ಬರಪೀಡಿತ ಕೋಲಾರದ ಶತಶೃಂಗ ಪರ್ವತದ ಮೇಲಿರುವ ಆರು ಹಳ್ಳಿಗಳಲ್ಲಿ ಸದಾಕಾಲ ಸಮೃದ್ಧ ನೀರಿರುತ್ತದೆ.  ಅದೂ ತುಸು ಬಾಗಿದರೆ ಕೈಗೆಟಕುವ ಮಟ್ಟದಲ್ಲಿ! ಅಲ್ಲಿನ ರೈತರು ವಿದ್ಯುತ್ ಪಂಪ್ ಬಳಸದೆ ಈಗಲೂ ರಾಟೆಯಿಂದಲೇ ನೀರೆತ್ತುತ್ತಾರೆ. ನೀರಿನ ಬಳಕೆಯ ಸುಸ್ಥಿರ ವಿಧಾನದ ಅಪರೂಪದ ಪಾಠ ಇಲ್ಲಿ ಸಿಗುತ್ತದೆ.

ಕೋಲಾರದ ಅಂತರಗಂಗೆಯಲ್ಲಿ ಬಸವನ ಮೂರ್ತಿಯ ಬಾಯಿಂದ ಸದಾ ನೀರು ಹರಿಯುತ್ತದೆ. ‘ಇದು ಯಾವತ್ತೂ ಬತ್ತಿದ್ದೇ ಇಲ್ಲ’ ಎಂದು ಅವರಿವರು ಹೇಳುತ್ತಿದ್ದರು.

‘ಇದರಲ್ಲಿ ವಿಶೇಷವೇನೂ ಇಲ್ಲ ಬಿಡಿ. ಬೆಟ್ಟದ ಮೇಲ್ಭಾಗದಲ್ಲಿ ವಿಶಾಲ- ಸಮತಟ್ಟಾದ ಪ್ರದೇಶ ಇದೆ. ಹೊಲ, ಮನೆ, ಊರುಗಳು ಇವೆ. ಮಳೆ ನೀರು ಇಂಗಿ ಇಲ್ಲಿ ಬರುತ್ತದಷ್ಟೇ’ ಎಂದು ಈಚೆಗೆ ಅಲ್ಲಿಗೆ ಹೋಗಿದ್ದಾಗ ಜತೆಗಿದ್ದ ಪತ್ರಕರ್ತ ಪುರುಷೋತ್ತಮ್ ಹೇಳ್ದಿದರು.

ಬೆಟ್ಟದ ಮೇಲೆ ಹೊಲ ಮನೆ ಇವೆಯೆ? ಅಲ್ಲೇನು ನಡೆಯುತ್ತಿದೆ? ಇತ್ಯಾದಿ ಪ್ರಶ್ನೆ ಮೂಡಿದವು. ‘ಬನ್ನಿ ನೋಡಿ ಬರೋಣ’ ಎಂದು ಒರಿಗಾಮಿ ತಜ್ಞ ವಿ.ಎಸ್.ಎಸ್. ಶಾಸ್ತ್ರಿಯವರು ನಮ್ಮನ್ನು ಹೊರಡಿಸಿದರು. ನಮ್ಮ ಜತೆಗೆ ಜಲತಜ್ಞ ‘ಶ್ರೀ’ ಪಡ್ರೆ ಮತ್ತು ಬೆಮೆಲ್ ಕಂಪನಿಯ ಚಂದ್ರಪ್ರಕಾಶ್ ಕೂಡ ಬರಲು ಆಸಕ್ತಿ ತೋರಿದರು.

