ಇಷ್ಟು ದಿನಗಳ ಕಾಲ ಆಹಾರದಲ್ಲಿ ಸಸ್ಯಾಹಾರ ಅಥವಾ ಮಾಂಸಾಹಾರ ಎಂಬ ಎರಡು ಬಗೆಗಳಿದ್ದವು. ಆದರೆ ಇನ್ನು ಮುಂದೆ ಹಾಗಿರುವುದಿಲ್ಲ..!

ಏಕೆಂದರೆ, ಒಂದು ಜೀವಿಯ ಕೋಶದಲ್ಲಿನ ’ಜೀನ್’ಗಳನ್ನು ಹೊರತೆಗೆದು, ಇನ್ನೊಂದು ಜೀವಿಯ ಕೋಶದೊಳಗೆ ಬಲವಂತದಿಂದ ಸೇರಿಸಿ, ಹೊಸ ಬಗೆಯ ಆಹಾರ ಉತ್ಪಾದನೆಗೆ ಎಲ್ಲ ತಯಾರಿ ಪೂರ್ಣಗೊಂಡಿದೆ! ಜೈವಿಕವಾಗಿ ಮಾರ್ಪಡಿಸಲಾದ (ಕುಲಾಂತರಿ- ಜಿ.ಎಂ.ಫುಡ್) ಆಹಾರ ಇಷ್ಟರಲ್ಲೇ ಭಾರತದಲ್ಲಿ ಬಿಡುಗಡೆಯಾಗಲು ಸಿದ್ಧವಾಗಿದೆ.

ಬ್ಯಾಕ್ಟೀರಿಯಾ, ವೈರಸ್, ಜೇಡ, ಚೇಳು ಮತ್ತಿತರ ಜೀವಿಗಳಿಂದ ವಂಶವಾಹಿಗಳನ್ನು ಹೊರತೆಗೆದು ಬದನೆ, ಆಲೂಗಡ್ಡೆ, ಮೆಕ್ಕೆಜೋಳದಂಥ ಆಹಾರಧಾನ್ಯಗಳ ವಂಶವಾಹಿಯೊಳಗೆ ಬಲವಂತದಿಂದ ಸೇರಿಸಲಾಗುತ್ತದೆ. ಇದೇ ‘ಜಿ.ಎಂ. ಆಹಾ’. ನೋಡಲು ಇದು ನಾವು ದಿನನಿತ್ಯ ಬಳಸುವ ಆಹಾರದಂತೆಯೇ ಇರುತ್ತದೆ. ಆದರೆ ಇದು ಅದಲ್ಲ!

ಕುಲಾಂತರಿ ಆಹಾರಕ್ಕೆ ಅನುಮತಿ ನೀಡುವ ನಿರ್ಧಾರವು, ಈ ಆಹಾರವನ್ನು ಉತ್ಪಾದಿಸುವ ಕಂಪೆನಿಗಳು ಮಾಡುವ ವಾದದ ಮೇಲೆಯೇ ಸಂಪೂರ್ಣ ಅವಲಂಬಿತವಾಗಿದೆ. ಈ ಕ್ರಮಕ್ಕೆ ಭಾರತ ಸೇರಿದಂತೆ ಇನ್ನಿತರ ದೇಶಗಳ ವಿಜ್ಞಾನಿಗಳು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಒಮ್ಮೆ ಕುಲಾಂತರಿ ಬೆಳೆ ಬೆಳೆಯಲು ಆರಂಭವಾದರೆ, ನಿಸರ್ಗದಲ್ಲಿನ ವಂಶವಾಹಿ ವ್ಯವಸ್ಥೆ ಸಂಪೂರ್ಣ ಬುಡಮೇಲಾಗುತ್ತಿದೆ. ಇದನ್ನು ಮತ್ತೆ ಸರಿಪಡಿಸುವುದು ಅಸಾಧ್ಯ. ನಿರ್ಮೂಲನೆ ಮಾಡಲು ಅಸಾಧ್ಯವಾಗುವ ಕೀಟ, ರೋಗ ಹಾಗೂ ಕಳೆ ಸಮಸ್ಯೆ ಉದ್ಭವವಾಗುವ ಸಾಧ್ಯತೆ ಇದೆ. ಇದರಿಂದ ನಮ್ಮ ಸಾಂಪ್ರದಾಯಿಕ ತಳಿಗಳು ಕಣ್ಮರೆಯಾಗಿ, ಜೀವವೈವಿಧ್ಯಕ್ಕೂ ಧಕ್ಕೆ ಉಂಟಾಗಲಿದೆ.ಬಹುತೇಕ ಐರೋಪ್ಯ ರಾಷ್ಟ್ರಗಳೂ ಸೇರಿದಂತೆ ಜಗತ್ತಿನ ಅನೇಕ ದೇಶಗಳಲ್ಲಿ ಕುಲಾಂತರಿ ಆಹಾರ ಬೆಳೆಗೆ ನಿಷೇಧ ವಿಧಿಸಲಾಗಿದೆ.

‘ಕುಲಾಂತರಿ ಆಹಾರ ಬೆಳೆ ಬಿಡುಗಡೆ ಮಾಡುವುದು ಬೇಡ’ ಎಂದು ಪ್ರಮುಖ ವಿಜ್ಞಾನಿಗಳೇ ಆಗ್ರಹಿಸಿದ್ದಾರೆ. ಆದರೆ ವಿರೋಧಗಳ ಮಧ್ಯೆಯೂ ಭಾರತದಲ್ಲಿ ಈ ಆಹಾರದ ಬಿಡುಗಡೆಗೆ ಸಿದ್ಧತೆ ನಡೆದಿವೆ. ಈ ಆಹಾರವನ್ನು ಜನರ ಮೇಲೆ ಪರೀಕ್ಷಿಸಲು ತಯಾರಿ ನಡೆದಿದೆಯೇನೋ ಎಂಬಂತೆ, ಸಾಕಷ್ಟು ಅಧ್ಯಯನ, ಸಂಶೋಧನೆ ನಡೆಸದೇ ಅತ್ಯವಸರದಲ್ಲಿ ಬಿಡುಗಡೆ ಮಾಡಲಾಗುತ್ತಿದೆ. ಲಾಭ ಗಳಿಕೆಯೊಂದನ್ನೇ ದಂಧೆಯಾಗಿಸಿಕೊಂಡು ಕಂಪೆನಿಗಳು ನಡೆಸುವ ಈ ಬೃಹತ್ ಪ್ರಮಾಣದ ಪ್ರಯೋಗಗಳಲ್ಲಿ ನೀವು ಪ್ರಯೋಗ ಜೀವಿಗಳಾಗಿ ಬಳಕೆಯಾಗಲಿದ್ದೀರಿ..!

ವಿವಿಧ ರಾಜ್ಯಗಳಲ್ಲಿ ಆರಂಭವಾದ ‘ಕುಲಾಂತರಿ ವಿರೋಧಿ’ ಚಳುವಳಿಗೆ ಕರ್ನಾಟಕದಲ್ಲಿಯೂ ಚಾಲನೆ ದೊರೆತಿದೆ. ಗ್ರೀನ್‌ಪೀಸ್ ಸಂಘಟನೆಯು ‘ಸಹಜ ಸಮೃದ್ಧ’ ಸಾವಯವ ಕೃಷಿಕರ ಬಳಗವು ‘ಸಂವಾದ’ ಹಾಗೂ ‘ಭೂಮಿ’ ಸಂಸ್ಥೆಯ ಜತೆಗೂಡಿ ‘ನಾನು ಪ್ರಯೋಗ ಪಶು ಅಲ್ಲ’ (ಐ ಆಮ್ ನೋ ಲ್ಯಾಬ್ ರ್ಯಾಟ್) ಚಳುವಳಿ ರೂಪಿಸಿದೆ. ವಿವಿಧ ಕಾರ್ಯಕ್ರಮಗಳ ಮೂಲಕ, ಕುಲಾಂತರಿ ಬೆಳೆ ತಂದೊಡ್ಡುವ ಅಪಾಯಗಳ ಕುರಿತು ಅರಿವು ಮೂಡಿಸಲು ಯತ್ನಿಸಲಾಗುವುದು. ಕರ್ನಾಟಕ ಸರ್ಕಾರದ ಆರೋಗ್ಯ ಸಚಿವ ಶ್ರೀ ಶ್ರೀರಾಮುಲು ಅವರಿಗೆ ಸಾವಿರಗಟ್ಟಲೇ ಪತ್ರ ಬರೆಯುವ ಮೂಲಕ ನಾಡಿನಲ್ಲಿ ಕುಲಾಂತರಿ ನಿಷೇಧಕ್ಕೆ ಆಗ್ರಹಿಸಲಾಗುವುದು.

