ಒಂದೆಡೆ ಸರ್ಕಾರಿ ಬಿತ್ತನೆ ಬೀಜಕ್ಕಾಗಿ ಕೋಲಾಹಲ. ಇನ್ನೊಂದೆಡೆ ರೈತ ಮಹಿಳೆಯರೇ ಸಂಘಟಿಸುವ ಬೀಜ ವಿನಿಮಯ ಮೇಳ. ತಳಿ ಮಾರುಕಟ್ಟೆಯಲ್ಲಿ ಅಪಾರ ಬೆಲೆಯುಳ್ಳ ಅಮೂಲ್ಯ ನಾಟಿಬೀಜಗಳನ್ನು ಮಣ್ಣಿನ ಮಕ್ಕಳು ಜತನದಿಂದ ಸಂಗ್ರಹಿಸಿದ್ದಾರೆ. ಏನುಂಟು… ಏನಿಲ್ಲ! ಬನ್ನಿ ದೇಶದ ಮೊದಲ ಬೀಜ ಕ್ರಾಂತಿಯನ್ನು ಕಣ್ಣಾರೆ ವೀಕ್ಷಿಸಿ

ಈ ಬಾರಿ ಯಾವ ಬೆಳೆ ಬೆಳೆದರೆ ಲಾಭವಾದೀತು ಎಂದು ಯೋಚಿಸುತ್ತ ಉಳುಮೆ ಮುಗಿಸಿದ ರೈತ ಬಿತ್ತನೆ ಬೀಜ ಖರೀದಿಗೆ ಬರುತ್ತಾನೆ.

ಆ ಕಡೆ…

  • ಬಿತ್ತನೆ ಬೀಜ ಕೊಳ್ಳಲು ರೈತರ ನೂಕುನುಗ್ಗಲು; ಬೀಜ ವಿತರಣೆ ಕೇಂದ್ರಕ್ಕೆ ಪೊಲೀಸರ ರಕ್ಷಣೆ.
  • ರಿಯಾಯಿತಿ ಬೀಜವನ್ನು ಪೊಲೀಸ್ ಅಧಿಕಾರಿಯೊಬ್ಬರು ಸರ್ಕಾರದ ಜೀಪಿನಲ್ಲೇ ಸ್ವಂತಕ್ಕೆ ಸಾಗಿಸಿದರು… ಎಲಾ!
  • ಸಬ್ಸಿಡಿ ಬೀಜಗಳನ್ನು ಲಾಭಕ್ಕೆ ಮಾರುತ್ತಿದ್ದ ವ್ಯಾಪಾರಿಯ ಬಂಧನ
  • ರೈತರಿಗೆ ಬೀಜ ವಿತರಣೆಯಲ್ಲಿ ತಾರತಮ್ಯವಾಗಿದೆ ಎಂಬ ದೂರಿನ ಕುರಿತು ತಾಲ್ಲೂಕು ಪಂಚಾಯಿತಿಯಲ್ಲಿ ಬಿಸಿಬಿಸಿ ಚರ್ಚೆ

