ನದಿಗಳು ವೇಗವಾಗಿ ಹರಿಯಲಿ, ಇಲ್ಲವೇ ಮೆಲ್ಲಗೆ ಹರಿಯಲಿ, ವಕ್ರವಾಗಿ ಹರಿಯಲಿ, ನೆಟ್ಟಗೆ ಹರಿಯಲಿ, ಅದಕ್ಕೆ ತಲೆಯಲ್ಲಿ ಒಂದೇ ಗುರಿ. ಸಮುದ್ರವನ್ನು ಸೇರುವುದು. ಕೆಲವು ನದಿಗಳು ನೂರಾರು ಕಿ.ಮೀ ದೂರದಲ್ಲಿಯೇ ಸಮುದ್ರವನ್ನು ಸೇರಬಹುದು. ಇನ್ನು ಕೆಲವು ಸಾವಿರಾರು ಕಿ.ಮೀ ದೂರ ಸಾಗಿ ಸಮುದ್ರವನ್ನು ಸೇರಬಹುದು. ನದಿಗಳ ಹುಟ್ಟುವಿಕೆಯಲ್ಲಿ, ಸ್ವಲ್ಪ ವ್ಯತ್ಯಾಸಗಳಾದರೂ ಏನೆಲ್ಲಾ ಪರಿಣಾಮಗಳಾಗುತ್ತವೆ. ನದಿ ಎಷ್ಟೊಂದು ಕಷ್ಟನಷ್ಟಗಳನ್ನು ಅನುಭವಿಸಬೇಕಾಗುತ್ತದೆ ಎಂಬುದಕ್ಕೆ ವರದಾನದಿ ಒಂದು ಉದಾಹರಣೆ.

ವರದಾ, ತನ್ನ ದಂಡೆಮೇಲೆ ವಾಸಿಸುವ ಲಕ್ಷಾಂತರ ಕುಟುಂಬಗಳಿಗೆ ಸಾಕ್ಷಾತ್ ವರದೇಯೇ ಆಗಿದ್ದಾಳೆ. ಕಾಳೀನದಿಯಂತೆ ವಿದ್ಯುತ್ ನ್ನ ನೀಡಿರಲಿಕ್ಕಿಲ್ಲ, ಶರಾವತಿಯಂತೆ ನೂರಾರು ಅಡಿ ಆಳಕ್ಕೆ ದುಮ್ಮಿಕ್ಕಿ ಜಲಪಾತವನ್ನು ಸೃಷ್ಠಿಮಾಡಿರಲಿಕ್ಕಿಲ್ಲ, ಅಘನಾಶಿವಿಯಂತೆ ಹಸಿರಾದ ಕಣಿವೆಯಲ್ಲಿ ಮೌನವಾಗಿ ಹರಿಯಲೂ ಇಲ್ಲ, ಪ್ರತಿಕ್ಷಣವೂ ತನ್ನ ಅಕ್ಕಪಕ್ಕ ವಾಸಿಸುವ ಜನಸಮೂಹವನ್ನು ಪ್ರೀತಿಯಿಂದ ಸಾಗುತ್ತಾ ಬಂದಿದ್ದಾಳೆ.

ಶಿವಮೊಗ್ಗ ಜಿಲ್ಲೆಯ ಸಾಗರದಿಂದ ೭ ಕಿ.ಮೀ ದೂರ ಇರುವ ಪುಟ್ಟ ಹಳ್ಳಿ ವರದಾ ಮೂಲ. ಪಶ್ಚಿಮ ಘಟ್ಟದ ಪರ್ವತಶ್ರೇಣಿ, ಎಲ್ಲೆಡೆ ಹಸಿರು ಗುಡ್ಡೆ, ಅಡಿಕೆ, ತೆಂಗು, ಬಾಳೆಯ ತೋಟಗಳು ಇವುಗಳ ಮಧ್ಯೆ ವರದೆಯ ಜನನ. ಸಣ್ಣಧಾರೆಯಾಗಿ ನಂತರ ತೋಟ, ಗದ್ದೆಗಳ ಮಧ್ಯೆ ೬ ಕಿ.ಮೀ ದೂರಸಾಗಿ ಜತಗೋಡ ಗ್ರಾಮದಲ್ಲಿ ನದಿಯ ರೂಪವನ್ನು ಪಡೆಯುತ್ತಾಳೆ.

