ಗ್ರಾಮೀಣ ಪ್ರದೇಶದಲ್ಲಿ ಒಂದು ಹೆಕ್ಟೇರ್ ಜಮೀನಿನ ವಾರ್ಷಿಕ ಉತ್ಪಾದನೆ ಲಕ್ಷ ದಾಟಲಾರದು. ಆದರೆ ಅದರಿಂದಲೇ ವಾರ್ಷಿಕ ಹತ್ತು ಲಕ್ಷ ರೂಪಾಯಿ ಆದಾಯ ಪಡೆಯುತ್ತಿರುವ ಕೃಷಿಕನ ಯಶೋಗಾಥೆಯನ್ನು ಡೌನ್ ಟು ಅರ್ಥ್ ಪ್ರಕಟಿಸಿದ್ದು, ಅದರ ಸಾರಾಂಶ ಇಲ್ಲಿದೆ.

ಒಂದು ಹೆಕ್ಟೇರ್ ಜಮೀನು ಇದ್ದರೆ, ಅದರಿಂದ ನೀವೇನು ಪಡೆಯಬಲ್ಲಿರಿ?

ಒಂದಷ್ಟು ಸಾವಿರ ರೂಪಾಯಿ ಆದಾಯ. ಸ್ವಲ್ಪ ಅನುಕೂಲಸ್ಥರಾಗ್ದಿದರೆ ಕೋಳಿ ಸಾಕಣೆ, ಡೇರಿ; ಇತರ ಬೇರೆ-ಬೇರೆ ಉಪಕಸುಬುಗಳಿಂದ ಅಂದಾಜು ಒಂದರ್ಧ ಲಕ್ಷ, ಇಷ್ಟೇ.

ಆದರೆ ಹರಿಯಾಣದ ಸೋನಿಪತ್ ಜಿಲ್ಲೆಯ ಅಕ್ಬರ್‌ಪುರ ಬರೋಟಾ ಗ್ರಾಮದ ರಮೇಶಚಂದರ್ ಅವರ ಮಾತನ್ನು ಕೇಳಿ…

‘ನಾನೊಬ್ಬ ಸಾಮಾನ್ಯ ರೈತ. ಓದ್ದಿದು ಹತ್ತನೇ ತರಗತಿ. ಸಣ್ಣ ರೈತರಿಗೆ ಲಾಭವೆಂಬುದು ಮರೀಚಿಕೆ ಎಂಬ ಮಾತನ್ನು ಕೇಳಿ-ಕೇಳಿ ರೋಸಿಹೋಗಿತ್ತು. ಅದನ್ನು ಸುಳ್ಳು ಮಾಡಲೆಂದೇ ನಾಲ್ಕು ವರ್ಷಗಳ ಹಿಂದೆ ಒಂದು ಹೆಕ್ಟೇರ್ ಭೂಮಿಯನ್ನು ಮೀಸಲಿಟ್ಟು ಪ್ರಯೋಗ ಆರಂಭಿಸಿದೆ. ಬೇರೆಯವರಿಗೆ ಕೆಲವು ಸಾವಿರ ರೂಪಾಯಿ ಆದಾಯ ತರಬಹುದಾದ ಈ ಪ್ರಮಾಣದ ಜಮೀನು, ನನಗೆಷ್ಟು ಹಣ ನೀಡುತ್ತಿದೆ ಗೊತ್ತೇ?

…ವರ್ಷಕ್ಕೆ ಹತ್ತು ಲಕ್ಷ ರೂಪಾಯಿ’

ಚಂದರ್ ಈ ಮಾತನ್ನು ಹೇಳುವಾಗ ಯಾವುದೇ ಉತ್ಪ್ರೇಕ್ಷೆ ಕಾಣದು. ಬದಲಾಗಿ ಈ ಸಾಧಕನ ಬಗ್ಗೆ ಬೆರಗು ಮೂಡುತ್ತದೆ.

ಈ ಫಲಿತಾಂಶದ ಹಿಂದೆ ಪವಾಡವೇನೂ ಇಲ್ಲ. ಪ್ರಯಾಸದ ಕೊಂಚ ಕೆಲಸವಷ್ಟೇ ಇದೆ. ‘ನಿಸರ್ಗವನ್ನು ಅರ್ಥ ಮಾಡಿಕೊಂಡ ಯಾವುದೇ ರೈತ ಇಷ್ಟೇ ನೆಲದಲ್ಲಿ ಇಷ್ಟೇ ಆದಾಯ ತೆಗೆಯಬಲ್ಲ’ ಎಂಬುದು ಅವರ ಖಚಿತ ನಿಲುವು.