ಶೇಂಗಾ ಬಿತ್ತನೆ ಬೀಜದ ಕೊರತೆ ಕಂಡುಬಂದಿದ್ದು, ಶಾಸಕರಿಂದ ವಿಧಾನಪರಿಷತ್ತಿನಲ್ಲಿ ಗಲಾಟೆ…

ಈ ಕಡೆ…

ಹಾವೇರಿಯ ಚಿನ್ನಿಕಟ್ಟೆ ಗ್ರಾಮದಲ್ಲಿ ಮಿಂಚು ಸಮುದಾಯ ಬೀಜ ಬ್ಯಾಂಕ್ ಇದೆ. ಕೇವಲ ಸಹಿ ಮಾಡುವಷ್ಟು ‘ವಿದ್ಯಾವಂತ’ಳಾದ ಗಂಗಮ್ಮ ಇದರ ವ್ಯವಸ್ಥಾಪಕಿ. ಹತ್ತು ರೂಪಾಯಿ ಕೊಟ್ಟು ಹೆಸರು- ವಿಳಾಸ ನಮೂದಿಸಿ ತಮಗೆ ಬೇಕೆನಿಸಿದ ಬೀಜಗಳನ್ನು ಇಲ್ಲಿಂದ ರೈತರು ತೆಗೆದುಕೊಂಡು ಹೋಗುತ್ತಾರೆ. ಹಾಂ.. ಇದಕ್ಕೆ ಹಣ ಕೊಡಬೇಕಿಲ್ಲ. ಈ ಬಾರಿ ಒಯ್ದ ಬೀಜಗಳ ಎರಡು ಪಟ್ಟು ಬೀಜವನ್ನು (ಕೊಯ್ಲಿನ) ನಂತರ ನೀಡಿದರಾಯ್ತು.

  • ಕೃಷಿ ಇಲಾಖೆ ಬಹುತೇಕ ಒಂದೇ ತಳಿಯ (ಹೈಬ್ರಿಡ್) ಬೀಜಗಳನ್ನು ನೀಡಿದರೆ, ಸಮುದಾಯ ಬೀಜ ಬ್ಯಾಂಕ್‌ಗಳಲ್ಲಿ ವೈವಿಧ್ಯಮಯ ತಳಿಗಳು.

ಉದಾಹರಣೆಗೆ: ರಾಗಿಯ ಮಳೆಯಾಶ್ರಿತ 63 ತಳಿಗಳು ಈ ಬ್ಯಾಂಕುಗಳಲ್ಲಿವೆ. ನೀರಾವರಿ ಸೌಲಭ್ಯದಲ್ಲಿ ಬೆಳೆಯುವ ತಳಿಗಳು 12. ಅದೇ ರೀತಿ ಭತ್ತದಲ್ಲಿ ಪರಿಮಳ ಬೀರುವ 12, ಮಳೆಯಾಶ್ರಿತ 35 ಹಾಗೂ ನೀರಾವರಿ ಸೌಲಭ್ಯದ 40 ತಳಿಗಳಿವೆ. ತರಕಾರಿಯಲ್ಲಿ 32 ರೀತಿಯ ಬೀನ್ಸ್, ಡಜನ್ ವಿಧದ ಬೆಂಡೆ, 16 ತರಹದ ಟೊಮ್ಯಾಟೊ… ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ಹೈಬ್ರಿಡ್ ಭರಾಟೆಯಲ್ಲಿ ಕಣ್ಮರೆಯೇ ಆಗಿ ಹೋಗಿದ್ದ ಈ ಸ್ಥಳೀಯ ತಳಿಗಳು ಬೇಕೆಂದರೆ, ಇವತ್ತು ಸಮುದಾಯ ಬೀಜ ಬ್ಯಾಂಕುಗಳ ಹೊರತು ಬೇರೆ ದಾರಿಯೇ ಇಲ್ಲ.

70ರ ದಶಕದಲ್ಲಿ ಇಥಿಯೋಪಿಯಾ ದೇಶವು ಹೈಬ್ರಿಡ್ ದಾಳಿಯಿಂದ ಕಂಗೆಟ್ಟು, ಸ್ಥಳೀಯ ತಳಿಗಳನ್ನು ಉಳಿಸುವ ಅಗತ್ಯ ಕಂಡುಕೊಂಡಿತು. ಅಲ್ಲಿಂದ ಶುರುವಾದ ಸಮುದಾಯ ಬೀಜ ಬ್ಯಾಂಕ್ ಪರಿಕಲ್ಪನೆಯು ಫಿಲಿಪೈನ್ಸ್, ಲ್ಯಾಟಿನ್ ಅಮೆರಿಕ, ಪೆರು ಇತ್ಯಾದಿ ದೇಶಗಳಿಗೆ ಹರಡಿತು. ಭಾರತದಲ್ಲಿ ಮೊದಲ ಬಾರಿಗೆ ಕರ್ನಾಟಕದಲ್ಲಿ ಇಂಥದೊಂದು ಜಾಲ ದಶಕದ ಹಿಂದೆಯೇ ಆರಂಭವಾಗಿದೆ.

