ಕೃಷಿ‌ಋಷಿ ಫುಕುವೊಕಾಗೆ ನಮ್ಮ ಬೈಲುಕುಪ್ಪೆಯಲ್ಲಿ ಒಬ್ಬ ಶಿಷ್ಯನಿದ್ದಾನೆ. ದೋರ್ಜಿ ಟೇಸ್‌ತೇನ್. ಕೃಷಿ ವಿಜ್ಞಾನದಲ್ಲಿ ಎಂಎಸ್‌ಸಿ ಓದಿ, ಕಲಿತ ವಿದ್ಯೆಗೆ ತಿಲಾಂಜಲಿ ಕೊಟ್ಟು ಏಕಲವ್ಯನಂತೆ ಫುಕುವೊಕಾ ಪದ್ಧತಿಯನ್ನು ಅನುಸರಿಸಿದ ಇವರ ನೆಲವನ್ನೊಮ್ಮೆ ನೀವು ನೋಡಬೇಕು. ರಾಸಾಯನಿಕ ಅಸ್ತ್ರಗಳಿಂದ ಬಿಡುಗಡೆ ಪಡೆಯಲೆಂದು ಇವರು ರೂಪಿಸುವ ಬೀಜಗೋಲಿಗಳನ್ನು ನೋಡಬೇಕು…

ಬೈಲುಕುಪ್ಪೆಯಲ್ಲಿನ ಲಾಮಾ ಕ್ಯಾಂಪಿಗೆ ಹೋಗುವ ದಾರಿ ಮಧ್ಯದಲ್ಲಿ ಒಂದು ಅಪರೂಪದ ಪ್ರಯೋಗಾಲಯ ಕಾಣುತ್ತದೆ. ಹಾಗೆಂದು ಅಲ್ಲಿ ಹವಾನಿಯಂತ್ರಿತ ಕಟ್ಟಡ, ಗಾಜಿನ ಕೊಳವೆ, ಟೇಬಲ್ ಮೇಲೆ ಆಮ್ಲ-ಪ್ರತ್ಯಾಮ್ಲಗಳ ಬಾಟಲಿ ಕಾಣುವುದಿಲ್ಲ. ಅದೊಂದು ತೆರೆದ ಪ್ರಯೋಗಾಲಯ! ಕೃಷಿ‌ಋಷಿ ಫುಕುವೊಕಾ ಅವರ ಹೆಜ್ಜೆಯ ಹಾದಿಯನ್ನು ಅನುಕರಿಸುತ್ತ, ಅದನ್ನು ವಿಶ್ಲೇಷಣೆ ಮಾಡುತ್ತ, ದಾಖಲಿಸುತ್ತಿರುವ ದೋರ್ಜಿ ಟೇಸ್‌ತೇನ್ ಎಂಬ ರೈತನ ವಿಶಿಷ್ಟ ರೀತಿಯ ಆಲಯ ಅದು.

