ಎಲ್ಲೆಡೆಯೂ ಸಿಗುವ ಬಟಾಟೆ ಬೆಂಗಳೂರಿನಲ್ಲಿ, ಮೈಸೂರಿನಲ್ಲಿ, ಹರಪನಹಳ್ಳಿಯಲ್ಲೂ ಬೆಳೆಯುವದರಲ್ಲಿ ವಿಶೇಷವಿಲ್ಲ, ಬಯಲು ಸೀಮೆಯಲ್ಲಿ ದೊರೆಯುವ ಖಾರದ ಈರುಳ್ಳಿ, ಸಿಹಿಸಿಹಿ ರುಚಿಯ ಉತ್ತರ ಕನ್ನಡದ ಹಂದಿಗೋಣದ ಈರುಳ್ಳಿ ಪ್ರತ್ಯೇಕವಾಗಿ ಮಾರುಕಟ್ಟೆಯಲ್ಲಿ ನಿಲ್ಲುವಲ್ಲಿ ಧನಾತ್ಮಕ ಅಂಶವಿದೆ. ಕೃಷಿ ವಿಧಾನ, ಮಾರುಕಟ್ಟೆ ಆಧಾರಿತವಾಗಿ ಬೆಳೆ ಆಯ್ದುಕೊಳ್ಳುವಾಗ ಸಹಜವಾಗಿ ಎಲ್ಲರೂ ಒಪ್ಪಿಕೊಂಡ ಮೊನೋಕಲ್ಚರ್ ಕೃಷಿಗೆ ಅಂಕ ದೊರೆಯುತ್ತದೆ. ಈ ನೆಲದ ಸತ್ವ ಹೀರಿ ಬೆಳೆಯುವ ಬೆಳೆ ಇನ್ನುಳಿದ ತಳಿ ರುಚಿಗಳಿಗಿಂತ ಎದ್ದು ನಿಲ್ಲುವಾಗ ಪರ್ಯಾಯದ ದಾರಿಗಳನ್ನು ಇಂತಹ ಫಲಗಳಲ್ಲಿ ಹುಡುಕುವ ಯತ್ನ ಹೆಚ್ಚಬೇಕು.


ಹಾಲೆಂಡಿನ ಇಕೆಬಾನಾಕ್ಕೆ ಬೆಂಗಳೂರಿನ ಹೂವು ವಿಮಾನದಲ್ಲಿ ಹಾರುತ್ತದೆ, ಬೆಂಗಳೂರಿನ ಪುಷ್ಪ ಕೃಷಿಕನಿಗೆ ಮಲೆನಾಡಿನ ಕಾಡು ಸೊಪ್ಪು ತಿಂದ ಎರೆಹುಳು ಗೊಬ್ಬರ ಒಪ್ಪಿಸುತ್ತದೆ. ಆಫ್ರಿಕನ್ ಮೂಲದ ಎರೆಹುಳು ಮಲೆನಾಡಿನ ಎರೆಕೃಷಿಗೆ ನೆರವಾಗುತ್ತದೆ. ತಿಪಟೂರಿನ ತೆಂಗಿನ ಸಿಪ್ಪೆ ತಂದು ಮಲೆನಾಡಿನ ಶಿರಸಿಯಲ್ಲಿ ಎರೆಗೊಬ್ಬರ ತಯಾರಿಸಿ ಗೊಬ್ಬರ ಬೆಂಗಳೂರಿಗೆ ಹೋಗಿ ಹೂವಿನ ಕೃಷಿಗೆ ಬಳಕೆಯಾಗಿ ಬೆಳೆದ ಹೂವು ಹಾಲೆಂಡಿನಲ್ಲಿ ಅಂತಿಮ ಫಲ ಕಾಣುತ್ತದೆ.

