ಔಷಧದ ಗಿಡ ಎಲ್ಲರಿಗೂ ತೋರಿಸಿದ್ರೆ ಔಷಧದ ಗುಣ ಮಾಯವಾಗ್ತದೆ!ಅಜ್ಜ, ಅಪ್ಪ ಹೇಳುತ್ತಿದ್ದ ಮಾತುಗಳು ನೆನಪಾದವು. ಯೋಚಿಸುತ್ತ ದಿಬ್ಬದಲ್ಲಿ ನಿಂತರು, ಮುಂದಿನ ಕ್ಷಣಾರ್ಧದಲ್ಲಿ ದನಕರುಗಳ ಔಷಧಕ್ಕೆ ಬೇಕಿದ್ದ ಶಿವಣೆ ಗಿಡ ಬುಲ್ಡೋಜರ್ ಅಲುಗಿಗೆ ಸಿಲುಕಿ ಬೇರು ಸಹಿತ ಕಿತ್ತು ಬಿತ್ತು! ಹೊಟ್ಟೆಯೊಳಗೆ ಭಾರೀ ಸಂಕಟವಾಯ್ತು, ನನ್ನ ಎದೆ ಮೇಲೆ ಬುಲ್ಡೋಜರ್ ಬಂದಂಗೆ ಆಯ್ತು!ಒಂದು ಕಾಡು ಗಿಡದ ಸಾವು ನೆನಪಿಸಿಕೊಂಡು ಗೌಡರ ಕಣ್ಣಂಚಿನಲ್ಲಿ ನೀರು ಜಿನುಗುತ್ತಿತ್ತು.


ಮಾಧ್ಯಮ ಆಸಕ್ತಿಯಿಂದ ಹಳ್ಳಿ ವೈದ್ಯರ ಸಮೀಕ್ಷೆ ಆರಂಭಿಸಿದ ದಿನಗಳವು. ನಾಟಿ ವೈದ್ಯರ ವಿಳಾಸ ಸಂಗ್ರಹಿಸಿ  ನೇರ ಅವರ ಮನೆಗೆ ಹೋಗಿ ಜೌಷಧ ಜ್ಞಾನ ದಾಖಲಿಸುವದು ಮುಖ್ಯ ಕೆಲಸ. ಎಷ್ಟು ವರ್ಷದಿಂದ ಹಳ್ಳಿ ಔಷಧ ಕೊಡುತ್ತಿದ್ದಾರೆ? ಕಲಿತದ್ದು ಹೇಗೆ? ವರ್ಷಕ್ಕೆ  ಎಷ್ಟು ಜನ ಔಷಧಕ್ಕೆ ಬರುತ್ತಾರೆ? ಬಳಸುವ ಗಿಡ ಮೂಲಿಕೆ ಎಲ್ಲಿಂದ ಪಡೆಯಲಾಗುತ್ತದೆ? ಈಗ ಮೂಲಿಕೆ ಸಾಕಷ್ಟು ದೊರೆಯುತ್ತಿದೆಯೇ? ಗಿಡ ಬೆಳೆಸಿದ್ದಾರೆಯೇ? ಕುಟುಂಬದಲ್ಲಿ ನಿಮ್ಮ ನಂತರ ಈ ಸೇವೆ ನಡೆಸುವವರು ಯಾರು? ಹೀಗೆ ಪ್ರತಿ ವೈದ್ಯರಿಂದ ೨೫-೩೦ ಪ್ರಶ್ನೆಗಳಿಗೆ ಉತ್ತರ ಪಡೆಯಬೇಕಿತ್ತು. ೧೫ ವರ್ಷಗಳ ಹಿಂದೆ  ಈ ಕೆಲಸ ಮಾಡುವಾಗ ಓಡಾಟಕ್ಕೆ ವಾಹನ ಅನುಕೂಲತೆಯಿರಲಿಲ್ಲ, ಘಟ್ಟದ ಹಳ್ಳಿಗಳಲ್ಲಿ ಸೈಕಲ್ ತುಳಿಯುವದು ಕಷ್ಟವಾದ್ದರಿಂದ ಕಾಲ್ನಡಿಗೆ ಅನಿವಾರ್ಯ. ಕಾಡು ಹಳ್ಳಿ ಸುತ್ತುವ ಸಂದರ್ಭದಲ್ಲಿ  ದಾರಿ ಖರ್ಚಿಗೆಂದು  ಹಳ್ಳಿಗರು ಚೆಂದದ ಕತೆ ಹೇಳುತ್ತಿದ್ದರು. ಮೂಲಿಕಾ ವೈದ್ಯರ ಸಮೀಕ್ಷೆ ನಡೆಸುತ್ತಿದ್ದರಿಂದ ಕತೆಗಳು  ಅವರ ಸುತ್ತಲೇ ತಿರುಗುತ್ತಿದ್ದವು .

