ಈ ಹಳ್ಳಿಗಳ ಜನರು ಹಳ್ಳ ಸದಾ ಹರಿಯುತ್ತಲೇ ಇರುತ್ತದೆ ಎಂಬ ಭ್ರಮೆಯಲ್ಲಿ ಇದ್ದರು; ಹಳ್ಳಕ್ಕೇ ಸಾಕಷ್ಟು ಕಡೆ ಕನ್ನ ಕೊರೆದರು. ಆದರೆ ಹಿರೇಹಳ್ಳ ಅಣೆಕಟ್ಟು ನಿರ್ಮಾಣ ಆದದ್ದೇ ತಡ! ಇವರ ಆಸೆಯ ತೊರೆ ಬತ್ತಿ ಹೋಯಿತು. ಕೊಪ್ಪಳ ತಾಲ್ಲೂಕಿನ ಸುಮಾರು 40 ಹಳ್ಳಿಗಳಲ್ಲಿ ಈಗ ನೀರಿಗೆ ತತ್ವಾರ. ಇದು ಜಲಾಶಯ ತಂದ ಜಲಕ್ಷಾಮ

ದೂರದಿಂದ ನೋಡಿದರೆ ಈಗದು ಪಕ್ಕಾ ಮರುಭೂಮಿ. ದಶಕಗಳ ಕಾಲ ಸತತ ಹರಿದು ಹತ್ತಾರು ಹಳ್ಳಿಗಳ ದಾಹ ತಣಿಸಿದ ಹಳ್ಳ ಅದು ಎಂದು ಹೇಳಲು ಕುರುಹುಗಳೇ ಉಳಿದಿಲ್ಲ. ‘ಅಣೆಕಟ್ಟು ನಿರ್ಮಾಣದಿಂದ ನೀರಾವರಿ ಸೌಲಭ್ಯ’ ಎಂಬ ಮಾತು ಎಷ್ಟರ ಮಟ್ಟಿಗೆ ನಿಜ ಎಂಬುದನ್ನು ಅರಿಯಲು ಹಿರೇಹಳ್ಳ ಅಣೆಕಟ್ಟೆಗೆ ಒಮ್ಮೆ ಬನ್ನಿ.

ತುಂಗಭದ್ರಾ ನದಿಗೆ ಹೂಳು ತುಂಬುವುದನ್ನು ತಡೆಯಲು ಹಾಗೂ ಕೊಪ್ಪಳದ ಒಣಭೂಮಿಗೆ ನೀರೊದಗಿಸಲು ರೂಪುಗೊಂಡ ಹಿರೇಹಳ್ಳ ಅಣೆಕಟ್ಟೆಯು ಪರೋಕ್ಷವಾಗಿ ಸಾವಿರಾರು ಎಕರೆ ನೆಲ ನೀರಿಲ್ಲದೇ ಒಣಗುವಂತೆ ಮಾಡಿದೆ ಎಂಬುದು ಮೇಲ್ನೋಟಕ್ಕೇ ಕಂಡುಬರುವಂಥದು. ಪೂರ್ಣಗೊಳ್ಳಲು 25 ವರ್ಷಗಳಷ್ಟು ದೀರ್ಘ ಕಾಲ ಹಾಗೂ ನೂರೈವತ್ತು ಕೋಟಿ ವೆಚ್ಚದ ನಂತರ ಅಣೆಕಟ್ಟೆಯ ಎರಡೂ ಕಾಲುವೆಗಳಿಂದ 20 ಸಾವಿರ ಎಕರೆ ಭೂಮಿಗೆ ನೀರಾವರಿ ಸೌಲಭ್ಯ ದೊರಕುವುದೆಂದು ಹೇಳಲಾಗಿತ್ತು. ಈಗ ಯೋಜನೆ ಪೂರ್ಣಗೊಂಡಿದೆ. ‘ನಿಜವಾಗಿ ಎರಡು ಸಾವಿರ ಎಕರೆಗೆ ನೀರು ದೊರಕುತ್ತದೆ’ ಎನ್ನುತ್ತಾರೆ ರೈತರು.

