ಅತಿಯಾದ ರಾಸಾಯನಿಕ ಬಳಸಿ ಸಾವಿರಾರು ಹೆಕ್ಟೇರ್ ಪ್ರದೇಶ ಬಂಜರಾಗಿದೆ. ಇಲ್ಲಿ ಈಗ ಏನೂ ಬೆಳೆಯದು. ಈಗಲೇ ಇದಕ್ಕೆ ತಡೆ ಹಾಕದಿದ್ದರೆ ಭತ್ತದ ಕಣಜ ಬರಿದಾಗುವ ಅಪಾಯ ದೂರವಿಲ್ಲ!

ತುಂಗಭದ್ರ ಅಣೆಕಟ್ಟು ನೋಡಿಕೊಂಡು ಸ್ವಲ್ಪ ಮುಂದೆ ಬಂದರೆ, ಎಡದಂಡೆ ಕಾಲುವೆಯ ಅಕ್ಕಪಕ್ಕ ಸಾಕಷ್ಟು ದೂರದವರೆಗೂ ಹಸಿರೇ ಹಸಿರು! ’ಓಹ್! ತುಂಗಭದ್ರೆಯಿಂದ ಇಲ್ಲಿ ರೈತರ ಜೀವನ ಹಸಿರಾಗಿದೆ’ ಎಂದು ಉದ್ಘರಿಸಿದರೆ, ನೀವು ಭ್ರಮೆಯ ಬಲೆಯಲ್ಲಿ ಬಿದ್ದಿರೆಂದೇ ಅರ್ಥ! ನಿಜ, ಇಲ್ಲಿ ಸಾಕಷ್ಟು ಹಸಿರಿದೆ. ಆದರೆ ಅದು ರಾಸಾಯನಿಕಗಳ ಆಗರವಾಗಿದೆ; ಮಾನವನಿಗೆ ಚೈತನ್ಯ ನೀಡುವ ಆಹಾರವಾಗುವ ಬದಲು ವಿಷವಾಗುತ್ತ ಹೊರಟಿದೆ. ರೈತ ಮಾತ್ರ ಎಲ್ಲ ಗೊತ್ತಿದ್ದೂ ಗೊತ್ತಿಲ್ಲದಂತೆ ಬೆಳೆಗೆ ವಿಷ ಸುರಿಯುತ್ತಲೇ ಇದ್ದಾನೆ…

‘ಭತ್ತದ ಕಣಜ’ ಎಂದು ಪ್ರಸಿದ್ಧಿ ಪಡೆದಿರುವ ಕೊಪ್ಪಳ, ಗಂಗಾವತಿ, ಮಾನ್ವಿ, ಸಿಂಧನೂರು ಹಾಗೂ ರಾಯಚೂರು ಪ್ರದೇಶದ ದುರಂತದ ಕಥೆಯಿದು.

ತುಂಗಭದ್ರಾ ನದಿಗೆ 1952ರಲ್ಲಿ ಅಣೆಕಟ್ಟು ನಿರ್ಮಾಣವಾದಾಗ ಬೆಂಗಾಡಿನ ಈ ಭಾಗಕ್ಕೆ ನೀರು ದೊರಕುವುದು ಎಂಬ ಸಂಗತಿ ಇಲ್ಲಿನ ರೈತರಾದಿಯಾಗಿ ಎಲ್ಲರಲ್ಲೂ ಸಂತಸ ಮೂಡಿಸಿತ್ತು. ಕಾಲುವೆಗೆ ನೀರು ಹರಿಸಲು ಆರಂಭಿಸಿದಾಗಲೇ ಇಲ್ಲಿ ಬೆಳೆಯಬೇಕಾದ ಬೆಳೆ ಪದ್ಧತಿ ರೂಪಿಸಲಾಯಿತು. ನಿಗದಿತ ಕ್ಷೇತ್ರದಲ್ಲಿ ನಿಗದಿತ ನೀರಿನ ಬಳಕೆಯಿಂದ ಗರಿಷ್ಠ ಉತ್ಪಾದನೆ ಪಡೆಯಲು ಮಣ್ಣಿನ ದೀರ್ಘ ಪರೀಕ್ಷೆ ಮಾಡಿ, ಅದಕ್ಕೆ ತಕ್ಕುದಾದ ಬೆಳೆ ಪದ್ಧತಿಯನ್ನು ನೀರಾವರಿ ಇಲಾಖೆ ಅಳವಡಿಸಿತು. ಆದರೆ ರೈತರ ಅತಿಯಾಸೆ ಮುಂದೆ ಕಾನೂನುಗಳೆಲ್ಲ ಗಾಳಿಗೆ ತೂರಿಹೋದವು. ಆಂಧ್ರ ಕಡೆಯಿಂದ ಬಂದ ರೈತರು ಇಲ್ಲಿ ಭೂಮಿ ಗುತ್ತಿಗೆ ಪಡೆದು ‘ಹೇಗಾದರೂ ಮಾಡಿ’ ಹೆಚ್ಚಿನ ಬೆಳೆಯನ್ನು ತೆಗೆಯುವ ಪ್ರಯತ್ನ ಮಾಡುತ್ತಿದ್ದರೆ, ನಮ್ಮ ರೈತ ಇದನ್ನೆಲ್ಲ ನೋಡುತ್ತ ಸುಮ್ಮನೇ ಕುಳಿತುಬಿಟ್ಟ.

