ಬಿ.ಟಿ. ಜೀನ್ ಸ್ಥಳೀಯ ಜವಾರಿ ತಳಿಗಳಿಗೆ ಸೇರುವ ಸಾಧ್ಯತೆಯನ್ನು ವಿಜ್ಞಾನಿಗಳು ಅಲ್ಲಗೆಳೆಯುವುದಿಲ್ಲ. ಆದರೆ ತಳಿಗಳ ವಂಶವಾಹಿ ಕುಲಗೆಡುವ ವಾದ ಒಪ್ಪುವುದಿಲ್ಲ. ಸ್ಥಳೀಯ ತಳಿಗಳಿಗೆ ಬಿ.ಟಿ. ಜೀನ್ ಸೇರಿದರೆ ಮತ್ತೂ ಉತ್ತಮ. ಕಾಯಿ ಮತ್ತು ಕಾಂಡಕೊರಕ ಹುಳುವಿನ ನಿರೋಧಕಶಕ್ತಿ ಹೆಚ್ಚುತ್ತದೆ. ಒಂದು ಜೀನ್ ಜಾಸ್ತಿಯಾಗುತ್ತೆ ಅಷ್ಟೇ. ಯಾವ ಅಪಾಯ ಇಲ್ಲ ಎಂದು ವಿಜ್ಞಾನಿಗಳು ಭರವಸೆ ನೀಡುತ್ತಾರೆ.

ಸುಮ್ಮನೆ ಊಹಿಸಿಕೊಳ್ಳಿ. ನಿಮ್ಮ ದೇಹಕ್ಕೆ ವಿಷಸೂಸುವ ಜೀನ್‌ವೊಂದನ್ನು ಸೇರಿಸಲಾಗಿದೆ. ನಿಮ್ಮನ್ನು ಕಚ್ಚಿದ ಸೊಳ್ಳೆ, ತಿಗಣೆ ಸತ್ತು ಬೀಳುತ್ತಿವೆ. ನೀವು ಮಾತ್ರ ವಿಷಮಾನವರಾಗಿ ಬದುಕುತ್ತೀರಿ! ಮೈತುಂಬ ಬಿ.ಟಿ. ವಿಷ ಹೊತ್ತ ಬದನೆಯದ್ದೂ ಇದೇ ಕತೆ. ತನ್ನ ನಿಸರ್ಗದತ್ತ ಗುಣವನ್ನು ಕಳೆದುಕೊಂಡು ತನ್ನದಲ್ಲದ ಪರಕೀಯ ಜೀನ್‌ನ್ನು ತನ್ನೊಳಗೆ ಪೋಷಿಸುವ ಹಣೆಬರಹ.

ವಿಜ್ಞಾನಿಗಳು ಮರೆತ ಸಂಗತಿಯೊಂದಿದೆ. ಭಾರತ ಬದನೆಯ ಮೂಲ. ಬದನೆ ಹುಟ್ಟಿದ್ದೇ ಇಲ್ಲಿ. ವೈವಿಧ್ಯದ ತಾಣಗಳಲ್ಲಿ ವಂಶವಾಯಿ ಪರಿರ್ವತಿತ (ಜಿಎಂ) ಪ್ರಯೋಗಗಳನ್ನು ಸಡೆಸುವಂತಿಲ್ಲ. ಅದು ನಿಷಿದ್ದ, ಮೂಲ ತಳಿಗಳ ಜೀವದ್ರವ್ಯ ಕುಲಗೆಡದಂತೆ ನೋಡಿಕೊಳ್ಳುವ ಕಾಳಜಿ. ಮುಸುಕಿನ ಜೋಳದ ವೈವಿಧ್ಯ ಇರುವ ಮೆಕ್ಸಿಕೋ ದೇಶ, ಜಿಎಂ ಮುಸುಕಿನ ಜೋಳದ ಪ್ರಯೋಗಗಳಿಗೆ ನಿಷೇಧ ಹೇರಿದೆ. ಅಮೆರಿಕದ ಕೆಂಗಣ್ಣಿಗೆ ಗುರಿಯಾದರೂ ದಿಟ್ಟವಾಗಿ ನಿಂತಿದೆ.

ನಮ್ಮ ವಿಜ್ಞಾನಿಗಳು ಮಾತ್ರ ಅಮೆರಿಕದ ಮಾತಿಗೆ ತಲೆದೂಗುತ್ತ, ಬದನೆ ಭಾರತ ಮೂಲದ್ದೇ ಅಲ್ಲ ಅನ್ನುತ್ತಿದ್ದಾರೆ; ನಮ್ಮ ಮನೆ ಮಗ ನಮ್ಮವನೇ ಅಲ್ಲ ಅಂದಂತೆ..!