ಇಷ್ಟೇ ಆಗಿದ್ದರೆ ಇದು ಮತ್ತೊಂದು ‘ನೀರಾವರಿ ದುರಂತ’ ಎಂದು ವ್ಯಥಿಸಿಕೊಳ್ಳಬಹುದಿತ್ತು. ಆದರೆ ಹಿರೇಹಳ್ಳ ಅಣೆಕಟ್ಟೆಯಿಂದ ಹದಿನೈದು ಕಿಲೋ ಮೀಟರ್ ದೂರದ ಕಾತರಕಿ ಗ್ರಾಮದ ಬಳಿ ತುಂಗಭದ್ರಾ ಅಣೆಕಟ್ಟೆಯ ಹಿನ್ನೀರು ಸೇರುವವರೆಗಿನ 40 ಹಳ್ಳಿಗಳ ಬದುಕನ್ನೇ ಇದು ದಿಕ್ಕುತಪ್ಪಿಸಿದೆ.

ಹಿರೇಹಳ್ಳದ ಹೊಸ ಅಣೆಕಟ್ಟು ಕಟ್ಟುವ ಮುಂಚೆ ಕೆಳಭಾಗದ ಹಳ್ಳಿಗಳ ರೈತರು ಕುಡಿಯಲು ಹಾಗೂ ಕೃಷಿಗೆ ಹಳ್ಳದ ನೀರನ್ನೇ ಬಳಸುತ್ತಿದ್ದರು. ಬೇಸಿಗೆಯಲ್ಲಿ ಕೂಡ ನೀರಿಗೆ ಬರ ಇರುತ್ತಿದ್ದಿಲ್ಲ. ಹಳ್ಳದ ನಟ್ಟನಡುವೆ ಬೋರ್ ಕೊರೆಸಿ, ದಂಡೆಗುಂಟ ಹಾಯ್ದು ಹೋಗಿರುವ ವಿದ್ಯುತ್ ತಂತಿಗಳಿಗೆ ‘ಕೊಕ್ಕೆ’ ಹಾಕಿ ಪುಕ್ಕಟೆ ಕರೆಂಟ್ ಹರಿಸಿಕೊಂಡರೆ ಮುಗಿಯಿತು; ಈ ರೀತಿ ಪ್ರತಿಯೊಂದು ಹಳ್ಳಿಯಲ್ಲಿಯೂ ಐನೂರರಿಂದ ಸಾವಿರ ಎಕರೆ ಭೂಮಿಗೆ ನೀರುಣಿಸುತ್ತಿದ್ದರು.

‘ಇಲ್ಲಿ ಹತ್ರಿಂದ ಹದಿನೈದ್ ಅಡಿ ಬೋರ್ ಹಾಕ್ಸಿದ್ರ ಸಾಕು; ಎಷ್ಟ ಕೆಪಾಸಿಟಿ ಮೋಟರ್ ಬೇಕಾದ್ರೂ ತಂದ್ ಹಚ್ಬಹುದಿತ್ತು. ಆ ನೀರಾದ್ರೂ ಬ್ಯಾಸಿಗಿಗೂ ಅಷ್ಟ ಬರ್ತಿದ್ವು, ಉಳಿದಾಗೂ ಅಷ್ಟ..’ ಎಂದು ನೆನಪಿಸಿಕೊಳ್ಳುತ್ತಾನೆ, ರೈತ ಶಂಕರಪ್ಪ. ಆಗಾಗ ನೀರು ಕಡಿಮೆಯಾದಾಗಲೆಲ್ಲ ರೈತರೂ ಹೊಸ-ಹೊಸ ಐಡಿಯಾ ಮಾಡಿ ನೀರು ತೆಗೆಯುತ್ತಿದ್ದರು.

