ಕಳೆದೇ ಹೋಗಿದ್ದ ಸಾಂಪ್ರದಾಯಿಕ

ತಳಿ ಉಳಿಸಿ, ಮುಂದಿನ ಪೀಳಿಗೆಗೆ ನೀಡುವ ಹೆಮ್ಮೆ ಈ ರೈತರದ್ದು.

ಕೊಪ್ಪಳ ಜಿಲ್ಲೆ ಕುಷ್ಟಗಿ ತಾಲ್ಲೂಕಿನ ವ್ಯಾಕರನಾಳ ಗ್ರಾಮದಲ್ಲಿ ಒಂದು ವಿಶಿಷ್ಟ ಕಾರ್ಯ ಏರ್ಪಾಡಾಗಿತ್ತು. ಕಾಣೆಯಾಗಲಿದ್ದ ವೈವಿಧ್ಯಮಯ ಜೋಳದ ತಳಿಗಳನ್ನು ಒಂದೆಡೆ ಬೆಳೆಸಿ, ಅವುಗಳಲ್ಲಿ ಉತ್ತಮ ಜಾತಿ ಯಾವುದು ಎಂಬುದನ್ನು ರೈತರೇ ನಿರ್ಧರಿಸಬೇಕಿತ್ತು.

ಹೈಬ್ರಿಡ್, ಕುಲಾಂತರಿ ಬೀಜದ ಹಾವಳಿಗಳ ನಡುವೆ ನಾಟಿ ಬೀಜಗಳು ತೆರೆಮರೆಗೆ ಸರಿದಿವೆ. ಅಧಿಕ ಹಾಗೂ ಶೀಘ್ರ ಇಳುವರಿ ಹೆಸರಿನಲ್ಲಿ ಚಾಲ್ತಿಗೆ ಬಂದ ತಳಿಗಳ ಮಧ್ಯೆ ಎಷ್ಟೋ ಸ್ಥಳೀಯ ಜಾತಿಗಳು ಕಣ್ಮರೆಯಾಗಿ ಹೋಗಿವೆ. ಮಣ್ಣು, ಹವಾಗುಣ, ನೀರಿನ ಲಭ್ಯತೆಗೆ ತಕ್ಕಂತೆ ಆಯಾ ಪರಿಸರಕ್ಕೆ ಹೊಂದಿಕೊಳ್ಳುವ ಮತ್ತು ರೈತರಿಗೆ ಲಾಭ ತಂದುಕೊಡುವ ತಳಿಗಳನ್ನು ಹುಡುಕಿ, ಸಂರಕ್ಷಿಸಿ ಮುಂದಿನ ಪೀಳಿಗೆಗೂ ನೀಡುವ ಕಾರ್ಯವನ್ನು ಬೆಂಗಳೂರಿನ ‘ಗ್ರೀನ್ ಪ್ರತಿಷ್ಠಾನ’ ಕಳೆದ ಏಳೆಂಟು ವರ್ಷಗಳಿಂದ ನಡೆಸಿಕೊಂಡು ಬರುತ್ತಿದೆ. ‘ಸಹಭಾಗಿತ್ವ ತಳಿ ಅಭಿವೃದ್ಧಿ ಕಾರ್ಯಕ್ರಮ’ದ ಅಡಿಯಲ್ಲಿ ಭತ್ತ ಮತ್ತು ರಾಗಿಯ ವಿವಿಧ ತಳಿಗಳನ್ನು ಸಂರಕ್ಷಿಸಿದ ಬಳಿಕ, ಈಗ ಜೋಳದ ಮೇಲೆ ಅದರ ಗಮನ.

