ಮಲೆನಾಡಿನ ಎರಡು ದೊಡ್ಡ ನದಿಗಳು ಸಾಗರವನ್ನು ಬಳಸಿಕೊಂಡು ಮುಂದೆ ಹೋಗುತ್ತದೆ.  ಒಂದು ಅರಬ್ಬಿ ಸಮುದ್ರ ಸೇರುವ ಶರಾವತಿ.  ಇನ್ನೊಂದು ಬಂಗಾಳಕೊಲ್ಲಿ ಸೇರುವ ವರದೆ.  ಶರಾವತಿಯ ಹುಟ್ಟೂರು ತೀರ್ಥಹಳ್ಳಿ ತಾಲ್ಲೂಕಿನ ಅಂಬುತೀರ್ಥ. ವರದೆಯದು ಸಾಗರ ತಾಲ್ಲೂಕಿನ ವರದಮೂಲ. ಶರಾವತಿ ಅತಿಹೆಚ್ಚು ಕಾಡುಗಳಿಗೆ ಆಸರೆ.  ವರದೆ ಅತಿಹೆಚ್ಚು ಕೃಷಿಭೂಮಿಗೆ ಜೀವದಾಯಿನಿ.  ಈ ಎರಡೂ ನದಿತೀರದ ನೆಲ, ಜನ, ಭಾಷೆ, ಕಲೆ, ಕೃಷಿ, ಬದುಕು ಏನೆಲ್ಲಾ ವಿಭಿನ್ನ.  ಎರಡೂ ನದಿ ತೀರದ ಹೋರಾಟಗಳೂ ಸಹ ವಿಭಿನ್ನ.  ಶರಾವತಿಯದೆಲ್ಲಾ ಪರಿಸರ ಸಂಬಂಧಿ ಹೋರಾಟವಾದರೆ ವರದೆಯ ಮಡಿಲಿನಲ್ಲಿ ರೈತ, ಕೃಷಿ, ಭೂಮಿ ಹಕ್ಕುಗಳು ನೀರಿಗಾಗಿ ಹೋರಾಟ.

ಶರಾವತಿ ಸುಂದರ ಜಲಪಾತ, ಕಣಿವೆಗಳಲ್ಲಿ ಹರಿದರೆ. ವರದೆಯು ಐತಿಹಾಸಿಕ ಪರಂಪರೆಗಳಿಗೆ, ನೆಲನಂಬಿದ ಜನರ ಸಾಕ್ಷಿಯಾಗುತ್ತಾಳೆ.  ಸಾಮ್ರಾಜ್ಯಗಳ ಅಳಿವನ್ನು ದಾಖಲಿಸುತ್ತಾಳೆ.  ಕೆಲವೊಮ್ಮೆ ತಾನೇ ಭೀಕರ ರೂಪ ಪಡೆದು ಧಾಳಿಗಿಳಿಯುತ್ತಾಳೆ.  ತೀರದ ಜನರ ಬದುಕನ್ನು ತೀರದ ಬವಣೆಗೆ ದಬ್ಬುತ್ತಾಳೆ.  ಶರಾವತಿಗೆ ಎಷ್ಟು ಮಳೆಬಂದರೂ ಬೇಕು. ವರದೆ ಮಳೆ ಹೆಚ್ಚಾದಾಗಲೆಲ್ಲಾ ಅನಾಹುತಗಳಿಗೆ ಕಾರಣವಾಗುತ್ತಾಳೆ.

ಇದು ವಿರುದ್ಧಮುಖಿಗಳ ಪ್ರಸ್ತಾವನೆ.

