ಕರ್ನಾಟಕದಲ್ಲಿ ಅರಣ್ಯ ಇಲಾಖೆ ದೊಡ್ಡ ಜಮೀನ್ದಾರ! ಸರಕಾರಿ ಹಣ ಖರ್ಚು ಮಾಡಿ ಗಿಡ ಬೆಳೆಸಿ ಕೋಟಿ ಆದಾಯ ತೋರಿಸಿದ್ದೇ ಅರಣ್ಯ ಇಲಾಖೆಯ ಸಾಧನೆಯಾಗುವದಿಲ್ಲ. ಮರ ಕಡಿದು ಲಾರಿ ಏರುವ ಮುಂಚೆ ಸಸಿ ಬೆಳೆಸಿದ ಅನುಭವ ಪಾಠ ಹೇಳಬೇಕು. ನಾಟಿಯಿಂದ ಕಟಾವುವರೆಗಿನ ಕತೆ ಈಚೆ ಬರಬೇಕು. ಕೃಷಿ ಸಾಧಕರ ಮನೆಗೆ ಹೋದರೆ ಸಿಗುವ ಮಾಹಿತಿಯ ಹಾಗೇ ಇಲಾಖೆಯ ವಲಯ ಕಚೇರಿಗಳಲ್ಲಿ, ನೆಡುತೋಪು ಫಲಕಗಳಲ್ಲಿ ಮಾಹಿತಿ ಪ್ರದರ್ಶನವಾಗಬೇಕು. ಇದರಲ್ಲಿ ನಿಜವಾದ ಹಸಿರು ಲಾಭವಿದೆ.

ಕರ್ನಾಟಕ ಅರಣ್ಯ ಇಲಾಖೆ ರಾಜ್ಯದ ವಿವಿಧ ಭಾಗಗಳಲ್ಲಿ ನೆಡುತೋಪು ಬೆಳೆಸುತ್ತದೆ. ೧೯೭೦ರ ನಂತರ ತೇಗ, ನೀಲಗಿರಿ, ಸಿಲ್ವರ್ ಓಕ್, ಗಾಳಿ, ಅಕೇಸಿಯಾ, ಬಿದಿರು, ಔಷಧ ಸಸ್ಯಗಳನ್ನು ವಿವಿಧ ಮಣ್ಣು, ಹವಾಮಾನ ಕ್ಷೇತ್ರಗಳಲ್ಲಿ ಬೆಳೆಸಿದೆ. ರಸ್ತೆಯಂಚಿನಲ್ಲಿ ನೂರಾರು ಜಾತಿಯ ಸಾಲುಮರ ಬೆಳೆಸಿದೆ. ನೆಡುತೋಪು ಬೆಳೆದು ಕಟಾವಾದದ್ದು, ಮರ ಬೆಳೆದು ನೆರಳಾದದ್ದು ಕಾಣುತ್ತದೆ. ಇಲಾಖೆ ದಾಖಲೆ ದಪ್ತರ್‌ಗಳಲ್ಲಿ ಅರಣ್ಯ ಕೃಷಿಯ ವಿವರ ದಾಖಲಾಗುತ್ತದೆ. ಮರ ಬೆಳೆಸುವ ಕ್ಷೇತ್ರಾನುಭವವನ್ನು ರೈತರು, ಸಾರ್ವಜನಿಕರ ಜತೆ ಹಂಚಿಕೊಳ್ಳುವ ಒಂದು ವ್ಯವಸ್ಥೆ ಇಂದು ರಾಜ್ಯದಲ್ಲಿ ಸಮರ್ಪಕವಾಗಿಲ್ಲ. ಜನಸಾಮಾನ್ಯರ ಜತೆ ಬೆರೆಯುವ ಯಾವುದೋ ಅಧಿಕಾರಿಗಳ ಬಾಯ್ಮಾತು ಬಿಟ್ಟರೆ ಬರಹ, ಚಿತ್ರ, ವಿಡಿಯೋ ದಾಖಲೆಗಳಲ್ಲಿ ಏನಿದೆ? ಅರಣ್ಯ ಭವನದ ೧೮ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳನ್ನು ಪಟ್ಟನೆ ಕೇಳಿದರೆ ರಾಶಿ ರಾಶಿ ಟೆಕ್ನಿಕಲ್ ವರದಿಗಳು ಸಿಕ್ಕಾವೆಯೇ ಹೊರತೂ ಜನಸಾಮಾನ್ಯರಿಗೆ ಪಾಠ ಹೇಳಲು ಮಾಹಿತಿಗಳಿಲ್ಲ!

