ಸಮಗ್ರ ಕೀಟ ನಿರ್ವಹಣೆ ಎಂಬ ನಿಸರ್ಗಸ್ನೇಹಿ ವಿಧಾನದಿಂದ ಬೆಳೆಗಳ ಕೀಟಬಾಧೆ ನಿಯಂತ್ರಿಸುವ ಬಗ್ಗೆ ಕಾರಾಗೃಹದ ಬಂದಿಗಳಿಗೆ ತರಬೇತಿ ನೀಡಿದ ಗುಲ್ಬರ್ಗ ಕೃಷಿ ಇಲಾಖೆ, ಅದರಲ್ಲಿ ಗಮನಾರ್ಹ ಯಶಸ್ಸು ಸಾಧಿಸಿದೆ. ಏನೇನೂ ಗೊತ್ತಿಲ್ಲದವರು ತರಬೇತಿ ಬಳಿಕ ಕೃಷಿ ಪಂಡಿತರಾಗಿದ್ದಾರೆ! ರಾಜ್ಯದಲ್ಲೇ ಮೊದಲ ಬಾರಿಗೆ ನಡೆದ ಈ ಕಾರ್ಯಕ್ರಮ ದೆಹಲಿ ದೊರೆಗಳನ್ನೂ ಆಕರ್ಷಿಸಿದೆ.

ಇವರು ಜೈಲಿನ ಕೈದಿಗಳಾ? ಅಲ್ಲ ಕೃಷಿ ಪಂಡಿತರು!’ ಎಂದು ಕೃಷಿ ಆಯುಕ್ತ ಎಚ್. ಶಶಿಧರ ಬಣ್ಣಿಸಿದಾಗ ಗುಲ್ಬರ್ಗ ಕೇಂದ್ರ ಕಾರಾಗೃಹ ಚಪ್ಪಾಳೆ ಸದ್ದಿನಿಂದ ತುಂಬಿತು. ‘ನಮ್ಮ ಇಲಾಖೆ ಸಿಬ್ಬಂದಿಗಿಂತಲೂ ಹೆಚ್ಚಿನ ಜ್ಞಾನ, ಮಾಹಿತಿ ಇವರಲ್ಲಿದೆ’ ಎಂದು ಹೇಳಿದಾಗ ಮತ್ತಷ್ಟು ಚಪ್ಪಾಳೆ…

ಬಂದಿಗಳ ಜ್ಞಾನದ ಹರವನ್ನು ಗಮನಿಸಿದವರಿಗೆ ಈ ಮಾತಿನಲ್ಲಿ ಎಳ್ಳಷ್ಟೂ ಉತ್ಪ್ರೇಕ್ಷೆ ಕಾಣುತ್ತಿರಲಿಲ್ಲ. ಏನೇನೋ ಅಪರಾಧಕ್ಕಾಗಿ ಶಿಕ್ಷೆ ಅನುಭವಿಸುತ್ತಾ ಇರುವ 25 ಕೈದಿಗಳ ಮುಖದಲ್ಲಿ ಮೂಡಿದ ಮುಗುಳ್ನಗೆ ನೋಡಬೇಕಿತ್ತು!

ಕೈದಿಗಳು- ಅದರಲ್ಲೂ ಕೇಂದ್ರ ಕಾರಾಗೃಹದಲ್ಲಿ ಶಿಕ್ಷೆ ಅನುಭವಿಸುತ್ತಿರುವವರು ಎಂದರೇನೇ ಅಳುಕು. ಅಂಥವರ ಪೈಕಿ ಆಸಕ್ತರಿಗೆ ತೊಗರಿ ಬೆಳೆಯಲ್ಲಿ ನಿಸರ್ಗಸ್ನೇಹಿ, ಸಮಗ್ರ ಪೀಡೆ ನಿರ್ವಹಣೆ (ಇಂಟಿಗ್ರೇಟೆಡ್ ಪೆಸ್ಟ್ ಮ್ಯಾನೇಜ್‌ಮೆಂಟ್- ಐಪಿ‌ಎಂ) ಕುರಿತು ತರಬೇತಿ ನೀಡಿ ಗಮನಾರ್ಹ ಯಶಸ್ಸು ಸಾಧಿಸಿದ್ದು ಗುಲ್ಬರ್ಗದ ಕೃಷಿ ಇಲಾಖೆ.

