ಇಂದು ಗೋಬರ್ ಅನಿಲ ಸ್ಥಾವರ ಸ್ಥಾಪನೆ ಬಳಿಕ ಹೊಗೆ ರಹಿತ ವಾತಾವರಣದಿಂದ ಗ್ರಾಮೀಣ ಮಹಿಳೆಯರ ಶ್ವಾಸಕೋಶಗಳು ಕೊಂಚ ಸುಧಾರಿಸಿಕೊಂಡಿವೆ, ಕಟ್ಟಿಗೆ ಹೊರೆ ಭಾರಕ್ಕೆ ಕ್ಷಯ ಬಡಿದ ಅರಣ್ಯಗಳಿಗೆ ಒತ್ತಡ ಕಡಿಮೆಯಾಗಿ ಪರಿಸರ ಸಂರಕ್ಷಣೆಯ ರಚನಾತ್ಮಕ ಮಾರ್ಗ ಹಳ್ಳಿಗಳಲ್ಲಿ ತೆರೆದುಕೊಂಡಿದೆ.


ಅಡುಗೆ ಮನೆಯಲ್ಲಿ ಮಹಿಳೆಯರು ಅನ್ನ ಬೇಯಿಸುತ್ತಾರೋ? ಹೊಗೆ ಮನೆಯಲ್ಲಿ ಕೂತು ಇನ್ನಿಲ್ಲದ ರೋಗ ಎದುರು ನೋಡುತ್ತಾರೋ ಅನುಮಾನ. ಮಹಿಳೆಯರ ಪಾಲಿಗೆ ಅದೊಂದು ಹೊಗೆ ಕಾರ್ಖಾನೆ, ಅಲ್ಲಿ ಸದಾ ಕೊಳವೆ ಹಿಡಿದು ಒಲೆ ಎದುರು ಬೆಂಕಿ ಊದುತ್ತ ದಿನಂಪ್ರತಿ ಹೊಗೆ ಸೇವಿಸುತ್ತ ಅನಾರೋಗ್ಯದ ಜೀವನ. ಕತ್ತಲಲ್ಲಿ ಕಳೆದು ಹೋದ ಬದುಕು. ಇಂತಹ ಪರಿಸ್ಥಿತಿಯಲ್ಲಿ ಸಗಣಿಯಿಂದ ಮೀಥೇನ್ ಅನಿಲ ಉತ್ಪಾದಿಸುವ ಜೈವಿಕ ಅನಿಲ ಸ್ಥಾವರ ತಂತ್ರಜ್ಞಾನ ಹಳ್ಳಿ ಹಳ್ಳಿಗೆ ನಡೆದು ಬಂದು ದೊಡ್ಡ ಕ್ರಾಂತಿ ಮಾಡಿದೆ. ಇಂದು ಗೋಬರ್ ಅನಿಲ ಸ್ಥಾವರ ಸ್ಥಾಪನೆ ಬಳಿಕ ಹೊಗೆ ರಹಿತ ವಾತಾವರಣದಿಂದ ಗ್ರಾಮೀಣ ಮಹಿಳೆಯರ ಶ್ವಾಸಕೋಶಗಳು ಕೊಂಚ ಸುಧಾರಿಸಿಕೊಂಡಿವೆ, ಕಟ್ಟಿಗೆ ಹೊರೆ ಭಾರಕ್ಕೆ ಕ್ಷಯ ಬಡಿದ ಅರಣ್ಯಗಳಿಗೆ ಒತ್ತಡ ಕಡಿಮೆಯಾಗಿ ಪರಿಸರ ಸಂರಕ್ಷಣೆಯ ರಚನಾತ್ಮಕ ಮಾರ್ಗ ತೆರೆದುಕೊಂಡಿದೆ.

