ಹೌದು! ಈವರೆಗೆ ಹತ್ತಿಯಂಥ ಕೇವಲ ಆಹಾರೇತರ ಬೆಳೆಗೆ ಸೀಮಿತವಾಗಿದ್ದ ಬಿ.ಟಿ. ತಂತ್ರಜ್ಞಾನ ಈಗ ನಮ್ಮ ಊಟದ ತಟ್ಟೆಗೂ ಬರಲಿದೆ. ಮುಂದುವರಿದ ದೇಶಗಳಲ್ಲಿ ಗ್ರಾಹಕರು ಹಾಗೂ ಪರಿಸರಪರ ಸಂಘಟನೆಗಳ ಒತ್ತಾಯದ ಮೇರೆಗೆ ನಿಷೇಧಕ್ಕೆ ಒಳಗಾದ ಕುಲಾಂತರಿ ಬೆಳೆಗಳು, ಭಾರತಕ್ಕೆ ಬರಲು ಹವಣಿಸುತ್ತಿವೆ. ಇಂಥ ಯತ್ನಗಳ ಹಿಂದೆ ಕೋಟ್ಯಂತರ ರೂಪಾಯಿ ಸುರಿಯುವ ಬಹುರಾಷ್ಟ್ರೀಯ ಕಂಪನಿಗಳ ಕರಾಳ ಹಸ್ತ ಕಾಣುತ್ತಿದೆ.

1990ರ ಆಸುಪಾಸು ಬಿ.ಟಿ.ಹತ್ತಿ ಬೆಳೆಯನ್ನು ಕರ್ನಾಟಕದ ವಿವಿಧ ಕಡೆ ಪ್ರಾಯೋಗಿಕವಾಗಿ ಬೆಳೆದಾಗ, ಅದಕ್ಕೆ ತೀವ್ರ ಪ್ರತಿರೋಧ ವ್ಯಕ್ತವಾಗಿತ್ತು. ಕರ್ನಾಟಕ ರಾಜ್ಯ ರೈತ ಸಂಘದ ಕಾರ್ಯಕರ್ತರು, ಬಿ.ಟಿ. ಹತ್ತಿಯ ಹೊಲಕ್ಕೆ ನುಗ್ಗಿ ಸಸ್ಯಗಳನ್ನು ಕಿತ್ತು ಹಾಕಿದ್ದರು. ಆದರೆ ಬಹುರಾಷ್ಟ್ರೀಯ ಕಂಪನಿಗಳ ಮಾರ್ಗವೇ ಬೇರೆ. ಪ್ರಯೋಗದ ಹೆಸರಿನಲ್ಲಿ ಮೊದಲು ಸಂಶೋಧನೆ ನಡೆಸಿ, ನಂತರ ಮಾರುಕಟ್ಟೆಗೆ ಪ್ರವೇಶಿಸಿ, ತದನಂತರ ಕೃಷಿ ಕ್ಷೇತ್ರವನ್ನು ತಮ್ಮ ಹಿಡಿತಕ್ಕೆ ತೆಗೆದುಕೊಳ್ಳುವುದು ಅವುಗಳ ಯೋಜನೆ.

ರೈತರಿಗೆ ನರವು ನೀಡುವ ನೆಪದಲ್ಲಿ ಈಗ ಮತ್ತೊಂದು ಯೋಜನೆ ಶುರುವಾಗಿದೆ. ಅದು ಬಿ.ಟಿ. ಬದನೆ.

ಬಿಟಿ ಬದನೆಯ ಪ್ರಯೋಗ ಶುರುವಾಗಿದ್ದು 2000ದಲ್ಲಿ.  ಮನ್ಸಾಂಟೋದ ಪಾಲುದಾರ ಕಂಪನಿ ಮಹಿಕೋ ಮೊದಲೆರೆಡು ವರ್ಷ ಹಸಿರು ಮನೆಯೊಳಗೆ ಬಿಟಿ ಬದನೆಯ ಪ್ರಯೋಗನಡೆಸಿತು.  2004ರಲ್ಲಿ ದೇಶದ 11 ವಿವಿಧ ಸ್ಥಳಗಳಲ್ಲಿ ಪ್ರಯೋಗಾರ್ಥವಾಗಿ ಐದು ಬಿಟಿ ಹೈಬ್ರಿಡ್ ಬದನೆಯನ್ನು ಬೆಳೆಸಲಾಯಿತು.  ದೊಡ್ಡ ಪ್ರಮಾಣದಲ್ಲಿ ಬೆಳೆಸಿನೋಡಲು ಸಿದ್ದವಾಗಿರುವ ಮಹಿಕೋದ ಬಿಟಿ ಹೈಬ್ರಿಡ್ ಬದನೆ 2009ರ ಮುಂಗಾರಿಗೆ ಮಾರುಕಟ್ಟೆಗೆ ಬರುವ ಸಿದ್ಧತೆ ನಡೆಸಿದೆ.  ಭಾರತದ ಮೊದಲ ವಂಶವಾಯಿ ಪರಿವರ್ತಿತ ಆಹಾರ ಬೆಳೆ ಎಂಬ ಕುಖ್ಯಾತಿ ಬಿಟಿಬದನೆಯದ್ದು.

