸ, ಕೆರೆ ನಿರ್ಮಿಸಲು ಶಿರಸಿ ವಿಭಾಗದಲ್ಲಿ ವಿಜಯಮೋಹನರಾಜ್ ನೇತ್ರತ್ವದಲ್ಲಿ ಅರಣ್ಯ ಇಲಾಖೆ ಮುಂದಾಯಿತು. ಬಕ್ಕಳದ ಸಸ್ಯೋಧ್ಯಾನದಲ್ಲಿ  ಪ್ರಥಮ ಕೆರೆ ಆರಂಭ, ಬಳಿಕ ಸಾಲ್ಕಣಿ, ದೇವರಗದ್ದೆ, ಸಿದ್ದಾಪುರ ದುಗಡಿಕೊಪ್ಪ ಹೀಗೆ  ಶಿರಸಿ ವಿಭಾಗದ ೧೮ಕ್ಕೂ ಹೆಚ್ಚು ಕೆರೆಗಳ ಜಾಗ ಆಯ್ಕೆಗೆ ಓಡಾಡಿದೆವು. ಒಡ್ಡಿನ ಎತ್ತರ, ಹೆಚ್ಚುವರಿ ನೀರು ಹರಿಯುವ ಕಾಲುವೆ ನಿರ್ಮಾಣ ಹೀಗೆ ಪ್ರತಿ ಹಂತದ ನಿರ್ಮಾಣ ನೋಟ ಕಣಿವೆ ಕೆರೆ ನಿರ್ಮಾಣದ ಅನುಭವ ಪಾಠವಾಯಿತು. ಬಯಲುಸೀಮೆ ಪ್ರದೇಶಗಳಲ್ಲಿನ ಅವರ ಅನುಭವ, ಮಲೆನಾಡಿನ ನನ್ನ ಜ್ಞಾನಗಳು ಸರಣಿ ಕೆರೆಗಳ ಸ್ವರೂಪವಾಯಿತು. ಕೃಷಿ ಭೂಮಿಯ ಮೇಲ್ಬಾಗದಲ್ಲಿ ಸಣ್ಣಪುಟ್ಟ ಒರತೆ ಕೆರೆಗಳು ಮಾತ್ರವಿದ್ದ ಮಲೆನಾಡಿನಲ್ಲಿ ಕಾಡಿನಲ್ಲಿ ಕೆರೆ ನಿರ್ಮಿಸುವ ಹೊಸ ಪ್ರಯತ್ನಕ್ಕೆ ನಾಂದಿಯಾಯಿತು. ಬಿದ್ದ ಹನಿಯನ್ನು ಬಿದ್ದಲ್ಲೇ ಇಂಗಿಸುವ ಒಂದು ವಿಶಿಷ್ಟ ಸ್ವರೂಪವಾದ ಕಣಿವೆ ಕೆರೆಗಳು ಗುಡ್ಡದ ನೆತ್ತಿಯ ನೀರಿನ ಬ್ಯಾಂಕುಗಳು.

 

 

ಕೆರೆಗದ್ದೆ ಹಳ್ಳಕ್ಕೆ ಕೆರೆಗಳ ಮಾಲೆ !

ಕರೆಗದ್ದೆ ಎಂಬುದು ಕಳವೆ ಗ್ರಾಮದ ಒಂದು ಮಜರೆ. ಎರಡು ಗುಡ್ಡಗಳ ನಡುವಿನ ಕಣಿವೆಯಲ್ಲಿ ಭತ್ತ, ಅಡಿಕೆ, ಕಬ್ಬಿನ ಬೇಸಾಯ. ಯಚಡಿ ಗ್ರಾಮದ ರಾಮಲಿಂಗೇಶ್ವರ ದೇವಲಯದ ಕೆರೆಯಲ್ಲಿ ಜನಿಸುವ ಪುಟ್ಟತೊರೆ ಬಬ್ಬಿಸರ, ಜುಮ್ಮನಕೊಪ್ಪದ ಮುಖೇನ ೩ ಕಿಲೋ ಮೀಟರ್ ಹರಿದ ಬಳಿಕ ಕೆರೆಗದ್ದೆ ಹಳ್ಳವಾಗುತ್ತದೆ. ೧೨-೧೫ ಅಡಿ ಅಗಲದ ಪುಟ್ಟಹಳ್ಳ ಅವಲಂಬಿಸಿ ನೂರಾರು ಎಕರೆ ಕೃಷಿ ನಡೆಯುತ್ತದೆ. ಹಳ್ಳದ ಇಡೀ ಜಲಾನಯನ ಕ್ಷೇತ್ರದಲ್ಲಿ ೨-೩ ಸರಕಾರಿ ಕೆರೆಗಳು ಇವೆಯಾದರೂ ಬಹುತೇಕ ಹೂಳು ತುಂಬಿದ್ದವು. ಜನವರಿ ಆರಂಭದಲ್ಲಿ  ಹಳ್ಳಕ್ಕೆ ಮಣ್ಣಿನ ಒಡ್ಡು ನಿರ್ಮಿಸಿ ಬೇಸಿಗೆ ಭತ್ತ, ತರಕಾರಿ, ಕಬ್ಬು ಬೆಳೆಯುವ ಪ್ರಯತ್ನ ಹಿಂದಿನಿಂದಲೂ ಇತ್ತು. ಇದೇ ಹಳ್ಳ ನಮ್ಮ ಹಾರ್ನಳ್ಳಿ ಜಡ್ಡಿಕೆರೆ ಅಂಚಿನಲ್ಲಿ ಹರಿಯುತ್ತದೆ. ಇದು ಕ್ರಿ.ಶ. ೧೯೮೫ರವರೆಗೆ ಮೇ ತಿಂಗಳವರೆಗೂ ಹರಿಯುತ್ತಿತ್ತು. ಹಳ್ಳದ ಬಣ್ಣದ ಕಲ್ಲು ಸಂಗ್ರಹಿಸಿ ಮುಖಕ್ಕೆ ಬಣ್ಣ ಹಚ್ಚಿಕೊಂಡು ಕುಂಟುನೇರಳೆ ಸೊಪ್ಪನ್ನು ಸೊಂಟಕ್ಕೆ ಸುತ್ತಿಕೊಂಡು ಕೆರೆಜಡ್ಡಿಯಲ್ಲಿ ಎಮ್ಮೆ ಮೇಯಿಸುತ್ತ ಯಕ್ಷಗಾನ ಕುಣಿಯುತ್ತಿದ್ದ ನೆನಪುಗಳಿವೆ. ಇದು ಮೇ ತಿಂಗಳ ಬೇಸಿಗೆ ರಜೆಯ ವಿಶೇಷ ಕಾರ್ಯಕ್ರಮವಾಗಿತ್ತು. ಆಗ ಮುಖಕ್ಕೆ ಹಚ್ಚಿದ ಬಣ್ಣ ತೊಳೆಯಲು ಕೆರೆಗದ್ದೆ ಹಳ್ಳದ ನೀರು ಬಳಸುತ್ತಿದ್ದ ನೆನಪಿದೆ. ಇಂತಹ ಹಳ್ಳ ೯೦ರ ಬಳಿಕ ಕೆರೆಜಡ್ಡಿ ಸನಿಹ ಫೆಬ್ರುವರಿಯಲ್ಲಿಯೇ  ಒಣಗಿತು! ಕೆರೆಯಂಚಿನಲ್ಲಿ ಬಹುತೇಕ ಸೊಪ್ಪಿನಬೆಟ್ಟ, ಮೈನರ್ ಜಂಗಲ್ಲು(ಬೇಣ), ಅಕೇಸಿಯಾ ನೆಡುತೋಪುಗಳಿವೆ. ತೆರಕು ಸಂಗ್ರಹ, ಸೊಪ್ಪು ಕಡಿತ, ಜಾನುವಾರು ಮೇಯಿಸುವ ಚಟುವಟಿಕೆಗಳಿವೆ.   ೩-೪ಕಿಲೋ ಮೀಟರ್ ಹಳ್ಳದ ಅಂಚಿನಲ್ಲಿ ಬೆರಳೆಣಿಕೆ ವಿದ್ಯುತ್ ಪಂಪುಗಳಿವೆ. ಬಹುತೇಕ ಕೃಷಿಕರು ಮಣ್ಣಿನ ಒಡ್ಡು, ಬಾವಿ, ಹೊಂಡಗಳ ಮುಖೇನ ನೀರು ಬಳಸುತ್ತಾರೆ. ಕೆರೆಗದ್ದೆ ಹಳ್ಳಕ್ಕೆ ಆಧಾರವಾದ ಗುಡ್ಡಭೂಮಿಗಳಲ್ಲಿ ಜಲಸಂರಕ್ಷಣೆ ಪ್ರಯತ್ನ ಸಾಧ್ಯವಾದರೆ  ಹಳ್ಳಕ್ಕೆ ಮರುಜೀವ ನೀಡಬಹುದು. ನೀರಿನ ಧ್ಯಾನ ನೂರಾರು ಕನಸು ಮೂಡಿಸಿತು.

 

