ಕೃಷಿ ವಿಶ್ವವಿದ್ಯಾಲಯ, ಸಂಶೋಧನಾ ಕೇಂದ್ರಗಳಲ್ಲಿ ಸಸ್ಯ ತಳಿ ಸಂಗ್ರಹ ಮಾಡುತ್ತಾರೆ. ಸರಕಾರಿ ಹಣದಲ್ಲಿ ಬೆಳೆಸಿದ ಆ ತೋಟದಲ್ಲಿ ಯೋಜನೆ ಬಂದಾಗಷ್ಟೇ ಕೃಷಿ ಆಸಕ್ತಿ ಕಾಣುತ್ತದೆ. ಭೇಟಿ ನೀಡಿದ ಕೃಷಿಕರಿಗೆ ಸರಿಯಾದ ಮಾಹಿತಿ ನೀಡುವ ವ್ಯವಸ್ಥೆ ಕೂಡಾ ಹಲವೆಡೆ ಇರುವದಿಲ್ಲ. ಆದರೆ ಕೃಷಿ ಸಾಧಕರ ಮನೆಗೆ ಹೋದರೆ ಅಪರೂಪದ ಪಾಠದ ಜತೆಗೆ ಆತಿಥ್ಯವೂ ಇರುತ್ತದೆ. ಒಂದು ಒಳ್ಳೆಯ ಹವ್ಯಾಸಕ್ಕೆ ನಾಡಿನ ತುಂಬ ಗೆಳೆಯರನ್ನು ಸಂಪಾದಿಸುವ ಶಕ್ತಿಯಿರುತ್ತದೆ. ಯಾವುದೋ ಹಳ್ಳಿ ಮೂಲೆಯಲ್ಲಿ ಬದುಕಿದ್ದು ನಾಡು ಹೆಮ್ಮೆ ಪಡುವ ವರ್ಚಸ್ಸು ದೊರೆಯುತ್ತದೆ. ಇದಕ್ಕಿಂತ ಮುಖ್ಯವಾಗಿ ಕಣ್ಮರೆಯಾಗುತ್ತಿರುವ ಎಷ್ಟೋ ತಳಿಗಳಿಗೆ ಇವರು ಮರುಜನ್ಮ ನೀಡುತ್ತಾರೆ.


ಕೃಷಿ ಕೆಲಸದ ಬಳಿಕ ಕಟ್ಟೆಯಲ್ಲಿ ಕೂತು ಹರಟೆಕಟ್ಟೆಯಲ್ಲೇ ಕಾಲ ಹಾಕುವ ಕೃಷಿಕ ಸಂಖ್ಯೆ ದೊಡ್ಡದಿದೆ. ಸ್ವತಃ ಕೃಷಿಕರಾದರೂ ಇವರಿಗೆ ಅದರಲ್ಲಿ ಆಸಕ್ತಿಯಿಲ್ಲ! ಪಿತ್ರಾರ್ಜಿತ ಭೂಮಿ ಹಾಳುಮಾಡಬಾರದೆಂಬ ಸಂಪ್ರದಾಯಕ್ಕೆ ಕೃಷಿ ಕೆಲಸ ಮಾಡುವ ನೆಪ ಮಾಡುತ್ತಾರೆ. ೧೦ ವರ್ಷದ ಹಿಂದಿನ ಕೃಷಿ ವಿಧಾನಕ್ಕೂ ಈಗಿನದಕ್ಕೂ ವ್ಯತ್ಯಾಸವಿಲ್ಲ, ಸುಧಾರಣೆ, ಬದಲಾವಣೆ ಯಾವುದೂ ಇಲ್ಲ. ದಿನದ ಹೆಚ್ಚಿನ ಸಮಯ ಕ್ರಿಕೆಟ್, ರಾಜಕೀಯ ಚರ್ಚೆಗಳಲ್ಲಿ ಸಕ್ರಿಯ ಕಾಲಹರಣ. ಕೃಷಿಯಲ್ಲಿ ಅಧ್ಯಯನ ಮಾಡುವದು, ಮಾಹಿತಿ ಸಂಗ್ರಹಿಸುವುದು, ಸಾಧನೆ ಮಾಡುವದಕ್ಕೆ ಅವಕಾಶವಿದೆ ಎಂಬ ಅರಿವು ಹಲವರಿಗಿಲ್ಲ. ಮಾಡುವ ಕೆಲಸದ ಬಗೆಗೆ ಕೊಂಚ ಲಕ್ಷ್ಯ ಹರಿಸಿದರೆ ಅದ್ಬುತ ಕೆಲಸ ಮಾಡುವ ಅವಕಾಶವಿದೆ. ಕೃಷಿಯಲ್ಲಿಯೂ ಎಂತಹ ಕೌತುಕದ ಹವ್ಯಾಸಗಳಿವೆ? ರಾಜ್ಯದ ವಿವಿಧ ಪ್ರದೇಶಗಳ ಆಯ್ದ ಕೃಷಿಕರ ಪಟ್ಟಿಯನ್ನು ಗಮನಿಸಿದರೆ ಅವಕಾಶ  ಸುಲಭಕ್ಕೆ ಅರ್ಥವಾಗಬಹುದು.

ಕರಿಂಗಾಣದ ಕೆ.ಎಸ್. ಕಾಮತ್ ಎಂಬವರು ಈಗ ಹತ್ತು ವರ್ಷದ ಹಿಂದೆ ನನಗೊಂದು ಪತ್ರ ಬರೆದಿದ್ದರು. ಯಾವುದೋ ನನ್ನ ಹಳೆಯ ಲೇಖನದಲ್ಲಿ ಕೆಸವಿನ ಗಡ್ಡೆಯ ಜಾತಿಯೊಂದನ್ನು ಉಲ್ಲೇಖಿಸಿದ್ದೆ. ಲೇಖನವನ್ನು ಎರಡು ವರ್ಷದ ಬಳಿಕ ಓದಿದ ಕಾಮತರು ಕೆಸವಿನ ಗಡ್ಡೆ ಮಾಹಿತಿ ಕೇಳಿ ಪ್ರಶ್ನಿಸಿದ್ದರು. ಕೆಸವಿನ ಗಡ್ಡೆ ಜಾತಿ ಸಂಗ್ರಹಿಸುವ ತಮ್ಮ ಹವ್ಯಾಸ ವಿವರಿಸಿದ್ದರು. ರಾಜ್ಯದ ಯಾವುದೇ ಮೂಲೆಯ ರೈತರು ಕೆಸುವಿನ ಗಡ್ಡೆ ಹೆಸರು ಹೇಳಿದರೆ ಅದನ್ನು ಹುಡುಕಿ ಸಂಗ್ರಹಿಸುವವರೆಗೂ ಇವರಿಗೆ ಸಮಾಧಾನವಿಲ್ಲ. ಶಿರಸಿಯ ಸುಬ್ರಾಯ ಹೆಗಡೆ ದಿವರಗದ್ದೆ ನಾಟಿ ತಳಿಯ ಅಪ್ಪೆ ಮಾವು, ಹಲಸಿನ ಗಿಡಕ್ಕಾಗಿ ವಿವಿಧ ಭಾಗಗಳಲ್ಲಿ ಅಲೆದಿದ್ದಾರೆ. ಸ್ವತಃ ಕಸಿ ಕಟ್ಟುವ ಇವರು ಸಸಿ ಬೆಳೆಸಿ ರೈತರಿಗೆ ಒದಗಿಸುತ್ತಾರೆ. ಸೊರಬದ ಬಿಳೆಕಲ್ ಗೌಡರು ೩೦ ವರ್ಷದ ಹಿಂದೆ ಮಿಡಿ ಮಾವಿನ ತೋಟ ಬೆಳೆಸಿದ್ದಾರೆ. ರಿಪ್ಪನ್ ಪೇಟೆಯ ಅನಂತಮೂರ್ತಿ ಜವಳಿ, ಸೊರಬ ಹೊಸಗದ್ದೆಯ ಸೂರ್ಯನಾರಾಯಣ ಅಪ್ಪೆಮಾವಿನ ತಳಿ ಸಂಗ್ರಹಿಸಿ ತೋಟ ಅಭಿವೃದ್ಧಿ ಪಡಿಸಿದ್ದಾರೆ. ಕರ್ನಾಟಕದ ಪರಿಸರ ಇಲಾಖೆಯ ಪ್ರಧಾನ ಕಾರ್ಯದರ್ಶಿಯಾಗಿದ್ದವರು, ಮೂಲತಃ ಕೃಷಿಕರೂ ಆದ ಬೆಂಗಳೂರಿನ ಎ.ಸಿ.ಲಕ್ಷ್ಮಣ ಬಿದಿರು, ಬೆತ್ತದ ಜಾತಿ ಸಂಗ್ರಹಿಸಿದ್ದಾರೆ. ದೇಶ ವಿದೇಶಗಳ ತಳಿ ಸಂಗ್ರಹ ನಮ್ಮನ್ನು ಬೆರಗಾಗಿಸುತ್ತದೆ. ಈಗ ಆರು ದಶಕಗಳ ಹಿಂದೆಯೇ ಕೋ. ಲ. ಕಾರಂತರು ಕುಂದಾಪುರದ ಕಾಳಾವರದಲ್ಲಿ ವಿವಿಧ ಜಾತಿಯ ಮಾವು, ಚಿಕ್ಕು ಬೆಳೆಸಿದ್ದಾರೆ. ಸಾರಿಗೆ ಸಂಪರ್ಕ ವ್ಯವಸ್ಥೆ ಸರಿಯಿಲ್ಲದ ಆ ಕಾಲದಲ್ಲಿ ನಾಡಿನಾದ್ಯಂತ ಅಲೆದು ಗಿಡ ಸಂಗ್ರಹಿಸಿದ ಸಾಹಸ ಅವರದು. ಸೇಡಿಯಾಪು ಜನಾರ್ಧನ ಭಟ್ಟರು ಬಾಳೆ ಜಾತಿಯ ವೈವಿಧ್ಯವನ್ನು ಒಮ್ಮೆ ಸಂಗ್ರಹಿಸಿದ್ದರು. ಕಾಸರಗೋಡಿನ ವೆಂಕಟ್ರಾಮ ದೈತೋಟರು ಔಷಧ ಸಸ್ಯ ವೈವಿಧ್ಯ ಸಂಗ್ರಹಿಸಿದ್ದಾರೆ. ಅವರ ಅಡಿಕೆ ತೋಟದಲ್ಲಿಯೇ ಸಾವಿರಾರು ಜಾತಿಯ ಸಸ್ಯಗಳು ತುಂಬಿವೆ. ಕರ್ನಾಟಕದಲ್ಲಿ ೧೭ ವರ್ಷದ ಹಿಂದೆ ನೆಲ್ಲಿ ಕೃಷಿ ಆರಂಭಿಸಿ ದಾಖಲೆ ಬರೆದ ಅಖಿಲ್ ಅಮೃತ್ ಸರದೇಶಪಾಂಡೆ ಬಯಲು ಭೂಮಿಗೆ ಸೂಕ್ತವಾದ ನೆಲ್ಲಿ ತಳಿ ಬೆಳೆಸಿದ್ದಾರೆ, ಕೃಷಿ ವಿಶೇಷ ಮಾಹಿತಿಗಳನ್ನು ಸಂಗ್ರಹಿಸಿದ್ದಾರೆ. ಕರಾವಳಿಯ ಅಂಕೋಲ ಕಾರೆಬೇಣದ  ಪೂರ್ಣಾನಂದ ಭಟ್ ಜಾಯಿಕಾಯಿ ತಳಿ ಶೋಧಕ್ಕೆ ರಾಜ್ಯದ ಹಲವು ಭಾಗ ಓಡಾಡಿದ್ದಾರೆ. ಶ್ರೀಲಂಕಾದ ವಿಶೇಷ ತಳಿ ಸಂಗ್ರಹಿಸಿ ಅಡಿಕೆಯ ನಡುವೆ ತೋಟ ಬೆಳೆಸಿದ್ದಾರೆ. ಹಲಸಿನ ತಳಿ, ಕಾಳು ಮೆಣಸಿನ ಬಳ್ಳಿ, ಭತ್ತ, ಮುಚ್ಚಿಗೆ ಬೆಳೆಗಳನ್ನು ಸಂಗ್ರಹಿಸಿದ ಕೃಷಿಕರ ದಾಖಲೆಗಳನ್ನು ಗಮನಿಸಿದರೆ ಕೃಷಿಯಲ್ಲಿ ಕ್ರಿಯಾಶೀಲ ಮನಸ್ಸು ಹೇಗೆ ಕೆಲಸ ಮಾಡುತ್ತದೆ ಎಂಬುದು ಅರ್ಥವಾಗುತ್ತದೆ.

ಸರಕಾರಿ ಯೋಜನೆ, ವಿದೇಶಿ ನೆರವು, ಮತ್ಯಾವುದೋ ಪ್ರಶಸ್ತಿ ಪುರಸ್ಕಾರ  ಆಸೆಯಿಂದ ಹವ್ಯಾಸಕ್ಕೆ ನಿಂತವರು ಇವರಲ್ಲ. ಕೃಷಿ ಕೆಲಸದ ನಡುವೆ  ಏನೋ ಒಂದು ಸಾಧನೆ- ಸಮಾದಾನಕ್ಕೆ ತಳಿ ಸಂಗ್ರಹ. ಕೋಟ್ಯಾಂತರ ರೂಪಾಯಿ ಲಾಟರಿ ಹೊಡೆದರೂ ಸಿಗದ ಖುಷಿ ಅದು. ಸಂಗ್ರಹಿಸಿದ ತಳಿ, ಬೆಳೆಸಿದ ಜಾತಿಗಳನ್ನು ಈ ಸಾಧಕರು ತೋರಿಸುವಾಗ ಅವರ ಅನುಭವದ ಅಗಾಧತೆ ಅರಿವಿಗೆ ಬರುತ್ತದೆ. ಒಂದೊಂದು ಗಿಡದ ಹಿಂದೆಯೂ ದೊಡ್ಡ ಕತೆಯಿರುತ್ತದೆ. ಕಷ್ಟಪಟ್ಟು ಬೆಳೆಸಿದ ಸಸಿ ಫಲ ನೀಡಿದಾಗ ಆಗುವ ಸಂತಸಕ್ಕೆ ಪಾರವೇ ಇರದು. ಇಂತಹ ಅನುಭವವೇ ಇವರ ಹವ್ಯಾಸಕ್ಕೆ ನಿಜ ಚೇತನ.

