ಆಧುನಿಕ ಕೃಷಿಯ ಮಧ್ಯೆ ಸಾಂಪ್ರದಾಯಿಕ ಕೃಷಿಯನ್ನು ಹಲವರು ಇನ್ನೂ ಕೈಬಿಟ್ಟಿಲ್ಲ. ಆದರೆ ಸಹಜ ಕೃಷಿ ಮಾಡುತ್ತಿರುವವರು ಅತಿ ವಿರಳ. ಮಾರುಗೊಂಡನಹಳ್ಳಿಯ ಸದಾಶಿವಪ್ಪ ಅವರಲ್ಲಿ ಒಬ್ಬರು.

ಒಂದೊಮ್ಮೆ ಬೆಳೆಗೆ ರಾಸಾಯನಿಕಗಳ ಅಭಿಷೇಕ ಮಾಡುತ್ತ್ದಿದ ಇವರು ಈಗ ಅದಕ್ಕೆಲ್ಲ ತಿಲಾಂಜಲಿ ನೀಡ್ದಿದಾರೆ.

ಸುಮ್ಮನೇ ಇರು ಎಂಬ ಕೃಷಿ‌ಋಷಿ ಮಸನೊಬು ಫುಕುವೊಕ ಅವರ ತತ್ವ ಇಲ್ಲಿ ಸಾಕಾರಗೊಂಡಿದೆ.

 

ಬಯಲುಸೀಮೆಯ ಬಿಸಿಲಿನ ಮಧ್ಯೆ ಇದೊಂದು ಮಲೆನಾಡಿನ ತುಣುಕು. ಕಟ್ಟಿಗೆಯ ದ್ವಾರ ಪಕ್ಕಕ್ಕಿಟ್ಟು ಒಳಗೆ ಹೋದರೆ ನೂರೆಂಟು ಬಗೆಯ ಗಿಡ-ಮರ-ಬಳ್ಳಿ-ಪೊದೆಗಳ ಮಧ್ಯೆ ತಾಂಬೂಲ ಜಗಿಯುತ್ತ ತಿರುಗಾಡುತ್ತಿರುವ ಸದಾಶಿವಪ್ಪ ಕಾಣುತ್ತಾರೆ. ಇವರ ತೋಟದ ಆಚೆ ನೋಡಿದರೆ ಒಣಗಿ ನಿಂತ ತೆಂಗಿನ ಮರ; ಏನೂ ಬೆಳೆದಿರದ ನೆಲ. ಹತ್ತಾರು ಅಡಿ ದೂರದಲ್ಲೇ ಈ ವ್ಯತ್ಯಾಸ ಸ್ಪಷ್ಟವಾಗಿ ಗೋಚರಿಸುತ್ತದೆ. ‘ಇದಕ್ಕೆಲ್ಲ ಕಾರಣ ಶೂನ್ಯ ಕೃಷಿ’ ಎನ್ನುತ್ತಾರೆ ಅವರು. ಜಪಾನಿನ ಫುಕುವೊಕ ಕಳೆದ ಐದು ದಶಕದಿಂದ ಅನುಸರಿಸುತ್ತಿರುವ ಅದ್ವಿತೀಯ ಪದ್ಧತಿಯನ್ನೇ ಇಲ್ಲಿನ ಬರಡು ಜಮೀನಿಗೆ ಅಳವಡಿಸಿ ಯಶಸ್ಸು ಕಂಡವರು. ರಾಜ್ಯದಲ್ಲಿ ಹುಡುಕಿದರೆ ಈ ವಿಧಾನ ಅನುಸರಿಸುವ ಕೇವಲ ಬೆರಳೆಣಿಕೆಯಷ್ಟು ರೈತರು ಸಿಗಬಹುದಷ್ಟೇ.

ಇವರಿಗೆ ದೊರೆತ ಬಿರುದು ‘ತರಕಾರಿ ಸದಾಶಿವಯ್ಯ’ ಅಂತ. ತರಕಾರಿ ಬೆಳೆದು, ತುಮಕೂರು ಜಿಲ್ಲೆಯ ಮೂರು ತಾಲ್ಲೂಕಿಗೆ ಸರಬರಾಜು ಮಾಡುತ್ತಿದ್ದರು. ಈ ಪ್ರದೇಶಕ್ಕೆ ವಿವಿಧ ತರಕಾರಿ ಪರಿಚಯಿಸಿದ್ದು ಇವರೇ. ಅಷ್ಟೆಲ್ಲ ಬೆಳೆಯಲು ಕಷ್ಟಪಟ್ಟ ಸದಾಶಿವಯ್ಯ ಈಗ ಸಹಜ ಕೃಷಿಯ ಪ್ರತಿಪಾದಕ. ಈ ಪರಿವರ್ತನೆ ಹೇಗೆ?

