ಮಾನವನಿಗೆ ಅತ್ಯಗತ್ಯವಾದುದು ಅನ್ನ ಮತ್ತು ವಸ್ತ್ರ. ಇದನ್ನು ಸ್ವಯಂ ಉತ್ಪಾದಿಸಿದಾಗಲೇ ಆತ ಸ್ವಾವಲಂಬಿಯಾಗಲು ಸಾಧ್ಯ ಎಂದು ಗಾಂಧೀಜಿ ಸದಾ ಸಾರುತ್ತಿದ್ದರು. ಅವರ ಮಾತುಗಳೇ ಚೇರ್ಕಾಡಿ ರಾಮಚಂದ್ರರಾಯರ ಜೀವನವಿಧಾನವನ್ನು ಬದಲಿಸಿದವು.

50ಕ್ಕೂ ಹೆಚ್ಚು ವರ್ಷಗಳ ಕಾಲ ಕೃಷಿ ಮಾಡಿದರೂ, ರಾಯರು ಎಂದಿಗೂ ಗಾಂಧೀವಾದ ಬಿಟ್ಟುಕೊಟ್ಟಿಲ್ಲ. ಗಾಂಧಿ ತತ್ವಗಳೊಂದಿಗೆ ನೆಮ್ಮದಿಯ ಜೀವನ ನಡೆಸುತ್ತಿರುವ ಇವರು ಈಗಲೂ ಚಟುವಟಿಕೆಯಿಂದ ಇದ್ದಾರೆ…

ಬರೀ ಚೇರ್ಕಾಡಿ ರಾಮಚಂದ್ರರಾಯರು ಅಂದ್ರೆ ಬಹಳ ಜನಕ್ಕೆ ತಿಳಿಯೋಲ್ಲ. ಅದಕ್ಕೆ ನೀವು ಕೇಳಬೇಕಾದ್ದು, ಸರ್ವೋದಯ ಕೃಷಿಯ ರಾಮಚಂದ್ರರಾಯರು ಅಂತ’ ಎಂದು ಕುಂದಾಪುರದ ‘ನಮ್ಮ ಭೂಮಿ’ಯ ಮಿತ್ರರು ಹೇಳಿದ್ದರು. ಬ್ರಹ್ಮಾವರದ ಬಸ್ಸಿನಲ್ಲಿ ಹಾಗೆಂದು ಕೇಳಿದರೂ ಯಾರೊಬ್ಬರಿಂದ ಸೂಕ್ತ ಉತ್ತರ ದೊರೆಯಲಿಲ್ಲ. ಕೊನೆಗೆ ಚೇರ್ಕಾಡಿಯಲ್ಲಿ ಇಳಿದು, ಅಲ್ಲೇ ವಿಚಾರಿಸುವುದು ಎಂದು ತೀರ್ಮಾನಿಸಿದೆವು.

ಹಾಗೆ ಚೇರ್ಕಾಡಿಯಲ್ಲಿ ಇಳಿದು ಅಲ್ಲಿದ್ದ ಅಂಗಡಿಯೊಂದರಲ್ಲಿ ಕೇಳಿದಾಗ ತಕ್ಕ ಮಟ್ಟಿಗೆ ರಾಯರ ತಾಣದ ಬಗ್ಗೆ ಮಾಹಿತಿ ಸಿಕ್ಕಿತು. ಆ ಎಳೆಯನ್ನೇ ಹಿಡಿದುಕೊಂಡು ರಾಮಚಂದ್ರರಾಯರ ‘ಖಾದಿಗ್ರಾಮ’ ಪ್ರವೇಶಿಸಿದಾಗ ಅಲ್ಲೇ ಪಂಚೆಯಲ್ಲಿ ಸ್ವಾಗತಿಸಿದ್ದು ರಾಯರು.