ಶಿವಮೊಗ್ಗದ ನೆಲದಲ್ಲಿ ತಾಳೆ ಹೂವಿಗೆ ಪರಾಗ ಸ್ಪರ್ಶದ ಸೇವೆ ನೀಡಲು ಅಲ್ಲಿನ ಕೀಟಗಳು ಸೋತವು. ದಕ್ಷಿಣ ಆಫ್ರಿಕಾದ ವಿವಿಲ್ ಬಳಸಿದರೆ ಬೆಳೆ ಹೆಚ್ಚುತ್ತದೆ ಎಂದು ತಿಳಿದಾಗ ಅಲ್ಲಿಂದ ವಿವಿಲ್ ದುಂಬಿ ಆಮದಾಯಿತು! ಈಗ ತಾಳೆ ಕೃಷಿ ಸೋತಿದೆ. ವಿವಿಲ್ ಅನಾಥವಾಗಿದೆ. ತುಂಗಭದ್ರಾ ಆಣೆಕಟ್ಟೆಯ ನಂತರದಲ್ಲಿ ಗಂಗಾವತಿಯ ಹತ್ತಿ, ಜೋಳದ ಹೊಲದಲ್ಲಿ ಭತ್ತ ಬೆಳೆಯುವ ಸಾಧ್ಯತೆ ಸಾಕಾರವಾಯಿತು. ತೀರ್ಥಹಳ್ಳಿಯಲ್ಲಿ ಮಳೆ ಸುರಿದರೆ ಗಂಗಾವತಿಯಲ್ಲಿ ಭತ್ತ ಬೆಳೆಯುತ್ತದೆ, ಅದು ವಿವಿಧ ಪ್ರದೇಶದ ಜನರಿಗೆ ಅನ್ನದ ಆಧಾರವಾಗುತ್ತದೆ, ಮಲೆನಾಡಿನ ಹಸು ಹಾಲು ನೀಡಲು ಅರೆ ಮಲೆನಾಡಿನ ಸೀಮೆಯ ಭತ್ತದ ಹುಲ್ಲು ನಡೆದು ಬರಬೇಕು. ಅಲ್ಲಿನ ಹುಲ್ಲು ನಂಬಿ ಹೈನುಗಾರಿಕೆ ನಡೆಯುತ್ತದೆ.

ಚಳಿಚಳಿಯೆಂದು ಕಂಬಳಿ ಹೊದ್ದು ಮಲಗುವಾಗ ನಮಗೆ ಕಪ್ಪತಗುಡ್ಡದ ಕುರಿ, ಜಮಖಂಡಿಯ ಹುಣಸೆಬೀಜದ ಗಂಜಿ ಹಾಗೂ ಚಳ್ಳಕೆರೆಯ ಕಂಬಳಿನೇಯ್ದ ಕೈಗಳು ನೆನಪಾಗುತ್ತವೆ. ಮಡಕೇರಿಯಲ್ಲಿ ಕೂತು ಬ್ರೆಡ್ಡು ಮೆಲ್ಲುವಾಗ, ಚಿಕ್ಕಮಂಗಳೂರಿನಲ್ಲಿ ದೋಸೆ ತಿನ್ನುವಾಗ, ದೆಹಲಿಯಲ್ಲಿ ಕಡಲೆಕಾಯಿ ಕಡಿಯುವಾಗ ಸಹ ನಮ್ಮ ಆಹಾರ ಚಕ್ರದ ಬಗೆಗೆ ಅಚ್ಚರಿ ಕಾಡುತ್ತದೆ. ಒಂದು ಟ್ರೇನು, ವಿಮಾನ, ಹೆದ್ದಾರಿಗೆ ಅಂಟಿಕೊಂಡ ಲಾರಿಗಳು ನಮ್ಮ ಆಹಾರ, ದಿನಬಳಕೆ ವಸ್ತುಗಳನ್ನು ಒಂದೆಡೆಯಿಂದ ಮತ್ತೊಂದೆಡೆಗೆ ಸಾಗಿಸುತ್ತ ಸುಸ್ಥಿರ ಚಕ್ರವನ್ನು ವಿಶಾಲಗೊಳಿಸಿದ ಕ್ರಾಂತಿಯಲ್ಲಿ ವಿಶ್ವವೇ ಒಂದಾಗಿದೆ.

