ಕಂದಾಯ ಇಲಾಖೆ ಹುದ್ದೆಯನ್ನು ಬಿಟ್ಟು ಕೃಷಿರಂಗಕ್ಕೆ ಕಾಲಿಟ್ಟ ಬಿ.ಟಿ. ರಂಗಪ್ಪ ಗೌಡರಿಗೆ ಇದೀಗ ಮರಿಗೌಡ ತೋಟಗಾರಿಕೆ ಪ್ರಶಸ್ತಿ ಲಭಿಸಿದೆ. ತೀರ್ಥಹಳ್ಳಿಯ ಬಳಿಯ ಇವರ 45 ಎಕರೆ ತೋಟ ಎಂಬುದು ಒಂದು ಪ್ರದರ್ಶನ ರಂಗ, ಒಂದು ಕೃಷಿ ಕಾಲೇಜು.  ಹೊಸ ಹೊಸ ಕೃಷಿತಂತ್ರಗಳು ಇವರನ್ನು ಹುಡುಕಿಕೊಂಡು ಬರುತ್ತವೆ. ಕೃಷಿಪ್ರೇಮಿಗಳು, ಕೃಷಿಸಾಧಕರು ಕೂಡ ಬರುತ್ತಾರೆ.

ಯಾವುದೋ ಉತ್ತಮ ಪ್ರವಾಸೀ ಕ್ಷೇತ್ರಕ್ಕೆ ಬಂದಂತಿತ್ತು ಅಲ್ಲಿನ ನೋಟ.  ಎಲ್ಲ ಕಡೆ ಅಷ್ಟು ಶಿಸ್ತು, ಶ್ರದ್ಧೆ ಎದ್ದು ಕಾಣುತ್ತಿತ್ತು.  ಒಳಗೆ ಹೋದಂತೆಲ್ಲ ಕೃಷಿಯ ವಿವಿಧ ಮಜಲುಗಳು ಒಂದೊಂದಾಗಿ ಅನಾವರಣಗೊಳ್ಳುತ್ತವೆ. ಇಲ್ಲಿ ಮಿಶ್ರಬೆಳೆಯಿಂದ ಹಿಡಿದು, ಜೈವಿಕ ಬೇಲಿಯ ತನಕ ನೂರಾರು ಬಗೆಯ ಗಿಡಗಳಿವೆ. ಮಣ್ಣಿನ ಆರೋಗ್ಯದಿಂದ ಹಿಡಿದು ಜೈವಿಕ ಪೀಡೆನಾಶಕ ತಯಾರಿಕೆ ಪ್ರಾತ್ಯಕ್ಷಿಕೆ ಇದೆ. ಇನ್ನು ತೋಟಗಾರಿಕೆ ಬೆಳೆಗಳದ್ದೇ ಒಂದು ಸಾಮ್ರಾಜ್ಯ. ಯಥೇಚ್ಛ ನೀರಿದ್ದರೂ, ಅದರ ಮಿತಬಳಕೆ ಹೇಗೆ ಎಂಬುದರ ಪಾಠ ಇಲ್ಲಿದೆ.

ಹೀಗಿರುವಾಗ, ಶಿವಮೊಗ್ಗ ಜಿಲ್ಲೆಯ ಬೊಮ್ಮನಹಳ್ಳಿಯ ಬಿ.ಟಿ.ರಂಗಪ್ಪಗೌಡರು ‘ಯಶಸ್ವಿ ಕೃಷಿಕ’ರ ಸಾಲಿಗೆ ಸೇರುವುದು ಸಹಜ. ಅವರ ಅಪಾರ ಆಸಕ್ತ್ತಿ ಹಾಗೂ ಪರಿಶ್ರಮ ಇಲ್ಲಿ ಮೂರ್ತರೂಪವಾಗಿದೆ.

ಹೈಸ್ಕೂಲ್ ಶಿಕ್ಷಕನಾಗಿ, ಕಂದಾಯ ಇಲಾಖೆ ಅಧಿಕಾರಿಯಾಗಿ ಕೆಲಸ ಮಾಡಿದ ರಂಗಪ್ಪಗೌಡರು ವ್ಯವಸಾಯದತ್ತ ಹೊರಳಿದ್ದೇ ಆಕಸ್ಮಿಕ. ‘ಸ್ವತಃ ದುಡಿದು, ಸ್ವಾವಲಂಬಿ ಜೀವನ ಸಾಗಿಸಬೇಕು’ ಎಂಬ ಯೋಚನೆ ಬಂದ ದಿನವೇ ಸರ್ಕಾರಿ ಕೆಲಸಕ್ಕೆ ರಾಜೀನಾಮೆ ನೀಡಿ ಕೃಷಿಗೆ ಏರಿದರು (ಇಳಿದರು ಅಲ್ಲ!). ಕೃಷಿ ಕುಟುಂಬದಿಂದ ಬಂದಿದ್ದರೂ ಅವರಿಗೆ ಅನುಭವ ಇರಲಿಲ್ಲ. ಅವರಿವರು ಹೇಳಿದ್ದನ್ನು ಪರೀಕ್ಷಿಸಿ, ತಮ್ಮದೇ ವಿಧಾನ ಅಳವಡಿಸಿ ಕೆಲಕಾಲದಲ್ಲೇ ಉಳಿದ ರೈತರಿಗಿಂತ ‘ಜಾಣ’ ಎನಿಸಿಕೊಂಡರು.

ಒಟ್ಟು 45 ಎಕರೆ ಜಮೀನಿನಲ್ಲಿ ತೋಟಗಾರಿಕೆಗೆ ಮೊದಲ ಪ್ರಾಶಸ್ತ್ಯ. ಇಲ್ಲಿ 28 ಎಕರೆಗಳ ಪೈಕಿ ಅಡಿಕೆ ಪ್ರಮುಖ ಬೆಳೆ. ಉಳಿದಂತೆ ಕಾಫಿ, ಕರಿಮೆಣಸು, ಲವಂಗ, ಏಲಕ್ಕಿ, ಶ್ರೀಗಂಧ, ವೆನಿಲ್ಲಾ, ಸುವರ್ಣಗಡ್ಡೆ ಇತ್ಯಾದಿ, ಇತ್ಯಾದಿ. ಇವಕ್ಕೆಲ್ಲ ಗೊಬ್ಬರ ಹೊರಗಿನದಲ್ಲ. ಸ್ಥಳದಲ್ಲೇ ಲಭ್ಯವಾಗುವ ತರಗೆಲೆ, ಸೊಪ್ಪು, ತೆಂಗಿನ ಗರಿ, ಕಳೆಗಿಡ ಇನ್ನಿತರ ತ್ಯಾಜ್ಯ ಬಳಸಿ ಕಾಂಪೋಸ್ಟ್ ತಯಾರಿಸುತ್ತಾರೆ. ಇವರ ಇನ್ನೊಂದು ಜಾಣ್ಮೆಯ ಕೆಲಸವೆಂದರೆ,  ಅಡಿಕೆಯನ್ನು ತೋಟದಲ್ಲೇ ಸುಲಿಸುತ್ತಾರೆ. (ಈ ಭಾಗದ ಅನೇಕರು ಫಸಲನ್ನು ಟ್ರ್ಯಾಕ್ಟರ್ ಮೂಲಕ ಮನೆ ಅಂಗಳಕ್ಕೆ ತರಿಸಿ ಸುಲಿಸಿ, ಸಿಪ್ಪೆಯನ್ನು ಅಲ್ಲೇ ಎಲ್ಲೋ ಬಿಸಾಕುತ್ತಾರೆ. ಇಲ್ಲವೆ ನೇರವಾಗಿ ಪೇಟೆಗೆ ಇಡೀ ಗೊನೆಗಳನ್ನು ಸಾಗಿಸುತ್ತಾರೆ). ರಂಗಪ್ಪ ಗೌಡರು ಅಡಿಕೆ ಸಿಪ್ಪೆಯನ್ನು ಮರದ ಬಳಿಯೇ ಗೊಬ್ಬರ ಮಾಡಿ ಸಾಗಾಟ, ಸಮಯ, ಖರ್ಚು ಎಲ್ಲದರಲ್ಲೂ ಉಳಿತಾಯ ಸಾಧಿಸುತ್ತಾರೆ.