ರೈತರಿಗೆ ತರಬೇತಿ ನೀಡುವುದೇನೋ ಸರಿ; ಆದರೆ ಬಂದಿಗಳಿಗೆ..? ಎಂದು ಪ್ರಶ್ನಿಸುವವರೇ ಹೆಚ್ಚು. ‘ಯಾಕೆ? ಅವರೂ ಮನುಷ್ಯರಲ್ಲವೇ? ಯಾವುದೇ ಕ್ಷಣದಲ್ಲಿ ಮಾಡಿದ ತಪ್ಪಿಗೆ ಜೈಲಿಗೆ ಬಂದಿರುತ್ತಾರೆ. ಇಲ್ಲಿ ಹೆಚ್ಚಿನ ಕೆಲಸವಿಲ್ಲದೇ ಖಾಲಿ ಕುಳಿತಾಗ ಪ್ರಾಯಶ್ಚಿತ್ತ ಪಡುತ್ತಲೇ ಕೀಳರಿಮೆ ಬೆಳೆಸಿಕೊಳ್ಳುತ್ತಾರೆ. ಅದನ್ನು ಕಡಿಮೆ ಮಾಡುವ ಹಲವು ಯತ್ನಗಳ ಪೈಕಿ ಇದೂ ಒಂದು’ ಎಂದು ಸಮರ್ಥಿಸಿಕೊಳ್ಳುತ್ತಾರೆ, ಕಾರಾಗೃಹದ ಅಧೀಕ್ಷಕ ಟಿ.ಎಚ್.ಲಕ್ಷ್ಮೀನಾರಾಯಣ.

ರೈತರಿಗಾಗಿ ಏರ್ಪಡಿಸುವ ತರಬೇತಿಗಳಲ್ಲಿ ರೈತರೇ ಭಾಗವಹಿಸುವುದಿಲ್ಲ. ಇಂಥ ಸಂದರ್ಭದಲ್ಲಿ ಸರ್ಕಾರದ ಯೋಜನೆಗಳನ್ನು ಅನುಷ್ಠಾನ ಮಾಡುವ ರೈತಪರ ಅಧಿಕಾರಿಗಳಿಗೆ ಒಳಗೊಳಗೇ ಸಂಕಟ. ಕೋಟ್ನೂರಿನಲ್ಲಿರುವ ಜಿಲ್ಲಾ ಕೃಷಿ ತರಬೇತಿ ಕೇಂದ್ರಕ್ಕೆ 10 ಗ್ರಾಮಗಳ ರೈತರಿಗೆ ಪರಿಸರ ಸ್ನೇಹಿ ‘ಐಪಿ‌ಎಂ’ ವಿಧಾನದ ತರಬೇತಿ ನೀಡುವ ಜವಾಬ್ದಾರಿ ಇತ್ತು. ಅದರಲ್ಲಿ ಇನ್ನೊಂದು ಗ್ರಾಮ ಉಳಿದಿತ್ತು. ಈ ಕುರಿತೇ ಯೋಚಿಸುತ್ತ ಕೇಂದ್ರದ ತರಬೇತಿ ಸಂಯೋಜಕ ಡಾ† ಮಹಮದ ಇಸಾಕ್ ನಾಗೂರ ಅವರು ಜೇವರ್ಗಿ ರಸ್ತೆಯಲ್ಲಿ ಬರುತ್ತಿದ್ದಾಗ ಕಾರಾಗೃಹ ಕಂಡಿತು. ಸಿಕ್ಕೇ ಬಿಟ್ಟಿತಲ್ಲ ಹೊಸ ಐಡಿಯಾ..!

‘ಈ ಜೈಲಿನಲ್ಲಿ ಹೆಚ್ಚಿಗೆ ಇರೋರು ಗ್ರಾಮೀಣ ಪ್ರದೇಶದ ಬಂದಿಗಳು. ಅಂದರೆ ರೈತ ಸಮುದಾಯಕ್ಕೆ ಸೇರಿದವರು. ಇವರಿಗೇ ಐಪಿ‌ಎಂ ತರಬೇತಿ ನೀಡಿದರೆ, ಬಿಡುಗಡೆಯಾದಾಗ ಜೀವನಕ್ಕೆ ಹೊಸ ದಾರಿ ಸಿಗಬಹುದಲ್ಲವೇ?’ ಎಂದು ನಾಗೂರ ಅವರು ಜಂಟಿ ಕೃಷಿ ನಿರ್ದೇಶಕ ಎನ್.ಗಂಗಪ್ಪ ಅವರ ಮುಂದೆ ಐಡಿಯಾ ಬಿಡಿಸಿಟ್ಟರು.

