‘ಮಹಿಕೋ’ ಕಂಪನಿಯು ಭಾರತದಲ್ಲಿ ಬಿಡುಗಡೆ ಮಾಡಲಿರುವ ಬಿ.ಟಿ. ಬದನೆಯ ಮೇಲೆ ಪರೀಕ್ಷೆ ನಡೆಸಲಾಗಿದ್ದು, ಈ ಬದನೆ ಸೇವನೆಯಿಂದ ಆರೋಗ್ಯ ಹಾಗೂ ಪರಿಸರಕ್ಕೆ ಧಕ್ಕೆಯೊದಗಲಿದೆ ಎಂಬ ಆತಂಕಕಾರಿ ಅಂಶ ಬಹಿರಂಗಗೊಂಡಿದೆ.

ಹಾಗೆ ನೋಡಿದರೆ, ಈ ಮಾಹಿತಿ ಪಡೆದಿದ್ದೇ ಒಂದು ಸಾಹಸದ ಕೆಲಸ!

ಒಂದರ್ಥದಲ್ಲಿ ಇದು ಜನರ ಆರೋಗ್ಯ ಹಾಗೂ ವಾಣಿಜ್ಯ ಹಿತಾಸಕ್ತಿ ಮಧ್ಯೆ ನಡೆದ ಹಗ್ಗ-ಜಗ್ಗಾಟದಂತೆ. 2006ರ ಫೆಬ್ರುವರಿಯಲ್ಲಿ ‘ಗ್ರೀನ್‌ಪೀಸ್’ ಸಂಘಟನೆಯು ಜೈವಿಕ ತಂತ್ರಜ್ಞಾನ ಇಲಾಖೆಯನ್ನು ಸಂಪರ್ಕಿಸಿ, ಮಹಿಕೋ ಸ್ವತಃ ತನ್ನ ಉತ್ಪಾದನೆಯಾದ ಬಿ.ಟಿ. ಬದನೆ ಮೇಲೆ ನಡೆಸಿದ್ದ ಸುರಕ್ಷತಾ ಪ್ರಯೋಗಗಳ ಮಾಹಿತಿಯನ್ನು ‘ಮಾಹಿತಿ ಹಕ್ಕು ಕಾಯ್ದೆ’ಯಡಿ ನೀಡುವಂತೆ ಮನವಿ ಸಲ್ಲಿಸಿತು. ಅಚ್ಚರಿಯೆಂದರೆ, ಇಲಾಖೆಯು ಮಹಿಕೋ ಪರ ನಿಲುವು ತಳೆದು, ‘ಈ ಮಾಹಿತಿಯನ್ನು ನೀಡುವುದರಿಂದ ಕಂಪನಿಯ ವಾಣಿಜ್ಯ ಹಿತಾಸಕ್ತಿಗೆ ಧಕ್ಕೆಯಾಗುತ್ತದೆ’ ಎಂದು ಹೇಳಿ ಮಾಹಿತಿಯನ್ನು ನೀಡಲು ನಿರಾಕರಿಸಿತು.

ಕೇಂದ್ರೀಯ ಮಾಹಿತಿ ಆಯೋಗವು ಜೈವಿಕ ತಂತ್ರಜ್ಞಾನ ಇಲಾಖೆಯ ವಾದವನ್ನು ತಳ್ಳಿಹಾಕಿ, ‘ಜನತೆ ತಾವು ಸೇವಿಸುವ ಆಹಾರದ ಸುರಕ್ಷತೆಯಿಂದ ಕೂಡಿದೆಯೇ ಎಂಬುದಕ್ಕಿಂತ ಕಂಪನಿಯೊಂದರ ವಾಣಿಜ್ಯ ಹಿತಾಸಕ್ತಿ ಮುಖ್ಯವಲ್ಲ’ ಎಂದು ತಿಳಿಸಿತು. ಈ ಆದೇಶವನ್ನು ಪ್ರಶ್ನಿಸಿ ಮಹಿಕೋ, ದೆಹಲಿ ಹೈಕೋರ್ಟ್ ಮೆಟ್ಟಲೇರಿತು. ಈ ಪ್ರಕರಣ ಇನ್ನೂ ವಿಚಾರಣೆ ಹಂತದಲ್ಲಿದೆ. ಈ ಮಧ್ಯೆ, ‘ಜಿಇಎಸಿ’ 2008ರ ಆಗಸ್ಟ್‌ನಲ್ಲಿ ತನ್ನ ವೆಬ್‌ಸೈಟ್‌ನಲ್ಲಿ ವರದಿಯ ಪ್ರಮುಖ ಅಂಶಗಳನ್ನು ಪ್ರಕಟಿಸಿತು.

ಅಪಾಯ..!