ಈರುಳ್ಳಿ, ಬಟಾಟೆಗಳು ಈಗ ಇಡೀ ತರಕಾರಿ ಸಾಮ್ರಾಜ್ಯವಾಳಲು ನಿಂತಾಗ ನಮ್ಮ ಬಾಣಸಿಗನಿಗೆ ಅಡುಗೆ ಸುಲಭ ಕಂಡಿದ್ದು ನಿಜ. ಎಕತಾನತೆಗೆ ನಾಲಗೆ ಎಷ್ಟು ಒಗ್ಗಿತೆಂದರೆ ರಾಜಸ್ಥಾನಿಯ ಪಾನಿಪೂರಿ ತಳ್ಳುಗಾಡಿಯ ಚಕ್ರ ಕಂಡಿದ್ದೇ ನಮ್ಮ ಪ್ರದೇಶಿ ಪ್ರಜ್ಞೆಯ ಉಡುಪಿ ಹೊಟೇಲ್‌ಗಳಿಗೂ ಪಾನಿಪೂರಿ, ಮಸಾಲೆಪೂರಿ ಎಂದು ಬೋರ್ಡು ತಗಲಿಸಿದವು. ಕೃಷಿ ಬೆಳೆಯಲ್ಲಿ, ಅನ್ನದ ಬಟ್ಟಲಲ್ಲಿ ಜಗದ ಮೂಲ ಕಟ್ಟುವ ಜಿದ್ದು ಹುಟ್ಟಿತು. ಇದಕ್ಕೆ ಕೃಷಿ ವಿಜ್ಞಾನ, ತಂತ್ರಜ್ಞಾನ ತಲೆಗೂಡಿಸಿದೆ. ಎಲ್ಲೋ ಒಂದು ಭೂಕಂಪ, ಅವಘಡ, ಬರಗಳು ಎದ್ದು ಬಂದು ಮೂಲ ಖಾಲಿ ಖಾಲಿ ಎನಿಸಿದ ಘಳಿಗೆ ಪರ್ಯಾಯ ಹುಡುಕಾಟದ ಚಿಂತೆ ಹುಟ್ಟುತ್ತದೆ. ಒಂದೆಡೆ ಇಡೀ ವಿಶ್ವವೇ ಬೆಸೆದುಕೊಂಡ ಅದ್ಬುತ, ಇನ್ನೊಂದೆಡೆ ನೆಲದ ವೈವಿಧ್ಯತೆ, ಸ್ವಾವಲಂಬನೆ ಮುಗಿದು ಬೆಳಗಿನ ದೋಸೆಗೆ ೩೦೦ ಕಿಲೋ ಮೀಟರ್ ಆಚೆಯ ಗಂಗಾವತಿ ಅಕ್ಕಿ ನೋಡುವ ಯೋಗ! ಕೃಷಿ ಪ್ರಗತಿಯಲ್ಲಿ ಇದೆಲ್ಲ ಅನಿವಾರ್ಯ ಲಾಭ, ಸಂಬಂಧಗಳು.

ಕೃಷಿ ಅಭಿವೃದ್ಧಿಯಲ್ಲಿ ತಂತ್ರಜ್ಞಾನ, ತಳಿ ಸುಧಾರಣೆ, ಹೊಸಕೃಷಿ ಅನುಸರಣೆಯ ಅನಿವಾರ್ಯ ಲಾಭಗಳನ್ನು ಒಪ್ಪಿಕೊಳ್ಳುವದು, ಅನುಸರಿಸುವದು ಸಹಜ. ಆದರೆ ನಮ್ಮ ಬದುಕಿಗೆ ಇವತ್ತಿನ ಸಂದರ್ಭದಲ್ಲಿ ಬೆಳೆಗಳ ಹುಡುಕಾಟ ಬಂದಾಗ ಎಲ್ಲರೂ ಒಂದೇ ದಾರಿ ಹಿಡಿಯಬಾರದು. ಅಲ್ಲಿ ನೆಲದ ವೈವಿಧ್ಯದ ಅವಕಾಶ ಬೇಕು. ನೆಲದ ಕಾಡು, ಕೃಷಿ ಕಲಿಸಿದ ತಳಿ ವೈವಿಧ್ಯ ಪೋಷಣೆಯ ಪಾಠಗಳಲ್ಲಿ ಬದುಕಿನ ದಾರಿ ಕಟ್ಟುವ ಸಾಧ್ಯತೆಯಿದೆ. ಕರಾವಳಿಯ ಹಳದೀಪುರದ ಓರ್ವ ಹಾಲಕ್ಕಿ ಮಹಿಳೆ ತನ್ನ ೮೦ ಅಡಿ ಚಚ್ಚೌಕದ ಗದ್ದೆಯಲ್ಲಿ ಏನೆಲ್ಲ ಬೆಳೆದಿದ್ದಳು ಎಂಬುದನ್ನು ಎರಡು ವರ್ಷದ ಹಿಂದೆ ಲೆಕ್ಕ ಹಾಕಿದೆವು. ಮೆಣಸು, ಬದನೆ, ಬೆಂಡೆ, ಹಾಗಲ, ಹರಿವೆ ಹೀಗೆ ೧೮ ಜಾತಿಯ ತರಕಾರಿಗಳನ್ನು ಆಕೆ ಬೇಸಿಗೆಯ ಬೆಳೆಯಾಗಿ ಪೋಷಿಸಿದ್ದಳು. ಕೃಷಿ ವೈವಿಧ್ಯ ಸಂರಕ್ಷಣೆಯ ಯಾವ ವಿಚಾರ ಸಂಕಿರಣ, ಠರಾವು, ಯೋಜನೆಗಳ ಜ್ಞಾನವಿಲ್ಲದ ಅನಕ್ಷರಸ್ಥ ಮಹಿಳೆ ತನ್ನ ಬೆವರು ಹರಿಸಿ ಸಾಧ್ಯತೆಗಳಿಗೆ ಕನ್ನಡಿ ಹಿಡಿದಿದ್ದಳು. ಕೇರಳದಿಂದ ಮುಂಡಗೋಡಿನ ಅರಿಶಿನಗೇರಿ, ಇಂದೂರುಗಳಿಗೆ ಬಂದು ನೆಲೆಯೂರಿದ ಕೃಷಿಕರು ಕಳೆದ ೨೫ ವರ್ಷಗಳಿಂದ ತಮ್ಮ ಹೊಲದ ಬೇಲಿ, ಮನೆಯ ಹಿತ್ತಲಲ್ಲಿ ಮೂಡಹಾಗಲು(ಕಾಡುಹಾಗಲು) ತಂದು ಕೃಷಿ ಮಾಡುತ್ತಿದ್ದಾರೆ. ಇವರು ಈ ಸಸ್ಯ ಮೂಲ ಪಡೆದದ್ದು ಪಕ್ಕದ ಕಾಡಿನಿಂದ! ಪ್ರತಿ ವರ್ಷ ಗಣೇಶಚೌತಿಯ ಹೊತ್ತಿಗೆ ಕಿಲೋಗೆ ೮೦-೧೦೦ ರೂಪಾಯಿಗೆ ಮಾರಾಟವಾಗುವ ಇವರ ಉತ್ಪನ್ನ ಶಿರಸಿ, ಹುಬ್ಬಳ್ಳಿ ಮಾರುಕಟ್ಟೆಯಲ್ಲಿ ಸುಲಭದಲ್ಲಿ ಖಾಲಿಯಾಗುತ್ತದೆ. ಕಾಡಲ್ಲಿ ಕಾಣದ ಫಲ ಇಂದು ಇವರ ನೆಲದಲ್ಲಿದೆ.

ಅರಣ್ಯ ಜಿಲ್ಲೆ ಸಸ್ಯ ವೈವಿಧ್ಯಕ್ಕೆ ಹೆಸರುವಾಸಿ. ಕೃಷಿ ವೈವಿಧ್ಯದಲ್ಲೂ ದಾಖಲೆ. ಇಲ್ಲಿನ ಅಡಿಕೆ ತೋಟಗಳಲ್ಲಿ ಏನೆಲ್ಲ ವೈವಿಧ್ಯ ಬೆಳೆ ಪಡೆಯಲಾಗುತ್ತದೆಂಬುದನ್ನು ಕರಾವಳಿ, ಘಟ್ಟ ಹಾಗೂ ಅರೆಮಲೆನಾಡು ಪ್ರಾಂತ್ಯಗಳಲ್ಲಿ ಪಟ್ಟಿ ಮಾಡಿದರೆ ೪೦ಕ್ಕೂ ಹೆಚ್ಚು ಸಸ್ಯಗಳು