ಮಳೆಗಾಲದಲ್ಲಿ ವರದೆ ಹರಿವೆಡೆಯೆಲ್ಲಾ ನೆರೆ ಖಾಯಂ.  ಹಳ್ಳಗಳು, ತೋಡುಗಳು, ಹೊಳೆಗಳೆಲ್ಲಾ ವರದೆಗೆ ಸೇರುತ್ತಾ ನೆರೆ ಏರಿಸುತ್ತವೆ.  ತಿಂಗಳುಗಟ್ಟಲೆ ಹೊಲಗಳ ಮೇಲೆ ನಿಂತು ಬಿಡುತ್ತವೆ.  ಇದೆಲ್ಲಾ ತೀರದ ರೈತರಿಗೆ ತೀರಾ ಸಾಮಾನ್ಯ ವಿಷಯ. ನೆರೆಯ ಬರುವನ್ನು ಪ್ರತಿವರ್ಷ ನಿರೀಕ್ಷಿಸಿಯೇ ಕೃಷಿ ಮಾಡುತ್ತಾರೆ.  ಮಾಡಿದ ಬೇಸಾಯ ನೀರು ಪಾಲಾಗದಂತೆ ನೆರೆಯ ನೀರನ್ನೇ ಬಳಸಿಕೊಳ್ಳುತ್ತಾರೆ.

ಕಣಸೆಹೊಳೆ, ಕನ್ಹೊಳೆ, ಮಾವಿನ ಹೊಳೆ ಹಾಗೂ ವರದಾ ನದಿಗಳು ಒಂದೆಡೆ ಸೇರುವ ಜಾಗದಲ್ಲಿ ೪೦-೬೦ ದಿನಗಳ ನೆರೆ ಬರುತ್ತದೆ.  ಆಗ ಯಲಕುಂದ್ಲಿ, ಸುಂಠಿಕೊಪ್ಪ, ತಡಗಳಲೆ, ಕಣಸೆ, ಮಂಡಗದ್ದೆ, ಸಣ್ಣಮನೆ ಮುಂತಾದ ಊರುಗಳ ಹೊಲಗಳು ನೆರೆಹಾವಳಿಗೆ ತುತ್ತು.

ಅಲ್ಲಿನ ರೈತರು ನೆರೆಯನ್ನೆದುರಿಸಿ ಬೆಳೆಯುವ ಭತ್ತದ ತಳಿಗಳನ್ನು ಬಹಳಾ ಹಿಂದಿನಿಂದಲೂ ಬೆಳೆಯುತ್ತಿದ್ದಾರೆ.  ನೆರೆಗೂಳಿ, ಕರೆಜಡ್ಡು, ಅಕ್ಕಿಬಾಳ, ಜಡ್ಡುಭತ್ತ, ಚಿಟಗ, ಸಣ್ಣವಳ್ಯ ಮುಂತಾದವುಗಳೆಲ್ಲಾ  ನೆರೆಯನ್ನೆದುರಿಸಬಲ್ಲವಯ.  ದಪ್ಪ ಎಲೆ, ದಪ್ಪ ಕಾಂಡ, ಎದೆ‌ಎತ್ತರ ಬೆಳೆಯುತ್ತವೆ.

ಮುಂಗಾರಿನ ಮೊದಲಮಳೆ ಬಿದ್ದು ಮಣ್ಣಿನವಾಸನೆ ಹಬ್ಬಿದ ಮೇಲೆ ಬಿತ್ತನೆ ಆರಂಭ. ೧೦ಗಿದ್ನ ಭತ್ತ (೪೦ ಕಿಲೋ ಗ್ರಾಂ) ೮ ಗಾಡಿ ಕೊಟ್ಟಿಗೆ ಗೊಬ್ಬರ ಒಂದು ಎಕರೆಗೆ ಬೇಕು.  ಬೇರೇನೂ ಬೇಡ ಎನ್ನುತ್ತಾರೆ ತಡಗಳಲೆ ಪಟೇಲ ಬಸವರಾಜಪ್ಪ.