ಕೋಲಾರದಿಂದ ಐದು ಕಿ.ಮೀ. ದೂರದಲ್ಲೇ ಈ ಬೆಟ್ಟ ಸಾಲು ಇದೆ. ಅದಕ್ಕೆ ‘ಶತಶೃಂಗ’ ಎನ್ನುತ್ತಾರೆ. ಅಂತರಗಂಗೆಯಿಂದ ಬೆಟ್ಟ ಏರುತ್ತ ಹೋದಂತೆ ಬೆಂಗಳೂರಿನ ನಂದಿಧಾಮ ಅಥವಾ ಮೈಸೂರಿನ ಚಾಮುಂಡಿ ಬೆಟ್ಟದ ನಾಗಮುರಿ ರಸ್ತೆಗಳ ನೆನಪು ಬಂತು. ಗಾಳಿ ತಂಪಾಗತೊಡಗಿತು. ತುದಿ ತಲುಪಿದಾಗ ‘ಇದು ಕೋಲಾರವೋ ಅಥವಾ ಮಲೆನಾಡಿನ ತುಣುಕೋ?’ ಎಂಬ ಗೊಂದಲ ನಮ್ಮದು. ಎಲ್ಲೆಡೆ ಹಸಿರು, ಕೊರೆಯುವ ಚಳಿ, ತೆಂಗಿನ ಮರ, ಆಗಷ್ಟೇ ಕೊಯ್ಲು ಮಾಡಿದ ಭತ್ತ, ಅವರೆಕಾಯಿ ತುಂಬಿದ ಬಳ್ಳಿ, ಮಲ್ಬೆರಿ ಬೆಳೆ…!

ಜನವರಿ ಅಂತ್ಯದಲ್ಲಿ ಇಂಥ ಚಿತ್ರಣವನ್ನು ನಂಬುವುದೇ ಅಸಾಧ್ಯ. ಸತತ ಮೂರು-ನಾಲ್ಕು ವರ್ಷಗಳ ಬರದ ಬಳಿಕ ಕೋಲಾರ ಜಿಲ್ಲೆಯ ಬಹುತೇಕ ಪ್ರದೇಶ ಭಣಗುಡುತ್ತಿದ್ದರೆ, ಈ ಬೆಟ್ಟ ಇಷ್ಟೆಲ್ಲ ಹಸಿರು ಹೇಗೆ? ಎಲ್ಲರಿಗೂ ಬಿಸಿ ಮುಟ್ಟಿಸಿದ ಬರ ಇಲ್ಲಿ ಕಾಲಿಟ್ಟಿಲ್ಲವೇಕೆ?

‘ಶತಶೃಂಗ’ ಎಂಬ ಹೆಸರಿನ ಈ ಪರ್ವತ ಶ್ರೇಣಿಯಲ್ಲಿ ಆರು ಹಳ್ಳಿಗಳಿವೆ. ತೇರಹಳ್ಳಿಯಲ್ಲಿ 70 ಕುಟುಂಬಗಳಿದ್ದರೆ, ಪಾಪರಾಜನಹಳ್ಳಿಯಲ್ಲಿ 42, ಹೊಸಹಳ್ಳಿ-6, ಕೆಂಚೇಗೌಡನಹಳ್ಳಿ-22, ಶಿವಗಂಗೆ-6 ಮತ್ತು ಕುಪ್ಪಳ್ಳಿಯಲ್ಲಿ 20 ಕುಟುಂಬಗಳಿವೆ.

ಈ ಹಳ್ಳಿಗಳ ಪೈಕಿ ಯಾವ ರೈತರಿಗೂ ಬರದ ಬಾಧೆ ತಟ್ಟಿಲ್ಲ  ಎಂಬುದೇ ವಿಶೇಷ. ಉದಾಹರಣೆಗೆ ಪಾಪರಾಜನಹಳ್ಳಿಯಲ್ಲಿ 12 ತೆರೆದ ಬಾವಿಗಳಿವೆ. ಯಾವುದೂ ಬತ್ತಿಲ್ಲ. ಬೆಳಿಗ್ಗೆ ಎದ್ದರೆ ಕೈಯಿಂದಲೇ ಮೊಗೆದುಕೊಳ್ಳುವಷ್ಟು ನೀರು. ಎಲ್ಲಿದೆ ಸ್ವಾಮಿ ಈ ಅದೃಷ್ಟ?