‘ಊರಿಗೊಂದು ಸ್ಪಷ್ಟ ನೀರಿನ ಯೋಜನೆ ಬೇಕು’  ರಾಜ್ಯದ ವಿವಿಧ ಭಾಗಗಳಲ್ಲಿ ಜಲಸಾಕ್ಷರತೆ ಕುರಿತು ಮಾತಾಡುವಾಗ ಹೇಳುತ್ತಿದ್ದೆ. ಮಳೆ, ಕಾಡು, ಕೃಷಿ, ಕೆರೆ, ಹಳ್ಳ ಹೀಗೆ ಗ್ರಾಮದ ನೀರಿನ ಸಮಗ್ರ ಮಾಹಿತಿ ಅಧಾರದಲ್ಲಿ ಯೋಜನೆ ರೂಪಿಸಬೇಕು. ಎಲ್ಲಿ ಕೆರೆ ನಿರ್ಮಿಸಿದರೆ, ಎಲ್ಲಿ ಒಡ್ಡು ಹಾಕಿದರೆ ಹೇಗೆ ನೀರಿನ ಹೆಚ್ಚಳ ಮಾಡಬಹುದೆಂದು ನೆಲದ ಸ್ವರೂಪ ನೋಡಿ ಜನ ನಿರ್ಧರಿಸಬೇಕು. ಹಿಂದೆ ಯಲ್ಲಾಪುರದ ಬೀಸಗೋಡಿನ ಹಿರಿಯರು ಕೇಳಿದಂತೆ ಇದೇ ಪ್ರಶ್ನೆಯನ್ನು ನನಗೆ ಯಾರಾದರೂ ಭಾಷಣದ ಮಧ್ಯೆ ಕೇಳಬಹುದೆಂದು ಕಣಿವೆಗಳಲ್ಲಿ ಕೆರೆ ನಿರ್ಮಿಸಲು ಪುಟ್ಟ ನಕ್ಷೆ ಬರೆದಿದ್ದೆ. ಕೆರೆಗದ್ದೆ ಹಳ್ಳದ ಅಂಚಿನ ಕಣಿವೆಗಳಲ್ಲಿ ಕೆರೆ ನಿರ್ಮಾಣ ಯೋಗ್ಯ ಜಾಗ ಗುರುತಿಸಿದ ಚಿತ್ರ ಅದು. ಚಿಕ್ಕಂದಿನಿಂದ ಓಡಾಡಿದ ಜಾಗವಾದರಿಂದ ಸುಲಭದಲ್ಲಿ  ಯೋಜನೆ  ರೂಪಿಸಿದೆ. ಕ್ರಿ.ಶ. ೨೦೦೪ರಲ್ಲಿಯೇ ಕೆರೆ ಕನಸಿನ ಚಿತ್ರ ಬಿಡಿಸಿದ್ದರೂ ಅದಕ್ಕೆ ಸ್ಪಷ್ಟರೂಪ ದೊರೆತಿರಲಿಲ್ಲ. ರಾಜಸ್ಥಾನದಲ್ಲಿ ರೂಪಾರೆಲ್ ಮರುಜನ್ಮದ ಕುರಿತು ಓದಿದ ಬಳಿಕವಂತೂ ಕೆರೆಗದ್ದೆ ಹಳ್ಳದಂಚಿನಲ್ಲಿ ಹೀಗೆ ಮಣ್ಣು ನೀರಿನ ಸಂರಕ್ಷಣೆ ಫಲ ನೀಡುತ್ತದೆಂಬ ಯೋಚನೆ  ಗಟ್ಟಿಯಾಯಿತು. ಶಿರಸಿಯ ವಲಯ ಅರಣ್ಯಾಧಿಕಾರಿ ಎಸ್.ಜಿ. ಹೆಗಡೆ ಜಲಸಂರಕ್ಷಣೆ ಮಾದರಿ ಚರ್ಚೆಗೆ ಬಂದಿದ್ದರು. ಆಗಷ್ಟೇ ರಾಜ್ಯ ಕೃಷಿ ಇಲಾಖೆಯ ಭೂ ಬಳಕೆ ಮಂಡಳಿಗೆಂದು ರೂಪಿಸಿದ ಜಲಸಂರಕ್ಷಣೆಯ ಸಾಕ್ಷ್ಯ ಚಿತ್ರದಲ್ಲಿ ಉತ್ತರ ಕನ್ನಡದ ಮಾದರಿಗಳನ್ನು ದಾಖಲಿಸಿದ್ದೆವು. ಚಿತ್ರ ನೋಡಿ ಕೆರೆಗದ್ದೆ ಹಳ್ಳದ ಕನಸು ಎದುರು ಹಿಡಿದೆ. ‘ಇದನ್ನು  ವಿವರವಾಗಿ ನೋಡಬೇಕು, ಯೋಜನೆ ಮಾಡೋಣ’ ವಲಯ ಅರಣ್ಯಾಧಿಕಾರಿ ಎಸ್.ಜಿ.ಹೆಗಡೆ ದಾಖಲೆ ಒಯ್ದರು. ವರ್ಷದ ಬಳಿಕ ಸರಣಿ ಕೆರೆ ನಿರ್ಮಾಣಕ್ಕೆ ಸ್ವತಃ ಅರಣ್ಯ ಇಲಾಖೆ ಮುಂದಾದ ಸಂತಸದ ಸಂಗತಿ ತಿಳಿಯಿತು. ಶಿರಸಿಗೆ ಕುಡಿಯುವ ನೀರು ನೀಡುವ ಕೆಂಗ್ರೆ ಹಳ್ಳ ಬತ್ತುತ್ತಿದ್ದರಿಂದ ಇಲ್ಲಿನ ಜಲಾನಯನ ಕ್ಷೇತ್ರಕ್ಕೆ ವಿಶೇಷ ಗಮನ ನೀಡಲಾಯಿತು. ಪ್ರಥಮ ವರ್ಷದಲ್ಲಿ  ಕಲ್ಮನೆ ಗುಡ್ಡದಲ್ಲಿ ಕೆಲವು ರಚನೆಗಳಾದವು. ಈಗ ಮುನಿತಿಮ್ಮ ನೂತನ ವಲಯ ಅರಣ್ಯಾಧಿಕಾರಿ. ಇವರನ್ನು ಕಳವೆಯ ಮಟ್ಟಿಗೆ ‘ಕೆರೆ ರೇಂಜರ್’ ಎಂದು ಕರೆಯುವದು ಸೂಕ್ತ ! ಯಚಡಿ, ಯಚಡಿ ಅಕೇಸಿಯಾ ನೆಡುತೋಪು, ಕೋಣೆಗದ್ದೆ ಮೂಲೆ, ಕಲ್ಮನೆ ದನಬೈಲು ತಗ್ಗು, ಜುಮ್ಮಣ್ಣನ ಬೇಣ, ಹಾರ್ನಳ್ಳಿ ತಗ್ಗು, ಆಲದ ಮರದ ಕೊಡ್ಲು, ಹಲಸಿನ ಮರದ ತಗ್ಗು, ಮುಂಡಿಗೆಕೊಡ್ಲು, ಹುಲಿಯಾಗೌಡನ ಬೇಣ ಹೀಗೆ ೨೪-೨೫ ಜಾಗಗಳಲ್ಲಿ ಒಂದಾದ ನಂತರ ಒಂದರಂತೆ ಕೆರೆಗಳು ಮೈದಳೆದವು!

 

ಕೆರೆಗದ್ದೆ ಹಳ್ಳ ಜನಿಸುವ ರಾಮಲಿಂಗೇಶ್ವರ ದೇವಸ್ಥಾನದ ಕೆರೆ ಹೂಳು ತೆಗೆದು ಕಲ್ಲು ಕಟ್ಟುವ ಕೆಲಸ ನಡೆಯಿತು. ಮಳೆ ಬಂದಾಕ್ಷಣ ಗುಡ್ಡದ ನೀರೆಲ್ಲ ಹರಿದು ಬಂದು ಉಕ್ಕೇರುತ್ತಿದ್ದ ಹಳ್ಳದಂಚಿನಲ್ಲಿ ಈಗ ೪೫-೫೦ ಲಕ್ಷ ಲೀಟರ್ ನೀರು ಸಂಗ್ರಹಣಾ ಸಾಮರ್ಥ್ಯದ ಹೊಸಕೆರೆಗಳು ಮಳೆ ನೀರು ಹಿಡಿಯುವ ಪಾತ್ರೆಗಳಾದವು! ಹಾರ್ನಳ್ಳಿಯ ಅಕೇಸಿಯಾ ನೆಡುತೋಪಿನಲ್ಲಿ ನಿರ್ಮಿಸಿದ ಒಂದು ಕೆರೆ ಬರೋಬ್ಬರಿ ಒಂದು ಕೋಟಿ ಲೀಟರ್ ನೀರು ಸಂಗ್ರಹಣಾ ಸಾಮರ್ಥ್ಯದ್ದು! ಈ ಕೆರೆಗಳಿಗೆ ನೀರು ತುಂಬಿದಾಗ, ಉಕ್ಕಿ ಹರಿದಾಗ ಕೆರೆ ನೋಡುವ  ಆಸಕ್ತರು ಬೆಳೆದರು. ಕ್ರಿ.ಶ. ೨೦೦೯ರ ಒಂದು ಸಂಜೆ ಮಳೆ ಆರ್ಭಟ ಮಿತಿಮೀರಿತು. ಕಾಡು ಅಲೆಯುತ್ತ ಬರುವಾಗ ಕತ್ತಲು ಆವರಿಸಿತು, ಹಲಸಿನ ಮರದ ತಗ್ಗಿನ ಪ್ರದೇಶದಲ್ಲಿ ಯಾರೋ ಮಾತಾಡುವ ಧ್ವನಿ ಕೇಳಿಸಿತು. ಹೋಗಿ ನೋಡಿದರೆ ರೇಂಜರ್ ಮುನಿತಿಮ್ಮ ಸಿಬ್ಬಂದಿಗಳ ಜತೆ ಸೇರಿ ಕೆರೆ ಕಾಲುವೆ ಬಿಡಿಸುವ ಪ್ರಯತ್ನ ನಡೆಸಿದ್ದರು! ಅಬ್ಬರದ ಮಳೆಗೆ ನೀರು ತುಂಬಿ ಹೊಸಕೆರೆ ಒಡೆದೀತೆಂದು ಹತ್ತಾರು ಕಿಲೋ ಮೀಟರ್ ದೂರದಿಂದ ಬಂದಿದ್ದರು. ಕಳೆದ ೩-೪ವರ್ಷಗಳ ಈಚೆಗೆ ನಿರ್ಮಿಸಿದ ಯಾವ ಕೆರೆಯೂ ಒಡೆದು ಹಾನಿಯಾದ ನಿದರ್ಶನವಿಲ್ಲ. ಕೆರೆ ನಿರ್ಮಾಣದಿಂದ ನೀರು ತುಂಬುವ ಪ್ರತಿ ಹಂತದವರೆಗೂ ಅಧಿಕಾರಿ, ಜನಗಳ ಕಳಕಳಿ, ಪರಿಶ್ರಮ ಯೋಜನೆ ಯಶಸ್ವಿಗೊಳಿಸುತ್ತದೆ.

 

ಅಗಳಕ್ಕೆ ಅಡ್ಡಪಟ್ಟಿ, ನೀರು ತಡೆಗಟ್ಟಿ

ಕೆಂಗ್ರೆ ಜಲಾನಯನ ಸಂಘದಿಂದ ಶಾಲಾವನ ನಿರ್ಮಾಣದ ಕೆಲಸವನ್ನು ಕ್ರಿ.ಶ. ೨೦೦೩ರಲ್ಲಿ ಆರಂಭಿಸಿದಾಗ ಜಾನುವಾರು ತಡೆಗೆ ಅಗಳ ತೆಗೆದು ಸಸಿ ಬೆಳೆಸುವ ನಿರ್ಧಾರ ಮಾಡಿದೆವು. ಕಳವೆ ಹಿರಿಯ ಪ್ರಾಥಮಿಕ ಶಾಲೆಯ ಸುತ್ತ ಅಂದಾಜು ೩ ಎಕರೆ ಕ್ಷೇತ್ರಕ್ಕೆ ಅಗಳ ತೆಗೆದು ಸಸಿ ನೆಡುವ ಕೆಲಸ ಆರಂಭವಾಯಿತು. ೪ ಅಡಿ ಅಗಲ, ೩ ಅಡಿ ಆಳದ ಅಗಳ ತೆಗೆಯುವಾಗ ಉದ್ದಕ್ಕೆ ಸಂಪೂರ್ಣ ಮಣ್ಣು ತೆಗೆಯುವ ಬದಲು ೧೦-೧೫ ಮೀಟರ್ ದೂರದಲ್ಲಿ ಅಡ್ಡಪಟ್ಟಿ ಇಡಬಹುದು, ಇಳಿಜಾರಿನ ಗುಂಟ ನೀರು ಓಡುವದನ್ನು ತಪ್ಪಿಸಬಹುದು. ಜಾನುವಾರು ನಿಯಂತ್ರಿಸುವ ಅಗಳ ನೀರಿಂಗಿಸುವ ಕೆಲಸಕ್ಕೂ ನೆರವಾಗುತ್ತದೆಂಬ ಲೆಕ್ಕಾಚಾರ, ನಿರ್ಮಾಣ ಯಶಸ್ವಿಯಾಯಿತು. ಮಳೆಗಾಲದಲ್ಲಿ ಶಾಲೆಯ ಸುತ್ತ ಜಲ ದುರ್ಗದಂತೆ ಅಗಳದಲ್ಲಿ ನೀರು ನಿಂತಿತು. ಮುಂದೆ ಹೆಗ್ಗಾರ್, ಕಲ್ಮನೆ, ಜಗಳೆಮನೆ ಶಾಲೆಗಳಿಗೆ ಶಾಲಾವನ ನಿರ್ಮಿಸುವಾಗ ಮಾದರಿ ಅನುಸರಿಸಿದೆವು. ಮಲೆನಾಡಿನ ಒಂದೊಂದು ಎಕರೆಯಲ್ಲಿ ೭೫-೬೦ಲಕ್ಷ ಲೀಟರ್ ಸುರಿಯುತ್ತದೆ, ಇದನ್ನು ಇಂಗಿಸಲು ಎಲ್ಲೆಡೆ ಹೊಸ ರಚನೆ ಮಾಡುವ ಅಗತ್ಯವಿಲ್ಲ. ಜಾನುವಾರು ತಡೆಯುವ ಅಗಳದಂತಹ ಮಾದರಿಗಳಲ್ಲಿ ಚಿಕ್ಕ ಮಾರ್ಪಾಟು ಮಾಡಿ ನೀರು ಇಂಗಿಸುವ ಕೆಲಸ ಸುಲಭದಲ್ಲಿ ಮಾಡಬಹುದು. ರಸ್ತೆಗೆ ಮಣ್ಣು ತೆಗೆಯುವಾಗಲೂ  ಈ ಕ್ರಮ ಅನುಸರಿಸಿದರೆ  ಮಣ್ಣು ತೆಗೆಯುವ ಜಾಗ ಪುಟ್ಟ ಕೆರೆಯಾಗಿ ನೀರು ಹಿಡಿಯಬಹುದು.

