ಯಾವುದೇ ಕೈಗಾರಿಕೆ ಸ್ಥಾಪಿಸಬೇಕಾದರೂ ಅದಕ್ಕೆ ಬಂಡವಾಳ ಹಾಕಬೇಕು. ಬಂಡವಾಳ ಹಾಕ್ದೇನೆ ಮಾಡೋ ಕೆಲಸ ಅಂದ್ರೆ ದರೋಡೆ ಮಾತ್ರ! ಹಾಗಾಗಿ ಕೃಷಿಯಲ್ಲೂ ಮೊದಲು ಕೈಯಿಂದ ಸ್ವಲ್ಪ ವೆಚ್ಚ ಮಾಡಿದರೆ ಅದರಿಂದ ಬರೋ ಲಾಭ ಏನೂಂತ ನನಗೆ ಚೆನ್ನಾಗಿ ಗೊತ್ತಾಗಿದೆ…

ಕಾಂಕ್ರೀಟ್ ಕಾಡು ಬೆಂಗಳೂರಿನಿಂದ ಕೇವಲ 30 ಕಿಲೋಮೀಟರ್ ದೂರ ದಲ್ಲಿರುವ ದೇವನಹಳ್ಳಿಯ ಕೃಷಿಕ ಶಿವನಾಪುರ ರಮೇಶ, ತಮ್ಮ ನಿಜವಾದ ಕಾಡನ್ನು ಸುತ್ತಿಸುತ್ತ ಕೃಷಿಲೋಕದ ಇನ್ನೊಂದು ಮಗ್ಗಲನ್ನು ತೆರೆದಿಡುತ್ತ ಹೋದರೆ, ಸಮಯ ಸರಿದಿದ್ದೇ ಗೊತ್ತಾಗದು. ಹಾಗಂತ ಅವರ ತೋಟ ಹತ್ತಾರು ಎಕರೆ ಇಲ್ಲ. ಇರುವುದು ಕೇವಲ ಎರಡೂವರೆ ಎಕರೆ. ಈ ತೋಟದಲ್ಲೇ ಅವರು ಮಾಡಿದ್ದು ಅಚ್ಚರಿ ಎನಿಸುವಷ್ಟು ಸಾಧನೆ.

ಹಸಿರುಕ್ರಾಂತಿಯ ಅಬ್ಬರಕ್ಕೆ ಮಾರುಹೋಗಿ ಸಂಕಷ್ಟಕ್ಕೆ ಸಿಲುಕುವ ಮುನ್ನವೇ ಈ ಬಗ್ಗೆ ಎಚ್ಚರಗೊಂಡವರ ಪೈಕಿ ರಮೇಶ ಒಬ್ಬರು. ಕೆರೆಗೋಡು, ತಿಪ್ಪೆಗೊಬ್ಬರವನ್ನು ಹೊಲಕ್ಕೆ ಹಾಕಿ ಬೆಳೆ ತೆಗೆಯುತ್ತಿದ್ದ ತಂದೆಯ ಕೃಷಿ ವಿಧಾನ ನೆನಪಿನಲ್ಲಿತ್ತು. ಅದರಲ್ಲೇ ವಿವಿಧ ಪ್ರಯೋಗಗಳನ್ನು ಮಾಡುತ್ತ ಹೊಸ-ಹೊಸ ವಿಧಾನ ಅಳವಡಿಸುತ್ತ ಬಂದ ರಮೇಶ ಅನುಭವಗಳ ಖಜಾನೆ.

ಕೃಷಿಕ ಸ್ವತಃ ಹಣ ಖರ್ಚು ಮಾಡಿದರೆ ದೊರೆಯುವ ಆದಾಯದಲ್ಲಿ ಕೊಂಚ ಪಾಲು ಕಡಿಮೆಯಾಗುತ್ತದೆ. ಹಾಗಾಗಿ ಪ್ರಕೃತಿಯ ಕೊಡುಗೆ ಬಳಸಿಕೊಂಡು ಜಾಣ್ಮೆಯಿಂದ ವೆಚ್ಚ ಕಡಿಮೆ ಮಾಡಬೇಕು ಎಂಬ ನೀತಿ ಪಾಲಿಸುತ್ತಾರೆ ರಮೇಶ. ಇದನ್ನು ಸಾಕಾರಗೊಳಿಸಿದ್ದು ಹೀಗೆ:

