ಮಳೆ ಇಲ್ಲದೆ ಬೆಳೆ ಹಾನಿಯಾಗಿದೆ. ಪರಿಹಾರ ಕೊಡಿ ಎಂದೇ ಬಹುತೇಕ ರೈತರು ಬೊಗಸೆಯೊಡ್ಡುವಾಗ ನನಗೇಕೆ? ಬೆಳೆ ಬಂದಿದೆಯಲ್ಲಾ?! ಎಂದು ಪರಿಹಾರದ ಪಟ್ಟಿಯಿಂದ ಹಿಂದೆ ಸರಿದವರು ಇಲ್ಲಿದ್ದಾರೆ.

ಹುನಗುಂದ ಸುತ್ತಲಿನ ಹಳ್ಳಿಗಳ ಜನರು ಅನುಸರಿಸುವ ಸಾಂಪ್ರದಾಯಿಕ ವಿಧಾನ ಅವರ ಬುತ್ತಿಚೀಲವನ್ನು ಭದ್ರವಾಗಿಸಿದೆ.

 

‘ಹೋದ ವರ್ಷ ಕೂಡ ಮಳೆ ಕಡಿಮೇನೆ. ಆದರೆ 70-80 ಚೀಲ ಜೋಳ ಸಿಕ್ಕಿವೆ. ಈ ವರ್ಷ ಸಹ 120 ಚೀಲ ಜೋಳ, 80 ಚೀಲ ಸೂರ್ಯಕಾಂತಿ ಹಾಗೂ ಕಡಲೆ 15 ಚೀಲ ಬಂದಿವೆ. ಹಾಗ್ದಿದಲ್ಲಿ ನನಗೇಕೆ ಪರಿಹಾರ? ..ಬೇಡ.. ಬೇಡ’

ಮೂರು ವರ್ಷದಿಂದ ಬರ ಬ್ದಿದು ಬೆಳೆ ಹಾನಿಯಾಗಿದೆ ಎಂದು ಉತ್ತರ ಕರ್ನಾಟಕದ ರೈತರು ಅಂಗಲಾಚುತ್ತಿರುವಾಗ, ಬಾಗಲಕೋಟೆ ಜಿಲ್ಲೆ ಹುನಗುಂದದ ರೈತ ಹನುಮಂತಪ್ಪ ಮುಕ್ಕಣ್ಣವರ ಅವರ ಈ ಮಾತು ಪ್ರತಿಧ್ವನಿಸುವುದಾದರು ಏನನ್ನು? ಖಂಡಿತವಾಗಿ ಅವರೊಬ್ಬ ಪ್ರಾಮಾಣಿಕ. ಆದರೆ ಕೊಳವೆಬಾವಿ ಕೊರೆಸಿ, ಪಂಪ್‌ನಿಂದ ನೀರುಣಿಸಬಲ್ಲಷ್ಟು ಶಕ್ತಿ ಇಲ್ಲ. ಮಳೆಯನ್ನೇ ಆಶ್ರಯಿಸಿದ ಬದುಕು. ಆದರೂ ಸಂತೃಪ್ತ ಜೀವನ.

‘ಮಳೇನೇ ಬರ್ತಾ ಇಲ್ವಲ್ರೀ’ ಅನ್ನುವ ಸಾವಿರಾರು ರೈತರಿಗಿಂತ ಹನುಮಂತಪ್ಪ ಹೇಗೆ ಭಿನ್ನ? ಈ ಪ್ರಶ್ನೆಯಿಟ್ಟುಕೊಂಡು ಹೊರಟಾಗ ಕಂಡ್ದಿದೇ ಇಲ್ಲಿನ ನಾಗರಾಳ ಕುಟುಂಬದ ಸಾರ್ಥಕ ಸೇವೆ. ಮಣ್ಣು ಮತ್ತು ನೀರಿನ ಸಂರಕ್ಷಣೆಗಾಗಿ ಮೂರು ತಲೆಮಾರುಗಳು ತೋರಿದ ಅನನ್ಯ ಕಾಳಜಿ. ಈ ಹಿನ್ನೆಲೆಯಲ್ಲಿ ದಿ† ನಾಗರಾಳ ಸಂಗನಬಸಪ್ಪ, ಅವರ ಪುತ್ರ ದಿ† ಶಂಕರಣ್ಣ ಹಾಗೂ ಅವರ ಪುತ್ರ ಮಲ್ಲಣ್ಣ ಕೃಷಿ ಸಂಸ್ಕೃತಿಯ ಹರಿಕಾರರು ಎಂದರೂ ತಪ್ಪಿಲ್ಲ.