ಚಿತ್ರ-೧೮

 

ಕಳವೆ ಗ್ರಾಮದ ಹಾರ್ನಳ್ಳಿ ಪ್ರದೇಶದಲ್ಲಿ ಗ್ರಾಮ ಅರಣ್ಯ ಸಮಿತಿಯಿಂದ ಅರಣ್ಯೀಕರಣ ಆರಂಭವಾದಾಗ ಅರಣ್ಯ ಇಲಾಖೆಗೆ ಅಗಳದಲ್ಲಿ ನೀರು ಹಿಡಿಯುವ ಉಪಾಯ ಮಾಡಿದೆವು. ಜೆಸಿಬಿ ಚಾಲಕರಲ್ಲಿ ಜಾಗೃತಿ ಮೂಡಿಸಿ ಕೆಲಸ ರೂಪಿಸುವದು ಇಲ್ಲಿ ಮಹತ್ವದ್ದು. ಕ್ರಿ.ಶ. ೨೦೦೪-೨೦೦೫ರ ವರ್ಷಗಳಲ್ಲಿ  ಸುಮಾರು ೧೦ ಸಾವಿರ ಮೀಟರ್ ಅಗಳ ನಿರ್ಮಾಣವಾಯಿತು. ಕಡ್ಡಾಯವಾಗಿ ಅಗಳದಲ್ಲಿ ನೀರು ತಡೆಗೆ ಅಡ್ಡಪಟ್ಟಿ ಇಡಲಾಯಿತು. ರಸ್ತೆ ಕಾಲುವೆಗಳ ನೀರನ್ನು ಅಗಳಕ್ಕೆ ತುಂಬಿಸಲಾಯಿತು. ಸುಮಾರು ೧೦೦ ಹೆಕ್ಟೇರ್ ಪ್ರದೇಶದ ಸುತ್ತ ನಿರ್ಮಾಣಗೊಂಡ ಅಗಳಗಳು ಹಳ್ಳಿ ಗುಡ್ಡದಿಂದ ಓಡುವ ನೀರಿನ ಅಮೂಲ್ಯ ಸಂಪತ್ತನ್ನು  ಸೆರೆಹಿಡಿದವು. ಅಬ್ಬರದ ಮಳೆಯಲ್ಲಿ ಅಗಳದ ಗುಂಟ ಓಡಾಡಿದರೆ ಭರ್ತಿಯಾದ ನೀರಿನ ಪಾತ್ರೆ ಈಗಲೂ ನೀರುಳಿಸುವ ದಾರಿ ಹೇಳುತ್ತದೆ.

 

ಮಾವು, ಮುರುಗಲಿಗೆ ಜೈ ಜೈ! ಅಕೇಸಿಯಾಕ್ಕೆ ಗುಡ್‌ಬೈ!!

 

ತೇಗ, ಅಕೇಸಿಯಾ, ಗಾಳಿ ಗಿಡಗಳ ಎಕ ಜಾತೀಯ ನೆಡುತೋಪು ಪರಿಣಾಮಗಳನ್ನು ಹತ್ತಿರದಿಂದ ನೋಡಿದ್ದೆವು. ಉರುವಲು ಹಾಗೂ ಇತರ ಬಳಕೆಗೆ ಅಕೇಸಿಯಾ ಅಗತ್ಯ ಮನಗಂಡಿದ್ದರೂ ಹಳೆಯ ನೆಡುತೋಪು ಸಾಕಷ್ಟು ಪ್ರಮಾಣದಲ್ಲಿದ್ದುದರಿಂದ ಮತ್ತೆ ಅದೇ ಸಸ್ಯ ನೆಡುವ ಇಚ್ಚೆ ಯಾರಿಗೂ ಇರಲಿಲ್ಲ. ರೈತರು ನೈಸರ್ಗಿಕ ಸಸ್ಯ ಬೆಳೆಸಿದ ನೆಲೆಯಲ್ಲಿ ಮತ್ತೆ ಅಕೇಸಿಯಾಕ್ಕೆ ಪ್ರವೇಶವಿಲ್ಲವೆಂದು ಸಾರಾಸಗಟಾಗಿ ಹೇಳಿದರು. ಸಸಿ ಜಾತಿ ಆಯ್ಕೆ ವಿಚಾರದಲ್ಲಿ ಕಳವೆ ಗ್ರಾಮಕ್ಕೆ ಒಂದು ವಿಶೇಷ ಅವಕಾಶವಿದೆ. ಕಳೆದ ೪೦-೪೫ವರ್ಷಗಳಿಂದ ಇಲ್ಲಿನ ದಬ್ಬೆಹಳ್ಳದ ಸನಿಹದಲ್ಲಿ ಅರಣ್ಯ ಇಲಾಖೆ ಸಸ್ಯಪಾಲನಾ ಕ್ಷೇತ್ರವಿದೆ. ನಾವು ಶಾಲೆಗೆ ಹೋಗುವ ಕಾಲಕ್ಕೆ ಇದನ್ನು  ‘ಕಳವೆ ವೆಟ್ ನರ್ಸರಿ’ ಎಂದು ಕರೆಯುತ್ತಿದ್ದರು! ಸಾಗವಾನಿ ನೆಡುತೋಪು ಮಾಡುವಾಗ ನೀರಾವರಿ ಅಗತ್ಯವಿಲ್ಲದೇ ಗುಡ್ಡದಲ್ಲಿ ಬೇರಿನತುಂಡು ಹುಗಿದಿಟ್ಟು ಮಳೆ ಆಶ್ರಿತವಾಗಿ ಸಸಿ ಬೆಳೆಸುತ್ತಿದ್ದರು. ಸಸಿಗಳಿಗೆ ನೀರಾವರಿ ಮಾಡುತ್ತಿರಲಿಲ್ಲ. ಎಳೆ ಸಸಿಗಳಿಗೆ ಬೇಸಿಗೆಯಲ್ಲಿ ನೀರು ಹಾಕಿ ಬೆಳೆಸುವ ಉತ್ತರ ಕನ್ನಡದ ಅತ್ಯಂತ ಹಳೆಯ ನರ್ಸರಿಗಳಲ್ಲಿ  ‘ಕಳವೆ ವೆಟ್ ನರ್ಸರಿ’ ಒಂದಾಗಿತ್ತು. ಕ್ರಿ.ಶ. ೧೯೮೪ರ ಒಂದೇ ವರ್ಷ ಇಲ್ಲಿ ೧೪ ಲಕ್ಷ ಸಸಿ ಬೆಳೆಸಿದ ದಾಖಲೆಯಿದೆ! ಅನಂತ ಭಟ್ಟನ ಅಪ್ಪೆ ಎಂಬ ಸಸಿಗೆ ಮರುಜನ್ಮ ನೀಡಿ ಲಕ್ಷಾಂತರ ಕಸಿಗಿಡಗಳ ಉತ್ಪಾದನೆ ಹೆಮ್ಮೆ ಈ ನರ್ಸರಿಯದು .ನರ್ಸರಿಗೂ, ಕಳವೆಗೂ ಅನ್ಯೋನ್ಯ ಸಂಬಂಧ, ಸಾಮಾಜಿಕ ಅರಣ್ಯ ಯೋಜನೆ ಕಾಲಕ್ಕೆ ನರ್ಸರಿ ಕೆಲಸಕ್ಕೆ ಬಂದವರಿಗೆ ಕೂಲಿ ಹಣ ನೀಡಲು ತೊಂದರೆಯಾದಾಗ  ಇಲ್ಲಿನ ಅರಣ್ಯ  ಸಿಬ್ಬಂದಿಗಳು ಊರ ಕೆಲವರಿಂದ  ಕೈಗಡ ಹಣ ಪಡೆಯುತ್ತಿದ್ದರು!  ಸರಕಾರ ಹಣ ನೀಡಿದಾಗ ಹಿಂದಿರುಗಿಸುತ್ತಿದ್ದರು. ಮಳೆಗಾಲ ಪೂರ್ವದಲ್ಲಿ ನರ್ಸರಿಗೆ ಹೋಗಿ ಆಸಕ್ತರು ಹೊಸ ಹೊಸ ಸಸಿ ಪಡೆಯುತ್ತಿದ್ದರು. ಸಾಮಾಜಿಕ ಅರಣ್ಯ ಯೋಜನೆ ಜಾರಿಯಾದ ಸಂದರ್ಭದಲ್ಲಿ  ಇಲಾಖೆ ಅಕೇಸಿಯಾ ನೆಡುವದನ್ನು ಗಮನಿಸಿದ ಊರಿನ ಸ್ವಾತಂತ್ರ್ಯ ಹೋರಾಟಗಾರ ದತ್ತಗೋವಿಂದ ಭಟ್ಟರು ಸ್ಥಳೀಯ ಸಸಿ ನೆಡಲು ಅಧಿಕಾರಿಗಳಿಗೆ ಹೇಳಿದ್ದರು. ಮಾತು ಯಾರೂ ಕೇಳಲಿಲ್ಲ, ಕೊನೆಗೆ ಮಳೆಗಾಲದಲ್ಲಿ ಮಾವಿನ ಗೊರಟೆಗಳನ್ನು ಒಯ್ದು ಅರಣ್ಯ ಅಗಳಗಳ ಮೇಲೆ ಸ್ವತಃ ಊರಿದರು! ಕೆಲವು ಸಸಿಗಳು ಈಗ ಬೆಳೆದಿವೆ.

 

ಊರಿನ ಸ್ಯಪಾಲನಾ ಕ್ಷೇತ್ರದಲ್ಲಿ ವೈವಿಧ್ಯಮಯ ಸಸಿ ಬೆಳೆಸಿ ಅದನ್ನು ಅರಣ್ಯೀಕರಣಕ್ಕೆ ಬಳಸಬೇಕೆಂದು ಗ್ರಾಮ ಅರಣ್ಯ ಸಮಿತಿ ಸಭೆ ನಿರ್ಧರಿಸಿತು. ಮಾವು, ಹಲಸು, ಸಾಲಧೂಪ, ಮುರುಗಲು, ನೇರಲು, ಉಪ್ಪಾಗೆ, ನೆಲ್ಲಿ, ತಾರಿ, ಬಿಳಿನೇರಲೆ, ದಾಲ್ಚಿನ್ನಿ, ಅಂಟವಾಳ, ವಾಟೆ, ಶೀಗೆ, ಹಲಸು, ಮಹಾಗನಿ, ಹೆಬ್ಬಲಸು, ಶಮೆಬಿದಿರು, ಗೇರು, ಗುಡ್ಡೆಗೇರು ಸಸಿ ಪಟ್ಟಿ  ಸಿದ್ಧವಾಯಿತು. ಈಗಾಗಲೇ ಬೆಳೆದ ನೈಸರ್ಗಿಕ ಗಿಡಮರಗಳ ನಡುವೆ ಎಡೆನಾಟಿ (ಗ್ಯಾಪ್ ಪ್ಲಾಂಟಿಂಗ್) ಆರಂಭವಾಯಿತು. ಕಳೆದ ೧೦-೧೫ ವರ್ಷಗಳಿಂದ ಬೆಂಕಿ ನಿಯಂತ್ರಣವಾಗಿತ್ತು, ಸಸಿ ನಾಟಿ ಬಳಿಕ ಜಾನುವಾರು ಮೇಯಿಸುವದನ್ನು ರೈತರು ನಿಲ್ಲಿಸಿದರು. ಗುಡ್ಡಗಳಲ್ಲಿ ನೀರಿಂಗಿಸುವ ಕೆಲಸ ನಡೆದವು, ಪ್ರತಿ ಗಿಡದ ಬುಡದಲ್ಲಿ ಚಂದ್ರಬರಾವು ನಿರ್ಮಾಣವಾದವು. ನಾಟಿ ಮಾಡಿದ ಶೇಕಡಾ ೯೫ರಷ್ಟು ಸಸಿಗಳು ಈಗ ಬದುಕಿವೆ, ಇವುಗಳಲ್ಲಿ  ಸುಮಾರು ೪೫ರಷ್ಟು ಸಸಿಗಳು ಸಮೃದ್ಧವಾಗಿ ಮೇಲೇಳುತ್ತಿವೆ. ಅರಣ್ಯೀಕರಣದ ಯಶಸ್ಸು ಸ್ವತಃ ಇಲಾಖೆಗೂ ಅಚ್ಚರಿ ಮೂಡಿಸಿದೆ. ಸ್ಥಳೀಯ ಸಸಿ ನೆಟ್ಟರೆ ಬೆಳೆಯುವದಿಲ್ಲ ಎಂದು ಭಾವಿಸಿದ್ದವರು ಗಿಡ ನೋಡಿ ಪಾಠ ಕಲಿತಿದ್ದಾರೆ. ‘ಅಧಿಕಾರಿಗಳು ಯಾರಾದರೂ ಬೈಯ್ದರೆ, ಮನಸ್ಸಿಗೆ ಬೇಜಾರಾದರೆ ಈ ಸಸ್ಯಗಳ ಮಧ್ಯೆ  ಬಂದು ನಿಲ್ಲಬೇಕು, ಇಲ್ಲಿ ಅರ್ಧ ತಾಸು ಓಡಾಡಿದರೆ ಮನಸ್ಸು ಬದಲಾಗುತ್ತದೆ’ ಫಾರೆಸ್ಟರ್ ಗಜಾನನ ರೇವಣಕರ ಹೇಳಿದ ಮಾತು ಮಾರ್ಮಿಕವಾದುದು. ಹಸುರು ನೋಟ ನಮ್ಮ ಮನಸ್ಸಿಗಷ್ಟೇ ಅಲ್ಲ ಈಗ ಇಲ್ಲಿನ ಮಣ್ಣನ್ನೂ ಸಾಕಷ್ಟು ಬದಲಿಸಿದೆ.