ತಿಪಟೂರಿನ ಕಡೆ ತೆಂಗಿನಮರಗಳ ಮಧ್ಯೆ ಸ್ಥಳ ಖಾಲಿ ಇರುವುದನ್ನು ನೋಡಿದ್ದೇವೆ. ರಂಗಪ್ಪ ಇಲ್ಲಿ ಒಂದಿಂಚು ಜಾಗ ವ್ಯರ್ಥವಾಗದಂತೆ ಸಾಗವಾನಿ, ಪೇರಲ, ಹಲಸು, ಕಾಫಿ, ಸಪೋಟ, ವೆನಿಲ್ಲಾ ಬೆಳೆಸಿ ‘ಕಾಡು’ ನಿರ್ಮಿಸಿದ್ದಾರೆ.  ಅಡಿಕೆಯ ಬೆಲೆ ಮುಂದೆ ಕುಸಿದಾಗ ಕಷ್ಟದ ದಿನಗಳು ಬರಬಾರದೆಂದು ಈಗಲೇ ಪ್ರತಿ ಗಿಡದ ಪಕ್ಕ ಒಂದೊಂದು ಶ್ರೀಗಂಧ ಬೆಳೆಸುತ್ತಿದ್ದಾರೆ. ಒಳ್ಳೆಯ ಬೆಳವಣಿಗೆ ಕೂಡ ಕಾಣುತ್ತಿದೆ.

ಯಾವುದೇ ಉತ್ತಮ ತಳಿ ಸಿಕ್ಕರೂ ತಂದು ಬೆಳೆಸುವ ಹವ್ಯಾಸ ಗೌಡರದು. ಈ ಆಸಕ್ತಿಯ ಪರಿಣಾಮವಾಗಿ, ಉಪ್ಪಿನ ಕಾಯಿಗೆ ಬಳಸುವ 26 ಮಾವಿನ ತಳಿಗಳು ಇಲ್ಲಿವೆ ಹಾಗೂ ಸ್ವಾದಕ್ಕೆ  ಹೆಸರಾದ 24 ತಳಿಗಳು ಇವರ ‘ಸಂಗ್ರಹ’ದಲ್ಲಿವೆ. ತೋಟಕ್ಕೆ ಜೀವಂತ ಬೇಲಿಯಾಗಿ ಕಿತ್ತಳೆ, ಮೂಸಂಬಿ, ನಿಂಬೆ ಎಲ್ಲವೂ ನಮ್ಮನ್ನು  ಸೆಳೆಯುತ್ತವೆ.

ಆರು ಎಕರೆಯಲ್ಲಿ ಸಾಗವಾನಿ ಅದ್ಭುತವಾಗಿ ಬೆಳೆದಿದೆ. ರಂಗಪ್ಪಗೌಡರ ಜಾಣ್ಮೆ ಇಲ್ಲಿಯೂ ಕೆಲಸ ಮಾಡಿದೆ. ಸಸ್ಯಗಳ ಆರಂಭದ ಹಂತದಲ್ಲಿ ಸ್ಥಳಾವಕಾಶ ಇರುವುದರಿಂದ ಇಲ್ಲಿ ಮಿಶ್ರಬೆಳೆಯಾಗಿ ಶುಂಠಿಯ ಪ್ರಯೋಗ- ಎಕರೆಗೆ 100 ಕ್ವಿಂಟಲ್ ಇಳುವರಿ ಪಡೆದಿದ್ದು ಕಡಿಮೆ ಸಾಧನೆಯೇ?

ನಲವತ್ತು ವರ್ಷಗಳಿಂದ ಕೃಷಿ ಕ್ಷೇತ್ರದ ನಿರಂತರ ಬದಲಾವಣೆಗೆ ಸಾಕ್ಷಿಯಾದ ರಂಗಪ್ಪಗೌಡರು, ಅನುಭವಗಳ ದೊಡ್ಡ ಮೂಟೆಯನ್ನು ತೆರೆದಿಡುತ್ತಾರೆ. ಇವರು ಜಮೀನಿಗೆ ಇಳಿದ ಸಮಯ ಹಸಿರು ಕ್ರಾಂತಿಯ ಭರಾಟೆ ಆರಂಭವಾಗಿತ್ತು. ರಾಸಾಯನಿಕ ದ್ರವ್ಯಗಳ ಪ್ರಚಾರ ಅಬ್ಬರ ಮುಗಿಲು ಮುಟ್ಟಿತ್ತು.