ಸಂಗನಬಸಪ್ಪನವರಿಗೆ ಮಣ್ಣು, ನೀರಿನ ಬಗ್ಗೆ ಕಾಳಜಿ ಮೂಡಿಸಿದ್ದು ಘನಮಠ ನಾಗಭೂಷಣ ಶಿವಯೋಗಿಗಳು ಬರೆದ ‘ಕೃಷಿಜ್ಞಾನ ಪ್ರದೀಪಿಕೆ’ (ಇದು ರಚಿತಗೊಂಡು 170 ವರ್ಷವಾಗಿದ್ದರೂ ಇಂದಿಗೂ ನೆಲದ ಅನುಭವಗಳಿಗೆ ತೀರಾ ಪ್ರಸ್ತುತ ಎನ್ನುವಂತಿದೆ). ಪುತ್ರ ಶಂಕರಣ್ಣ ಈ ಕೃತಿಯನ್ನೇ ಆಧರಿಸಿ, ಕೃಷಿ ಮಾಡಿ ಖ್ಯಾತಿ ಪಡೆದರು. ‘ನೀರು ಮತ್ತು ಮಣ್ಣಿನ ಬಗ್ಗೆ ಇನ್ನಷ್ಟು ಕಲಿಯಲು ಪುಣೆಗೆ ಹೋಗಿದ್ದರು’ ಎಂದು ನೆನಪಿಸಿಕೊಳ್ಳುತ್ತಾರೆ, ಶಂಕರಣ್ಣನವರ ತಮ್ಮ ಸಂಗನಬಸಪ್ಪ.

ಶಂಕರಣ್ಣನವರ ಪುತ್ರ ಮಲ್ಲಣ್ಣ ಈಗ ಅನುಸರಿಸುತ್ತಿರುವುದು ಅವೇ ವಿಧಾನಗಳನ್ನು. ಹಾಗೆ ನೋಡಿದರೆ ಇವತ್ತು ನೆಲಜಲ ಸಂರಕ್ಷಣೆಗೆಂದು ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ರೂಪಿಸುವ ಯೋಜನೆಗಳನ್ನು ಹೊಲದಲ್ಲೇ ಅಲ್ಪ ಪ್ರಮಾಣದಲ್ಲಿ ಹೇಗೆ ಮಾಡಬಹುದು ಎಂಬುದನ್ನು ನಾಗರಾಳ ಕುಟುಂಬ ಎಂದೋ ಸಾಧಿಸಿ ತೋರಿಸಿದೆ. ‘ಬೀಳುವ ಮಳೆನೀರು ತನ್ನೊಂದಿಗೆ ಮೇಲ್ಮಣ್ಣನ್ನು ಕೊಚ್ಚಿಕೊಂಡು ಹೋಗುತ್ತದೆ. ಇದನ್ನು ತಡೆದರೆ ಸಾಕು,   ಉಳಿದದ್ದೇನೂ ಬೇಡ’ ಎನ್ನುತ್ತಾರೆ ಮಲ್ಲಣ್ಣ.

 

ಅಂಗೈಯಂತೆ ಹೊಲ

ಹೊಲವನ್ನು ಅರ್ಧ ಅಥವಾ ಒಂದು ಎಕರೆಯಂತೆ ವಿವಿಧ ಪ್ಲಾಟ್‌ಗಳಾಗಿ ವಿಂಗಡಿಸಿ ಸಮಪಾತಳಿ ಮಾಡಿಕೊಂಡರೆ, ನೀರು ಅಲ್ಲೇ ಇಂಗಲು ಸಾಧ್ಯ. ಇದಕ್ಕಾಗಿ ಸುತ್ತ ಒಡ್ಡು ಹಾಕಿ, ಅಂಗೈಯಂತೆ ಮಾಡಿಕೊಳ್ಳಬೇಕು. ಇಲ್ಲಿ ನಿಲ್ಲುವ ನೀರು ನಿಧಾನವಾಗಿ ಇಂಗಿ, ಹೆಚ್ಚಿನದು ‘ಹೊಲಗಟ್ಟಿ’ ಮೂಲಕ ಮುಂದಿನ ಪ್ಲಾಟ್‌ಗೆ ಹೋಗುತ್ತದೆ. ಆ ಭಾಗವೂ ಇದೇ ರೀತಿಯಿದ್ದರೆ ಅಲ್ಲೂ ನಿಂತು-ಇಂಗಿ ಮತ್ತೆ ಮುಂದಕ್ಕೆ. ಹೀಗೆ ಸಣ್ಣ ಮಳೆಗೂ ಲಕ್ಷಾಂತರ ಲೀಟರ್ ನೀರು ನೆಲಕ್ಕೆ ಇಳಿಯುತ್ತದೆ.