ಪಶ್ಚಿಮ ಘಟ್ಟದಲ್ಲಿ ಜನಿಸುವ ವರದಾ ಕೇವಲ ನೂರು ಅಡಿ ಆಚೆ ಜನಿಸಿದ್ದರೆ, ಗುಡ್ಡ, ಬೆಟ್ಟ ಕಣಿವೆಗಳಲ್ಲಿ ಕೇವಲ ನೂರು ಕಿ.ಮೀ ದೂರ ಹರಿದು ಅರಬ್ಬಿ ಸಮುದ್ರವನ್ನು ಸೇರಿ ಆಯಾಗಿರುತ್ತಿದ್ದಳು. ಆದರೆ ಅವಳ ಜನ್ಮ ಹಾಗಾಗಲಿಲ್ಲ. ಒಂದು ನೂರು ಅಡಿ ಈ ಕಡೆ ಜನಿಸಿದ್ದರಿಂದ ವರದೆಗೆ ಗುಡ್ಡಬೆಟ್ಟಗಳ ಸಾಂಗತ್ಯವೇ ಇಲ್ಲ. ಬರೀ ಬಯಲು ಪ್ರದೇಶದಲ್ಲಿ ಹರಿಯುತ್ತಿತ್ತು. ಅನೇಕರು ಕುಟುಂಬಗಳಿಗೆ, ಉದ್ದಿಮೆಗಳಿಗೆ, ಜಮೀನುಗಳಿಗೆ ನೀರುಣಿಸುತ್ತಾ ಸಾವಿರಾರು ಕಿ.ಮೀ ದೂರ ಸಾಗಿ ಬಂಗಾಲ ಉಪಸಾಗರವನ್ನು ಸೇರುತ್ತಾಳೆ.

ನಮ್ಮ ಆಚಾರ, ವಿಚಾರ, ಸಂಸ್ಕೃತಿ, ನಾಗರಿಕತೆಗಳು ಬೆಳೆದಿರುವುದು ನದಿ ತೀರದಲ್ಲಿ. ಹಾಗೆಯೇ ವರದಾ ನದಿಯ ಅಕ್ಕಪಕ್ಕ ಕೂಡ ಅನೇಕ ವೈವಿಧ್ಯಮಯ ಬದುಕು ಇದೆ. ಕೃಷಿ ಇದೆ, ಜಾನಪದ ವೈಶಿಷ್ಠಗಳಿವೆ. ಪುಣ್ಯಕ್ಷೇತ್ರಗಳಿವೆ. ಇದರ ದಂಡೆಯ ಮೇಲೆಯೇ ಎರಡು ಸಾವಿರ ವರ್ಷಗಳ ಹಿಂದೆ ಕನ್ನಡಿಗರ ಪ್ರಥಮ ರಾಜಧಾನಿ ಬನವಾಸಿಯಲ್ಲಿ ಸ್ಥಾಪನೆಗೊಂಡಿತು. ಹಾಗೆಯೇ ಇಕ್ಕೇರಿ ಕೂಡ ಈ ನದಿಯ ಮೇಲಿದ್ದ ಇನ್ನೊಂದು ಸಾಮ್ರಾಜ್ಯ.

ಆಧ್ಯಾತ್ಮಿಕ ಸಾಧನೆ ಮಾಡಿದ, ಸಾಧುಗಳು,ಸಂತರೂ ಕೂಡ ಈ ನದಿಯ ಅಕ್ಕಪಕ್ಕ ವಾಸ ಮಾಡಿ ಮಾರ್ಗದರ್ಶನ ಮಾಡಿದರು, ಮಾಡುತ್ತಲೂ ಇದ್ದಾರೆ.