‘ಅಗತ್ಯವೆನಿಸುವಷ್ಟು ರಾಸಾಯನಿಕ ಬಳಸುವುದು ತಪ್ಪೇನೂ ಅಲ್ಲ. ದುರಂತವೆಂದರೆ ಈ ಬಗ್ಗೆ ಯಾವ ವಿಜ್ಞಾನಿ ಅಥವಾ ತಜ್ಞರೂ ಕೃಷಿಕರಿಗೆ ಸರಿಯಾದ ಮಾರ್ಗದರ್ಶನ ನೀಡಲಿಲ್ಲ’ ಎಂಬ ವಿಷಾದ ಅವರದು. ಬೆಳೆ ಬೇಗ ಕೈಗೆ ಬರಬೇಕು; ಹೆಚ್ಚೆಚ್ಚು ಸಿಗಬೇಕು ಎಂಬ ಆಸೆಯಲ್ಲಿ ರೈತ ಹೆಚ್ಚೆಚ್ಚು ಒಳಸುರಿ  ಸುರಿಯುತ್ತಲೇ ಹೋದ. ‘ಕೈಗೆ ಸಿಕ್ಕಿದ್ದು ಮಾತ್ರ ಖಾಲಿ ತಟ್ಟೆ’ ಎನ್ನುವ ಅವರು, ‘ಇದರಿಂದಾಗಿಯೇ ರೈತರ ಮಕ್ಕಳು ನಗರಕ್ಕೆ ವಲಸೆ ಹೋದರು; ದಡ್ಡ ಎನಿಸಿಕೊಂಡಾತ ಹೊಲದಲ್ಲೇ ಉಳಿದ’ ಎನ್ನುತ್ತಾರೆ.

ಇವರ ವೆನಿಲ್ಲಾ ಬಳ್ಳಿಗಳ ಸೊಬಗನ್ನು ನೋಡಿ. ಇತರ ಬೆಳೆಗಾರರಿಗೆ ವೆನಿಲ್ಲಾ ‘ಮಾಯಾಜಿಂಕೆ’ ಆದಾಗ (ಬೆಲೆ ಕೆಜಿಗೆ ರೂ 3,700ರಿಂದ 500ಕ್ಕೆ ಇಳಿದಾಗ) ಗೌಡರು ಧೃತಿಗೆಡಲಿಲ್ಲ. ಅವರು ಅನುಸರಿಸಿದ ಕೆಲ ಪದ್ಧತಿಯಿಂದ ಆಗಲೂ ಅವರಿಗೆ ವೆನಿಲ್ಲಾ ಲಾಭ ಕೊಟ್ಟಿತು.

ಸಾಕಷ್ಟು ಮಳೆ ಮಾತ್ರವಲ್ಲ, ಕೆರೆ ಸೌಲಭ್ಯ ಇದ್ದರೂ ನೀರಿನ ಮಿತಬಳಕೆಗೆ ಗೌಡರ ಆದ್ಯತೆ. ಇದಕ್ಕಾಗಿ ಹೊಂಡದಲ್ಲಿ ಮಳೆನೀರು ಸಂಗ್ರಹಿಸಿ ಮೀನುಸಾಕಣೆ ಮಾಡಿದ್ದಾರೆ. ಜೈವಿಕ ಘಟಕದಿಂದ ಬರುವ ಬಗ್ಗಡವನ್ನು ಹೊಂಡಕ್ಕೆ ಬಿಟ್ಟಾಗ, ಮೀನಿಗೆ ಸಮೃದ್ಧ ಆಹಾರ ಸಿಗುತ್ತದೆ. ನಂತರ ಈ ಪೋಷಕಾಂಶಭರಿತ ನೀರನ್ನು ಬೆಳೆಗಳಿಗೆ ತುಂತುರು ನೀರಾವರಿ ಮೂಲಕ ಸಿಂಪಡಿಸುತ್ತಾರೆ. ಮೂರು ಲಾಭ!