ಕೃಷಿ ತಳಿ ವೈವಿಧ್ಯ ಸಂಗ್ರಹಿಸುವ ಹವ್ಯಾಸವಿರುವ ಯಾವುದೇ ಒಬ್ಬ ಕೃಷಿಕರನ್ನು ಹತ್ತಿರದಿಂದ ಗಮನಿಸಬೇಕು. ಅವರಲ್ಲಿನ ಜೀವಂತಿಕೆ, ಮಾಹಿತಿ ಸಂಗ್ರಹಿಸುವ ಉತ್ಸಾಹ, ಆಸಕ್ತರಿಗೆ ಪಾಠ ಮಾಡುವ ವೈಖರಿ ವಿಶೇಷವಾಗಿರುತ್ತದೆ. ಸೂಕ್ಷ್ಮವಾಗಿ ಗಮನಿಸಿದರೆ ಅವರ ಸುತ್ತ ಕೃಷಿ ಪ್ರಭಾವಲಯವಿರುತ್ತದೆ. ಇಂತಹ ಸಂಗ್ರಹ ಹವ್ಯಾಸವಿರುವ ವ್ಯಕ್ತಿಗಳು ರಾಜ್ಯದಾದ್ಯಂತ ಸಂಪರ್ಕ ಜಾಲ ಬೆಳೆಸಿಕೊಳ್ಳುತ್ತಾರೆ. ಒಮ್ಮೆ ಭೇಟಿಯಾದವರು ಮತ್ತೆ ಮತ್ತೆ ಇವರ ಸಂಪರ್ಕದಲ್ಲಿರುತ್ತಾರೆ. ಕಾಳು ಮೆಣಸಿನ ತಳಿ ಸಂಗ್ರಹಿಸುವ ವ್ಯಕ್ತಿಯ ಜತೆ ನಾವು ಒಡನಾಟ ಬೆಳೆಸಿದಾಗ ಯಾವುದಾದರೂ ಹೊಸ ಜಾತಿ ಮಾಹಿತಿ ದೊರಕಿದಾಗ ಸ್ವತಃ ನಾವು ಸಂಗ್ರಹಿಸುವ ವ್ಯಕ್ತಿಗೆ ಮಾಹಿತಿ ನೀಡುತ್ತೇವೆ. ಹೀಗೆ ಸಂಪರ್ಕ ಬೆಳೆಯುತ್ತ ನಾಡಿನ ಪ್ರೀತಿ ಹೆಚ್ಚುತ್ತದೆ. ಸಸ್ಯ ಸಂಗ್ರಹದ ಹವ್ಯಾಸ ಆರಂಭಿಸಿದರೆ ಆರೆಂಟು ವರ್ಷಗಳಲ್ಲಿ ಕೃಷಿಲೋಕ ಗಮನಿಸಬಹುದಾದ ಕೆಲಸ ಮಾಡಬಹುದು. ಸಸಿ ಸಂಗ್ರಹದ ಹವ್ಯಾಸಕ್ಕೆ ಹಣಕ್ಕಿಂತ ಮುಖ್ಯವಾಗಿ ಬೇಕಾದುದು ಆಸಕ್ತಿ, ನಿರಂತರವಾಗಿ ಮಾಹಿತಿ ಸಂಗ್ರಹದ ಹಸಿವು. ಕೃಷಿಕರ ಜತೆ ಸುಮಧುರ ಗೆಳೆತನ ಬೆಳೆಸುವ ಗುಣವಿದ್ದರೆ ಸಾಧನೆ ಸುಲಭವಾಗುತ್ತದೆ.