ಎಡದಂಡೆ ಕಾಲುವೆಯ ನೀರು ಬಳಸಿಕೊಂಡು ಈ ಅಚ್ಚುಕಟ್ಟು ಪ್ರದೇಶದಲ್ಲಿ ಬೆಳೆಯುವ ಸೋನಾ ಮಸೂರಿ ಭತ್ತಕ್ಕೆ ಕೊಲ್ಲಿ ರಾಷ್ಟ್ರಗಳಲ್ಲಿ ಭಾರಿ ಬೇಡಿಕೆಯಿದೆ. ರಾಜ್ಯದ ಬೇಡಿಕೆಯ ಶೇ 60ರಷ್ಟು ಭತ್ತದ ಉತ್ಪಾದನೆ ಇಲ್ಲೇ ಆಗುತ್ತಿದ್ದು, ವಾರ್ಷಿಕ 500 ಕೋಟಿ ರೂಪಾಯಿ ವಹಿವಾಟು ಇಲ್ಲುಂಟು. ಇದನ್ನೇ ಬಂಡವಾಳವಾಗಿಸಿಕೊಂಡು ಹೆಚ್ಚಿನ ಉತ್ಪಾದನೆ ಮಾಡಲು ರೈತರು ಹೊರಟಿದ್ದಾರೆ. ಆದರೆ ಈ ಭರದಲ್ಲಿ ಅವರು ಭೂಮಿಯ ಮೇಲೆ ನಡೆಸಿರುವ ದೌರ್ಜನ್ಯ ಮಾತ್ರ ಅಸಹನೀಯ.

ಪ್ರತಿ ವರ್ಷ ಭತ್ತದ ಎರಡು ಬೆಳೆ ತೆಗೆಯುವ ಪೈಪೋಟಿಯಲ್ಲಿ ಅತಿಯಾದ ನೀರಿನ ಬಳಕೆಯಿಂದ ಇಡೀ ಪ್ರದೇಶದ ಸತ್ವವನ್ನೇ ಹಾಳು ಮಾಡಲಾಗಿದೆ. ಜತೆಗೆ ರಾಸಾಯನಿಕ ಕ್ರಿಮಿನಾಶಕ, ಗೊಬ್ಬರ ಬಳಕೆ ಮಿತಿಮೀರಿದ್ದರಿಂದ ನೆಲದ ಜೀವಸತ್ವವೇ ಕಣ್ಮರೆಯಾಗಿದೆ. ಇದೆಲ್ಲದರ ಪರಿಣಾಮವಾಗಿ ಇಳುವರಿ ಮೊದಲಿಗಿಂತ ಶೇಕಡಾ 40ರಷ್ಟು ಕುಸಿದಿದೆ. ಹಾಗೆಂದು ರೈತರು ಹತಾಶರಾಗದೇ ಹೆಚ್ಚೆಚ್ಚು ರಾಸಾಯನಿಕಗಳನ್ನು ಹೊಲಕ್ಕೆ ಸುರಿಯುತ್ತ ಇಳುವರಿ ಹೆಚ್ಚಿಸಲು ಯತ್ನಿಸುತ್ತಿದ್ದಾರೆ. ಇಡೀ ರಾಜ್ಯದಲ್ಲಿ ಬಳಕೆಯಾಗುವ ರಾಸಾಯನಿಕ ಕ್ರಿಮಿನಾಶಕ, ಗೊಬ್ಬರದಲ್ಲಿ ಶೇ 45ರಷ್ಟು ಪ್ರಮಾಣ ಇಲ್ಲಿಯೇ ಬಳಕೆಯಾಗುತ್ತಿದೆ…!