ಪ್ರಸಿದ್ದ ವೈದ್ಯರ ಬಗೆಗೆ ಹೇಳುವಾಗಲೋ, ಮೂಲಿಕೆಯ ಮಹತ್ವ ವಿವರಿಸುವಾಗಲೋ ಮಾಮೂಲಿಯಾಗಿ ಕೇರಳದ ಕೃಷಿ ಕೆಲಸಗಾರರೊಬ್ಬರ ಘಟನೆ ಹೇಳುತ್ತಿದ್ದರು. ಕೃಷಿ ಕೆಲಸಕ್ಕೆಂದು ಉತ್ತರ ಕನ್ನಡದ ಹಳ್ಳಿ ಮನೆಗೆ ಬಂದ ಆ ವ್ಯಕ್ತಿಗೆ ಒಮ್ಮೆ ಕಾಡಿನಿಂದ ಸೊಪ್ಪುತರಲು ಯಜಮಾನರು ಸೂಚಿಸಿದರು. ಕತ್ತಿ, ಹಗ್ಗ ಹಿಡಿದು ಮುಂಜಾನೆ ಕಾಡಿಗೆ ಹೋದ  ಆತ ಸಾಯಂಕಾಲವಾದರೂ ಮರಳಲಿಲ್ಲ. ಅರ್ಧ ಗಂಟೆಯ ಕೆಲಸಕ್ಕೆ ದಿನವಿಡೀ ಸಮಯ ವ್ಯಯಮಾಡಿದವನ ಬಗೆಗೆ  ಯಜಮಾನರ ಸಿಟ್ಟು ನೆತ್ತಿಗೇರಿತು. ರಾತ್ರಿ  ಕೆಲಸಗಾರ ಕತ್ತಿ, ಹಗ್ಗ ಹಿಡಿದು  ಮರಳಿದ್ದನ್ನು ಗಮನಿಸಿದವರು ಕೃಷಿ ಕೆಲಸಕ್ಕೆ ನಾಲಾಯಕ್ ಎಂದು ಗದರಿಸಿದರು. ‘ನಿಮ್ಮ ಕಾಡಲ್ಲಿ ಗೊಬ್ಬರಕ್ಕೆ ಬಳಸುವ ಸೊಪ್ಪುಗಳಿಲ್ಲ, ಯಾವ ಗಿಡ ನೋಡಿದರೂ ಅದು ಅಮೂಲ್ಯ ಗಿಡಮೂಲಿಕೆ! ಹೀಗಾಗಿ ಅವನ್ನು ದೊಡ್ಡಿಗೆ ಹಾಕುವ ಸೊಪ್ಪಿನಂತೆ ಕಡಿದು ಹಾಳುಮಾಡಲು ಮನಸ್ಸಾಗಲಿಲ್ಲ’ ಆತ ತನ್ನ ಸಂಧಿಗ್ಧತೆ ವಿವರಿಸಿದರು. ಆ ವ್ಯಕ್ತಿಯ ಮಾತು ವಿಚಿತ್ರವೆನಿಸಿತು. ಕಲಿಕೆಯ ಕುತೂಹಲದಿಂದ ಕೆಲಸಗಾರನಲ್ಲಿಯ ಅಪಾರ ಸಸ್ಯಜ್ಞಾನದ  ಮಾಹಿತಿ ಪಡೆದರು, ಜತೆ ಕಾಡು ಸುತ್ತಿದರು. ತಮ್ಮ ಕಾಡು ಸಸ್ಯದ ಬಳಕೆವಿವರ ಸಂಗ್ರಹಿಸಿ ಕೇರಳದ ಕೂಲಿಕಾರನೊಬ್ಬರ ಪ್ರೇರಣೆಯಿಂದ ಉತ್ತರ ಕನ್ನಡದ ಕೃಷಿಕರೊಬ್ಬರು ಮುಂದೆ ಮೂಲಿಕಾ ವೈದ್ಯರಾಗಿ  ಪ್ರಸಿದ್ಧರಾದರು !