ಕ್ರಿ,ಶ, ೧೯೩೦ರ ಸುಮಾರಿಗೆ ಸಗಣಿಯಿಂದ ಮೀಥೇನ್ ಅನಿಲ ಉತ್ಪಾದಿಸುವ ಸಂಶೋಧನೆ ಬೆಳಕಿಗೆ ಬಂದಿದ್ದರೂ ಅದು ೧೯೭೦ರ ನಂತರದಲ್ಲಿ ಗ್ರಾಮಾಲಯಕ್ಕೆ ನಡೆದು ಬಂದಿದೆ. ಕ್ರಿ,ಶ, ೧೯೮೦ರ ಹೊತ್ತಿಗೆ ರಾಜ್ಯದಲ್ಲಿ ೮೦೨೪ ಅನಿಲ ಸ್ಥಾವರಗಳು ಹಳ್ಳಿಗಳಲ್ಲಿ ನಿರ್ಮಾಣಗೊಂಡ ಬಳಿಕ ಮಾದರಿ ನಿಧಾನಕ್ಕೆ ಜನಪ್ರಿಯವಾಯಿತು. ಇಂದು ಇಂಧನ ಸ್ವಾವಲಂಬನೆ ಮುಖೇನ ಗ್ರಾಮೀಣಾಭಿವೃದ್ಧಿ ಯಶಸ್ಸು ಲಕ್ಷ ಲಕ್ಷ ಕುಟುಂಬಗಳಲ್ಲಿ ಸಾಕಾರವಾಗಿದೆ. ಒಂದು ಎಕರೆ ಹೊಲವಿದ್ದು ಒಂದೆರಡು ಜಾನುವಾರು ಹೊಂದಿದ ಬಡ ರೈತನಿಗೂ ತಂತ್ರಜ್ಞಾನ ಕೈಗೆಟುಕಿದೆ. ಸಂಶೋದನಾಲಯದಿಂದ ಗ್ರಾಮಾಲಯಕ್ಕೆ ಬಂದು ಇದು ಜನಪ್ರಿಯವಾದ ಮಾರ್ಗದಲ್ಲಿ ಹಲವು ವ್ಯಕ್ತಿ, ಸಂಸ್ಥೆಗಳ ಶ್ರಮವಿದೆ.

ಕೃಷಿ ಜೊತೆ ಹೈನುಗಾರಿಕೆ ನಡೆದು ಬಂದ ಪರಂಪರೆಯಲ್ಲಿ ಜಾನುವಾರು ಸಗಣಿ ಕೃಷಿ ಗೊಬ್ಬರವಾಗಿ ಮಾತ್ರ ಬಳಕೆ. ಅಲ್ಪಸ್ವಲ್ಪ ಕೃಷಿ ಮೇವು ಬಿಟ್ಟರೆ ಮಲೆನಾಡು, ಅರೆ ಮಲೆನಾಡಿನ ಪ್ರದೇಶಗಳಲ್ಲಂತೂ ಹುಲ್ಲಿಗೆ ಕಾಡೇ ಗತಿ. ಜಾನುವಾರುಗಳು ದಿನವಿಡೀ ಕಾಡಿನಲ್ಲಿ ಅಲೆದಾಡಿ ಸಾಯಂಕಾಲ ದೊಡ್ಡಿಗೆ ಮರಳುತ್ತಿದ್ದವು, ಆದರೆ ಇವನ್ನು ಖಾಯಂ ದೊಡ್ಡಿಯಲ್ಲಿ ನಿಲ್ಲಿಸಲು ನೆರವಾದದ್ದು ಈ ಜೈವಿಕ ಅನಿಲ ಸ್ಥಾವರಗಳು!. ಅಡುಗೆಗೆ ಕಟ್ಟಿಗೆ ತರಲು ಕಾಡು ದೂರ, ಇಂಧನ ಭಾರ ಇಳಿಸಲು ಸುಲಭ ದಾರಿಯಾಗಿ ಅನಿಲ ಸ್ಥಾವರ ನಿರ್ಮಾಣ. ಈ ಸಂದರ್ಭದಲ್ಲಿ ಜಾನುವಾರುಗಳನ್ನು ಕಾಡಿಗೆ ಮೇವಿಗೆ ಬಿಟ್ಟರೆ ಸಗಣಿಯೆಲ್ಲ ಕಾಡು ಪಾಲಾಗುತ್ತದೆ. ದೊಡ್ಡಿಯಲ್ಲಿ ಸಲಹಿದರೆ ಮಾತ್ರ ಹೆಚ್ಚಿನ ಸಗಣಿ ದೊರೆತು ಅನಿಲ ಸ್ಥಾವರದ ಅಗತ್ಯ ಪೂರೈಸಬಹುದು. ಹೀಗಾಗಿ ಜಾನುವಾರುಗಳನ್ನು ಕಟ್ಟಿ ಸಾಕುವದು ಆರಂಭ. ಇದರಿಂದ ಕಾಡಿನಲ್ಲಿ ಮೇವಿನ ಒತ್ತಡ ಕೊಂಚ ಕಡಿಮೆಯಾಯಿತು. ಉತ್ಪಾದಿತ ಮೀಥೇನ್ ಅನಿಲ ಅಡುಗೆಗೆ ನೆರವಾಗಿ ಹೊಗೆ ಕವಿದ ಪರಿಸರ ಬದಲಾಗಿ ಅಡುಗೆ ಮನೆಗೆ ಆಧುನಿಕ ಮೆರಗು ಬಂತು. ಮಹಿಳೆಯರ ಮುಖದಲ್ಲಿ ಹೊಸ ಕಳೆ ಮೂಡಿತು. ಇದ್ದಲಿ ಡ್ರಮ್, ಕಬ್ಬಿಣದ ಡ್ರಮ್, ಭಾಗ್ಯ ಲಕ್ಷ್ಮಿ, ಪೈಬರ್  ಡ್ರಮ್‌ನ ಮಾದರಿ ಬಳಿಕ ಇತ್ತೀಚಿನ ವರ್ಷಗಳಲ್ಲಿ ಧೀನಬಂಧು ಎಂಬ ಅನಿಲ ಸ್ಥಾವರ ಮಾದರಿ ಹೆಚ್ಚು ಜನಪ್ರಿಯ. ಸುಮಾರು ೧೪-೧೮ ಸಾವಿರ ರೂಪಾಯಿ ವೆಚ್ಚದಲ್ಲಿ ಸ್ಥಾಪಿಸಬಹುದಾದ ಇವು ಬಡವರ ಉರುವಲು ಇಂಧನದ ಗಂಭೀರ ಸಮಸ್ಯೆಗೆ ಪರಿಹಾರ ನೀಡಿವೆ. ಒಮ್ಮೆ ನಿರ್ಮಿಸಿದರೆ ೨೦-೨೫ ವರ್ಷಗಳ ಕಾಲ ಬಾಳಿಕೆ. ಸುಲಭ ತಂತ್ರಜ್ಞಾನ.