ಉತ್ತರ ಕರ್ನಾಟಕದಲ್ಲಿ ಪ್ರಧಾನ ಬೆಳೆಯೇ ಜೋಳ. ಇದರ ವಿವಿಧ ಜಾತಿಗಳನ್ನು ಹುಡುಕಹೊರಟಾಗ, ರೈತರ ಕಡೆಯಿಂದ ಸಿಕ್ಕ್ದಿದು ಕೇವಲ 11. ಆದರೆ ಒಟ್ಟು 42 ತಳಿ ಇರುವ ಮಾಹಿತಿ ದೊರೆತಾಗ ಅದಕ್ಕೂ ಶೋಧನೆ. ಹಳೆಯ ತಳಿಗಳನ್ನು ಉಳಿಸಿ ಬೆಳೆಸುತ್ತಿರುವ ವಿಜಾಪುರ ಪ್ರಾದೇಶಿಕ ಕೃಷಿ ಸಂಶೋಧನಾ ಕೇಂದ್ರದ ವಿಜ್ಞಾನಿ ಡಾ† ಬಿ.ಡಿ.ಬಿರಾದಾರ ಈ ಕಾರ್ಯಕ್ಕೆ ನೆರವಿನ ಭರವಸೆ ನೀಡಿದಾಗ ಯೋಜನೆ ವ್ಯವಸ್ಥಿತ ರೂಪ ತಳೆಯಿತು. ಅವರ ಸಂಗ್ರಹದಲ್ದ್‌ದ 23 ತಳಿಯ ಬೀಜಗಳನ್ನು ತಂದು ವ್ಯಾಕರನಾಳ ಗ್ರಾಮದ ದೇವೇಂದ್ರಪ್ಪ ಗೌಡರ ಅವರ ಹೊಲದಲ್ಲಿ ಬಿತ್ತಿದಾಗ, ಒಂದೇ ಕಡೆ ವೈವಿಧ್ಯಮಯ ಜೋಳ ಆಗಸದತ್ತ ಮುಖ ಮಾಡಿ ಬೆಳೆದವು.

ಜೋಳ ಕಾಳು ಬಿಡುವ ಹಂತದಲ್ಲಿ ‘ಯಾವ ಜಾತಿ ಉತ್ತಮ?’ ಎಂದು    ನಿರ್ಧರಿಸುವವರು ಯಾರು?

‘ರೈತರೇ ಇದರ ಫಲಾನುಭವಿಗಳು. ಅದನ್ನು ಸಂರಕ್ಷಿಸಿ, ಅಭಿವೃದ್ಧಿಪಡಿಸುವವರೂ ಅವರೇ. ಹೀಗಾಗಿ ರೈತರೇ ಉತ್ತಮ ತಳಿ ನಿರ್ಧರಿಸಬೇಕು’ ಎಂದರು ಯೋಜನೆಯ ರೂವಾರಿ ಬಿ.ಎಲ್.ಶಂಕರನಾಯಕ್.

ಈ ಕೆಲಸಕ್ಕೆ ವಿವಿಧ ಜಿಲ್ಲೆಗಳ ರೈತರನ್ನು ಗ್ರಾಮಕ್ಕೆ ಆಹ್ವಾನಿಸಲಾಗಿತ್ತು. ತಲಾ ಹತ್ತು ರೈತರ ಆರು ತಂಡ ರಚಿಸಿ, ಪ್ರತಿ ಗುಂಪಿಗೂ ಬೇರೆ ಬೇರೆ ಬಣ್ಣದ ದಾರ ನೀಡಲಾಗಿತ್ತು. ಎಲ್ಲ ತಳಿಗಳನ್ನು ಕೂಲಂಕಷವಾಗಿ ನೋಡಿ, ತಮ್ಮೊಳಗೆ ಚರ್ಚಿಸಿ, ಉತ್ತಮವೆನಿಸಿದ ಹತ್ತು ತೆನೆಗಳಿಗೆ ದಾರ ಕಟ್ಟಬೇಕು. ಗಿಡದ ಎಲೆ, ಕಾಂಡ, ಸುಂಕದ ಬಗ್ಗೆ ಮಾತ್ರವಲ್ಲ ಕಾಳಿನ ಆಕಾರ, ರಚನೆ, ತೆನೆಯ ಬಿಗುವು ಸಹ ಇಲ್ಲಿ ಪ್ರಧಾನ ಪಾತ್ರ ವಹಿಸುತ್ತದೆ. ಹಾಗಾಗಿ ರೈತ ಮಹಿಳೆಯರ ಅಭಿಪ್ರಾಯವೂ ಇಲ್ಲಿ ಮುಖ್ಯ. ಕೊನೆಗೆ 23 ತಳಿಗಳಲ್ಲಿ ಅತ್ಯುತ್ತಮ ಎನಿಸಿದ ನಾಲ್ಕು ಜಾತಿಗಳನ್ನು ಪ್ರತಿ ಗುಂಪು ಆಯ್ಕೆ ಮಾಡಬೇಕು. ಇದು ರೈತರೇ ನೀಡುವ ಫಲಿತಾಂಶ.