ದೊರೆಯುತ್ತವೆ. ಇಲ್ಲಿ ಒಂದು ಪರಂಪರೆ ಕಟ್ಟಿಕೊಟ್ಟ ಈ ಪೂರಕ ಬೆಳೆಗಳಿಗೆ ವಾಣಿಜ್ಯ, ಆಹಾರ, ಔಷಧೀಯ ಮಹತ್ವವಿದೆ. ಸ್ವಾದಿಷ್ಟ ರುಚಿ ಸೇರಿದಂತೆ ಅಕಾಲದಲ್ಲೂ ಫಲ ಬಿಡುವ ಹಲಸು, ಅಗಸ್ಟ್‌ದಲ್ಲಿ ಫಲ ನೀಡುವ ಮಾವು, ಮಾವಿನ ವಾಸನೆ ನೀಡುವ ಅಂಬೆಕೊಂಬು(ಮಾವಿನಶುಂಠಿ) ಕಾಣುತ್ತದೆ. ಉತ್ತರ ಕನ್ನಡದ ಭಟ್ಕಳದಿಂದ ಆರಂಭಿಸಿ ಬನವಾಸಿಯ ತನಕ ಓಡಾಡಿದರೆ ೧೮ಕ್ಕೂ ಹೆಚ್ಚು ಜಾತಿಯ ಬಾಳೆ ದೊರೆಯುತ್ತದೆ, ಕರಾವಳಿ ತೋಟದಲ್ಲಿ ಅಡುಗೆ ಆಧಾರವಾದ ಬೇರುಹಲಸು, ನೀರುಹಲಸು, ಬಿಂಬಳೆ, ಕರಮದ್ಲು, ತರಹೇವಾರಿ ಕೆಸವಿನ ಗಡ್ಡೆಗಳಿವೆ. ಗೋವಾದಲ್ಲಿ ೩೫೦-೪೫೦ ರೂಪಾಯಿ ಕಿಲೋಗೆ ಮಾರಾಟವಾಗುವ ಸೂಜಿ ಮೆಣಸು ಕಳೆ ಗಿಡದ ಸ್ಥಾನದಲ್ಲಿದೆ. ಕರಾಚಿಗೆ ನೆಗೆಯುವ ಹೊನ್ನಾವರದ ರಾಣಿ ಎಲೆ, ಕರಿ ಮಲ್ಲೀಸರ, ಬಿಳಿ ಮಲ್ಲೀಸರ, ದಡಗ, ಪಣಿಯೂರು ಮುಂತಾದ ತಳಿಯ ಕಾಳು ಮೆಣಸು ಮಲೆನಾಡಿನ ತೋಟದಲ್ಲಿ ಬೆಳೆಯುತ್ತಿದೆ. ಕರಿ ಮಲ್ಲೀಸರ ಜಾತಿಯ ಕಾಳು ಮೆಣಸನ್ನು ಕೊಯ್ದು ಒಣಗಿಸಿದ ತರುವಾಯ ೧೦ ವರ್ಷ ಇಟ್ಟರೂ ಹಾಳಾಗದೇ ಉಳಿಯುತ್ತದೆ. ಗುಜರಾತ್, ರಾಜಸ್ಥಾನ್‌ಗಳಲ್ಲಿ ವಿಶೇಷ ಬೇಡಿಕೆಯಿದೆ. ಆದರೆ ಇಲ್ಲಿನ ಮಾರುಕಟ್ಟೆಯಲ್ಲಿ ಇಂದು ಶೇಕಡಾ ೯೦ರಷ್ಟು ಪಣಿಯೂರು ತಳಿಯ ಮೆಣಸು ಮಾತ್ರ ದೊರೆಯುತ್ತಿದೆ. ಪಶ್ಚಿಮ ದಟ್ಟ ಕಾಡುಗಳಲ್ಲಿ ‘ಚೌತಿಮೆಣಸು’ಎಂಬ ತಳಿಯಿದೆ. ದೇಶದ ಪ್ರಖ್ಯಾತ ಗಾಯಕರ ಗಂಟಲಿನ ಆರೋಗ್ಯ ಈ ಪುಟ್ಟ ಕಾಳಿನಲ್ಲಿ ಕೂತಿದೆ. ಔಷದೀಯ ಮಹತ್ವ ಪಡೆದಿದೆ.