‘ರಾಯರಿಗೆ ಆಗಲೇ 90ರ ಹತ್ರ ವಯಸ್ಸಾಯ್ತಲ್ವ? ಸ್ವಲ್ಪ ನಿತ್ರಾಣ ಇರ್ತು’ ಎಂದೊಬ್ಬರು ಹೇಳಿದ್ದು ನೆನಪಾಯಿತು. ಆದರೆ ಅಲ್ಲಿ ರಾಯರ ಉತ್ಸಾಹ ಕಂಡು ಎಂಥವರಿಗೂ ಅಚ್ಚರಿಯಾದೀತು!

‘ನೋಡಿ ಈ ಭಾಷಣ, ಉಪನ್ಯಾಸದಿಂದ ಏನು ಪ್ರಯೋಜನವಿಲ್ಲ. ನಾನ್ ಹೇಳ್ತಾನೇ ಇದೀನಿ. ಈ ದೇಶದಲ್ಲಿ ಎಲ್ಲರಿಗೂ ಅನ್ನ ಕೊಡೋವಷ್ಟು ಭೂಮಿ ಇದೆ. ಆದರೆ ಉಪವಾಸದಿಂದ ಸಾಯುವವರ ಸಂಖ್ಯೆ ಹೆಚ್ತಾನೇ ಇದೆ. ಗಾಂಧೀಜಿ ಹೇಳಿದ್ದ ಸ್ವಾವಲಂಬನೆ ವಿಧಾನ ಅನುಸರಿಸಿದರೆ, ದೇಶದಲ್ಲಿ ಸಮಸ್ಯೆಯೇ ಇರೋಲ್ಲ’- ರಾಯರು ತಾವು ಅದನ್ನು ಸಾಧಿಸಿದ ಬಗೆಯನ್ನು ವಿವರಿಸಲು ಆರಂಭಿಸಿದರು.

ಚಿಕ್ಕಂದಿನಲ್ಲೇ ತಾಯಿ-ತಂದೆಯನ್ನು ಕಳೆದುಕೊಂಡು ಅನಾಥರಾದ ರಾಯರಿಗೆ ಗಾಂಧೀಜಿಯ ಮಾತುಗಳು ಜೀವನವನ್ನು ಬದಲಿಸಿದವು. ಪ್ರಾಥಮಿಕ ಶಾಲೆಯಲ್ಲಿ ಅಭ್ಯಾಸ ಮಾಡುತ್ತಿದ್ದಾಗ, ರಾಮಚಂದ್ರ ಪಾಟೀಲ ಎಂಬ ಶಿಕ್ಷಕರೊಬ್ಬರು ಗಾಂಧಿ ತತ್ವಗಳನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಿದ್ದರು. ಅದು ರಾಯರ ಮೇಲೆ ಅಪೂರ್ವ ಪ್ರಭಾವ ಬೀರಿತು. ಅನ್ನ ಮತ್ತು ವಸ್ತ್ರ ಸ್ವತಃ ಉತ್ಪಾದಿಸಿಕೊಳ್ಳುವ ವ್ಯಕ್ತಿ ಸ್ವಾವಲಂಬನೆ ಸಾಧಿಸಲು ಸಾಧ್ಯ ಎಂಬ ಗಾಂಧಿಯವರ ಮಾತಿಗೆ ಅವರು ಮಾರುಹೋದರು. ಅಂದಿನಿಂದಲೇ ಅವರ ಅನ್ವೇಷಣೆ ಆರಂಭವಾಯಿತು.