ಸಮುದ್ರ ಮಟ್ಟದಿಂದ 3,700 ಅಡಿ (ಕೋಲಾರದ ಸಮತಟ್ಟು ನೆಲದಿಂದ ಸುಮಾರು ಸಾವಿರ ಅಡಿ) ಮೇಲಿರುವ ಸಾವಿರಾರು ಎಕರೆಯ ಈ ಪ್ರದೇಶದಲ್ಲಿ ಯಾವಾಗಲೂ ಕೃಷಿ ನಡೆಯುತ್ತದೆ. ಈ ಗ್ರಾಮಗಳ ಹೆಚ್ಚಿನ ಜನರಿಗೆ ಜಮೀನಿದೆ. ಕೆಲವರಿಗೆ ಮೂರ್ನಾಲ್ಕು ಎಕರೆ ಇದ್ದರೆ, ಅರ್ಧ ಎಕರೆ ಇರುವ ರೈತರೂ ಇಲ್ಲಿದ್ದಾರೆ. ವ್ಯವಸಾಯಕ್ಕೆ ಇವರಿಗೆ ಯಾವತ್ತೂ ನೀರಿನ ಕೊರತೆ ಕಂಡುಬಂದಿಲ್ಲ; ಬೆಳೆ ಎಂದೂ ಒಣಗಿಹೋಗಿಲ್ಲ.

ಮುಖ್ಯ ಬೆಳೆ ಭತ್ತ. ವರ್ಷಕ್ಕೆ ಒಂದು ಬಾರಿ ಭತ್ತ ತೆಗೆದು ಉಳಿದಂತೆ ರೇಷ್ಮೆ, ಅವರೆ, ಟೊಮ್ಯಾಟೊ ಬೆಳೆಯುತ್ತಾರೆ. ಬೆಟ್ಟದಲ್ಲಿ ಸಹಜವಾಗಿ ಸಾಕಷ್ಟು ಬೆಳೆದಿರುವ ಸೀತಾಫಲಗಳನ್ನು ತಂದು ಕೋಲಾರದಲ್ಲಿ ಮಾರುತ್ತಾರೆ. ಆಹಾರ-ನೀರಿಗೆ ಕೊರತೆಯಾಗದಿದ್ದರೆ ನೆಮ್ಮದಿ ನೆಲೆಸದೆ ಇನ್ನೇನು?

ಕೊಳವೆಬಾವಿಗಳು ಬೆಟ್ಟ ಏರಲಿಲ್ಲ

ಆದರೆ ಇದರ ಹಿಂದೆ ಎಲ್ಲರೂ ಕಲಿಯಬೇಕಾದ ಪಾಠವಿದೆ. ಅದು ಜಲ ಸಂರಕ್ಷಣೆ. ಇಲ್ಲಿನ ಬಾವಿಗಳಿಗೆ ವಿದ್ಯುತ್ ಪಂಪ್ ಜೋಡಿಸಿಲ್ಲ (ಕುಡಿವ ನೀರಿನ ಸೌಲಭ್ಯಕ್ಕೆ ಎರಡು ಕಡೆ ಮಾತ್ರ ಹಾಗೆ ಪಂಪ್ ಹಾಕಿದ್ದಾರೆ). ಎಲ್ಲೂ ಕೊಳವೆ ಬಾವಿ ಕೊರೆಸಿಲ್ಲ. ಇತರೆಡೆಯಂತೆ ಹೆಚ್ಚಿನ ನೀರಿನ ಆಸೆಗೆ ಬಲಿಯಾಗಿದ್ದರೆ, ಇದೂ ಮರುಭೂಮಿಯಾಗುತ್ತಿತ್ತೇನೋ? ಅದೇ ಒಂದು ಕಾಳಜಿ ಇಲ್ಲಿನ ರೈತರ ಸುಸ್ಥಿರ ಜೀವನ ವಿಧಾನಕ್ಕೆ ಬಹುಮುಖ್ಯ ಕಾರಣವಾಗಿದೆ.