ಬಿಟಿ ಬದನೆಯ ರಂಗ ಪ್ರವೇಶಕ್ಕೆ ಅನುಕೂಲವಾಗಲೆಂದು ದೇಶದ ವಿವಿಧ ಕೃಷಿ ವಿಶ್ವವಿದ್ಯಾಲಯಗಳ ಪ್ರಾಯೋಗಿಕ ತಾಕುಗಳಲ್ಲಿ ಮಹಿಕೋದ ಬಿಟಿ ಹೈಬ್ರಿಡ್‌ನ ಮೌಲ್ಯಮಾಪನ ನಡೆಯುತ್ತಿದೆ.  ಧಾರವಾಡದ ಕೃಷಿ ವಿಶ್ವವಿದ್ಯಾಲಯ ಕೂಡ ಈ ಕಾರ್ಯ ದಲ್ಲಿ ತೊಡಗಿದೆ

ವೈವಿಧ್ಯ

ನೂರಾರು ವರ್ಷಗಳಿಂದ ನಮ್ಮ ನೆಲದಲ್ಲಿ ಬೆಳೆದುಬಂದಿದ್ದ ಬದನೆ ಕಾಯಿಗೆ ಈಗ ಕುತ್ತು ಬಂದೊದಗಿದೆ. ದಿನನಿತ್ಯದ ಆಹಾರ ಹಾಗೂ ಔಷಧಿ ಪದ್ಧತಿಯಲ್ಲಿ ಬಳಕೆಯಾಗುವ ಬದನೆಯಲ್ಲಿ ನೂರಾರು ತಳಿಗಳಿವೆ. ಆಯಾ ಮಣ್ಣು, ವಾತಾವರಣ, ಆಹಾರ ಪದ್ಧತಿಗೆ ಅನುಗುಣವಾಗಿ ರೂಪುಗೊಂಡ ಬದನೆ ತಳಿಗಳ ವೈವಿಧ್ಯ ನಮ್ಮಲ್ಲಿದೆ; ಇಂಥ ತಳಿಗಳಿಗೆ ಬಿಟಿ ಜೀನ್ ಸೇರಿದರೆ ಇಡೀ ಬದನೆ ವೈವಿಧ್ಯವೇ ಕುಲಗೆಡುವ ಅಪಾಯ ಇದೆ.

ಕರ್ನಾಟಕದಲ್ಲಿ ಸಾವಯವ ಕೃಷಿಯನ್ನು ಜನಪ್ರಿಯಗೊಳಿಸಲು ಮುಂದಾದ ಮೊದಲ ಕೃಷಿ ವಿಶ್ವವಿದ್ಯಾಲಯ ಎಂಬ ಹೆಗ್ಗಳಿಕೆ ಧಾರವಾಡದ್ದು. ಕಳೆದ ಒಂದು ದಶಕದಿಂದ ಸಾವಯವ ಕೃಷಿ ಬೇರುಗಳನ್ನು ಭದ್ರಪಡಿಸುವ ಪ್ರಯತ್ನ ಇಲ್ಲಿ ನಡೆಯುತ್ತಿದೆ.  ಬಿಟಿ ಬದನೆಯ ಸಂಶೋಧನೆಗೆ ಕೈಹಾಕುವ ಮೂಲಕ ಧಾರವಾಡ ಕೃಷಿ ವಿಶ್ವವಿದ್ಯಾಲಯ ತಾನೇ ಬೋಧಿಸಿದ ಸಾವಯವ ಕೃಷಿ ಸಿದ್ಧಾಂತಗಳಿಗೆ ತಿಲಾಂಜಲಿ ನೀಡುತ್ತಿದೆ.  ಕಳೆದ ವರ್ಷದ ಹಿಂಗಾರು ಹಂಗಾಮಿನಿಂದ ಬಿ.ಟಿ. ಬದನೆಯ ಸಂಶೋಧನೆ ಕಾರ್ಯ ಆರಂಭವಾಗಿದೆ.

ಬದನೆಯ ತವರೂರು ಭಾರತ

ಬದನೆಕಾಯಿ ಹುಟ್ಟಿದ್ದೇ ಭಾರತದಲ್ಲಿ. ಕಾಡು ಬದನೆಯನ್ನು ಕೃಷಿಗೆ ಒಗ್ಗಿಸಿದ ಹೆಮ್ಮೆ ನಮ್ಮದು. ನಾಲ್ಕು ಸಾವಿರ ವರ್ಷಗಳಿಂದ ಬದನೆಯ ಕೃಷಿ ಭಾರತದಲ್ಲಿ ನಡೆಯುತ್ತಿದೆ. ರೈತರು ನೂರಾರು ತರಹದ ಬದನೆ ತಳಿಗಳನ್ನು ಅಭಿವೃದ್ಧಿಪಡಿಸಿ ಆಯಾ ಪ್ರದೇಶಕ್ಕೆ ಒಗ್ಗಿಸಿದ್ದಾರೆ.  ಎಂಟನೇ ಶತಮಾನದಲ್ಲಿ ಅರಬ್ ವರ್ತಕರು ಬದನೆಯನ್ನು ಮಧ್ಯಪ್ರಾಚ್ಯ ದೇಶಗಳಿಗೆ ಪರಿಚಯಿಸಿದರು. ಅಲ್ಲಿಂದ ಇದು ಯೂರೋಪ್‌ಗೆ ಬಂತು; ಇಡೀ ಪ್ರಪಂಚಕ್ಕೆ ಹರಡಿತು.

ನಮ್ಮ ಜನಪದರ ಹಾಡು, ಗಾದೆ ಮಾತು, ಕತೆ, ಕಾವ್ಯಗಳಲ್ಲಿ ಬದನೆ ಮಾತಾಗಿದೆ.  ವರಹಾಮಿಹಿರನ ಬೃಹತ್‌ಸಂಹಿತೆಯಲ್ಲಿ ಬದನೆಯ ಪ್ರಸ್ತಾಪ ಬರುತ್ತದೆ. ಸುರಪಾಲನ ವೃಕ್ಷಾರ್ಯವೇದ ಗ್ರಂಥದಲ್ಲಿ ಬದನೆಕಾಯಿಯ ಗಾತ್ರ ದೊಡ್ಡದು ಮಾಡುವ, ಗಿಡ ಪೋಷಿಸುವ ತಂತ್ರಗಳ ವಿವರ ಸಿಗುತ್ತದೆ. ಆರ್ಯುವೇದದಲ್ಲಿ ಇದು ಔಷಧಿಯಾಗಿ ಬಳಕೆಯಾಗುತ್ತದೆ. ಒಂದರ್ಥದಲ್ಲಿ ಬದನೆ ಭಾರತೀಯರ ಬದುಕಿನ ಭಾಗವೇ ಹೌದು.

