ಹಣ, ಸಂಪತ್ತು ಕಳ್ಳತನ ಮಾಡುವುದನ್ನು ಕೇಳಿರಬಹುದು. ಕಿಡ್ನಿ, ಇತ್ತಿತರ ಅಂಗಗಳನ್ನು ಕಳವು ಮಾಡಿದ್ದೂ ಗೊತ್ತಿರಬಹುದು. ಆದರೆ ಜೀವಿಯೊಂದರ ಗುಣ- ಸ್ವಭಾವಗಳನ್ನು ಮುಂದಿನ ಪೀಳಿಗೆಗೆ ವರ್ಗಾಯಿಸುವ ಜೀನ್(ವಂಶವಾಹಿ)ಗಳನ್ನು ಕಳವು ಮಾಡುವ ಬಗ್ಗೆ ಕೇಳಿದ್ದೀರಾ?

ಅಂಥದೊಂದು ಕುತೂಹಲಕರ ಪ್ರಸಂಗ ಆಂಧ್ರಪ್ರದೇಶದಿಂದ ವರದಿಯಾಗಿದೆ. ವಂಶವಾಹಿಗಳನ್ನು ‘ಕಳವು’ ಮಾಡಲಾಗಿದೆ ಎಂಬ ಆರೋಪದ ಮೇಲೆ ಮಾನ್ಸಾಂಟೊ ಕಂಪನಿಯು ಗೌರವಧನ ನೀಡಬೇಕು ಎಂದು ಆಂಧ್ರಪ್ರದೇಶ ಜೀವವೈವಿಧ್ಯ ಮಂಡಳಿ ಆಗ್ರಹಿಸಿದೆ.

ಬಿ.ಟಿ. ಹತ್ತಿಯನ್ನು ಭಾರತದಲ್ಲಿ ಬಿಡುಗಡೆ ಮಾಡಿರುವುದು ಮಾನ್ಸಾಂಟೊ ಕಂಪನಿ. ಹತ್ತಿ ಬೆಳೆಯ ಪ್ರಮುಖ ಸಮಸ್ಯೆಯಾದ ಕಾಯಿಕೊರಕ ಕೀಟಕ್ಕೆ ಈ ತಳಿ ಪ್ರತಿರೋಧಕ ಶಕ್ತಿ ಹೊಂದಿದೆ ಎಂದೇ ಪ್ರತಿಪಾದಿಸಲಾಗಿದ್ದ ಬಿ.ಟಿ. ಹತ್ತಿಗೆ ಸಾಕಷ್ಟು ಕಡೆ ವಿರೋಧ ಕೂಡ ವ್ಯಕ್ತವಾಗಿತ್ತು.

ಬಿ.ಟಿ. ಹತ್ತಿ ತಳಿಗೆ ಸೇರಿಸಲಾದ ಜೀನ್(ವಂಶವಾಹಿ)ಯನ್ನು ಆಂಧ್ರದ ಮಣ್ಣಿನಿಂದ ತೆಗೆದುಕೊಳ್ಳಲಾಗಿದೆ ಎಂಬ ಆರೋಪ ಈಗ ಮಾನ್ಸಾಂಟೊ ಕೊರಳಿಗೆ ಸುತ್ತಿಕೊಂಡಿದೆ. ಕರ್ನೂಲು ಜಿಲ್ಲೆಯ ಮಹಾನಂದಿ ಹಳ್ಳಿಯ ಆಸುಪಾಸಿನಲ್ಲಿರುವ ಮಣ್ಣಿನಿಂದ ಈ ‘ಜೀನ್’ ಪಡೆಯಲಾಗಿದೆ ಎಂದು ಆಂಧ್ರಪ್ರದೇಶದ ಜೀವವೈವಿಧ್ಯ ಮಂಡಳಿ ಆರೋಪಿಸಿದೆ. ಜೀವವೈವಿಧ್ಯ ಕಾಯ್ದೆ 2002ರ ಅಡಿಯಲ್ಲಿ ಕೇಂದ್ರ ಸರ್ಕಾರವು ಸ್ಥಾಪಿಸಿದ ಮಂಡಳಿಯು, ಜೈವಿಕ ಸಂಪತ್ತು ರಕ್ಷಿಸುವ ಕಾರ್ಯನಿರ್ವಹಿಸುತ್ತಿದೆ.

‘ಇದೊಂದು ಜೈವಿಕ ಸಂಪತ್ತಿನ ಕಳ್ಳತನ’ ಎನ್ನುತ್ತಾರೆ, ಮಂಡಳಿ ಅಧ್ಯಕ್ಷ ಆರ್. ಹಂಪಯ್ಯ. ಕೇವಲ ಹತ್ತಿ ಬೆಳೆಗೆ ಮಾತ್ರವಲ್ಲ; ಮೆಕ್ಕೆಜೋಳ ಮತ್ತು ಟೊಮ್ಯಾಟೊ ಬೆಳೆಗೂ ಈ ‘ಜೀನ್’ ಬಳಸಿಕೊಳ್ಳುವ ಯತ್ನ ನಡೆದಿದೆ ಎಂದೂ ಅವರು ಶಂಕೆ ವ್ಯಕ್ತಪಡಿಸುತ್ತಾರೆ.