ಒಂದು ನದಿಯನ್ನು ಹೇಗೆ ನಂಬಿ ಬದುಕುತ್ತಿದ್ದಾರೆ ಎನ್ನುವುದಕ್ಕೆ ಇದರ ಅಕ್ಕಪಕ್ಕ ಇರುವ ಜನಸಾಂದ್ರತೆಯೇ ಸಾಕ್ಷಿ. ಉದಾಹರಣೆಗೆಉತ್ತರ ಕನ್ನಡ ಜಿಲ್ಲೆಯಲ್ಲಿ ಕೇವಲ ೬ ಕಿ.ಮೀ ಹರಿಯುವ ವರದಾಳ ಬದಿಯಲ್ಲಿ ೨೫ ಸಾವಿರಕ್ಕೂ ಹೆಚ್ಚೂ ಜನರು ಬದುಕನ್ನು ಕಟ್ಟಿಕೊಂಡಿದ್ದಾರೆ. ಅಂದರೆ ಈಕೆಯನ್ನು ಅವಲಂಬಿಸಿದ ಜನಸಮೂಹ ಎಷ್ಟು ಎಂದು ಊಹಿಸ ಬಹುದು. ವಿವಿದ ಜನಾಂಗಗಳು, ಪಂಗಡಗಳು, ಜಾತಿಗಳು ಅನ್ಯೋನ್ಯವಾಗಿ ಈ ನದಿ ದಡದಲ್ಲಿ ವಾಸಿಸುತ್ತಿದ್ದಾರೆ. ಇಲ್ಲಿಯ ಜನರ ಆರ್ಥಿಕ ಸ್ಥಿತಿಗತಿಗಳು ತುಂಬಾ ಬಲಿಷ್ಟವಾಗಿ ಏನು ಇಲ್ಲ. ವಿಶಾಲವಾದ ಬಯಲು ಪ್ರದೇಶವಾದ್ದರಿಂದ ಭತ್ತವೇ ಪ್ರದಾನ ಬೆಳೆ. ೬೨ ಜಾತಿಯ ಭತ್ತವನ್ನು ಇಲ್ಲಿ ಬೆಳೆಯಲಾಗುತ್ತದೆ. ನದಿ ಪ್ರವಾಹದಲ್ಲಿ ೩೦ದಿನಗಳ ವರೆಗೂ ಕೊಳೆಯದೇ,ಹಾಳಾಗದೇ ಎಂದಿನಂತೆ ಪಸಲನ್ನು ನೀಡುವ ಭತ್ತದ ತಳಿ ಇರುವುದು ಈ ನದಿಯ ಅಕ್ಕಪಕ್ಕವೇ. ಭತ್ತವೇ ಪ್ರಧಾನ ಬೆಳೆಯಾದ್ದರಿಂದ ಅದಕ್ಕೆ ಪೂರಕವಾದ ಉದ್ದಿಮೆಗಳೇ ಇಲ್ಲಿವೆ. ನದಿಗೆ ಎಲ್ಲಿಯೂ ಆಣೆಕಟ್ಟುಗಳು ಇಲ್ಲದಿರುವುದು ವಿಶೇಷ. ಆದರೆ ವಿದ್ಯುತ್ ಚಾಲಿತ ಯಂತ್ರದಿಂದ ನೀರನ್ನು ಎತ್ತಿ ಬೆಳೆ ತೆಗೆಯುವುದು ಹೆಚ್ಚಿದೆ.ಸರಾಸರಿ ಒಂದು ಕಿ.ಮೀ ದೂರಕ್ಕೆ ೧೦ ಪಂಪುಗಳು ನೀರೆತ್ತುತ್ತವೆ. ಆರ್ಥಿಕ ಬೆಳೆಗಳೂ ಕಳೆದ ೨೦ ವರ್ಷಗಳ ಈಚೆಗೆ ನದಿಗುಂಟ ಹೆಚ್ಚಾಗಿದೆ. ಅಡಿಕೆ, ತೆಂಗು,ಬಾಳೆ, ಅನಾನಸ್, ಪಪ್ಪಾಯಿ ಇತ್ಯಾದಿ.

ಇದಲ್ಲದೇ ಇಲ್ಲಿ ಬೆಳೆಯುವ ಬೆಳೆಗಳು ಆಶ್ಚರ್ಯ ಮೂಡಿಸುವಷ್ಟಿದೆ. ಒಂದು ನದಿಯ ಅಕ್ಕಪಕ್ಕ ಇಷ್ಟೆಲ್ಲ ಬೆಳೆಗಳನ್ನು ತೆಗೆಯುವ ಉದಾಹರಣೆ ನಮಗೆ ಬೇರೆಲ್ಲೂ ಸಿಗಲಿಕ್ಕಿಲ್ಲ. ಹತ್ತಿ, ಶೇಂಗಾ, ಶುಂಠಿ, ಕಬ್ಬು, ಕಲ್ಲಂಗಡಿ, ಮೆಣಸಿನಕಾಯಿ, ತರಕಾರಿ, ಇವೆಲ್ಲವೂ ರೈತರಿಗೆ ಆದಾಯವನ್ನು ನೀಡುತ್ತಿವೆ.

