ಇರುವ ತುಂಡು ಭೂಮಿಯಲ್ಲಿಯೇ ನೆಮ್ಮದಿ ಜೀವನ ಸಾಧ್ಯವಿಲ್ಲವೇ? ತರೀಕೆರೆಯ ಕೃಷಿ ಸಂಶೋಧನಾ ಕೇಂದ್ರದ ಹಿರಿಯ ವಿಜ್ಞಾನಿ ಡಾ. ಎಂ.ರುದ್ರಾರಾಧ್ಯ ಅವರು ಸೃಷ್ಟಿಸಿದ ಒಂದೆಕೆರೆಯ ಕೃಷಿ ನೋಡಿದರೆ ಬಡ ರೈತನಲ್ಲಿ ಬದುಕುವ ಆಸೆ ಖಂಡಿತ ಚಿಗುರಬಲ್ಲದು. ಒಂದೇ ಒಂದು ಎಕರೆಯಲ್ಲಿ ಏನೆಲ್ಲ ಸಾಧಿಸಬಹುದು..!

ಬನ್ನಿ ಈ ಕೃಷಿ ಕುಟೀರಕ್ಕೆ…

ಒಂದು ಪ್ರಶ್ನೆ: ಒಂದು ಎಕರೆ ತುಂಡು ಭೂಮಿಯಲ್ಲಿ ಏನು ಬೆಳೆಯಬಹುದು?

ರುದ್ರಾರಾಧ್ಯ ಹೇಳುತ್ತಾರೆ: ನಾಲ್ಕು ಕ್ವಿಂಟಲ್ ರಾಗಿ, 150 ಕಿಲೋ ಕಡಲೆ, 130 ಕಿಲೋ ತೊಗರಿ, 40 ಕಿಲೋ ಹುಚ್ಚೆಳ್ಳು…

‘ಅಬ್ಬಾ ಅಷ್ಟೊಂದಾ?’

‘ಇನ್ನೂ ಅರ್ಧಾನೂ ಹೇಳಿಲ್ಲ; 70 ಕೆಜಿ ಹಸಿ ಅವರೆ, ತಲಾ 12 ಕೆಜಿ ಅಲಸಂದೆ ಮತ್ತು ಹೆಸರು, 25 ಕೆಜಿ ಹಸಿ ಬಟಾಣಿ, 8 ಕೆಜಿ ಹುರುಳಿ, 30 ಕೆಜಿ ಅವರೆಕಾಳು…’

‘ನೀರಾವರಿ ಇಲ್ಲದೇನೇ….?!’

‘ಹಾಂ.. ನಿಲ್ಲಿ ಮುಗಿದಿಲ್ಲ. ಇನ್ನು ಸೊಪ್ಪು, ತರಕಾರಿಗಳಿವೆ. ಪುದೀನ, ಮೆಂತ್ಯೆ, ದಂಟು ಸೇರಿದಂತೆ ಡಜನ್ ತರಹದ ಸೊಪ್ಪುಗಳು, ಆರೆಂಟು ವಿಧದ ತರಕಾರಿ, ನಿಂಬೆ, ಕರಿಬೇವು, ಕೊತ್ತಂಬರಿ, ಹಣ್ಣು-ಹಂಪಲು…’

‘ಆದ್ರೆ…’

‘ಇರಿ ಪೂರ್ಣ ಹೇಳ್ತೀನಿ. ಉಪಕಸಬುಗಳಾದ ಕೋಳಿ, ಕುರಿ, ಎಮ್ಮೆ ಸಾಕಣೆ, ಜತೆಗೆ ಮೀನು ಸಹ. ಜೈವಿಕ ಅನಿಲ ಘಟಕ(ಗೋಬರ್ ಗ್ಯಾಸ್), ಎರೆಗೊಬ್ಬರ ತಯಾರಿಕೆಯೂ ಇಲ್ಲಿದೆ’

ಇದೇನು ಮ್ಯಾಜಿಕ್ಕಾ?