ತೋಟದ ಸುತ್ತ ಉತ್ತಮ ಇಳುವರಿ ಕೊಡುವ ಮಾವು, ತೆಂಗು ಇವೆ. ಒಂದು ಹಂತದ ಬಳಿಕ ಇವುಗಳಿಗೆ ಮಾಡಬೇಕಾದ ವೆಚ್ಚ ಶೂನ್ಯ. ಈಗ ಪ್ರತಿವರ್ಷ ಈ ಮರಗಳಿಂದ ಸಿಗುವ ಹಣವನ್ನು ಹಿಪ್ಪುನೇರಳೆ ಬೆಳೆಗೆ ವೆಚ್ಚ ಮಾಡುತ್ತಾರೆ. ಇಲ್ಲಿ ದೊರೆಯುವ ಆದಾಯವನ್ನು ದ್ರಾಕ್ಷಿಗೆ ಹಾಕುತ್ತಾರೆ. ‘ದ್ರಾಕ್ಷಿಯಿಂದ ಬರುವ ಆದಾಯವೆಲ್ಲ ಪೂರ್ತಿ ಲಾಭಾನೇ’ ಎಂದು ನಗುತ್ತ ಗುಟ್ಟು ರಟ್ಟು ಮಾಡುತ್ತಾರೆ. ಇದರ ಮಧ್ಯೆ ಬೆಳೆದಿರುವ ವಿವಿಧ ಹಣ್ಣಿನ ಗಿಡಗಳಿಂದ ಬರುವ ಹಣವೆಲ್ಲ ಬೋನಸ್!

ರೇಷ್ಮೆ-ದ್ರಾಕ್ಷಿ

ಒಂದು ಎಕರೆಯಲ್ಲಿ ಹಿಪ್ಪುನೇರಳೆ ಕೃಷಿ. ವರ್ಷದಲ್ಲಿ ಒಂದೆರಡು  ಬಾರಿ ಎರೆಗೊಬ್ಬರ, ಬೇವು, ಹೊಂಗೆ ಹಿಂಡಿ ಸೇರಿದಂತೆ ಉತ್ಕೃಷ್ಟ ಗೊಬ್ಬರ ನೀಡುವುದರಿಂದ ಬೆಳೆದ ಬೆಳೆಯ ಅಬ್ಬರವನ್ನು ನೋಡಿಯೇ ತಿಳಿಯಬೇಕು. ಇವರ ತೋಟದ ಎಲೆ ಸೇವಿಸುವ ರೇಷ್ಮೆ ಹುಳುಗಳು ಚೆನ್ನಾಗಿ ಲಾಭ ನೀಡುವುದರಿಂದ ಸಹಜವಾಗಿಯೇ ರಮೇಶ ತೋಟದ ಬೆಳೆಗೆ ಬೇಡಿಕೆ ಅಧಿಕಗೊಂಡಿದೆ. ವರ್ಷಕ್ಕೆ ಐದಾರು ಬಾರಿ ರೇಷ್ಮೆ ಕಟಾವು ಮಾಡಿ ಪ್ರತಿ ಬಾರಿ 18ರಿಂದ 20 ಸಾವಿರ ರೂಪಾಯಿ ಪಡೆಯುತ್ತಿದ್ದಾರೆ.

‘ಈ ದ್ರಾಕ್ಷಿ ಗೊಂಚಲು ನೋಡಿ. ಈ ಬಾರಿ ಸಿಗೋ ಇಳುವರಿ ದಾಖಲೆ ಆಗಬಹುದು’ ಎಂದು ರಮೇಶ ನಮ್ಮೆದುರು ವಿಶ್ವಾಸ ವ್ಯಕ್ತಪಡಿಸಿದ್ದರು. ಅದು ನಿಜವೂ ಆಗಿತ್ತು. ಕೇವಲ ಮುಕ್ಕಾಲು ಎಕರೆಯಲ್ಲಿ ಬೆಳೆದ ‘ಬೆಂಗಳೂರು ಬ್ಲೂ’ ದ್ರಾಕ್ಷಿಯ ಇಳುವರಿ 19 ಟನ್! ಖುದ್ದಾಗಿ ನೋಡದೇ ಬಹುಶಃ ಯಾರೂ ಇದನ್ನು ನಂಬಲಾರರು. ವರ್ಷಕ್ಕೆ ಎರಡು ಬಾರಿ ಸರಾಸರಿ 10 ಟನ್‌ಗಳಂತೆ ಒಟ್ಟು 20 ಟನ್ ದ್ರಾಕ್ಷಿ ಇಳುವರಿ ಪಡೆಯುತ್ತಾರೆ. ಎಕರೆಗೆ ಏಳೆಂಟು ಟನ್ ಪಡೆಯಬಹುದು ಎಂದು ಕೃಷಿತಜ್ಞರು ಹೇಳುತ್ತಾದರೂ, ಮುಕ್ಕಾಲು ಎಕರೆಯಲ್ಲಿ ಅದಕ್ಕಿಂತ ಜಾಸ್ತಿ ಆದಾಯ ಪಡೆದಿದ್ದು ರಮೇಶ ವೈಶಿಷ್ಟ್ಯ. ‘ದರ ಒಮ್ಮೊಮ್ಮೆ ತೀರಾ ಕುಸಿದು ಬಿಡುತ್ತದೆ. ಆದರೆ ನಾನು ಕೈಯಿಂದ ಖರ್ಚು ಮಾಡಿರುವುದೇ ಕಡಿಮೆ ಎಂದಾದಾಗ, ಕಡಿಮೆ ಆದಾಯ ಬಂದರೂ ಲಾಭವೇ’ ಎನ್ನುತ್ತಾರೆ.