ಈಗ ಐದು ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬದನೆಯ ಕೃಷಿ ನಡೆಯುತ್ತಿದೆ. ಟೊಮೊಟೋದ ನಂತರ ಹೆಚ್ಚು ಬೆಳೆಯುವ, ಬಳಸುವ ತರಕಾರಿಯಿದು. ವರ್ಷದ ಎಲ್ಲ ಋತುಮಾನಗಳಲ್ಲಿ ಬೆಳೆಯುವ, ಎಲ್ಲ ಮಣ್ಣಿಗೂ ಒಗ್ಗುವ ಅಪರೂಪದ ಬೆಳೆ. ಬಡವರ ತರಕಾರಿ ಎಂಬ ಹೆಗ್ಗಳಿಕೆ.

ಮಟ್ಟುಗುಳ್ಳ ಉಡುಪಿ ಸಮೀಪದ ಮುಟ್ಟು ಪ್ರದೇಶದಲ್ಲಿ ಬೆಳೆಯುವ ಬದನೆ ಮಟ್ಟುಗುಳ್ಳ ಎಂಬ ಹೆಸರಿನಿಂದಲೇ ಪ್ರಸಿದ್ಧಿ.  ದಕ್ಷಿಣಕನ್ನಡದ ಮಂದಿ ತಾವು ಹೋದೆಡೆಯೆಲ್ಲಾ ಇದನ್ನು ಪರಿಚಯಿಸಿದ್ದಾರೆ.

ದುಂಡಗೆ ಇದ್ದು ಚೆನ್ನಾಗಿ ಬೆಳೆದರೆ ಬೊಗಸೆ ತುಂಬಾ ಕೂತುಕೊಳ್ಳುವ ಮಟ್ಟುಗುಳ್ಳ ಸ್ವಾದಿಷ್ಠ ಬದನೆ.  ಗುಳ್ಳದ ಮುಕ್ಕಾಲು ಭಾಗ ಕಡು ಹಸಿರು, ತೊಟ್ಟಿನ ಭಾಗ ಸೂರ್ಯನ ಕಿರಣದಂತೆ ಚೂಪು ಚೂಪಾಗಿ ಬಿಳಿಯ ಪಟ್ಟೆಗಳಿರುತ್ತವೆ. ತೊಟ್ಟಿನ ಮೇಲೆ ಮುಳ್ಳುಗಳಿರುತ್ತವೆ.

ಕರಾವಳಿಯ ಬದನೆ ತಳಿ

ನೀಲಿ ಗೆರೆ ಇರುವ ಬದನೆ ಒಂದು ಜಾತಿಯದು. ಇನ್ನೊಂದು ಜಾತಿಯ ಬದನೆ ಸುಮಾರು ಒಂದು ಕೆ.ಜಿ. ಗಾತ್ರದ ಕಾಯಿ ಕೊಡುತ್ತದೆ. ಇದನ್ನು ಪೇರಂಪಳ್ಳಿ ಬದನೆ ಎಂದೂ ಹೇಳುವುದುಂಟು.

ಮುಸುಕು ಬದನೆ : ತೊಟ್ಟಿನಭಾಗ ಮುಚ್ಚಿಕೊಂಡಿರುವ ಬಹುವಾರ್ಷಿಕ ಬದನೆ. ನೋಡಿದವರು ಬದನೆಯೇ ಎಂದು ಸಂಶಯಿಸುವ ತಳಿ. ಮನೆ ಬಳಕೆಗೆ ಸೂಕ್ತ. ಕಾಯಿ ಮೃದುವಾಗಿದ್ದು  ಅಡಿಗೆಗೆ ರುಚಿಕರವಾಗಿರುತ್ತದೆ.

ಕೊತ್ತಿತಲೆ ಬದನೆ: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಬಹುವಾರ್ಷಿಕ ಬದನೆತಳಿ ಮಾಗಡಿ, ರಾಮನಗರ ಹಳ್ಳಿಗಳ ರೈತರ ಮನೆ ಮುಂದೆ ಒಂದೆರಡು ಗಿಡಗಳು ಕಾಣಸಿಗುತ್ತವೆ. ವರ್ಷಪೂರ ಮನೆಬಳಕೆಗೆ ಕಾಯಿ ಸಿಗುತ್ತದೆ. ಕಾಯಿಗಳು ಬೆಕ್ಕಿನತಲೆಯ ಗಾತ್ರಕ್ಕೆ ಇರುವುದರಿಂದ ಕೊತ್ತಿತಲೆ ಬದನೆ ಎಂಬ ಹೆಸರು ಬಂದಿದೆ. ಹಳ್ಳಿಗರ ಭಾಷೆಯಲ್ಲಿ ಕೊತ್ತಿ ಎಂದರೆ ಬೆಕ್ಕು.

ಈರಂಗೆರೆ ಬದನೆ: ಮೈಸೂರಿನ ಮೂಲದ ತಳಿ. ನೀಳವಾದ ಹಸಿರು ಕಾಯಿ ಹಾವನ್ನು ಹೋಲುತ್ತದೆ. ತಿಪಟೂರು ಭಾಗದಲ್ಲಿ ಬಹುವಾರ್ಷಿಕ ತಳಿಯಾಗಿ ಮನೆ ಮುಂದೆ ಬೆಳೆಸಿಕೊಳ್ಳುತ್ತಾರೆ.