ದೇಶದ ಕೃಷಿ ವ್ಯವಸ್ಥೆಗೆ ಮಾರ್ಗದರ್ಶಕವಾಗಬಹುದಾದ ಈ ವಿಧಾನದ ಹೆಸರು ‘ಸಮಗ್ರ ಜೈವಿಕ(ಸಾವಯವ) ಕೃಷಿ’. 1971ರಲ್ಲಿ 1.6 ಹೆಕ್ಟೇರ್ ಜಮೀನಿನ ಒಡೆಯನಾಗಿದ್ದ ಚಂದರ್ ಈಗ 44 ಹೆಕ್ಟೇರ್ ಭೂಮಿಯ ಮಾಲೀಕ. ಎಲ್ಲದಕ್ಕೂ ಸಾವಯವ ಕೃಷಿಯ ಅಳವಡಿಕೆ. ‘ಸ್ವಲ್ಪ ಕಠಿಣ ಕೆಲಸ, ಅದರ ಜತೆ ಪ್ರಕೃತಿಯನ್ನು ಅರ್ಥ ಮಾಡಿಕೊಂಡರೆ ವಾರ್ಷಿಕ ಹತ್ತು ಲಕ್ಷ ರೂಪಾಯಿ ಗಳಿಸಲು ಸಾಧ್ಯ’ ಎನ್ನುತ್ತಾರೆ ಅವರು.

 

ಲಾಭ ತಂದ ಲ್ಯಾಬ್..!

ತಮ್ಮ ತೋಟದಲ್ಲೇ ಪ್ರಯೋಗಾಲಯಕ್ಕೆ ಚಂದರ್ ಒಂದು ಹೆಕ್ಟೇರ್‌ನಷ್ಟು ನೆಲ ಮೀಸಟ್ಟಿದ್ದಾರೆ. ‘ಇದರ ಮೂಲಕ, ಜೈವಿಕ ಕೃಷಿ ಹೇಗೆ ಅತ್ಯಧಿಕ ಲಾಭ ತರಬಲ್ಲದು ಎಂಬುದನ್ನು ತೋರಿಸುತ್ತಿದ್ದೇನೆೆ’ ಎನ್ನುವ ಚಂದರ್ ಮಾರುಕಟ್ಟೆ ಬೇಡಿಕೆ, ಸ್ಥಳೀಯ ಸಂಪನ್ಮೂಲಗಳ  ಲಭ್ಯತೆ ಮತ್ತು ಉತ್ಪನ್ನಗಳ ಗುಣಮಟ್ಟ- ಈ ಮೂರೂ ಅಂಶಗಳೇ ತಮ್ಮ ಯಶಸ್ಸಿನ ಗುಟ್ಟು ಎನ್ನುತ್ತಾರೆ.

ಈ ಪ್ರಯೋಗಾಲಯದಲ್ಲಿ ಯಾವುದೂ ರಹಸ್ಯವಲ್ಲ; ಎಲ್ಲವೂ ನಿಮ್ಮ ಕಣ್ಣಿಗೆ ಕಾಣುತ್ತದೆ. ಎರೆಗೊಬ್ಬರ ಉತ್ಪಾದನೆ ಒಂದೆಡೆ ನಡೆಯುತ್ತಿದ್ದರೆ, ಇನ್ನೊಂದೆಡೆ ಪುಷ್ಪ ಕೃಷಿ. ಕೃಷಿ ಹೊಂಡ- ಅದರಲ್ಲಿ ಮೀನು ಉತ್ಪಾದನೆ ಹಾಗೂ ಜೈವಿಕ ಅನಿಲ ಘಟಕ ಮತ್ತೊಂದೆಡೆ. ಇವೆಲ್ಲಕ್ಕೂ ಅಂತರ್ ಸಂಬಂಧವಿದ್ದು ಒಟ್ಟು ಆದಾಯ ಹತ್ತು ಲಕ್ಷಕ್ಕೂ ಹೆಚ್ಚು. ಜತೆಗೆ ಇಡೀ ತೋಟಕ್ಕೆ ಸೌರಶಕ್ತಿಯ ಬಳಕೆ.