 

ಕೆರೆ ನೋಡಿ, ಕೆರೆ ಮಾಡಿಸಿದರು !

‘ನಿಮ್ಮ ಕೆರೆಗಳಲ್ಲಿ ನೀರು ತುಂಬಿದೆಯೇ?’ ಗೆಳೆಯರು ಆಗಾಗ ಕೇಳುತ್ತಿದ್ದರು. ಕಣಿವೆ ಕೆರೆ ನೋಡಲು ನೂರಾರು ಜನ ಬಂದರು. ‘ಕೆರೆ ಚೆನ್ನಾಗಿದೆ, ನಮ್ಮೂರಿನಲ್ಲಿಯೂ  ಹೀಗೆ ಕೆರೆ ಮಾಡುವಂತಹ  ಜಾಗವಿದೆ’ ತಟ್ಟನೆ ಹೇಳುತ್ತಿದ್ದರು. ದೀಪದಿಂದ ದೀಪ ಹಚ್ಚುವ ಕೆಲಸವೆಂದರೆ ಇದು. ಜಪಾನ್ ನೆರವಿನ  ಸುಸ್ಥಿರ ಅರಣ್ಯ ನಿರ್ವಹಣೆ ಮತ್ತು ಜೀವ ವೈವಿಧ್ಯ ಸಂರಕ್ಷಣಾ ಯೋಜನೆ ರಾಜ್ಯದಲ್ಲಿ ಜಾರಿಯಲ್ಲಿತ್ತು. ಈ ಯೋಜನೆ ಅಡಿಯಲ್ಲಿ  ಅರಣ್ಯ ಸಮಿತಿ ರಚಿಸಿದರೆ  ಅರಣ್ಯ ಇಲಾಖೆಯಿಂದ ಕೆರೆ ನಿರ್ಮಿಸಬಹುದು  ಸಲಹೆ ನೀಡಿದೆ. ನೀರಿನ ಸಮಸ್ಯೆ ಅನುಭವಿಸಿದವರು ಕೆರೆ ಎಂದಾಕ್ಷಣ ಜಾಗೃತರಾದರು. ಅರಣ್ಯ ಇಲಾಖೆ ಅಕೇಸಿಯಾ ಸಸಿ ನೆಡುತ್ತದೆಂದು ಅರಣ್ಯ ಸಮಿತಿ ರಚಿಸಲು ಹೆದರಿದವರು ಈಗ ಸಮಿತಿ ಮಾಡಲು  ಅರಣ್ಯ ಇಲಾಖೆಗೆ  ಒತ್ತಾಯಿಸಿದರು!. ಶಿರಸಿ ಬಾಳೆಗದ್ದೆ ಕೆಂಗ್ರೆ ಜಲಾನಯನ ಪ್ರದೇಶದ ಕ್ಷೇತ್ರ, ಶಿರಸಿಗೆ ನೀರು ಒಯ್ಯುತ್ತಿರುವ ಜಾಗ ಇದು. ಇಲ್ಲಿನ ಹೊಸ್ಮನೆಯ ಪರಮೇಶ್ವರ ಹೆಗಡೆ, ಬಾಳೆಗದ್ದೆ ಸತ್ಯನಾರಾಯಣ, ಶ್ರೀನಿವಾಸ ಕಣಿವೆ ಕೆರೆ ನೋಡಿ ತಮ್ಮಲ್ಲಿಯೂ ಇಂತಹ ಕೆರೆ ನಿರ್ಮಿಸುವ ಇಚ್ಚೆ ವ್ಯಕ್ತಪಡಿಸಿದರು. ಈಗ ಅಲ್ಲಿ ೨ ವರ್ಷದ ಹಿಂದೆ ಅರಣ್ಯ ಸಮಿತಿ ರಚನೆಯಾಗಿ ೩-೪ ಹೊಸ ಕೆರೆಗಳು ನಿರ್ಮಾಣವಾಗಿವೆ. ಹೆಗಡೆಕಟ್ಟಾ ಕಾನಳ್ಳಿಯ ಆರ್. ಎಸ್. ಹೆಗಡೆ ಊರಿನ ಯುವಕರನ್ನು ಜೀಪಿನಲ್ಲಿ ತುಂಬಿಕೊಂಡು ಕೆರೆ ನೋಡಲು ಕಳವೆಗೆ ಬಂದರು, ಗುಡ್ಡಬೆಟ್ಟ ಓಡಾಡಿ ನೀರಿಂಗಿಸುವ ಪರಿಣಾಮ ಕಂಡರು. ಈಗ ಕಾನಳ್ಳಿಯಲ್ಲಿ ಅರಣ್ಯ ಸಮಿತಿ ಆರಂಭವಾಗಿ ಗುಡ್ಡಗಳಲ್ಲಿ ನೀರಿಂಗಿಸುವ ರಚನೆಗಳಾಗಿವೆ, ಕೆರೆಗಳ ನಿರ್ಮಾಣವಾಗಿದೆ!. ‘ನೀ’ರಾಸೆಯ ಮಧ್ಯೆ  ನಮಗೂ ವಿಶ್ವಾಸ ಮೂಡಿದೆ.

ಚಿತ್ರ-೧೯

 

ಶಿವಮೊಗ್ಗ, ಸಾಗರ, ಹಂಪಿ, ಮೈಸೂರು, ಬೆಂಗಳೂರು, ಧಾರವಾಡ, ತೀರ್ಥಹಳ್ಳಿ, ಸೊರಬ, ಕೊಪ್ಪ, ಶೃಂಗೇರಿ, ಭಟ್ಕಳ, ಕುಮಟಾ, ಕಾರವಾರ, ಯಲ್ಲಾಪುರ, ಹೊನ್ನಾವರ, ಅಂಕೋಲಾ ಪ್ರದೇಶ ಸೇರಿದಂತೆ   ರಾಜ್ಯದಲ್ಲಿ ಈವರೆಗೆ ಸುಮಾರು ೪೦೦ಕ್ಕೂ ಹೆಚ್ಚು ಕಡೆಗಳಲ್ಲಿ ಜಲಸಾಕ್ಷರತೆ ಕುರಿತು ವರ್ಣಪಾರದರ್ಶಿಕೆ ಕಾರ್ಯಕ್ರಮ ನಡೆಸಿದ್ದೇನೆ. ನೀರಿನ ಮಾತಿಗೆ ಜನ ಜತೆ ಸೇರಿದ್ದಾರೆ. ಈಗಾಗಲೇ  ಕಣಿವೆ ಕೆರೆ, ನಮ್ಮ ಸೊಪ್ಪಿನ ಬೆಟ್ಟದ ಜಲಕೊಯ್ಲು ವೀಕ್ಷಣೆಗೆ ಕನಿಷ್ಟ ೨-೩ ಸಾವಿರ ಜನ ಬಂದಿದ್ದಾರೆ! ಕೆರೆ ಜಾಗ ಆಯ್ಕೆ, ನಿರ್ಮಾಣ ಸ್ವರೂಪದ ಬಗೆಗೆ ಚರ್ಚಿಸಿದ್ದಾರೆ. ‘ಇಂತಹುದೊಂದು ಕೆರೆ ನಮ್ಮೂರ ಕಾಡಿನಲ್ಲಿಯೂ ಬೇಕು !’ ಮಾತುಗಳಲ್ಲಿ ಆಸೆ ವ್ಯಕ್ತವಾಗಿದೆ. ಮನುಷ್ಯ ಜಲಜಾಗೃತಿಗೆ ಮಾತಾಡುವದಕ್ಕಿಂತ ಸ್ವತಃ ಕೆರೆ ನೋಡಿ ಮನಸ್ಸು ಬದಲಾಗುವದು ಕಂಡಿದ್ದೇನೆ, ಕೆರೆ ಹೃದಯದ ಜತೆಗೆ ಆಪ್ತವಾಗಿ  ಮಾತಾಡುತ್ತದೆಂದು  ಖುದ್ದು ಅಲಿಸಿದ್ದೇನೆ.

 

ಶಿವಮೊಗ್ಗ ಸಾಗರದ ನೀಚಡಿ ಊರಿನಲ್ಲಿ ನೀರಿನ ಸಮಸ್ಯೆ  ಹೆಚ್ಚುತ್ತಿತ್ತು. ಜಲಸಾಕ್ಷರತೆ ಕುರಿತು ಮಾಹಿತಿ ನೀಡಲು ಯುವಕರು ಆಹ್ವಾನಿಸಿದರು. ಭಾಷಣ ಮುಗಿಸಿ ಅಲ್ಲಿನ ಕಾಡು ನೋಡಲು ಹೋದೆವು. ಹುಲಿಗುಡ್ಡದ ಪ್ರದೇಶದಿಂದ ಹರಿಯುವ ನೀರು ಚೌಡಿಕೆರೆಯತ್ತ ಸಾಗುವ ನೀರ ದಾರಿ ಹುಡುಕಿದೆವು. ಗುಡ್ಡಗಳಲ್ಲಿ ಶತಮಾನಗಳ ಹಿಂದೆ ನಿರ್ಮಿಸಿದ ಹೊಟ್ಟುಕೆರೆಯ ಜಾಗ ಹುಡುಕಿದೆವು. ಗುಡ್ಡದಲ್ಲಿ ನೀರು ಹಿಡಿಯುವ ಕಳವೆಯ ಕಣಿವೆ ಕೆರೆಯ ಮಾದರಿಗಳಿಗೆ ಇಲ್ಲಿ ಮರುಜೀವ ನೀಡಬೇಕು ಸಲಹೆ ನೀಡಿದೆ. ‘ನಮ್ಮಲ್ಲಿ ಹಣವಿಲ್ಲ’ ಯುವಕರು ತಟ್ಟನೆ ಹೇಳಿದರು. ‘ನಾಲ್ಕೇ ನಾಲ್ಕು ಜನ ಶ್ರಮದಾನದಿಂದ ಕೆಲಸ ಆರಂಭಿಸಿದರೆ ಮುಂದೆ ದಾರಿ ಕಾಣುತ್ತದೆ’ ಸರಳ ಉತ್ತರ ಹೇಳಿದೆ. ಸಮೂಹಶಕ್ತಿ ಒಂದಾಗಿ ಸರಿಸುಮಾರು ೬೫ ದಿನಗಳ ಕಾಲ ೩೭೯ ಮಾನವದಿನಗಳ ಶ್ರಮದಿಂದ ಇಲ್ಲಿನ ಹೊಟ್ಟುಕೆರೆ ಬೃಹತ್ ಇಂಗುಕೆರೆಯಾಯಿತು! ನೀರುಳಿಸುವ ಯುವಕರ ಪ್ರಯತ್ನ ಮೆಚ್ಚಿ ಕೆಲವರು ಸಹಾಯ ನೀಡಿದರು. ಹುಲಿಗುಡ್ಡದಿಂದ ಓಡುವ ನೀರು ಊರಲ್ಲಿಯೇ ನಿಂತು ಅಂತರ್ಜಲಕ್ಕೆ ನೆರವಾಯಿತು. ತೋಟ ಹಸಿರಾಯಿತು. ಕಳವೆಯ ಸನಿಹ ಸಣ್ಣಳ್ಳಿ ಗ್ರಾಮವಿದೆ, ಇಲ್ಲಿನ ಕಂಚಿಕೊಪ್ಪದ ತಗ್ಗು ನೋಡಿದಾಕ್ಷಣ ಕಣಿವೆ ಕೆರೆಗೆ ಯೋಗ್ಯ ನೆಲೆ ಕಾಣಿಸಿ ತಕ್ಷಣ ಸಲಹೆ ನೀಡಿದೆ. ಸಣ್ಣಳ್ಳಿ  ಗ್ರಾಮ ಅರಣ್ಯ ಸಮಿತಿ ಇಲ್ಲಿ  ಈಗ  ಕೆರೆ ನಿರ್ಮಿಸಿದೆ. ಹರಿಯುವ ನೀರು ಊರಿನ ಅಂತರ್ಜಲವಾಗಿದೆ.