ಹಾಗೆ ನೋಡಿದರೆ ಇದೊಂದು ದೊಡ್ಡ ರಿಸ್ಕ್… ಆದರೆ ಇದನ್ನೇ ಸವಾಲಾಗಿ ತೆಗೆದುಕೊಂಡ ಗಂಗಪ್ಪ, ಕಾರಾಗೃಹದಲ್ಲಿ ‘ರೈತ ಪಾಠಶಾಲೆ’ ಆರಂಭಿಸುವ ಬಗ್ಗೆ ಅಧೀಕ್ಷಕ ಲಕ್ಷ್ಮೀನಾರಾಯಣ ಜತೆ ಪ್ರಸ್ತಾಪಿಸಿದರು. ‘ಬಂದಿಗಳಿಗೆ ಈಗಾಗಲೇ ಅಕ್ಷರಾಭ್ಯಾಸ, ಡೈರಿ, ಕೋಳಿ ಸಾಕಣೆ ಬಗ್ಗೆ ತರಬೇತಿ ನಡೆಯುತ್ತಿವೆ. ಅದರ ಜತೆ ಈ ಹೊಸ ವಿಧಾನ ಕಲಿಸಿದರೆ ಇನ್ನಷ್ಟು ಪ್ರಯೋಜನವಾದೀತು’ ಎಂದು ಅವರೂ ಸಂತಸದಿಂದ ಒಪ್ಪಿದರು. ‘ಐಪಿ‌ಎಂ’ ವಿಧಾನದ ತರಬೇತಿ ಪಡೆಯಲು 25 ಬಂದಿಗಳು ಸ್ವ‌ಇಚ್ಛೆಯಿಂದ ಮುಂದೆ ಬಂದರು. ನವದೆಹಲಿಯ ಕೃಷಿ ಸಚಿವಾಲಯದ ಸಮ್ಮತಿಯೊಂದಿಗೆ ಕಾರಾಗೃಹದಲ್ಲಿ ಆರಂಭವಾಗಿದ್ದೇ ‘ರೈತ ಪಾಠಶಾಲೆ’.

* * *

ತೊಗರಿಯನ್ನು ಅತ್ಯಧಿಕ ಪ್ರಮಾಣದಲ್ಲಿ ಬೆಳೆಯುವ ಜಿಲ್ಲೆ ಗುಲ್ಬರ್ಗ. ಇದಕ್ಕೆ ದಾಳಿಯಿಡುವ ರೋಗ-ಕೀಟ ಹತ್ತಾರು ಬಗೆಯವು. ಕೀಟ ನಿಯಂತ್ರಣಕ್ಕೆಂದು ರೈತರು ಪ್ರತಿ ಎಕರೆಗೆ ಸಾವಿರಾರು ರೂಪಾಯಿ ಕ್ರಿಮಿನಾಶಕ ಸಿಂಪಡಿಸುತ್ತಾರೆ. ಹಾಗಿದ್ದರೂ ಕೀಟಬಾಧೆ ಪ್ರತಿವರ್ಷ ವೃದ್ಧಿಯಾಗುತ್ತ್ದಿದರೆ, ಇತ್ತ ಕೀಟಗಳು ನಿರೋಧಕ ಶಕ್ತಿ ಬೆಳೆಸಿಕೊಳ್ಳುತ್ತಲೇ ಇವೆ. ರಾಸಾಯನಿಕಗಳಿಂದ ಪರಿಸರಕ್ಕೆ ಆಗುವ ಹಾನಿಯಂತೂ ಅಪಾರ.