ಏನಿದು ಬೀಜ ಬ್ಯಾಂಕ್?

ರೈತರ ಸಾಂಪ್ರದಾಯಿಕ ಜ್ಞಾನವನ್ನೇ ಮೂಲ ಆಧಾರವಾಗಿಟ್ಟುಕೊಂಡು, ಕೃಷಿ ವೈವಿಧ್ಯವನ್ನು ನಿರಂತರವಾಗಿ ಕಾಪಾಡುವ ಪ್ರಯತ್ನವೇ ಸಮುದಾಯ ಬೀಜ ಬ್ಯಾಂಕ್. ಕಣ್ಮರೆಯಾಗುತ್ತಿರುವ ಸ್ಥಳೀಯ ಸಸ್ಯ ತಳಿಗಳನ್ನು ಹುಡುಕಿ, ಸಂರಕ್ಷಿಸಿ, ಅವನ್ನು ವಿನಿಮಯದ ಮೂಲಕ ಮತ್ತೆ ಜನಪ್ರಿಯ ಮಾಡುವುದು ಇದರ ಗುರಿ. ಬರ ನಿರೋಧಕ ಶಕ್ತಿ, ರೋಗ ಹಾಗೂ ಕೀಟಗಳಿಗೆ ಪ್ರತಿರೋಧ ತೋರುವ ಮತ್ತು ಮುಖ್ಯವಾಗಿ ಪ್ರಾಕೃತಿಕ ಏರುಪೇರುಗಳಿಗೆ ಹೊಂದಿಕೊಂಡು ಬೆಳೆಯುವ ನಾಡುತಳಿಗಳ ಸಂರಕ್ಷಣೆ ಕಾರ್ಯವನ್ನು ಬೀಜ ಬ್ಯಾಂಕುಗಳು ಮಾಡುತ್ತಿವೆ.

ಆಧುನಿಕ ಕೃಷಿಯ ಹೆಸರಿನಲ್ಲಿ ಚಾಲ್ತಿಗೆ ಬಂದ ವಿಧಾನಗಳಿಂದ ರೈತರು ಕಂಗೆಟ್ಟಿದ್ದೇ ಜಾಸ್ತಿ. ಇದೇ ಹೆಸರಿನಲ್ಲಿ ಕುಲಾಂತರಿ, ಹೈಬ್ರಿಡ್, ಸೂಪರ್ ಹೈಬ್ರಿಡ್ ತಳಿಗಳು ಹೊಲಗಳಿಗೆ ದಾಳಿ ಇಟ್ಟಿವೆ. ನೂರಾರು ವರ್ಷಗಳಿಂದ ಜತನವಾಗಿ ಕಾಯ್ದುಕೊಂಡು ಬಂದ ತಳಿ ವೈವಿಧ್ಯ ಈಗ ಅವಸಾನದ ಅಂಚಿನಲ್ಲಿದೆ. ಇದನ್ನು ತಪ್ಪಿಸಲು ರೂಪುಗೊಂಡಿದ್ದೇ ಬೀಜ ಬ್ಯಾಂಕ್.

ಕರ್ನಾಟಕದಲ್ಲಿ ಕಳೆದ ಒಂದು ದಶಕದಿಂದ ಬೀಜ ಬ್ಯಾಂಕುಗಳ ಸ್ಥಾಪನೆಯು ಮೌನ ಆಂದೋಲನದ ರೂಪದಲ್ಲಿ ನಡೆಯುತ್ತಿದೆ. ಕರ್ನಾಟಕ- ತಮಿಳುನಾಡು ಗಡಿಭಾಗದ ಥಳಿ ಗ್ರಾಮದಲ್ಲಿ ‘ಗ್ರೀನ್ ಪ್ರತಿಷ್ಠಾನ’ 1992ರಲ್ಲಿ ಈ ಕಾರ್ಯಕ್ಕೆ ಚಾಲನೆ ನೀಡಿತು. ಕೇವಲ ಹತ್ತು ರೈತರಿಂದ ಆರಂಭವಾಗಿ, ನಂತರ ಕನಕಪುರ- ಡೆಂಕನಕೋಟೆ ತಾಲ್ಲೂಕುಗಳ ನೂರು ಹಳ್ಳಿಗಳಿಗೆ ಹರಡಿತು. ಬೀಜ ಬ್ಯಾಂಕುಗಳ ಮಹತ್ವ ಅರಿತ ರೈತರು, ಹಲವಾರು ಗ್ರಾಮಗಳಲ್ಲಿ ತಾವೇ ಮುಂದೆ ಬಂದು ಇವುಗಳ ಸ್ಥಾಪನೆಗೆ ಉತ್ಸಾಹ ತೋರಿದರು.