ಒಂದು ಅಂದಾಜಿನ ಪ್ರಕಾರ ಇಲ್ಲಿ ಪ್ರತಿ ಎಕರೆಗೆ 20ರಿಂದ 25 ಚೀಲ ರಸಗೊಬ್ಬರ ಸುರಿಯಲಾಗುತ್ತದೆ. ಭತ್ತಕ್ಕೆ ತಗಲುವ ಕೆಂಪು ಜಿಗಿಹುಳ, ಬೆಂಕಿ ರೋಗಕ್ಕೆ ಧಾರಾಳವಾಗಿ ಕ್ರಿಮಿನಾಶಕ ಬಳಸಲಾಗುತ್ತದೆ. ಇದರ ನೇರ ಪರಿಣಾಮ ಉತ್ಪನ್ನಗಳ ಮೇಲೆ ಆಗುತ್ತಿದ್ದು, ಅಕ್ಕಿಯಲ್ಲಿ ರಾಸಾಯನಿಕ ಅವಶೇಷಗಳ ಅಂಶ ವರ್ಷದಿಂದ ವರ್ಷಕ್ಕೆ ಹೆಚ್ಚಾಗತೊಡಗಿದೆ. ಕಳೆದ ನಾಲ್ಕೈದು ವರ್ಷಗಳ ಹಿಂದೆ ಕೊಲ್ಲಿ ರಾಷ್ಟ್ರಗಳು ಇಲ್ಲಿನ ಅಕ್ಕಿಯನ್ನು ತಿರಸ್ಕರಿಸಿದ್ದವು. ಕಾರಣ ಸ್ಪಷ್ಟ: ಅಕ್ಕಿಯಲ್ಲಿ ರಾಸಾಯನಿಕ ಅಂಶ ಹೆಚ್ಚಾಗಿತ್ತು. ತುಂಗಭದ್ರಾ ಅಚ್ಚುಕಟ್ಟು ಪ್ರದೇಶದ 6.5 ಲಕ್ಷ ಎಕರೆ ನೀರಾವರಿ ಪ್ರದೇಶದಲ್ಲಿ 1.75 ಲಕ್ಷ ಎಕರೆ ಈಗಾಗಲೇ ಬಂಜರಾಗಿ ಪರಿವರ್ತನೆಗೊಂಡಿದೆ. ಅಲ್ಲೀಗ ಹುಲ್ಲುಕಡ್ಡಿ ಕೂಡ ಬೆಳೆಯದು.

ಇದಕ್ಕೆಲ್ಲ ಪರಿಹಾರ ಇಲ್ಲವೇ?

‘ಇದೆ. ಅದು ಸಾವಯವ ಕೃಷಿಯಿಂದ ಮಾತ್ರ ಸಾಧ್ಯ’ ಎನ್ನುತ್ತಾರೆ, ಗಂಗಾವತಿ ತಾಲ್ಲೂಕಿನ ತಿರುಮಲಾಪುರದ ಹನುಮಂತಯ್ಯ. ನೆದರ್‌ಲ್ಯಾಂಡಿನ ಎ‌ಎಂಇ ಸಂಸ್ಥೆ ಮಾರ್ಗದರ್ಶನದಲ್ಲಿ ಈ ಭಾಗದಲ್ಲಿ ಸಾವಯವ ಕೃಷಿ ಅನುಸರಿಸಿ ಸಫಲತೆ ಕಂಡವರು ಅವರು. ’ಮೊದಲೆಲ್ಲ ನಾನೂ ಇತರರಂತೆ ಸಾವಿರಾರು ರೂಪಾಯಿ ರಾಸಾಯನಿಕ ಸುರಿಯುತ್ತಿದ್ದೆ. ಆದರೆ ಈಗ ಅದನ್ನೆಲ್ಲ ನಿಲ್ಲಿಸಿದ್ದೇನೆ. ಸಾವಯವ ಕೃಷಿಯಿಂದ ನನಗೆ ಸಾಕಷ್ಟು ಲಾಭವಾಗಿದೆ; ಜತೆಗೆ ಭೂಮಿಗೂ’ ಎನ್ನುತ್ತಾರೆ ಅವರು. ಭತ್ತಕ್ಕೆ ಬರುವ ವಿವಿಧ ರೋಗಗಳಿಗೆ ಸಸ್ಯಜನ್ಯ ಔಷಧಿ ಬಳಸಿ ರೋಗ ಹತೋಟಿ ಮಾಡುವಲ್ಲಿ ಅವರು ಯಶಸ್ವಿಯಾಗಿದ್ದಾರೆ. ಸಾವಯವ ಕೃಷಿಗೆ ಮಾರುಹೋದ ಇಲ್ಲಿನ ಸುಮಾರು 40 ರೈತರು ‘ಸಸ್ಯ ಶ್ಯಾಮಲೆ’ ಎಂಬ ಗುಂಪನ್ನು ರಚಿಸಿಕೊಂಡಿದ್ದಾರೆ.

