ದಾಮಾಷಾ :

ಕೋಲಾರ ಜಿಲ್ಲೆಯ ಈ ಊರಿನಲ್ಲಿ ಕೆರೆಯ ನೀರಿನ ಮಟ್ಟ ಕೆಳಕ್ಕೆ ಇಳಿದಾಗ ಊರವರೆಲ್ಲ ಸಭೆ ಸೇರುತ್ತಾರೆ. ಭತ್ತದ ಜಮೀನಿನ ಮರುಹಂಚಿಕೆ ನಡೆಯುತ್ತದೆ. ಕೆರೆಯಿಂದ ದೂರದಲ್ಲಿ ಇರುವ ರೈತನಿಗೆ ಕೆರೆಯ ಬಳಿಯೇ ಫಸಲು ತೆಗೆಯಲು ಅವಕಾಶ ಮಾಡಿಕೊಡಲಾಗುತ್ತದೆ. ಅಲ್ಲಿ ಮೇಲು ಕೀಳು, ಜಾತಿಭೇದ ಎಂಥದೂ ಇಲ್ಲ. ಕಷ್ಟದ ದಿನಗಳಲ್ಲಿ ಎಲ್ಲರಿಗೂ ಸಮಬಾಳು-ಸಮಪಾಲು! ಇಂಥ ಉದಾತ್ತ ಉದಾಹರಣೆ ನಿಮಗೆ ಬೇರೆಲ್ಲೂ ಸಿಗಲಿಕ್ಕಿಲ್ಲ.

ಇದು ದಾಮಾಷಾ

ಗ್ರಾಮೀಣ ಭಾಗದ ಜೀವನರೇಖೆಗಳಾಗಿರುವ ಕೆರೆಗಳು ತುಂಬಿಕೊಂಡರೆ, ಅದರ ಅಚ್ಚುಕಟ್ಟು ಪ್ರದೇಶದ ರೈತರಿಗೆ ಖುಷಿ. ಒಂದು ವೇಳೆ ಮಳೆ ಪ್ರಮಾಣ ಕಡಿಮೆಯಾಗಿ ಕೆರೆಯ ಅರ್ಧವೋ, ಕಾಲುಭಾಗವೋ ಮಾತ್ರ ನೀರಿದ್ದರೆ ಯಾರಿಗೆ ಲಾಭ? ಅಂಥ ಪರಿಸ್ಥಿತಿಯಲ್ಲಿ ಕೆರೆಯ ಹತ್ತಿರ ಜಮೀನಿರುವ ರೈತರಿಗೆ ಅದೃಷ್ಟ.

ಆದರೆ ‘ದಾಮಾಷಾ’ ಎಂಬ ವಿಧಾನ ಅಳವಡಿಸುವ ಹಳ್ಳಿಗಳಲ್ಲಿ ಎಲ್ಲರಿಗೂ ಲಾಭ…!

ಏನಿದು ದಾಮಾಷಾ?

ಸರಳವಾಗಿ ಹೇಳಬೇಕೆಂದರೆ ‘ಹಂಚಿಕೊಂಡು ಬಾಳುವುದು’. ಸಹಕಾರ, ಸೌಹಾರ್ದ, ಪ್ರಾಮಾಣಿಕತೆ, ಸಮಾನ ಹಂಚಿಕೆಗೆ ಇನ್ನೊಂದು ಹೆಸರೇ ‘ದಾಮಾಷಾ’. ಇದು ಮೂಲತಃ ಪರ್ಷಿಯನ್ ಶಬ್ದ. ದಾಮಾಸಿ, ದಾಮಸಿ ಎನ್ನುವುದೂ ಉಂಟು. ಕೋಲಾರ ಜಿಲ್ಲೆಯ ಕನಿಷ್ಠ ನಾಲ್ಕರಿಂದ ಐದು ಹಳ್ಳಿಗಳಲ್ಲಿ ಈಗಲೂ ಈ ಪದ್ಧತಿ ಅನುಸರಿಸುತ್ತಾರೆ.