ಕೃಷಿ ವಿಶ್ವವಿದ್ಯಾಲಯಗಳಲ್ಲಿ, ಸಂಶೋಧನಾ ಕೇಂದ್ರಗಳಲ್ಲಿ ಸಸ್ಯ ತಳಿ ಸಂಗ್ರಹ ಮಾಡಿರುತ್ತಾರೆ. ಸರಕಾರಿ ಹಣದಲ್ಲಿ ಬೆಳೆಸಿದ ಆ ತೋಟದಲ್ಲಿ ಯೋಜನೆ ಬಂದಾಗಷ್ಟೇ ಕೃಷಿ ಆಸಕ್ತಿ ಕಾಣುತ್ತದೆ! ಭೇಟಿ ನೀಡಿದ ಕೃಷಿಕರಿಗೆ ಸರಿಯಾದ ಮಾಹಿತಿ ನೀಡುವ ವ್ಯವಸ್ಥೆ ಕೂಡಾ ಹಲವೆಡೆ ಇರುವದಿಲ್ಲ. ಆದರೆ ಕೃಷಿ ಸಾಧಕರ ಮನೆಗೆ ಹೋದರೆ ಅಪರೂಪದ ಪಾಠದ ಜತೆಗೆ ಆತಿಥ್ಯವೂ ಇರುತ್ತದೆ. ಒಂದು ಒಳ್ಳೆಯ ಹವ್ಯಾಸಕ್ಕೆ ನಾಡಿನ ತುಂಬ ಗೆಳೆಯರನ್ನು ಸಂಪಾದಿಸುವ ಶಕ್ತಿಯಿದೆ. ಯಾವುದೋ ಹಳ್ಳಿ ಮೂಲೆಯಲ್ಲಿ ಬದುಕಿದ್ದು ನಾಡು ಹೆಮ್ಮೆ ಪಡುವ ವರ್ಚಸ್ಸು ದೊರೆಯುತ್ತದೆ. ಇದಕ್ಕಿಂತ ಮುಖ್ಯವಾಗಿ ಕಣ್ಮರೆಯಾಗುತ್ತಿರುವ ಎಷ್ಟೋ ತಳಿಗಳಿಗೆ ಇವರು ಮರುಜನ್ಮ ನೀಡುತ್ತಾರೆ. ಒಂದು ಪುಟ್ಟ ಹವ್ಯಾಸ ನಮ್ಮ ನಾಡಿಗೆ ಬೇಕಾದ ಅಮೂಲ್ಯ ಸಸ್ಯವನ್ನು ಉಳಿಸುವ ಕಾರ್ಯಮಾಡಿರುತ್ತದೆ.

ಕ್ರಿ.ಶ.೧೯೬೦ರಲ್ಲಿ ಉತ್ತರ ಕನ್ನಡದ ಶೇಡಿದಂಟ್ಕಲ್‌ನ ಗಣೇಶ್ ಹೆಗಡೆ ಅಘನಾಶಿನಿ ನದಿ ದಡದ ಅನಂತ ಭಟ್ಟನಅಪ್ಪೆ ಎಂಬ ಉಪ್ಪಿನ ಕಾಯಿಗೆ ಶ್ರೇಷ್ಠ ಅಪ್ಪೆಮರದ ಕಸಿ ಗಿಡ ತಯಾರಿಸಿ ಅದರ ತೋಟ ಮಾಡಿದರು. ಈ ಜನಪ್ರಿಯ ತಳಿಯನ್ನು ೧೯೮೪ರಲ್ಲಿ ಕರ್ನಾಟಕ ಅರಣ್ಯ ಇಲಾಖೆ ಕಸಿ ಮಾಡಲು ಆರಂಭಿಸಿತು. ಮುಂದಿನ ಹತ್ತು ವರ್ಷಗಳಲ್ಲಿ ಲಕ್ಷಾಂತರ ಸಸಿಗಳನ್ನು ಬೆಳೆಸಲಾಯಿತು. ಈ ಅಪರೂಪದ ತಳಿಯನ್ನು  ಉಳಿಸಿದವರು ಗಣೇಶ ಹೆಗಡೆ ಎಂಬ ಸಾಮಾನ್ಯ ಕೃಷಿಕರು ಎಂಬುದನ್ನು ಗಮನಿಸಬೇಕು. ಒಬ್ಬ ಕೃಷಿಕ ಇಂತಹ ಒಂದೊಂದು ತಳಿ ಸಂರಕ್ಷಣೆ ಮಾಡಿದರೂ ಹವ್ಯಾಸ ಸಾರ್ಥಕ! ಕೃಷಿಯಲ್ಲಿ ಹಣ ಸಂಪಾದನೆ ಮಹತ್ವವಾದರೂ  ಸಸ್ಯ ವೈವಿಧ್ಯ ಸಂಪಾದನೆಗೆ  ಮಹತ್ವವಿದೆ, ಅದು ಕೃಷಿ ಆರಾಧನೆಯ ಮೂಲಸೆಲೆಯಾಗುತ್ತದೆ.