ಇಂಥದೊಂದು ಚಮತ್ಕಾರ ಮತ್ತೆ ಮತ್ತೆ ನೋಡಲು ಸಿಗಲಿಕ್ಕಿಲ್ಲ.

ಮಳೆನೀರನ್ನು ಹೇರಳವಾಗಿ ಕುಡಿದ ಭೂಮಿ ಡರ್ರೆಂದು ತೇಗಿತು. ಸಂತಸದಿಂದ ಆಕಾಶಕ್ಕೆ ತುಸು ನೀರನ್ನು ಪುರ್ರೆಂದು ಉಗ್ಗಿ ನಲಿಯಿತು. ಬತ್ತಿದ ಕೊಳವೆ ಬಾವಿಗೆ ಮಳೆನೀರಿನ ಮರುಪೂರಣ ಮಾಡಿ, ಭೂಮಿಯ ಬಾಯಾರಿಕೆಯನ್ನು ಇಂಗಿಸಿದ ಪ್ರತ್ಯಕ್ಷ ದೃಶ್ಯ ಇದು.

ನೆಲ ಬುಸು ಬುಸು ಅನ್ತಿದೆ….! ಬೋರ್‌ವೆಲ್‌ನಿಂದ ಜ್ವಾಲಾಮುಖಿ ಥರಾ ಗ್ಯಾಸು, ನೀರು ಚಿಮ್ತಾ ಇದೆ….. ’ ಎಂದು ಅತ್ತಿಂದ ಫೋನ್ ಬಂತು.

ಬೆಂಗಳೂರಿನಿಂದ ಅರವತ್ತು ಕಿಲೊಮೀಟರ್ ಆಚೆ ಕುಂಟನಹಳ್ಳಿಯ ಹೊಲದಿಂದ ಕಳೆದ ವಾರ ತೀರಾ ನಸುಕಿನಲ್ಲಿ ಬಂದ ಕರೆ ಅದಾಗಿತ್ತು.

ಅದೇನು ನೋಡೇ ಬಿಡೋಣವೆಂದು  ಬೈಕ್ ಹತ್ತಿ ಹೊರಟೆವು. ದೊಡ್ಡಬಳ್ಳಾಪುರ ತಾಲ್ಲೂಕಿನ ಕುಂಟನಹಳ್ಳಿಯನ್ನು ಹುಡುಕುತ್ತ ಹೋಗಿದ್ದೇ ಒಂದು ಸಾಹಸದ ಕೆಲಸವಾಗಿತ್ತು. ನಮ್ಮ ಪುಣ್ಯಕ್ಕೆ ಆ ಹೊಲದ ಮಾಲಿಕ ಎನ್.ಕೆ. ರಾಮಕೃಷ್ಣ ತಮ್ಮ  ಹೊಲದಿಂದಲೇ ಮೊಬೈಲ್ ಮೂಲಕ ನಮಗೆ ಮಾರ್ಗದರ್ಶನ ಮಾಡುತ್ತಿದ್ದರು. ಎರಡು ಗಂಟೆಗಳ ಪಯಣದ ನಂತರ ನಾವು ಎದ್ದೂ ಬಿದ್ದೂ ಹೊಲಕ್ಕೆ ಬಂದೆವು.

ಕೊಳವೆ ಬಾವಿ ಶಾಂತ ಸ್ಥಿತಿಯಲ್ಲಿ ನಿಂತಿತ್ತು. ಸುತ್ತ ಎಂಟೂ ದಿಕ್ಕಿಗೆ ಅದು ಸಿಡಿಸಿದ್ದ ರಾಡಿ ಚೆಲ್ಲಾಪಿಲ್ಲಿ ಬಿದ್ದಿತ್ತು.

ಆಗಿದ್ದಿಷ್ಟೆ: ಮುಂಚಿನ ದಿನ ಚೆನ್ನಾಗಿ ಮಳೆ ಬ್ದಿದು, ಆ ಬೋರ್‌ವೆಲ್ ಸಮೀಪ ನೀರು ದೊಡ್ಡ ಕೆರೆಯಂತೆ ಮಡುಗಟ್ಟಿ ನಿಂತಿತ್ತು. ಬತ್ತಿದ ಕೊಳವೆ ಬಾವಿಗೆ ಆ ನೀರನ್ನೇ ಮರುಭರ್ತಿ ಮಾಡೋಣ ಎಂದು ರಾತ್ರಿಯ ವೇಳೆಯಲ್ಲಿ ಒಂದು ಪುಟ್ಟ ಕಾಲುವೆ ತೋಡಿ ನೀರನ್ನು ಬಾವಿಯ ಬಳಿಯ ಇಂಗುಗುಂಡಿಗೆ ಬಿಟ್ಟಿದ್ದರು.