ಏನಂದಿರಿ? ಈಗಿನ ಕಾಲದಲ್ಲಿ ಎಲ್ಲಾದರೂ ಇದು ಸಾಧ್ಯ ಇದೆಯೆ? ಪ್ರಾಮಾಣಿಕತೆ, ಸರ್ವರಲ್ಲೂ ಸಮಭಾವ, ಜಾತ್ಯತೀತ ಮನೋಭಾವ ಇವೆಲ್ಲ ವೇದಿಕೆಯ ಮೇಲಿನ ಭಾಷಣಗಳಲ್ಲಿ ಮಾತ್ರ ಕಾಣುತ್ತೇವೆ. ನಿಜಕ್ಕೂ ಕೋಲಾರ ಜಿಲ್ಲೆಯಲ್ಲಿ ಇಂದಿಗೂ ಇದು ಕಾಣಬರುತ್ತಿದೆಯೆ?

ಹೌದು, ಬೋಡಂಪಲ್ಲಿಗೆ ಬನ್ನಿ.

ಚಿಂತಾಮಣಿ ತಾಲ್ಲೂಕಿನ ಚಿಕ್ಕ ಗ್ರಾಮ ಬೋಡಂಪಲ್ಲಿ. ಇದರ ಪಕ್ಕದಲ್ಲಿದೆ ‘ದೊಡ್ಡಕೆರೆ’.  55 ಎಕರೆ ವಿಸ್ತೀರ್ಣವ್ದಿದು ಸುಮಾರು 80 ಎಕರೆಗೆ ನೀರಾವರಿ ಸೌಲಭ್ಯ ಒದಗಿಸುತ್ತದೆ. 30 ಎಕರೆಯಿರುವ ಪಕ್ಕದ ಚಿಕ್ಕಕೆರೆ 50 ಎಕರೆಗೆ ನೀರು ನೀಡುತ್ತದೆ. ಬೋಡಂಪಲ್ಲಿಯಲ್ಲಿ 225 ಹಾಗೂ ಚನ್ನರಾಯನಹಳ್ಳಿಯಲ್ಲಿ 120 ಕುಟುಂಬಗಳಿದ್ದು ಎರಡೂ ಗ್ರಾಮದ ಶೇ 75ರಷ್ಟು ಜನರಿಗೆ ಜಮೀನು ಇದೆ.

ಕೆರೆಯಲ್ಲಿ ನೀರಿನ ಪ್ರಮಾಣ ಕಡಿಮೆಯಿದ್ದ ಸಂದರ್ಭದಲ್ಲಿ ‘ದಾಮಾಷಾ’ ನಡೆಯುತ್ತದೆ. ಅಚ್ಚುಕಟ್ಟು ವ್ಯಾಪ್ತಿಯ ಎಲ್ಲರೂ ಬೆಳೆ ಪಡೆಯಬೇಕು ಎಂಬುದು ಇದರ ಉದ್ದೇಶ. ಅದರ ಹಂತಗಳು ಹೀಗಿವೆ.

ಮಳೆಗಾಲ ಮುಗಿದು ‘ಇನ್ನು ನೀರು ಸಿಗುವುದು ಇಷ್ಟು’ ಎಂದು ಖಚಿತವಾದ ಮೇಲೆ ಊರಿನಲ್ಲಿ ಡಂಗುರ ಸಾರಲಾಗುತ್ತದೆ. ಪ್ರಮುಖರು, ರೈತರು ಒಂದೆಡೆ ಸಭೆ ಸೇರಿ ಕೆರೆಯ ನೀರನ್ನು ಎಷ್ಟು ಜಮೀನಿಗೆ ಬಳಸಬಹುದು ಎಂಬ ಬಗ್ಗೆ ನಿರ್ಧಾರ ತೆಗೆದುಕೊಳ್ಳುತ್ತಾರೆ. ನಂತರ ಆ ಜಮೀನನ್ನು ಹಂಚುವ ಕೆಲಸ. ಊರಿನ ಮುಖ್ಯಸ್ಥನೊಬ್ಬನಿಗೆ ಇದರ ಜವಾಬ್ದಾರಿ ವಹಿಸಲಾಗುತ್ತದೆ. ಅಚ್ಚುಕಟ್ಟು ವ್ಯಾಪ್ತಿಯ ಎಲ್ಲ ರೈತರ ಜಮೀನಿನ ಪಹಣಿ ಪತ್ರ ಗಮನಿಸುವ ಮುಖ್ಯಸ್ಥ, ಅವರಿಗೆ ಪಾಲು ನೀಡುತ್ತಾನೆ.