ವೈವಿಧ್ಯಮಯ ಕೃಷಿಯಂತೆ ನದಿ ಅಕ್ಕಪಕ್ಕ ಆಚರಿಸುವ ಹಬ್ಬಗಳು ಕೂಡ ಅಷ್ಟೇ ಕುತೂಹಲಕರ. ಇಲ್ಲಿ ನಡೆಯುವ ಜಾತ್ರೆಗಳು ರುದ್ರ ರಮಣೀಯ. ಮೂಡನಂಬಿಕೆಗಳು,ಆಚರಣೆಗಳು ಹೇರಳವಾಗಿ ತುಂಬಿವೆ. ಜಾನಪದ ಕಲೆ ಕೂಡ ಅಷ್ಟೇ ಶ್ರೀಮಂತ. ಡೊಳ್ಳು, ಕೋಲಾಟ, ಹಲಗೆ ಮೇಳ, ಕುದುರೆ ಕುಣಿತ, ಗೀಗೀಪದ, ಬಯಲಾಟ, ಜೋಗಿಕಥೆ, ಭಜನೆ ಹೀಗೆ ಇವೆಲ್ಲವೂ ಇಂದಿಗೂ ಉಳಿದು ಕೊಂಡು ಬಂದಿವೆ.

ಇಲ್ಲಿಯ ಬದುಕು, ಆರ್ಥಿಕ ಸ್ಥಿತಿಗತಿಗಳು ತುಂಬಾ ಉತ್ತಮವಾಗಿಲ್ಲದಿದ್ದರೂ ಜನರು ನೆಮ್ಮದಿಯಲ್ಲಿ ಇದ್ದಾರೆ. ಆರ್ಥಿಕ ವಿಪಲತೆಯ ಮಧ್ಯೆಯೇ ಅನೇಕ ಕಲೆ, ಸಾಹಿತ್ಯ, ಜಾನಪದ ಸಂಸ್ಕೃತಿಗಳು ಜನ್ಮತಾಳಿ ಮುಂದುವರಿದಿದೆ.

ಗ್ರಾಮೀಣ ಬದುಕು ಈಗಲೂ ಶ್ರೀಮಂತ, ಪರಸ್ಪರ ಸಹಕಾರವಿದೆ. ಆಧುನಿಕತೆ ಕಾಲಿಟ್ಟರೂ ಪರಂಪರೆಗಳೂ ಉಳಿದುಕೊಂಡಿವೆ. ಏನೇ ಸಮಸ್ಯೆಗಳು ಇದ್ದರೂ, ಅವು ಹಳ್ಳಿಗಳಲ್ಲಿಯೇ ಬಗೆಹರಿಯುವ, ನ್ಯಾಯ ನೀಡುವ ವ್ಯವಸ್ಥೆ ಇನ್ನೂ ಜೀವಂತವಾಗಿದೆ. ಹಾಗೆಯೇ ಪರಸ್ಪರ ಅವಲಂಬಿತ ಜೀವನ ಪದ್ದತಿಯೂ ಇದೆ. ಎಲ್ಲರಿಗೂ ಪಾಲನ್ನ ನೀಡಿ ಬದುಕುವ ಪರಂಪರೆ ಉಳಿದು ಕೊಂಡಿದ್ದರೇ ಅದು ಈ ನದಿಯ ದಡದ ಮೇಲೆ ಮಾತ್ರವೇನೋ?.