ಅಲ್ಲ, ಚಿಕ್ಕಮಗಳೂರು ಜಿಲ್ಲೆ ತರೀಕೆರೆ ಬಳಿಯ ಬಾವಿಕೆರೆ ಕೃಷಿ ಸಂಶೋಧನಾ ಕೇಂದ್ರದ ಹಿರಿಯ ವಿಜ್ಞಾನಿ ಎಂ.ರುದ್ರಾರಾಧ್ಯ ಅವರು ಮೂರು ವರ್ಷಗಳಿಂದ ಮಾಡುತ್ತಿರುವ ಕೃಷಿಯ ಸಫಲತೆಯ ಪಟ್ಟಿ ಇದು. ಈ ಕೇಂದ್ರದಲ್ಲಿಯೇ ಕೈಗೊಂಡ ಸುಸ್ಥಿರ ಕೃಷಿಯ ಈ ಮಾದರಿಯನ್ನು ನಾವು ನೋಡುತ್ತ ಹೋದಂತೆ ಕೃಷಿ ಕ್ಷೇತ್ರದ ಅದ್ಭುತ ಲೋಕವೊಂದು ಅನಾವರಣಗೊಂಡಿತು.

‘ಮಳೇನೇ ಬರ್ತಿಲ್ಲ; ಇದನ್ನೆಲ್ಲಾ ಹೇಗ್ರೀ ಮಾಡೋದು?’ ರೈತರ ಮುಖ್ಯ ಪ್ರಶ್ನೆ.

ರುದ್ರಾರಾಧ್ಯ ಥಟ್ಟನೇ ಮರುಪ್ರಶ್ನಿಸುತ್ತಾರೆ: ‘ಬೀಳೋ ಮಳೆನೀರನ್ನ ಹಿಡಿದಿಡಲು ಏನೇನು ಮಾಡಿದ್ದೀರಿ?’

ಈ ಒಂದೇ ಅಂಶದ ಮೇಲೆ ಒಂದೆಕರೆ ಸೂತ್ರ ನಿಂತಿದೆ. ಜಲಾನಯನ ತತ್ವ ಮತ್ತು ಒಕ್ಕಲುತನ ಪದ್ಧತಿಗಳನ್ನು ಸಮ್ಮಿಳನಗೊಳಿಸಿ ರೂಪಿಸಿದ ಈ ಹೊಲ, ತನ್ನಲ್ಲಿ ಬೀಳುವ ಮಳೆಯ ಒಂದೇ ಒಂದು ಹನಿಯನ್ನೂ ಹೊರಹೋಗಲು ಬಿಡುವುದಿಲ್ಲ. ಇದೇ ಅದರ ಯಶಸ್ಸಿನ ಗುಟ್ಟು.

ಐದು ವಿಭಾಗಗಳು

ಮಳೆ ನೀರು ಹಿಡಿದಿಡಲು ಇಲ್ಲಿ ಬದುಗಳದೇ ಪ್ರಮುಖ ಪಾತ್ರ. ಒಂದು ಎಕರೆಯನ್ನು ಐದು ಭಾಗ(ತಾಕು)ಗಳಾಗಿ ವಿಂಗಡಿಸಿ ನಾಲ್ಕು ಬದು ನಿರ್ಮಿಸಲಾಗಿದೆ. ಇದರ ಮೇಲೆ ವರ್ಷವಿಡೀ ಹಲವು ಸಲ ಕಟಾವು ಮಾಡಬಲ್ಲ ಮೇವಿನ ಬೆಳೆ ಮತ್ತು ಗೊಬ್ಬರದ ಹಸಿರೆಲೆ (ಗ್ಲಿರಿಸಿಡಿಯಾ) ಬೆಳೆಸಲಾಗಿದೆ. ಇದರಿಂದ ವರ್ಷದಲ್ಲಿ ಎಂಟು ತಿಂಗಳ ಕಾಲ ಹಸಿರು ಮೇವು ಲಭ್ಯ.

ಒಂದನೇ ತಾಕು- ಇದನ್ನು ಕೃಷಿ ಅರಣ್ಯ ಎಂದೂ ಕರೆಯಬಹುದು. ಎರಡು ಮಾವು, ತಲಾ ಒಂದೊಂದು ಸಪೋಟ, ಹಲಸು, ಹೊಂಗೆ, ಬೇವು, ಹುಣಸೆ, ನೆಲ್ಲಿ, ನೇರಳೆ ಗಿಡಗಳು ಇಲ್ಲಿವೆ. ನಡುವೆಯೇ ಅಂತರ ಬೆಳೆಯಾಗಿ ಬಟಾಣಿ, ಹೆಸರು, ಅಲಸಂದೆ, ಅವರೆ, ಹುರುಳಿ ಬೆಳೆಸಲಾಗಿದೆ.