ಇಲ್ಲಿ ಇದ್ದಕ್ಕಿದ್ದಂತೆಯೇ ಕ್ರಾಂತಿಯಾಗಲಿಲ್ಲ, ಆರಂಭದ ದಿನಗಳಲ್ಲಿ  ತಂತ್ರಜ್ಞಾನದ ಬಗೆಗೆ ಕೃಷಿಕರಲ್ಲಿ ಅನುಮಾನ, ಅಪಸ್ವರ, ಹಿಂದೇಟು, ಚರ್ಚೆ, ಸವಾಲು. ಸಗಣಿಯನ್ನು ತಿಪ್ಪೆಗುಂಡಿಗೆ ಹಾಕಿ ಗೊಬ್ಬರ ಮಾಡುವ ವಿಧಾನ ನೂರಾರು ವರ್ಷಗಳಿಂದ ಬಳಕೆಯಲ್ಲಿದ್ದರಿಂದ ಅನಿಲ ಸ್ಥಾವರಕ್ಕೆ ಈಗ ಸಗಣಿ ಬಳಕೆ ನಡೆದಾಗ ಸಹಜವಾಗಿ ಗೊಬ್ಬರ ಗುಣಮಟ್ಟ ವ್ಯತ್ಯಾಸ ಎಂಬ ಚರ್ಚೆ. ಸಗಣಿಯ ಸತ್ವಾಂಶಗಳೆಲ್ಲ ಅನಿಲ ಉತ್ಪಾದನೆಗೆ ವ್ಯಯವಾಗುವದರಿಂದ ಸಗಣಿರಾಡಿಯಿಂದ ತಯಾರಿಸುವ ಗೊಬ್ಬರದಲ್ಲಿ ಸಸ್ಯಕ್ಕೆ ಅಗತ್ಯ ಖನಿಜಾಂಶ ಪೂರೈಕೆಯಾಗುವದಿಲ್ಲ ಎಂಬ ಅಭಿಪ್ರಾಯ. ಕಾಂಪೋಸ್ಟ್ ಗೊಬ್ಬರಕ್ಕೆ ತುಂಬಿದ ಸಗಣಿಗಿಂತ ಮೂರು ಪಟ್ಟು ಜಾಸ್ತಿ ಸಾರಜನಕ ಪ್ರಮಾಣ ಅನಿಲ ಸ್ಥಾವರದಿಂದ ಹೊರ ಬೀಳುವ ರಾಡಿಯಲ್ಲಿರುತ್ತದೆ ಎಂಬುದನ್ನು ವಿಜ್ಞಾನಿಗಳು ಮನದಟ್ಟು ಮಾಡಿದರು. ಭಾರತೀಯ ವಿಜ್ಞಾನ ಮಂದಿರದ ಅಸ್ತ್ರ ವಿಭಾಗ, ಖಾದಿ ಗ್ರಾಮೋದ್ಯೋಗ ಮಂಡಳಿ, ಕೃಷಿ ವಿಶ್ವ ವಿದ್ಯಾಲಯಗಳು ವಿವಿಧ ಮಾದರಿ ಅನಿಲ ಸ್ಥಾವರ ವಿನ್ಯಾಸ ರೂಪಿಸಿದವು. ರೈತ ಸಭೆ, ಚರ್ಚೆ, ವಿಚಾರ ಗೋಷ್ಠಿ  ನಡೆದವು. ಸ್ಥಾವರ ನಿರ್ಮಾಣ ವೆಚ್ಚ ಭರಿಸಲು ರೈತರು ಹಿಂದೇಟು ಹಾಕಿದರು, ಆಗ ಸರಕಾರ ಸಹಾಯಧನ ನೀಡಲು ಆರಂಭಿಸಿತು. ಜಿಲ್ಲಾ ಪಂಚಾಯತ್, ಖಾದಿ ಗ್ರಾಮೋದ್ಯೋಗ ಮಂಡಳಿ, ಕೃಷಿ ಇಲಾಖೆ, ಅರಣ್ಯ ಇಲಾಖೆಗಳು