ಸಸ್ಯವೈವಿಧ್ಯ

30-40 ಅಡಿಗೆ ಒಂದರಂತೆ ಹಣ್ಣಿನ ಗಿಡಗಳು. ಮಧ್ಯೆ ರೇಷ್ಮೆ. ಇಡೀ ತೋಟದಲ್ಲಿರುವ ಹಣ್ಣಿನ ಗಿಡ ಲೆಕ್ಕ ಹಾಕಿದರೆ ಅಬ್ಬಾ! ಎನಿಸುತ್ತದೆ. ಒಟ್ಟು 35 ವಿಧದ ಹಣ್ಣು ಇವರಿಗೆ ಲಭ್ಯ.

‘ಆರು ತಳಿಯ ಮಾವು, ಸಪೋಟಾ, ಬಾಳೆ, ದ್ರಾಕ್ಷಿ ಇವನ್ನೆಲ್ಲ ವಾಣಿಜ್ಯ ರೂಪದಲ್ಲಿ ಬೆಳೆದರೆ, ಉಳಿದಿದ್ದೆಲ್ಲ ಮನೆಗೆಂದೇ ಬೆಳೆಸಿದ್ದು’ ಎನ್ನುವ ರಮೇಶ, ಪ್ರತಿ ಬಾರಿ ತೋಟಕ್ಕೆ ಹೋದಾಗಲೂ ಒಂದಲ್ಲ ಒಂದು ಹಣ್ಣನ್ನು ನೀವು ಸವಿಯಲೇಬೇಕು ಎಂದು ಹೇಳುತ್ತಾರೆ. ಹಾಗಿದ್ದರೆ ಯಾವ್ಯಾವ ಹಣ್ಣುಗಳಿವೆ?

ಕಿತ್ತಲೆ, ಮೂಸಂಬಿ-8 ತಳಿ, ಪಪ್ಪಾಯಿ-4 ತಳಿ, ರಾಮಫಲ, ಹನುಮನಫಲ, ಸೀತಾಫಲ, ಲಿಚಿ, ಬ್ರೆಡ್‌ಫ್ರೂಟ್, ಬಟರ್‌ಫ್ರೂಟ್, ಅಂಜೂರ, ಪನ್ನೇರಳೆ, ದಾಳಿಂಬೆ, ಹಲಸು-ಮೂರು ವಿಧ, ಸೀಬೆ- ಎರಡು ವಿಧ. ಇವುಗಳಲ್ಲಿ ಅಗ್ರಸ್ಥಾನ ಚಕ್ಕೋತಾಕ್ಕೆ. ‘ದೇವನಹಳ್ಳಿ ಚಕ್ಕೋತ’ ತಳಿಯ ಮೂಲಗುಣ ಉಳಿಸಿಕೊಂಡ ಗಿಡಗಳಲ್ಲಿ ಈಗ ಉಳಿದಿರುವುದು ಒಟ್ಟು ಏಳೆಂಟು ಮಾತ್ರ. ಅದರಲ್ಲಿ ಐದು ಇವರಲ್ಲಿವೆ. ವೈದ್ಯಕೀಯ ಗಿಡಮೂಲಿಕೆಗೂ ಪ್ರಾಶಸ್ತ್ಯ ನೀಡಿರುವ ಇವರು, ಚಿಕ್ಕ ಜಾಗದಲ್ಲಿ ಮಧುನಾಶಿಸಿ, ಅಮೃತಬಳ್ಳಿ, ಕರ್ಪೂರ ತುಳಸಿ, ರಣಮೂಲ ಬೆಳೆಸಿದ್ದಾರೆ. ಇವುಗಳ ಪೈಕಿ ಮಧುನಾಶಿನಿಯನ್ನು ಸಸಿ ಮಾಡಿ ಸುಮಾರು 2,000 ಮಂದಿಗೆ ಉಚಿತವಾಗಿ ವಿತರಿಸಿದ್ದಾರೆ.