ಪ್ರಕೃತಿಗೇ ಹಾನಿ ಮಾಡದೇ, ಅಲ್ಪ ವೆಚ್ಚದಲ್ಲಿ ಬೆಳೆ ಸಂರಕ್ಷಿಸಿಕೊಳ್ಳಲು ರೂಪಿಸಿದ ವಿಧಾನ- ‘ಐಪಿ‌ಎಂ’. ಕಾರಾಗೃಹದಲ್ಲಿ ಒಂದೆಡೆ ರೈತರು ಅನುಸರಿಸುವ ಸಾಮಾನ್ಯ ಪದ್ಧತಿ; ಇನ್ನೊಂದೆಡೆ ‘ಐಪಿ‌ಎಂ’ ವಿಧಾನದಲ್ಲಿ ತೊಗರಿ ಬೆಳೆ ಬೆಳೆಯಲು ಕೃಷಿ ಇಲಾಖೆ ನಿರ್ಧರಿಸಿತು. ಬೇಸಾಯ ಕ್ರಮ, ತಾಂತ್ರಿಕ ಮಾಹಿತಿ ಮತ್ತು ಕೀಟಗಳ ಜೈವಿಕ ನಿಯಂತ್ರಣದ ಮೂಲಕ ತೊಗರಿ ಬೇಸಾಯ ನಡೆಯಿತು. ಡಾ† ನಾಗೂರ ತಮ್ಮ ಐವರು ಸಿಬ್ಬಂದಿ ಜತೆ ಇಲ್ಲಿಗೆ ಪ್ರತಿ ವಾರ ಬಂದು ಸಲಹೆ ನೀಡಿದರು.

ಇದರ ಜತೆ ಬಂದಿಗಳಿಗೂ ಮಹತ್ವದ ಕೆಲಸ. ಬೆಳೆಯ ಅಧ್ಯಯನ ಮಾಡಿ, ಸಸಿಯ ಎತ್ತರ, ಅಗಲ, ಟೊಂಗೆ, ಎಲೆ, ಮೊಗ್ಗು, ಹೂ-ಕಾಯಿ, ಮಣ್ಣಿನ ತೇವಾಂಶ, ರೋಗ-ಕೀಟ ಬಾಧೆ ಎಲ್ಲ ಪರಿಶೀಲಿಸಬೇಕು. ವಾರಕ್ಕೊಮ್ಮೆ ಚರ್ಚೆ.

ಸತತ 20 ವಾರಗಳ ಬಳಿಕ ಕಾರಾಗೃಹದ ಆವರಣದಲ್ಲಿ ‘ತೊಗರಿ ಬೆಳೆ ಕ್ಷೇತ್ರೋತ್ಸವ’ದ ಸಂಭ್ರಮ. ಕೃಷಿ ಆಯುಕ್ತ ಶಶಿಧರ ಅವರೇ ಖುದ್ದಾಗಿ ಬಂದರು. ‘ಐಪಿ‌ಎಂ’ನಿಂದ ಆದ ಲಾಭಗಳನ್ನು ಬಂದಿಗಳು ಅವರಿಗೆ ಉತ್ಸಾಹದಿಂದ ವಿವರಿಸಿದರು. ಬೆಳೆಗೆ ಬರುವ ಶತ್ರುಕೀಟ; ಈ ಕೀಟವನ್ನು ಭಕ್ಷಿಸುವ ಮಿತ್ರಕೀಟಗಳ ಚಿತ್ರ ಬರೆದು ತೋರಿಸಿದರು. ಮೋಹಕ ಬಲೆ, ಮಿಶ್ರ ಬೆಳೆ, ಬೇವು-ಬೆಳ್ಳುಳ್ಳಿ ಕಷಾಯ ಬಳಸಿ ಜೈವಿಕ ವಿಧಾನದಲ್ಲಿ ಅತ್ಯಂತ ಸುಲಭವಾಗಿ ಕೀಟ ನಿಯಂತ್ರಿಸಿದ ಬಗೆಯನ್ನು ವಿವರಿಸಿದರು. ‘ಅರೆ, ನಮ್ಮ ಸಿಬ್ಬಂದಿಗಿಂತ ಹೆಚ್ಚಿನ ಜ್ಞಾನ ಇವರಲ್ಲಿ ಇದೆಯಲ್ಲ!’ ಎಂದು ಆಯುಕ್ತರು ಅಚ್ಚರಿಯಿಂದ ನುಡಿದರು. ಕಾರಾಗೃಹದ ಅಧೀನದಲ್ಲಿರುವ 25 ಎಕರೆ ಜಮೀನಿನಲ್ಲಿ ಪ್ರಾತ್ಯಕ್ಷಿತೆ ಏರ್ಪಡಿಸಲು ಬೇಕಾದ ಎಲ್ಲ ನೆರವು ನೀಡುವುದಾಗಿ ಶಶಿಧರ ಭರವಸೆ ನೀಡಿದರು.

