ಕಾಯ್ದೆಯ ಪ್ರಕಾರ, ಜೈವಿಕ ಸಂಪತ್ತನ್ನು ಬಳಸಿಕೊಳ್ಳುವ ಯಾವುದೇ ಕಂಪನಿಯು ಅದರ ಮಾಲೀಕನಿಗೆ ಗೌರವಧನ ನೀಡಬೇಕು. ಆದರೆ ಮಾನ್ಸಾಂಟೊ ಈ ದಾರಿ ಅನುಸರಿಸಿಲ್ಲ ಎಂಬ ಆಕ್ಷೇಪ ಕೇಳಿಬಂದಿದೆ. ‘ಭಾರತದಲ್ಲಿ ಬಿ.ಟಿ. ಹತ್ತಿ ಮಾರಾಟದಿಂದ ಗಳಿಸಿರುವ ಆದಾಯದಲ್ಲಿ ಶೇ. 1ರಿಂದ 2ರಷ್ಟು ಪಾಲು ಗೌರವಧನವಾಗಿ ನಮ್ಮ ಕೈ ಸೇರಬೇಕು. ಲಾಭ ಗಳಿಸಿರುವ ಮಾನ್ಸಾಂಟೊ, ಅದರಲ್ಲಿ ನಮಗೂ ಪಾಲು ಕೊಡಬೇಕು’ ಎಂದು ಹಂಪಯ್ಯ ಪ್ರತಿಪಾದಿಸುತ್ತಾರೆ.

ಅಂದ ಹಾಗೆ, ಕಾಯ್ದೆಯ ಪ್ರಕಾರ ಕಂಪನಿಯು ಇಲ್ಲಿನ ಜೈವಿಕ ಸಂಪತ್ತಿನಿಂದ ಲಾಭ ಗಳಿಸಿದ ಬಳಿಕ ಲಾಭಾಂಶ ನೀಡದೇ ಹಳ್ಳಿಗಳ ಅಭಿವೃದ್ಧಿಗೆ ನೆರವು ನೀಡಲು ಮುಂದಾದರೆ ಅದಕ್ಕೂ ಅವಕಾಶವಿದೆ. ಆದರೆ ಈ ಪ್ರಕರಣದಲ್ಲಿ ಅದನ್ನು ಒಪ್ಪಲು ಸಾಧ್ಯವಿಲ್ಲ ಎಂದು ಮಂಡಳಿಯ ಅಧಿಕಾರಿಗಳು ಹೇಳುತ್ತಾರೆ. ಮಾನ್ಸಾಂಟೊ ಕಂಪನಿಯು ಲಾಭಾಂಶ ಕೊಡಲು ಒಪ್ಪದಿದ್ದರೆ ಕಾನೂನು ಪ್ರಕಾರ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸುವುದಾಗಿ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ. ಈ ಕುರಿತು ಮಂಡಳಿಯ ವಕೀಲರು ದಾಖಲೆಗಳ ಸಂಗ್ರಹಕ್ಕೆ ಸಿದ್ಧತೆ ನಡೆಸಿದ್ದು, ಒಂದೆರಡು ತಿಂಗಳಲ್ಲೇ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲಿದ್ದಾರೆ.

ಆದರೆ, ಈ ಎಲ್ಲ ಆರೋಪಗಳನ್ನು ಮಾನ್ಸಾಂಟೊ ಕಂಪನಿ ಅಲ್ಲಗಳೆದಿದೆ. ‘ಆಂಧ್ರಪ್ರದೇಶದ ಯಾವುದೇ ಭಾಗದಲ್ಲೂ ಬಿ.ಟಿ. ಹತ್ತಿ ಬೆಳೆ ಸಂಶೋಧನೆಯನ್ನು ನಾವು ನಡೆಸಿಲ್ಲ’ ಎಂದು ಮಹಿಕೊ ಮಾನ್ಸಾಂಟೊ ಬಯೋಟೆಕ್ ಲಿಮಿಟೆಡ್‌ನ ಡೆಪ್ಯುಟಿ ಜನರಲ್ ಮ್ಯಾನೇಜರ್ ರಾಜ್ ಕೇತ್ಕರ್ ಸ್ಪಷ್ಟಪಡಿಸಿದ್ದಾರೆ.

‘ಜೀನ್ ಕಳ್ಳತನ’ ಆರೋಪ ಪ್ರಕಟವಾಗುತ್ತಿದ್ದಂತೆ, ಕಂಪನಿಯ ಅಧಿಕಾರಿಗಳು ಮಂಡಳಿಯನ್ನು ಭೇಟಿ ಮಾಡಿದ್ದಾರೆ. ಕರ್ನೂಲು ಜಿಲ್ಲೆಯಲ್ಲಿ ರೈತರು ಬೆಳೆಯುತ್ತಿರುವ ಬಿ.ಟಿ. ಹತ್ತಿಯ ಬಗ್ಗೆ ಮಂಡಳಿಯ ಅಧಿಕಾರಿಗಳಿಗೆ ವಿವರ ನೀಡಿದ್ದಾರೆ. ‘ಏನೇ ಇದ್ದರೂ, ಇಲ್ಲಿನ ಜೈವಿಕ ಸಂಪತ್ತಿನ ಲಾಭ ಪಡೆದ ಮಾನ್ಸಾಂಟೊ ಕಂಪನಿಯು ತನಗೆ ದೊರೆತ ಲಾಭಾಂಶದಲ್ಲಿ ಒಂದು ಪಾಲನ್ನು ನೀಡಲೇಬೇಕು’ ಎಂಬುದು ಮಂಡಳಿ ಅಧ್ಯಕ್ಷ ಹಂಪಯ್ಯ ಅವರ ಪ್ರತಿಪಾದನೆ.