ಕರೆವೊಕ್ಕಲಿಗರು, ಮರಾಠಿ, ಸಿದ್ದಿ, ಹವ್ಯಕ ಹೀಗೆ ವಿವಿಧ ಜನಾಂಗದ ೧೫೦ಕ್ಕೂ  ಹೆಚ್ಚು ವೈದ್ಯರ ಸಂದರ್ಶನ ಮಾಡಿದ್ದೇನೆ, ಹತ್ತಾರು ಹಳ್ಳಿಗಳಲ್ಲಿ ಇಂತಹುದೇ ಕತೆ ಕೇಳಿದ್ದೇನೆ. ಕಾಡಿಗೆ ಸೊಪ್ಪು ಕಡಿಯಲು ಹೋದವರ ಕತ್ತಿ ಇದ್ದಕ್ಕಿದ್ದಂತೆ ಬಂಗಾರವಾಯಿತು ಎಂಬುದು ಇನ್ನೊಂದು ರೋಚಕ ಪ್ರಸಂಗ! ಕಾಡಿನ ಯಾವುದೋ ಗಿಡ ಕಡಿದಾಗ ಕಬ್ಬಿಣ  ಬಂಗಾರವಾಗುತ್ತದೆಂದು ಇಂದಿಗೂ ಹೇಳುವವರಿದ್ದಾರೆ! ಶಿರಸಿಯ ಹೂಡ್ಲಮನೆಯ ಹೆಗಡೆಯವರೊಬ್ಬರು (ಕಾಲ ಗೊತ್ತಿಲ್ಲ) ಹುಲಿಯಪ್ಪನ ಕಾಡಿನಲ್ಲಿ ಕಾಡು ಗಿಡದ ಎಲೆಗಳಿಗೆ ಗುಂಡು ಸೂಜಿ ಚುಚ್ಚಿಸಿ ಈ ಮಾಯದ ಗಿಡದ ಪತ್ತೆಗೆ ಶ್ರಮಿಸಿದ್ದರು ಎಂದು  ಹೇಳಿದವರಿದ್ದಾರೆ! ಇಂತಹ ಕತೆಗಳು ಎಷ್ಟು ನಿಜವೋ? ಘಟನೆಗೆ ಪೂರಕ ದಾಖಲೆಗಳೇನು ಎಂದು ಮೂಲ ಕೆದಕಿದರೆ ಇನ್ನಷ್ಟು ಸಸ್ಯ ಜನಪದ ಕತೆಗಳು ಸಿಕ್ಕಾವೆಯೇ ಹೊರತೂ  ಎಲ್ಲಿಯೂ ಅಧಿಕೃತ ಮಾಹಿತಿ ದೊರೆಯುವದಿಲ್ಲ. ಆದರೆ ನಮ್ಮ ಕಾಡು ಗಿಡದ ಮಹತ್ವ ತಿಳಿಸಲು ಮೂಲಿಕಾ ಕತೆಗಳ ಶಕ್ತಿ ಯಾವತ್ತೂ ಮರೆಯುವಂತಿಲ್ಲ.