ಸಿರ್ಸಿ ತಾಲ್ಲೂಕಿನಲ್ಲಿ ಚೋಳಬದನೆ, ಬಿಳಿ ಬದನೆ, ಗುಂಡು ಬದನೆ, ಮುಳ್ಳುಗಾಯಿ ತಳಿಗಳಿವೆ. ಹಾಲಕ್ಕಿ ಒಕ್ಕಲಿಗರು ಕೆಂಪು ಬದನೆ, ಬಿಳಿ ಬದನೆ, ಜೋಳ ಬದನೆಯನ್ನು ದೊಡ್ಡ ಪ್ರಮಾಣದಲ್ಲಿ ಬೆಳೆಸುತ್ತಾರೆ. ಯಲ್ಲಾಪುರ ಭಾಗದಲ್ಲಿ ಕರಿಬದನೆ, ಬಿಳಿಬದನೆ, ಪಟ್ಟೆಬದನೆ, ಬಾಸಲಬದನೆ ತಳಿಗಳಿವೆ. ಜಮಖಂಡಿ ಭಾಗದಲ್ಲಿ ಕಡಬಟ್ಲ ಬದನೆ, ಬೆಟಗೇರಿ ಕಾಯಿ ತಳಿ ಇವೆ. ಕಲಘಟಗಿ ಪ್ರದೇಶದಲ್ಲಿ ಹಸಿರು ಬದನೆ, ಕರಿ ಬದನೆ, ಹಿತ್ತಲ ಬದನೆ, ಮರ ಬದನೆ ತಳಿ ಇವೆ.  ಬೆಳಗಾಂ ಭಾಗದಲ್ಲಿ ಬೆಳವಂಕಿ ಬದನೆ ಗೋರಬಾಳ ಬದನೆ ಎಂಬ ತಳಿಗಳಿದ್ದವು ಈಗ ಕಣ್ಮರೆಯಾಗಿವೆ.

ಆಯಸ್ಸು ಮುಗಿದು ಬಂದಳಿಕೆ ಬಂದ ಗಿಡವನ್ನೇ ಟ್ರಿಮ್ ಮಾಡಿ, ಮತ್ತೆ ಮರು ನೆಟ್ಟು ನಾಲ್ಕೈದು ವರ್ಷ ಕಾಯಿ ಪಡೆದ ಕೊಂಟು ಬದನೆ, ಕಾಡು ಸುಂಡೆಗಿಡಕ್ಕೆ ಊರು ಬದನೆ ಕಸಿಮಾಡುವ ದೇಸಿ ಪದ್ಧತಿಗಳು ಇವತ್ತಿಗೂ ಜೀವಂತವಾಗಿವೆ.

ಅಗತ್ಯವಾದರೂ ಏನು..?

ಬದನೆಕಾಯಿ ಬೆಳೆಯನ್ನೇ ನಂಬಿಕೊಂಡು ಕೃಷಿ ಮಾಡುತ್ತಿರುವವರಿಗೆ ಕೀಟಬಾಧೆಯಿಂದ ಬೆಳೆ ಹಾನಿ ತಪ್ಪಿಸಲು ಬಿ.ಟಿ. ಬದನೆ ತಳಿ ಬಿಡುಗಡೆ ಮಾಡುವುದಾಗಿ ಕಂಪನಿಗಳು ಪ್ರತಿಪಾದಿಸುತ್ತಿವೆ. ಹಾಗಾದರೆ ಈ ಕಂಪನಿಯ ಸಂಶೋಧಕರು ಮಾಡುತ್ತಿರುವುದಾದರೂ ಏನು?

ಮಣ್ಣಿನಲ್ಲಿ ಬ್ಯಾಸಿಲಸ್ ಥುರನ್‌ಜೆನಿಸಸ್ ಎಂಬ ಬ್ಯಾಕ್ಟೀರಿಯಾ ಇರುತ್ತವೆ.  ಇವನ್ನೇ ಬಿ.ಟಿ. ಎನ್ನುವುದು. ಕಾಯಿ ಮತ್ತು ಕಾಂಡಕೊರಕ ಕೀಟಗಳಿಗೆ ಮಾರಕವಾಗಬಲ್ಲ ಪ್ರೋಉತ್ಪಾದಿಸುವ ಸಾಮರ್ಥ್ಯ ಬಿ.ಟಿ. ಬ್ಯಾಕ್ಟೀರಿಯಾಗಳಿಗಿದೆ. ಕೀಟಗಳಿಗೆ ಮೃತ್ಯುಕಾರಕವಾಗುವ ಬ್ಯಾಕ್ಟೀರಿಯಾದ ವಂಶವಾಹಿ (ಬಿ.ಟಿ. ಜೀನ್)ಯನ್ನು ನಾಜೂಕಾಗಿ ಕತ್ತರಿಸಿ, ಗನ್ ಬಳಸಿ, ಗುಂಡು ಹೊಡೆದು ಬದನೆಗಿಡದ ಜೀವಕೋಶಕ್ಕೆ ಸೇರಿಸುತ್ತಾರೆ.  ನೆನಪಿರಲಿ! ಇದು ದರ್ಜಿ ಕತ್ತರಿ ಹಿಡಿದು ಬಟ್ಟೆ ಕತ್ತರಿಸಿದಂತಲ್ಲ. ಸೂಕ್ಷ್ಮಾತಿಸೂಕ್ಷ್ಮವಾದ ಬಿ.ಟಿ. ಜೀನ್‌ನ್ನು ಪತ್ತೆ ಹಚ್ಚಿ, ಬದನೆಯ ಜೀವಕೋಶಕ್ಕೆ ಸೇರಿಸಲು ಅತ್ಯಾಧುನಿಕ ಸೂಕ್ಷ್ಮದರ್ಶಕ ಯಂತ್ರ, ಸಾಧನ- ಸಲಕರಣೆ ಬೇಕು.  ಕೋಟ್ಯಂತರ ಡಾಲರ್ ಖರ್ಚಿನ ಬಾಬ್ತು ಇದು.  ತನ್ನೊಳಗೆ ಬಿ.ಟಿ. ಜೀನ್‌ನ್ನು ಸೇರಿಸಿಕೊಳ್ಳುವ ಬದನೆ ಗಿಡ, ಮೈತುಂಬ ವಿಷ ತುಂಬಿಕೊಂಡ ಪೂತನಿಯಾಗುತ್ತದೆ. ಕಾಯಿ, ಕಾಂಡಕೊರಕ ಹುಳುಗಳು ಬಿ.ಟಿ. ಬದನೆಯ ಕಾಯಿ, ಎಲೆ ತಿಂದರೆ, ಅವುಗಳ ಜೀರ್ಣಾಂಗ ವ್ಯವಸ್ಥೆ ಹದಗೆಟ್ಟು ಸಾವನ್ನಪ್ಪುತ್ತವೆ. ಔಷಧಿ ಸಿಂಪಡಿಸುವ ತರಲೆ, ತಾಪತ್ರಯ ಇಲ್ಲ. ಇಳುವರಿ ತನ್ನಿಂದ ತಾನೇ ಹೆಚ್ಚುತ್ತದೆ.