ಮಾಗಿ ಉಳುಮೆ ಮಾಡಿದ ಗದ್ದೆಗಳನ್ನು ಹ್ವಾಕೆ (ಲಘು ಉಳಯಮೆ) ಮಾಡಲಾಗುತ್ತದೆ.  ಐದು ಅಡಿ ಉದ್ದದ ಕೊರಡಿನಿಂದ ಇಚ್ಚಾಲು (ಎರಡು ಸಾಲು) ಏಳುಸಾಲು, ಎಂಟುಸಾಲು ಹೊಡೆಯುತ್ತಾರೆ.  ನೇಗಿಲಗೂಟಕ್ಕೆ ಮಂಕರಿಕಟ್ಟಿ (ಬುಟ್ಟಿ) ಅದರಲ್ಲಿ ಬಿತ್ತನೆ ಬೀಜಗಳನ್ನು ತುಂಬಿ ರೈತನ ಹೆಂಡತೆ ಬಿತ್ತುತ್ತಾಳೆ.

ಈ ನೆಲಕ್ಕೆ, ಈ ತಳಿಗಳಿಗೆ ಬಿತ್ತನೆ ವಿಧಾನ ಅನಿವಾರ್ಯ. ಸಸಿಗಳು ಎರಡೆಲೆ ಆದ ಕೂಡಲೇ ಕುಂಟೆ ಹೊಡೆಯುತ್ತಾರೆ.  ಇದನ್ನೇ ಹರಗುವುದು, ಬರ ಹೊಡೆಯುವುದು ಎಂದು ಕರೆಯುತ್ತಾರೆ.  ಇದನ್ನು ಸಸಿಗಳು ನಾಲ್ಕೆಲೆ ಆಗುವುದರೊಳಗೆ ಮಾಡಬೇಕು. ಅದಕ್ಕಾಗಿ ರಾತ್ರಿ ಲಾಟೀನು ನೇಗಿಲಿಗೆ ಕಟ್ಟಿಕೊಂಡು ಮಾಡುವವರೂ ಇದ್ದಾರೆ.

ಒಣ ಬಿತ್ತನೆಯಲ್ಲಿ ಬಿತ್ತಿದ ಬೀಜಗಳು ೪೫ ದಿವಸ ಮಳೆಬರದೇ ಇದ್ದರೂ ನೆಲದೊಳಗೆ ಹಾಳದಗೇ ಇರುತ್ತದೆ.  ಮಳೆ ಹನಿಯ ಸಿಂಚನವಾಗಿದ್ದೇ ಸಸಿಗಳು ಮೊಳಕೆಯೊಡೆಯುತ್ತವೆ.  ಅದೇವೇಗದಲ್ಲಿ ಎಲೆಗಳೊಡೆಯ ತೊಡಗುತ್ತದೆ.  “ಒಮ್ಮೆ ಹರಗಿದರೆ ಸಾದಾರಣ ಫಸಲು, ಎರಡು ಬಾರಿ ಹರಗಿದರೆ ಉತ್ತಮ ಫಸಲು, ಮೂರು, ನಾಲ್ಕು ಸಾರಿ ಹರಗಲು ಸಿಕ್ಕರೆ ಅತಿ ಹೆಚ್ಚು ಫಸಲು” ಎನ್ನುತ್ತಾರೆ ಯಲಕುಂದ್ಲಿ ದೇವೇಂದ್ರಪ್ಪ.

ಪ್ರತಿ ಸಾರಿ ಹರಗಿದಾಗಲೂ ಸಾಲಿನಲ್ಲಿ ಇಲ್ಲದ ಸಸಿಗಳು ಕಿತ್ತುಹೋಗುತ್ತವೆ.  ಸಮದೂರ, ಸಮಪ್ರಮಾಣದಲ್ಲಿ ಹೊಂದಿಕೆಯಾಗುತ್ತದೆ.  ಇದರಿಂದ ಚನ್ನಾಗಿ ಬೇರುಬರಲು, ಅತಿ ಹೆಚ್ಚು ಹೊಡೆಯೊಡೆಯಲು ಕಾರಣ. ಹೊಡೆ ಹೆಚ್ಚಾದಷ್ಟು ತೆನೆ ಹೆಚ್ಚು.  ಫಸಲು ಇಳುವರಿ ಹೆಚ್ಚು.

ಸಸಿಗಳೇ ಹುಟ್ಟದ ಜಾಗದಲ್ಲಿ ಎಡೆನೆಟ್ಟಿ ಮಾಡುತ್ತಾರೆ. “ಅಲೆ ಹೊಡೆಯದ ಭತ್ತ ಉಣ್ಣಾಕೆ ಬರಲ್ಲ” ಹೀಗಾಗಿ ಕೊರಡು ಕಟ್ಟಿ ಕುಲ್ಕು ಹೊಡೆದು ಕಳೆ ತೆಗೆಯುತ್ತಾರೆ.  ಕೊರಡಿಗೆ ತಟ್ಟಿ, ಮುಳ್ಳು, ಬಿದಿರು ಕಟ್ಟಿ ಕಸಗುಡಿಸುತ್ತಾರೆ.

ಸಸಿ ನೊಂದಂಗೆ, ತೆನೆ ಬಂದಂಗೆ ಅನೋ ಮಾತಿನಂತೆ ಸಸಿಗಳಿಗೆ ಅನೇಕಸಾರಿ ಪೆಟ್ಟಾಗುತ್ತದೆ.  ಹೆಚ್ಚು ನೋವಾದಂತೆ ಹೆಚ್ಚು ಗಟ್ಟಿಯಾಗಿ ಬಲವಾಗಿ ಬೇರು ಬಿಟ್ಟು, ಹೊಡೆಯೊಡೆಯುತ್ತದೆ.  ತೆನೆಯೊಡೆಯುತ್ತದೆ ಎಂಬುದು ನಂಬಿಕೆ.

ರೋಗಗಳು ಬರದೇ ಇರಲಿ ಎಂದು ಕರೆಮೂಡಿಗೆ, ತುಂಬ್ರು, ನೆಲ್ಲಿ ಕೊಂಬೆಗಳನ್ನು ಅಲ್ಲಲ್ಲಿ ಹುಗಿಯುತ್ತಾರೆ. ಮಳೆಗಾಲ ಸಾಗಿದಂತೆ ಮಳೆಯೊಂದಿಗೆ ಸಸಿಗಳೂ ಮೇಲೇರತೊಡಗುತ್ತದೆ.

ಮಳೆ ಹೆಚ್ಚಿದಂತೆ ಹೊಳೆಗಳು ತುಂಬುತ್ತವೆ.  ಅಕ್ಕಪಕ್ಕದ ಜಮೀನು ಬಳಸಿ ಹರಿಯತೊಡಗುತ್ತದೆ.  ಈಗ ನೆರೆ ಎದುರಿಸುವ ತಳಿಗಳ ಹರಸಾಹಸ ಪ್ರಾರಂಭವಾಗುತ್ತವೆ.

ನೆರೆ ಪಾದ ಮುಚ್ಚುವಷ್ಟು ಬರುತ್ತಿದ್ದಂತೆ ಬೇರುಗಳೆಲ್ಲಾ ಗಟ್ಟಿಯಾಗುತ್ತವೆ.  ನೀರು ಮೇಲೇರಿದಂತೆಲ್ಲಾ ಕಾಂಡಗಳೆಲ್ಲಾ ಉದ್ದವಾಗಿ ನೀರಮೇಲೆ ಚಿಗುರೊಡೆಯುತ್ತವೆ.  ಮೊಣಕಾಲು ಮಟ್ಟ ಏರಿದಾಗ ಚಿಗುರಿದ ಎಲೆಗಳು ನೀರು ನಿರೋಧಕ ಗುಣ ಪಡೆಯುತ್ತವೆ! ಮನುಷ್ಯನ ಗಂಟಲುಮಟ್ಟ ಬಂದಾಗ ಸಸಿಗಳೆಲ್ಲಾ ಮುಳುಗಿ ಹೋದರೂ ಹಸುರು ಕಳೆದುಕೊಳ್ಳುವುದಿಲ್ಲ.  ನೆಲವನ್ನು ಗಟ್ಟಿಯಾಗಿ ಕಚ್ಚಿಕೊಂಡು ಉಸಿರಾಡುತ್ತಲೇ ಇರುತ್ತವೆ.