ಒಂದು ವೇಳೆ ಹೆಚ್ಚಿನ ಮಳೆಯಾದರೆ?

ಅದಕ್ಕೆಂದೇ ಜಾಣ್ಮೆಯಿಂದ ರೂಪಿಸಲಾದ ‘ಗುಂಡಾವರ್ತಿ’ ಇದೆ. ನೀರು ಸಾಗುವ ಎರಡು ಪ್ಲಾಟ್‌ಗಳ ಮಧ್ಯೆ ಎತ್ತರ ಕಡಿಮೆ ಇದ್ದಾಗ ‘ಹೊಲಗಟ್ಟಿ’ ರಚಿಸಿದರೆ, ಎತ್ತರ ಜಾಸ್ತಿಯಿದ್ದರೆ ‘ಗುಂಡಾವರ್ತಿ’ ನಿರ್ಮಿಸುತ್ತಾರೆ. ಚಿಕ್ಕ ಬಾವಿಯಂತೆ ಕಾಣುವ ಗುಂಡಾವರ್ತಿಯು ತಳದಲ್ಲಿ ಭೂಗತ ಕೊಳವೆ ಮಾಡಿ, ಮುಂದಿನ ಪ್ಲಾಟ್‌ಗೆ ಸಂಪರ್ಕ ಕಲ್ಪಿಸಲಾಗಿರುತ್ತದೆ. ಹೊಲದಲ್ಲಿ ನಿಂತು ಹೆಚ್ಚಾದ ನೀರು ಇದರ ಮೂಲಕ ಕೆಳಗೆ ಬಿದ್ದು ಮುಂದೆ ಸಾಗುತ್ತದೆ. ‘ಇವೆರಡೂ ವಿಧಾನದಿಂದ ಮಣ್ಣು ಇಲ್ಲೇ ಉಳಿದು ಕೇವಲ ನೀರು ಮುಂದಕ್ಕೆ ಸಾಗುತ್ತದೆ. ನಮ್ಮಲ್ಲಿ ನಿರ್ಮಿಸಿದ ಗುಂಡಾವರ್ತಿ ನೂರು ವರ್ಷಕ್ಕೂ ಹಳೆಯದು’ ಎಂದು ಮಲ್ಲಣ್ಣ ಹೆಮ್ಮೆಯಿಂದ ಹೇಳುತ್ತಾರೆ.

ಶಂಕರಣ್ಣ ಅವರ ಕಾಳಜಿಯಿಂದಾಗಿಯೇ ಹುನಗುಂದ ಸುತ್ತಲಿನ ಅನೇಕ ರೈತರು ಹೊಲಗಳಿಗೆ ಒಡ್ಡು ಹಾಕಿಕೊಳ್ಳುವಂತಾಯಿತು. ಅಚ್ಚರಿಯ ವಿಷಯವೆಂದರೆ, ಈ ಕೆಲಸ ಇವತ್ತಿಗೂ ಮುಂದುವರಿದೇ ಇದೆ. ಏರು ತಗ್ಗಿನ ಹೊಲವನ್ನು ಸಮಪಾತಳಿ (ಇದಕ್ಕೆ ‘ತಿದ್ದುವುದು’ ಎನ್ನುತ್ತಾರೆ) ಮಾಡಿಕೊಳ್ಳುವ ಕೆಲಸ ಇಂದಿಗೂ ಅನೇಕ ಕಡೆ ನಡೆದಿದೆ. ಇದಕ್ಕಾಗಿ ಅನುಭವಿಗಳ ಮಾರ್ಗದರ್ಶನ ಬೇಕೇ ಬೇಕು. ಶಂಕರಣ್ಣನವರ ಗರಡಿಯಲ್ಲಿ ರೂಪುಗೊಂಡ ಹನುಮಂತಪ್ಪ, ಮುರ್ತುಸಾಬ್ ಲೈನ್, ಶಿವನಾಗಪ್ಪ ದರ್ಗಾದ್, ಮರಿಯಪ್ಪ ಹಂಡಿ, ಫಕೀರಪ್ಪ ಕುರಿ ಅವರಂಥ ‘ತಜ್ಞ’ರು ಯಾವಾಗಲೂ ಬಿಜಿ! ‘ನಾಲ್ಕೈದು ಜನರಿಂದ ಹಿಡಿದು ನೂರೈವತ್ತು ಆಳು ಬಳಸಿ ಕೆಲಸ ಮಾಡುತ್ತೇವೆ. ಸ್ವಲ್ಪ ಜಾಸ್ತಿ ವೆಚ್ಚವೇ. ಆದರೆ ಅದರಿಂದ ಏನು ಲಾಭ ಎಂಬುದು ರೈತರಿಗೆ ಈ ಮೂರ್ನಾಲ್ಕು ವರ್ಷದಲ್ಲಿ ಗೊತ್ತಾಗಿದೆ. ಅದಕ್ಕಾಗಿ ಎಲ್ಲರೂ ಮುಂದಾಗುತ್ತಿದ್ದಾರೆ’ ಎಂದು 70 ವರ್ಷದ ಫಕೀರಪ್ಪ ಹೇಳುತ್ತಾರೆ.