ಅರೆ! ಎಂಥ ಅದ್ಧುತ ತಂತ್ರಜ್ಞಾನ?, ಎಂದು ಅಚ್ಚರಿ ಪಡುತ್ತೀರಾ? ಸ್ವಲ್ಪ ನಿಲ್ಲಿ.  ಜೀನ್ ಜೊತೆಗಿನ ಚೆಲ್ಲಾಟ ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ವೈರಿಯ ಜೊತೆ ಸೆಣಸಿದಂತೆ.  ನಾವಂದುಕೊಂಡಂತೆ ಆಗಬೇಕೆಂದೇನೂ ಇಲ್ಲ. ಬ್ಯಾಕ್ಟೀರಿಯಾದಿಂದ ಪ್ರತ್ಯೇಕಿಸಿದ ಜೀನ್ ಪರಿಣಾಮಕಾರಿಯಾದರೂ, ಗಿಡದೊಳಗೆ ಹೋದ ನಂತರ ನಿಷ್ಕ್ರಿಯವಾಗಬಹುದು. ಸೃಷ್ಟಿಗೊಂಡ ಹೊಸ ತಳಿ ಹೊಸ ಸಮಸ್ಯೆಗಳನ್ನು ತಂದೊಡ್ಡಬಹುದು. ಇದೆಲ್ಲಕ್ಕಿಂತ ಮುಖ್ಯವಾಗಿ ಬ್ಯಾಕ್ಟೀರಿಯಾದಿಂದ ಜೀನ್ ಪ್ರತ್ಯೇಕಿಸುವ ತಂತ್ರಜ್ಞಾನ ಮಾನ್ಸಾಂಟೋದಂಥ ಬಹುರಾಷ್ಟ್ರೀಯ ಕಂಪನಿಗಳ ಕೈಯಲ್ಲಿದೆ. ಬಿ.ಟಿ. ತಳಿಗಳ ಅಭಿವೃದ್ಧಿಗೆ ಬೇಕಾದ ಬಿ.ಟಿ. ಜೀನ್, ತಂತ್ರಜ್ಞಾನ ಬೇಕೆಂದರೆ ಮಾನ್ಸಂಟೋದ ಮೊರೆ ಹೋಗಬೇಕು. ಭಾರತದಲ್ಲಿ ಮಾನ್ಸಂಟೋದ ಪಾಲುದಾರ ಮಹಿಕೋ ಬೀಜ ಕಂಪನಿ ಬಿ.ಟಿ. ಜೀನ್‌ನನ್ನು ಬದನೆ ಗಿಡದೊಳಗೆ ಕಸಿಮಾಡುವ ತಂತ್ರಜ್ಞಾನಕ್ಕೆ ಪೇಟೆಂಟ್ ಪಡೆಯಲು ಅರ್ಜಿಹಾಕಿ ಕಾಯುತ್ತಿದೆ.

ಬಿ.ಟಿ. ಬದನೆಯ ಅಪಾಯಗಳು

ಬಿ.ಟಿ. ಬದನೆಯ ತಂತ್ರಜ್ಞಾನ ಸಿದ್ಧಗೊಂಡಿದ್ದು 2000ನೇ ವರ್ಷದಲ್ಲಿ. ಬಿ.ಟಿ. ಬದನೆಯ ಸುರಕ್ಷತೆಯ ಪ್ರಯೋಗಗಳೆಲ್ಲಾ ಕೇವಲ ಆರು ವರ್ಷದ ಅವಧಿಯವು.  ಮನುಷ್ಯನ ಆರೋಗ್ಯಕ್ಕೆ ಯಾವುದೇ ಅಪಾಯ ಇಲ್ಲ ಎಂದು ಮಹಿಕೊ ವರದಿ ಮಾಡಿದೆ. ದೂರಗಾಮಿ ಪರಿಣಾಮಗಳ ಬಗ್ಗೆ ನಮಗೆ ಏನೇನೂ ಗೊತ್ತಿಲ್ಲ.  60ರ ದಶಕದಲ್ಲಿ ಹಸಿರು ಕ್ರಾಂತಿಯ ಕಾಲದಲ್ಲೂ ವಿಜ್ಞಾನಿಗಳು ಮತ್ತು ಕಂಪನಿಗಳು ಇದೇ ಮಾತು ಆಡಿದ್ದರು.  ಮುಂದೆ ಏನಾಯಿತೆಂದು ಎಲ್ಲರಿಗೂ ಗೊತ್ತು.  ಬಿಟಿ ಬದನೆಯ ವಿರೋಧಿಗಳು ಒಮ್ಮೆ ಬಿಟಿಜೀನ್ ಪ್ರಕೃತಿಯಲ್ಲಿ ಸೇರಿದರೆ ಮತ್ತೆ ವಾಪಸ್ ತರಲಾಗದು.  ಅದರ ಅವಘಡಗಳನ್ನು ನೋಡುವುದಷ್ಟೇ ನಮ್ಮ ಕೆಲಸ ಎನ್ನುತ್ತಾರೆ; ಡಿಡಿಟಿಯ ಹಾಗೆ. ಬಿ.ಟಿ. ಬದನೆಯ ಸಂಭವನೀಯ ಅಪಾಯಗಳು ಹೀಗಿವೆ.