ಉದಾಹರಣೆಗೆ ಬೋಡಂಪಲ್ಲಿ ಕೆರೆಯ 80 ಎಕರೆಯಲ್ಲಿ ಕೇವಲ 40 ಎಕರೆಗೆ (ಅಂದರೆ ಅರ್ಧ ಭಾಗಕ್ಕೆ) ಮಾತ್ರ ಈ ಬಾರಿ ನೀರು ಸಿಗಬಹುದು ಎಂದರೆ, ಸಹಜವಾಗಿ ಆ ನೀರು ಕೆರೆಯ ಬಳಿ ಇದ್ದ ಜಮೀನಿಗೇ ಸಿಗುತ್ತದೆ. ಆ ಭೂಮಿಯನ್ನೇ ಊರಿನ ಎಲ್ಲ ರೈತರಿಗೆ ಅಲ್ಲಿ ವಿತರಿಸಲಾಗುತ್ತದೆ. ಆ ಬೆಳೆ ತೆಗೆಯುವ ಮಟ್ಟಿಗೆ ಆ ಜಮೀನಿಗೆ ಎಲ್ಲರೂ ಮಾಲಿಕರು. ಅದು ಊರಿನ ಸಾಮೂಹಿಕ ಆಸ್ತಿ ಆಗುತ್ತದೆ! ‘ಅದು ನನ್ನ ಜಮೀನು. ನಾನೇಕೆ ಅದನ್ನು ಬೇರೆಯವರಿಗೆ ಬಿಟ್ಟು ಕೊಡಬೇಕು?’ ಎಂಬ ಮಾತು ಬರುವುದೇ ಇಲ್ಲ. ಆತನ ಜಮೀನಿನಲ್ಲೇ ಇಲ್ಲಿ ಈತನಿಗೂ ಪಾಲು ನೀಡಲಾಗುತ್ತದೆ.

ಕೆರೆಯಿಂದ ದೂರವಿರುವ ರೈತನಿಗೆ ‘ನನಗೆ ನೀರು ಸಿಗುವುದಿಲ್ಲ’ ಎಂಬ ಕೊರತೆ ಕಾಡದು. ಏಕೆಂದರೆ ಆತನಿಗೆ ಸಹ ಇಲ್ಲೇ ಸ್ಥಳ ಕೊಡಲಾಗುತ್ತದೆ.

ಇನ್ನೊಂದು ಕುತೂಹಲದ ಸಂಗತಿ ಎಂದರೆ, ಎಷ್ಟೇ ಕಡಿಮೆ ಜಮೀನಿದ್ದರೂ ಹಂಚಿಕೆಯ ಅನುಪಾತಕ್ಕೆ ತಕ್ಕಂತೆ ಪ್ರತಿ ರೈತನಿಗೂ ಇಲ್ಲಿ ಜಾಗ ಒದಗಿಸಲಾಗುತ್ತದೆ. ಹೀಗಾಗಿಯೇ ನಾಲ್ಕು ಗುಂಟೆ (0.1 ಎಕರೆ)ಯ ಕೃಷಿಕನಿಗೂ ಎರಡು ಗುಂಟೆಯಲ್ಲಿ ಬೆಳೆ ತೆಗೆಯುವ ಅವಕಾಶ.