ಹೀಗೆ ಬಂದ ನೆರೆ ಇಳಿಯಲು ೧೫ ದಿನ ಬೇಕು.  ಕೆಲವೊಮ್ಮೆ ೪೦-೬೦ ದಿನಗಳು.  ಮಳೆ ಸಣ್ಣಗೆ ಬರುತ್ತಿದ್ದರೆ ನೀರು ತಣ್ಣಗೆ ಇರುತ್ತದೆ.  ಬಿಸಿಲು ಬಂದರೆ ನೀರು ಬಿಸಿಯಾರಿ ಸಸಿಗಳು ಬಾಡಿ, ಕೊಳೆಯತೊಡಗುತ್ತದೆ.

ನೆರೆ ಕ್ರಮೇಣ ತಿಳಿಯಾಗುತ್ತಾ ಕೊಳೆ, ಮೆಕ್ಕಲು ಮಣ್ಣೆಲ್ಲಾ ನೆಲಕ್ಕೆ ಇಳಿದು ಉಳಿಯುತ್ತದೆ.  ನೀರು ಹರಿದು ಹೋಗುತ್ತದೆ.

ಬೆಳೆದ ಸಸಿಗಳು ನೆರೆ ಇಳಿದ ನಾಲ್ಕು ಐದು ದಿನಕ್ಕೆ ಹೊಡೆಯೊಡೆದು ಬಿಡುತ್ತದೆ. ಅರ್ಧ ಕೊಳೆತ ಸಸಿಗಳಲ್ಲೂ ಅದೆಲ್ಲೋ ಜೀವವಿರುತ್ತದೆ. ಪಕ್ಕದ ಸಂಧಿಯಿಂದ ಚಿಗುರಿಯೇ ಬಿಡುತ್ತದೆ.  ನೆರೆತಂದ ಕಸಕಡ್ಡಿ, ಮೆಕ್ಕಲು ಮಣ್ಣೇ ಇವಕ್ಕೆ ಸಕಲ ಪೋಷಕಾಂಶಗಳುಳ್ಳ ಗೊಬ್ಬರ. ಬೇರೆ ಗೊಬ್ಬರದ ಅವಶ್ಯಕತೆಯೇ ಇಲ್ಲ. ಅನಂತರ ತೆನೆಯೊಡೆಯುವುದು, ಕಾಳುಗಟ್ಟುವುದು ಎಲ್ಲಾ ಸರಸರನೆ ನಡೆಯುತ್ತದೆ. “ನೆರೆಬಂದ ಗದ್ದೆ, ರೋಗದಿಂದ ದೂರ”ಬೆಳೆದ ಸಸಿಗಳು ನೆರೆ ಇಳಿದ ನಾಲ್ಕು ಐದು ದಿನಕ್ಕೆ ಹೊಡೆಯೊಡೆದು ಬಿಡುತ್ತದೆ. ಅರ್ಧ ಕೊಳೆತ ಸಸಿಗಳಲ್ಲೂ ಅದೆಲ್ಲೋ ಜೀವವಿರುತ್ತದೆ.  ಪಕ್ಕದ ಸಂಧಿಯಿಂದ ಚಿಗುರಿಯೇ ಬಿಡುತ್ತದೆ.  ನೆರೆತಂದ ಕಸಕಡ್ಡಿ, ಮೆಕ್ಕಲು ಮಣ್ಣೇ ಇವಕ್ಕೆ ಸಕಲ ಪೋಷಕಾಂಶಗಳುಳ್ಳ ಗೊಬ್ಬರ. ಬೇರೆ ಗೊಬ್ಬರದ ಅವಶ್ಯಕತೆಯೇ ಇಲ್ಲ. ಅನಂತರ ತೆನೆಯೊಡೆಯುವುದು, ಕಾಳುಗಟ್ಟುವುದು ಎಲ್ಲಾ ಸರಸರನೆ ನಡೆಯುತ್ತದೆ. ನೆರೆಬಂದ ಗದ್ದೆ, ರೋಗದಿಂದ ದೂರ ಯಾವ ರೋಗಗಳೂ ಈ ಗದ್ದೆಯನ್ನು ಕಣ್ಣೆತ್ತಯೂ ನೋಡುವುದಿಲ್ಲ.