ಈಗ ಹೇಳಿ ಎಲ್ಲೆಡೆಯೂ ಸಿಗುವ ಬಟಾಟೆ ಬೆಂಗಳೂರಿನಲ್ಲಿ, ಮೈಸೂರಿನಲ್ಲಿ, ಹರಪನಹಳ್ಳಿಯಲ್ಲಿ ಬೆಳೆಯುತ್ತದೆಂಬುದರಲ್ಲಿ ಯಾವ ವಿಶೇಷವಿಲ್ಲ, ಬಯಲು ಸೀಮೆಯಲ್ಲಿ ದೊರೆಯುವ ಖಾರದ ಈರುಳ್ಳಿ, ಸಿಹಿಸಿಹಿ ರುಚಿಯ ಉತ್ತರ ಕನ್ನಡದ ಹಂದಿಗೋಣದ ಈರುಳ್ಳಿ ಪ್ರತ್ಯೇಕವಾಗಿ ಮಾರುಕಟ್ಟೆಯಲ್ಲಿ ನಿಲ್ಲುವಲ್ಲಿ ಧನಾತ್ಮಕ ಅಂಶವಿದೆ. ಕೃಷಿ ವಿಧಾನ, ಮಾರುಕಟ್ಟೆ ಆಧಾರಿತವಾಗಿ ಬೆಳೆ ಆಯ್ದುಕೊಳ್ಳುವಾಗ ಸಹಜವಾಗಿ ಎಲ್ಲರೂ ಒಪ್ಪಿಕೊಂಡ ಮೊನೋಕಲ್ಚರ್  ಕೃಷಿಗೆ  ಅಂಕ ದೊರೆಯುತ್ತದೆ. ಈ ನೆಲದ ಸತ್ವ ಹೀರಿ ಬೆಳೆಯುವ ಬೆಳೆ ಇನ್ನುಳಿದ ತಳಿ ರುಚಿಗಳಿಗಿಂತ ಎದ್ದು ನಿಲ್ಲುವಾಗ ಪರ್ಯಾಯದ ದಾರಿಗಳನ್ನು ಇಂತಹ ಫಲಗಳಲ್ಲಿ ಹುಡುಕುವ ಯತ್ನ ಹೆಚ್ಚಬೇಕಿದೆ. ಯಾವತ್ತೂ ಅಂತಿಮ ಬಳಕೆದಾರರು ರುಚಿಗೆ ನೇತು ಬೀಳುತ್ತಾರೆ. ಅಡಿಕೆ ಹೆಚ್ಚು ಬೆಳೆ ಬಂದು ಮಾರುಕಟ್ಟೆ ವಿಸ್ತರಿಸಿದೆ ಎಂಬುದನ್ನೇ ಗಣನೆಗೆ ತೆಗೆದುಕೊಂಡರೆ ಎಲ್ಲ ಅಡಿಕೆಯೂ ಹಾಗೇ ಎಲ್ಲ ಮಾರಾಟವಾಗುವದಿಲ್ಲ. ವಿವಿಧ ರುಚಿ ಹುಡುಕಿ ಜನ ಖರೀದಿಸುತ್ತಾರೆ. ಇದೇ ಕಾರಣಕ್ಕೆ ಯಲ್ಲಾಪುರದ ಆಫಿ ಅಡಿಕೆ ಜೀನಿ ಆಫಿ, ಡಾಲರ್ ಆಫೀ ಎನ್ನುತ್ತ ೨೮ಕ್ಕೂ ಹೆಚ್ಚು ರೀತಿಯಲ್ಲಿ ವಿಂಗಡನೆಗೊಳ್ಳುತ್ತದೆ. ಇದರಲ್ಲಿ ದಪ್ ಆಫೀಯಲ್ಲಿನ ‘ಹಾಲಡಿಕೆ’ ಹುಬ್ಬಳ್ಳಿ-ಧಾರವಾಡದ ಜನರ ತಾಂಬೂಲಕ್ಕೆ ವಿಲೆಯಾಗುತ್ತದೆ. ಬೆಳೆ ವೈವಿಧ್ಯ, ರುಚಿ ವೈವಿಧ್ಯಗಳ ಸಂರಕ್ಷಣೆ ಈಗ ನಮ್ಮ ಕೃಷಿಯ ಆದ್ಯತೆಯಾಗಬೇಕು. ಬೆಳೆಗೆ ಪೂರಕ ಪ್ರೋತ್ಸಾಹ ದೊರೆಯಬೇಕು. ಸಸ್ಯ ವೈವಿಧ್ಯ, ಕೃಷಿ ವೈವಿಧ್ಯದ ಹೆಚ್ಚುಗಾರಿಕೆ ಗುರುತಿಸಿ ಕೃಷಿ ವಿಜ್ಞಾನ ಅಧ್ಯಯನ, ಅಭಿವೃದ್ಧಿ ಮಾರ್ಗವನ್ನು ಪರಾಮರ್ಶೆಗೆ ಒಡ್ಡಬೇಕು.