ಎಲ್ಲ ರೈತರಿಗೆ ಜಮೀನು ವಿತರಿಸಿದ ಬಳಿಕ, ‘ನೀರುಗಂಟಿ’ಯ ಕೆಲಸ ಆರಂಭವಾಗುತ್ತದೆ. ಭತ್ತವನ್ನೇ ಬೆಳೆಯುವ ಕಾರಣ, ನಿಗದಿತವಾಗಿ ಎಲ್ಲರ ಜಮೀನಿಗೂ ನೀರು ಹರಿಸುತ್ತ ಬೆಳೆ ರಕ್ಷಿಸುವುದು ಆತನ ಕೆಲಸ. ಬೆಳೆ ಕೊಯ್ಲು ಆದ ಬಳಿಕ ನೀರುಗಂಟಿಯ ಕೆಲಸಕ್ಕೆ ಪ್ರತಿ ರೈತನೂ ಒಂದು ಭಾಗ ಭತ್ತ ನೀಡುತ್ತಾನೆ.

ಅನಾದಿಕಾಲದ ಅನುಪಮ ಪದ್ಧತಿ

ಸಿಗುವ ಅಲ್ಪ ನೀರಿನಲ್ಲೇ ಒಗ್ಗಟ್ಟಿನೊಂದಿಗೆ ಸಾಂಪ್ರದಾಯಿಕ ವಿಧಾನದಿಂದ ಎಲ್ಲರೂ ಬೆಳೆ ತೆಗೆಯುವ ಅದ್ವಿತೀಯ ಪದ್ಧತಿಯಿದು. ಸಹಕಾರ-ಹಂಚಿಕೆಗೆ ಉತ್ಕೃಷ್ಟ ನಿದರ್ಶನವಾಗಿರುವ ‘ದಾಮಾಷಾ’ ಯಾವತ್ತು ಆರಂಭವಾಯಿತು ಎಂಬ ಬಗ್ಗೆ ಸ್ಪಷ್ಟವಾದ ದಾಖಲೆಗಳು ಇಲ್ಲ. ಬೋಡಂಪಲ್ಲಿಯಲ್ಲಿ ‘ದಾಮಾಷಾ’ದ ಜವಾಬ್ದಾರಿ ಹೊತ್ತ ಬಿ.ವಿ. ಆಂಜನಪ್ಪ 1965ರಿಂದ ಈಚೆಗೆ ಈ ಕೆಲಸ ನಿರ್ವಹಿಸುತ್ತಿದ್ದಾರೆ. ನಲವತ್ತು ವರ್ಷಗಳ ಸಮಯದಲ್ಲಿ ಅನೇಕ ಬಾರಿ ‘ದಾಮಾಷಾ’ವನ್ನು ನಿರ್ದೇಶಿಸಿದ ಅನುಭವ ಅವರದು.

ನೀರಿನ ಅಭಾವವೇ ಇಂಥ ಪದ್ಧತಿ ಉಳಿದುಕೊಂಡು ಬರಲು ಕಾರಣ ಎಂದು ಆಂಜನಪ್ಪ ಹೇಳುತ್ತಾರೆ. ‘‘ಇದು ಕಾನೂನು ಬದ್ಧವೇನಲ್ಲ; ಇಲ್ಲಿ ಜಾತಿ-ಭೇದ ಇಲ್ಲ. ‘ದಾಮಾಷಾ’ ಹಾಕಿದ ಮೇಲೆ ಬೆಳೆ ಕೈಗೆ ಬಂದೇ ಬರುತ್ತದೆ. ಹೀಗಾಗಿ ಕೆರೆಯಲ್ಲಿ ಎಷ್ಟೇ ನೀರಿದ್ದರೂ ಎಲ್ಲರಿಗೂ ಭತ್ತ ಸಿಗುತ್ತದೆ. ಒಮ್ಮೊಮ್ಮೆ ಶೇಕಡ 10ರಷ್ಟು ಕೆರೆ ತುಂಬಿದ್ದರೂ ಅಷ್ಟನ್ನೇ ಹಂಚಿಕೊಂಡು ಬೆಳೆ ತೆಗೆದ್ದಿದೇವೆ’ ಎಂದು ಹಲವು ಅಚ್ಚರಿಯ ಮಾಹಿತಿಯನ್ನು ಅವರು ಮುಂದಿಡುತ್ತಾರೆ.