‘ಕೃಷಿಯಲ್ಲಿ ಇದನ್ನೇಕೆ ಮಾಡಬೇಕು? ಮಾಡದಿದ್ದರೆ ಹೇಗೆ?’ ಎಂದು ಹೊಸ ಹಾದಿಯಲ್ಲಿ ಪಯಣಿಸಿದ ಫುಕುವೊಕಾ ಎಂಬ ಕೃಷಿ‌ಋಷಿ, ಇಡೀ ಒಂದು ಪೀಳಿಗೆಯನ್ನೇ ಬೆರಗುಗೊಳಿಸಿದ. ಇನ್ನೊಬ್ಬರನ್ನು ಬದುಕಿಸಿ, ತನ್ನ ಜೀವನವನ್ನು ತುಸು-ತುಸುವೇ ಕಳೆದುಕೊಳ್ಳುವ ಕೃಷಿಕನಿಗಿಂತ ಈತನ ಹಾದಿ ಬಲು ವಿಭಿನ್ನ. ಯಾವುದನ್ನು ಬಿತ್ತಬೇಕು? ಎಷ್ಟು ಇಳುವರಿ ಬಂದೀತು? ಇಂಥ ಪ್ರಶ್ನೆಗಳ ಬದಲು, ಈ ಬಾರಿ ಉಳುಮೆ ಮಾಡದೇ ಬಿತ್ತಿದರೆ ಹೇಗೆ? ಗೊಬ್ಬರ ಹಾಕದೇ ಬಿಟ್ಟರೆ ಹೇಗೆ? ಕಳೆ ತೆಗೆಯದೇ ಇದ್ದರೆ ಹೇಗೆ? ಇಂಥ ಪ್ರಶ್ನೆಗಳನ್ನು ಕೇಳುತ್ತ ‘ಶೂನ್ಯ ಕೃಷಿ’ (ಡೂ ನಥಿಂಗ್ ಫಾರ್ಮ್) ಎಂಬ ಹೆಸರಿನ ಹೊಸ ಕೃಷಿ ಪದ್ಧತಿಯನ್ನು ಜಾರಿಗೆ ತಂದ. ಈಗ ಇದು ಜಗತ್ತಿನೆಲ್ಲೆಡೆ ಬಹು ಜನಪ್ರಿಯ. ಹಾಗೆಂದು ಸೋಮಾರಿತನಕ್ಕೆ ಇಲ್ಲಿ ಅವಕಾಶವಿಲ್ಲ. ಕನಿಷ್ಠ ಕೆಲಸ ಮಾಡಿ ಉಳಿದ್ದಿದನ್ನು ಪ್ರಕೃತಿಯ ವಿವೇಚನೆಗೆ ಬಿಟ್ಟುಬಿಡುವುದು. ‘ಈತನ ಹಾದಿಯಲ್ಲಿ ಹೊರಟಿರುವ ನನಗೆ ಈಗ ಹೊಸ ಸತ್ಯಗಳು ಗೋಚರಿಸುತ್ತಿವೆ’ ಎಂದು ಬೈಲುಕುಪ್ಪೆಯ ಬೆಟಿಯನ್ ಫಾರ್ಮ್ ಪ್ರಾಜೆಕ್ಟ್’ನ ದೋರ್ಜಿ ಟೇಸ್‌ತೇನ್ ಹೇಳುತ್ತಾರೆ.

ಟಿಬೆಟ್‌ನ ನಿರಾಶ್ರಿತರಿಗಾಗಿ ದೇಶದಲ್ಲಿ ಇರುವ 12 ಕೇಂದ್ರಗಳಲ್ಲಿ ಬೈಲುಕುಪ್ಪೆಯೂ ಒಂದು. ಇಲ್ಲಿರುವ ‘ಟಿಬೆಟಿಯನ್ ಫಾರ್ಮ್ ಪ್ರಾಜೆಕ್ಟ್’ ಕೃಷಿಗೆ ಸಂಬಂಧಿಸಿದ ಚಟುವಟಿಕೆಗಳ ತಾಣ.

ಎಂಎಸ್‌ಸಿ (ಕೃಷಿ) ಪದವಿ ಪಡೆದ ದೋರ್ಜಿ 1992ರಲ್ಲಿ ಈ ಕೇಂದ್ರಕ್ಕೆ ಬಂದರು. ಆರಂಭದಲ್ಲಿ ಅವರೂ ಆಧುನಿಕ ಕೃಷಿ ಮಾಡುತ್ತಿದ್ದರು. ಆಗ ಇಲ್ಲಿ ಬೆಳೆಯುತ್ತಿದ್ದುದು ಕೇವಲ ಮೆಕ್ಕೆಜೋಳ. ರಾಸಾಯನಿಕ ಸುರಿದು-ಸುರಿದೂ ನೆಲದ ಸತ್ವವೇ ಕಣ್ಮರೆಯಾಗಿತ್ತು. ಎಲ್ಲೋ ಏನೋ ತಪ್ಪಿದೆ ಎಂದು ದೋರ್ಜಿಗೆ ಅನಿಸಿತ್ತಾದರೂ ‘ಅದೇನು?’ ಎಂಬುದು ಗೊತ್ತಾಗಲೇ ಇಲ್ಲ.

