ಬೆಂಗಳೂರು ಸಮೀಪದ ನೆಲಮಂಗಲ ಬಳಿಯ ಮರಸರಹಳ್ಳಿಯಲ್ಲಿನ ಜಯರಾಮ ಅವರ ತೋಟ ಒಂದು ವಿಶ್ವವಿದ್ಯಾಲಯ ಇದ್ದಂತೆ. ಸುಸ್ಥಿರ ಕೃಷಿಗೆ ಬೇಕಾದ ಎಲ್ಲ ಮಾಹಿತಿ ಇಲ್ಲಿ ಲಭ್ಯ. ಒಣಭೂಮಿಯನ್ನು ಇವರು ಕೇವಲ ನಾಲ್ಕು ವರ್ಷಗಳಲ್ಲಿ ಹಸಿರು ಸಿರಿಯನ್ನಾಗಿ ರೂಪಿಸಿದ ಪರಿ ಅನನ್ಯ.

‘ಕೇವಲ ನಾಲ್ಕು ವರ್ಷಗಳ ಹಿಂದೆ ಇಲ್ಲಿ ಬಂದು ನೋಡಿದರೆ ಭಣಭಣ ಒಣಭೂಮಿ. ಆದರೆ ಅದೇ ಇಂದು ನಂದನವನದಂತೆ ಸಮೃದ್ಧವಾಗಿ ಬೆಳೆದಿದೆ. ಇದರ ಹಿಂದೆ ಇರುವ ಶ್ರಮ ಅಪಾರ ವಾದರೂ ಸಾಮಾನ್ಯ ರೈತನೂ ಇದನ್ನು ಮಾಡಬಹುದು. ಅದನ್ನು ನಿರೂಪಿಸಲೆಂದೇ ನಾನು ಹಠ ಹಿಡಿದು ಈ ತೋಟ ಕಟ್ಟಿದೆ…’

– ಎಚ್.ಆರ್. ಜಯರಾಮ್ ಈ ಮಾತನ್ನು ಹೇಳುತ್ತಿದ್ದರೆ ಅವರ ಬಗ್ಗೆ ಬಹುತೇಕರಿಗೆ ನಂಬಿಕೆ ಕೂಡ ಬರುವುದಿಲ್ಲ; ಆದರೆ ಅದಕ್ಕೆ ತಕ್ಕಂತೆ ಎಲ್ಲ ದಾಖಲೆಗಳನ್ನು ಇಟ್ಟಿದ್ದಾರೆ. ಅದು ಅವರಿಗೆ ರೂಢಿ. ಏಕೆಂದರೆ ಜಯರಾಮ ವೃತ್ತಿಯಿಂದ ವಕೀಲರು!

ನೆಲಮಂಗಲ ಬಳಿಯ ಮರಸರಹಳ್ಳಿಯಲ್ಲಿನ ಅವರ 20 ಎಕರೆಯ ತೋಟ ಒಂದು ವಿಶ್ವವಿದ್ಯಾಲಯವಿದ್ದಂತೆ. ಸುಸ್ಥಿರ ಕೃಷಿಯಿಂದ ಹಿಡಿದು ಜಲಮರುಪೂರಣ, ಗೊಬ್ಬರ ತಯಾರಿಕೆ ಸೇರಿದಂತೆ ಎಲ್ಲವೂ ಇಲ್ಲಿದೆ.

ಮೂಲತಃ ಕೃಷಿ ಕುಟುಂಬದಿಂದ ಬಂದ ಜಯರಾಮ್ ಅವರಿಗೆ ಮಾದರಿ ತೋಟ ಮಾಡುವ ಕನಸಿತ್ತು. ರಾಜ್ಯದ ವಿವಿಧ ಸಾವಯವ ತೋಟಗಳಿಗೆ ಭೇಟಿ ಕೊಟ್ಟು, ಮಾಹಿತಿ ಸಂಗ್ರಹಿಸಿ ವ್ಯವಸ್ಥಿತ ಯೋಜನೆಯಂತೆ 1999ರಲ್ಲಿ ಈ ಜಮೀನು ಖರೀದಿಸಿದರು. ಆಗ ಕೆಲವು ನೀಲಗಿರಿ ಮರಗಳನ್ನು ಬಿಟ್ಟರೆ ಬೇರೆ ಗಿಡಗಳೇ ಇಲ್ಲಿ ಇರಲಿಲ್ಲ. ಕೃಷಿಗೆ ಯೋಗ್ಯವಾಗುವಂಥ ಅನೇಕ ಕೆಲಸಗಳನ್ನು ಆರಂಭಿಸಿದ ಅವರು ಮೊದಲು ಆದ್ಯತೆ ಕೊಟ್ಟಿದ್ದು ನೀರಿಗೆ.