ಶ್ರೀಗಂಧ ಬೆಳೆದರೆ ಕೋಟಿಗಳಿಸಬಹುದು, ತೇಗ ಬೆಳೆದು ಲಕ್ಷಾಧೀಶರಾಗಬಹುದು, ಮ್ಯಾಂಜಿಯಮ್ ಪವಾಡದ ಬಗೆಗೆ ಖಾಸಗಿ ಕಂಪನಿಗಳು ಅಬ್ಬರದ ಪ್ರಚಾರ ನಡೆಸಿದ್ದಾಗ ಅರಣ್ಯ ಇಲಾಖೆ ನೆಲದ ಸತ್ಯ ಗೊತ್ತಿದ್ದೂ ಮೌನ ತಾಳಿತ್ತು. ಇವತ್ತು ಅರಣ್ಯ ಬೆಳೆಸುವಲ್ಲಿ ಜನ ಸಹಬಾಗಿತ್ವಕ್ಕೆ ಮಹತ್ವವಿದೆ. ಪಾಲಿಸಿದರೆ ಪಾಲು ನೀಡಲು ಒಪ್ಪಂದ ಪತ್ರಕ್ಕೆ ಸಹಿ ಹಾಕಿಸುವ ಅಧಿಕಾರಿಗಳಿಗೆ ಗಿಡ ಬೆಳೆಸುವ ಜ್ಞಾನ ಹಂಚಿಕೆ ಕೂಡಾ ಒಂದು ಅಗತ್ಯ ಎನಿಸಿಲ್ಲ! ೧೯೯೭ರಲ್ಲಿ ಬಯಲು ಸೀಮೆಗೆ ಬಂದ ಜಪಾನ್ ನೆರವಿನ ಯೋಜನೆಯಲ್ಲಿ ಮೂರು ಕೋಟಿ ಸಸಿಗಳನ್ನು ರೈತರ ಭೂಮಿಯಲ್ಲಿ ಬೆಳೆಸಲಾಯಿತು. ಅದಕ್ಕೂ ಪೂರ್ವದಲ್ಲಿ ಸಸ್ಯ ನಿರ್ವಹಣೆ ಬಗೆಗೆ ನೀಡಿದ ಶಿಕ್ಷಣ ಏನು? ಗಾರ್ಡ್, ವಾಚ್‌ಮನ್‌ಗಳ ಮಾತು ಬಿಟ್ಟರೆ ಬೇರೆ ಮಾಹಿತಿ ಇಲ್ಲ. ೧೯೯೧ರಿಂದ ಲಕ್ಷಾಂತರ ಹೆಕ್ಟೇರ್ ಅಕೇಸಿಯಾ, ಕ್ಯಾಸುರೀನಾ ನೆಡುತೋಪು ಬೆಳೆಸಿ ಪಾಲು ನೀಡಲು ಗ್ರಾಮ ಅರಣ್ಯ ಸಮಿತಿ ರಚಿಸಲಾಗಿದೆ. ಈ ಗಿಡಗಳ ಕೃಷಿ ಬಗೆಗೆ ಕಳೆದ ಎರಡು ದಶಕಗಳಿಂದಲೂ ಯಕಶ್ಚಿತ ಒಂದು ಪುಟ ಮಾಹಿತಿ ಕೂಡಾ  ಸಿದ್ದವಾಗಿಲ್ಲ. ಮರ ಕಡಿದಾಗ ಪಾಲು ನೀಡುವದಷ್ಟೇ ಇಲಾಖೆ ಕೆಲಸ ಎಂದು ಅಧಿಕಾರಿಗಳು ಭಾವಿಸಿಕೊಂಡಿದ್ದಕ್ಕೆ ಪುರಾವೆ ಇದು.