‘ಭತ್ತದ ಹುಲ್ಲನ್ನು ಬಹುತೇಕ ರೈತರು ಸುಟ್ಟುಹಾಕುತ್ತಾರೆ. ಆದರೆ, ಎರೆಹುಳುಗಳಿಗೆ ಅದು ಉತ್ತಮ ಆಹಾರ. ಅದೋ… ಅದನ್ನೇ ಬಳಸಿ ನಾನು ಮುನ್ನೂರು ಟನ್ ಎರೆಗೊಬ್ಬರ ಉತ್ಪಾದಿಸುತ್ತೇನೆ’ ಎಂದು ವಿವರಿಸುವ ಚಂದರ್, ಸ್ವಲ್ಪ ಭಾಗವನ್ನು ತೋಟಕ್ಕೆ ಬಳಸಿ, ಉಳಿದಿದ್ದನ್ನು ಕೆಜಿಗೆ ಮೂರು ರೂಪಾಯಿಗಳಂತೆ ಮಾರುವುದಾಗಿ ಹೇಳುತ್ತಾರೆ.

ನೀರಿನ ಅಗತ್ಯ ಶೇಕಡ 25ರಷ್ಟು ಕಡಿಮೆಯಾಗುವುದು ಮತ್ತು ನೆಲದ ಫಲವತ್ತತೆ ಹೆಚ್ಚುವುದು ಎರೆಗೊಬ್ಬರದ ವೈಶಿಷ್ಟ್ಯ. ಹುಲ್ಲನ್ನು ಅಣಬೆ ಕೃಷಿಗೂ ಬಳಸುವ ಅವರು, ಅದರಿಂದ ಮೂರು ಲಕ್ಷ ರೂಪಾಯಿ ಆದಾಯ ಪಡೆಯುತ್ತಾರೆ. ಇಲ್ಲಿರುವ ಸುಮಾರು 50 ಎಮ್ಮೆಗಳ ಸೆಗಣಿಯನ್ನು ಜೈವಿಕ ಅನಿಲ ಘಟಕಕ್ಕೆ ಹಾಕಿ, ಅದರಿಂದ ದೊರೆಯುವ ಇಂಧನವನ್ನು ಅಡುಗೆ ಮತ್ತಿತರ ಯಂತ್ರಕ್ಕೆ ಬಳಸುತ್ತಾರೆ. ಘಟಕದಿಂದ ಹೊರಬರುವ ತ್ಯಾಜ್ಯ ಎರೆಗೊಬ್ಬರದ ಗುಂಡಿಗೆ ರವಾನೆ.

ಕೃಷಿಹೊಂಡದ ಲಾಭಗಳೇ ಮತ್ತೊಂದು ಬಗೆ. ಮಳೆ ನೀರನ್ನು ಸಂಗ್ರಹಿಸಿ ಅದರಲ್ಲಿ ಮೀನು ಉತ್ಪಾದಿಸಲಾಗುತ್ತದೆ. ಪ್ರತಿ ವರ್ಷ ಇದು ಮೂವತ್ತು ಸಾವಿರ ರೂಪಾಯಿ ಆದಾಯ ತರುತ್ತದೆ. ‘ನನ್ನ ಜಮೀನಿಗೆ ಕೇವಲ ಮಳೆನೀರು ಮರುಪೂರಣ ಮಾಡುತ್ತಿಲ್ಲ. ಬದಲಾಗಿ ಅದರಿಂದಲೂ ಲಾಭ ಪಡೆಯುತ್ತಿದ್ದೇನೆ’ ಎನ್ನುತ್ತಾರೆ ಈ ಜಾಣ ರೈತ!