‘ವಿಶ್ವವಿದ್ಯಾಲಯಗಳು ಮತ್ತು ಕೃಷಿ ಸಂಶೋಧನಾಲಯಗಳಲ್ಲಿ ರೂಪಿಸಿದ ಬೀಜಗಳನ್ನು ನಮ್ಮ ರೈತರು ಬೆಳೆಯುತ್ತಾರೆ. ಆದರೆ ಅಲ್ಲಿನ ವಾತಾವರಣಕ್ಕೂ, ರೈತರ ಹೊಲದ ವಾಸ್ತವ ಸ್ಥಿತಿಗೂ ಅಜಗಜಾಂತರ. ಹೀಗಾಗಿ ನಾವು ರೈತರ ಹೊಲವನ್ನೇ ಆಯ್ಕೆ ಮಾಡಿ, ಇಲ್ಲೇ ಬೆಳೆದೆವು. ಎಲ್ಲಕ್ಕಿಂತ ಹೆಚ್ಚಾಗಿ ಪರೀಕ್ಷೆಯಲ್ಲಿ ರೈತರು ವಿಜ್ಞಾನಿಗಳಿಗಿಂತ ಒಂದು ಹೆಜ್ಜೆ ಮುಂದು. ಬಹುತೇಕ ಬಾರಿ ಅವರು ಆಯ್ಕೆ ಮಾಡಿದ ತಳಿಗಳೇ ನಂತರದ ನಮ್ಮ ವೈಜ್ಞಾನಿಕ ಪರೀಕ್ಷೆಯಲ್ಲೂ ರ್ಯಾಂಕ್ ಪಡೆಯುತ್ತವೆ’ ಎನ್ನುವುದು ನಾಯಕ್ ಅವರ ಅಭಿಪ್ರಾಯ.

ಎಲ್ಲೋ ದೂರದ ಪ್ರಯೋಗಾಲಯಗಳಲ್ಲಿ ವ್ಯವಸ್ಥಿತ ಆರೈಕೆ, ಜೋಪಾನದೊಂದಿಗೆ ಬೆಳೆದ ಬೀಜ, ರೈತನ ಜಮೀನಿಗೆ ಬಂದ ಕೂಡಲೇ ವಾತಾವರಣ ಒಮ್ಮೆಲೇ ಬದಲಾಗಿ ಕಂಗಾಲಾಗುತ್ತದೆ! ಅನೇಕ ಸಲ ಈ ಸ್ಥಿತಿಗೆ ಹೊಂದಿಕೊಳ್ಳಲು ಸಾಧ್ಯವಾಗದೇ ಸೋಲುತ್ತದೆ. ಆದರೆ ರೋಗ- ಬರ ನಿರೋಧಕತೆಯ ಅಪೂರ್ವ ಶಕ್ತಿಯನ್ನು ತಮ್ಮೊಳಗೆ ಹುದುಗಿಸಿಕೊಂಡ ನಾಟಿ ತಳಿಗಳು ಕೃಷಿಕನ ನಿರೀಕ್ಷೆ ಹುಸಿ ಮಾಡಲಾರವು.

ಅಂದ ಹಾಗೆ, ಎರಡು ಡಜನ್ ತಳಿಗಳಲ್ಲಿ ಅಂದು ರೈತರ ಪರೀಕ್ಷೆಯಲ್ಲಿ ಮೊದಲನೇ ರ್ಯಾಂಕ್ ಗಳಿಸಿದ್ದು ‘ಗಿಡ್‌ಮದ್ನಡಿ’ ಎಂಬ ಜಾತಿ. ‘ನೀಲಗಲ್’, ‘ಜೋಳ ಜೇವರಗಿ’ ಮತ್ತು ‘ಬಿದರಕುಂದಿ ಚಂಡಿಕಾ’ಗೆ ನಂತರದ ಪಟ್ಟ. ಹಳ್ಳಿಗರೇ ಸ್ಥಾಪಿಸಿಕೊಂಡ ಸಮುದಾಯ ಬೀಜಬ್ಯಾಂಕ್‌ನಲ್ಲಿ ಇವುಗಳಿಗೆ ಈಗ ಭದ್ರಸ್ಥಾನ. ಹೆಚ್ಚೂಕಮ್ಮಿ ಕಳೆದೇ ಹೋಗಿದ್ದ ಅಪರೂಪದ ಸಾಂಪ್ರದಾಯಿಕ ತಳಿ ಉಳಿಸಿ, ಮುಂದಿನ ಜನಾಂಗಕ್ಕೆ ನೀಡುವ ಹೆಮ್ಮೆ ಈ ರೈತರದ್ದು.