ಒಂದು ಎಕರೆ ಅಕೇಸಿಯಾ, ನೀಲಗಿರಿ, ಸಾಗವಾನಿ, ಕ್ಯಾಸುರೀನಾ, ಸಿಲ್ವರ್ ಓಕ್ ಬೆಳೆದರೆ ಎಷ್ಟು ವರ್ಷಕ್ಕೆ ಎಷ್ಟು ಉತ್ಪಾದನೆ ಸಾಧ್ಯವೆಂಬ ಒಂದು ಮಾಹಿತಿ ಅಗತ್ಯವಿದೆ. ಅರಣ್ಯ ಭೂಮಿಯಲ್ಲಿ ಅಷ್ಟೊಂದು ಅದ್ಬುತವಾಗಿ ಬೆಳೆವ ಗಿಡವನ್ನು ಕೃಷಿ ನೆಲದಲ್ಲಿ ನಾಟಿ ಮಾಡಲು ಇದು ಜನರನ್ನು ಉತ್ತೇಜಿಸುತ್ತದೆ. ಯಾವ ಜಾತಿ, ಯಾವ ಕ್ಲೋನು ನಾಟಿ ಮಾಡಬೇಕು? ಗೊಬ್ಬರ, ಕೃಷಿ ನಿರ್ವಹಣಾ ಪಾಠ ರೈತರಿಗೆ ಸಮರ್ಪಕವಾಗಿ ದೊರೆತರೆ ಶೇಕಡಾ ೧೦ರಷ್ಟು ರೈತರು ಪಾಳು ಭೂಮಿ, ತೋಟ, ಹೊಲಗಳ ಅಂಚಿನಲ್ಲಿ ಗಿಡ ಬೆಳೆಸಲು ಮುಂದಾಗುತ್ತಾರೆ. ಅರಣ್ಯ ಇಲಾಖೆ ಹೇರಳ ಹಣ ಖರ್ಚು ಮಾಡುವುದರಿಂದ ಅವರ ನೆಡುತೋಪು ಚೆನ್ನಾಗಿ ಆಗುತ್ತದೆಂಬ ಅಭಿಪ್ರಾಯ ಸಾರ್ವಜನಿಕವಾಗಿದೆ. ನೆಡುತೋಪು ನಿರ್ವಹಣೆಯ ಸರಿಯಾದ ಲೆಕ್ಕ ಲಭ್ಯವಾದರೆ ಮರ ಬೆಳೆಸುವದು ಹೇಗೆ ಲಾಭದಾಯಕ ಎಂದು ಹೇಳಲು ಸಾಧ್ಯವಾಗುತ್ತದೆ. ಕೃಷಿ ಬೆಳೆಗಳ ವಿಚಾರದಲ್ಲಾದರೆ ವಿಶ್ವವಿದ್ಯಾಲಯ, ಕೃಷಿ ವಿಜ್ಞಾನ ಕೇಂದ್ರಗಳು ಮಾಹಿತಿ ಹಂಚಿಕೆಯ ಮಾಧ್ಯಮವಾಗುತ್ತದೆ. ಆದರೆ ಕರ್ನಾಟಕದ ಸಂದರ್ಭದಲ್ಲಿ ಅರಣ್ಯ ಇಲಾಖೆ ಈ ಕೆಲಸ ಮಾಡಬೇಕು. ಸಾಮಾಜಿಕ ಅರಣ್ಯ ಯೋಜನೆ ಜೋರಾಗಿದ್ದಾಗ ೧೯೮೪ರಲ್ಲಿ ಕೆಲ ಮಾಹಿತಿ ಪತ್ರ ಮುದ್ರಿಸಲಾಗಿತ್ತು. ನಂತರ ಅದು