 

ಜನಗಳ ಪ್ರೋತ್ಸಾಹ, ಇಲಾಖೆಗೆ ಉತ್ಸಾಹ

ಕಳವೆಯಲ್ಲಿ ಕಣಿವೆ ಕೆರೆಯ ವಿವಿಧ ಮಾದರಿಗಳ ರಚನೆಯಾದಾಗ ರಾಜ್ಯದ ಜಲತಜ್ಞರು ವಿವಿಧ ಹಂತಗಳನ್ನು  ಹತ್ತಿರದಿಂದ ನೋಡಿದ್ದಾರೆ. ಮಾಧ್ಯಮಗಳು ವಿಶೇಷ ಬೆಳಕು ಚೆಲ್ಲಿವೆ. ವಿಜಯ ಕರ್ನಾಟಕ ಪತ್ರಿಕೆ ನೀರು-ನೆರಳು ಅಂಕಣದಲ್ಲಿ ರಾಧಾಕೃಷ್ಣ ಭಡ್ತಿ  ಕ್ರಿ.ಶ. ೨೦೦೭ರಲ್ಲಿ  ಸತತ ಐದು ವಾರಗಳ ಕಾಲ ಇಲ್ಲಿನ ನೀರಿನ ವಿವಿಧ ಕತೆಗಳನ್ನು  ದಾಖಲಿಸಿದರು. ರಾಜ್ಯದ ಹೆಮ್ಮೆಯ ಕೃಷಿ ಪತ್ರಿಕೆಯಾದ ಅಡಿಕೆ ಪತ್ರಿಕೆ ಸಪ್ಟೆಂಬರ್ ೨೦೦೭ರ ಸಂಚಿಕೆಯಲ್ಲಿ ‘ಗುಡ್ಡದ ನೆತ್ತಿಯ ನೀರಿನ ಬ್ಯಾಂಕು’ ಮುಖಪುಟ ಲೇಖನ ಪ್ರಕಟಿಸಿತು. ಸುಧಾ, ಪ್ರಜಾವಾಣಿ, ಡೆಕ್ಕನ್ ಹೆರಾಲ್ಡ್, ಉದಯವಾಣಿ ಸೇರಿದಂತೆ ಪ್ರಮುಖ ಪತ್ರಿಕೆಗಳು  ಬರೆಹ ಪ್ರಕಟಿಸಿದವು. ದೆಹಲಿಯಿಂದ ಪ್ರಕಟವಾಗುವ ಸಿವಿಲ್ ಸೊಸೈಟಿ, ಸೋಫಾನ್ ಸ್ಟೇಪ್, ಯುನೈಟೆಡ್ ಕಿಂಗ್‌ಡಮ್‌ನ ‘ಅಪ್ರೋಪ್ರಿಯೇಟ್ ಟೆಕ್ನಾಲಜಿ’ ಪತ್ರಿಕೆಗಳಲ್ಲಿ ಲೇಖನ ಬಂದವು. ಬರೆಹಗಾರ್ತಿ ಅನಿತಾ ಪೈಲೂರ್ ಇಲ್ಲಿನ ನೀರಿನ ಕೆಲಸಗಳನ್ನು ಅಧ್ಯಯನ ಮಾಡಿದರು. ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಮಧ್ಯಪ್ರದೇಶದ ರಮೇಶ ಪಾಂಡೆ ಚುನಾವಣಾ ವೀಕ್ಷಕರಾಗಿ ಉತ್ತರ ಕನ್ನಡಕ್ಕೆ ನೇಮಕವಾದರು, ಇವರು ಮಧ್ಯ ಪ್ರದೇಶದಲ್ಲಿರುವಾಗ ಜಲ ಜಾಲತಾಣಗಳಲ್ಲಿ ಪ್ರಕಟವಾದ ಕಳವೆ ಕಣಿವೆ ಕೆರೆಗಳ ಕುರಿತು ಲೇಖನ ಓದಿದ್ದರು. ಉತ್ತರ ಕನ್ನಡದ ಶಿರಸಿಯಲ್ಲಿ ಕಳವೆ ಊರಿದೆ ಎಂಬ ಮಾಹಿತಿ ಓದಿ ಉತ್ತರ ಕನ್ನಡದ ಚುನಾವಣಾ ವೀಕ್ಷಕ ಕೆಲಸಕ್ಕೆ ಹಾಜರಾಗುವಾಗ ಕಳವೆಗೆ ಬರಲು ಪ್ಲ್ಯಾನ್ ಮಾಡಿದರು. ಚುನಾವಣಾ ಒತ್ತಡದ ಮಧ್ಯೆ ಗನ್‌ಮೆನ್‌ಗಳ ಬಿಗಿ ಬಂದೋಸ್ತಿನಲ್ಲಿ  ಕಳವೆಯ ಕೆರೆ ನೋಡಲು  ಬಂದರು! ಸತತ ಮೂರು ಗಂಟೆಗಳ ಕಾಲ ಕಾಡು ಗುಡ್ಡ ಸುತ್ತಿದರು. ಇವು ನೀರಿನ ಕೆಲಸಕ್ಕೆ ದೊರೆತ ಪುರಸ್ಕಾರ, ಪ್ರಶಸ್ತಿಗಳೆನ್ನಬಹುದು.

ಚಿತ್ರ-೨೦.೧ ಹಾಗೂ ೨೦.೨

 

ದೂರ ದೂರದ ಊರುಗಳಿಂದ ಕಣಿವೆ ಕೆರೆ ವೀಕ್ಷಣೆಗೆ ಜನ ಬರುತ್ತಿರುವದು ಇಲಾಖೆಗೂ ಹೆಮ್ಮೆಯ ವಿಷಯವಾಯಿತು. ರಾಜ್ಯದ ಬಹುತೇಕ ಕಡೆಗಳಲ್ಲಿ ಇಂತಹುದೇ ಯೋಜನೆ ಕಾರ್ಯಗತವಾಗಿದ್ದರೂ ಗುಡ್ಡದಲ್ಲಿ ನೀರಿಂಗಿಸುವ ಮಾದರಿಗಳನ್ನು  ಇಷ್ಟು ವ್ಯಾಪಕ ಪ್ರಮಾಣದಲ್ಲಿ ನೋಡುವ ಅವಕಾಶವಿರಲಿಲ್ಲ.  ಸುಲಭದಲ್ಲಿ ಇಂತಹ ಪರಿಣಾಮಕಾರಿ ರಚನೆ ಮಾಡಬಹುದೆಂಬ ಅರಿವು ಕೆಲವು ಅಧಿಕಾರಿಗಳಲ್ಲಿಯೂ   ಇರಲಿಲ್ಲ. ಜಲ ಸಂರಕ್ಷಣೆ ಮಾದರಿ ದರ್ಶನಕ್ಕೆ ಅನುಕೂಲವಾಯಿತು. ಇಲ್ಲಿನ ಯಶಸ್ಸು ಗುರುತಿಸಿದ ಕರ್ನಾಟಕ ಸರಕಾರ ಹಸುರು ಗ್ರಾಮವೆಂದು ಘೋಷಿಸಿತು. ರಾಜ್ಯದ ಆಯ್ದ ೩೦ ಗ್ರಾಮಗಳಲ್ಲಿ ಕಳವೆ ಸೇರ್ಪಡೆಯಾಯಿತು.

 

ಅಕೇಸಿಯಾ ನೆಡುವದು, ಕಡಿಯುವದು, ಬೆಂಕಿ ನಿಯಂತ್ರಣ, ಅರಣ್ಯ ಅತಿಕ್ರಮಣ ತಡೆಯುವ ಕೆಲಸಗಳಷ್ಟೇ ಈಗ ಅರಣ್ಯ ಇಲಾಖೆಯದಲ್ಲ. ಪಶ್ಚಿಮಘಟ್ಟ ಅಭಿವೃದ್ಧಿ ಯೋಜನೆ ಆರಂಭವಾದ ಕ್ರಿ.ಶ. ೧೯೯೧ರ ಬಳಿಕ ಜನಸಹಭಾಗಿತ್ವದಲ್ಲಿ ವನ ಸಂರಕ್ಷಣೆಗೆ ಮಹತ್ವ ದೊರೆತಿದೆ, ಗ್ರಾಮ ಅರಣ್ಯ ಸಮಿತಿ ರಚನೆಯಾಗಿವೆ. ಅರಣ್ಯ ಅಭಿವೃದ್ಧಿ ಚಟುವಟಿಕೆಯನ್ನು ಇಷ್ಟುಕಾಲ ದೂರದಿಂದ ನೋಡುತ್ತಿದ್ದ ಹಳ್ಳಿಗರು ನಿರ್ವಹಣೆಯ ಕಾರ್ಯ ಮಾಡಬೇಕಾಗಿದೆ. ಇಲಾಖೆ ಹಾಗೂ ಹಳ್ಳಿಗರು ಪರಸ್ಪರ ಸನಿಹಕ್ಕೆ ಬಂದ ಅವಕಾಶದಲ್ಲಿ ಅರಣ್ಯಾಭಿವೃದ್ಧಿಯ ಇಡೀ ಸ್ವರೂಪ ಬದಲಾಗುತ್ತದೆ. ಈಗ ನಮ್ಮ ಮಾದರಿಗಳನ್ನು ರೂಪಿಸಬೇಕಾಗುತ್ತದೆ. ಗ್ರಾಮಸ್ಥರ ಜಾಗೃತಿ, ಅಧಿಕಾರಿಗಳ ಆಸಕ್ತಿ ಕೂಡಿದಲ್ಲಿ ಇದು ಫಲ ನೀಡುತ್ತದೆ. ಒಳ್ಳೆಯ ಕೆಲಸವನ್ನು ನಾಲ್ಕಾರು ಜನಕ್ಕೆ  ತೋರಿಸಿದರೆ ವಿಮರ್ಶೆಯಾಗಿ ಬದಲಾವಣೆಗೆ ನೆರವಾಗುತ್ತದೆ. ದೂರ ದೂರದ ಜನಗಳನ್ನು ಕರೆದು ಕೆರೆ ತೋರಿಸಿದ್ದು  ಇಲಾಖೆಗೆ ಪ್ರೋತ್ಸಾಹ ನೀಡಿದಂತಾಯಿತು, ಅದು ಕೆಲಸದ ಉತ್ಸಾಹದಲ್ಲಿ ವ್ಯಕ್ತವಾಯಿತು.

 

ಗುಡ್ಡದ ಕೆರೆಗಳಲ್ಲಿ ನೀರು ನಾಪತ್ತೆ!

ಕ್ರಿ,ಶ ೨೦೦೪-೦೯ರ ಕಾಲ ಕಳವೆ ಊರಿಗೆ ಕೆರೆಗಳ ವ(ಹ)ರ್ಷ! ಮಳೆ ಬಿದ್ದಾಕ್ಷಣ ಇಳಿಜಾರಿಗೆ ಇಳಿದು ಓಡುತ್ತಿದ್ದ ನೀರನ್ನು ತಡೆಯುವ ಕಣಿವೆ ಕೆರೆಗಳು ಸಾಕಾರಗೊಂಡವು. ಮಳೆಗಾಲ ಆರಂಭವಾದಾಗ ಯಾವ ಕೆರೆ ಎಷ್ಟು ನೀರು ತುಂಬಿತು? ಎಲ್ಲರಿಗೂ ನೋಡುವ ಕುತೂಹಲ. ಹಾರ್ನಳ್ಳಿ ಅಕೇಸಿಯಾ ನೆಡುತೋಪಿನಲ್ಲಿ ನಿರ್ಮಿಸಿದ ದೊಡ್ಡ ಕೆರೆ ಅರ್ಧ ಮಳೆಗಾಲ ಕಳೆದರೂ ತುಂಬಿರಲಿಲ್ಲ. ರೇಂಜರ್ ಮುನಿತಿಮ್ಮ ಸೇರಿದಂತೆ ಇಲಾಖಾ ಸಿಬ್ಬಂದಿಗಳಿಗೆ ಆತಂಕ. ಕೆರೆಗೆ ನೀರು ತುಂಬಿಸುವದು ಹೇಗೆಂಬ ಚಿಂತೆ. ಅಗಸ್ಟ್‌ದಲ್ಲಿ ಸುರಿದ ಮಳೆಗೆ ಒಂದೇ ದಿನದಲ್ಲಿ ಕೆರೆ ಭರ್ತಿಯಾಗಿ ಕಾಲುವೆಯಲ್ಲಿ ನೀರು ಹರಿಯಿತು! ಮುಂದಿನ ಒಂದೆರಡು ದಿನಗಳಲ್ಲಿ ಮಳೆ ಕ್ರಮೇಣ ಕಡಿಮೆಯಾಯಿತು. ವಾರದ ಬಳಿಕ ಕೆರೆ ನೋಡಿದರೆ ಹನಿ ನೀರು ಇರಲಿಲ್ಲ! ಒಂದು ಕೋಟಿ ಲೀಟರ್ ನೀರು ಸಂಗ್ರಹಣಾ ಸಾಮರ್ಥ್ಯದ ಕೆರೆಯ ನೀರೆಲ್ಲ ಎಲ್ಲಿ ಮಾಯವಾಯ್ತು? ಪರಿಸ್ಥಿತಿ ನೋಡಿ ಪಂಚನಾಮೆ ಮಾಡಿದೆವು. ಹೊಸದಾಗಿ ನಿರ್ಮಾಣವಾದ್ದರಿಂದ ನೀರು ಇಂಗುವ ಪ್ರಮಾಣ ಜಾಸ್ತಿಯಿತ್ತು. ಕೆರೆಯ ತಳದಲ್ಲಿ ರಾಡಿ ಮಣ್ಣಿನ ಹೂಳು ಶೇಖರಣೆಯಾದ ಬಳಿಕವಷ್ಟೇ ಇಂಗುವ ಕ್ರಿಯೆ ನಿಧಾನವಾಗುತ್ತದೆ. ಕೆರೆಯ ಜಲಾನಯನ ಕ್ಷೇತ್ರದಲ್ಲಿ ಅಕೇಸಿಯಾ ನೆಡುತೋಪು ಇರುವದರಿಂದ ಭೂ ಸವಕಳಿ ಕಡಿಮೆಯಿತ್ತು. ಹರಿಯುವ ಮಳೆ ನೀರು ತಿಳಿಯಾಗಿರುತ್ತಿತ್ತು. ಇದರಿಂದ ವೇಗವಾಗಿ ನೀರು ಇಂಗಿ ಮಾಯವಾಗುತ್ತಿತ್ತು.