ಬಾಳೆಗೆ ಖರ್ಚು ಜಾಸ್ತಿ; ರೋಗ ಜಾಸ್ತಿ ಎಂಬುದು ರೈತರ ದೂರು. ಅದರಿಂದ ಹೇಗೆ ಲಾಭ ಪಡೆಯಬಹುದು ಎಂಬುದನ್ನು ಸಾಧಿಸಿ ತೋರಿಸಲು ನಾಲ್ಕು ಗುಂಟೆಯಲ್ಲಿ ಪ್ರಯೋಗಕ್ಕೆ ರಮೇಶ ಮುಂದಾದರು. ನೆಲದ ಫಲವತ್ತತೆ ಅಧಿಕಗೊಳಿಸುವ ಮೂಲಕ ಅತ್ಯುತ್ತಮ ಎಂಬುವಷ್ಟು ಇಳುವರಿ ತೆಗೆದು ಅದನ್ನು ಸಾಧಿಸಿ ತೋರಿಸಿದ್ದಾರೆ. ಸುತ್ತಲಿನ ಬಾಳೆ ಬೆಳೆಗಾರರಿಗೆ ಈಗ ರಮೇಶ ವಿಧಾನವೇ ಮಾರ್ಗದರ್ಶಕ.

ದಾಖಲೆಗಳ ಸರದಾರ

ಹೈನುಗಾರಿಕೆ ಹಾಗೂ ಕೃಷಿಯಲ್ಲಿ ಅಪಾರ ಅನುಭವ ಪಡೆದ ರಮೇಶ, ದಾಖಲೆಗಳ ಸರದಾರ. ಬೆಂಗಳೂರಿನ ಲಾಲ್‌ಬಾಗ್‌ನಲ್ಲಿ ಪ್ರತಿವರ್ಷ ಏರ್ಪಡಿಸುವ ಫಲಪುಷ್ಟ ಪ್ರದರ್ಶನದಲ್ಲಿ ಆರು ಬಾರಿ ಪ್ರಶಸ್ತಿ ಪದಿದ್ದಾರೆ. ದೇವನಹಳ್ಳಿಯ ಹಾಲು ಉತ್ಪಾದಕರ ಒಕ್ಕೂಟವನ್ನು ಲಾಭದಲ್ಲಿ ನಡೆಸಿದ್ದ ರಮೇಶ, ಅಲ್ಲೂ ರಾಜ್ಯಮಟ್ಟದ ಹಲವು ದಾಖಲೆ ನಿರ್ಮಿಸಿದ್ದಾರೆ. ಪುಟ್ಟ ಜಾಗದಲ್ಲೇ ಇಷ್ಟೊಂದು ಸಾಧನೆ ತೋರಿದ ಇವರಿಗೆ ಕಳೆದ ಸಾಲಿನ ಪ್ರತಿಷ್ಠಿತ ಡಾ† ಎಂ.ಎಚ್.ಮರೀಗೌಡ ರಾಜ್ಯಮಟ್ಟದ ತೋಟಗಾರಿಕೆ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

ಮಾರ್ಗದರ್ಶನ, ಸಲಹ ಕೇಳಿಕೊಂಡು ದಿನವೂ ಇವರಲ್ಲಿಗೆ ಕೃಷಿಕರು ಬರುತ್ತಾರೆ. ‘ಸ್ಪಷ್ಟ ಮಾಹಿತಿ ಗೊತ್ತಿದ್ರೆ ಮಾತ್ರ ಹೇಳ್ಬೇಕು. ಇಲ್ಲದೇ ಹೋದ್ರೆ ಏನೇನೋ ಹೇಳಿ ರೈತರ ದಾರಿ ತಪ್ಪಿಸೋದು ಮಹಾಪಾಪ. ಅದಕ್ಕಿಂತ ದೊಡ್ಡ ಅಪರಾಧ ಯಾವ್ದೆ ಇಲ್ಲ’ ಎಂದು ನುಡಿಯುತ್ತಾರೆ ರಮೇಶ. ಮಣ್ಣಿನ ಗುಣಧರ್ಮ, ಅದಕ್ಕೆ ನೀಡಬೇಕಾದ ಗೊಬ್ಬರ, ಪೋಷಕಾಂಶದ ಪ್ರಮಾಣದ ಕುರಿತು ಪರಿಣತಿ ಸಾಧಿಸಿರುವ ರಮೇಶ ಅವರ ಬತ್ತಳಿಕೆಯಲ್ಲಿ ಯಶಸ್ವಿ ಕೃಷಿಗೆ ಹಲವು ಅಸ್ತ್ರಗಳಿವೆ.