ಗಾಣದ ಸುತ್ತ ಸುತ್ತುವಂತೆ ಎತ್ತುಗಳನ್ನು ಸುತ್ತಿಸಿ ‘ಪರ್ಶಿಯನ್ ವ್ಹೀಲ್’ನಿಂದಲೇ ಬೆಳೆಗೆ ನೀರು ಹರಿಸುತ್ತಾರೆ. ಎಲ್ಲ ಬಾವಿಗಳಲ್ಲಿ ಸಿಹಿ ನೀರಿದೆ. ಇದೇ ಅವರಿಗೆ ಆಸರೆ.

‘ತಾತನ್ ಕಾಲದಿಂದ್ಲೂ ಇಲ್ಲಿದೀವಿ. ಬಾವಿ ನೀರು ಯಾವಾಗ್ಲೂ ಇರ್ತದೆ. ಒಮ್ಮೆ ಬೋರ್ ಹಾಕ್ಸಿದ್ರೆ ಮುಗೀತು. ಈ ನೀರು ತಳ ಕಾಣ್ತದೆ’ ಎನ್ನುತ್ತಾರೆ ಪಾಪರಾಜನಹಳ್ಳಿಯ ರೈತ ನಾಗರಾಜ.

ವ್ಯವಸಾಯದ ಜತೆಗೆ ಪಶುಪಾಲನೆಯನ್ನು ಮಾಡುತ್ತಾರೆ. ಅದರಲ್ಲೂ ಮೇಕೆ, ಕುರಿ ಹೆಚ್ಚು ಹೆಚ್ಚು ಸಾಕುವುದರಿಂದ ಹಾಲು, ಉತ್ಕೃಷ್ಟ ಗೊಬ್ಬರ ಸಿಗುತ್ತದೆ. ಬೆಟ್ಟದಲ್ಲಿ ಯಥೇಚ್ಛ ಮೇವು ದೊರಕುವುದರಿಂದ ಈ ಉಪಕಸುಬು ಖರ್ಚಿಲ್ಲದೆ ಅಧಿಕ ಲಾಭ ನೀಡುತ್ತದೆ. ಈಚಿನವರೆಗೂ ರಸ್ತೆ ಇಲ್ಲದ ಕಾರಣ ಕೋಲಾರದಿಂದ ಗೊಬ್ಬರ ತರುವುದು ಕಷ್ಟವಾಗಿತ್ತು. ಅದಕ್ಕೆ ಮೇಕೆ ಗೊಬ್ಬರ ಬಳಸುವುದು ಅನಿವಾರ್ಯ ಎಂಬುದು ಗೋಚರವಾಗುತ್ತದೆ.

ಬೇಸಾಯದ ಸಮಯದಲ್ಲಿ ಎತ್ತು ಇಲ್ಲದವರು ಇನ್ನೊಬ್ಬರಿಂದ ಪಡೆಯುತ್ತಾರೆ. ಆದರೆ ಅದಕ್ಕೆ ಪ್ರತಿಫಲ ನೀಡುವ ಪದ್ಧತಿ ಇಲ್ಲಿಲ್ಲ. ಮುಂದೆ ಈತ ಎಂದಾದರೂ ಆತನಿಗೆ ಸಹಾಯ ಮಾಡಬೇಕು ಅಷ್ಟೇ. ಎಲ್ಲ ಸಹಕಾರ-ನೆರವಿನ ಅಡಿಯಲ್ಲಿ ನಡೆಯುತ್ತದೆ.