ಇದರ ಪರಿಣಾಮವಾಗಿ ಇಂದು ಕರ್ನಾಟಕದ ಉದ್ದಕ್ಕೂ 14 ಜಿಲ್ಲೆಗಳಲ್ಲಿ 122 ಸಂಸ್ಥೆಗಳೊಂದಿಗೆ 34 ಸಮುದಾಯ ಬೀಜ ಬ್ಯಾಂಕುಗಳು ಸ್ಥಾಪನೆಯಾಗಿವೆ. 128 ಗ್ರಾಮಗಳಿಗೆ ಬೀಜ ಸಂರಕ್ಷಣೆ ಆಂದೋಲನ ಹಬ್ಬಿದೆ.

‘ಬೀಜ ಬ್ಯಾಂಕ್ ಉದ್ದೇಶವು ಕೇವಲ ಬೀಜ ಬಚ್ಚಿಡುವ, ಉಷ್ಣಾಂಶ ಹಾಗೂ ತೇವಾಂಶ ಕಾಪಾಡುವ, ವಿತರಣೆ ಮತ್ತು ಮಾರಾಟಕ್ಕೆ ಬೀಜಗಳನ್ನು ದಾಸ್ತಾನು ಮಾಡುವ ಉಗ್ರಾಣವಲ್ಲ’ ಎನ್ನುತ್ತಾರೆ, ಪ್ರತಿಷ್ಠಾನದ ನಿರ್ದೇಶಕಿ ಡಾ. ವನಜಾ ರಾಮಪ್ರಸಾದ. ಕೃಷಿಕರ ಸಾಂಪ್ರದಾಯಿಕ ಜ್ಞಾನದ ಸಂರಕ್ಷಣೆ ಇದರ ಮೂಲಗುರಿ ಎಂದು ಅವರು ಹೇಳುತ್ತಾರೆ. ಕೃಷಿ ವೈವಿಧ್ಯವನ್ನು ಸೃಷ್ಟಿಸುವ, ನಿರ್ವಹಿಸುವ ಮತ್ತು ಅಭಿವೃದ್ಧಿಪಡಿಸುವಲ್ಲಿ ರೈತರೇ ಪ್ರಮುಖ ಪಾತ್ರ ವಹಿಸುತ್ತಾರೆ. ಇದಕ್ಕೆ ಪೂರಕವಾಗಿ ಹಲವು ಕಾರ್ಯಕ್ರಮ ರೂಪಿಸಲಾಗಿದೆ.

ಆಯಾ ಪ್ರದೇಶಕ್ಕೆ ಹೊಂದಿಕೊಳ್ಳುವ ತಳಿಗಳನ್ನೇ ಆಯ್ಕೆ ಮಾಡುವುದು, ರೈತರು ಬಯಸಿದ ತಳಿಗಳ ಗುಣಲಕ್ಷಣ ಪಟ್ಟಿಮಾಡಿ, ಅವುಗಳನ್ನು ಹುಡುಕಿ ಸಂರಕ್ಷಿಸುವುದು, ತಳಿ ಶುದ್ಧೀಕರಣ ಮತ್ತು ಅಭಿವೃದ್ಧಿಯ ಬಳಿಕ ಅವುಗಳನ್ನು ಸುರಕ್ಷಿತವಾಗಿ ಸಂಗ್ರಹಿಸುವ ಸಾಂಪ್ರದಾಯಿಕ ವಿಧಾನಗಳನ್ನು ಅಳವಡಿಸುವುದು. ಉಳಿದಂತೆ ಸ್ಥಳೀಯ ತಳಿಗಳ ಬಗ್ಗೆ ಜಾಗೃತಿ ಮೂಡಿಸಲು ‘ಬೀಜಮೇಳ’ ಮತ್ತು ಯಾತ್ರೆ ಸಂಘಟಿಸುವುದು ಬೀಜ ಬ್ಯಾಂಕ್‌ನ ಕಾರ್ಯಕ್ರಮಗಳಲ್ಲಿ ಕೆಲವು.