‘ಸಹಜ ಸಮೃದ್ಧ’ ಸಾವಯವ ಕೃಷಿಕರ ಬಳಗವು ತನ್ನ ಕಾರ್ಯಾಗಾರದಲ್ಲಿ ರಮೇಶ ಅವರನ್ನು ಸಂಪನ್ಮೂಲ ವ್ಯಕ್ತಿಗಳನ್ನಾಗಿ ಪರಿಚಯಿಸುತ್ತಿದೆ. ರಮೇಶ ನೀಡುವ ಸಲಹೆ ಪಕ್ಕಾ ಪ್ರಾಯೋಗಿಕ. ಅಲ್ಲಿ ಉಪನ್ಯಾಸ, ಭಾಷಣ ಇರೋಲ್ಲ. ರೈತನಿಗೆ ಏನು ಬೇಕೋ ಅದು ಸಿಗುತ್ತೆ ಎಂಬುದು ರೈತರ ಅಭಿಮತ.

ನೆಲದ ಅನುಭವವೇ ಇಲ್ಲದೆ ಹವಾನಿಯಂತ್ರಿತ ಕೊಠಡಿಯಲ್ಲಿ ಒಂದಡಿ ಜಾಗದಲ್ಲಿ ಪ್ರಯೋಗ ನಡೆಸುವ ವಿಜ್ಞಾನಿಗಳು, ಅಧಿಕಾರಿಗಳು ಅದನ್ನು ಹತ್ತಾರು ಎಕರೆಗೆ ಅನ್ವಯಿಸಿ ಸಲಹೆ ಮಾರ್ಗದರ್ಶನ ನೀಡುತ್ತಾರೆ. ಇದನ್ನು ರಮೇಶ ತಳ್ಳಿಹಾಕುತ್ತಾರೆ. ‘ನೆಲ ಮುಟ್ಟಿ ಅನುಭವಿಸದ ಹೊರತೂ ಅದನ್ನು ಅರಿಯಲು ಸಾಧ್ಯವೇ ಇಲ್ಲ’ ಎಂಬ ಪ್ರತಿಪಾದನೆ ರಮೇಶ ಅವರದು.

ಮಣ್ಣಿಗೆ ಒಳ್ಳೆಯ ಆಹಾರ ಕೊಟ್ಟರೆ ಸಾಕು; ಉಳಿದಿದ್ದನ್ನು ಅದೇ ನೋಡಿಕೊಳ್ಳುತ್ತದೆ ಎಂದು ಹೇಳುವ ರಮೇಶ, ತೋಟದಲ್ಲಿ ಹೆಚ್ಚು ಸಮಯ ಕಳೆಯುತ್ತಾರೆ. ಬೆಳಿಗ್ಗೆ ಐದು ಗಂಟೆಗೆ ಹೋದರೆ ರಾತ್ರಿ ಎಂಟಕ್ಕೆ ಮನೆಗೆ ವಾಪಸು. ಕೆಲಸವೂ ಸ್ವಲ್ಪ. ಉಳಿದ ಸಮಯದಲ್ಲಿ ಅವರು ಪುಸ್ತಕ ಓದುತ್ತಾರೆ. ತೋಟದಲ್ಲಿ ನಿರ್ಮಿಸಿರುವ ಕೊಠಡಿಯಲ್ಲಿ ಪೂರ್ಣಚಂದ್ರ ತೇಜಸ್ವಿ, ಎಸ್.ಎಲ್. ಭೈರಪ್ಪ ಸೇರಿದಂತೆ ಖ್ಯಾತ ಸಾಹಿತಿಗಳ ಕೃತಿಗಳು, ಕೃಷಿ ಪುಸ್ತಕಗಳನ್ನು ಸಂಗ್ರಹಿಸಿ ಇಟ್ದಿದ್ದಾರೆ.