ಬೆಳಿಗ್ಗೆ ಎದ್ದು ಬೋರ್‌ವೆಲ್‌ಗೆ ನೀರು ತುಂಬಿತೇ ನೋಡೋಣ ಎಂದು ತೋಟದ ಮ್ಯಾನೇಜರ್ ರವಿಕುಮಾರ್ ಬಂದರು. ನೀರು ಇಂಗುಗುಂಡಿಗೆ ಈಗಲೂ ಹೋಗುತ್ತಲೇ ಇತ್ತು. ‘ಈ ಹರಿವನ್ನು ಸ್ವಲ್ಪ ಸ್ಟಾಪ್ ಮಾಡಿದ್ರೆ ಹೇಗೆ?’ ಎಂದುಕೊಂಡ ರವಿ, ಆ ನೀರಿಗೆ ತಡೆಯೊಡ್ಡಿದರು. ಕೂಡಲೇ ಭಯಾನಕ ಸದ್ದು. ಕೆಲ ಕ್ಷಣಗಳಲ್ಲೇ ಕೊಳವೆ ಬಾವಿಯಿಂದ ಮೇಲಕ್ಕೆ ನೀರು ಚಿಮ್ಮಿತು. ಹತ್ತಿಪ್ಪತ್ತಲ್ಲ… ಕಣ್ಣು ಹರಿಯುವಷ್ಟೂ ಎತ್ತರಕ್ಕೆ ಅದು ನಾಲ್ವತ್ತೊ ಐವತ್ತೊ ಅಥವಾ ನೂರು ಅಡಿಯವರೆಗೋ.. ಅಂತೂ ಆಕಾಶಕ್ಕೆ.

ರವಿಕುಮಾರ್‌ಗೆ ಅಚ್ಚರಿ… ಭಯ. ಮಾಲಿಕ ಎನ್.ಕೆ. ರಾಮಕೃಷ್ಣಗೆ ಸುದ್ದಿ ತಿಳಿಸಿದರು. ಅವರು ಬಂದು ನೋಡಿ ನಮಗೆ ತಿಳಿಸಿದ್ದರು.

ನಾವು  ನೋಡಿದಾಗ ಕೊಳವೆ ಬಾವಿಯ ನೀರು ಸಿಡಿದ ಗುರುತು ಎಲ್ಲೆಡೆ ಇತ್ತು. ಆದರೂ ಅದು ಐವತ್ತೊ ನೂರೊ ಅಡಿ ಎತ್ತರಕ್ಕೆ ನೀರನ್ನು ಫೂತ್ಕರಿಸಿದ ಬಗ್ಗೆ ನಮಗೆ ಸಂಶಯ ಇತ್ತು. ಬೋರ್ ಕೊಳವೆಯ ಒಳಕ್ಕೆ ತಲೆ ಇಕ್ಕಿ ನೋಡಿದೆವು. ಸೊರ್ ಸೊರ್ ಜೊರ್‌ಜೊರ್ ಸದ್ದು ಬರುತ್ತಿತ್ತೇ ವಿನಾ ಒಳಗೆ ಬರೀ ಕತ್ತಲು.

‘ನೋಡ್ತೀರಾ ಮತ್ತೊಮ್ಮೆ?’ ಎಂದು ಕೇಳುತ್ತ ರಾಮಕೃಷ್ಣ ತಮ್ಮ ಸಿಬ್ಬಂದಿಗೆ ಸಿಗ್ನಲ್ ಕೊಟ್ಟರು. ಅಲ್ಲೇ ನಿಂತಿದ್ದ ರವಿಕುಮಾರ್ ಒಂದು ಗುದ್ದಲಿ ಮಣ್ಣನ್ನು ಎಳೆದು ಒಳಹರಿವಿನ ಕಾಲುವೆಗೆ ಕಟ್ಟೆ ಹಾಕಿದರು. ಬಾವಿಯತ್ತ ಬರುತ್ತಿದ್ದ ನೀರು ಹಠಾತ್ ನಿಂತಿದ್ದೇ ತಡ…..