ಮೂಲಿಕೆಯ ವಿವರ ಯಾವ ವೈದ್ಯರೂ  ಹೇಳುವದಿಲ್ಲ ಎಂಬ ಮಾಮೂಲಿ ಮಾತು ಕೇಳುತ್ತೇವೆ. ವೈದ್ಯರ ಜತೆ ಕಾಡಿಗೆ ಹೋಗಿ ಕಲಿಯುವ ನಿಜ ಆಸಕ್ತಿ  ಎಷ್ಟು ಜನಕ್ಕೆ ಇದೆ ಎಂಬುದು ಮುಖ್ಯ ಪ್ರಶ್ನೆ .ನಾವು ಹೇಗೆ ಮಾಹಿತಿ ಕೇಳುತ್ತೇವೆ ಎಂಬುದರ ಮೇಲೆ ಉತ್ತರ ದೊರೆಯುತ್ತದೆ. ವನವಾಸಿ ಸಿದ್ದಿಯೊಬ್ಬ ವಿಷ ಜಂತು ಕಡಿದರೆ ಔಷಧಿ ನೀಡುತ್ತಿದ್ದ, ದೇಹ ಸೇರಿದ ವಿಷದ ಪ್ರಮಾಣ ಅರಿಯಲು ಕಾಡು ಮರದ ಚಕ್ಕೆ ತೇಯ್ದು ವಿಷಜಂತು ಕಡಿಸಿಕೊಂಡವನ ಎದೆಗೆ ಲೇಪಿಸುತ್ತಿದ್ದನು. ಮುಂಜಾನೆಯ ಬಿಸಿಲಿಗೆ ಬದಲಾಗುವ ಲೇಪದ ಬಣ್ಣ ಗಮನಿಸಿ ಅವರ ದೇಹದಲ್ಲಿ ಎಷ್ಟು ವಿಷವಿದೆಯೆಂದು ಊಹಿಸಿ ಅಗತ್ಯ ಮದ್ದು ಕೊಡುತ್ತಿದ್ದನು. ರಕ್ತ ಪರೀಕ್ಷೆ, ಮೂತ್ರ ಪರೀಕ್ಷೆ ಇದ್ದಂತೆ ಕಾಡು ಮರದ ಚಕ್ಕೆ ಬಳಸಿ ಇಂತಹ ವಿಷ ಪರೀಕ್ಷೆ ನಡೆಸುವ ಹಲವು ವಿಧಾನಗಳು ಇಂದಿಗೂ ಬಳಕೆಯಲ್ಲಿವೆ. ಪರೀಕ್ಷೆ, ಚಿಕಿತ್ಸೆಗೆ ಬಳಸುವ ಮೂಲಿಕೆಗಳ ಮಾಹಿತಿ ಕೇಳಿದರೆ ‘ಅದನ್ನು ಹೇಳಲು ಸಾಧ್ಯವೇ ಇಲ್ಲ’ ಎಂದಿದ್ದ ಈ ವೈದ್ಯ ಸಿದ್ದಿ. ‘ನಿಮಗೆ ಅಗತ್ಯವಾದ ಮೂಲಿಕೆಯನ್ನು ಕಾಡಿನಿಂದ ಪಡೆಯುತ್ತೀರಿ, ಇಂದು ಕಾಡು ನಾಶವಾಗಿದೆ, ನಿಮಗೆ ಈ ಗಿಡ ಬೆಳೆಸಲು ಸಾಧ್ಯವಾಗುವದಿಲ್ಲ, ಪರಿಸ್ಥಿತಿ ಹೀಗೆ ಮುಂದುವರಿದರೆ ನಿಮ್ಮ ಮನೆತನಕ್ಕೆ ನಾಟಿ ವೈದ್ಯರೆಂಬ ಹೆಸರಿರುತ್ತದೆ, ಆದರೆ ಔಷಧ ನೀಡಲು ಗಿಡ ಇರುವದಿಲ್ಲ!’ ಎಂದು ಪರಿಸ್ಥಿತಿ ವಿವರಿಸಿದೆ. ಆಗಷ್ಟೇ  ಅಕೇಸಿಯಾ ನೆಡುತೋಪು ಹಳ್ಳಿ ಗುಡ್ಡಗಳಲ್ಲಿ ಬೆಳೆಯುತ್ತಿತ್ತು, ವೈದ್ಯ ಮನಮುಟ್ಟುವಂತೆ ವಿವರಿಸುವ ಅವಕಾಶವಾಯಿತು. ಸಸ್ಯ ನಾಶದ ಕತೆ ಕೇಳಿದ ಸಿದ್ದಿ ಸ್ವಲ್ಪ ಹೊತ್ತು  ಕಣ್ಮುಚ್ಚಿ ಸುಮ್ಮನೆ ಕುಳಿತು  ಬಿಟ್ಟ! ‘ಹೌದ್ರೋ ! ಗಿಡವೇ ಇಲ್ಲದೇ ಹೋದ್ರೆ ಮದ್ದು ಕೊಡಾದು ಹ್ಯಾಂಗೆ? ನಾನು ಯಾರಿಗೂ ಹೇಳಲ್ಲ, ನಿಮಗೆ ಬೇಕಾದ್ರೆ ಗಿಡ ತೋರಿಸ್ತೇನೆ’ ಮಾತುಕತೆಯ ಒಂದು ವಿಶ್ವಾಸ  ಹೊಸ ಗಿಡ ಅರಿಯುವ ಅವಕಾಶವಾಯಿತು.