ಮರದ ನೆರಳಲ್ಲಿ ಕಲ್ಲುಬೆಂಚಿನಲ್ಲಿ ಪ್ರಶಾಂತ ವಾತಾವರಣದ ಮಧ್ಯೆ ಓದುತ್ತಿರುವ ರಮೇಶರನ್ನು ನೋಡಿದವರಿಗೆ ಕೃಷಿ ಬದುಕಿನ ನಿಜವಾದ ಖುಷಿ ಅರ್ಥವಾಗುತ್ತದೆ. ನಗರದ ಒತ್ತಡದಲ್ಲಿ ಬದುಕುತ್ತಿರುವ ಕೆಲವರು ಹಾಗಂತ ಅವರ ಮುಂದೆ ಹೇಳಿ, ಕೃಷಿಯತ್ತ ಒಲವು ತೋರಿದ್ದಾರೆ. ಅವರಿಗೆಲ್ಲ ರಮೇಶ ಹೇಳುವ ಮಾತು ಒಂದೇ: ‘ಕೃಷಿಯಲ್ಲಿ ಶ್ರೀಮಂತಿಕೆ, ಕೋಟ್ಯಂತರ ದುಡ್ಡು ಸಿಗೋದಿಲ್ಲ. ಆದರೆ ನೆಮ್ಮದಿ, ಸುಖ, ಸಂತೋಷ ಖಂಡಿತವಾಗಿ ಸಿಗುತ್ತದೆ.’

ಇವರಲ್ಲಿದೆ ದೇವನಹಳ್ಳಿ ಚಕ್ಕೋತ…

ನಂಜನಗೂಡಿನ ರಸಬಾಳೆ

ತಂದಿಹೆ ಕೊಡಗಿನ ಕಿತ್ತಿಲೆ

ಬಾದಾಮಿಯ ಸವಿ ಸಪೋಟ

ದೇವನಹಳ್ಳಿ ಚಕ್ಕೋತ…

ಪ್ರಾಥಮಿಕ ಶಾಲೆಯ ಪುಸ್ತಕದಲ್ಲಿದ್ದ ಈ ಪದ್ಯ ನೆನಪಿದೆಯೇ? ಬಾಳೆ, ಕಿತ್ತಿಲೆ, ಸಪೋಟ ಜತೆಗೆ ಮಾವು, ದಾಳಿಂಬೆ, ದ್ರಾಕ್ಷಿ, ದಾಳಿಂಬೆಗೆ ವಾಣಿಜ್ಯಿಕ ರೂಪ ಬಂದಿದೆ. ಈ ಸಾಲಿಗೆ ಚಕ್ಕೋತ ಸಹ ಸೇರಬೇಕಿತ್ತು. ಆದರೆ ಯಾಕೋ- ತೋಟಗಾರಿಕೆ ಇಲಾಖೆಯು ಈಗಷ್ಟೇ ಈ ಕಡೆ ಗಮನಹರಿಸಿದೆ.

ಚಕ್ಕೋತ ಹಣ್ಣಿನದೇ ಒಂದು ವಿಶಿಷ್ಟ ರುಚಿ. ಬ್ರಿಟಿಷರು 19ನೇ ಶತಮಾನದ ಆರಂಭದಲ್ಲಿ ಇದನ್ನು ಯೂರೋಪ್‌ನಿಂದ ತರಿಸಿ ಲಾಲ್‌ಬಾಗ್‌ನಲ್ಲಿ ನೆಟ್ಟರು. ಅಲ್ಲಿಂದ ಇದು ರಾಜ್ಯದೆಲ್ಲೆಡೆ ಹರಡಿತು. ಈ ಪೈಕಿ ‘ದೇವನಹಳ್ಳಿ ಚಕ್ಕೋತ’ ಎಂಬ ವಿಶೇಷ ತಳಿಯೊಂದು ರೂಪುಗೊಂಡಿತು.

ಈಗ್ಗೆ 50 ವರ್ಷಗಳ ಹಿಂದೆ ಪ್ರಾಕೃತಿಕ ಸಮಸ್ಯೆ ತಲೆದೋರಿ, ಮೂಲತಳಿಯ ಗುಣದೊಂದಿಗೆ ಇನ್ನಿತರ ಗುಣಗಳೂ ಮಿಲನಗೊಂಡವು. ಈ ಬೆರಕೆ ತಳಿ ಹರಡಿತು. ಹಾಗ್ದಿದರೂ ಮೂಲತಳಿ ಗುಣ ಉಳಿಸಿಕೊಂಡ ಏಳೆಂಟು ಮರಗಳು ದೇವನಹಳ್ಳಿ ಸುತ್ತಮುತ್ತ ಉಳಿದುಕೊಂಡಿವೆ. ಅವುಗಳ ಪೈಕಿ ರಮೇಶ ಬಳಿಯಲ್ಲಿ ಐದು ಮರಗಳಿವೆ.