ಒಮ್ಮೆ ಫುಕುವೊಕಾ ಅವರ ‘ಒಂದು ಹುಲ್ಲಿನ ಕ್ರಾಂತಿ’ ಪುಸ್ತಕ ಆಕಸ್ಮಿಕವಾಗಿ ಕಣ್ಣಿಗೆ ಬಿತ್ತು. ‘ಅದನ್ನು ಓದುತ್ತಲೇ ನನಗೆ ಎಲ್ಲ ಸಮಸ್ಯೆಗೆ ಪರಿಹಾರ ದೊರಕಿದಂತಾಯಿತು. ತಡ ಮಾಡಲಿಲ್ಲ. ಅವರ ಸಹಜ ಕೃಷಿ ಪದ್ಧತಿಯತ್ತ ಒಂದೊಂದೇ ಹೆಜ್ಜೆ ಹಾಕತೊಡಗಿದೆ. ಅತ್ಯಧಿಕ ಲಾಭ ಕಂಡಿಲ್ಲವಾದರೂ ಅದರಿಂದ ನನಗೆ ಕೃಷಿಯ ಅನೇಕ ಹೊಳಹುಗಳು ದೊರಕಿವೆ’ ಎನ್ನುತ್ತಾರೆ ದೋರ್ಜಿ.

ಕಳೆದ ಎರಡು-ಮೂರು ವರ್ಷದಿಂದ ಅವರು ರಾಸಾಯನಿಕಗಳ ಬಳಕೆಯನ್ನು ಸಂಪೂರ್ಣ ತ್ಯಜಿಸಿದ್ದು, ಯಾವುದೇ ಸಮಸ್ಯೆಯನ್ನು ನಿಸರ್ಗದ ವಿವೇಚನೆಗೇ ಬಿಡುವುದನ್ನು ರೂಢಿಸಿಕೊಂಡಿದ್ದಾರೆ. ‘ಸಹಜ ಕೃಷಿ ಅಳವಡಿಸಿರುವ ಎರಡು ಎಕರೆ ಕಾಡಿನಲ್ಲಿ ತೆಂಗಿನ ಮರಕ್ಕೆ ಕಳೆದ ವರ್ಷ ಕರಿಕಂಬಳಿ ಹುಳು ಹಾವಳಿ ಶುರುವಾಯಿತು. ಏನಾಗುತ್ತೋ ನೋಡೋಣ ಎಂದು ಸುಮ್ಮನೇ ಇದ್ದುಬಿಟ್ಟೆ. ನಾಲ್ಕಾರು ದಿನಗಳಲ್ಲೇ ದಾಳಿ ಇಟ್ಟವಲ್ಲ, ಕಾಗೆ ಮತ್ತಿತರ ಪಕ್ಷಿಗಳು! ಎಲ್ಲ ಹುಳುಗಳು ನಾಶ!! ನಿಸರ್ಗದ ಚಮತ್ಕಾರ ಇದೇ’ ದೋರ್ಜಿ ವಿಸ್ಮಯದಿಂದ ನುಡಿಯುತ್ತಾರೆ.