ನೆರೆ ಗದ್ದೆಗೆ ಈ ತಳಿಗಳು ಅನಿವಾರ್ಯವೂ ಹೌದು. ಅವಶ್ಯಕವೂ ಹೌದು. ನೆರೆಯಿಂದಾಗಿಯೇ ಇಂತಹ ತಳಿಗಳು ಉಳಿದಿವೆ.  ಒಣಬಿತ್ತನೆ, ಬಿತ್ತನೆಯಂತಹ ಸಾಂಪ್ರದಾಯಿಕ ಕೃಷಿ ಪದ್ಧತಿಗಳು ಇಳಿದಿವೆ.  ರುಚಿಯಾದ ಪೌಷ್ಠಿಕ, ರಾಸಾಯನಿಕ ರಹಿತ ದಪ್ಪ ಭತ್ತ, ಬೀಜ, ಹುಲ್ಲು ಇಂದಿಗೂ ಈ ಪ್ರದೇಶಗಳಲ್ಲಿ ಲಭ್ಯ.

ನೆರೆಯಿಂದಾಗಿ ಒಂದೊಮ್ಮೆ ಇಡೀ ಗದ್ದೆಯೇ ನಾಶವಾದರೂ ಬರರತ್ನಚೂಡಿ, ನೆಟ್ಟಿಜಡ್ಡು ಮುಂತಾದ ಬೇಗ ಫಸಲುಬರುವ ತಳಿಗಳನ್ನು ನಾಟಿಮಾಡಿ ಫಲಪಡೆಯುತ್ತಾರೆ.

ಭತ್ತದ ತಳಿ ನೀರೊಳಗಿರಬಲ್ಲ ಅವಧಿ ಬೆಳೆಯ ಅವಧಿ ಇಳುವರಿ ಅಂದಾಜು ಬೆಳೆಯುವ ವಿಧಾನ
ನೆರೆಗೂಳ್ಳಿ (ದಪ್ಪ) 30-40 ದಿನಗಳು ಆರು ತಿಂಗಳು 8-9 ಕ್ವಿಂಟಾಲು ಸಾವಯವ, ಬಿತ್ತನೆ
ಕರೆಜಡ್ಡು (ದಪ್ಪ) 30-35 ದಿನಗಳು ಐದೂವರೆ ತಿಂಗಳು 9-10 ಕ್ವಿಂಟಾಲು ಸಾವಯವ, ಬಿತ್ತನೆ
ಅಕ್ಕಿಬಾಳ (ದಪ್ಪ) 20-25 ದಿನಗಳು ಆರು ತಿಂಗಳು 15 ಕ್ವಿಂಟಾಲು ಸಾವಯವ, ಬಿತ್ತನೆ
ಜಡ್ಡುಭತ್ತ (ದಪ್ಪ) 25-30 ದಿನಗಳು ಐದೂವರೆ ತಿಂಗಳು 10 ಕ್ವಿಂಟಾಲು ಸಾವಯವ, ಬಿತ್ತನೆ
ಬುಡ್ಡ (ದಪ್ಪ) 25-30 ದಿನಗಳು ಐದು ತಿಂಗಳು 18 ಕ್ವಿಂಟಾಲು ಸಾವಯವ, ಬಿತ್ತನೆ
ಸಣ್ಣವಳ್ಯ (ಸಣ್ಣ) 20-25 ದಿನಗಳು ಐದು ತಿಂಗಳು 15 ಕ್ವಿಂಟಾಲು ಸಾವಯವ, ಬಿತ್ತನೆ / ನೆಟ್ಟಿ

 