ರಚನೆ ನಿರ್ಮಾಣಕ್ಕೆ  ಉತ್ತೇಜನ ನೀಡಿದವು. ನೋಡಿ ಕಲಿಯುವ ರೈತ ಆಸಕ್ತಿ ಸ್ಥಾವರ ಸ್ಥಾಪನೆಗೆ ವೇಗ ತಂದಿತು. ಪರಿಣಾಮ ಇಂದು ಹಳ್ಳಿ ಹಳ್ಳಿಗಳಲ್ಲಿ ಇದು ಜನಪ್ರಿಯವಾಗಿದೆ. ಹೋಬಳಿ ಮಟ್ಟದಲ್ಲಿ ನಿರ್ಮಾಣ ತಜ್ಞತೆ ಪಡೆದ ಕುಶಲ ಕೆಲಸಗಾರರ ಪಡೆ ಇದೆ. ವಿದ್ಯುತ್ ಸಂಪರ್ಕದ ಹಾಗೇ ಇದು ಮೂಲಭೂತ ಅಗತ್ಯವಾಗಿದೆ. ಅಡುಗೆ ಅನಿಲವಲ್ಲದೇ ವಾಹನ ಓಡಿಸಲೂ ಇದು ಉಪಯುಕ್ತವೆಂಬುದು ಈಗಷ್ಟೇ ಸಾಬೀತಾಗಿದೆ. ಇಂಧನ ಸ್ಥಾವರದಿಂದ ಈಚೆ ಹೊರ ಬೀಳುವ ಸಗಣಿ ರಾಡಿಯು ಕಾಂಪೋಸ್ಟ್ ಗೊಬ್ಬರ ತಯಾರಿಗೆ ಉಪಯುಕ್ತವೆಂಬುದು ರೈತರಿಗೆ ಮನದಟ್ಟಾಗಿದೆ. ಕೃಷಿ ತ್ಯಾಜ್ಯಗಳಾದ ಹುಲ್ಲು, ಅಡಿಕೆ ಸಿಪ್ಪೆ, ತೆಂಗಿನನಾರಿನ ಜತೆ ಸೇರಿಸಿ ಅತ್ಯುತ್ತಮ ಸಾವಯವ ಗೊಬ್ಬರ ತಯಾರಿಸುವ ವಿಧಾನ ಕರಗತವಾಗಿದೆ.

ಮನೆ ಸನಿಹದಲ್ಲಿ ಉರಿಯುವ ಮೀಥೇನ್ ಅನಿಲ ಸ್ಥಾವರ ನಿರ್ಮಿಸಿದರೆ ಅಪಾಯ ಎಂದು ಹೆದರಿದ ಹಳ್ಳಿಗರು ಈಗ ತಂತ್ರಜ್ಞಾನ ಸುರಕ್ಷಿತ ಎಂದು ಒಪ್ಪಿದ್ದಾರೆ. ಅಕ್ಕರೆಯ ಸುರಕ್ಷಿತ ಜಾಗ ನೀಡಿದ್ದಾರೆ. ಕಟ್ಟಿಗೆಗೆ ಅಲೆಯುವದು, ಅಡುಗೆ ಅನಿಲಕ್ಕಾಗಿ ಪೇಟೆಯಲ್ಲಿ ಕ್ಯೂ ನಿಲ್ಲುವದನ್ನು ತಪ್ಪಿಸಿಕೊಂಡಿದ್ದಾರೆ. ಒಂದು ತಂತ್ರಜ್ಞಾನ ಪ್ರಯೋಗಾಲಯದಿಂದ ಹಳ್ಳಿಮೂಲೆಗೆ ಹರಿದು ಬಂದ ದಾರಿಯ ಉದ್ದಕ್ಕೂ ಪರಿಸರ ಸ್ನೇಹಿ ಅಭಿವೃದ್ಧಿ ಅನುಭವವಿದೆ, ಆರೋಗ್ಯ ವಿಜ್ಞಾನ ಪಾಠಗಳ ಯಶೋಗಾಥೆಗಳಿವೆ.