ಸುಮ್ಮನೇ ಭತ್ತದ ಬೀಜ ಎರಚಿ ಮೇಲೊಂದಿಷ್ಟು ಹುಲ್ಲು ಹೊದಿಸಿದರೆ, ಮುಗಿಯಿತು. ಕೊಯ್ಲು ಮಾಡುವುದಷ್ಟೇ ಉಳಿದ ಕೆಲಸ. ಇದು ಫುಕುವೊಕನ ಪದ್ಧತಿ. ಆದರೆ ಬೀಜ ಎರಚಿ ಹೋದ ಕೆಲ ಹೊತ್ತಿನಲ್ಲೇ ಪಕ್ಷಿಗಳು ಬಂದು ಎಲ್ಲ ತಿಂದುಹೋಗುತ್ತಿದ್ದವು. ಇದನ್ನು ತಪ್ಪಿಸಲು ಅವರು ರೂಪಿಸಿದ ವಿಧಾನವೇ ‘ಬೀಜಗೋಲಿ’ ರಚನೆ(ಬಾಕ್ಸ್ ನೋಡಿ).

ಮಳೆ ಬೀಳುವ ಒಂದು ವಾರಕ್ಕೂ ಮುನ್ನ ಇವುಗಳನ್ನು ಜಮೀನಿನಲ್ಲಿ ಎಸೆದು, ಮೇಲೆ ಹುಲ್ಲು ಹಾಸಿದರೆ ಮುಗಿಯಿತು. ಮಳೆ ಬಿದ್ದ ಒಂದೆರಡು ದಿನಗಳಲ್ಲೇ ಗೋಲಿಯ ಮೇಲ್ಭಾಗದಲ್ಲಿ ಮೊಳಕೆ ತಲೆಯೆತ್ತುತ್ತದೆ. ಈ ವಿಧಾನದಲ್ಲಿ ಶೇ 99ರಷ್ಟು ಫಲಿತಾಂಶ ನಿಶ್ಚಿತ ಎಂದು ದೋರ್ಜಿ ಭರವಸೆ ನೀಡುತ್ತಾರೆ. ಕಳೆದ ವರ್ಷ ಈ ಪದ್ಧತಿ ಅನುಸರಿಸಿ 5 ಗುಂಟೆ ಜಾಗದಲ್ಲಿ ಪ್ರಾಯೋಗಿಕವಾಗಿ ಭತ್ತ ಬೆಳೆದ ದೋರ್ಜಿಗೆ ಅಚ್ಚರಿ ಕಾದಿತ್ತು. ಮಳೆ ಅತ್ಯಂತ ಕಡಿಮೆ ಇದ್ದರೂ ಅಷ್ಟೇ ಸಣ್ಣ ಜಾಗದಲ್ಲಿ 120 ಕೆಜಿ ಭತ್ತ ಕೈಗೆ ಬಂದಿತ್ತು. ಇನ್ನೊಮ್ಮೆ ಮಳೆಯಾಗಿದ್ದರೆ 250 ಕೆಜಿಗೂ ಹೆಚ್ಚು ಇಳುವರಿ ಖಂಡಿತ ಬರುತ್ತಿತ್ತು ಎಂದು ಅವರು ಹೇಳುತ್ತಾರೆ.

‘ಇನ್ನೊಂದು ವಿಶೇಷವೆಂದರೆ ಸುತ್ತಮುತ್ತಲಿನ ಗದ್ದೆಗಳಲ್ಲಿ ಕಾಣುವ ರೋ,. ಕೀಟಬಾಧೆ ಇಲ್ಲಿಗೆ ಕಾಲಿಡಲೇ ಇಲ್ಲ. ಈ ಜಾಗದಲ್ಲಿ ನನ್ನೊಬ್ಬನ ಹೊರತಾಗಿ ಯಾರಿಗೂ ಪ್ರವೇಶವಿದ್ದಿಲ್ಲ. ಬೆಳೆದ ಅಲ್ಪ ಕಳೆಯನ್ನು ತೆಗದು ಅಲ್ಲಿಯೇ ಹಾಕಿದೆ. ಅದೇ ಉತ್ತಮ ಗೊಬ್ಬರವಾಯಿತು’ ಎಂದು ಅವರು ವಿವರಿಸುತ್ತಾರೆ.