 

ಕೆರೆಯಲ್ಲಿ ನೀರು ಭರ್ತಿಯಾದ ಬಳಿಕ ತಗ್ಗಿನ ಪ್ರದೇಶಗಳ ಲಕ್ಷಣ ಬದಲಾಯಿತು. ರಸ್ತೆಯಂಚಿನ ಕಾಲುವೆಗಳಲ್ಲಿ ಒರತೆ ಕಾಣಿಸಿಕೊಂಡಿತು. ಕೆಲವೆಡೆ ರಸ್ತೆಯಲ್ಲೂ ಒರತೆಗಳೆದ್ದವು, ಒಮ್ಮೆ ಇಲ್ಲಿ ಸಸಿ ಸಾಗಿಸುತ್ತಿದ್ದ ಟ್ರ್ಯಾಕ್ಟರ್‌ನ ಎರಡು ದೊಡ್ಡ ಚಕ್ರಗಳು ರಸ್ತೆಯಲ್ಲಿ ಸಂಪೂರ್ಣ ಹೂತು ಹೋಯಿತು.  ಅಗಳ, ಕೆರೆಗಳಲ್ಲಿ ನೀರು ತಡೆ ಹಿಡಿದ ಪರಿಣಾಮ ಇಷ್ಟು ವರ್ಷದ ಮಳೆಗಾಲದಲ್ಲಿ ಒರತೆ ಕಾಣಿಸದ ಸ್ಥಳದಲ್ಲಿ  ಜಲ ಒಡೆಯಿತು. ಕೆರೆಯಲ್ಲಿ ನೀರು ಹೆಚ್ಚು ಕಾಲ ನಿಲ್ಲಲು ಕೆರೆ ಪಾತ್ರದಲ್ಲಿ ಹೂಳು ಶೇಖರಣೆಯ ನೈಸರ್ಗಿಕ ಕ್ರಿಯೆ ಮಹತ್ವದ್ದೆಂಬುದು ಕೆರೆಗದ್ದೆ ಸನಿಹದ ಕೆರೆಯಲ್ಲಿ ಈ ವರ್ಷ ಗಮನಕ್ಕೆ ಬಂದಿದೆ. ಮಳೆ ನಿಂತು ೧೫ ದಿನಕ್ಕೆ ಬತ್ತುತ್ತಿದ್ದ ಕೆರೆ ಈ ವರ್ಷ ತಿಂಗಳಾದರೂ ನೀರು ಹಿಡಿದು ನಿಂತಿದೆ. ಕಳೆದ ೨೦೦೯ರ ಅಕ್ಟೋಬರ್ ೨ರಂದು ಸುರಿದ ಭರ್ಜರಿ ಮಳೆ ಹೂಳು ಮಣ್ಣು ತಂದು ಕೆರೆ ಪಾತ್ರದ ತುಂಬ ಮೆತ್ತಿದೆ,  ಪರಿಣಾಮ ಕೆರೆಯಲ್ಲಿ  ತಿಂಗಳಾದರೂ ತಿಳಿನೀರು  ಉಳಿದಿದೆ. ಒಮ್ಮೆ  ಹಾರ್ನಳ್ಳಿಯ ದೊಡ್ಡಕೆರೆ ಉಕ್ಕಿ ಹರಿಯಿತೆಂದರೆ ಇಲ್ಲಿನ ಅಡಿಕೆ ತೋಟಗಳಿಗೆ ನೀರಿನ ಸಮಸ್ಯೆ ಬೇಸಿಗೆಯಲ್ಲಿ ಇಲ್ಲ ಎಂಬುದು ಕಳೆದ ೩ ವರ್ಷಗಳಿಂದ ಸಾಬೀತಾಗಿದೆ. ಬೇಸಿಗೆಯಲ್ಲಿ ಸದಾ ಒಣಗುತ್ತಿದ್ದ ಅಡಿಕೆ ತೋಟ ಹಸುರಾಡುತ್ತದೆ, ಇಳುವರಿ ಹೆಚ್ಚಿದೆ. ಕೆರೆಗದ್ದೆ ಗದ್ದೆ ಬಯಲಿನಲ್ಲಿ ಮಳೆಗಾಲದ ಭತ್ತ ಕಟಾವಿನ ಬಳಿಕ ಶಿವರಾತ್ರಿ ಸಮೀಪಿಸಿದರೂ ಹದ ಉಳುಮೆಗೆ ಗದ್ದೆ ಒಣಗುವದಿಲ್ಲ, ಮಳೆಗಾಲದಲ್ಲಿ ಹಿಂದೆ ೨-೩ ಎಕರೆ ಬೇಸಿಗೆ ಭತ್ತ ಬೆಳೆಯುತ್ತಿದ್ದ ಪ್ರದೇಶದಲ್ಲಿ ಈಗ ೮-೧೦ ಎಕರೆ ಬೆಳೆಯಲಾಗುತ್ತದೆ. ಏಪ್ರಿಲ್‌ವರೆಗೂ ಕೆರೆಜಡ್ಡಿ ಸನಿಹದ ಹಳ್ಳದ ಗುಂಡಿಗಳಲ್ಲಿ  ನೀರು ನೋಡಬಹುದು.

 

ಜಾಗ ಆಯ್ಕೆಗೆ ಜೋಗಿಯೂ ಏಕ್ಸ್‌ಫರ್ಟ್ !

ಕಣಿವೆ ಕೆರೆಗೆ ಜಾಗ ಆಯ್ಕೆ ಪಾಠವನ್ನು  ರಾಜ್ಯದ ಹಳೆಯ ಕೆರೆಗಳು ಕಲಿಸಿವೆ. ಶಿರಸಿ ಭಾಗದಲ್ಲಿ ಇಂತಹ ಕೆರೆ ನಿರ್ಮಿಸಲು ಅಧಿಕಾರಿಗಳ ಜತೆಗೆ ಚರ್ಚಿಸುವಾಗ ಸೂಕ್ತ ಜಾಗ ಆಯ್ಕೆ ಜವಾಬ್ದಾರಿ ಹೆಗಲಿಗೇರಿತು. ಕಲಿಯುವ ಉತ್ಸಾಹದಲ್ಲಿ ಕಾಡು ತಿರುಗಿದೆ. ಬಕ್ಕಳದ ಕೆರೆಯಿಂದ ಆರಂಭಿಸಿ ಪ್ರತಿ ಕೆರೆ ನಿರ್ಮಿಸುವಾಗಲೂ ಸುರಿಯುವ ಮಳೆ, ಕಾಡಿನ ಸ್ವರೂಪ, ಮಣ್ಣಿನ ರೀತಿ, ಕಣಿವೆ ನೋಟ, ನೀರು ಸಂಗ್ರಹಿಸಬಹುದಾದ ಪ್ರದೇಶದ ಕೆಳಗಡೆಯ ನೆಲದ ಗಮನಿಸಿದೆವು. ಕಣಿವೆ ಕೆರೆಯಲ್ಲಿ ಹರಿಯುವ ನೀರಿನ ಶಕ್ತಿ ಅರಿವಿನಲ್ಲಿ ನಿರ್ಮಾಣ ಪ್ರಾವೀಣ್ಯ ಅಡಗಿದೆ. ಕೆರೆ ನಿರ್ಮಾಣದ ಜಾಗದ ಕೆಳಗಡೆ  ೩೦೦-೪೦೦ ಮೀಟರ್ ಸನಿಹದಲ್ಲಿ ಕಡಿದಾದ ಪ್ರಪಾತ, ನದಿ ಕೊರಕಲು, ಗಣಿಗಾರಿಕೆ ಹೊಂಡ ಇರಬಾರದು. ಮಳೆ ನೀರು ಧುಮ್ಮಿಕ್ಕಿ ಹರಿಯುವ ನೇರ ಎದುರು ಜಾಗವಾಗಿರಬಾರದು. ಮರಳು ಮಿಶ್ರಿತ ಮಣ್ಣಿನ ಪ್ರದೇಶವಾಗಬಾರದು. ಗುಡ್ಡದಿಂದ ಗುಡ್ಡಕ್ಕೆ ನೇರ ಒಡ್ಡು ಕಟ್ಟಬಾರದು, ಸ್ವಲ್ಪ ಅರ್ಧ ಚಂದ್ರಾಕೃತಿ ಸ್ವರೂಪದಲ್ಲಿದ್ದು ಒಡ್ಡಿನ ಒಳ ಹಾಗೂ ಹೊರಮೈ ೪೦-೪೫ ಡಿಗ್ರಿ ಇಳಿಜಾರಾಗಿರಬೇಕು. ಒಡ್ಡಿನ ಒಳಗಡೆ ಮರಳು ಮಿಶ್ರಿತ ಮಣ್ಣು, ಮರ, ಸೊಪ್ಪು ಹಾಕಬಾರದು. ಕೆರೆಯ ಪಾತ್ರದ ಮಣ್ಣುಗಳನ್ನು ಒಡ್ಡಿಗೆ ಹಾಕುವಾಗ ನೆಲವನ್ನು ಒಮ್ಮೆ ಅಗಳ ಸ್ವರೂಪದಲ್ಲಿ ಅಗೆದು ಅದರ ಮೇಲೆ ಒಡ್ಡು ಹಾಕುವದರಿಂದ ಮಣ್ಣು ಗಟ್ಟಿಯಾಗುತ್ತದೆ, ಸೋರಿಕೆ ತಡೆಯಬಹುದು. ಕೆರೆ ನಿರ್ಮಿಸಿದ ಆರಂಭದ ವರ್ಷ ಒಡ್ಡಿನ ಮಣ್ಣು ಸವಕಳಿ ಜಾಸ್ತಿ, ಬಿದಿರು, ಲಾವಂಚದ ಹುಲ್ಲು ನೆಡಬಹುದು, ದಪ್ಪ ಪ್ಲಾಸ್ಟಿಕ್ ಹೊದಿಕೆಯಿಂದಲೂ ಇದನ್ನು ತಡೆಯಬಹುದು. ಕೆರೆ ನಿರ್ಮಿಸಿದ ಮೊದಲ ವರ್ಷವೇ ಭರ್ತಿ ನೀರು ತುಂಬಿಸಬಾರದು, ಒಡ್ಡು ಗಟ್ಟಿಯಾದ ಬಳಿಕ ಸಂಗ್ರಹಣೆ ಹೆಚ್ಚಿಸಬಹುದು. ಜೆಸಿಬಿ, ಹಿಟಾಚಿಗಳಲ್ಲಿ ಮಣ್ಣು ಅಗೆದು ಟ್ರ್ಯಾಕ್ಟರ್ ಮುಖೇನ ಒಡ್ಡಿನ ಮಣ್ಣು ಏರಿಸುವದು ಸೂಕ್ತ. ಪ್ರತಿ ಹಂತದಲ್ಲಿ ಒಡ್ಡಿನ ಮೇಲೆ ಜೆಸಿಬಿ/ಹಿಟಾಚಿ, ಟ್ರ್ಯಾಕ್ಟರ್ ಓಡಾಡುವದರಿಂದ ಭಾರಕ್ಕೆ ಒಡ್ಡು ಗಟ್ಟಿಯಾಗುತ್ತದೆ. ಕೆರೆ ತುಂಬಿದ ಬಳಿಕ ಹೆಚ್ಚುವರಿ ನೀರು ಸರಾಗ ಹರಿಯಲು ಕಾಲುವೆ, ಪೈಪ್ ಹಾಕಬಹುದು. ಕೆರೆ ನಿರ್ಮಾಣದಲ್ಲಿ ಗಮನಿಸಬೇಕಾದ ಈ ಸಲಹೆಗಳನ್ನು ಸುಲಭದಲ್ಲಿ ಹೇಳಬಹುದು. ಆದರೆ ಕೆರೆಗೆ ಯೋಗ್ಯ ಜಾಗ ಆಯ್ಕೆಗೆ ಒಳಗಣ್ಣಿನ ಅರಿವು, ಅನುಭವ ಮುಖ್ಯ. ಕಳೆದ ಕ್ರಿ.ಶ. ೨೦೦೩ರಿಂದ ಈವರೆಗೆ ೭೦ಕ್ಕೂ ಹೆಚ್ಚು ಕಣಿವೆಕೆರೆ ಜಾಗ ಆಯ್ಕೆ  ಮಾಡಿದ್ದೇನೆ. ನೂರಾರು ಹಳೆಯ ಕೆರೆಗಳನ್ನು  ಗಮನಿಸಿದ್ದೇನೆ. ಪ್ರತಿಯೊಂದರಲ್ಲಿಯೂ ಹೊಸ ಹೊಸ ಪಾಠ ದೊರಕಿದೆ.