ಹೊಸ ಪ್ರಯೋಗಗಳಿಗೂ ಇಲ್ಲಿ ಪ್ರಾಶಸ್ತ್ಯ. ಆದರೆ ಅದು ರೈತನ ಬದುಕನ್ನು ಇನ್ನಷ್ಟು ಹಸನು ಮಾಡುವಂತಿರಬೇಕು. ಕೃಷಿಗೆ ಪೂರಕವಾಗಿ ಗೊಬ್ಬರ ತಯಾರಿಕೆ, ಸಸ್ಯಜನ್ಯ ಕೀಟನಾಶಕಗಳ ತಯಾರಿ ಮತ್ತು ಬಳಕೆ ಬಗ್ಗೆ ಮಾಹಿತಿ ನೀಡುವ ಅನುಭವಸ್ಥರ ಪಡೆಯೇ ಇಲ್ಲಿದೆ. ತೀರ್ಥಹಳ್ಳಿ ತಾಲ್ಲೂಕಿನ ಚಕ್ಕೋಡಬೈಲು ಗ್ರಾಮದ ರೈತರು ಎರೆಗೊಬ್ಬರ ತಯಾರಿಕೆಯಲ್ಲಿ ಎಷ್ಟು ಪಳಗಿದ್ದಾರೆಂದರೆ, ‘ಸ್ಪೈಸ್ ಮಂಡಳಿ’ಯು ಈ ಗ್ರಾಮವನ್ನು ‘ಎರೆಗ್ರಾಮ’ ಎಂದು ಘೋಷಿಸಲು ನಿರ್ಧರಿಸಿದೆ. ಎರೆಗೊಬ್ಬರ ಮಾಹಿತಿ ನೀಡುವಲ್ಲಿ ಇಡೀ ಊರ ಜನರು ನಿಪುಣರು! ಇದೇ ಮಾದರಿಯಲ್ಲಿ ಕೈತೋಟ ಮಾಡುವ ವಿಷಯದ ಬಗ್ಗೆ ಅಧಿಕಾರಯುತವಾಗಿ ಮಾತಾಡಬಲ್ಲವರು ಹಿರೇಕೆರೂರು ಬಳಿಯ ನಿಡೇನೇಗಿಲು ಗ್ರಾಮಸ್ಥರು. ಇಲ್ಲಿ ಎಲ್ಲರ ಮನೆಯ ಬಳಿ ಕೈತೋಟವಿದೆ.

ಬೀಜ ಬ್ಯಾಂಕುಗಳ ವೈಶಿಷ್ಟ್ಯವೆಂದರೆ, ಮಹಿಳೆಯೇ ಇಲ್ಲಿ ಪ್ರಧಾನಿ! ‘ನಾಡತಳಿಗಳನ್ನು ಉಳಿಸಿ ಬೆಳೆಸುವುದು ನಮ್ಮ ಕರ್ತವ್ಯವಷ್ಟೇ ಅಲ್ಲ, ಅದು ನಮ್ಮ ಹಕ್ಕು ಸಹ’ ಎನ್ನುವ ಮಹಿಳೆಯರು ಪೇಟೆಂಟ್ ಹಾವಳಿಗೆ ಸೂಕ್ತ ಉತ್ತರ ನೀಡುತ್ತಾರೆ. ಬೀಜ ವಿತರಣೆ, ಹೆಸರು, ವಿವರ ದಾಖಲೆ, ಮರುಸಂಗ್ರಹದಂಥ ಕಾರ್ಯಗಳಲ್ಲಿ ಇವರ ಉತ್ಸಾಹ ಹೆಮ್ಮೆ ತರುವಂಥದು.