ಎಲ್ಲಕ್ಕಿಂತ ಮಹತ್ವದ ಭಾಗ- ಜೇನು ಸಾಕಣೆ. ಇಡೀ ತೋಟದಲ್ಲಿ 150 ಜೇನುಪೆಟ್ಟಿಗೆ ಇಟ್ಟು, ಪ್ರತಿಯೊಂದರಲ್ಲಿ 35-40 ಕೆಜಿ ಜೇನುತುಪ್ಪ ತೆಗೆಯುತ್ತಾರೆ. ಇದರಿಂದ ವಾರ್ಷಿಕ ನಾಲ್ಕು ಲಕ್ಷ  ಆದಾಯ. ಜೇನುಗಳು ನಡೆಸುವ ಪರಾಗಸ್ಪರ್ಶದಿಂದ ಬೆಳೆಯಲ್ಲೂ ಶೇಕಡ 30ರಷ್ಟು ಹೆಚ್ಚು ಇಳುವರಿ ಕಂಡುಬಂದಿದೆ. ಐನೂರು ಚದರ ಮೀಟರ್ ಪ್ರದೇಶದಲ್ಲಿ ಹಸಿರುಮನೆ ನಿರ್ಮಿಸಿರುವ ಚಂದರ್, ವೆಚ್ಚದಾಯಕ ಬೆಳೆಯನ್ನು ಇಲ್ಲಿ ಬೆಳೆಯುತ್ತಾರೆ. ಇದು ತರುವ ಆದಾಯ, ರೂ 1 ಲಕ್ಷ.

ತಮ್ಮ ಪ್ರಯೋಗದಲ್ಲಿ ಅಭೂತಪೂರ್ವ ಯಶಸ್ಸು ಕಂಡ ಬಳಿಕ, ಸಾವಯವ ಕೃಷಿಯನ್ನು ಪ್ರಚುರಪಡಿಸುವತ್ತ ಚಂದರ್ ಹೆಜ್ಜೆ ಹಾಕಿದ್ದಾರೆ. ಇದಕ್ಕೆಂದೇ ‘ಹರಿಯಾಣ ಕಿಸಾನ್ ವೆಲ್‌ಫೇರ್ ಕ್ಲಬ್’ ಸ್ಥಾಪಿಸಿದ್ದು ಐದು ಸಾವಿರ ರೈತರು ಇದರ ಸದಸ್ಯರಾಗಿದ್ದಾರೆ. ಈ ಕ್ಲಬ್‌ನ ಮೂಲಕ ಪ್ರತಿ ಗ್ರಾಮದ ಪ್ರತಿ ರೈತನಿಗೂ ಜೈವಿಕ ಕೃಷಿಯ ಮಹತ್ವ ತಿಳಿಸಬೇಕು ಎನ್ನುವುದು ಚಂದರ್ ಅವರ ಮಹತ್ವಾಕಾಂಕ್ಷೆ.

ನಿಧಾನವಾಗಿ ರಾಜ್ಯದೆಲ್ಲೆಡೆ ಈ ಚಳವಳಿ ತೀವ್ರಗೊಳ್ಳುತ್ತಿದೆಯಾದರೂ, ಸರ್ಕಾರ ಮಾತ್ರ ಇನ್ನೂ ಇದರತ್ತ ಗಮನಹರಿಸಿಲ್ಲ. ‘ಜೋ ಸರಕ್ ಸರಕ್ ಕರ್ ಚಲೇ, ವೋ ಸರ್ಕಾರ್’(ನಿಧಾನವಾಗಿ ತೆವಳುವುದರ ಹೆಸರೇ ಸರ್ಕಾರ!) ಎಂದು ಪ್ರತಿಕ್ರಿಯಿಸುವ ಚಂದರ್‌ಗೆ ಅದರ ಮೇಲೆ ನಂಬಿಕೆಯೂ ಇದ್ದಂತಿಲ್ಲ.

‘ಸಣ್ಣ, ಅತಿ ಸಣ್ಣ ರೈತರು ಹೇಗೆ ಉತ್ತಮ ಆದಾಯ ಪಡೆಯಬಹುದು ಎಂಬುದನ್ನು ನಾನು ಎಲ್ಲರಿಗೂ ತೋರಿಸಿದ್ದೇನೆ. ಅದು ಅಸಾಧ್ಯವೇನೂ ಅಲ್ಲ’ ಎನ್ನುವ ಚಂದರ್, ‘ಹೀಗಿದ್ದರೂ ಗ್ರಾಮಗಳ ಯುವಕರು, ರೈತರು ಕೆಲಸ ಹುಡುಕಿಕೊಂಡು ನಗರದತ್ತ ಏಕೆ ದೌಡಾಯಿಸುತ್ತಾರೋ ನನಗೆ ಅರ್ಥವಾಗುತ್ತಿಲ್ಲ’ ಎಂದು ವಿಷಾದದಿಂದ ನುಡಿಯುತ್ತಾರೆ.

(ಕೃಷಿರಂಗ- ಜೂನ್ 30, 2004)