ಈ ಆಂದೋಲನಕ್ಕೆ ನೀವೂ ಕೈ ಜೋಡಿಸಿ. ‘ಕುಲಾಂತರಿ ಆಹಾರ ಧಾನ್ಯ ನಿಷೇಧಿಸಿ’ ಎಂದು ಆರೋಗ್ಯ ಸಚಿವ ಶ್ರೀರಾಮುಲು ಅವರಿಗೆ ಪತ್ರ ಬರೆದು ಒತ್ತಾಯಿಸಿ.

ಆರೋಗ್ಯ ಸಚಿವ ಶ್ರೀರಾಮುಲು ಅವರಿಗೆ ಬರೆದ ಪತ್ರದ ಸಾರಾಂಶ ಇಲ್ಲಿದೆ:

ನಾನು ಪ್ರಯೋಗ ಜೀವಿ ಅಲ್ಲ

ಗೌರವಾನ್ವಿತ ಆರೋಗ್ಯ ಸಚಿವ ಶ್ರೀ ಶ್ರೀರಾಮುಲು,

ಪ್ರಸ್ತುತ ನಾವು ಎದುರಿಸುತ್ತಿರುವ ಸಂದಿಗ್ಧ ಪರಿಸ್ಥಿತಿ ಹಾಗೂ ಆರೋಗ್ಯಕ್ಕೆ ಸಂಬಂಧಿಸಿದ ಬಹು ಮಹತ್ವದ ಸಂಗತಿಯೊಂದನ್ನು ನಿಮ್ಮೊಂದಿಗೆ ಪ್ರಸ್ತಾಪಿಸಲು ಬಯಸುತ್ತೇನೆ. ಕುಲಾಂತರಿ (ವಂಶವಾಹಿ ಪರಿವರ್ತಿತ- ’ಜೆನೆಟಿಕಲಿ ಮಾಡಿಫೈಡ್’) ಬೆಳೆ ಹಾಗೂ ಆಹಾರಧಾನ್ಯಗಳು ತಂದೊಡ್ಡುವ ಅಪಾಯಗಳ ಕುರಿತು ಕೇಂದ್ರ ಸರ್ಕಾರದ ಆರೋಗ್ಯ ಸಚಿವ ಶ್ರೀ ಅನ್ಬುಮಣಿ ರಾಮದಾಸ್ ಹಾಗೂ ಪ್ರಖ್ಯಾತ ವಿಜ್ಞಾನಿಗಳಾದ ಡಾ. ಪುಷ್ಪಾ ಭಾರ್ಗವ ಅವರು ಕಳವಳ ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ, ಕುಲಾಂತರಿ ಆಹಾರಧಾನ್ಯದ ಕುರಿತು ನನಗೆ ಉಂಟಾದ ಆತಂಕದ ಬಗ್ಗೆ ನೀವು ಕಾಳಜಿ ತೋರುತ್ತೀರಿ ಎಂಬ ನಂಬಿಕೆಯಿಂದ ಈ ಪತ್ರ ಬರೆಯುತ್ತಿದ್ದೇನೆ.