‘ಗ್ರೀನ್ ಪ್ರತಿಷ್ಠಾನ’ದ ಸಂಚಾಲಕ ಜಿ.ಕೃಷ್ಣಪ್ರಸಾದ ಅವರ ಪ್ರಕಾರ ‘ಜಾಗತೀಕರಣಕ್ಕೆ ಸವಾಲಾಗಿ, ಬೀಜ ಕಂಪೆನಿಗಳ ಹುನ್ನಾರಕ್ಕೆ ಉತ್ತರವಾಗಿ ಹೈಬ್ರಿಡ್ ತಳಿಗೆ ಪರ್ಯಾಯವಾಗಿ ರೈತರೇ ನಮ್ಮ ರಾಜ್ಯದಲ್ಲಿ ಆರಂಭಿಸಿದ ಬೀಜಬ್ಯಾಂಕ್ ಇತರ ರಾಜ್ಯಗಳಿಗೂ ಮಾದರಿಯಾಗುವಷ್ಟು ವಿಸ್ತರಿಸುತ್ತಿದೆ.’

ದಶಕದ ಹಿಂದೆ ಚಿಕ್ಕ ಗ್ರಾಮದಲ್ಲಿ ಆರಂಭವಾದ ಸಮುದಾಯ ಬೀಜ ಬ್ಯಾಂಕ್ ಕಲ್ಪನೆ, ಇಂದು ಬೀದರನಿಂದ ಚಾಮರಾಜನಗರದವರೆಗೆ, ಉಡುಪಿಯಿಂದ ಕೋಲಾರದವರೆಗೆ ಹಬ್ಬಿದೆ. ಪ್ರತಿವರ್ಷ ನಡೆಯುವ ‘ಬೀಜ ಸಂರಕ್ಷಕರ ಸಮ್ಮೇಳನ’ದಲ್ಲಿ ಕೃಷಿಕರು, ವಿಜ್ಞಾನಿಗಳು, ಅಧಿಕಾರಿಗಳು ಒಂದೇ ವೇದಿಕೆಯಡಿ ಬರುತ್ತಾರೆ. ಅಪರೂಪದ ತಳಿ ಸಂರಕ್ಷಕರು ಇದರಲ್ಲಿ ಭಾಗವಹಿಸಿ ಅನುಭವ ಮತ್ತು ಬೀಜಗಳನ್ನು ಹಂಚಿಕೊಳ್ಳುತ್ತಾರೆ. ಕಳೆದೇ ಹೋಗಿದ್ದ ಹಲವಾರು ನಾಡುತಳಿಗಳಿಗೆ ಮರುಜನ್ಮ ನೀಡಿದ ಶ್ರೇಯಸ್ಸು ಇವರದು.

ಮಾಹಿತಿ ತಂತ್ರಜ್ಞಾನದ ಬಗ್ಗೆಯಷ್ಟೇ ತಲೆಕೆಡಿಸಿಕೊಳ್ಳುವ ಅಧಿಕಾರಸ್ಥರಿಗೆ ಈ ಮೌನ ಬೀಜ ಕ್ರಾಂತಿಯ ಬಗ್ಗೆ ಇಷ್ಟು ಮಾಹಿತಿ ಸಾಕಲ್ಲವೇ?

(ಕರ್ನಾಟಕ ದರ್ಶನ- ಜುಲೈ 8, 2004)

ಭತ್ತದ ತಳಿ ಸಂರಕ್ಷಕ ದೇವರಾವ್

ಬಹಳಷ್ಟು ರೈತರು ಹೆಚ್ಚೆಂದರೆ ನಾಲ್ಕಾರು ಭತ್ತದ ವಿಧ ನೋಡಿರಬಹುದು. ಆದರೆ ಬೆಳ್ತಂಗಡಿ ತಾಲ್ಲೂಕಿನ ಮಿತ್ತಬಾಗಿಲುವಿನ ಬಿ.ಕೆ.ದೇವರಾವ ಭತ್ತದ ತಳಿಗಳಲ್ಲಿ ಎಂಥ ಶ್ರೀಮಂತರೆಂದರೆ, ಅವರು ಇಡೀ ಒಂದೂವರೆ ತಿಂಗಳು ದಿನಕ್ಕೊಂದು ವಿಧದ ಅನ್ನ ಊಟ ಮಾಡಬಹುದು. ಅವರ ಬಳಿ 45 ವಿಧದ ಭತ್ತದ ತಳಿಗಳಿವೆ!