ಬಿ.ಟಿ. ಬದನೆಯ ಜೈವಿಕ ಸುರಕ್ಷತೆ ಹಾಗೂ ಅಲರ್ಜಿ ಕುರಿತ ಈ ವರದಿಯ ವೈಜ್ಞಾನಿಕ ವಿಶ್ಲೇಷಣೆಯನ್ನು ಫ್ರಾನ್ಸ್‌ನ ವಿಜ್ಞಾನಿ ಪ್ರೊ† ಜಿಲೆಸ್ ಎರಿಕ್ ಸೆರ್ಲಾನಿ ನೇತೃತ್ವದ ಸಂಶೋಧಕರ ತಂಡವು ನಡೆಸಿದ್ದು, ಕುಲಾಂತರಿ ಬದನೆ ಸೇವನೆಯಿಂದ ಮಾನವನ ದೇಹದ ಮೇಲೆ ಗಂಭೀರ ಪರಿಣಾಮವಾಗಲಿದೆ ಎಂದು ಎಚ್ಚರಿಕೆ ನೀಡಿದೆ.

ಜನವರಿ 14ರಂದು ನಡೆದ ‘ಕುಲಾಂತರಿ ತಂತ್ರಜ್ಞಾನ ಅನುಮೋದನಾ ಸಮಿತಿ’ಯ (ಜಿಇಎಸಿ) 91ನೇ ಸಭೆಯಲ್ಲಿ, ಆರೋಗ್ಯ ಸಚಿವಾಲಯದ ಪ್ರತಿನಿಧಿಗಳು ಈ ವಿಶ್ಲೇಷಣೆಗಳನ್ನು ಮುಂದಿಟ್ಟುಕೊಂಡು, ಕುಲಾಂತರಿ ತಂತ್ರಜ್ಞಾನದಿಂದ ಆಹಾರ ಹಾಗೂ ಬೆಳೆಗಳ ಮೇಲೆ ಉಂಟಾಗುವ ಮಾರಕ ಪರಿಣಾಮಗಳ ಬಗ್ಗೆ ಕಳವಳ ವ್ಯಕ್ತಪಡಿಸಿದರು. ಇದಕ್ಕೆ ಸ್ಪಂದಿಸಿದ ‘ಜಿಇಎಸಿ’, ವಿಶ್ಲೇಷಣೆಗಳ ಕುರಿತು ಅಧ್ಯಯನ ನಡೆಸಲು ಉಪ ಸಮಿತಿಯೊಂದನ್ನು ರಚಿಸಲು ನಿರ್ಧರಿಸಿತು.

ಬಿ.ಟಿ. ಬದನೆ ಸೇವನೆಯ ಅಲ್ಪಾವಧಿಯಲ್ಲೇ ಸಂಭವಿಸುವ ಅನಾರೋಗ್ಯ ಅಥವಾ ದೀರ್ಘಾವಧಿಯ ಆರೋಗ್ಯದ ಸಮಸ್ಯೆಗಳ ಬಗ್ಗೆ ‘ಮಹಿಕೋ’ದ ವರದಿಯಲ್ಲಿ ಪ್ರಸ್ತಾಪವೇ ಇಲ್ಲ. ಜೀವಕೋಶಗಳ ಮೇಲೆ ಮಾರಕ ಪರಿಣಾಮ ಬೀರುವ ತಂತ್ರಜ್ಞಾನವನ್ನು ಭಾರತಕ್ಕೆ ತಂದು ‘ಸುರಿ’ಯುತ್ತಿರುವ ಬಗ್ಗೆ ಪ್ರೊ† ಸೆರ್ಲಾನಿ ಆತಂಕ ವ್ಯಕ್ತಪಡಿಸಿದ್ದಾರೆ. ಸಾಂಕ್ರಾಮಿಕ ರೋಗಗಳನ್ನು ನಿಯಂತ್ರಿಸುವಲ್ಲಿಯೇ ಸಾಕಷ್ಟು ಪ್ರಯಾಸ ಪಡುತ್ತಿರುವ ಭಾರತದಂಥ ದೇಶಗಳು, ಆಹಾರ ತಂದೊಡ್ಡುವ ಸಮಸ್ಯೆಗಳತ್ತ ಗಮನ ಹರಿಸುವುದಾದರೂ ಹೇಗೆ?

ಇನ್ನು ಬಿ.ಟಿ. ಬದನೆ ಸೇವನೆಯ ದೀರ್ಘಕಾಲೀನ ಸಮಸ್ಯೆಗಳ ಬಗ್ಗೆ ಸಾಕಷ್ಟು ಅಧ್ಯಯನ ನಡೆಸಿಯೇ ಇಲ್ಲ. ಕೇವಲ 90 ದಿನಗಳ ಅವಧಿಯ ಪರೀಕ್ಷೆ ನಡೆಸಲಾಗಿದ್ದು, ಇದರಿಂದ ಕ್ಯಾನ್ಸರ್ ಕೋಶಗಳ ಉತ್ಪತ್ತಿಯಂಥ ಗಂಭೀರ ರೋಗಗಳನ್ನು ಪರಿಗಣಿಸಲು ಸಾಧ್ಯವಿಲ್ಲ. ಬಿ.ಟಿ. ಬದನೆ ಸೇವನೆಯಿಂದ ಆರೋಗ್ಯಕ್ಕೆ ಧಕ್ಕೆಯಿಲ್ಲ ಎಂಬ ಖಚಿತ ವಾದವನ್ನೂ ಕಂಪನಿಯ ವರದಿಯಲ್ಲಿ ನೀಡಲಾಗಿಲ್ಲ ಎಂದು ಪ್ರೊ† ಸೆರ್ಲಾನಿ ತಿಳಿಸಿದ್ದಾರೆ.