ನೆಲದೊಳಕ್ಕೆ ಸಿಡಿಲು ಬಡಿದ ಸದ್ದು. ನೆಲ ಅದುರಿದ ಅನುಭವ. ಗುಡುಗುಡು ರೇಲ್ವೆ ಎಂಜಿನ್ ಚಲಿಸಿ ಬಂದಂತೆ ಒಳಗಿನಿಂದ ಢಳ್ಳೆಂದು ನೀರು, ಗಾಳಿಗುಳ್ಳೆ ಮೇಲಕ್ಕೆ ಚಿಮ್ಮಿದವು. ಚಿಮ್ಮುತ್ತಲೇ ಇದ್ದವು. ಅವಸರದಲ್ಲಿ ಮೇಲಕ್ಕೆ ನೋಡಿದ ನಮ್ಮ ಮುಖಕ್ಕೆಲ್ಲ ಸಿಂಚನ. ನಮ್ಮ ಕ್ಯಾಮರಾ ಎಲ್ಲ ಒದ್ದೆೆ ಮುದ್ದೆ. ಎರಡು ಮಹಡಿ ಎತ್ತರಕ್ಕೆ ಚಿಮ್ಮುತ್ತಲೇ ಇತ್ತು.

‘ನೀರಿನ ಒಳಹರಿವು ಈಗ ಕಮ್ಮಿ ಆಗಿದೆ ಸರ್, ಆಗಲೇ ಬರಬೇಕಿತ್ತು, ಇನ್ನೂ ಜೋರಾಗಿ, ಇನ್ನೂ ಎತ್ತರಕ್ಕೆ ಚಿಮ್ತಾ ಇತ್ತು’ ಎಂದರು ರಾಮಕೃಷ್ಣ.

ನಾವು ನೋಡಿದ್ದೇ ಕೊನೇ ದೃಶ್ಯ. ಆ ಕೊಳವೆ ಬಾವಿಗೆ ಮತ್ತೆ ಪಂಪ್ ಅಳವಡಿಸಲಾಗಿದೆ. ಈಗ ಕಲಕು ಹೊಂಡದಲ್ಲಿ ಮತ್ತೆ ನೀರು ತುಂಬಿಸಿ ಬಾವಿಯತ್ತ ತಿರುಗಿಸಿ ನಿಲ್ಲಿಸಿದರೂ, ಅದು ಇನ್ನೊಮ್ಮೆ ಚಿಮ್ಮಲಾರದು.

ರಾಮಕೃಷ್ಣ 2004ರಲ್ಲಿ ಕುಂಟನಹಳ್ಳಿ ಗ್ರಾಮದ ಬಳಿ ಇರುವ ತಮ್ಮ 54 ಎಕರೆ ತೋಟಕ್ಕೆ ನೀರುಣಿಸಲು ಕೊಳವೆ ಬಾವಿ ಕೊರೆಸಿದ್ದರು. ಆರಂಭದಲ್ಲಿ  ಗಂಟೆಗೆ ನಾಲ್ಕೂವರೆ ಸಾವಿರ ಗ್ಯಾಲನ್ ನೀರು ಕೊಡುತ್ತಿದ್ದ ಕೊಳವೆ ಬಾವಿ, ನಂತರ ಪ್ರಮಾಣ ಕಡಿಮೆ ಮಾಡುತ್ತ ಕೊನೆಗೆ ಬಿಕ್ಕಳಿಸತೊಡಗಿತು. ‘ಪರಿಹಾರ ಏನು?’ ಎಂದು ಹುಡುಕುತ್ತಲೇ ಇದ್ದ ಅವರಿಗೆ ಕಂಡಿದ್ದು ಜಲತಜ್ಞ ಅಯ್ಯಪ್ಪ ಮಸಗಿ ಎಂಬುವರ ‘ನೆಲ-ಜಲ-ಜನ’ ಎಂಬ ಕೃತಿ. ಮಳೆನೀರು ಇಂಗಿಸಿ ಪುನರ್ಜನ್ಮ ಪಡೆದುಕೊಂಡ ಸಾಕಷ್ಟು ಯಶಸ್ವಿ ಉದಾಹರಣೆಗಳು ಅದರಲ್ಲಿದ್ದವು.  ಮಸಗಿ ಅವರನ್ನೇ ಸಂಪರ್ಕಿಸಿದ ರಾಮಕೃಷ್ಣ, ತಮ್ಮ ಕೊಳವೆಬಾವಿಯ ದುಸ್ಥಿತಿಯನ್ನು ವಿವರಿಸಿದರು.