‘ಬಂದೀಖಾನೆಯಲ್ಲಿ ಇಂಥದೊಂದು ಕಾರ್ಯಕ್ರಮ ಹಮ್ಮಿಕೊಂಡಾಗ ಸಹಜವಾಗಿಯೇ ಭೀತಿ-ಅಳುಕು ಇತ್ತು. ಆದರೆ ನಮ್ಮ ನಿರೀಕ್ಷೆಗೂ ಮೀರಿ ಅದು ಯಶಸ್ವಿಯಾಗಿದೆ’ ಎಂದು ಗಂಗಪ್ಪ ಹೆಮ್ಮೆಯಿಂದ ನುಡಿಯುತ್ತಾರೆ. ‘ಕೈದಿಗಳೆಂದರೆ ನಿಷ್ಪ್ರಯೋಜಕರೇನಲ್ಲ. ಅವಕಾಶ ಮಾಡಿಕೊಟ್ಟರೆ ಏನೆಲ್ಲಾ ಸಾಧಿಸುತ್ತಾರೆ ಎನ್ನುವುದು ನಮ್ಮಲ್ಲಿ ಸಾಬೀತಾಗಿದೆ’ ಎಂಬುದು ಅಧೀಕ್ಷಕ ಲಕ್ಷ್ಮೀನಾರಾಯಣ ಅವರ ಅಭಿಮಾನದ ನುಡಿ. ಮುಂದಿನ ಹಂತದಲ್ಲಿ ಇನ್ನಷ್ಟು ಕೃಷಿ ಚಟುವಟಿಕೆ ಹಮ್ಮಿಕೊಳ್ಳಲು ಅವರಿಗೆ ಈಗ ಸಾಕಷ್ಟು ಉತ್ಸಾಹ ಬಂದಿದೆ.

ತರಬೇತಿಯ ಫಲಾನುಭವಿಗಳಲ್ಲಿ ಕೂಡ ‘ಐಪಿ‌ಎಂ’ ವಿಧಾನದ ಬಗ್ಗೆ ವಿಶ್ವಾಸ ಮೂಡಿದೆ. ಸೇಡಂ ತಾಲ್ಲೂಕಿನ ಬೆನಕನಹಳ್ಳಿಯ ನಾಗಣ್ಣನಿಗೆ ಒಟ್ಟು 7 ವರ್ಷ ಸಜೆ. ಈಗಾಗಲೇ 3 ವರ್ಷ ಕಳೆದಿದೆ. ‘ಒಂದು ಲೀಟರ್ ಕೆಮಿಕಲ್ ಔಷಧೀಗೆ ಹತ್ತ ಸಾವಿರ ರೂಪಾಯಿ ಕೊಟ್ಟೋವ್ರ ನಾವು. ಎಂಟ್ಹತ್ತು ಥರಾ ಔಷಧೀ ಹೊಡೀತಿದ್ವಿ. ಸಾಕಾಗಿ ಹೋಗಿತ್ತು. ಇಲ್ಲಿಂದ ಬಿಡುಗಡೆಯಾದ ಮೇಲೆ ಐಪಿ‌ಎಂ ಥರಾನೇ ಬೇಸಾಯ ಮಾಡ್ತೀನಿ’ ಎಂದು ಖಚಿತವಾಗಿ ಹೇಳುತ್ತಾನೆ. ಚಿಂಚೋಳಿ ತಾಲ್ಲೂಕಿನ ಬೂತಪುರದ ವಿಜಯಕುಮಾರ ಇನ್ನೂ ಯುವಕ. ಹಿಂದಿನ ಘಟನೆ ನೆನಪಿಸಿಕೊಳ್ಳಲು ಬಯಸುವುದಿಲ್ಲ. ‘ಇನ್ನು ಮೂರು ವರ್ಷಕ್ಕೆ ಹೊರಗೆ ಹೋಗ್ತೀನಿ. ಒಳ್ಳೇ ರೈತ ಆಗ್ತೀನಿ’ ಎನ್ನತ್ತಾನೆ. ‘ಒಳ್ಳೆಯ ರೈತ ಅಂದ್ರೆ..?’ ಎಂದು ಪ್ರಶ್ನಿಸಿದಾಗ, ‘ರಾಸಾಯನಿಕ ಬಳಸದೇ ಮಿತ್ರ ಕೀಟ ಉಳಿಸೋದು; ಜತೆಗೆ ದುಡ್ಡೂ ಉಳಿಸೋದು’ ಎಂದು ನಗುತ್ತ ಉತ್ತರಿಸುತ್ತಾನೆ. ಆಳಂದ ತಾಲ್ಲೂಕಿನ ಶಿಮಪುತ್ರಪ್ಪ ಮಠ, ದಸ್ತಗೀರ, ಕಾಂತಪ್ಪ, ಸಂಜೀವ… ಹೀಗೆ ಪರಿಣಿತ ಕೃಷಿಕರ ತಂಡವನ್ನು ರೂಪಿಸಿದೆ ಕೃಷಿ ಇಲಾಖೆ.