ನೀರುಗಂಟಿಯ ನಿರಂತರ ಕೆಲಸ

ದೊಡ್ಡಕೆರೆಯಿಂದ ನಿಗದಿತವಾಗಿ ನೀರು ಹಾಯಿಸುವ ‘ನೀರುಗಂಟಿ’ ಬಿ.ಎನ್. ವೆಂಕಟರಾಯಪ್ಪ ಅವರಿಗೆ ತಮ್ಮ ಕೆಲಸದ ಬಗ್ಗೆ ಹೆಮ್ಮೆ: ‘‘ಸಸಿ ನಾಟಿಯಿಂದ ಹಿಡಿದು ಕೊಯ್ಲಿನವರೆಗೆ ಎಲ್ಲರಿಗೂ ನಾನೇ ಅಲ್ವಾ ನೀರು ಕೊಡೋದು? ಹಾಗಾಗಿ ಮೂರೂವರೆ ತಿಂಗಳು ಇಲ್ಲೇ ಇ್ದದುಬಿಡ್ತೇನೆ. ‘ನನ್ನ ಬೆಳೆಗ್ಯಾಕೆ ನೀರು ಹಾಯ್ಸಿಲ್ಲ?’ ಅಂತ ಕೆಲವರು ಕೋಪ ಮಾಡ್ತಾರೆ. ನಾನು ಅವರ್ನೆಲ್ಲ ಸಮಾಧಾನ ಮಾಡ್ಬೇಕು’’.

‘ದಾಮಾಷಾ’ ಒಮ್ಮೆಯೂ ವಿಫಲವಾಗಿಲ್ಲವೇ?

‘ಒಮ್ಮೆ ಮಾತ್ರ’ ಎಂದು ಆಂಜನಪ್ಪ ನೆನಪಿಸಿಕೊಳ್ಳುತ್ತಾರೆ. ‘‘20 ವರ್ಷಗಳ ಹಿಂದೆ ಮಳೆ ತೀರ ಕಡಿಮೆಯಾಗಿತ್ತು. ಕೆರೆಯಲ್ಲಿ ನೀರೂ ಕಡಿಮೆ. ಆದರೆ ಒಬ್ಬ ರೈತ ಮಾತ್ರ ‘ನನ್ನ ಜಮೀನು ದಾಮಾಷಾಕ್ಕೆ ಕೊಡೋಲ್ಲ’ ಅಂತ ಹೇಳಿ ತಾನೇ ನೀರು ಹರಿಸಿಕೊಂಡ. ವಿಧಿಯಿಲ್ಲದೇ ಉಳಿದವರು ಬಿತ್ತನೆ ಮಾಡಿದರು. ಆದರೆ ಅವರಿಗೆಲ್ಲ ಸರಿಯಾಗಿ ನೀರು ದೊರಕದೇ ಬೆಳೆ ಒಣಗಿಹೋಯಿತು. ಇದನ್ನು ನೋಡಿ ಆ ರೈತನ ಮನಸ್ಸು ಬದಲಾಯಿತು. ಮತ್ತೆಂದೂ ಆ ರೀತಿ ನಡೆಯಲಿಲ್ಲ’’.

ಇದರಲ್ಲಿ ಯಾರದೂ ಒತ್ತಾಯವಿಲ್ಲ. ಜನರೇ ಒಂದಾಗಿ ನಿರ್ಧರಿಸುತ್ತಾರೆ. ನನ್ನಂತೆ ಅವನು, ಅವನಂತೆ ನಾನು ಎಂಬ ಮಾತನ್ನು ನೀವು ಇಲ್ಲಿ ಕಾಣಬಹುದು ಎಂದು ಗ್ರಾಮದ ನಿವೃತ್ತ ಶಿಕ್ಷಕ ಶ್ರೀರಂಗಾಚಾರ್ಯ ಹೆಮ್ಮೆಯಿಂದ ನುಡಿಯುತ್ತಾರೆ.