ವರದಾ ನದಿಗೆ ಮಳೆಗಾಲದಲ್ಲಿ ಮಹಾಪೂರ ಉಂಟಾಗುತ್ತದೆ. ಆಗ ಅನೇಕ ಹಳ್ಳಿಗಳು ನೀರಿನಿಂದ ಸುತ್ತುವರೆಯುತ್ತವೆ. ಆದರೂ ನದಿಯನ್ನ ಬಿಟ್ಟು ಬದುಕಲು ಹಳ್ಳಿಯ ಜನ ಇಷ್ಟಪಡುವುದಿಲ್ಲ. ಮೊಗಳ್ಳಿ ಎಂಬ ಗ್ರಾಮ ಇಡೀ ಗ್ರಾಮವೇ ನೀರಿನಿಂದ ಸುತ್ತುವರೆಯಲ್ಪಟ್ಟರೂ ಆ ಜನರನ್ನು ಸ್ಥಳಾಂತರಿಸಲೂ ಸಾಧ್ಯವಾಗಿಲ್ಲ. ನದಿಯ ನಂಟೇ ಹೀಗೆ. ಎಲ್ಲ ಸಂಪರ್ಕದಿಂದ ದೂರ ಇದ್ದರೂ ಸರಿ ನದಿಯನ್ನು ಬಿಟ್ಟು ಬದುಕಲು ಇಷ್ಟಪಡುವುದಿಲ್ಲ.

ನದಿ ಅಕ್ಕಪಕ್ಕ ಹಿಂದೆ ದಟ್ಟವಾದ ಕಾಡು ಇತ್ತು. ಅನೇಕ ಪ್ರಾಣಿ, ಪಕ್ಷಿ ಸಂಕುಲಗಳು ಇದರಲ್ಲಿ ಆಶ್ರಯ ಪಡೆದಿದ್ದವು. ನದಿದಡದ ಮಾವು ಹೆಸರುವಾಸಿಯಾಗಿತ್ತು. ಇಂದು ಕಾಡು ಸಂಪೂರ್ಣ ನಾಶ ಹೊಂದಿದೆ. ಪ್ರಾಣಿಗಳ ಸಂತತಿ ನಾಶ ವಾಗಿದೆ. ಮಾವು ಅಪರೂಪವಾಗಿದೆ.

ನದಿಗಳು ತುಂಬಾ ಸೂಕ್ಷ್ಮ. ಅವು ಚಿಕ್ಕ ಆಘಾತವನ್ನು ಸಹಿಸಲಾರವು. ಹಾಗೇನಾದರೂ ಆದರೆ ಅವುಗಳ ಪರಿಣಾಮ ತುಂಬಾ ಉಗ್ರವಾಗಿಯೇ ಇರುತ್ತದೆ. ಮನುಷ್ಯರಲ್ಲಿ ಆಧುನಿಕತೆ ಅಭಿವೃದ್ದಿಯ ಚಿಂತನೆಗಳು ಸ್ವಾತಂತ್ರ್ಯನಂತರ ಬೆಳೆದು ಬಂತು. ಈ ನೆಲಕ್ಕೆ ೧೯೭೩ ರಲ್ಲಿ ಅನಾನಸ್ ಬೆಳೆ ಬಂತು. ಅದು ಹೇರಳವಾಗಿ ಹಣವನ್ನು ತಂದಿತು. ನಂತರ ಇಲ್ಲಿಯ ಕಾಡು, ನೆಲವನ್ನು ವಿನಾಶ ದತ್ತ ತೆಗೆದುಕೊಂಡು ಹೋಯಿತು. ರಾಸಾಯನಿಕ ಗೊಬ್ಬರ, ಕೀಟನಾಶಕ ಬಳಕೆ ಮಿತಿಮೀರಿತು. ಅದರ ಪರಿಣಾಮ ನದಿಯ ಮೇಲೆ ಸ್ವಾಭಾವಿಕವಾಗಿಯೇ ಆಯಿತು.