ಆದರೆ ಅಣೆಕಟ್ಟು ಕಟಿದ್ದರಿಂದ ಅಲ್ಲಿಂದ ಕೆಳಗೆ ಹರಿಯುತ್ತಿದ್ದ ನೀರಿನ ಧಾರೆ ಸ್ಥಗಿತಗೊಂಡಿದೆ. ಕೃಷಿಗೆ ಬಳಸುವುದಿರಲಿ, ಕುಡಿಯಲು ಕೂಡ ಹಳ್ಳದಲ್ಲಿ ನೀರಿಲ್ಲ. ಕೊಳವೆಬಾವಿ ಆಳ ಹೆಚ್ಚುತ್ತ ಹೋದಂತೆ ನೀರೂ ಕೆಳಗಿಳಿಯುತ್ತ ‘ಮಾಯ’ವಾಗುತ್ತಿದೆ. ಹೀಗಾಗಿ ಹಿರೇಹಳ್ಳ ಅಣೆಕಟ್ಟೆ ಕೆಳಭಾಗದ ನಲವತ್ತು ಗ್ರಾಮಗಳ ಸಾವಿರಾರ ರೈತರು ದಿಕ್ಕೆಟ್ಟು ಕೂತಿದ್ದಾರೆ.

‘ಮೊದಲೆಲ್ಲ ನೀರ್ಗೆ ಕಷ್ಟಾನಾ ಇದ್ದಿಲ್ಲ. ಈಗ ನೋಡ್ರಿ ಏನೇನಾ ಮಾಡ್ಬುಕು’ ಎನ್ನುತ್ತಲೇ ಹಳ್ಳದ ಮಧ್ಯದಲ್ಲಿದ್ದ ತನ್ನ ಕೊಳವೆಬಾವಿಯ ಆಳ ಹೆಚ್ಚು ಮಾಡಿದ್ದನ್ನು ವಿವರಿಸಿದ ಸಿಂದೋಗಿ ಗ್ರಾಮದ ಭೀಮಪ್ಪ.

ಪ್ರತಿ ಹಳ್ಳಿಗೆ ಐನೂರು ಎಕರೆ ಎಂದರೂ, ಸುಮಾರು 40 ಹಳ್ಳಿಗಳ 20 ಸಾವಿರ ಎಕರೆ ಭೂಮಿಗೆ ನೀರುಣಿಸುತ್ತಿದ್ದ ಹಳ್ಳ ಈಗ ಭಣಭಣ. 150 ಕೋಟಿ ವೆಚ್ಚ ಮಾಡಿ ಅದಕ್ಕೆ ತಡೆಯೊಡ್ಡಿ, ಆ ನೀರು ದೊರೆಯುವುದು ಸದ್ಯ ಎರಡು ಸಾವಿರ ಎಕರೆಗೆ ಮಾತ್ರ! ಲಾಭ ಯಾರಿಗೆ?

ಈ ಸಮಸ್ಯೆಯಲ್ಲಿ ಈತನಕ ನೀರು ಪಡೆದ ಫಲಾನುಭವಿ ಗ್ರಾಮಸ್ಥರದೂ ಒಂದು ಪಾಲಿದೆ. ‘ಹಳ್ಳ ಸದಾ ಹರಿಯುತ್ತಲೇ ಇರುತ್ತದೆ’ ಎಂಬ ಭ್ರಮೆಯೊಂದಿಗೆ ಇದ್ದವರು, ಬೇರೆ ವಿಧಾನಗಳ ಬಗ್ಗೆ ಚಿಂತಿಸಲಿಲ್ಲ. ಅಣೆಕಟ್ಟು ಕಟ್ಟಿದಾಗಲೇ ಇವರು ಚೆಕ್‌ಡ್ಯಾಂಗಳನ್ನು ಹಳ್ಳದುದ್ದಕ್ಕೂ ಕಟ್ಟಿಕೊಂಡಿದ್ದರೆ ಈ ಸಮಸ್ಯೆ ಬರುತ್ತಿರಲಿಲ್ಲ. ಈಗ ಜಲಕೊರತೆ ಬಾಯಿಗೇ ಬಂದು ಕೂತಿದೆ. ಭೀಕರ ಭವಿಷ್ಯ ಹೆದರಿಸತೊಡಗಿದೆ.