‘ದಾಮಾಷಾ’ಗೆ ಭೂಮಿ ಹಂಚುವಾಗ ಗ್ರಾಮದ ಎಲ್ಲರೂ ಬರಬೇಕೆಂದು ಸಾರುತ್ತಾರೆ. ಆದರೆ ಸಾಕಷ್ಟು ಜನ ಬರುವುದಿಲ್ಲ. ಅದು ಅಸಮಾಧಾನವಾಗಲಿ, ನಿರಾಸಕ್ತಿಯಾಗಲಿ ಅಲ್ಲ; ಪ್ರಮುಖರ ತೀರ್ಮಾನದ ಮೇಲೆ ಅವರು ಇಟ್ಟಿರುವ ನಂಬಿಕೆ.

ಕೋಲಾರದ ಜಲ ಸಂವರ್ಧನೆ ಯೋಜನೆ ಸಂಘದ ಜಿಲ್ಲಾ ಸಾಮಾಜಿಕ ತಜ್ಞ ಎ.ಎಂ. ವೀರೇಶ್ ಅವರು, ಜಿಲ್ಲೆಯಲ್ಲಿ ಈ ಪದ್ಧತಿ ಅನುಸರಿಸುವ ಅನೇಕ ಹಳ್ಳಿಗಳನ್ನು ಪತ್ತೆಹಚ್ಚಿದ್ದಾರೆ. ‘ಮುಳಬಾಗಿಲು ತಾಲ್ಲೂಕಿನ ಬಾಳಸಂದ್ರದಲ್ಲಿ ಸಹ ಈ ವಿಧಾನ ಇದೆ. ಆದರೆ ಅದಕ್ಕೆ ‘ದಾಮಾಷಾ’ ಎಂಬ ಹೆಸರಿದೆ  ಎಂಬುದು ಮಾತ್ರ ಅಲ್ಲಿನ ಜನಕ್ಕೆ ಗೊತ್ತಿಲ್ಲ. ಇನ್ನೊಂದು ವಿಶೇಷವೆಂದರೆ ಹೊರಗಿನಿಂದ ಬಂದು ಇಲ್ಲಿ ನೆಲೆಸುವವರಿಗೂ ಭೂಮಿ ನೀಡಲಾಗುತ್ತದೆ’ ಎಂದು ಅವರು ಹೇಳುತ್ತಾರೆ. ಅಂದರೆ ಶಾಲಾ ಶಿಕ್ಷಕನೊಬ್ಬ ಇಲ್ಲಿಗೆ ವರ್ಗವಾಗಿ ಬಂದರೆ ಆತನಿಗೂ ದಾಮಾಷಾದಲ್ಲಿ ಪಾಲು ಸಿಗುತ್ತದೆ!

ಜಗತ್ತೇ ಒಂದು ಹಳ್ಳಿಯಾಗುತ್ತಿರುವಾಗ. ಕೋಲಾರದ ಸಣ್ಣ ಹಳ್ಳಿಗಳ ಇಂಥ ಸಾಂಪ್ರದಾಯಿಕ ಪದ್ಧತಿ ಎಷ್ಟು ದಿನ ಉಳಿದೀತು? ಗ್ರಾಮಕ್ಕೆ ಟಿವಿ, ಫೋನ್, ಬಸ್ ಸಂಚಾರ ಬಂದ ತಕ್ಷಣವೇ ರಾಜಕೀಯ ಕೂಡ ಅದರೊಂದಿಗೆ ಬರುತ್ತದೆ. ಈ ಅಪಾಯವನ್ನು ಈಗಲೇ ಗ್ರಹಿಸಿಕೊಂಡರೆ, ಅದನ್ನು ನಿವಾರಿಸಿಕೊಂಡರೆ, ಸಹಕಾರ ಚಳವಳಿ ತತ್ವಗಳಿಗೆ ಬೋಡಂಪಲ್ಲಿ ಎಂದೆಂದೂ ಮಾದರಿಯಾದೀತು.

‘ವಸುಧೈವ ಕುಟುಂಬಕಂ’ ತತ್ವಕ್ಕೊಂದು ಜೀವಂತ ಸಾಕ್ಷಿ ಮುಂದಿನ ಪೀಳಿಗೆಗೂ ದಕ್ಕೀತು.

(ಕರ್ನಾಟಕ ದರ್ಶನ- ಮಾರ್ಚ್ 17, 2005)