ಹೌದು, ಇದಕ್ಕೆ ಸಾಕಷ್ಟು ನಿದರ್ಶನ ಹುನಗುಂದದಲ್ಲೇ ಇವೆ. ಒಂದೆರಡು ಬಾರಿ ಸಾಧಾರಣ ಮಳೆಯಾದರೂ ಒಡ್ಡು ಹಾಕಿಸಿಕೊಂಡವರಿಗೆ ವರ್ಷಕ್ಕೆ ಸಾಕಾಗುವಷ್ಟು ಜೋಳ ಸಿಕ್ಕಿದೆ. ಈ ವಿಧಾನದಲ್ಲಿ ಪರಿಣಿತರಾದ ಮಲ್ಲಣ್ಣ ಅವರಂತೂ ಯಾವತ್ತೂ ‘ಫೇಲ್’ ಆಗಿಲ್ಲ. ನಾಲ್ಕೈದು ಎಕರೆಯಲ್ಲಿ 10 ಚೀಲ ಜೋಳ, 30 ಚೀಲ ಕಡಲೆ, 10 ಚೀಲ ಸೂರ್ಯಕಾಂತಿ ಹೀಗೆ ಪ್ರತಿವರ್ಷ 50ರಿಂದ 60 ಚೀಲ ಇಳುವರಿ ಪಡೆದಿದ್ದಾರೆ. ಭತ್ತ ಬೆಳೆಯಲು ಸಹ ಮುಂದಾಗಿರುವುದು ಒಡ್ಡುಗಳು ನೀಡಿರುವ ಭರವಸೆಯ ಸಂಕೇತ. ಇದರೊಂದಿಗೆ ನೆಲದ ಫಲವತ್ತತೆ ಹೆಚ್ಚಿಸಲು ಬೆಳೆಯ ಉಳಿಕೆಯಿಂದ ತಯಾರಾದ ಗೊಬ್ಬರ ಸಹ ಹಾಕುತ್ತಾರೆ. ‘ಬಂದ ಹಣದಲ್ಲಿ ನಾಲ್ಕಾಣೆಯಷ್ಟು ಲಾಭವನ್ನು ಮರಳಿ ಮಣ್ಣಿಗೆ ನೀಡು’ ಎಂಬ ಅಜ್ಜನ ಮಾತನ್ನು ಈವರೆಗೂ ಪಾಲಿಸಿಕೊಂಡು ಬಂದಿದ್ದಾರೆ.