ತಳಿ ವೈವಿಧ್ಯ

ಸಾಗರ ಕೇವಲ ನೆರೆ ಎದುರಿಸುವ ತಳಿಗಳಿಗೊಂದೇ ಅಲ್ಲ ಕೆಂಪಕ್ಕಿ, ಪರಿಮಳದಕ್ಕಿ, ಮಂಡಕ್ಕಿ, ಅವಲಕ್ಕಿ ಮುಂತಾಚವುಗಳಿಗೂ ಪ್ರಸಿದ್ಧ. ಸಿಹಿಯಾದ ಕೆಂಪಕ್ಕಿಗೆ ಸಿದ್ದಸಾಲೆ, ಶ್ರೀಮಂತರ ಊಟಕ್ಕೆ ರಾಜಭೋಗ. ಅವಲಕ್ಕಿಗೆ ಬಿಳಿ ಇಂಟಾನ್, ಮಂಡಕ್ಕಿಗೆ ಇಂಟಾನ್, ಗೌರಿ, ಪಾಯಸಕ್ಕೆ ಪರಿಮಳಸಾಲೆ, ಗಂಧಸಾಲೆ, ಕುಂಕುವು ಕೇಸರಿ, ಮಲ್ಲಿಗೆಯಂತಹ ಅನ್ನಕ್ಕೆ ಚಿಟಗೆ, ಬುತ್ತಿ ಅನ್ನಕ್ಕೆ ಸಣ್ಣವಳ್ಯ, ಚಕ್ಕುಲಿಗೆ ಕರಿಕಾಲ್‌ದಡಿಗ, ಹೊನಸು, ತೆಳು ಸಿಪ್ಪೆ ಭತ್ತ, ದಪ್ಪ ಸಿಪ್ಪೆ ಭತ್ತ, ಉದ್ದ ಭತ್ತ, ಮೀಸೆ ಭತ್ತ ಹೀಗೆ ಎಷ್ಟೆಲ್ಲಾ ತಳಿಗಳೂ ಇವೆ.  ನೆಟ್ಟಿ ಜಡ್ಡು ಭತ್ತದ ಗಂಜಿ‌ಉಂಡರೆ ದಿನವೆಲ್ಲಾ ಕೆಲಸಮಾಡಬಹುದು ಎನ್ನುವವರೂ ಇದ್ದಾರೆ.

ಇಡೀ ಹೊಲದಲ್ಲಿ ಗಂಡು, ಜೊಳ್ಳಾಗುವ ಸಸಿ ತೋರಿಸುವ ನ್ಯಾರೆಯಿಂಡ ಎನ್ನುವ ತಳಿಯೂ ಇಲ್ಲಿಯದು.  ಅಷ್ಟೇ ಅಲ್ಲ ದೋಸೆಗೆ, ಇಡ್ಲಿಗೆ (ಮಲ್ಲಿಗೆ ಇಡ್ಲಿ ಕೇಳಿದ್ದೀರಾ?) ಮುಂತಾದವುಗಳಿಗೂ ವಿಶೇಷ ತಳಿಗಳಿವೆ.

ಬಾಕ್ಸ:

ನೆರೆಗೂಳಿಯ ಹರಸಾಹಸ

ಪುರಾಣದಲ್ಲಿ ಭೂಮಿಯ ಒಡೆತನ ಹಂದಿಗಳಿಗೆ ಸೇರಿತ್ತು. ಅವು ಭೂಮಿಯನ್ನು ಉತ್ತು ಬಿತ್ತಿ ಕಷ್ಟಪಟ್ಟು ಬೆಳೆ ಬೆಳೆಯುತ್ತಿದ್ದವು.  ಆದರೆ ಮಳೆರಾಯ ಅದನ್ನು ಸಹಿಸದೆ ಮಳೆಯನ್ನು ತಡವಾಗಿಸುವುದು.  ಅತಿಯಾಗಿ ಸುರಿಸಿ ಹೊಲಗಳನ್ನೆಲ್ಲಾ ಮುಳುಗಿಸಿ ಬಿಡುತ್ತಿದ್ದ ಬೀಜಗಳು, ಸಸಿಗಳೆಲ್ಲಾ ನೀರಿನಡಿಯಲ್ಲಿ ಧ್ವಂಸ.  ಪಾಪ ಹಂದಿರೈತರು! ನೆಲಕ್ಕೆ ಮೂಗುಕಚ್ಚಿ ಬೀಜಗಳನ್ನು ಹುಡುಕುವುದು ಮತ್ತೆ ಬೇಸಾಯ ಮಾಡುವುದು. ಪ್ರತಿವರ್ಷ ಇದೇ ಗೋಳು.