ಅಣೆಟ್ಟೆಯಲ್ಲಿ ಸಂಗ್ರಹವಾಗುವ ನೀರನ್ನು ಕಾನೂನುಬದ್ಧವಾಗಿ ನೀಡುವ ಉದ್ದೇಶದಿಂದ ಸ್ಥಾಪಿಸಲಾದ ತುಂಗಭದ್ರಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರ (ಕಾಡಾ) ಮಾತ್ರ ಈ ವಿಷಯದ ಕುರಿತು ದಿವ್ಯ ನಿರ್ಲಕ್ಷ್ಯ ತೋರಿರುವುದು ಸೋಜಿಗ. ಜವಳು ಭೂಮಿಯನ್ನು ಕೃಷಿಯೋಗ್ಯವಾಗಿ ಪರಿವರ್ತಿಸುವ ಉದ್ದೇಶಕ್ಕಾಗಿ ಪ್ರಾಧಿಕಾರಕ್ಕೆ ಲಕ್ಷಗಟ್ಟಲೇ ಹಣ ಮಂಜೂರಾದರೂ ಅದರ ಸಮರ್ಪಕ ಬಳಕೆಯಾಗಿಲ್ಲ. ಹಾಗಿದ್ದರೆ ಕಾಡಾದ ಉದ್ದೇಶವಾದರೂ ಏನು?

ಈಗಾಗಲೇ ಅಕ್ಷರಶಃ ಬಂಜರಾಗಿರುವ ಇಲ್ಲಿಯ ಜಮೀನನ್ನು ಮರಳಿ ಕೃಷಿಯೋಗ್ಯವಾಗಿ ಪರಿವರ್ತಿಸುವ ಯೋಜನೆ ಹಲವಾರು ಕಾರಣಗಳಿಂದಾಗಿ ವಿಫಲಗೊಂಡಿದೆ. ಇದ್ದುದರಲ್ಲೇ ಕೆಲವು ಪ್ರಜ್ಞಾವಂತ ರೈತರು ಎಚ್ಚರಗೊಂಡು ರಾಸಾಯನಿಕಗಳ ಬಳಕೆ ತ್ಯಜಿಸಿದ್ದಾರೆ. ಅದು ಸಾಮೂಹಿಕ ಚಳವಳಿ ಆಗಬೇಕಾಗಿರುವುದು ಇಂದಿನ ಅಗತ್ಯ ಹಾಗೂ ಅನಿವಾರ್ಯತೆ ಕೂಡ. ನೆಲಕ್ಕೆ ವಿಷ ಉಣ್ಣಿಸುವ ಕಾರ್ಯ ಮುಂದುವರಿದಲ್ಲಿ ಇಡೀ ಅಚ್ಚುಕಟ್ಟು ಪ್ರದೇಶ ಸಂಪೂರ್ಣ ಬರಡಾಗುವುದು ಖಚಿತ. ಇದಕ್ಕೆ ಈಗಲೇ ಕಡಿವಾಣ ಹಾಕದಿದ್ದರೆ, ಸಮೃದ್ಧ ಅಕ್ಕಿ ಬೆಳೆಯುವ ಈ ನೆಲ ಕೆಲವೇ ವರ್ಷಗಳಲ್ಲಿ ಖಾಲಿಯಾಗಿ ಭಣಗುಟ್ಟೀತು..

ಭತ್ತದ ಕಣಜ ಬರಿದಾದೀತು…!