‘ಎಲ್ಲೆಲ್ಲೋ ದುಡ್ಡು ಹಾಕೋದಕ್ಕಿಂತ ಒಡ್ಡಿಗೆ, ನೆಲಕ್ಕೆ ಹಾಕಿ. ಇದೇ ರೈತನ ಬ್ಯಾಂಕ್’ ಎಂದು ಶಂಕರಣ್ಣ ಹೇಳುತ್ತಿದ್ದರಂತೆ. ಈ ಪಾರಂಪರಿಕ ವಿಧಾನಕ್ಕೆ ಈಗ ಆಧುನಿಕತೆಯ ಸ್ಪರ್ಶ ಬಂದಿದೆ. ದಿನಗಟ್ಟಲೇ ಹತ್ತಾರು ಆಳು ಸೇರಿ ಮಾಡುತ್ತಿದ್ದ ಕೆಲಸವನ್ನು ಈಗ ಜೆಸಿಬಿ ಯಂತ್ರಗಳು ಕೆಲ ತಾಸುಗಳಲ್ಲಿ ಮಾಡುತ್ತವೆ. ಒಡ್ಡು ಹಾಕಿಸುವುದನ್ನೇ ನಂಬಿ ಜೀವನ ಸಾಗಿಸುವ ಆರೆಂಟು ಅನುಭವಿಗಳು, ನೂರಾರು ಕಾರ್ಮಿಕರು ಇಲ್ಲಿದ್ದಾರೆ. ಈ ವಿಶಿಷ್ಟ ಪದ್ಧತಿ ಹುನಗುಂದದ ಸುತ್ತಲಿನ ಹಳ್ಳಿಗಳಿಗೂ ಹರಡಿದೆ.

ನೂರಾರು ಕೋಟಿ ರೂಪಾಯಿ ವೆಚ್ಚದಲ್ಲಿ ವಿಶ್ವವಿದ್ಯಾಲಯಗಳು, ಕೃಷಿ, ಜಲಾನಯನಗಳು ಮಾಡುತ್ತಿರುವ ಕೆಲಸವನ್ನು ನಾಗರಾಳ ಕುಟುಂಬ ಉಚಿತವಾಗಿ ಮಾಡುತ್ತ ಬಂದಿದೆ. ಇವತ್ತಿಗೂ ‘ಹೊಲ ತಿದ್ದಲು ಬನ್ನಿ’ ಎಂಬ ಮನವಿ ಬರುತ್ತವೆ. ವಿಶ್ವಬ್ಯಾಂಕ್‌ನ ತಜ್ಞರಿಂದ ಕೃಷಿತಜ್ಞ ಎಂದು ಕರೆಸಿಕೊಂಡ ಶಂಕರಣ್ಣ ನೆಲಜಲ ಸಂರಕ್ಷಣೆ, ಗೊಬ್ಬರ ತಯಾರಿಕೆ, ಬಿತ್ತನೆ ಮಾಹಿತಿ ಬಗ್ಗೆ ಸಾಕಷ್ಟು ವಚನ ಬರೆದ್ದಿದಾರೆ. ಪುತ್ರ ಮಲ್ಲಣ್ಣ ಅದರಲ್ಲೂ ಹಿಂದೆ ಬ್ದಿದಿಲ್ಲ. ‘ಅರಗಾಲದಲ್ಲಿ ಎಂಟಾಣೆ, ಬರಗಾಲದಲ್ಲಿ ನಾಲ್ಕಾಣೆ ಬೆಳೆ’ ತೆಗೆಯುವುದು ಹೇಗೆ ಎಂಬುದನ್ನು ವಚನಗಳ ಮೂಲಕವೇ ಮನದಟ್ಟು ಮಾಡಿಸುತ್ತಾರೆ.(ಅರಗಾಲ ಅಂದರೆ- ಸರಾಸರಿಗಿಂತ ಅರ್ಧ ಮಳೆ; ಬರಗಾಲ ಅಂದರೆ ತೀರಾ ಕಡಿಮೆ).

‘ಹೇಗಿದ್ರೂ ಮಳೆ  ಬರ್ತದೆ. ಎಷ್ಟಾದರೂ ಬರ್ಲಿ. ಅದನ್ನು ನಮ್ಮಲ್ಲೇ ಉಳ್ಸಿಕೊಳ್ಬೇಕು. ಒಡ್ಡು ಇಲ್ದ ಹೊಲ ಗೊಡ್ಡೆಮ್ಮೆ ಇದ್ಹಾಂಗ’ ಎನ್ನುವ ಮಲ್ಲಣ್ಣನ ಮಾತು ಕೇಳಿ ಬದುಕು ಹಸನು ಮಾಡಿಕೊಂಡವರು ಸಾಕಷ್ಟು ಮಂದಿ.

ಹಾಗಾಗೇ ಅವರೆಲ್ಲ ಪರಿಹಾರಕ್ಕಾಗಿ ಅಂಗಲಾಚಲಾರರು. ಬೊಗಸೆಯೊಡ್ಡುವುದು ಮಳೆ ನೀರಿಗೆ ಮಾತ್ರ. ಹೆಚ್ಚಿನ ಮಾಹಿತಿಗೆ: ಮಲ್ಲಣ್ಣ ನಾಗರಾಳ- 08351- 260343