ಮಳೆನೀರು ಮರುಪೂರಣಕ್ಕೆ ಅಯ್ಯಪ್ಪ ಮಸಗಿ ಅನುಸರಿಸುವುದು ‘ತೆರೆದ ಬಾವಿ’ ವಿಧಾನ. ಕೊಳವೆ ಬಾವಿಯ ಕೇಸಿಂಗ್ ಪೈಪ್‌ನ ಸುತ್ತ ಹೊಸ ಬಾವಿ ತೋಡಿ, ಮಳೆ ನೀರು ಅಲ್ಲಿಗೆ ಹರಿದುಬರುವಂತೆ ಮಾಡುತ್ತಾರೆ. ನಂತರ ಕೇಸಿಂಗ್ ಪೈಪ್‌ಗೆ ರಂಧ್ರಗಳನ್ನು ಕೊರೆದು ಅದಕ್ಕೆ ಹೊರಗಿನಿಂದ ನೈಲಾನ್ ಬಲೆ (ಅಕ್ವಾಮೆಶ್) ಸುತ್ತುತ್ತಾರೆ. ‘ಇದರಿಂದ ನೀರು ಸುಲಭ ಹಾಗೂ ಶೀಘ್ರವಾಗಿ ನೆಲದೊಳಗೆ ಹೋಗುತ್ತದೆ’ ಎಂಬ ವಾದ ಅವರದು.

ಮಸಗಿಯವರ ನಿರ್ದೇಶನದಲ್ಲಿ ರಾಮಕೃಷ್ಣ ಮೊದಲಿಗೆ ಕೊಳವೆ ಬಾವಿ ಸುತ್ತ 10 ಅಡಿ ವ್ಯಾಸ, 20 ಅಡಿ ಆಳದ ಬಾವಿ ತೆಗೆಸಿದರು. ಸುತ್ತಲೂ ಸಿಮೆಂಟ್ ರಿಂಗ್ ಹಾಕಿಸಿದರು. ಪಕ್ಕದ ಒಣ ಹೊಂಡದಲ್ಲಿ ಮಳೆ ಬಿದ್ದಾಗ ಸಂಗ್ರಹವಾಗುವ ನೀರು ನೇರ ಕೊಳವೆ ಬಾವಿಯತ್ತ ಬರುವಂತೆ  ಕಾಲುವೆ ತೋಡಿಸಿದರು. ಈ  ಕೆಲಸ ಮುಗಿದು ಕೇವಲ ಒಂದು ತಿಂಗಳಾಗಿತ್ತಷ್ಟೇ. ಮೊದಲ ಮಳೆ ಬಿತ್ತು. ಪಕ್ಕದಲ್ಲಿ ಒಣಗಿದ್ದ ಹೊಂಡ ತುಂಬಿತು. ನೀರು ಬಾವಿಯ ಕಡೆ ನುಗ್ಗಿತು. ಜಲ ಮರುಪೂರಣದ ಫಲಿತಾಂಶ ಸ್ಪಷ್ಟವಾಗಿ ಗೋಚರಿಸಿತ್ತು.

ನಾವು ಹೋದಾಗ ಹೊಂಡದಲ್ಲಿ ನೀರು ಆಗಲೇ ತೀರಾ ಖಾಲಿಯಾಗುತ್ತ ಬಂದಿತ್ತು. ಆದರೆ ಭೂಮಿಯಲ್ಲಿ ಇಂಗಿದ ನೀರು ರಭಸದಿಂದ ಭೀಕರ ಶಬ್ದದೊಂದಿಗೆ ಕೇಸಿಂಗ್ ಪೈಪ್ ಮೂಲಕ ಒಳನುಗ್ಗುವ ಸದ್ದು ಕೇಳುತ್ತಿತ್ತು. ಮಳೆ ನಿಂತು, ಬಿಸಿಲು ಬಿದ್ದು ನೆಲದ ಮೇಲ್ಪದರ ಒಣಗಿದ್ದರೂ,  ನೀರು ಸದ್ದು ಮಾಡುತ್ತ ಅಂತರ್ಜಲ ಖಜಾನೆಯನ್ನು ಭರ್ತಿ ಮಾಡುತ್ತಲೇ ಇತ್ತು.

