ಅಂದು- 22 ಫೆಬ್ರವರಿ 2008

ಸಮಯ- ಮಧ್ಯಾಹ್ನ 12 ಘಂಟೆ.

ಕೊಯಂಬತ್ತೂರಿನ ತಮಿಳುನಾಡು ಕೃಷಿವಿಶ್ವವಿದ್ಯಾಲಯದ ಗೇಟಿನ ಮುಂದೆ ಒಂದಷ್ಟು ರೈತರು ಜಮಾಯಿಸಿದರು. ಸ್ವಲ್ಪ ಹೊತ್ತಿನಲ್ಲೇ ಇನ್ನಷ್ಟು ಜನ ಗುಂಪುಕಟ್ಟಿ ಬಂದರು, ಪೆನ್-ಪ್ಯಾಡ್, ಕ್ಯಾಮರಾ ಹಿಡಿದ ಮಾಧ್ಯಮದ ಮಂದಿ ಜೊತೆಗೂಡಿದರು.  ಅದೊಂದು ದೊಡ್ಡ ಗುಂಪೇ ಆಯಿತು.  ನೋಡ ನೋಡುತ್ತಿದ್ದಂತೆ ಗುಂಪು ಗೇಟಿನ ಅಂಚಿಗಿದ್ದ ತಮಿಳುನಾಡು ಕೃಷಿ ವಿಶ್ವವಿದ್ಯಾಲಯ ಎಂಬ ನಾಮ ಫಲಕದ ಕೆಳಗೆ ಈಗ ಮನ್ಸಾಂಟೊ ತೆಕ್ಕೆಗೆ ಎಂಬ ಸ್ಟಿಕ್ಕರ್ ಅಂಟಿಸಿದರು. ಒಂದಷ್ಟು ಜನ ಅಲ್ಲೇ ಗೇಟಿನ ಮುಂದೆ ಧರಣಿ ಕುಂತರು.  ಇನ್ನಷ್ಟುಜನ ಪತ್ರಕರ್ತರ ಜೊತೆ ಕ್ಯಾಂಪಸ್‌ನ ಒಳನಡೆದು ಬಿಟಿ ಬದನೆ ಎಂದು ಬೋರ್ಡು ತಗುಲಿಸಿದ್ದ ಹೊಲದ ಅಂಚಿನಲ್ಲಿ ಕುಂತರು.  ಗುಂಪಿನಿಂದ ಬಿಟಿ ಬೇಡ ಮನ್ಸಾಂಟೋ ತೊಲಗು ನಮ್ಮ ಊಟ: ನಮ್ಮ ಹಕ್ಕು….ಭಿತ್ತಿ ಪತ್ರಗಳು ತಲೆಎತ್ತಿದವು.  ಕ್ಯಾಮರಾ, ವಿಡಿಯೋ ಸದ್ದು ಮಾಡಿದವು.  ಇಡೀ ಕಾರ್ಯಾಚರಣೆ ಮಕ್ಕಳ್ ಟಿವಿಯಲ್ಲಿ ನೇರ ಪ್ರಸಾರ ಕಾಣುತ್ತಿತ್ತು.

ನಿಧಾನವಾಗಿ ಪೋಲೀಸರು ಬಂದರು!. ಬಿಟಿ ಬದನೆಗೆ ಕೈಹಚ್ಚದೆ ಶಾಂತರೀತಿಯಲ್ಲಿ ಧರಣಿ ಕುಂತ ಗುಂಪನ್ನು ಕಂಡು ಅವರಿಗೂ ನಿರಾಸೆಯಾಯಿತು; ಲಾಠಿ ಬೀಸುವ ಅವಕಾಶ ತಪ್ಪಿದ್ದಕ್ಕೆ.  ಪ್ರತಿಭಟನಾಕಾರರ ಜೊತೆ ಪೋಲೀಸರು ಕಾದೇ ಕಾದರು. ವಿಶ್ವವಿದ್ಯಾಲಯದ ಯಾವೊಬ್ಬ ನೌಕರ, ವಿಜ್ಞಾನಿ, ವಿದ್ಯಾರ್ಥಿ ಇತ್ತ ಸುಳಿಯಲಿಲ್ಲ.  ಸ್ವತಃ ಡೆಪ್ಯುಟಿ ಕಮೀಷನರ್ ಆಫ್ ಪೋಲೀಸ್ ವಿನಂತಿಸಿದರೂ ಉಪಕುಲಪತಿಗಳು ಸ್ಥಳಕ್ಕೆ ಬರುವ ಧೈರ್ಯ ತೋರಲಿಲ್ಲ…..ಘಂಟೆ ಎರಡರ ಹೊತ್ತಿಗೆ ಪ್ರತಿಭಟನಾಕಾರರು ಚದುರಿದರು.

ಸಂಜೆಯ ವೇಳೆಗೆ ಈ ಘಟನೆ ರಾಷ್ಟ್ರೀಯ ಮಟ್ಟದ ಸುದ್ದಿಯಾಯಿತು. ಬಿಟಿ ಬದನೆ ಪ್ರತಿಭಟನೆಯ ಚಿತ್ರಗಳು ಅಂತರಜಾಲದಲ್ಲಿ ಹರಿದಾಡಿದವು. ಪಿಎಂಕೆ ನಾಯಕ ರಾಮದಾಸ್ ಬಿಟಿ ಬದನೆ ತಮಿಳುನಾಡಿಗೆ ಕಾಲಿಡಕೂಡದು ಎಂದು ಗುಡುಗಿದರು.  ರಾಜಕೀಯ ನಾಯಕರು ಬಿಟಿ ಬದನೆಯ ಪರ-ವಿರೋಧ ಹೇಳಿಕೆ ಕೊಟ್ಟರು.

ಸಣ್ಣದನಿಯಲ್ಲಿ ಕೇಳಿಬರುತ್ತಿದ್ದ ಬಿಟಿ ಬದನೆಯ ವಿರೋಧಕೆ ದನಿ ಬಂದಿದ್ದು ಹೀಗೆ.