ಕಡು ಬೇಸಿಗೆಯಲ್ಲೂ ಸಮೃದ್ಧವಾಗಿ ಹರಿಯುತ್ತಿದ್ದ ವರದಾ ಕ್ರಮೇಣ ಸೊರಗುತ್ತಾ ಬಂತು. ನದಿಯ ದಿಕ್ಕು ಬದಲಾವಣೆಯಾಯಿತು. ಅದರ ಒಡಲಲ್ಲಿ ಇದ್ದ ಜೀವರಾಶಿ ಗಳು ಶಾಶ್ವತವಾಗಿ ನಾಶಗೊಂಡವು. ಅಕ್ಕಪಕ್ಕದ ಗ್ರಾಮಗಳು ನೀರಿನ ಅಭಾವದಿಂದ ತತ್ತರಿಸಲಾರಂಬಿಸಿದವು.ಸರಕಾರ ಕೋಟ್ಯಾಂತರ ರೂಗಳನ್ನು ನೀರಿಗಾಗಿ ವೆಚ್ಚಮಾಡಿದರೂ ನೀರು ದೂರವೇ ಉಳಿಯಿತು. ಪರಂಪರಾಗತ ಬಾವಿಗಳು ನೀರನ್ನು ಕಳೆದುಕೊಂಡವು. ನದಿಗೆ ಅಂತರ ಜಲ ಪೂರೈಸುತ್ತಿದ್ದ ನೂರಾರು ಕೆರೆಗಳು ಹೂಳಿನಿಂದ ತುಂಬಿಕೊಂಡವು.

ಇದರಿಂದ ಆರ್ಥಿಕ ಬೆಳೆಗಳು ನೆಲಕಚ್ಚುತ್ತಿದ್ದರೆ, ಅನೇಕ ಜಾತಿಯ ಭತ್ತಗಲು ಕಣ್ಮರೆಯಾದವು. ಅತ್ಯಂತ ಸಮೃದ್ದವಾಗಿದ್ದ ಗೋ ಸಂಪತ್ತು ಇನ್ನಿಲ್ಲವಾಗಿವೆ. ಇದರಿಂದ ಸಹಜವಾಗಿಯೇ ರೈತರು ಕಷ್ಟಕ್ಕೆ ನೂಕಲ್ಪಟ್ಟಿದ್ದಾರೆ. ನಿರಂತರ ಬೆಳೆ ಹಾನಿ, ಅನೇಕ ರೋಗಗಳು, ಕುಡಿಯುವ ನೀರಿನ ಸಮಸ್ಯೆ, ಇವೆಲ್ಲವೂ ಈಗ ನದಿ ಅಕ್ಕಪಕ್ಕದ ಸಾಮಾನ್ಯ ಸಂಗತಿಗಳಾಗಿವೆ.

ಸಾವಿರಾರು ವರ್ಷಗಳಿಂದ ಹರಿಯುತ್ತಾ ತನ್ನ ದಂಡೆ ಮೇಲೆ ಲಕ್ಷಾಂತರ ಕುಟುಂಬಗಳಿಗೆ ಆಶ್ರಯ ನೀಡುತ್ತಾ ಸಾಮ್ರಾಜ್ಯಗಳಿಗೆ ಜನ್ಮ ನೀಡಿ, ಸಂಸ್ಕೃತಿ ಪರಂಪರೆಯನ್ನು ಹುಟ್ಟುಹಾಕಿ ಆಸಕ್ತರಿಗೆ ಪುಣ್ಯನದಿಯಾಗಿ, ರೈತ ಸಮೂಹಕ್ಕೆ ಕಾಮದೇನುವಾಗಿ ಹರಿದ ವರದಾ ನದಿಯ ಮೇಲೆ ನಿತ್ಯ ಆಕ್ರಮಣಗಳಾಗಿವೆ. ಇದರಿಂದ ಅವಳು ಕಣ್ಮರೆಯಾಗುತ್ತಾ ಸಾಗಿದ್ದಾಳೆ.

ಅವಳನ್ನ ಈ ನೆಲದಲ್ಲಿ ಉಳಿಸಿಕೊಳ್ಳುವ ಕಾರ್ಯವಾಗಬೇಕು. ಅದು ಮುಂದಿನ ಜನಾಂಗಕ್ಕೆ ಅವಶ್ಯಕೂಡ. ಅದರ ಮಾಲೀಕ ಒಂದು ನಾಗರೀಕತೆ ನಶಿಸದಂತೆ ಎಚ್ಚರವನ್ನು ವಹಿಸಬೇಕಾಗಿದೆ. ಇವೆಲ್ಲವು ಪ್ರಾಮಾಣಿಕ ಪ್ರಯತ್ನಗಳಿಂದ ಮಾತ್ರ ಸಾಧ್ಯ.