‘ಬಿದ್ದ ಮಳೆಯ ಹನಿ ನೀರು ಕೂಡ ಜಮೀನಿನ ಆಚೆ ಹೋಗಬಾರದು’ ಇದು ಜಯರಾಮ್ ಅವರ ಧ್ಯೇಯ. ಇದಕ್ಕಾಗಿ ನೀರು ಸಂಗ್ರಹಣೆ ಕ್ರಮಗಳ ಅನುಷ್ಠಾನ. ನೀರಿನ ಸೌಲಭ್ಯಕ್ಕೆಂದೇ ಕೊರೆಸಿದ ನಾಲ್ಕು ಕೊಳವೆಬಾವಿಗಳಲ್ಲಿ ಉತ್ತಮ ಪ್ರಮಾಣದಲ್ಲಿ ನೀರು ದೊರಕಿತ್ತು. ಆದರೆ, ಅಂತರ್ಜಲ ಬ್ಯಾಂಕಿನಲ್ಲಿನ ಹಣದಂತೆ ಎಂದೇ ಭಾವಿಸುವ ಅವರು, ಮಳೆನೀರನ್ನು ಸಂಗ್ರಹಿಸಲು ವ್ಯಾಪಕ  ಯೋಜನೆಯನ್ನೇ ಕೈಗೊಂಡರು.

ಗಿಡ-ಮರಗಳನ್ನೇ ಹೆಚ್ಚಾಗಿ ಬೆಳೆಸಿ, ಇದನ್ನೊಂದು ‘ಕಾಡು’ ಎಂಬಂತೆ ರೂಪಿಸಲು ಇಚ್ಛಿಸಿದ್ದರಿಂದ ಪ್ರತಿ ಸಸಿಗಳ ಸಾಲಿನಲ್ಲೂ ಅಕ್ಕ-ಪಕ್ಕ ಬದು-ಗುಂಡಿಗಳನ್ನು ನಿರ್ಮಿಸಿದ್ದಾರೆ. ಓಡುವ ಮಳೆನೀರನ್ನು ತಡೆದು, ಹೆಚ್ಚಾಗಿ ಹರಿಯುವ ನೀರು ಸೇರುವುದು- ಜಮೀನಿನ ಕೊನೆಯಲ್ಲಿರುವ ಚೆಕ್ ಡ್ಯಾಂ ಬಳಿಗೆ. ಸುತ್ತಮುತ್ತಲ ಪ್ರದೇಶದ ನೀರು ಇಲ್ಲಿಗೆ ಬರುವುದರಿಂದ ವಿಶಾಲ ಕೆರೆಯೇ ರೂಪುಗೊಂಡಿದೆ.

ಬಹುಮಹಡಿ ಕೃಷಿ ಪದ್ಧತಿ

ಇಡೀ ಜಮೀನನ್ನು ಹಲವು ವಿಭಾಗಗಳಾಗಿ ವಿಂಗಡಿಸಲಾಗಿದ್ದು, ತಗ್ಗು ಪ್ರದೇಶದಲ್ಲಿ ಅಡಿಕೆ, ತೆಂಗು, ಬಾಳೆ, ಬೇವು, ಹಲಸು, ಸಪೋಟ, ಕೋಕಾ, ಸೈಪ್ರಸ್, ಮೆಣಸು, ತೇಗ, ಬೀಟೆ ಹೀಗೆ ವಿವಿಧ ಜಾತಿಯ ಗಿಡ ಬೆಳೆಸಲಾಗಿದೆ. ಅಂತರಬೆಳೆಯಾಗಿ ವೆನಿಲ್ಲಾ ಇದೆ.