ಬಿ.ಟಿ. ಬದನೆ ತಿಂದ ಮನುಷ್ಯನ ಜೀರ್ಣಾಂಗದ ಕರುಳಿನ ಬ್ಯಾಕ್ಟೀರಿಯಾಗಳಿಗೆ ಬಿ.ಟಿ. ಜೀನ್ ವರ್ಗಾವಣೆಯಾಗುವ ಅಪಾಯ ಇದೆ.  ಇದರಿಂದ ಮನುಷ್ಯನ ನಿರೋಧಕ ಶಕ್ತಿಯ ಮೇಲೆ ಅಡ್ಡ ಪರಿಣಾಮ ಮತ್ತು ಜೀವಕೋಶಗಳು ಅಸಹಜವಾಗಿ ಬೆಳೆಯುವ ಸಾಧ್ಯತೆ ಇದೆ.

ಬಿ.ಟಿ. ತಳಿಗಳಿಗೆ ರಸಹೀರುವ ಕೀಟಗಳು ಹೆಚ್ಚು ದಾಳಿ ಮಾಡುತ್ತವೆ ಎಂಬ ಸಂಗತಿಯನ್ನು ಸರ್ಕಾರಿ ದಾಖಲೆಗಳೇ ಹೇಳುತ್ತವೆ.  ರೈತ ಕೀಟನಾಶಕಗಳ ಬಳಕೆಗೆ ಮತ್ತೆ ಹಣ ಖರ್ಚು ಮಾಡಲೇ ಬೇಕು. ಹೀಗಾಗಿ ಬಿ.ಟಿ. ಹತ್ತಿ ಬೆಳೆದ ವಿದರ್ಭದ ರೈತರು ಆತ್ಮಹತ್ಯೆಗೆ ಶರಣಾದರು.

ಬೆಳೆಯ ನಂತರ ಗಿಡದ ಬಿ.ಟಿ. ಜೀನ್ ಮಣ್ಣಿನ ಬ್ಯಾಕ್ಟೀರಿಯಾಗಳಿಗೆ ವರ್ಗಾವಣೆಯಾಗುವ ಸಾಧ್ಯತೆ ಇದೆ. ಬಿ.ಟಿ. ಬೀಟ್‌ರೂಟ್‌ನಲ್ಲಿ ಇಂಥದ್ದು ಆಗಿದೆ. ಮಣ್ಣಿನ ಸೂಕ್ಷ್ಮಜೀವಿಗಳ ಮೇಲೆ ಬಿ.ಟಿ. ಪರಿಣಾಮದ ಅಧ್ಯಯನಗಳೇ ನಡೆದಿಲ್ಲ ಎನ್ನುತ್ತಾರೆ ಡಾ. ಸ್ವಾಮಿನಾಥನ್ ಸಂಶೋಧನಾ ಪ್ರತಿಷ್ಠಾನದ ಹಿರಿಯ ವಿಜ್ಞಾನಿ ಡಾ. ಬಾಲರವಿ.

ಕೃಷಿ ಇಲಾಖೆ ಕರ್ನಾಟಕದ ಎಲ್ಲಾ ತಾಲ್ಲೂಕುಗಳಲ್ಲಿ ಸಾವಯವ ಗ್ರಾಮ ಯೋಜನೆ ಆರಂಭಿಸಿದೆ. ಸಾವಯವ ಧೃಡೀಕರಣ ಮಾಡಲು ಪ್ರತಿ ಯೋಜನೆಗೆ ತಲಾ 30,000 ನೀಡಿದೆ. ವಂಶವಾಹಿ ಪರಿವರ್ತಿತ ಬೆಳೆಗಳಿಗೆ ಸಾವಯವ ದೃಡೀಕರಣ ನೀಡುವಂತಿಲ್ಲ.  ಬಿ.ಟಿ. ಬದನೆಯನ್ನು ಸಾವಯವದಲ್ಲಿ ಬೆಳೆದರೂ ರೈತ ಅದನ್ನು ಸಾವಯವ ಲೇಬಲ್ ಹಚ್ಚಿ ಮಾರುವಂತಿಲ್ಲ.

ಬಿ.ಟಿ. ಬೆಳೆ ತಿಂದ ಕುರಿಗಳು ಸಾವನ್ನಪ್ಪಿದ, ಬಿಟಿ ಬೆಳೆಯ ಹೊಲದಲ್ಲಿ ಕೆಲಸ ಮಾಡುವವರಿಗೆ ತುರಿಕೆ, ದದ್ದುಗಳು ಎದ್ದ ವರದಿಗಳು ಪ್ರಕಟವಾಗಿವೆ.

ಬಿ.ಟಿ. ಹಿಂದಿನ ತಥ್ಯ

ಬದನೆಗೆ ಕೀಟಗಳು ದಾಳಿ ಮಾಡಿದರೆ, ಅದರಿಂದ ಬೆಳೆ ಹಾನಿ ಸಂಭವಿಸುತ್ತದೆ. ಇಳುವರಿ ಕುಸಿಯುತ್ತದೆ ಎಂಬ ಹಿನ್ನೆಲೆಯಲ್ಲಿ ಬಿ.ಟಿ. ಬದನೆ ಸೃಷ್ಟಿಸಿದ್ದಾಗಿ ಕಂಪನಿಗಳು ಹೇಳುತ್ತಿವೆ

ಆದರೆ ಕುತೂಹಲದ ಸಂಗತಿ ಎಂದರೆ, ದೇಶದಲ್ಲಿ ಬದನೆ ಇಳುವರಿ ಬಿಕ್ಕಟ್ಟು ಸೃಷ್ಟಿಯಾಗಿಯೇ ಇಲ್ಲ! ಇದಕ್ಕೆ ಬದಲಾಗಿ, ಪ್ರತಿವರ್ಷ ರೈತರು ಹೆಚ್ಚಿನ ಇಳುವರಿ ಪಡೆಯುತ್ತಿದ್ದು, ಅವರ ಶ್ರಮಕ್ಕೆ ತಕ್ಕ ಬೆಲೆ ಮಾತ್ರ ಸಿಗುತ್ತಿಲ್ಲ. ರೈತರ ಉತ್ಪನ್ನಕ್ಕೆ ಸೂಕ್ತ ಬೆಲೆ ಖಚಿತವಾಗಿ ಸಿಗದ ಈ ನಾಡಿನಲ್ಲಿ, ಬಿ.ಟಿ. ಬದನೆಗೆ ಅವಕಾಶ ಕೊಡುವ ಯಾವುದೇ ನಿರ್ಧಾರ ಸಮರ್ಪಕ ಅಲ್ಲ.