ಬೈಲುಕುಪ್ಪೆಯ ನಿಸರ್ಗಕ್ಕೆ ಹೊಂದಿಕೆಯಾಗುವ ಬೆಳೆ ಯಾವುದು? ಎಂಬ ಬಗ್ಗೆ ಇವರು ನಡೆಸಿದ ಪ್ರಯೋಗವೂ ಕುತೂಹಲಕರ. 12 ವಿಧದ ಬೀಜಗಳನ್ನು ಬೆರೆಸಿ, ಬೀಜಗೋಲಿ ರಚಿಸಿ ಎರಚಿದಾಗ ಉತ್ತಮವಾಗಿ ಬೆಳೆಯುವ ಬೆಳೆಯನ್ನು ಪ್ರಕೃತಿಯೇ ತೋರಿಸಿದೆ. ಒಂದು ಎಕರೆ ಪ್ರದೇಶದಲ್ಲಿ ರಾಗಿ, ಜೋಳ, ಸೂರ್ಯಕಾಂತಿ, ಹರಿವೆ ಸೊಪ್ಪು ಸೇರಿದಂತೆ ಡಜನ್ ತರಹದ ವಿವಿಧ ಬೀಜಗಳನ್ನು ಈ ರೀತಿ ಬೆಳೆಸಿ ಉತ್ತಮ ಫಲಿತಾಂಶ ದಾಖಲಿಸಲಾಗಿದೆ.

‘ಆಧುನಿಕ ಕೃಷಿಯ ವಿಷವರ್ತುಲಕ್ಕೆ ಸಿಲುಕಿರುವ ರೈತರಿಗೆ ಸಹಜ ಕೃಷಿಯಿಂದ ಲಾಭವಾಗಬಹುದೇ?’ ಎಂದು ಪ್ರಶ್ನಿಸಿದಾಗ, ದೋರ್ಜಿ ಮೌನವಾದರು. ಒಂದೆರಡು ಕ್ಷಣದ ನಂತರ ನಿಧಾನವಾಗಿ ಹೇಳಿದರು: ‘ನೋಡಿ, ಈ ಪದ್ಧತಿಯಲ್ಲಿ ಲಾಭ, ನಷ್ಟದ ಪ್ರಶ್ನೆಯೇ ಇಲ್ಲ. ಪ್ರಕೃತಿ ನೀಡಿದ್ದನ್ನು ಮಾತ್ರ ನಾವು ನಮೃತೆಯಿಂದ ಸ್ವೀಕರಿಸಬೇಕು. ನಮ್ಮ ಮತ್ತು ನಿಸರ್ಗದ ನಡುವೆ ಆತ್ಮೀಯ ಸಂಬಂಧ ಏರ್ಪಟ್ಟಾಗ ಒಬ್ಬರಿಗೊಬ್ಬರ ಮೋಸ ಮಾಡಲು ಹೇಗೆ ಸಾಧ್ಯ? ನಾನು ನೆಲಕ್ಕೆ ಹಾನಿ ಮಾಡುವುದಿಲ್ಲ. ಅದೂ ನನಗೆ ನಷ್ಟ ಮಾಡುವುದಿಲ್ಲ. ಒಂದು ಕಾಳು ಭತ್ತ ಬಿತ್ತಿದರೆ, ಅದು ನೂರಾರು ಕಾಳು ಕೊಡುತ್ತದೆ. ಅಂದರೆ ಇಲ್ಲಿ ನಷ್ಟವಾದರೂ ಎಲ್ಲಿದೆ?’

ವಿಭಿನ್ನವಾದ ಹಾದಿಯಲ್ಲಿ ಹೊರಟಿರುವ ದೋರ್ಜಿ ಅವರ ಕೇಂದ್ರಕ್ಕೆ ಹೆಚ್ಚಿಗೆ ವಿದೇಶಿಯರು ಭೇಟಿ ನೀಡಿದ್ದಾರೆ. ಇವರ ಪ್ರಯೋಗದಿಂದ ಪ್ರಭಾವಿತರಾಗಿ ತಮ್ಮ ದೇಶದಲ್ಲೂ ಅಳವಡಿಸಿಕೊಂಡಿದ್ದಾರೆ. ಇದು ದೋರ್ಜಿಗೆ ಹೆಮ್ಮೆ ತಂದಿದೆ.