67 ವರ್ಷ ಪ್ರಾಯದ ಗೌಡರಿಗೆ ತೋಟದ ಒಂದು ಚಿಕ್ಕ ಭಾಗದಲ್ಲಿರುವ ವೆನಿಲ್ಲಾ ಕ್ಷೇತ್ರವೇ ಜಾಗಿಂಗ್ ಸ್ಥಳ. ಇಲ್ಲಿಯ ಎಲ್ಲ ಕೆಲಸ ಇವರದೇ. ಬೇರೆ ಕೆಲಸಗಾರರಿಗೆ ಇಲ್ಲಿ ಪ್ರವೇಶವಿಲ್ಲ! ಹಾಗೆಯೇ ಗೃಹಿಣಿಯರಿಗೂ ಒಂದು ಹಣ್ಣಿನ ತೋಟ ಮೀಸಲು. ಅಡುಗೆ ಮನೆಯ ವೆಚ್ಚವನ್ನೆಲ್ಲ ಇದೇ ಸರಿ ತೂಗಿಸುತ್ತದೆ. ಮನೆಯ ಹೆಣ್ಣು ಮಕ್ಕಳೇ ಇದನ್ನು ನಿರ್ವಹಿಸುವುದು!

ನಶಿಸುತ್ತಿರುವ ಔಷಧಿ ಸಸ್ಯಗಳ ಸಂರಕ್ಷಣೆಗೆ ಆದ್ಯತೆ ನೀಡಿರುವ ಗೌಡರು ಪಚೋಲಿ, ಹಿಪ್ಪಲಿ, ನೆಲ್ಲಿ, ಮುರುಗ, ವಾಟೇಹುಳಿ, ಕತ್ತಾಳೆ, ಚಕ್ರಮುನಿ ಇತ್ಯಾದಿಗಳನ್ನು ಒಂದೆಡೆ ಬೆಳೆಸುತ್ತಿದ್ದಾರೆ. ಪುತ್ರರಾದ ವಿಷ್ಣು ಮತ್ತು ಕೃಷ್ಣ ವಿದ್ಯಾಭ್ಯಾಸದ ಬಳಿಕ ತಂದೆಯೊಂದಿಗೆ ಕೃಷಿ ಕೈಗೊಂಡಿದ್ದಾರೆ. ‘ಇನ್ನಷ್ಟು ಓದಿ ನೌಕರಿ ಸೇರುವುದಕ್ಕಿಂತ ನನಗೆ ಇದೇ ನೆಮ್ಮದಿ ನೀಡಿದೆ’ ಎನ್ನುತ್ತಾರೆ ಕೃಷ್ಣ.

2004ರ ಸಾಲಿನ ಪ್ರತಿಷ್ಠಿತ ಡಾ|| ಎಂ.ಎಚ್.ಮರೀಗೌಡ ರಾಜ್ಯಮಟ್ಟದ ‘ಅತ್ಯುತ್ತಮ ತೋಟಗಾರಿಕೆ ಪ್ರಶಸ್ತಿ’ ರಂಗಪ್ಪಗೌಡರಿಗೆ ಸಂದಿದೆ. 1993ರಿಂದ ಕೃಷಿವಲಯದ ಎಂಟು ಪ್ರಶಸ್ತಿಗಳನ್ನು ಪಡೆದ ಅವರ ಸಾಧನೆಗಳ ಬುಟ್ಟಿಗೆ ಇದು ಮತ್ತೊಂದು ಕದಿರು.

ಪ್ರಕೃತಿಯನ್ನು ದೋಚುವ ಬದಲು ಅದರ ಸಂಪತ್ತಿಗೆ ನಮ್ಮ ಪರಿಶ್ರಮವನ್ನೂ ಸೇರಿಸುತ್ತ ಹೋದರೆ ಇಂಥ ಪ್ರಶಸ್ತಿ ತಾನಾಗಿ ಬರುತ್ತದೆ ಎಂದು ಗೌಡರು ಹೇಳುತ್ತಾರೆ. ಶಿವಮೊಗ್ಗದಿಂದ ತೀರ್ಥಹಳ್ಳಿ ರಸ್ತೆಯಲ್ಲಿ 15ನೇ ಮೈಲಿಕಲ್ (ಸರಿಯಾಗಿ 25ನೇ ಕಿಮೀ) ಎಂಬ ಸ್ಟಾಪ್‌ನಿಂದ ಬಲಕ್ಕೆ ತಿರುಗಿ ಐದು ಕಿಮೀ ಸಾಗಿದರೆ ಬೊಮ್ಮನಹಳ್ಳಿ ಬರುತ್ತದೆ. (ಗೌಡರ ಫೋನ್ 08181- 275059)

(ಕೃಷಿರಂಗ- ಮಾರ್ಚ್ 30, 2004)