‘ಇಲ್ಲಿ ನೀರು ಹೀಗೆ ಒಳಗೆ ಹೋಗೋದು ನೋಡಿದ್ರೆ, ಕೊರತೆ ಎಂಬ ಶಬ್ದವೇ ಇನ್ನು ಸುಳಿಯಲಿಕ್ಕಿಲ್ಲ. ರಾತ್ರಿಯಿಂದ ಬೆಳಿಗ್ಗೆವರೆಗೆ ಎಷ್ಟು ಲಕ್ಷ  ಲೀಟರ್ ನೀರು ಸಂಗ್ರಹವಾಗಿದೆಯೋ?’ ಎಂದು ಸಂತಸಪಟ್ಟರು ರಾಮಕೃಷ್ಣ.

ಆದರೆ ನೀರು ಚಿಮ್ಮಿದ್ದು ಏಕೆ?

ಭೂವಿಜ್ಞಾನಿ ಹಾಗೂ ಅಂತರ್ಜಲತಜ್ಞ ದೇವರಾಜ ರೆಡ್ಡಿಯವರು ಹೇಳುವ ಪ್ರಕಾರ ‘ಹೊಂಡದಿಂದ ಕೊಳವೆಬಾವಿಗೆ ನೀರು ಅಧಿಕ ಒತ್ತಡದಲ್ಲಿ ನುಗ್ಗುತ್ತ ಭೂಮಿಯ ಪದರುಗಳಲ್ಲಿ ಇಳಿದು ಸಾಗುತ್ತದೆ. ಮೇಲಿನ ಹರಿವನ್ನು ನಿಲ್ಲಿಸಿದರೆ, ಪದರುಗಳಲ್ಲಿನ ಗಾಳಿಯ  ಒತ್ತಡ ಹೆಚ್ಚಾಗಿ, ತುಸು ನೀರಿನ ಜತೆ ಮೇಲಕ್ಕೆ ಚಿಮ್ಮಿ ಕಾರಂಜಿಯನ್ನು ಸೃಷ್ಟಿಸುತ್ತದೆ.’ ಆದರೆ ನೀರಿನ ಹರಿವನ್ನು ನಿಲ್ಲಿಸಿದಾಗ ಮಾತ್ರ ನೀರು ಮೇಲಕ್ಕೆ ಚಿಮ್ಮುತ್ತಿದ್ದುದು ಪ್ರಕೃತಿಯ ಗುಟ್ಟು.

ಈವರೆಗೆ ಬಿಕ್ಕಳಿಸುತ್ತಿದ್ದ ಬೋರ್‌ವೆಲ್‌ನಿಂದ ಈಗ ಧಾರಾಕಾರವಾಗಿ ತಿಳಿಯಾದ ನೀರು ಹರಿದು ಬರತೊಡಗಿದೆ. ‘ಪ್ರತಿ ಎಕರೆಗೆ ಹತ್ತು ಗುಂಟೆ ಹೊಂಡ ಮಾಡಿದರೆ ಸಾಕು; ಯಾರಿಗೂ ನೀರಿನ ಕೊರತೆ ಕಾಡುವುದಿಲ್ಲ’ ಎಂದು ರಾಮಕೃಷ್ಣ ಹುಮ್ಮಸ್ಸಿನಿಂದ ಹೇಳುತ್ತಾರೆ. ಓಡುವ ಮಳೆನೀರನ್ನು ನಡೆಯುವಂತೆ, ನಡೆಯುವ ನೀರನ್ನು ನಿಲ್ಲುವಂತೆ ಮಾಡಲು ಅವರು ಜಮೀನಿನ ತುಂಬ ಒಡ್ಡು, ಬದುಗಳನ್ನು ನಿರ್ಮಿಸಿದ್ದಾರೆ. ಹೀಗೆ ನಿಲ್ಲುವ ನೀರು ಇಂಗುವಂತೆ ಮಾಡಿ ಅಂತರ್ಜಲ ಮಟ್ಟ ಹೆಚ್ಚಿಸಿಕೊಂಡ ರಾಮಕೃಷ್ಣರ ಮುಖದಲ್ಲೂ ಈಗ ಉತ್ಸಾಹ ಚಿಮ್ಮುತ್ತಿದೆ.  ತಮ್ಮ ಕಣ್ಣೆದುರೇ ಕಂಡ ಫಲಿತಾಂಶ ಅವರನ್ನು ನೀರಿನ ಬಗ್ಗೆ ಇನ್ನಷ್ಟು ಕಾಳಜಿ ವಹಿಸುವಂತೆ ಮಾಡಿದೆ.