‘‘ನನ್ನ ಕೈಬೆರಳು ನೋಡಿ…’’ ಎಂದು ತೋರಿಸುತ್ತಾರೆ ಅವರು. ತರಕಾರಿ ಬೆಳೆಯಲ್ಲಿ ಬೀಜಬಿತ್ತನೆಯಿಂದ ಹಿಡಿದು, ಸಂಗ್ರಹಿಸಿ, ರವಾನಿಸುವ ತನಕ ರಾಸಾಯನಿಕಗಳ ಬಳಕೆ. ವಿವಿಧ ಕ್ರಿಮಿನಾಶಕ ಸಿಂಪಡಿಸುವಾಗ ಸ್ಪ್ರೇಯರ್‌ನಿಂದ ಕೀಟನಾಶಕ ಸೋರಿ ಬೆರಳುಸಂದಿಯೆಲ್ಲ ಬೆಳ್ಳಗಾಗಿವೆ; ಸುಟ್ಟುಹೋಗಿವೆ. ನಾಳೆ ದೇಹಕ್ಕೆ ಹೀಗಾದರೆ ಹೇಗೆ? ಎಂಬ ಆತಂಕದಿಂದ ಹುಡುಕಿದಾಗ ಸಿಕ್ಕಿದ್ದು ಸಾವಯವ ಕೃಷಿ.

1992ರಲ್ಲಿ ಈ ಪದ್ಧತಿಯತ್ತ ಹೊರಳಿದ ಸದಾಶಿವಯ್ಯ, ನಾಲ್ಕು ವರ್ಷಗಳ ಬಳಿಕ ಸಹಜ ಕೃಷಿ ಅನುಸರಿಸಲು ಮುಂದಾದರು. ತಿಪಟೂರು ತಾಲ್ಲೂಕಿನ ಮಾರುಗೊಂಡನಹಳ್ಳಿ ಎಂಬ ಪುಟ್ಟ ಗ್ರಾಮದಲ್ಲಿರುವ ಈ ಕೃಷಿಕನ ಸಾಧನೆ ನೋಡಲು ರಾಜ್ಯದ ವಿವಿಧೆಡೆಯಿಂದ ಜನರು ಬರುತ್ತಾರೆ. ಕೇವಲ ತೆಂಗನ್ನೇ ಗಟ್ಟಿಯಾಗಿ ಹಿಡಿದ ಪ್ರದೇಶದಲ್ಲಿ, ಇವರ ತೋಟ ಎಲ್ಲಕ್ಕಿಂತ ಭಿನ್ನ. ‘ಯಾವುದೇ ಬೆಳೆ ಬೆಳೆದರೂ ಅದನ್ನು ಅಲ್ಲೇ ಬಿಡಬೇಕು. ಅದೇ ಸತ್ತು ಒಳ್ಳೇ ಗೊಬ್ಬರವಾಗುತ್ತದೆ. ಅದೂ ಬಿಟ್ಟು ಎಲ್ಲರೂ ಮಾಡ್ತಾರೆ ಅಂತ ಕಳೆ ತೆಗೆಯೋದು, ಸುಡೋದು, ಉಳುಮೆ ಮಾಡೋದು, ಎಲ್ಲಿಂದಲೋ ತಂದು ಗೊಬ್ಬರ ಹಾಕೋದು..’ ಎಂದು ಸದಾಶಿವಪ್ಪ ಕೋಪಗೊಳ್ಳುತ್ತಾರೆ.