‘ನಾನು ಚಿಕ್ಕವಳ್ದಿದಾಗ ಈ ಗಿಡ್‌ಮದ್ನಡಿ ಜೋಳದ ರೊಟ್ಟಿ ತಿಂದಿದ್ದೆ. ಮತ್ತೆ ಕಂಡಿರ್ಲೇ ಇಲ್ಲ. ಈಗ ಅದನ್ನ ನೋಡೋ ಭಾಗ್ಯ ಬಂತು. ಭಾಳ ಖುಷಿ ಆತು. ಇದನ್ನ ನಮ್ಮ ಮೊಮ್ಮಕ್ಕಳಿಗೂ ಉಳಿಸಿ ಕೊಡಬೇಕು’ ಎನ್ನುವ ಹಾವೇರಿಯ ಗಂಗಮ್ಮನ ಮಾತುಗಳಲ್ಲೇ ಅದು ವ್ಯಕ್ತವಾಗುತ್ತದೆ.

(ಕೃಷಿರಂಗ – ಫೆಬ್ರವರಿ 25, 2004)

ನಮ್ಮ ನಾಡಿನ ಜೋಳದ ವೈವಿಧ್ಯಮಯ ತಳಿಗಳು

ಕೆಂಪು, ಕಲ್ಮರಿ, ಒಗರು, ಬೆತ್ತಿ, ಪಲ್ಲಕ್ಕಿ, ಬಿಳಿ, ಬಿಜಾಪುರ, ಕಾಶೀ, ರಗಡು ಜೊನ್ನಲು, ಚಿಂಗಾರಿ, ಕಗ್ಗ, ಕೆಂಪು ಕಣಕ, ಮ್ದುದೆ, ಭೋಗಾಪುರ, ಕಾಗಿಮಾರಿ, ಗುಗ್ಗರಿ, ಮೂಗುತಿ, ಬೀದರ ಸ್ಥಳೀಯ, ಜೋಡಮೊಗರ, ಹರಿಣಿ ದಗಡಿ, ನೀಲಗಲ್, ಗಿಡ್‌ಮದ್ನಡಿ, ಮಭವಿ ಸ್ಥಳೀಯ, ಹಗರಿ, ಹನ್ನಟಗಿ, ಗಿಡಗೆಂಪು, ಎಣೆಗಾರ, ಭಗವಂತಗಿ, ದೊಡ್ಡ, ಕಡಬು, ತಡಕೋಡ, ಬೆಳಸಿ(ಸೀತನಿ), ಬಾರ್ಸಿ, ಗುಂಡು ಶಡಗಾರ, ಮುಂಗಾರಿ, ಹೊಂಬಾಳೆ, ಬಿಳಿ ಮ್ದುದುಗ, ಕೆಂಪು ಮಕರ, ಮಕರ, ಮಾಲ್ದಂಡಿ, ಶಾವಿಗೆ, ಮುತ್ಯಾಲ ಜೊನ್ನಲು, ಖಾಕಿ, ಇಬ್ಬನಿ, ಪುಲಿಯಂಗಡಿ, ರಂಗು, ಹಸಿರುಕಂಬಿ, ದೋಸೆ, ಕಿಡಕಿ, ಪುಲೆಯಶೋಧ, ಮಹಗುಲಿ, ಕವರಗಿ, ಯಮನಗಿರಿ, ಕನ್ನತಿ ಹುಲಿಗಹ, ಜೇವರಗಿ ಸ್ಥಳೀಯ, ಜೋಳ ಜೇವರ, ಮುಸಬಿನಾಳ, ಬಿದರಕುಂದಿ ಚಂಡಿಕ, ಚಿತ್ತಾಪುರ ಸ್ಥಳೀಯ, ಗಿಡ್ಡ, ಸಜ್ಜರಗಿ, ನಂದ್ಯಾಲ, ಬಸವನಪಾದ, ಅಣ್ಣಿಗೇರಿ, ಗೋವಿನಕೊಪ್ಪ, ಗೌರಿ, ಶಡಗರ, ಅರಬಾರಿ.