ದನಕರುಗಳಿಗೆ ಔಷಧ ನೀಡುವ ದ್ಯಾವಳಗದ್ದೆಯ ಸುಬ್ಬಾಗೌಡರು ಊರಿನ ಗುಡ್ಡದ ಕುರುಚಲು ಗಿಡವನ್ನು ಲಾಗಾಯ್ತಿನಿಂದಲೂ ಬಳಸುತ್ತಿದ್ದರು. ಅಜ್ಜನ ಕಾಲದಿಂದ ಅದು ಅವರ ಮನೆತನದ ಮದ್ದಾಗಿ ಬಳಕೆಯಲ್ಲಿತ್ತು. ಸಾಮಾಜಿಕ ಅರಣ್ಯ ಯೋಜನೆ ಬಂದ ಸಂದರ್ಭ, ಗೋಮಾಳ, ಬೋಳು ಬಯಲುಗಳನ್ನು ಹಸಿರಾಗಿಸುವ ಉಮೇದಿಗೆ ಕರ್ನಾಟಕ ಅರಣ್ಯ ಇಲಾಖೆ ಬುಲ್ಡೋಜರ್ ಹಿಡಿದು ಬೆಟ್ಟಕ್ಕೆ ಬಂದಿತ್ತು. ನೈಸರ್ಗಿಕ ಗಿಡಗಳನ್ನು ಬೇರು ಸಮೇತ ಕಿತ್ತು ಬಯಲಾಗಿಸುವದು, ಸಾಲಿನಲ್ಲಿ  ಅಕೇಸಿಯಾ ನೆಡುವದು ಉದ್ದೇಶ. ಒಂದು ಬೆಳಿಗ್ಗೆ ಊರಿನ ದಿಬ್ಬದಲ್ಲಿ ನಿಂತು ನೋಡುತ್ತಿದ್ದರು, ಬುಲ್ಡೋಜರ್ ಗುಡ್ಡ ಊಳುತ್ತಿತ್ತು. ಕೆಲವು ಮೀಟರ್ ಅಂತರದಲ್ಲಿ ಔಷಧಕ್ಕೆ ಬಳಸುವ ಕುರುಚಲು ಗಿಡ! ಓಡಿ ಹೋಗಿ ಬುಲ್ಡೋಜರ್ ಬಿಡುವಾತನಿಗೆ ಗಿಡ ಉಳಿಸುವಂತೆ ಕೇಳಿಕೊಳ್ಳಬೇಕು ಆಸೆ ಹುಟ್ಟಿತು, ಈ ಗಿಡ ನಾಶವಾದರೆ ಸುತ್ತಲಿನ ನಾಲ್ಕಾರು ಕಿಲೋಮೀಟರ್ ಸನಿಹದಲ್ಲಿ ಬೇರೆ ಮತ್ತೊಂದು ಗಿಡವಿಲ್ಲ! ನಾಳೆ ಗಿಡವಿಲ್ಲದೇ ಔಷಧ ಕೊಡುವದು ಹೇಗೆ? ಚಿಂತಿಸಿದರು. ‘ಇದು ಔಷಧದ ಗಿಡ, ಇದನ್ನು ಕಿತ್ತು ನಾಶ ಮಾಡಬಾರದು’ ಬುಲ್ಡೋಜರ್ ಬಿಡುವಾತನಿಗೆ ಹೇಳಬೇಕಿತ್ತು, ಆದರೆ ಗಿಡ ಪರಿಚಯಿಸಲು ಮನಸ್ಸು ಹಿಂದೇಟು ಹಾಕಿತು. ‘ಔಷಧದ ಗಿಡ ಎಲ್ಲರಿಗೂ ತೋರಿಸಿದ್ರೆ ಔಷಧದ ಗುಣ ಮಾಯವಾಗ್ತದೆ !’ ಅಜ್ಜ,ಅಪ್ಪ ಹೇಳುತ್ತಿದ್ದ ಮಾತುಗಳು ನೆನಪಾದವು. ಯೋಚಿಸುತ್ತ ದಿಬ್ಬದಲ್ಲಿ ನಿಂತರು, ಮುಂದಿನ ಕ್ಷಣಾರ್ಧದಲ್ಲಿ  ದನಕರುಗಳ ಔಷಧಕ್ಕೆ ಬೇಕಿದ್ದ ಶಿವಣೆ ಗಿಡ ಬುಲ್ಡೋಜರ್ ಅಲುಗಿಗೆ ಸಿಲುಕಿ ಬೇರು ಸಮೇತ ಕಿತ್ತು ಬಿತ್ತು! ‘ಹೊಟ್ಟೆಯೊಳಗೆ ಭಾರೀ ಸಂಕಟವಾಯ್ತು, ನನ್ನ ಎದೆ ಮೇಲೆ ಬುಲ್ಡೋಜರ್ ಬಂದಂಗೆ ಆಯ್ತು!’ ಒಂದು ಕಾಡು ಗಿಡದ ಸಾವು ನೆನಪಿಸಿಕೊಂಡು  ಗೌಡರ ಕಣ್ಣಂಚಿನಲ್ಲಿ ನೀರು ಜಿನುಗುತ್ತಿತ್ತು.

ನಮ್ಮ ನಡುವಿನ ಕಾಡು ಗಿಡಗಳ ಬಳಕೆ ಜ್ಞಾನ ಓದಿ ಔಷಧ ಜ್ಞಾನ ಹಂಚಿದ ನಮ್ಮ ನಾಟಿ ವೈದ್ಯರನ್ನೇಲ್ಲ  ನಾವು ಅಣಲೆಕಾಯಿ ಪಂಡಿತರು ಎಂದು ಕರೆದಿದ್ದೇವೆ. ಸ್ಥಳೀಯ ವಸ್ತು ಬಳಸಿ ಔಷಧ ಕೊಟ್ಟ ಮೇಧಾವಿಗಳು ಎಂಬುದು ಒಂದರ್ಥವಾದರೆ, ಯಾವುದಕ್ಕೂ ಬಾರದ ಅಣಲೆಕಾಯಿಯನ್ನು ಔಷಧವೆಂದು ಕೊಟ್ಟವರು ಎಂಬ ಅಪಹಾಸ್ಯ ಕೂಡಾ ಇಲ್ಲಿರಬಹುದು. ಬೆಟ್ಟದ ಪುಟ್ಟ ಅಣಲೆಕಾಯಿಯಲ್ಲಿ ಅಮೃತ ದರ್ಶನ ಮಾಡಿಸಿದವರು ನಾಟಿ ವೈದ್ಯರು ಎಂಬುದನ್ನು ಯಾವತ್ತೂ ಮರೆಯಬಾರದು. ರೋಗಕ್ಕೆ ಮದ್ದು ಅರೆಯುವ ಸಂದರ್ಭ ಬಂದಾಗೆಲ್ಲ ವೈದ್ಯರನ್ನು ಗೌರವಿಸುವ ನಾವು ಅವರಲ್ಲಿನ ಅಪಾರ ಗಿಡ ಬಳಕೆ ಜ್ಞಾನ ಗುರುತಿಸಬೇಕು. ಊರಿನ ಕಾಡು, ಕೊಳ್ಳ ಓದಿ ಬೆಳೆದವರನ್ನು ಗೌರವಿಸುವ ಗುಣ ಬೇಕು. ನಮ್ಮ ಪಶ್ಚಿಮ ಘಟ್ಟಕ್ಕೆಲ್ಲ ಮಾಯದ ಗಾಯ ಬೆಳೆಯುತ್ತಿದೆ, ಸಸ್ಯ ಸಂಕುಲ ನಾಶ ಮದ್ದು ಅರೆಯುವ ವೈದ್ಯರ ಆಯವನ್ನೇ ಅಲ್ಲಾಡಿಸಿದೆ.