ಎಲ್ಲಾ ರೈತ ಹಂದಿಗಳೂ ವರಾಹಮಹಾರಾಜನಲ್ಲಿ ಗೋಳು ತೋಡಿಕೊಂಡವು. ಏನೆಲ್ಲಾ ಪ್ರಾರ್ಥನೆ ಉಪಾಯಗಳಿಗೂ ಮಳೆರಾಯ ಒಲಿಯಲಿಲ್ಲ ಪರಶಿವನೇ ಗತಿಯಾಯ್ತು.  “ನಮ್ಮ ನಂದಿ ನೋಡಿಕೊಳ್ಳುತ್ತಾನೆಂದು” ಶಿವ ಅಭಯವಿತ್ತ ಹಂದಿರೈತರು ನಂದಿ ರಕ್ಷಕನೊಂದಿಗೆ ಧರೆಗಿಳಿದರು.  ಉತ್ತಿದರು, ಬಿತ್ತಿದರು ಮಳೆರಾಯ ಹಿಂದಿಗಿಂತಲೂ ಜೋರಾಗಿ ಆರ್ಭಟಿಸಿದ.  ಆಡಿಮಳೆ ಸುರಿಯಿತು. ನೆರೆ ಏರಿತು ನಂದಿ ಹೊಲಕ್ಕಿಳಿಯಿತು?!

ಬಿತ್ತಿದ ಬೀಜಗಳಿಗೆ, ಸಸಿಗಳಿಗೆ ಸೂಪರ್‌ಶಕ್ತಿ ಹರಿಸಿತು.  ಸಸಿಗಳು ನೆರೆ ನೀರನ್ನು ಮೆಟ್ಟಿ ಮೇಲೇರತೊಡಗಿದವು.  ಮಳೆ ಹೆಚ್ಚಿ ನೆರೆ ಏರಿದಂತೆ ನೀರಿನ ಮೇಲೆ ತಲೆ‌ಎತ್ತಿನಿಂತವು.  ಭೂಮಂಡಲವೇ ನೀರಿನೊಳಗೆ ಮುಳುಗಿದರೂ ನಂದಿ ಶಕ್ತಿಯ ಸಸಿಗಳು ಗೂಳಿಯಂತೆ ಮೇಲೆದ್ದವು.

ಮಳೆ ಸುರಿಸಿ ಸುರಿಸಿ ಮಳೆರಾಯ ಸೋತ.  ಈ ಗಡವ ಗೂಳಿಯಿಂದಾಗಿಯೇ ಸೋತೆ ಎಂದು ಅತ್ತ.  ನೆರೆಯಿಳಿಯಿತು.  ಒಳ್ಳೆ ಫಷಲೂ ಬಂತು.  ಹಂದಿ ರೈತರು ನಂದಿದೇವರಿಗೆ ರುಚಿರುಚಿಯಾದ ಹುಲ್ಲಿನ ಔತಣ ನೀಡಿದರು.  ಭತ್ತದ ಬೀಜಕ್ಕೆ ನೆರೆಗೂಳಿ ಎಂಬ ಹೆಸರು ಬಂತು.  ಮುಂದೆ ನೆರೆಯನ್ನೆದುರಿಸುವ ಶಕ್ತಿ ಹೊಂದಿತು.

ಹೇಳಿದವರು : ಬಿ. ಈಶ್ವರಪ್ಪ