ಮಹಾತ್ಮಾ ಗಾಂಧೀಜಿ ನಂದಿಬೆಟ್ಟಕ್ಕೆ ವಿಶ್ರಾಂತಿಗೆಂದು ಆಗಮಿಸ್ದಿದ ಸಮಯದಲ್ಲಿ, ರಮೇಶ ಅವರ ತಂದೆ ಚನ್ನಪ್ಪ ಅವರು ಗಾಂಧೀಜಿಗೆ ಎರಡು ಚಕ್ಕೋತ ಹಣ್ಣನ್ನು ಒಯ್ದು ನೀಡಿದ್ದರಂತೆ.

ತೋಟಗಾರಿಕೆ ಇಲಾಖೆಯ ಅಪರ ನಿರ್ದೇಶಕ ಡಾ† ಎಸ್.ವಿ.ಹಿತ್ತಲಮನಿ ಅವರು ದೇವನಹಳ್ಳಿ ಚಕ್ಕೋತದ ಮೂಲತಳಿಗೆ ಹುಡುಕಾಟ ನಡೆಸಿ, ಕೊನೆಗೆ ರಮೇಶ ತೋಟದಲ್ದ್‌ದ ಮರವನ್ನು ಆಯ್ಕೆ ಮಾಡಿದರು. ‘ಕಸಿ ಮಾಡುವ’ ಹಾಗೂ ‘ಕಣ್ಣು ಹಾಕುವ’ ಬಗ್ಗೆ ಆಸಕ್ತರಿಗೆ ರೈತರಿಗೆ ಇಲ್ಲೇ ತರಬೇತಿ ನೀಡಿದರು.

ಅಂದ ಹಾಗೆ ಇವರ ಮರ ಪ್ರತಿ ವರ್ಷಕ್ಕೆ ಸುಮಾರು 500ರಿಂದ 800 ಹಣ್ಣು ನೀಡುತ್ತದೆ. ಬೆರಕೆ ತಳಿ ಮಾದರಿಯ ಚಕ್ಕೋತ ಹಣ್ಣಿಗೆ ನಾಲ್ಕರಿಂದ ಐದು ರೂಪಾಯಿ ಬೆಲೆ. ಆದರೆ ಮೂಲ ತಳಿಯ ಹಣ್ಣಿನ ಬೆಲೆ- 50ರಿಂದ 100 ರೂ!

 

ಭರ್ಜರಿ ಬಾಳೆ

ಬಾಳೆ ಕೃಷಿ ಪ್ರಯೋಗಕ್ಕೆ ರಮೇಶ ನಾಲ್ಕು ಗುಂಟೆ ಜಾಗ ಆರಿಸಿದರು. ಅಲ್ಲಿ ಬೆಳೆಸಿದ್ದು 160 ಗಿಡ. ಚಿಕ್ಕ ಕಾಲುವೆ ಮಾಡಿ, ಅದರಲ್ಲಿ ತಿಪ್ಪೆಗೊಬ್ಬರ, ತೆಂಗಿನಗರಿ, ಬೇವು-ಹೊಂಗೆ ಹಿಂಡಿ ಹಾಕಿದರು. ಬಳಿಕ ಸ್ವಲ್ಪ ನೀರು ನೀಡಿದರು. ಎರಡು ವಾರಗಳ ಕಾಲ ಕೊಳೆತ ನಂತರ ಅದರಲ್ಲಿ ಬಾಳೆ ಕಂದು ನೆಟ್ಟರು.

ಬಾಳೆ ಅಧಿಕ ನೀರನ್ನು ಬೇಡುತ್ತದೆ. ಅದನ್ನು ತಪ್ಪಿಸಲು ಹೊದಿಕೆ ತಂತ್ರ ಅನುಸರಿಸಿದರು. ಹತ್ತು ದಿನಗಳಿಗೊಮ್ಮೆ ನೀರು ಹರಿಸಿದರು. ಬಿರುಬಿಸಿಲಿ್ದರೂ ಯಾವುದೇ ಗಿಡ ಒಣಗಲಿಲ್ಲ. ಅಕ್ಕಪಕ್ಕದಲ್ಲಿನ ತೋಟಗಳಲ್ಲಿ ಸತತ ನಿಗಾ ವಹಿಸುವ ಬಾಳೆ ಗಿಡಗಳಿಗೆ ಏನೇನೋ ರೋಗ; ಇಲ್ಲಿ ಮಾತ್ರ ಯಾವ ರೋಗವೂ ದಾಳಿ ಮಾಡಲಿಲ್ಲ.