ಬೆಟ್ಟದಲ್ಲಿರುವ ಜೇನುಗೂಡು ಹುಡುಕಿ, ಜೇನುತುಪ್ಪ ಸಂಗ್ರಹಿಸಿ ಮಾರಾಟ ಮಾಡುವ ಕೆಲಸ ಕೂಡ ನಡೆಯುತ್ತದೆ. ಪ್ರತಿವರ್ಷ ಇಲ್ಲಿ ಮಾರಾಟವಾಗುವ ಪ್ರಮಾಣ ಎಷ್ಟು ಗೊತ್ತೇ? ಜೇನುತುಪ್ಪ- ಐದು ಟನ್ ಹಾಗೂ ಮೇಣ ಎರಡು ಟನ್! ಈಚಲು ಮರಗಳ ಗರಿಯಿಂದ ವರ್ಷವಿಡೀ ಪೊರಕೆ ಮಾಡಿ ಜೀವನ ಸಾಗಿಸುವ ಎರಡು ಕುಟುಂಬಗಳು ಇಲ್ಲಿವೆ. ಕರ್ನಾಟಕದ ಯಾವ ಬೆಟ್ಟದ ಮೇಲೂ ಇಷ್ಟು ಹಳ್ಳಿಗಳು, ಇಷ್ಟೊಂದು ವಿಶಾಲ ಪ್ರಮಾಣದ ಕೃಷಿ ಭೂಮಿ ಇಲ್ಲ.

ಈ ಬೆಟ್ಟಗಳಲ್ಲಿ ಮಾತ್ರ ಜೀವಿಸುವ ವಿಶಿಷ್ಟ ಪ್ರಭೇದದ ಪಕ್ಷಿ-ಪ್ರಾಣಿಗಳನ್ನು ಇವತ್ತಿಗೂ ಕಾಣಬಹುದು. ಕಲ್ಲುಗುಡ್ಡಗಳ ಮಧ್ಯೆಯೇ ಅಮೂಲ್ಯವಾದ  ಗಿಡಮೂಲಿಕೆಗಳಿವೆ. ಇಲ್ಲಿರುವಷ್ಟು ವಿವಿಧ ಬಗೆಯ ವಿಶಿಷ್ಟ ಮೂಲಿಕೆಗಳು ದಕ್ಷಿಣ ಭಾರತದಲ್ಲಿ ಮತ್ತೆಲ್ಲೂ ಇಲ್ಲ ಎಂದು ಆಯುರ್ವೇದ ಪ್ರತಿಷ್ಠಾನ ಗುರುತಿಸಿದೆ.

ಈ ಪ್ರದೇಶವನ್ನೊಮ್ಮೆ ನೋಡಿದರೆ ಸಾಕು. ಇಲ್ಲಿ ಜಮೀನು ಖರೀದಿಸಿ ಫಾರ್ಮ್ ಹೌಸ್, ರೆಸಾರ್ಟ್ ಇನ್ನೊಂದು ಮತ್ತೊಂದು ಮಾಡುವ ಆಸೆ ಮೂಡುವುದು ಸಹಜ. ಹಾಗೇನಾದ್ರೂ ಆದರೆ ಗ್ರಾಮ ಸಮುದಾಯದ ಮೇಲೆ ಮಾರಕ ಪರಿಣಾಮ ಬೀರುತ್ತದೆ ಎಂದು ಆತಂಕ ವ್ಯಕ್ತಪಡಿಸುತ್ತಾರೆ, ವಿ.ಎಸ್.ಎಸ್.ಶಾಸ್ತ್ರಿ. ಕೋಲಾರವನ್ನು ದಶಕಗಳಿಂದ ಬಲ್ಲ ಇವರು, ‘ಶತಶೃಂಗ’ದ ಜೀವವೈವಿಧ್ಯವನ್ನು ಅಧ್ಯಯನ ಮಾಡಿದವರು. ‘ಇಲ್ಲಿರುವ ವೈಶಿಷ್ಟ್ಯಗಳನ್ನು ಸಮೀಕ್ಷೆ ಮಾಡಬೇಕು. ಇದನ್ನೊಂದು ಪರಂಪರಾ ತಾಣವನ್ನಾಗಿ ರೂಪಿಸಬೇಕು. ಹುಡುಕಾಡಿದರೂ ಮತ್ತೊಂದು ಇಂಥ ಸ್ಥಳ ಸಿಗುವುದು ಅಸಾಧ್ಯ’ ಎನ್ನುತ್ತಾರವರು.