ಕೆರೆ ನಿರ್ಮಾಣದ ಜಾಗ, ನಿರ್ಮಿಸುವ ಪ್ರತಿ ಹಂತ ಗಮನಿಸಿದರೆ ನಿರ್ಮಾಣ ಪ್ರಾತ್ಯಕ್ಷಿಕೆ ದೊರೆಯುತ್ತದೆ.  ಇದು ಹಣ ನೀಡಿದರೂ ದೊರೆಯದ ವಿಶೇಷ ವಿದ್ಯೆ, ಆದರೆ ಇದನ್ನು ನೋಡಿ ಕಲಿಯಲು ಯಾರೂ ಹೋಗುವದಿಲ್ಲ! ಅರಣ್ಯದಲ್ಲಿ ಕೆರೆ ನಿರ್ಮಿಸುವಾಗ ಜೆಸಿಬಿ ಡ್ರೈವರ್‌ಗೆ ವಸತಿ, ಚಹ, ಊಟದ ವ್ಯವಸ್ಥೆಗೆ ಫಾರೆಸ್ಟರ್, ಗಾರ್ಡ, ವಾಚರ್‌ಗಳು ಶ್ರಮಿಸುತ್ತಾರೆ. ಕೆರೆ ನಿರ್ಮಾಣದ ಪ್ರತಿ ಹಂತದ ಸಾಕ್ಷಿಯಾಗುತ್ತಾರೆ. ಇವರಲ್ಲಿ ಅನಾಯಾಸವಾಗಿ ಕಣ್ಣೆದುರು ಒದಗುವ ವಿಶಿಷ್ಟ ಅನುಭವಗಳನ್ನು ಇಲಾಖೆ ಕೇಳಬೇಕು. ಆದರೆ ಗ್ರಾಮ ಅರಣ್ಯ ಸಮಿತಿ ತರಬೇತಿ ಶಿಬಿರಗಳಲ್ಲಿ  ನಾವು ಈ ಅರಣ್ಯ ಅನುಭವಿಗಳನ್ನು  ಶಿಬಿರದ  ಊಟದ ತಯಾರಿಗೆ ಕಳಿಸುತ್ತೇವೆ! ಹಿರಿಯ ಅಧಿಕಾರಿಗಳೆದುರು ಬೇರು ಮೂಲದ ಶ್ರಮಿಕರು ತೆಪ್ಪಗೆ ಬಾಯಿಮುಚ್ಚಿ ಕೂಡ್ರುತ್ತಾರೆ. ಇತ್ತೀಚೆಗೆ ಕಳವೆಯಲ್ಲಿ ಕೆರೆಗೆ ಸೂಕ್ತ ಜಾಗ ನೋಡಬೇಕಿತ್ತು. ಕಳೆದ ಮೂರು ವರ್ಷಗಳಿಂದ ಕೆರೆ ನಿರ್ಮಾಣದ ಅನುಭವ ಪಡೆದ ನಮ್ಮೂರ ಗಾರ್ಡ್‌ ನಾರಾಯಣ ಜೋಗಿ ತಾವು ಒಂದೆರಡು ಜಾಗ ನೋಡಿದ ಮಾಹಿತಿ ನೀಡಿದರು. ಹೋಗಿ ನೋಡಿದರೆ ಅದು  ಅತ್ಯಂತ ಸೂಕ್ತವಾಗಿತ್ತು. ‘ಜಲಸಂರಕ್ಷಣೆಯ ಜ್ಞಾನ ವಿಕೇಂದ್ರೀಕೃತವಾಗಬೇಕು, ಅದೇ ಶ್ರೀ’ಪಡ್ರೆ, ಶಿವಾನಂದ ಕಳವೆ, ದೇವರಾಜರೆಡ್ಡಿ, ವಿಶ್ವನಾಥ್ ಹೀಗೆ ಎಷ್ಟು ದಿನ ನೀರ ಪಾಠ ಹೇಳಬೇಕು? ಅನುಭವಿಗಳು ಸದಾ ಬೆಳೆಯಬೇಕು’  ನಾವು ಆಗಾಗ ಹೇಳುತ್ತೇವೆ, ಕಳವೆಯಲ್ಲಿ ಕಣಿವೆ ಕೆರೆ ಜಾಗ ಆಯ್ಕೆಗೆ ಗಾರ್ಡ್‌ ಜೋಗಿ ಏಕ್ಸಫರ್ಟ್ ಆದ ರೀತಿಯಂತೂ ಗುಡ್ಡದ ನೀರಿನ ಬೇರು ನಿಧಾನಕ್ಕೆ ಆಳಕ್ಕಿಳಿಯುವ  ಉದಾಹರಣೆಯಂತಿದೆ.

 

ಸುದ್ದಿಕಟ್ಟೆಗೆ  ನಮಸ್ಕಾರ, ಕೆರೆ ನಿರ್ಮಾಣಕ್ಕೆ ಸಹಕಾರ!

ಒಂದು ಗ್ರಾಮದಲ್ಲಿ  ಕೆಲವೇ ವರ್ಷಗಳಲ್ಲಿ  ಕೆರೆಗಳ ಸರಣಿ ನಿರ್ಮಾಣವಾದರೆ ಜನ ಏನು ಹೇಳುತ್ತಾರೆ? ಇನ್ನು ಈ ಊರಿಗೆ ನೀರಿನ ವಿಚಾರದಲ್ಲಿ ನಿಶ್ಚಿಂತೆ ಎಂದು ಹೇಳಬಹುದು. ಇದಕ್ಕಿಂತ ಮುಖ್ಯವಾದುದು ಹತ್ತಿರದ  ಟೀಕೆಗಳು! ಇಂಗಿಸಿದ ನೀರೆಲ್ಲ  ಅಲ್ಲೇ ಇರುತ್ತದೆಂಬ ಗ್ಯಾರಂಟಿ ಏನು? ಮಲೆನಾಡಿನಲ್ಲಿ ಗುಡ್ಡ ಜಾಸ್ತಿ, ಇಂಗಿಸಿದ ನೀರು ಹೊಳೆ, ಹಳ್ಳಗಳ ತಗ್ಗಿನಲ್ಲಿ ಬಸಿದು ಹೋಗುತ್ತದೆ. ಬೇಸಿಗೆಯಲ್ಲಿ ಹನಿ ನೀರೂ ಇಲ್ಲದ ಕೆರೆಗಳಿಂದ ಏನು ಪ್ರಯೋಜನ? ಸರಕಾರದ ಹಣ ಹಾಳಾಗುತ್ತದೆ ಅಷ್ಟೇ! ನಮಗೆ ನೀರಿಂಗಿಸಿದ ಮರುವರ್ಷ ಅಂತರ್ಜಲ ಉಕ್ಕೇರಬೇಕು, ತಕ್ಷಣ ಪರಿಣಾಮ ಕಾಣಬೇಕು. ಆದರೆ ಇಂತಹ ಯಶಸ್ಸನ್ನು ಶತಮಾನಗಳಿಂದ ನಡೆಸಿದ ಕೃಷಿಯಲ್ಲಿ ಸಹ ನಾವು ಕಂಡಿಲ್ಲ, ಅಡಿಕೆ ನೆಟ್ಟು ೫-೬ವರ್ಷಗಳ ಬಳಿಕ ಫಲ ಸಿಗಲು ಕಾಯುತ್ತೇವೆ! ನೀರಿಂಗಿಸುವ ವಿಚಾರದಲ್ಲಿ ಮಾತ್ರ ಅವಸರದ ಫಲ ಬೇಕು. ಒಂದು ಅಡಿಕೆ ಮರಕ್ಕೆ ಬೇಸಿಗೆಯಲ್ಲಿ ೧೬ ಲೀಟರ್ ನೀರು ಹಾಕುವುದು, ವರ್ಷಕ್ಕೆ ಎಕರೆಯಲ್ಲಿ ೭೫-೮೦ ಲಕ್ಷ ಲೀಟರ್ ಮಳೆ ನೀರು ಸುರಿಯುವದು ಇದ್ಯಾವ ಲೆಕ್ಕ ನಮಗೆ ತಿಳಿದಿಲ್ಲ. ಹರಿವ ಹೊಳೆಗೆ ಪಂಪ್ ಹಾಕಿ ಆಟೋ ಸ್ಟಾರ್ಟರ್ ಕೂಡಿಸಿ ಕಣ್ಮುಚ್ಚಿ ಪಂಪ್ ಚಾಲು ಮಾಡಿದರೆ ನೀರಿನ ಬಳಕೆಯ ಲೆಕ್ಕ ತಿಳಿಯುವದಿಲ್ಲ. ಒಮ್ಮೆ ಹೊಳೆ ಒಣಗಿದಾಗ, ವಿದ್ಯುತ್ ಕೈ ಕೊಟ್ಟಾಗ ಎಚ್ಚರಾಗುತ್ತೇವೆ! ಇಲಾಖೆ, ಪರಿಸರವನ್ನು ಬೈಯ್ಯುವಲ್ಲಿ ಮುಂದಾಗುತ್ತೇವೆ. ಅರಣ್ಯದ ಅನುಕೂಲ, ಭೂಮಿಗೆ ನೀರು ಇಂಗುವ ವಿಧಾನ ನೋಡಲು ಇಚ್ಚೆಯಿಲ್ಲ. ಜಗತ್ತಿನ ವಿದ್ಯೆಗಳಲ್ಲಿ ಪರಿಣಿತರಾಗಲು ಶತಾಯಗತಾಯ ಓಡುತ್ತೇವೆ. ಜೀವಜಲದ ವಿಚಾರದಲ್ಲಿ   ಗಾಢನಿದ್ದೆ ಮಾಡುತ್ತೇವೆ, ಅಂತರ್ಜಲ ಕುಸಿಯಲು ಇಷ್ಟು ಸಾಕೇ ಸಾಕು!