ಐದಾರು ಅಡಿ ಉ್ದದದ ಗೊನೆ ಬಂದಾಗ ಅವರಿಗೇ ಅಚ್ಚರಿ. ದೊರೆತ ಆದಾಯ ಸುಮಾರು 28 ಸಾವಿರ ರೂಪಾಯಿ. ನೀಡಿದ ಗೊಬ್ಬರ ತೀರಾ ಕಡಿಮೆ. ಹಾಗಾಗಿ ಅಲ್ಪ ವೆಚ್ಚದಲ್ಲೇ ಹೆಚ್ಚು ಆದಾಯ ಪಡೆದರು.

 

ಗೊಬ್ಬರಕ್ಕಾಗಿ ಗುಹೆಗಳ ಅನ್ವೇಷಣೆ!

ಚಾರಣ- ರಮೇಶ ಅವರ ಹವ್ಯಾಸ. ಒಮ್ಮೆ ಬೆಟ್ಟಕ್ಕೆ ಹೋದಾಗ ಗುಹೆಯ ಒಳಗೆ ಬಿದ್ದಿದ್ದ ಬಾವಲಿ ಹಿಕ್ಕೆ ರಾಶಿ ಕಂಡಿತು. ಕುತೂಹಲಕ್ಕೆಂದು ಬೊಗಸೆ ತುಂಬ ತಂದು ಹುರುಳಿಯ ಗಿಡವೊಂದಕ್ಕೆ ಹಾಕಿದರು. ಅದು ಸತತ ಮೂರು ತಿಂಗಳ ಕಾಲ ಕಾಯಿ ನೀಡಿತು. ಆಗಲೇ ಅವರಿಗೆ ಬಾವಲಿ ಹಿಕ್ಕೆಯ ಮಹತ್ವ ಗೊತ್ತಾಗಿದ್ದು.

ದೇವನಹಳ್ಳಿ ಸುತ್ತಲೂ ಇರುವ ನಂದಿಬೆಟ್ಟ ಮತ್ತಿತರ ಗುಡ್ಡಗಳಲ್ಲಿ ತಿರುಗಾಡುವ ರಮೇಶ, ಗುಹೆ ಹುಡುಕುತ್ತಾರೆ. ಇನ್ನೊಮ್ಮೆ ಹೋಗಿ ಹಿಕ್ಕೆಯನ್ನು ಚೀಲದಲ್ಲಿ ತುಂಬಿ ತರುತ್ತಾರೆ. ಇದರಲ್ಲಿ ಏನಿದೆ? ಎಂಬ ಕುತೂಹಲದಿಂದ ಹಿಕ್ಕೆಯ ಮಾದರಿಯನ್ನು ಕೃಷಿ ಇಲಾಖೆಗೆ ಪರೀಕ್ಷೆಗೆ ಕಳಿಸಿದರು. ‘ಮಣ್ಣಿಗೆ ಸತ್ವ ನೀಡುವ 13 ತರಹದ ಪೋಷಕಾಂಶ ಇದರಲ್ಲಿವೆ’ ಎಂದು ವರದಿ ತಿಳಿಸಿತು.

ಹಿಕ್ಕೆಯ ರಾಶಿಯನ್ನು ಮಣ್ಣಿನೊಂದಿಗೆ ಬೆರೆಸುವುದರಿಂದ, ನೆಲದ ಫಲವತ್ತತೆ ಅಧಿಕಗೊಂಡಿದೆ. ಗುಹೆ ಹುಡುಕುವುದು, ಹೆಜ್ಜೇನು- ವಿಷಜಂತುಗಳಿಂದ ತಪ್ಪಿಸಿಕೊಂಡು ಗೊಬ್ಬರ ತರುವುದು ಸಾಹಸದ ಕೆಲಸ; ಅಪಾಯಕಾರಿ ಸಹ. ‘ಆದರೆ ಇದರಲ್ಲಿಯೇ ನಾನು ಖುಷಿ ಕಾಣೋದು’- ರಮೇಶ ನುಡಿ.

(ಕೃಷಿರಂಗ- ಸೆಪ್ಟಂಬರ್ 1, 2004)

ಸಾವಯವ ಕೃಷಿಯತ್ತ ಹೆಜ್ಜೆ ಹಾಕಬಯಸುವ ಕೃಷಿಕರಿಗೆ ಮಾರ್ಗದರ್ಶನ ನೀಡಲು ರಮೇಶ ಸದಾ ಸಿದ್ಧ. ಅವರ ದೂರವಾಣಿ ಸಂಖ್ಯೆ: 98455 29324.