ಮೊದಲು ಚರಕ ಖರೀದಿಸಿ ನೂಲು ನೇಯುವ ಕೆಲಸದಲ್ಲಿ ಕೌಶಲ. ಅದೇ ಅವರನ್ನು ಬಡತನದ ಬೇಗೆಯಿಂದ ಕೊಂಚ ದೂರ ಮಾಡಿತು,. ಆದರೆ ಮಹಾಯುದ್ಧದ ಬಳಲಿಕೆಯಿಂದಾಗಿ 1945-46ರಲ್ಲಿ ನೇಯ್ಗೆ ಕಸುಬಿಗೆ ಭಾರಿ ಪೆಟ್ಟು ಬಿತ್ತು. ಮತ್ತೆ ಬಡತನ. ಈಗ ಮರಳಿ ಗಾಂಧಿ ತತ್ವಕ್ಕೆ ರಾಯರು ಶರಣು. ‘ಅನ್ನ-ವಸ್ತ್ರಗಳ ಉತ್ಪಾದನೆಯಲ್ಲಿ ಇದುವರೆಗೆ ಕೇವಲ ವಸ್ತ್ರದ ಬಗ್ಗೆ ಗಮನ ಹರಿದಿತ್ತು. ಅನ್ನದ ಉತ್ಪಾದನೆ (ಕೃಷಿ) ನಾನು ಮಾಡುತ್ತಿಲ್ಲ ಎಂಬುದೇ ನನ್ನ ದುಸ್ಥಿತಿಗೆ ಕಾರಣ ಎಂದು ತಿಳಿದುಬಂತು. ಹೀಗೆ ನಾನು ಕೃಷಿಯತ್ತ ಹೊರಳಿದ್ದು’- ರಾಯರು ಮೆಲುಕು ಹಾಕುತ್ತಾರೆ.

ರಾಯರ ಪ್ರಕಾರ ಕೃಷಿ ಎಂದರೆ ಅದೊಂದು ದೊಡ್ಡ ಸಮಸ್ಯೆಯೇ ಅಲ್ಲ. ಮುಖ್ಯವಾಗಿ ಸಾಧಿಸುವ ಛಲ ಮತ್ತು ಅದಕ್ಕೆ ಮಾರ್ಗದರ್ಶಿಯಾಗಿ ಗಾಂಧಿ ತತ್ವಗಳು ಬೇಕು. 1951ರಲ್ಲಿ ತಮ್ಮ ಭಾವನಿಂದ ಮೂಲಗೇಣಿಗೆ ಪಡೆದ ಎರಡು ಎಕರೆಯಲ್ಲಿ ‘ಅನ್ನ’ ಬೆಳೆಯುವ ಪ್ರಯತ್ನ ಆರಂಭಿಸಿದರು. ಮೊದಲೇ ಅದು ಬರಡು ನೆಲ. ಸಾಲದ್ದಕ್ಕೆ ಅನುಭವವೇ ಇಲ್ಲ. ‘ಅವ ಮರ್ಲ’ ಎಂಬ ಜನರ ಅಪಹಾಸ್ಯ ಬೇರೆ.

ಆದರೆ ರಾಯರು ಧೃತಿಗೆಡದೇ ತಮ್ಮದೇ ಆದ ಮಾರ್ಗದಲ್ಲಿ ಸಾಗಿದರು. ಈ ನಿಟ್ಟಿನಲ್ಲಿ ಅವರು ಕೈಗೊಂಡ ವಿನೂತನ ಪ್ರಯೋಗಗಳನ್ನು ಇಲ್ಲಿ ವಿವರಿಸುವುದು ಅನಗತ್ಯ. ಕಡಿಮೆ ಶ್ರಮ ಬೇಡುವ ಸರ್ವೋದಯ ರಾಟೆ, ಸಣ್ಣ ಹಿಡುವಳಿದಾರರಿಗೆ ಉಪಯುಕ್ತವಾದ ಚೇರ್ಕಾಡಿ ಪದ್ಧತಿ, ಎಂಥ ಬರಗಾಲದಲ್ಲೂ ಆದಾಯ ನೀಡುವ ಕೃಷಿ ಅರಣ್ಯ ಇವುಗಳಲ್ಲಿ ಕೆಲವಷ್ಟೇ. ಈ ಎಲ್ಲ ಸಾಧನೆಗಳ ಹಿಂದೆ ಅವರ ಪತ್ನಿ ಲಕ್ಷ್ಮೀ ನೀಡಿದ ಬೆಂಬಲ ಅಪಾರ.