ಕಾರಾಗೃಹದಲ್ಲಿ ನಡೆದ ಈ ಕೃಷಿ ಕ್ರಾಂತಿ ಸುದ್ದಿಯು ದೆಹಲಿ ದೊರೆಗಳನ್ನು ತಲುಪಿದೆ. ಎಲ್ಲವನ್ನೂ ಚಿತ್ರೀಕರಿಸಿ, ವಿಸ್ತತ ಮಾಹಿತಿ ಸಮೇತ ಕಳಿಸುವಂತೆ ಕೃಷಿ ಇಲಾಖೆ ಪ್ರಧಾನ ಕಾರ್ಯಾಲಯದ ಹಿರಿಯ ಅಧಿಕಾರಿಗಳು ಗುಲ್ಬರ್ಗ ಕೃಷಿ ಇಲಾಖೆಗೆ ಮನವಿ ಮಾಡ್ದಿದಾರೆ.

ಬೆಳೆಗೆ ಯಾವುದೇ ಬಾಧೆ ಕಂಡರೂ ಸುಲಭವಾಗಿ ವಿಷಕಾರಿ ರಾಸಾಯನಿಕ ಸಿಂಪಡಿಸಿ ಎಂದು ‘ರೈತರಿಗೆ  ಸಲಹೆ’ ನೀಡುವುದು ಅಧಿಕಾರಿಗಳು, ತಜ್ಞರಿಗೆ ರೂಢಿಯಾಗಿದೆ. ಎಂಡೋಸಲ್ಫಾನ್, ವೊನೊಕ್ರೊಟೋಫಾಸ್ ಇನ್ನಿತರ ರಕ್ಕಸ ದ್ರವಗಳ ನಿಜರೂಪ ಬಯಲಾಗ್ದಿದರೂ, ಕೃಷಿ ಇಲಾಖೆ ಸಂಪೂರ್ಣವಾಗಿ ಅದರ ಗುಂಗಿನಿಂದ ಹೊರಬರುತ್ತಿಲ್ಲ. ಈ ವಿಷಾದದ ಸಂಗತಿಗಳ ಮಧ್ಯೆಯೇ, ರಾಜ್ಯದಲ್ಲಿ ಮೊದಲ ಬಾರಿಗೆ ಇಂಥ ಪರಿಸರಪ್ರಿಯ, ರೈತಪರ ಯೋಜನೆಯೊಂದನ್ನು ಕೈಗೊಂಡ ಗುಲ್ಬರ್ಗ ಕೃಷಿ ಇಲಾಖೆಯು ರಾಷ್ಟ್ರಮಟ್ಟದಲ್ಲಿ ಗಮನ ಸೆಳೆದಿದೆ.

ರೈತರನ್ನು ಸೋತು ಸುಣ್ಣವಾಗಿಸುವ ರಾಸಾಯನಿಕ ಮಂತ್ರದ ಪಠಿಣವನ್ನು ಬಿಟ್ಟು ಕೃಷಿ ಅಧಿಕಾರಿಗಳು ಇದರತ್ತ ಗಮನ ಹರಿಸಬೇಕಿದೆ.

(ಕೃಷಿರಂಗ- ಡಿಸೆಂಬರ್ 14, 2005)