ನಡೆಯಲಿಲ್ಲ. ಇಂದು ಗಿಡ ಬೆಳೆಸಲು ಇಲಾಖೆ ಹೇಳಬೇಕಾಗಿಲ್ಲ, ಸ್ವಯಂ ಆಸಕ್ತಿಯಿಂದ ಹಳ್ಳಿಗರೇ ಬೆಳೆಸಿದ ಉದಾಹರಣೆಗಳು ಸಿಗುತ್ತವೆ. ಆದರೆ ಖಚಿತ ಮಾಹಿತಿ ಇನ್ನಷ್ಟು ಜನರನ್ನು ಸೆಳೆಯಲು ನೆರವಾಗುತ್ತದೆ. ನೆಲಕ್ಕೆ ಮರ ಬೆಳೆಸುವ ತಾಕತ್ತು ಅದ್ಬುತವಾಗಿದೆ ಎಂದು ಅರಣ್ಯ ಜಿಲ್ಲೆಯ ಪರಿಸರವೇ ಹೇಳುತ್ತದೆ. ಆದರೆ ಮರ ಬೆಳೆದ ನಾಡಿನಲ್ಲಿ ಇನ್ನೂ ಹುಲ್ಲಿನಂತಹ ಭತ್ತ ಬೆಳೆಯಲು ವಿಶೇಷ ಮಾಹಿತಿ ಹಂಚುತ್ತಿದ್ದೇವೆ! ನೆಲದ ಹಸಿರು ಶಕ್ತಿ ಬಲಪಡಿಸಲು ಮಾಹಿತಿ ಹಂಚಿಕೆ ಪ್ರಯತ್ನ ಕೂಡಾ ಅತ್ಯಗತ್ಯ.

ಅಕೇಸಿಯಾ ಸ್ಪ್ರಿಂಗ್‌ವೆಲ್ ಸಸ್ಯ ಒಂದೇ ವರ್ಷದಲ್ಲಿ ೮ ಅಡಿ ಬೆಳೆದಿದ್ದನ್ನು ಉತ್ತರ ಕನ್ನಡದ ಸಿದ್ದಾಪುರ ಬಾಳೆಕೊಪ್ಪದಲ್ಲಿ ಗಮನಿಸಬಹುದು. ಹಾವೇರಿ ಸನಿಹದ ಕಲ್ಲುಗುಡ್ಡದಲ್ಲಿ ಬದ್ರಾಚಲಂ ನೀಲಗಿರಿ ಕ್ಲೋನ್ ಕಾಂಡ ಎರಡೇ ವರ್ಷಕ್ಕೆ ೧೦-೧೨ ಸೆಂಟಿಮೀಟರ್ ಸುತ್ತಳತೆಯಾಗಿತ್ತು. ಹಾಸನದ ಮಾರಶೆಟ್ಟಿಹಳ್ಳಿ ಗೇಟ್ ಸನಿಹದಲ್ಲಿ ಹೆಬ್ಬೇವು ನಾಲ್ಕು ವರ್ಷಕ್ಕೆ ತೆಂಗಿನ ಮರದ ಕಾಂಡ ಹೋಲುತ್ತಿತ್ತು. ಹೊಸನಗರದಲ್ಲಿ ಮೈಸೂರು ಪೇಪರ್ ಮಿಲ್ಸ್‌ನವರು ಬೆಳೆಸಿದ ಅಕೇಸಿಯಾ, ನೀಲಗಿರಿ ಬೆಳೆ ಹಿಂದಿನ ಮಣ್ಣಿನ ಮಾತು ಆಲಿಸಬೇಕು. ಚಿತ್ರದುರ್ಗದ ರಾಂಪುರದ ಸಂತೆಬಂಡೆ ಸನಿಹದಲ್ಲಿ ಸಾಲುಮರ ಜಲ ಸಂರಕ್ಷಣೆ ವಿಧಾನ ಮಾತ್ರದಿಂದ ಹನಿ ನೀರು ನೀಡದೇ ಸುಲಭದಲ್ಲಿ ಬೆಳೆಯಿತು. ಧಾರವಾಡದ  ಕರ್ನಾಟಕ ವಿಶ್ವವಿದ್ಯಾಲಯದ ಸನಿಹದ ಗುಡ್ಡದಲ್ಲಿ ಬೆಳೆದ ಅಕೇಸಿಯಾ ನೆಡುತೋಪಿನ ಸಾವಿರ ಸಸಿಗಳು ೨೦೦೪ರಲ್ಲಿ ಬರಗಾಲದ ಕಾರಣ ಒಣಗಿ ನಿಂತಿದ್ದವು. ಇಂತಹ ಅನುಭವಗಳು ದಾಖಲಾಗಿ ರೈತರಿಗೆ ಹಂಚಿಕೆಯಾಗ ಬೇಕು. ಇದು ಭವಿಷ್ಯದ ಅರಣ್ಯೀಕರಣಕ್ಕೆ ನೆರವಾಗುತ್ತದೆ. ಅರಣ್ಯ ಸಂಶೋಧನಾ ವಿಭಾಗ ಈ ಕೆಲಸಗಳನ್ನು ನಿಧಾನಕ್ಕೆ ಮಾಡುತ್ತಿದೆಯಾದರೂ ಅಲ್ಲಿ ಅನುಸರಣೆ, ಅಗತ್ಯ ಪ್ರೋತ್ಸಾಹದ ಕೊರತೆ ಕಾಣುತ್ತದೆ. ಗಿಡ ನೆಡುವ ಕಾಮಗಾರಿಗೆ ಇದ್ದಷ್ಟು ಮಹತ್ವ ಸಂಶೋಧನಾ ವಿಭಾಗಕ್ಕೆ  ಇಲ್ಲ!

ಇಡೀ ಕರ್ನಾಟಕದಲ್ಲಿ ಅರಣ್ಯ ಇಲಾಖೆ ದೊಡ್ಡ ಜಮೀನ್ದಾರ! ಸರಕಾರೀ ಹಣ ಖರ್ಚು ಮಾಡಿ ಗಿಡ ಬೆಳೆಸಿ ಕೋಟಿ ಆದಾಯ ತೋರಿಸಿದ್ದೇ ಅರಣ್ಯ ಇಲಾಖೆಯ ಸಾಧನೆಯಾಗುವದಿಲ್ಲ. ಮರ ಕಡಿದು ಲಾರಿ ಏರುವ ಮುಂಚೆ ಬೆಳೆಸಿದ ಅನುಭವ ಪಾಠ ಹೊರಬರಬೇಕು. ನಾಟಿಯಿಂದ ಕಟಾವುವರೆಗಿನ ಕತೆ ಈಚೆ ಬರಬೇಕು. ಕೃಷಿ ಸಾಧಕರ ಮನೆಗೆ ಹೋದರೆ ಸಿಗುವ ಮಾಹಿತಿಯ ಹಾಗೇ ಇಲಾಖೆಯ ವಲಯ ಕಚೇರಿಗಳಲ್ಲಿ, ಗ್ರಾಮ ಅರಣ್ಯ ಸಮಿತಿ, ನೆಡುತೋಪುಗಳ ಫಲಕಗಳಲ್ಲಿ ಮಾಹಿತಿ ಪ್ರದರ್ಶನವಾಗಬೇಕು. ಇದರಲ್ಲಿ  ನೆಲದ ಹಸಿರು ಲಾಭವಿದೆ.