ಭಾರತದಲ್ಲಿ ಕೃಷಿ ವಾಣಿಜ್ಯೀಕರಣಗೊಂಡಿದೆ. ಈ ಬಲೆಯಲ್ಲಿ ಸಿಲುಕಿರುವ ರೈತ ಅದರಿಂದ ಹೊರಬರಲಾಗದೇ ಚಡಪಡಿಸುತ್ತಿದ್ದಾನೆ ಎಂದು ವಿಷಾದಿಸುವ ದೋರ್ಜಿ, ಇದಕ್ಕೆಲ್ಲ ಸಹಜ ಕೃಷಿಯೊಂದೇ ಪರಿಹಾರ ಎಂದು ಪ್ರತಿಪಾದಿಸುತ್ತಾರೆ.

‘ಕೃಷಿಯ ಮುಖ್ಯ ಉದ್ದೇಶ ಕೇವಲ ಇಳುವರಿ ತೆಗೆಯುವುದಷ್ಟೇ ಅಲ್ಲ; ಮಾನವತೆಯನ್ನು ಬೆಳೆಸುವುದು ಮತ್ತು ಉತ್ತಮಪಡಿಸಿಕೊಳ್ಳುವುದೇ ಆಗಿದೆ’ ಎಂಬ ಫುಕುವೊಕಾನ ಮಾತು ಉಲ್ಲೇಖನಾರ್ಹ. ಆದರೆ ಆಧುನಿಕ ಕೃಷಿಯೆಂಬ ಹುಲಿ ಸವಾರಿ ಮಾಡುತ್ತಿರುವ ಕೃಷಿಕ ತನ್ನ ಗಮನ ಇತ್ತ ಹರಿಸುವುದಾದರೂ ಎಂದು?

(ಕೃಷಿರಂಗ- ಎಪ್ರಿಲ್ 14, 2004)

ಬೀಜಗೋಲಿ ತಯಾರಿಕೆ ಹೇಗೆ?

ಇವುಗಳ ತಯಾರಿ ಅತಿಸುಲಭ; ಪ್ರಯೋಜನ ಮಾತ್ರ ಅಪಾರ

ಎಂಟರಿಂದ ಹತ್ತು ಪ್ರಮಾಣ ಜೇಡಿ ಮಣ್ಣನ್ನು ಒಂದು ಪ್ರಮಾಣದಷ್ಟು ಬೀಜದ ಜತೆ ಬೆರೆಸಬೇಕು.

ಇದಕ್ಕೆ ಬೇಕಿದರೆ ಮೂರು ಪ್ರಮಾಣದಷ್ಟು ಎರೆಗೊಬ್ಬರ ಮಿಶ್ರ ಮಾಡಿ.

ಸ್ವಲ್ಪ ನೀರನ್ನು ಹಾಕಿ ಚೆನ್ನಾಗಿ ಕಲಕಿ. ಚಿಕ್ಕ-ಚಿಕ್ಕ ಗೋಲಿಯಾಕಾರ ಮಾಡಿ ಒಣಗಿಸಿ.

ಚಿಕ್ಕ ಬೀಜಗಳಾಗಿದ್ದರೆ ಒಂದೇ ಗೋಲಿಯಲ್ಲಿ ಅನೇಕ ಬೀಜ ಬರಲಿಕ್ಕೂ ಸಾಧ್ಯ; ಬಂದರೆ ಚಿಂತೆಯಿಲ್ಲ.

ಇವುಗಳನ್ನು ಎಷ್ಟು ವರ್ಷ ಬೇಕಾದರೂ ಸಂಗ್ರಹಿಸಿ ಇಡಬಹುದು.