‘ಮೋಸ ಮಾಡುವುದು ಗಿಡಗಳಿಗೆ ಗೊತ್ತೇ ಇಲ್ಲ. ಮಾನವನಿಂದಲೇ ಅವು ಮೋಸ ಹೋಗುವುದುಂಟು’ ಎಂದು ರಾಯರು ಹೇಳುತ್ತಾರೆ. ‘ಈಗ ಈ ತೋಟದ ಯಾವುದೇ ಮೂಲೆಯಲ್ಲಿ ಹೋಗಿ ಕೆದಕಿದರೂ ಒಂದಲ್ಲ ಒಂದು ಸೊತ್ತು ಸಿಗುತ್ತದೆ. ಭೂಮಿ ಎಂದರೆ ಕಾಮಧೇನು. ಕೇಳಿದ್ದೆಲ್ಲ ದೊರಕುತ್ತದೆ. ಆದರೆ ಸಮಯ ಬೇಕಷ್ಟೇ. ಬೆಳಿಗ್ಗೆ ಕೃಷಿ ಮಾಡಿ, ಸಂಜೆ ದುಡ್ಡು ಬೇಕು ಎಂಬುವವನಿಗೆ ಕೃಷಿ ಸಲ್ಲ’ ಎಂದು ನುಡಿಯುತ್ತಾರೆ ಅವರು.

ಗಾಂಧಿ ತತ್ವಗಳನ್ನು ದೂರ ತಳ್ಳಿದ ಇಂದಿನ ಶಿಕ್ಷಣ, ಕೈಗಾರಿಕೆ, ತರಬೇತಿ ವ್ಯವಸ್ಥೆ ಬಗ್ಗೆ ರಾಯರು ತಮಾಷೆಯಾಗಿ ‘ನಾನು ಎರಡನೇ ಕ್ಲಾಸಿಗೆ ಓದು ಬಿಟ್ಟಿದ್ದು ಒಳ್ಳೇದಾಯ್ತು ಅನಿಸ್ತಿದೆ. ಮುಂದೆ ಓದಿದ್ದರೆ ಯಾವುದೋ ಕಚೇರೀಲಿ ಟೇಬಲ್ ಮುಂದಿನ ಕುರ್ಚಿಯಲ್ಲಿ ಗುಮಾಸ್ತನಾಗಿರ್ತಿದ್ದೆ. ಆಗ ನೀವಂತೂ ನನ್ನ ನೋಡೋ ಪ್ರಸಂಗಾನೇ ಬರ್ತಿರ್ಲಿಲ್ಲ. ಅಲ್ವಾ?’ ಎನ್ನುತ್ತಲೇ ಕೈಗಾರಿಕೆ ಮತ್ತು ಕೃಷಿ ಪೂರಕವಾಗಿ ಸಾಗಬೇಕು ಎಂದು ಪ್ರತಿಪಾದಿಸುತ್ತಾರೆ.

‘ಕೈಗಾರಿಕೆ ತರಬೇತಿ ಪಡೆದವನಿಗೆ ಕೇವಲ ಸರ್ಟಿಫೀಕೇಟ್ ಮಾತ್ರ ಕೊಟ್ಟರೆ ಸಾಲದು. ಜತೆಗೆ ಒಂದು ಎಕರೆ ಭೂಮಿ ಕೊಡಬೇಕು. ಎರಡರಲ್ಲೂ ಆತ ಅನುಭವ ಪಡೆದರೆ ಬದುಕು ಹೇಗೆ ತಾನೇ ಭಾರವಾಗುತ್ತೆ?’ ಎಂದು ಪ್ರಶ್ನಿಸುತ್ತಾರೆ.