ಎರಡನೇ ತಾಕಿನಲ್ಲಿ ಕ್ರಮವಾಗಿ ನಾಲ್ಕು ಸಾಲು ರಾಗಿ, ಒಂದು ಸಾಲು ಹುಚ್ಚೆಳ್ಳು(ಗುರೆಳ್ಳು) ಹಾಕಲಾಗಿದೆ. ಮೂರನೇ ತಾಕಿನಲ್ಲಿ ರಾಗಿ- ಅವರೆಯನ್ನು 4:1 ಸಾಲಿನ ಅನುಪಾತದಲ್ಲಿ, ನಾಲ್ಕನೇ ತಾಕಿನಲ್ಲಿ 8:2 ಅನುಪಾತದಲ್ಲಿ ಶೇಂಗಾ ಮತ್ತು ತೊಗರಿ. ಅಲ್ಲಲ್ಲಿ ಸಾಸಿವೆ.

ಐದನೇ ತಾಕು- ರೈತನ ಉಪಕಸಬುಗಳಿಗೆ ಮೀಸಲು. ಇಲ್ಲಿ ಒಂದು ಕುಟೀರ. ಜಾನುವಾರು ಕೊಟ್ಟಿಗೆ, ಶೌಚಾಲಯ, ಗೋಬರ್ ಗ್ಯಾಸ್, ಎರೆಗೊಬ್ಬರದ ಗುಂಡಿಗಳು, ಕೃಷಿಹೊಂಡ- ಅದರ ಮೇಲೆಯೇ ನಿರ್ಮಿಸಿದ ಕೋಳಿಗೂಡು. ಜತೆಗೆ ಕೈತೋಟಕ್ಕೆ ಅವಕಾಶ.

ಜಾನುವಾರುಗಳ ಸೆಗಣಿ ಬಳಸಿ ಗೋಬರ್ ಗ್ಯಾಸ್ ಘಟಕದಿಂದ ಬರುವ ಅನಿಲ, ಕುಟುಂಬದ ಅಗತ್ಯಕ್ಕೆ ಸಾಕಾಗುತ್ತದೆ. ಈ ಘಟಕದಿಂದ ಹೊರಬರುವ ತ್ಯಾಜ್ಯ ಎರೆಗೊಬ್ಬರಕ್ಕೆ ಬಳಕೆ. ಇನ್ನು ಹೊಲದಲ್ಲಿ ಬೀಳುವ ಮಳೆ ನೀರು ಕೊನೆಗೆ ಸಂಗ್ರಹವಾಗುವುದು ಕೃಷಿಹೊಂಡದಲ್ಲಿ. ಇದರಲ್ಲಿ ಸುಮಾರು 100 ಮೀನಿನಮರಿಗಳನ್ನು ಆರೇಳು ತಿಂಗಳು ಸಾಕಿದರೆ, ಪ್ರತಿ ಮೀನು ಅರ್ಧ- ಮುಕ್ಕಾಲು ಕೆಜಿ ತೂಗುತ್ತದೆ.

ಹೊಂಡದ ಮೇಲೆ ನಿರ್ಮಿಸಿದ ಗೂಡಿನಲ್ಲಿ 20 ಕೋಳಿ ಸಾಕಿದ್ದು, ಇವುಗಳ ವಿಸರ್ಜನೆ ಮೀನುಗಳಿಗೆ ಪುಷ್ಕಳ ಆಹಾರ! ನೀರು ಒಣಗಿದಾಗ ಇದರಲ್ಲಿ ಫಲವತ್ತಾದ ಗೊಬ್ಬರ ದೊರಕುತ್ತದೆ. ಹೊಂಡದ ಸುತ್ತ ಬಿದಿರಿನ ಬೇಲಿ ನಿರ್ಮಿಸಿ, ಅದರ ಮೇಲೂ ಹಾಗಲ, ಹೀರೆ, ಸೌತೆ, ಕುಂಬಳ ಹಬ್ಬಿಸಲಾಗಿದೆ. ಅಲ್ಲಲ್ಲಿ ಔಷಧ ಮೂಲಿಕೆಗಳೂ ಇವೆ.