ಕುಲಾಂತರಿ ತಂತ್ರಜ್ಞಾನವು ಪರಿಸರ ಹಾಗೂ ಆಹಾರ ಬೆಳೆಗಳ ಮೇಲೆ ‘ಮತ್ತೆ ಮೂಲಸ್ಥಿತಿಗೆ ತರಲು ಸಾಧ್ಯವಾಗದ’ ಹಾನಿಯನ್ನು ಉಂಟು ಮಾಡುತ್ತದೆ. ಇದಕ್ಕೆ ಪೂರಕವೆನಿಸುವ ವೈಜ್ಞಾನಿಕ ಸಾಕ್ಷಾಧಾರಗಳೂ ಲಭ್ಯವಾಗಿವೆ. ಕುಲಾಂತರಿ ತಂತ್ರಜ್ಞಾನದ ಕಂಪೆನಿಗಳು ನಡೆಸಿದ ಪ್ರಯೋಗಗಳಿಂದ ಕಂಡುಬಂದ ಸಂಗತಿ ಎಂದರೆ, ಆ ಆಹಾರ ಸೇವಿಸಿದ ಪ್ರಾಣಿಗಳು ಸಂತಾನಶಕ್ತಿ ಕುಂಠಿತಗೊಂಡು ಅವುಗಳ ಅಂಗಗಳು ಹಾಗೂ ಕೋಶಗಳು ಹಾನಿಗೆ ಈಡಾಗಿವೆ. ಇದರ ಜತೆಗೆ ಬೆಳವಣಿಗೆ, ರೋಗನಿರೋಧಕ ಶಕ್ತಿ ಕುಂಠಿತಗೊಂಡಿರುವುದೂ ಪತ್ತೆಯಾಗಿದೆ. ಇಷ್ಟೇ ಅಲ್ಲ, ಆಹಾರದ ಪೋಷಕಾಂಶ ರಚನೆಯೂ ಬದಲಾಗಿದೆ.

ಈ ಸಂಶೋಧನಾ ವರದಿಗಳು ಬಹಿರಂಗಗೊಂಡ ನಂತರ ವಿದೇಶಗಳಲ್ಲಿ ಕುಲಾಂತರಿ ಬೆಳೆ/ ಆಹಾರವನ್ನು ನಿಷೇಧಿಸಲಾಗಿದೆ. ಕುಲಾಂತರಿಗೆ ವಿರೋಧ ಹೆಚ್ಚುತ್ತಿರುವ ಸಂದರ್ಭದಲ್ಲೇ ಭಾರತದಲ್ಲಿ ಬಿ.ಟಿ. ಬದನೆಕಾಯಿ ಬಿಡುಗಡೆಗೆ ಸಿದ್ಧತೆ ನಡೆದಿದೆ. ಈ ಉತ್ಪನ್ನದ ಜೈವಿಕ ಸುರಕ್ಷತೆಯೇ ಪ್ರಶ್ನಾರ್ಹವಾಗಿದೆ. ಏಕೆಂದರೆ, ಕುಲಾಂತರಿ ಆಹಾರಧಾನ್ಯ ಉತ್ಪಾದನಾ ಕಂಪೆನಿಗಳು ನೀಡಿದ ಕೆಲವು ಅಂಶಗಳನ್ನು ಆಧರಿಸಿಯೇ ಉತ್ಪನ್ನ ಬಿಡುಗಡೆ ಕುರಿತು ನಿರ್ಧಾರ ತೆಗೆದುಕೊಳ್ಳಲಾಗಿದೆ..! ತರಕಾರಿಗಳ ಪೈಕಿ ಬದನೆಕಾಯಿ ಹೆಚ್ಚು ಪ್ರಮಾಣದ ಜೀವಸತ್ವ ಒಳಗೊಂಡಿದ್ದು, ಔಷಧಿ ರೂಪದಲ್ಲೂ ಇದನ್ನು ಸೇವಿಸಲಾಗುತ್ತಿದೆ.

ಇದೆಲ್ಲಕ್ಕೂ ಮಿಗಿಲಾಗಿ ಒಂದು ಸಂಗತಿಯನ್ನು ನಿಮ್ಮ ಗಮನಕ್ಕೆ ತರಲು ಬಯಸುತ್ತೇನೆ. ಬದನೆಗೆ ಬರುವ ಕೀಟಬಾಧೆಯನ್ನು ನಿವಾರಿಸಲು ಸಾಕಷ್ಟು ನಿಸರ್ಗಸ್ನೇಹಿ ಪದ್ಧತಿಗಳಿವೆ. ಇವುಗಳಿಗೆ ರಾಸಾಯನಿಕ ಸಿಂಪಡಣೆಯೂ ಬೇಡ; ಕುಲಾಂತರಿ ಬೀಜಗಳೂ ಬೇಡ.