‘ನಾನು ಯಾವ ದೇವಸ್ಥಾನಕ್ಕೂ ಹೋಗಿ ಕೈಮುಗಿದು ಬೇಡಲಿಲ್ಲ. ದೇವರು ಇಲ್ಲೇ ನನ್ನ ಬಳಿಯಲ್ಲಿ ಇದ್ದ. ಹಣ್ಣು-ಹಾಲು ಸವಿಯುವಾಗ ಪ್ರಕೃತಿ ಪರಮಾತ್ಮನ ಮೇಲೆ ತುಂಬು ಭಕ್ತಿಯಿಂದ ಪುಳಕಿತನಾಗುತ್ತೇನೆ. ಮುಖ್ಯವಾಗಿ ಮನುಷ್ಯ ಪ್ರಕೃತಿಯನ್ನು ಅರ್ಥ ಮಾಡಿಕೊಳ್ಳಬೇಕಷ್ಟೇ’ ಎನ್ನುವ ರಾಮಚಂದ್ರರಾಯರು ಪ್ರಕೃತಿ ನಮ್ಮೆಲ್ಲ ಆಸೆ ಪೂರೈಸುತ್ತದೆ; ದುರಾಸೆಗಳನ್ನಲ್ಲ ಎಂಬ ಗಾಂಧಿ ಮಾತನ್ನು ಕಂಡುಕೊಂಡಿದ್ದಾಗಿ ಹೇಳುತ್ತಾರೆ. ‘ಒಂದು ಹೊಟ್ಟೆಗೆ ದೇವರು ಎರಡು ಕೈ ಕೊಟ್ದಿದ್ದಾನೆ. ಮತ್ತೇನು ಬೇಕು?’ ಎಂಬುದು ಅವರ ಪ್ರಶ್ನೆ!

ಸರ್ಕಾರಿ ನೌಕರರೊಬ್ಬರು ರಾಯರನ್ನು ಕೇಳಿದ್ದರು: ‘ನಾವು ನಿವೃತ್ತರಾದಾಗ ಲಕ್ಷಗಟ್ಟಲೇ ಹಣ ಬರುತ್ತದೆ. ನಿಮಗೆ?’

ಅದಕ್ಕೆ ರಾಯರ ಉತ್ತರ: ‘ನಾನು ನನ್ನ ಮಕ್ಕಳು, ಮೊಮ್ಮಕ್ಕಳಿಗೂ ಈಗಲೇ ನೌಕರಿ ಕಾದಿರಿಸಿದ್ದೇನೆ. ಅವರು ನೌಕರಿಗಾಗಿ ಕಷ್ಟಪಡುವ ಪ್ರಯತ್ನವೇ ಬಾರದು. ನೌಕರಿ ಅಪಾಯ; ಭೂಮಿ ಬದುಕಿನ ತಳಪಾಯ.’

ರಾಯರ ತೋಟವೆಂದರೆ ಅದೊಂದು ಸಸ್ಯಕಾಶಿ. ಅಲ್ಲಿ ತೆಂಗು, ಮಾವಿನಿಂದ ಹಿಡಿದು ತರಹೇವಾರಿ ತರಕಾರಿ ಸೊಪ್ಪು, ವಿವಿಧ ಹಣ್ಣು-ಹಂಪಲು, ಗೆಡ್ಡೆ, ಗೆಣಸು,… ಹೀಗೆ ನಿತ್ಯ ಜೀವನಕ್ಕೆ ಬೇಕಾದ ಎಲ್ಲ ಪದಾರ್ಥಗಳು ಲಭ್ಯ.