ವಿಮಾನ ಇಲಾಖೆಯಲ್ಲಿ ದೊರೆತ ಕೆಲಸ ತಿರಸ್ಕರಿಸಿದ್ದು- ಕೇವಲ ಕೃಷಿ ಮಾಡುವ ಉದ್ದೇಶಕ್ಕಾಗಿಯೇ. ಕೃಷಿ ಆರಂಭಿಸಿದಾಗ ಎರಡೇ ಸ್ಥಳೀಯ ತಳಿ ಉಳಿದಿದ್ದವು. ’ಊರಿಂದೂರಿಗೆ ಹೋಗಿ ಹುಡುಕಿ, ಸಾಂಪ್ರದಾಯಿಕ ಭತ್ತದ ತಳಿ ಗುರ್ತಿಸಿದೆ. ಒಂದು ಹಿಡಿ ಸಿಕ್ಕರೂ ತಂದು ಬೆಳೆಸಿದೆ. ದೊರೆತ 50 ತಳಿಗಳಲ್ಲಿ ಹವಾಮಾನ ವೈಪರೀತ್ಯದ ಪರಿಣಾಮವಾಗಿ ಕೆಲವು ತಳಿ ಕೈಬಿಟ್ಟು ಹೋದವು. 45 ವಿಧಗಳು ನನ್ನಲ್ಲಿವೆ’ ಎನ್ನುವ ದೇವರಾಯರು, ಆ ಬೀಜಗಳನ್ನು ಮಾರುವುದಿಲ್ಲ; ಬದಲಾಗಿ ವಿನಿಮಯ ರೂಪದಲ್ಲಿ ನೀಡುತ್ತಾರೆ.

ಇವರಲ್ಲಿರುವ ಭತ್ತದ ತಳಿಗಳು:

ಅಲ್ಯಂಡೆ, ಅಜಿಪಸಾಲೆ, ಅದೇನ್‌ಕೇಳ್ತೆ, ಅತಿಕಾಯ, ಅನ್ನಪೂರ್ಣ, ಅತಿಕರಯ, ಅಜ್ಜಿಗ, ಉಬರಮುಂಡ, ಎಂಒ-4, ಐ‌ಆರ್-8, ಕಯಮೆ, ಕೊಳಕೆದೊಡ್ರ, ಕವಳಕಣ್ಣು, ಕಳಮೆ, ಕುಂದಪುಲ್ಲನ್, ಕರಿದಡಿ, ಕೆಕೆಪಿ-ಮಹಾವೀರ, ಕುಟ್ಟಿಕಯಮೆ, ಕರಿಯಜೇಬಿ, ಕಣ್ವ, ಕಾಮಧಾರಿ, ಕುಮೇರು, ಗುಲ್ವಾಡಿ ಸಣ್ಣ, ಗಿಡ್ಡಭತ್ತ, ಗಂಧಸಾಲೆ, ಚಾರೆ, ಜೀರಿಗೆಸಣ್ಣ, ಜಯಾ, ತೊನ್ನೂರು, ನಾಗಭತ್ತ, ಪೀಟ್‌ಸಾಲೆ, ಮಸ್ಕತಿ, ಮೀಸೆಭತ್ತ, ಮೈಸೂರುಮಲ್ಲಿಗೆ, ಮೊರಡ್ಡ, ಮಸ್ಸೂರಿ, ಬಾಸ್ಮತಿ ಗಿಡ್ಡ, ಬಾಸ್ಮತಿ ಉದ್ದ, ಬಿಳಿನೆಲ್ಲು, ರಾಜಕಯಮೆ, ರತ್ನಚೂಡಿ, ರಸ್ಕದಂ, ಶಕ್ತಿ, ಸುಗ್ಗಿಕಯಮೆ, ಹಲ್ಲಿಂಗ.