‘ಮಲೆನಾಡಿನವನಾದ ನನಗೆ ಇಲ್ಲಿನ ನೀರು ನೋಡಿದಾಗ ಅಸೂಯೆಯಾಗಿದೆ!’ ಎನ್ನುತ್ತಾರೆ, ಜಲತಜ್ಞ ‘ಶ್ರೀ’ಪಡ್ರೆ. ‘ಇದು ಸುಸ್ಥಿರ ಕೃಷಿಗೆ ಒಳ್ಳೆಯ ನಿದರ್ಶನ. ಆದರೆ ಜಲಮಟ್ಟ ಇಲ್ಲಿ ಕೂಡ ಹಿಂದೆ ಇದ್ದಷ್ಟು ಇಲ್ಲ. ತುಸು ಇಳಿಕೆ ಕಾಣುತ್ತಿದೆ. ಈಗ ಅಲ್ಲಿನ ಜನರು ಮಾಡಬೇಕಾದ ಕೆಲಸವೆಂದರೆ, ಜಲಮಟ್ಟ ಸುಸ್ಥಿತಿಯಲ್ಲಿಡಬೇಕು. ಹೆಚ್ಚು ಬೆಳೆ ಬೆಳೆಸುವ ಆಸೆಯಿಂದ ಬೋರ್‌ವೆಲ್ ಹಾಕಿ, ಹೈಬ್ರಿಡ್ ತಳಿಗಳನ್ನು ಬಿತ್ತನೆ ಮಾಡಿ, ಹಗಲೂ ರಾತ್ರಿ ನೀರಾವರಿ ಮಾಡಲು ಹೋದರೆ, ರಾಜ್ಯದ ವಿವಿಧೆಡೆ ಕಂಡಂಥ ಬರ ಪರಿಸ್ಥಿತಿಯೇ ಇಲ್ಲೂ ಬಂದೀತು. ಸಹಜ ಸಾಂಪ್ರದಾಯಿಕ ಪದ್ಧತಿಯಲ್ಲಿ ಇವರಿಂದ ಜಲಮೂಲದ ರಕ್ಷಣೆ ಆಗಿದೆ ನಿಜ. ಮಳೆ ನೀರನ್ನು ಇನ್ನಷ್ಟು ದಕ್ಷತೆಯಿಂದ ಹಿಡಿದಿಟ್ಟುಕೊಳ್ಳುವುದನ್ನು ಇವರೂ ಕಲಿಯಬೇಕು. ಅದಕ್ಕಾಗಿ ಮಳೆಕೊಯ್ಲಿನ ತಜ್ಞರ ನೆರವು ಇವರಿಗೆ ಅಗತ್ಯ ಇದೆ’ ಎಂದು ಅವರು ಹೇಳುತ್ತಾರೆ.

ಅಷ್ಟೇ ಅಲ್ಲ, ಕುರಿ ಮೇಕೆಗಳನ್ನು ಕಟ್ಟಿ ಮೇಯಿಸುವ ವ್ಯವಸ್ಥೆ ಇದ್ದಿದ್ದರೆ ಈಗಿನ ಕುರುಚಲು ಗಿಡಗಳ ಬದಲಿಗೆ ಇಡೀ ಗಿರಿಶ್ರೇಣಿಯೇ ಹಸಿರು ವನಗಳಿಂದ ಆವೃತ ಆಗಬಹುದಿತ್ತು. ಅಂಥ ಪಾಠ ಹೇಳಬಲ್ಲ ಕೃಷಿ ವಿಜ್ಞಾನಿಗಳ ನೆರವೂ ಇವರಿಗೆ ಅಗತ್ಯವಿದೆ.