ಎತ್ತರದ ಭಾಗದಲ್ಲಿ ಬಹುಮಹಡಿ ಕೃಷಿ ಪದ್ಧತಿಯಲ್ಲಿ ಮಾವು, ಹೊಂಗೆ, ನಿಂಬೆ, ನೆಲ್ಲಿ, ಸಾಫನ್, ದಾಲ್ಚಿನ್ನಿ, ನುಗ್ಗೆ ಗಿಡಗಳಿವೆ. ಒಂದೆರಡು ವರ್ಷ ಇವುಗಳಿಗೆ ನೀರು ನೀಡಿದರೆ ಮುಂದೆ ಅದರ ಸಮಸ್ಯೆಯೇ ಇಲ್ಲ ಎನ್ನುವುದು ಇವುಗಳ ‘ಪ್ಲಸ್ ಪಾಯಿಂಟ್’.

ಮಳೆಗಾಲದಲ್ಲಿ ಕೆರೆಯಲ್ಲಿ ಸಂಗ್ರಹವಾಗುವ ನೀರು ಡಿಸೆಂಬರ್‌ವರೆಗೆ ಸಾಕಾಗುವುದರಿಂದ ಕೊಳವೆಬಾವಿ ಬಳಕೆಯೂ ಅತ್ಯಲ್ಪ.

‘ಈ ಮಣ್ಣು ನೋಡಿ. ಎಷ್ಟು ತೇವವಿದೆ!’ ಎನ್ನುತ್ತ ಜಯರಾಮ್ ಒಂದು ಹಿಡಿ ಮಣ್ಣು ಕೊಟ್ಟು ಹೇಳಿದರು: ‘ಇದಕ್ಕೆ ನೀರು ಹರಿಸಿ ನಾಲ್ಕೈದು ದಿನವಾಯಿತು’. ಅಚ್ಚರಿ ಎಂದರೆ, ಆಗ ತಾನೇ ನೀರು ಹರಿಸಿದಂತಿತ್ತು! ‘ಇದಕ್ಕೆ ಕಾರಣ ಮಲ್ಚಿಂಗ್(ಮುಚ್ಚಿಗೆ)’ ಎಂದು ಅವರು ಹೇಳುತ್ತಾರೆ. ಕಳೆ ಎಂದರೇನೇ ನಮ್ಮ ರೈತರು ದೂರ್ವಾಸ ಮುನಿಗಳಾಗುತ್ತಾರೆ. ‘ಆದರೆ ಕಳೆ ನನ್ನ ಆತ್ಮೀಯ ಮಿತ್ರ. ನೀರು ಹಿಡಿದಿಡುವುದು, ಮಣ್ಣು ಸವಕಳಿ ತಡೆಗಟ್ಟಿ ಫಲವತ್ತತೆ ಹೆಚ್ಚಿಸುವುದು ಈ ಮಿತ್ರನ ಕೆಲಸ’ ಎಂದು ವಿವರಿಸುತ್ತಾರೆ. ಪ್ರತಿ ಗಿಡದ ಬುಡದಲ್ಲಿನ ಪಾತಿಗಳಲ್ಲಿ ಕಳೆಯ ಹೊದಿಕೆ ಹಾಕಲಾಗುತ್ತದೆ; ಮುಂದಿನ ವರ್ಷಕ್ಕೆ ಅದು ಕಳಿತು ಫಲವತ್ತಾದ ಗೊಬ್ಬರವಾಗುತ್ತದೆ.

ಇನ್ನು ಅಗತ್ಯವೆನಿಸಿದ ಗೊಬ್ಬರವನ್ನು ತೋಟದಲ್ಲೇ ತಯಾರಿಸಲಾಗುತ್ತದೆ. ತರಗೆಲೆ, ಸೊಪ್ಪು, ಹುಲ್ಲು, ಕಳೆಗಿಡ ಸೇರಿದಂತೆ ತೋಟದ ತ್ಯಾಜ್ಯ ಬಳಸಿ, ಸುಮಾರು ಹತ್ತು ಗುಂಡಿಗಳಲ್ಲಿ ಹಾಕಿ, ಎರೆಗೊಬ್ಬರ ತಯಾರು ಮಾಡುತ್ತಾರೆ. ಇದರಿಂದ ಪ್ರತಿ ತಿಂಗಳೂ ಸರಾಸರಿ ಆರೇಳು ಕ್ವಿಂಟಲ್ ಎರೆಗೊಬ್ಬರ ಲಭ್ಯವಾಗುತ್ತಿದೆ. ಗೊಬ್ಬರ ಗುಂಡಿಗಳಿಂದ ಹೊರಬರುವ ದ್ರಾವಣವನ್ನು ಬೆಳವಣಿಗೆ ಪ್ರಚೋದಕಕ್ಕೆ ಬಳಸುತ್ತಾರೆ.