ನಾಲ್ಕು ಗುಂಟೆ ಪ್ರದೇಶದಲ್ಲಿರುವ ತರಕಾರಿ ತೋಟ ಇಡೀ ಹೊಲದ ಆಕರ್ಷಣೆ. 12 ಮಡಿಗಳಲ್ಲಿ 12 ತರಹದ ಸೊಪ್ಪು ಬೆಳೆಸಿ ವರ್ಷದ ಎಂಟು ತಿಂಗಳೂ ತಾಜಾ ಸೊಪ್ಪು ಪಡೆಯಲಾಗಿದೆ. ವಾಣಿಜ್ಯ ಬೆಳೆಯೂ ಆದ ಮೆಣಸಿನಕಾಯಿಗೆ ಪ್ರಾಮುಖ್ಯ ನೀಡಿದ್ದು, ಸಾಕಷ್ಟು ಬಳಸಿ ಆರು ಕೆಜಿ ಒಣಮೆಣಸಿನಕಾಯಿ ಮಾರಾಟವಾಗಿದೆ. ಹೊಂಡದಲ್ಲಿನ ನೀರು ಬಳಸಿ ಟೊಮ್ಯಾಟೊ ಬೆಳಸಿ 50 ಕೆಜಿ ಮಾರಲಾಗಿದೆ. ಈ ಸಾಲಿನಲ್ಲಿ ತರಕಾರಿ ಮಾರಾಟದಿಂದಲೇ 2,500 ರೂಪಾಯಿ ಆದಾಯ ಬಂದಿದೆ. ಇದರ ಸುತ್ತಲೂ ಹೂವಿನ ಗಿಡ ಹಾಕಲಾಗಿದ್ದು, ಅದೂ ಆದಾಯಮೂಲವೇ!

ಉಳಿದಂತೆ, ಮೊದಲು ಮೂರು ಕುರಿಗಳಿದ್ದು ಆ ಸಂಖ್ಯೆ 16ಕ್ಕೆ ಏರಿದೆ. ಎಮ್ಮೆ ಹಾಲಿನಿಂದ ನಿತ್ಯ 50 ರೂಪಾಯಿ ಆದಾಯ. ಹೀಗೆ ಉಪಕಸಬುಗಳಿಂದ ರೂ 10,000 ಆದಾಯ.

ಈ ಮಾದರಿ ರೂಪಿಸಿದ್ದು ಮೂರು ವರ್ಷಗಳ ಹಿಂದೆ. ಇಂದು ಅದರ ಸ್ಪಷ್ಟ ಫಲಿತಾಂಶ ಕಾಣತೊಡಗಿದೆ. ‘ಒಂದೆಕರೆಯಲ್ಲಿ ಇದನ್ನೆಲ್ಲಾ ಮಾಡೋಕೆ ಸಾಧ್ಯಾನಾ?’ ಅಂತ ಮೂಗು ಮುರಿದವರೇ ಹೆಚ್ಚು. ಇನ್ನು ನೀರಾವರಿ ಇದ್ರೆ ಸಾಧ್ಯವಾಗಬಹುದೇನೋ? ಎಂದು ಶಂಕಿಸಿದವರು ಸಹ ಇದ್ದಾರೆ. ಆದರೆ ಇಲ್ಲಿಗೆ ಬಂದು ನೋಡಿದ ನಂತರ ಮಳೆನೀರಿನ ಆಧಾರದಲ್ಲೇ ಇವೆಲ್ಲವನ್ನೂ ಮಾಡಲು ಸಾಧ್ಯ ಎಂದು ಮೆಚ್ಚುಗೆ ಸೂಚಿಸಿದ್ದಾರೆ.