ಕೊನೆಗೂ ಸಿಕ್ಕ ಭೋಗಾಪುರ ಜೋಳ

ಕೊಪ್ಪಳ ಜಿಲ್ಲೆ ಕುಷ್ಟಗಿ ತಾಲ್ಲೂಕಿನ ಸುತ್ತಲಿನ ಗ್ರಾಮಗಳಲ್ಲಿ ಬಹುಹಿಂದೆ ಭೋಗಾಪುರ ಜೋಳ ಬಹು ಪ್ರಸಿದ್ಧಿಯಾಗಿತ್ತು. ಕನಿಷ್ಠ ಆರೆಂಟು ಅಡಿ ಎತ್ತರಕ್ಕೆ ಬೆಳೆಯುವ ಇದು ಹೆಚ್ಚಿನ ಇಳುವರಿ ಮತ್ತು ಪಶುಗಳಿಗೆ ಉತ್ತಮ ಮೇವು ನೀಡುತ್ತಿತ್ತು.

ಕಣ್ಮರೆಯೇ ಆಗಿ ಹೋಗಿದ್ದ ಈ ತಳಿಯನ್ನು ಹುಡುಕಲು ಜೂಲಕುಂಟಿ ಬೀಜ ಬ್ಯಾಂಕ್‌ನ ಸದಸ್ಯರು ಶೋಧನೆ ಆರಂಭಿಸಿದರು. ಅಲ್ಲಿ ಸಿಗಬಹುದು… ಇಲ್ಲಿ ಸಿಗಬಹುದು… ಎಂಬ ಮಾತು ಕೇಳಿ ಎಲ್ಲೆಲ್ಲೂ ಹುಡುಕಾಟ ನಡೆಸಿದರು. ಗಾಣದಾಳ, ತಾಳಕೇರಿ, ವಂಕಲಕುಂಟಿ, ಗುನ್ನಾಳ ಹೀಗೆ ಹನ್ನೆರಡು ಗ್ರಾಮ ಸುತ್ತಿದಾಗ ಕೊನೆಗೆ ಮ್ಯಾದನೇರಿ ಎಂಬ ಕುಗ್ರಾಮದಲ್ಲಿ ಭೋಗಾಪುರ ಜೋಳ ಸಿಕ್ಕೇಬಿಟ್ಟಿತು. ‘ಕಳೆದುಹೋಗಿದ್ದ ಮಗ ಮನೆಗೆ ಬಂಧಂಗಾತು’ ಎನ್ನುವ ಬೀಜಬ್ಯಾಂಕಿನ ಸದಸ್ಯರ ಮಾತುಗಳು, ಆ ಜೋಳದ ಬಗೆಗಿನ ನಂಟಿನ ಪ್ರತೀಕ.

‘ಬೀಜ ಬ್ಯಾಂಕುಗಳಲ್ಲಿ ಈಗ ಸುಮಾರು 24ಕ್ಕೂ ಹೆಚ್ಚು ಬಗೆಯ ಜೋಳದ ತಳಿಗಳಿವೆ. ಇವುಗಳನ್ನು ಅಭಿವೃದ್ಧಿಪಡಿಸಿದ್ದು ಪ್ರಯೋಗಾಲಯದಲ್ಲಿ ಅಲ್ಲ; ರೈತನ ಹೊಲದಲ್ಲೇ’ ಎಂದು ಹೇಳುವ ಸಂಚಾಲಕ ಬಿ.ಎಲ್.ಶಂಕರನಾಯಕ, ತಾವು ಆಯೋಜಿಸುವ ತಳಿ ಅಭಿವೃದ್ಧಿ ಕಾರ್ಯಕ್ರಮದಲ್ಲಿ ಭಾಗವಹಿಸುವ ರೈತರೆಡಲ್ಲ ಒಂದು ರೀತಿಯ ವಿಜ್ಞಾನಿಗಳೇ ಎಂದು ಬಣ್ಣಿಸುತ್ತಾರೆ.