ಕೀಟಬಾಧೆಗೆ ರೈತರು ತಮ್ಮದೇ ಆದ ಪರ್ಯಾಯ ಪರಿಹಾರಗಳನ್ನು ಕಂಡುಕೊಂಡಿದ್ದಾರೆ. ಪರಿಸರಸ್ನೇಹಿ ಕೀಟ ನಿಯಂತ್ರಣ ಪದ್ಧತಿಗಳು, ಬೆಳ್ಳುಳ್ಳಿ, ಮೆಣಸಿನಕಾಯಿ, ಬೇವಿನ ಎಣ್ಣೆ ಬಳಸಿ ಜೈವಿಕ ಕೀಟನಾಶಕಗಳು ಕೀಟನಿಯಂತ್ರಣಕ್ಕೆ ಸುಲಭ ವಿಧಾನ.

ಕೇವಲ ತರಕಾರಿ ಎಂದಷ್ಟೇ ಅಲ್ಲ; ಬದನೆಯನ್ನು ಔಷಧಿಗಳ ರೂಪದಲ್ಲೂ ಬಳಸಲಾಗುತ್ತದೆ. ಆಯುರ್ವೇದದಲ್ಲಿ ಬದನೆಯನ್ನು ವಿವಿಧ ಔಷಧಿಗಳ ತಯಾರಿಕೆಯಲ್ಲಿ ಉಪಯೋಗಿಸುತ್ತಾರೆ. ಇಂಥ ಸಂದರ್ಭದಲ್ಲಿ ಬಿ.ಟಿ. ಬದನೆ ತಳಿ ಬಳಕೆ ಪ್ರಶ್ನಾರ್ಹವಾಗಿಯೇ ಉಳಿಯುತ್ತದೆ.

ಕೃಷ್ಣನ ಪಾದ ಸೇರಲಿರುವ ಉಡುಪಿಗುಳ್ಳ.. !

ಬದನೆಗೆ ಸಾವಿರಾರು ವರ್ಷಗಳ ಇತಿಹಾಸವಿದೆ. ರಾಮಾಯಣ, ಬೌದ್ಧ, ಜೈನ ಕೃತಿಗಳ ಜತೆಗೆ, ಉತ್ತರಾಧ್ಯಯನ ಸೂತ್ರ, ಪ್ರಜಾಪಾನ ಸೂತ್ರ, ಜಾತಕದಲ್ಲಿ ಬದನೆಯ ಉಲ್ಲೇಖವಿದೆ. ಸಂಸ್ಕೃತದಲ್ಲಿ ಇದಕ್ಕೆ ವರ್ತಕು, ವೃತಂಕ, ವಾಂತಕಿ, ವಂತಿಕಾ ಎಂದು ಕರೆದರೆ, ಪರ್ಶಿಯನ್ ಭಾಷೆಯಲ್ಲಿ ಬಧಿಂಜನ್ ಹಾಗೂ ಅರಬ್ ಭಾಷೆಯಲ್ಲಿ ಅಲ್-ಬದಿಂಜನ್ ಎನ್ನುವುದೂ ಉಂಟು.

ಅರಬ್ಬರು ಬದನೆಯನ್ನು 16ನೇ ಶತಮಾನದಲ್ಲಿ ಯೂರೋಪ್‌ಗೆ ಪರಿಚಯಿಸಿದರು. ಇದರ ಕಾಯಿಗಳ ಮೊಟ್ಟೆ ಆಕಾರದಲ್ಲಿ ಇರುವುದರಿಂದ ಉತ್ತರ ಅಮೆರಿಕ ಖಂಡದಲ್ಲಿ ಇದನ್ನು ಎಗ್ ಪ್ಲಾಂಟ್ ಎಂದೇ ಕರೆಯಲಾಗುತ್ತದೆ!

ಗುಳ್ಳ ಬದನೆ ಕರಾವಳಿಯ ವಿಶಿಷ್ಟ ಬದನೆ. ಉಡುಪಿ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬೆಳೆಯುವ ಈ ಬದನೆಯಲ್ಲಿ ಹತ್ತಾರು ತಳಿಗಳಿವೆ. ಇವುಗಳಲ್ಲಿ ಮಟ್ಟುಗುಳ್ಳ ಮತ್ತು ಪೆರಂಪಲ್ಲಿ ಗುಳ್ಳ ಜನಪ್ರಿಯ ಬದನೆ ತಳಿಗಳು.

ಮಟ್ಟುಗುಳ್ಳ- ಈ ತಳಿಯ ಬದನೆ ಪವಿತ್ರ ಎಂಬುದು ಭಕ್ತರ ನಂಬಿಕೆ. 15ನೇ ಶತಮಾನದಲ್ಲಿದ್ದ ಶ್ರೀ ವಾದಿರಾಜ ಯತಿಗಳು ಉಡುಪಿ ಬಳಿಯ ಮಟ್ಟು ಗ್ರಾಮದ ಜನತೆಗೆ ವಿಶೇಷ ಬದನೆ ಬೀಜಗಳನ್ನು ನೀಡಿದ್ದರು ಎನ್ನಲಾಗಿದೆ. ಮಟ್ಟುಗುಳ್ಳದಿಂದ ಮಾಡಿದ ವಿಶೇಷ ಖಾದ್ಯಗಳನ್ನು ಉಡುಪಿ ಪರ್ಯಾಯ ಪೀಠಾರೋಹಣ ಉತ್ಸವದ ಸಂದರ್ಭದಲ್ಲಿ ಬಳಸುವ ಸಂಪ್ರದಾಯ ಇದೆ.