ರೈತರ ಆತ್ಮಹತ್ಯೆ ಹೆಚ್ಚಾಗಿರುವ ದಿನಗಳಲ್ಲಿ ಇದು ಅವರಲ್ಲಿ ಹೊಸ ಭರವಸೆ ಮೂಡಿಸಬಲ್ಲದೇ? ಎಂದು ಕೇಳಿದಾಗ, ಸಣ್ಣ ರೈತರಿಗೆಂದೇ ರೂಪಿಸಿದ ವಿಧಾನ ಇದು. ಆದರೆ ಆಸಕ್ತಿಯಿಂದ, ಶ್ರಮಪಟ್ಟು ದುಡಿಯಬೇಕಷ್ಟೇ. ಈ ಮಾದರಿಯಲ್ಲಿ ರೈತ ಕೆಲಸ ಮಾಡುತ್ತಿದ್ದರೆ ಬೇರೆ ಯೋಚನೆಗಳಿಗೆ ಸಮಯವೂ ಇರೋದಿಲ್ಲ ಎನ್ನುವ ರುದ್ರಾರಾಧ್ಯ, ಒಂದು ಬೆಳೆ ಕೈಕೊಟ್ಟರೂ ಇನ್ನೊಂದು ಕೈಹಿಡಿಯುತ್ತದೆ. ಇದರಿಂದ ರೈತರು ಲಕ್ಷಾಧೀಶರಾಗಲಿಕ್ಕಿಲ್ಲ. ಆದರೆ ನೆಮ್ಮದಿಯ ಜೀವನವಂತೂ ಖಂಡಿತ ಎನ್ನುತ್ತಾರೆ.

ಇದು ರುದ್ರಾರಾಧ್ಯರ ಸ್ವಂತ ಜಮೀನು ಅಲ್ಲ. ಸರ್ಕಾರಿ ಸಂಶೋಧನಾ ಕೇಂದ್ರದಲ್ಲಿ ಅವರೊಬ್ಬ ಕೃಷಿ ವಿಜ್ಞಾನಿ. ಆದರೆ ಪ್ರಯೋಗಾಲಯದಲ್ಲೇ ಕೂತು ಕೃಷಿತತ್ತ್ವಗಳನ್ನು ರೂಪಿಸುವ ಬದಲು ನೇರವಾಗಿ ‘ಮಾಡಿ ತೋರಿಸಲು’ ಹೊರಟ ಅಪರೂಪದ ವಿಜ್ಞಾನಿ. ಕೃಷಿ ಸಂಶೋಧನಾ ಕೇಂದ್ರಗಳು ರೈತರಿಂದ ಸಾಕಷ್ಟು ದೂರ ಎಂಬ ಮಾತನ್ನು ರುದ್ರಾರಾಧ್ಯ ಹುಸಿಮಾಡಿ ತೋರಿಸುತ್ತಿದ್ದಾರೆ. ಅವರ ಸಾಧನೆ ಅನೇಕ ಜನರನ್ನು ಆಕರ್ಷಿಸಿದೆ. ನಮ್ಮ ರೈತರು ಇಲ್ಲಿಗೆ ಬಂದು ನೋಡಿ, ಅನುಸರಿಸಿದರೆ ನನ್ನ ಶ್ರಮ ಸಾರ್ಥಕ ಎನ್ನುತ್ತಾರೆ ಅವರು.

(ಕೃಷಿರಂಗ- ಸೆಪ್ಟಂಬರ್ 24, 2003)

ವಿಜ್ಞಾನಿ ಡಾ|| ಎಂ.ರುದ್ರಾರಾಧ್ಯ ಈಗ ಸ್ವಯಂ ನಿವೃತ್ತಿ ತೆಗೆದುಕೊಂಡಿದ್ದು, ಜೆ‌ಎಸ್‌ಎಸ್ ವಿದ್ಯಾಪೀಠ ಅನುಷ್ಠಾನ ಮಾಡುತ್ತಿರುವ ‘ಬೀಜ ಗ್ರಾಮ’ ಯೋಜನೆಯಲ್ಲಿ ಯೋಜನಾ ಸಂಯೋಜಕರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ.  ಒಂದೆಕರೆ ಕೃಷಿ ವಿಧಾನವನ್ನು ಕೈಬಿಡದೇ, ಸುತ್ತೂರು ಮಠದಲ್ಲಿ ಒಂದೆಡೆ ಅಳವಡಿಸುತ್ತಿದ್ದಾರೆ. ಈ ಕುರಿತಂತೆ ಯಾವುದೇ ಮಾಹಿತಿ, ಸಲಹೆ, ಮಾರ್ಗದರ್ಶನ ನೀಡಲು ಅವರು ಸದಾ ಸಿದ್ಧ.  ಮೊಬೈಲ್: 94481 45228