ಈಗ ಈ ಹಳ್ಳಿಗಳ ಜನರು ತಾವೇ ಮುಂದಾಗಿ ಮಾಡಬೇಕಾದ ಕೆಲಸಗಳು ಸಾಕಷ್ಟಿವೆ.

ಎಲ್ಲೆಲ್ಲಿ ಒಣಹಳ್ಳಗಳಿವೆ ಎಂದು ನೋಡಿ ಅಲ್ಲೆಲ್ಲ ಚಿಕ್ಕ-ದೊಡ್ಡ ಅಡ್ಡಗಟ್ಟೆ ಕಟ್ಟಬೇಕು. ಅದು ತೀರಾ ಅಧಿಕ ವೆಚ್ಚದ ಕಾಂಕ್ರೀಟ್ ಕಟ್ಟೆಯೇ ಆಗಬೇಕೆಂದಿಲ್ಲ. ಮಣ್ಣಿನ ಕಟ್ಟೆಗಳಾದರೂ ಸರಿ. ತೀರಾ ದೊಡ್ಡದೇ ಇರಬೇಕೆಂದೇನೂ ಇಲ್ಲ. ರಾಜಸ್ತಾನದಲ್ಲಿ ರಾಜೇಂದ್ರಸಿಂಗ್ ನೇತೃತ್ವದಲ್ಲಿ ಅತಿ ಪುಟ್ಟ ಹಳ್ಳಗಳಿಗೂ ಕೆಲವೆಡೆ ಕೇವಲ ಎರಡು ಅಡಿ ಎತ್ತರದ ಅಡ್ಡಗಟ್ಟೆ ಕಟ್ಟಿಯೂ ಮಳೆನೀರನ್ನು ಅಲ್ಲೇ ಇಂಗಿಸಿದ್ದಾರೆ.

ಇದು ಸಾರ್ವಜನಿಕ ಸ್ಥಳದಲ್ಲಿ ಎಲ್ಲರೂ ಒಟ್ಟಾಗಿ ಮಾಡಬೇಕಾದ ಕೆಲಸ. ಇನ್ನು ತಂತಮ್ಮ ಖಾಸಗಿ ಜಮೀನಿನಲ್ಲಿ ಮಳೆರೂಪದಲ್ಲಿ ಬೀಳುವ ಪ್ರತಿಯೊಂದು ನೀರಹನಿಯೂ ತಮ್ಮ ನೆಲದ ಆಚೀಚೆ ಹೋಗದಂತೆ ವ್ಯವಸ್ಥೆ ಮಾಡಬೇಕು. ಎಲ್ಲೇ ತುಸು ತಗ್ಗು ಇದ್ದರೂ ಸುತ್ತಲಿನ ನೀರು ಅಲ್ಲಿ ತಾತ್ಕಾಲಿಕವಾದರೂ ಶೇಖರ ಆಗುವಂತೆ, ಅಲ್ಲೇ ಇಂಗುವಂತೆ ಮಾಡಿಕೊಳ್ಳಬೇಕು. ಅಲ್ಪ ನೀರಿನಲ್ಲಿ ಬೆಳೆಯಬಹುದಾದ ಫಸಲನ್ನು ಬಿತ್ತನೆ ಮಾಡಬೇಕು. ಮಣ್ಣಿನ ತೇವಾಂಶ ಆರದಂತೆ ನೋಡಿಕೊಳ್ಳಬೇಕು.

ಇಷ್ಟು ಮಾಡಿಕೊಳ್ಳದಿದ್ದರೆ ಎರಡು ಅಣೆಕಟ್ಟುಗಳ ನಡುವಿನ ಈ ಸುಂದರ ಪ್ರದೇಶ ನಿಜಕ್ಕೂ ಮರುಭೂಮಿಯಾಗಿಬಿಡುತ್ತದೆ.

(ಕರ್ನಾಟಕ ದರ್ಶನ- ಜುಲೈ 10, 2003)