 

ಕಳವೆಯ ಕೆರೆಗದ್ದೆ ಹಳ್ಳ, ಹಾರ್ನಳ್ಳಿ ಭಾಗದಲ್ಲಿ ಕೆರೆಗಳ ಸರಣಿ ಆರಂಭವಾದಾಗ ಜೆಸಿಬಿ, ಹಿಟಾಚಿ, ಟ್ರ್ಯಾಕ್ಟರ್ ಸಾಲು, ಅಬ್ಬರ ನೋಡಿದವರು ಸರಕಾರೀ ಯೋಜನೆಯೆಲ್ಲ ಏಕೆ ಅಲ್ಲಿಗೆ ಹೋಗ್ತಿದೆ? ಅನುಮಾನಿಸಿದರು. ‘ಬಹುಶಃ ಇಲಾಖೆಯವರನ್ನು ಒಳ ಹಾಕಿಕೊಂಡಿದ್ದಾರೆ,  ಅಲ್ಲಿ ಭರ್ಜರಿ ಪರ್ಸಂಟೇಜ್ ವ್ಯವಹಾರವಿದೆ’ ಸುದ್ದಿಕಟ್ಟೆಯ ಮಾತು. ಬೇಸಿಗೆಯಲ್ಲಿ ನೀರು ನಿಲ್ಲದ ಕೆರೆಗಳಿಂದ ಯಾವ ಪ್ರಯೋಜನವಿಲ್ಲವೆಂಬ ತೀರ್ಪು ಪ್ರಕಟವಾಯ್ತು. ‘ಕೆರೆ ಮಾಡಲು ಜಾಗ ತೋರಿಸಿದರೆ ಎಷ್ಟು ಹಣ ಕೊಡ್ತಾರೆ?’ ಕಣಿವೆ ಕೆರೆಗೆ ಜಾಗ ಹುಡುಕುವಾಗ ಇಂತಹ ಪ್ರಶ್ನೆ ಕೇಳಿದ್ದರು. ಹಣದಲ್ಲಿ ಕೆಲಸ ತೂಗುವ ಮನಸ್ಸುಗಳ ಮಧ್ಯೆ ಗ್ರಾಮೀಣ ಅಭಿವೃದ್ಧಿ ಸಾಧಿಸುವ ಇಚ್ಛೆಯುಳ್ಳವರು ಸಂಪೂರ್ಣ ಕಿವುಡರಾದರೆ ಒಳ್ಳೆಯದು! ಒಂದು ಪುಟ್ಟ ನದಿಯಂಚಿನಲ್ಲಿ ನೀರಿಂಗಿಸುವ ಕೆಲಸ ಮಾಡಿ ಮಾಹಿತಿ ನೀಡುವ ಎಷ್ಟು ಉದಾಹರಣೆಗಳು ಇಡೀ ದೇಶದಲ್ಲಿವೆ? ಬೇಕಾದರೆ ತಿಂಗಳ ಸಮಯ ತೆಗೆದುಕೊಂಡು ಈ ಪ್ರಶ್ನೆಗೆ ಉತ್ತರ ಹುಡುಕಿರಿ!  ವರ್ಷಕ್ಕೆ ಮಿಲಿಯನ್ ಕೋಟಿ ಹಣವನ್ನು ನೀರಿಗಾಗಿ ಖರ್ಚು ಮಾಡುವ ದೇಶದಲ್ಲಿ  ಬೆರಳೆಣಿಕೆಯ ಯಶೋಗಾಥೆಗಳಿಲ್ಲ! ಒಳ್ಳೆಯ ಕೆರೆ ಹೇಗೆ ಮಾಡಬೇಕೆಂದು ಹೇಳಲು ಪ್ರಾತ್ಯಕ್ಷಿಕೆಗಳಿಲ್ಲ! ನಿರ್ಮಾಣ, ನಿರ್ವಹಣೆ, ಪರಿಣಾಮ ಅಳೆಯಲು ನಾವೇ ರೂಪಿಸಿದ ಸರಕಾರಿ ಇಲಾಖೆಗಳಲ್ಲಿ ದಾಖಲೆಗಳಿಲ್ಲ! ರಾಜಸ್ಥಾನದ  ರೂಪಾರೆಲ್, ನಾಡುವಾಲಿ ನದಿ ಬಿಟ್ಟರೆ ಬೇರೆ ಒಂದು  ಹೆಸರಾದರೂ ನೆನಪಾಗುತ್ತದೆಯೇ? ನೀರಿನ ಮಾತಾಡುತ್ತ ಊರಲ್ಲಿ ಉಳಿದವರೆದುರು ಕಾಡುವ ಪ್ರಶ್ನೆ ಇದು. ವಿಶ್ವಬ್ಯಾಂಕ್ ನೆರವಿನ ೪೫೦ಕೋಟಿ ರೂಪಾಯಿ ವೆಚ್ಚದಲ್ಲಿ ರಾಜ್ಯದ ಕಾವೇರಿ ಕಣಿವೆಯಲ್ಲಿ ಯೋಜನೆ ಜಾರಿಯಾಗುವ ಸಂದರ್ಭದಲ್ಲಿ ಅಲ್ಲಿನ ೮೦೦ ಇಂಜಿನಿಯರ್‌ಗಳಿಗೆ ಬೆಂಗಳೂರಿನ ಅಂಬೇಡ್ಕರ್ ಭವನದಲ್ಲಿ ನಡೆದ ಕಾರ್ಯಾಗಾರದಲ್ಲಿ  ನಾವು ಕೆರೆ ಪರಂಪರೆಯ ಕತೆ ಹೇಳುತ್ತಿದ್ದರೆ  ಬಹುತೇಕ ಜನ ಕ್ಯುಬಿಕ್ ಮೀಟರ್ ಮಣ್ಣು, ರಾಡಿ ಹೂಳು ತೆಗೆಯಲು ದರವೆಷ್ಟು ಎಂದು ಯೋಚಿಸುತ್ತಿದ್ದರು!  ಎಕರೆಯಲ್ಲಿ ಕೋಟ್ಯಾಂತರ ಲೀಟರ್ ನೀರು ಸುರಿದು ಹರಿಯುತ್ತದೆ, ಇಲ್ಲಿ ಶೇಕಡಾ ೧೫-೨೦ ಭಾಗದ ನೀರನ್ನು  ಹಿಡಿಯುವ ಒಂದು ಉದಾಹರಣೆಯಾದರೂ ಮಲೆನಾಡಿಗೆ ಬೇಕು. ಕೆರೆಗದ್ದೆ ಹಳ್ಳಕ್ಕೆ ಕೆರೆಯ ಸರಣಿ ನಿರ್ಮಿಸುವ ಯೋಚನೆ ಹಿಂದೆ ನನ್ನದು, ನಮ್ಮೆಲ್ಲರ ಇಂತಹ  ದೊಡ್ಡ ಸ್ವಾರ್ಥವಿದೆ. ರಾಜ್ಯದಲ್ಲಿ ನೀರಿನ ಕೆಲಸ ಮಾಡುವ ಗೆಳೆಯರು, ಅಧಿಕಾರಿಗಳ ಸಂಪರ್ಕ ಕನಸಿಗೆ ಬೆಂಬಲವಾಯಿತು. ಪುಟ್ಟ ಕಣಿವೆಯ ಮಳೆ ನೀರು ಜಾರದಂತೆ ವಿಸ್ತ್ರತ ಯೋಜನೆ ಮಾಡುವಾಗ ವಿವಿಧ ಇಲಾಖೆ ಸಹಕಾರ ಬೇಕು. ಜಲಾನಯನ ಇಲಾಖೆ, ಜಿಲ್ಲಾಪಂಚಾಯತ್, ಅರಣ್ಯ ಇಲಾಖೆ ಹೀಗೆ ಇವುಗಳ ಸಾಂದರ್ಭಿಕ ಸಹಾಯ ಮಹತ್ವವಾದುದು. ಈಗ ಊರಲ್ಲಿ ಎಲ್ಲರೂ ನೋಡಬಹುದಾದ ಒಂದಿಷ್ಟು ಕೆಲಸಗಳಿವೆ, ಮತ್ತೆ ಅನುಮಾನಗಳಿದ್ದರೆ ಇಲಾಖೆಗಳ ಕಡತದಲ್ಲಿ ಖರ್ಚಿನ ಅಧಿಕೃತ ಲೆಕ್ಕಗಳಿವೆ.

 

ಒಂದು ಮಾತು ನೆನಪಿಡಬೇಕು, ಊರಿನ ನೂರು ಜನಗಳಲ್ಲಿ ಕೆಲವೇ ಕೆಲವರು ಕೆರೆ, ಕಾಡಿನ ಕಾಯಕಲ್ಪಕ್ಕೆ ನಿಂತರೆ  ಊರಿಗೆ ನೀರ ನೆಮ್ಮದಿ ಸಿಗುತ್ತದೆ. ಸುದ್ದಿಕಟ್ಟೆಗಳಲ್ಲಿ  ಟೀಕೆ, ಒಣ ಚರ್ಚೆಗಳಲ್ಲಿ ಸಾಮೂಹಿಕ ಕಾಲಹರಣ ಮುಂದುವರಿದರೆ ಯುವಕರು ಬೇಗ ಮುದುಕರಾಗುತ್ತಾರೆ, ಸಮೃದ್ಧ ಕೆರೆ ಕೂಡಾ ಒಣಗಿ ಬಿಕ್ಷಾ ಪಾತ್ರೆ ಇಡುತ್ತದೆ! ಯಾವ ಒಳ್ಳೆಯ ಕೆಲಸವೂ ನೂರಾರು ಸಾವಿರಾರು ಜನ ಸೇರಿ ಆರಂಭವಾಗುವದಿಲ್ಲ! ಒಂದು ಸಣ್ಣ ದೀಪ ನಮಗೆ ಬೆಳಕು ನೀಡುತ್ತದೆ. ಬಾವಿ ಬತ್ತುವ, ನದಿ ಒಣಗುವ ನೆಲದಲ್ಲಿ ಅರಿವಿನ ದೀಪ ಹಚ್ಚುವ ಕೆಲಸ ಜರೂರಿದೆ. ನಿಮ್ಮೂರಿಗೆ ಹೀಗೆ ಕೆರೆ ಮಾಡಿಸುವದು ಸುಲಭದ ಕೆಲಸ, ಕೂತು ಮಾತಾಡುವುದು, ವಿನಾಕಾರಣ ಟೀಕಿಸಿ ಕಾಲಹರಣಕ್ಕೆ ಕೊಂಚ ಬಿಡುವು ನೀಡಿರಿ.  ನಿಮ್ಮೂರಿನ ಹಳೆಯ ಕೆರೆ, ಕಾಡಿನ ಮಾಹಿತಿ ಸಂಗ್ರಹಿಸಿ ನೀವು ಮುಂದಾಗಿ ಊರಿಗೊಂದು ನೀರಿನ ಯೋಜನೆ ರೂಪಿಸಿರಿ. ರಾಜಕೀಯ, ಟೀಕೆ, ಅಸೂಯೆ, ವೈಮನಸ್ಯ ಮರೆತು ಕೆಲಸ ಆರಂಭಿಸಿರಿ. ಪ್ರತಿ ವರ್ಷ ನಿಮ್ಮ ಗುಡ್ಡದ ಭೂಮಿಯ ಒಂದೊಂದು ಎಕರೆಯಲ್ಲಿ ಜಲಸಂರಕ್ಷಣೆ ಹೇಗೆ ಮಾಡಬಹುದೆಂದು ನಿರ್ಧರಿಸಿ ಕಾರ್ಯ ಮಾಡಬಹುದು.  ಈಗ ನೀವು ಎಂದಿನ ಶೈಲಿ ಬದಿಗೊತ್ತಿ ಊರುಕೇರಿಯ ನೀರಿನ ಪರಿಸ್ಥಿತಿ ಬದಲಿಸುವ ಕಿಂಚಿತ್ ಕನಸು ಹೊಂದಿದ್ದಕ್ಕೆ ಹಾರ್ದಿಕ ಅಭಿನಂದನೆಗಳು!  ಅರೆರೇ!…. ನಮ್ಮ  ಮನಸ್ಥಿತಿ ಹೇಗೆ ತಿಳಿಯಿತು ಎಂದು ಕೇಳುತ್ತೀರಾ? ಪುಸ್ತಕದ  ಆರಂಭದಿಂದ ಓದುತ್ತ  ಈ ಕೊನೆಯ ಪುಟ ತಲುಪಿದ್ದೀರೆಂದರೆ ನಿಮ್ಮೊಳಗೆ ಕೆರೆಯ ಆಸೆಯಿದೆ ಎಂದು  ಊಹಿಸಬಹುದು! ಈಗ ಕೆರೆ ನೋಡಲು, ಸೊಪ್ಪಿನ ಬೆಟ್ಟದ ಜಲಕೊಯ್ಲಿನ ಮಾದರಿ ನೋಡಲು ಬರಬಹುದು. ದೂರವಾಣಿಯಲ್ಲಿ (ಶಿವಾನಂದ ಕಳವೆ-೦೮೩೮೪-೨೪೩೪೫೫/೯೪೪೮೦೨೩೭೧೫) ಹನಿ ನೀರಿನ ಕತೆ ಧಾರಾಳ ಮಾತಾಡಬಹುದು.