ಶ್ರೀ ವಾದಿರಾಜರು ದೇಶದಾದ್ಯಂತ ಪ್ರವಾಸ ಮಾಡಿ, ತೀರ್ಥ ಪ್ರಬಂಧ ಎಂಬ ಕೃತಿ ರಚಿಸಿದ್ದಾರೆ. ಇದರಲ್ಲಿ ಅನೇಕ ಪವಿತ್ರ ಕ್ಷೇತ್ರಗಳ ಬಗ್ಗೆ ವರ್ಣಿಸಲಾಗಿದೆ. ನವದ್ವೀಪದ ಗಂಗಾಸಾಗರ ಇಂಥ ಕ್ಷೇತ್ರಗಳಲ್ಲಿ ಒಂದು (ಈಗ ಇದು ಪಶ್ಚಿಮ ಬಂಗಾಳದಲ್ಲಿದೆ). ಶ್ರೀ ವಾದಿರಾಜರು ಬದನೆ ಬೀಜಗಳನ್ನು ಅಲ್ಲಿಂದ ತಂದು, ಮಟ್ಟು ಗ್ರಾಮದ ಭಕ್ತರಿಗೆ ನೀಡಿರಬಹುದು ಎನ್ನಲಾಗಿದೆ.

ಮಟ್ಟು ಊರಿನ ನೆಲದಲ್ಲಿ ಬೆಳೆದ ಈ ಗುಳ್ಳದ ರುಚಿ ವಿಶಿಷ್ಟ. ಕರಾವಳಿಗರು ಎಲ್ಲೇ ಇರಲಿ, ಅವರಿಗೆ ಗುಳ್ಳ ಬೇಕು. ಅರಬ್ ರಾಷ್ಟ್ರಗಳಿಗೆ ಇದು ರಫ್ತಾಗುತ್ತದೆ. ಮುಂಬೈ, ಬೆಂಗಳೂರಿಗೆ ಪ್ರತಿದಿನ ಗುಳ್ಳ ಬದನೆ ಬರುತ್ತದೆ.

ಗುಳ್ಳ ಬದನೆಯ ವಾಣಿಜ್ಯ ಪ್ರಾಮುಖ್ಯವನ್ನು ಮನಗೊಂಡ ತೋಟಗಾರಿಕೆ ಇಲಾಖೆ ಭೂಗೋಳಿಕ ಗುರುತಿಸುವಿಕೆಗೆ (ಜಿಐ) ನೊಂದಾಯಿಸಲು ಮಟ್ಟುಗುಳ್ಳವನ್ನು ಆಯ್ಕೆ ಮಾಡಿಕೊಂಡಿದೆ. ಕೃಷಿ ವಿವರ, ತಳಿಯ ಇತಿಹಾಸ, ವಂಶವಾಹಿ ನಕ್ಷೆ ಮಾಡುವ ಕಾರ್ಯ ಆರಂಭಿಸಿದೆ.  ಭೂಗೋಳಿಕ ಗುರುತುಸುವಿಕೆ ಪ್ರಮಾಣ ಪತ್ರ ಪಡೆದ ತಳಿಗಳಿಗೆ ಬಿಟಿ ಜೀನ್ ಸೇರಿಸುವಂತಿಲ್ಲ.

ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಅಧೀನದಲ್ಲಿರುವ ಬ್ರಹ್ಮಾವರ ಸಂಶೋಧನಾ ಕೇಂದ್ರದಲ್ಲಿ ಬಿ.ಟಿ. ಜೀನ್ ಸೇರಿಸಿದ ಗುಳ್ಳ ಬದನೆಗಳನ್ನು ಬೆಳೆಸಲಾಗಿದೆ. ತೆರೆದ ಬಯಲಿನಲ್ಲಿ ಪ್ರಯೋಗಾತ್ಮಕವಾಗಿ ಬಿ.ಟಿ. ಬೆಳೆಯಲು ಪ್ರಪಂಚದ ಯಾವುದೇ ಭಾಗದಲ್ಲಿ ಅನುಮತಿ ಇಲ್ಲ.

ಕರಾವಳಿ ಭಾಗದ ಜೀವವೈವಿಧ್ಯದ ಬಗ್ಗೆ ಆಳವಾದ ಅಧ್ಯಯನ ನಡೆಸಿರುವ ಡಾ. ಎನ್. ಮಧ್ಯಸ್ಥ ಮಟ್ಟುಗುಳ್ಳಕ್ಕೆ ಬಿ.ಟಿ. ಜೀನ್ ಸೇರಿಸಿದರೆ, ತಳಿಯ ವಂಶವಾಹಿ ಕುಲಗೆಡುವ ಅಪಾಯವಿದೆ ಎಂಬ ಸಂಗತಿಯನ್ನು ಕರೆಂಟ್ ಸೈನ್ಸ್ ಪತ್ರಿಕೆಯಲ್ಲಿ ದಾಖಲಿಸಿದ್ದಾರೆ.

ಬದನೆ ನಮ್ಮ ಹಿತ್ತಲಿನ ತರಕಾರಿ; ಸಂಸ್ಕೃತಿಯ ಭಾಗ.  ನಮ್ಮ ಹಿರಿಯರು ಪೋಷಿಸಿ ತಂದ ಈ ವೈವಿಧ್ಯವನ್ನು ಶ್ರೀಮಂತಗೊಳಿಸಿ ನಮ್ಮ ಮುಂದಿನ ಪೀಳಿಗೆಗೆ ಕೊಡಬೇಕು. ಅದಾಗದಿದ್ದರೆ ಅದನ್ನು ಕುಲಗೆಡಿಸುವ ಪ್ರಯತ್ನ ಖಂಡಿತ ಬೇಡ.