ಪುಷ್ಪಕೃಷಿ ಅಚ್ಚರಿ!

‘ಪುಷ್ಪಕೃಷಿ ಎಂದರೆ ಅತಿ ವೆಚ್ಚದಾಯಕ’ ಎಂದೇ ಎಲ್ಲರ ಭಾವನೆ. ಆದರೆ ಅದನ್ನು ಸಂಪೂರ್ಣ ಸುಳ್ಳಾಗಿಸಿದ್ದು ಜಯರಾಮ ಅವರ ಸಾಧನೆ. ಪಾಲಿಹೌಸ್‌ನಲ್ಲಿ ವೈವಿಧ್ಯಮಯ, ಅಲಂಕಾರಿಕ ಗಿಡ ಬೆಳೆದು ಆದಾಯ ಪಡೆಯುತ್ತಿರುವ ಅವರು, ಈ ಕೃಷಿಯಲ್ಲಿ ರಾಸಾಯನಿಕ ಬಳಸುತ್ತಿಲ್ಲ. ಇಲ್ಲಿ ಬೆಳೆಯುತ್ತಿರುವ ಬ್ಲಾಕ್ ಕಾರ್ಡಿನೆಲ್, ಕಾರ್ನೇಶನ್, ಲಿಯಾಟ್ರಸ್, ಮಯೂರಿ, ಗ್ಲಾಡಿಯೋಲಸ್, ಬರ್ಡ್ ಆಫ್ ಪ್ಯಾರಡೈಸ್, ಡಚ್ ಪ್ಲಾಂಟ್ಸ್‌ನ ಹೂಗಳಿಗೆ ಹೊರರಾಜ್ಯಗಳಲ್ಲಿ ಭಾರಿ ಬೇಡಿಕೆ. ‘ಇಲ್ಲಿ ಕೇವಲ ಬೇವಿನ ಎಣ್ಣೆ- ಅದೂ ಅಲ್ಪ ಪ್ರಮಾಣದಲ್ಲಿ ನೀಡುತ್ತೇನೆ. ಬೇರೆಡೆ ತಿಂಗಳಿಗೆ ಕನಿಷ್ಠ ಆರೇಳು ಸಾವಿರ ರೂಪಾಯಿ ರಾಸಾಯನಿಕಗಳಿಗೆಂದೇ ವೆಚ್ಚ ಮಾಡುತ್ತಾರೆ. ಇಲ್ಲಿ ನನಗೆ ಅದಿಷ್ಟೂ ಉಳಿತಾಯ’ ಎನ್ನುತ್ತಾರೆ ಅವರು. ಸದ್ಯ ತೋಟದ ವೆಚ್ಚವನ್ನು ಇದರಿಂದಲೇ ಭರಿಸಲಾಗುತ್ತಿದೆ. ಉಳಿದಂತೆ ತೆಂಗು, ಬಾಳೆ, ಸಪೋಟಾ ಗಿಡಗಳೂ ಮುಂದಿನ ವರ್ಷದಿಂದ ಫಲ ನೀಡಲಿವೆ. ಹೆಚ್ಚು ಖರ್ಚೇ ಇಲ್ಲದರಿಂದ, ಬರುವ ಆದಾಯದ ಬಹುಪಾಲು ಲಾಭವೇ!

ಶೂನ್ಯ ಕೃಷಿ ಉದ್ದೇಶ

ಇಡೀ ಜಮೀನನ್ನು ಶೂನ್ಯ ಕೃಷಿಗೆ ಅಳವಡಿಸುವುದು ಜಯರಾಮ ಅವರ ಉದ್ದೇಶ. ಒಂದು ತುಂಡು ಜಾಗವನ್ನೂ ವ್ಯರ್ಥ ಮಾಡದೇ ಮಲೆನಾಡನ್ನು ಸೃಷ್ಟಿಸಿದ ಅವರು ಹೇಳುತ್ತಾರೆ: ‘ಇದೇನೂ ಯಾರೂ ಮಾಡದ ಸಾಧನೆಯಲ್ಲ. ರೈತ ಕುಟುಂಬ ಒಟ್ಟಾಗಿ ದೃಢ ಮನಸ್ಸು ಮಾಡಿದರೆ, ಎಲ್ಲವೂ ಸಾಧ್ಯ. ನೀರು ಸಂಗ್ರಹಣೆಯ ಬದು-ಗುಂಡಿ ನಿರ್ಮಾಣ, ಕೃಷಿ ಅರಣ್ಯ ಇವೆಲ್ಲ ಇದ್ದರೆ, ಬರದ ಭೀಕರತೆ ತಟ್ಟುವುದಿಲ್ಲ. ಜತೆಗೆ ಪ್ರಕೃತಿ ನೀಡಿದ್ದನ್ನು ಮರಳಿ ನೀಡಿದರೆ ನೆಲ ಶ್ರೀಮಂತವಾಗುತ್ತದೆ ಇದೇ ಸುಸ್ಥಿರ, ಸಾವಯವ ಕೃಷಿಯ ಗುಟ್ಟು’.