ಶ್ರೀ ಶ್ರೀರಾಮುಲು ಅವರೇ,

ಲಕ್ಷಾಂತರ ನಾಗರಿಕರ ಆರೋಗ್ಯಕ್ಕೆ ಅಪಾಯ ತಂದೊಡ್ಡುವ ಕುಲಾಂತರಿ ಆಹಾರವನ್ನು ನಿಷೇಧಿಸಲು ನಿಮಗೆ ಸಂಪೂರ್ಣ ಅಧಿಕಾರವಿದೆ. ಇಂಥ ಅಪಾಯಕಾರಿ ತಂತ್ರಜ್ಞಾನದ ವಿರುದ್ಧ ಕೇರಳದಂಥ ಕೆಲವು ರಾಜ್ಯಗಳು ಈಗಾಗಲೇ ದನಿಯೆತ್ತಿವೆ. ಲಕ್ಷಾಂತರ ಜನರ ಪ್ರತಿನಿಧಿಯಾಗಿರುವ ನಿಮಗೆ, ಅವರ ನಂಬಿಕೆಯನ್ನು ಉಳಿಸಿಕೊಳ್ಳುವ ಜವಾಬ್ದಾರಿಯೂ ಇದೆ. ಈ ನಿಟ್ಟಿನಲ್ಲಿ ಕುಲಾಂತರಿ ಬೆಳೆ ನಿಷೇಧಕ್ಕೆ ಮುಂದಾಗುವಂತೆ ಒತ್ತಾಯಿಸುತ್ತೇನೆ. ಕುಲಾಂತರಿ ತಂತ್ರಜ್ಞಾನವನ್ನು ನನ್ನ ಮೇಲೆ ಪ್ರಯೋಗಿಸಬೇಡಿ. ಏಕೆಂದರೆ, ನಾನು ಪ್ರಯೋಗಾಲಯದ ಜೀವಿ ಅಲ್ಲ. ಕುಲಾಂತರಿ ಆಹಾರ ಬಳಕೆಯನ್ನು ನಾನು ತಿರಸ್ಕರಿಸುತ್ತೇನೆ.

ಬಿ.ಟಿ. ಬದನೆ ಸೇರಿದಂತೆ ಇನ್ನಾವುದೇ ಕುಲಾಂತರಿ ಬೆಳೆಗೆ ಭಾರತದಲ್ಲಿ ಅವಕಾಶ ನೀಡುವುದನ್ನು ನಿಲ್ಲಿಸಿ. ಇಷ್ಟೇ ಅಲ್ಲ, ಕುಲಾಂತರಿ ಆಹಾರ ಆಮದು ಮಾಡಿಕೊಳ್ಳುವುದನ್ನು ಕೂಡ ನಿಲ್ಲಿಸಿ ಎಂದು ಆಗ್ರಹಿಸುತ್ತೇನೆ

ನಿಮ್ಮ ವಿಶ್ವಾಸಿ

(ಸಹಿ)

ಪೂರ್ಣ ಹೆಸರು: ____________

ಇ-ಮೇಲ್ ವಿಳಾಸ (ಇದ್ದರೆ): ____________

ದೂರವಾಣಿ: ____________

ಸ್ಥಳ: ____________

ದಿನಾಂಕ: ____________

ವಿವರಗಳಿಗೆ: ಜಿ.ಕೃಷ್ಣಪ್ರಸಾದ್, ‘ಸಹಜ ಸಮೃದ’, 080-23655302/ 98808 62058

ಮಂಜುನಾಥ ಎಚ್., ‘ಸಂವಾದ’- 94803 30652

ಜಯಪ್ರಸಾದ್, ‘ಭೂಮಿ’- 94801 72565