ಆದರೂ ಇವರೇ ಪುಣ್ಯವಂತರು. ಮಳೆ ನೀರಿನ ಬಳಕೆಯ ದೃಷ್ಟಿಯಲ್ಲಿ ಕೋಲಾರ ಜಿಲ್ಲೆ ಅತ್ಯಂತ ಕುಖ್ಯಾತವಾಗಿದೆ. ಕೊಳವೆ ಬಾವಿಯಿಂದ ಅತಿ ನೀರನ್ನೆತ್ತಿ ಅಂತರ್ಜಲವನ್ನು ಪಾತಾಳಕ್ಕೆ ಕಳುಹಿಸಿದ ‘ಕಪ್ಪು ವಲಯ’ದ ಜಿಲ್ಲೆಗಳಲ್ಲಿ ಕೋಲಾರಕ್ಕೆ ಪ್ರಥಮ ಸ್ಥಾನ ಇದೆ. ಅದೇ ಜಿಲ್ಲೆಯಲ್ಲಿ ಈ ಶತಶೃಂಗ ಶ್ರೇಣಿ ಮರುಭೂಮಿಯ ಓಂುಸಿಸ್‌ನಂತಿದೆ. ರಸ್ತೆ ಇಲ್ಲದ ಕಾರಣ ಈವರೆಗೆ ಹೊಲಕ್ಕೆ ಸೀಮೆಗೊಬ್ಬರ ಹಾಗೂ ಕೊಳವೆಬಾವಿ ಲಾರಿ ‘ದಾಳಿ’ ಮಾಡಿರಲಿಲ್ಲ. ಆದರೆ ಎರಡು ವರ್ಷಗಳ ಹಿಂದಷ್ಟೇ ಬೆಟ್ಟದ ತುದಿವರೆಗೆ ಟಾರು ರಸ್ತೆ ಬಂದಿದೆ. ಬಸ್ ಸಂಚಾರವೂ ಆರಂಭವಾಗಿದೆ (ಇದರ ಕುರುಹು ಎಂಬಂತೆ ಅಲ್ಲಲ್ಲಿ ಕೆಲವರು ಯೂರಿಯಾ ಸುರಿಯತೊಡಗಿದ್ದಾರೆ).

ಇಲ್ಲಿನ ಸುಸ್ಥಿರತೆ-ಸೊಗಡನ್ನು ಅಧ್ಯಯನ ಮಾಡುವವರು ಬರಬೇಕಿತ್ತು. ಆದರೆ ಮೋಜು ಮಾಡುವವರು, ಎಸ್ಟೇಟ್ ಕೊಳ್ಳಬಯಸುವವರು  ಭೇಟಿ ನೀಡುತ್ತ್ದಿದಾರೆ. ಈವರೆಗೆ ಅಗತ್ಯ ವಸ್ತು ಖರೀದಿಸಲು ‘ಮೇಲಿನವರು’ ಕೆಳಗೆ ಬರುತ್ತಿದ್ದರು. ಇನ್ನು ಮೇಲೆ ‘ಸರಕು ಸಂಸ್ಕೃತಿ’ ಅವರ ಬಾಗಿಲ ಬಳಿ ಬರುತ್ತದೆ. ಅದು ಪ್ಲಾಸ್ಟಿಕ್ ಆಗಿರಬಹುದು, ಐಸ್‌ಕ್ರೀಮ್, ಪ್ಯಾಕ್ ಮಾಡಿದ ಕಿರಾಣಿ, ಗುಟ್ಕಾ, ಶಾಂಪೂ.. ಟಾರ್ ರಸ್ತೆಯೊಂದಿಗೆ ಬರುತ್ತಿರುವ ಈ ‘ಹೊಸ ಸಂಸ್ಕೃತಿ’ಯ ಪ್ರವಾಹ ಎದುರಿಸಿ ಶತಶೃಂಗ ಪರ್ವತದ ಗ್ರಾಮಗಳು ಉಳಿದಾವೇ? ಬೆಟ್ಟವಿಳಿದರೂ ಹೆಗಲೇರಿದ್ದ ಪ್ರಶ್ನೆ ಮಾತ್ರ ಹಾಗೇ ಕೂತಿತ್ತು.