ಈ ತೋಟಕ್ಕೆ ದೂರದೂರಿನ ರೈತರು, ಕೃಷಿ ಅಧಿಕಾರಿಗಳು, ವಿದೇಶಿ ರೈತರು ಭೇಟಿ ನೀಡುತ್ತಿದ್ದಾರೆ. ಸುಂದರ ಸಸ್ಯರಾಶಿಯ ಮಧ್ಯೆ ಕೃಷಿ ಶಿಬಿರಗಳೂ ನಡೆದಿದ್ದು, ಇದಕ್ಕಾಗಿ ಶಾಶ್ವತ ವೇದಿಕೆ ಇದೆ. ಎಲ್ಲ ಜೀವಿಗಳಿಗೂ ಬದುಕುವ ಹಕ್ಕಿದೆ. ಇದಕ್ಕಾಗಿ ನಿಸರ್ಗದ ಸಮತೋಲನ ಅಗತ್ಯ ಎನ್ನುವ ನೀತಿ ಇಲ್ಲಿ ಸಾಕಾರಗೊಂಡಿದೆ.

‘ಇದನ್ನೆಲ್ಲ ನೊಡಿದ ಮೇಲೆ ನನಗೆ ಕೃಷಿ ಮಾಡುವ ಬಗ್ಗೆ ವಿಶ್ವಾಸ ಬಂದಿದೆ ಎಂದು ಅನೇಕ ರೈತರು ಹೇಳಿದ್ದಾರೆ. ಆ ದಾರಿಯತ್ತ ನಡೆಯಲೂ ಆರಂಭಿಸಿದ್ದಾರೆ. ಇದಕ್ಕಿಂತ ನನಗೆ ಇನ್ನೇನು ತಾನೇ ಬೇಕು?’ ಎಂದು ಜಯರಾಮ್ ಪ್ರಶ್ನಿಸುತ್ತಾರೆ.

(ಕೃಷಿರಂಗ- ಫೆಬ್ರವರಿ 4, 2004)

* ಪಾಲಿಹೌಸ್‌ನಲ್ಲಿ ಈಗ ಜಯರಾಮ್ ಸ್ಟ್ರಾಬೆರಿ ಬೆಯುತ್ತಿದ್ದಾರೆ. ಸುಸ್ಥಿರ ಕೃಷಿಯತ್ತ ಜನರು ಆಸಕ್ತಿ ತೋರುತ್ತಿರುವುದರಿಂದ, ನೆಲ-ಜಲ ಸಂರಕ್ಷಣೆಯ ಹಲವು ತರಬೇತಿ ಕಾರ್ಯಕ್ರಮಗಳನ್ನು ತಮ್ಮ ತೋಟದಲ್ಲಿ ನಡೆಸುತ್ತಿದ್ದಾರೆ. ಕುಮುದ್ವತಿ ನದಿ ಪುನಶ್ಚೇತನ ಆಂದೋಲನಕ್ಕೆ ಚಾಲನೆ ನೀಡಿರುವ ಜಯರಾಮ ಅವರದು- ಜನತೆಯ ಸಹಭಾಗಿತ್ವದಲ್ಲಿ ನದಿಗೆ ಮತ್ತೆ ಜೀವ ನೀಡುವ ಕನಸು.

ವಿಳಾಸ: ‘ಸುಕೃಷಿ’, ಮರಸರಹಳ್ಳಿ, ಯಂಟಗಾನಹಳ್ಳಿ ಅಂಚೆ, ನೆಲಮಂಗಲ ತಾ., ಬೆಂಗಳೂರು ಗ್ರಾಮಾಂತರ ಜಿಲ್ಲೆ, ದೂರವಾಣಿ: 080-7738077 ಮೊ: 98440 34777