ರಾಯರ ವಯಸ್ಸು ಈಗ 89 ವರ್ಷ. ಹಾಗಿದ್ದರೂ ಅವರ ಕೆಲಸ, ವಿಚಾರಗಳ ಪ್ರಖರತೆ ಕುಂದಿಲ್ಲ. ರಾಜ್ಯದ (ಅಷ್ಟೇಕೆ ವಿದೇಶಗಳಿಂದಲೂ) ವಿವಿಧ ಕಡೆಯಿಂದ ರೈತರು ಇಲ್ಲಿಗೆ ಬರುತ್ತಾರೆ. ರಾಯರು ಉತ್ಸಾಹದಿಂದ ಅವರೊಂದಿಗೆ ಸುತ್ತುತ್ತ ತಮ್ಮ ಸಾಧನೆಗಳನ್ನು ವಿವರಿಸುತ್ತಾರೆ. ಗಾಂಧಿ ತತ್ವಗಳು ಜಗತ್ತಿನ ಎಲ್ಲರಿಗೂ ನೆಮ್ಮದಿ ನೀಡುವಂಥವು. ಅವುಗಳನ್ನು ಅಳವಡಿಸಿಕೊಂಡರೆ ಕೃಷಿ ಹೊರೆಯಾಗಲಾರದು ಎಂಬುದನ್ನು ಮನದಟ್ಟು ಮಾಡಿಸುತ್ತಾರೆ. ಕೃಷಿ ಕಾರ್ಯದ ಬಹುಪಾಲನ್ನು ಈಗ ಅವರ ಪುತ್ರ ಆನಂದರಾವ ಮಾಡುತ್ತಾರೆ. ಹಾಗೆಂದು ರಾಯರೇನೂ ಸುಮ್ಮನೇ ಕೂಡುವುದಿಲ್ಲ. ಒಂದಿಲ್ಲೊಂದು ಗಿಡಕ್ಕೆ ಗೊಬ್ಬರ, ನೀರು ಕೊಡುತ್ತ ಮರಗಳ ಯೋಗಕ್ಷೇಮ ವಿಚಾರಿಸುತ್ತ ಓಡಾಡುತ್ತಾರೆ.

ಗಾಂಧೀಜಿ ಈಗ ಬಹುತೇಕ ದಂತಕಥೆಯಾಗಿಬಿಟ್ಟ್ದಿದಾರೆ. ಅವರ ಉಪದೇಶಗಳು ಕೇವಲ ಭಾಷಣಕ್ಕಷ್ಟೇ ಸೀಮಿತವಾಗಿವೆ. ಅನುಷ್ಠಾನ ಮಾಡುವವರೆಲ್ಲಿ…?

‘.. ನೋಡಿ, ನಾನು ಸರ್ಕಾರಕ್ಕೆ, ದೇಶಕ್ಕೆ ಭಾರ ಅಲ್ಲ. ನನಗೆ ಸಾಲ ಕೊಡಿ, ಸಬ್ಸಿಡಿ ಕೊಡಿ ಅಂತ ಕೇಳೋದಿಲ್ಲ. ನಾನು ಪರಿಪೂರ್ಣ ಸ್ವಾವಲಂಬಿ ಭಾರತೀಯ. ಕಾರ್ ತೊಗೊಳ್ಳೋಷ್ಟು ಹಣ ಇದೆ. ಆದರೆ ಅದು ನಂಗೆ ಅಗತ್ಯವಿಲ್ಲ. ಅನಗತ್ಯ ಖರ್ಚಿಗೆ ಕಡಿವಾಣ, ಪ್ರಕೃತಿಯ ಜತೆ ಸಹಕಾರ- ಕೃಷಿ ಹಾಗೂ ಗಾಂಧಿತತ್ವಕ್ಕೆ ಇರುವ ನೇರ ಸಂಬಂಧವೇ ಇದು’ ಎಂದು ಪ್ರತಿಪಾದಿಸುವ ರಾಯರನ್ನು ಅರ್ಥ ಮಾಡಿಕೊಂಡರೆ ನಿರುದ್ಯೋಗ, ಆತ್ಮಹತ್ಯೆ ಮತ್ತು ಹತಾಶೆಗಳಾವುವೂ ಇರುವುದಿಲ್ಲ.

ಆದರೆ, ಇಂಥ ಸರಳ ಸಂಗತಿಗಳನ್ನು ನಾವು ಅರ್ಥ ಮಾಡಿಕೊಳ್ಳುವುದು ಯಾವಾಗ?

(ಕರ್ನಾಟಕ ದರ್ಶನ- ಸೆಪ್ಟಂಬರ್ 30, 2004)]