ಬಹುಮಹಡಿ ಪದ್ಧತಿ

ಸದಾಶಿವಪ್ಪ ಅವರ ಗೆಲುವು ಕಾಣುವುದು ಅವರ ಹೊಸ-ಹೊಸ ಸಂಶೋಧನೆಯಲ್ಲಿ. ಅಡಿಕೆ, ತೆಂಗು, ವೆನಿಲ್ಲಾ, ಕಾಫಿ, ಬಾಳೆ, ಮೆಣಸು, ಶುಂಠಿ, ಅರಿಷಿಣ, ಏಲಕ್ಕಿ, ಕೋಕೊ, ವೀಳ್ಯದೆಲೆ- ಇದೆಲ್ಲ ಇರುವುದು ಕೇವಲ ಎರಡೂಕಾಲು ಎಕರೆಯಲ್ಲಿ. ‘ಐದೆಕೆರೆಯಲ್ಲಿ ಬೆಳೆಯೋದನ್ನು ಒಂದೆಕೆರೆಯಲ್ಲಿ ಬೆಳೆಯಬೇಕು’ ಎಂಬ ಪ್ರಯತ್ನದೊಂದಿಗೆ ಹೊರಟಾಗ ಕಂಡಿದ್ದು ಈ ಬಹುಮಹಡಿ ಪದ್ಧತಿ.

ಇನ್ನೊಂದೆಡೆ ಇರುವ ಒಂದು ಎಕರೆ ಜಮೀನನ್ನು ಬಂಜರುಗುಡ್ಡ ಎನ್ನುತ್ತಿದ್ದರು. ಇಲ್ಲೀಗ ಬೆಳೆದು ನಿಂತ ಗಿಡ-ಮರ ನೋಡಿದರೆ ಈ ಮಾತು ನಂಬಲಿಕ್ಕೇ ಆಗದು. ‘‘ಸುಮ್ನೆ ಒಂದು ಗಿಡ ಹಾಕಿದ್ರೆ ಅದು ಬೇಸಾಯ ಅನ್ಸಲ್ಲ’’ ಎಂದು ಆಕ್ಷೇಪಿಸುತ್ತ ಅವರು ಇಲ್ಲಿರುವ ವೈವಿಧ್ಯಮಯ ಗಿಡಗಳ ಪಟ್ಟಿ ಮಾಡುತ್ತಾರೆ. ನಾಲ್ಕು ತೆಂಗಿನ ಮಧ್ಯೆ ಒಂದು ಹಣ್ಣಿನ ಮರ. ಎರಡು ಸಾಲುಗಳ ಮಧ್ಯೆ ನಿಂಬೆ, ಸಪೋಟ, ಮೂಸಂಬಿ, ಹಲಸು. ಬೇಲಿಯ ಅಂಚಿನಲ್ಲಿ ಹುಣಸೆ, ಬೇವು, ಮಾವು, ನೇರಳೆ, ಸಂಪಿಗೆ. ಒಂದೊಂದು ತೆಂಗಿನಕಾಯಿ ಗಾತ್ರ ಅಚ್ಚರಿ ಮೂಡಿಸುವಂತಿವೆ. ‘ತೆಂಗಿಗೆ ನುಸಿಪೀಡೆ ಬಂದಾಗ ಏನು ಮಾಡಿದಿರಿ?’ ಎಂದು ಪ್ರಶ್ನಿಸಿದರೆ, ‘‘ಅದು ನಿಸರ್ಗದಿಂದ ಬಂದಿದ್ದು, ಮರಗಳ ಪ್ರತಿರೋಧಕ ಶಕ್ತಿಯಿಂದಲೇ ಹೋಗಬೇಕು. ಅದೆಲ್ಲ ಮರೆತು ನಮ್ಮ ವಿಜ್ಞಾನಿ, ಅಧಿಕಾರಿಗಳು ಚಿಕ್ಕ ಹುಳದ ಮುಂದೆ ತಲೆಕೆಳಗಾಗಿ ಸರ್ಕಸ್ ಮಾಡಿದ್ರು! ಆದರೇನು, ಅದು ಕಡಿಮೆಯಾಯ್ತೇ?’’ ಎಂದು ಮರುಪ್ರಶ್ನಿಸುತ್ತಾರೆ.

ಇನ್ನು ನಿಂಬೆಯ ಗಿಡಗಳದ್ದೂ ಒಂದು ಲೋಕ. ಸುಹಾಸಿನಿ, ಮೂಗುನಿಂಬೆ, ಗಜನಿಂಬೆ ಸೇರಿದಂತೆ ಅಪರೂಪದ ಹತ್ತು ತಳಿಗಳ 125 ಗಿಡಗಳು ಇವರ ‘ಸಂಗ್ರಹ’ದಲ್ಲಿವೆ. ‘‘ಎಲ್ಲ ಕಣ್ಮರೆಯಾಗ್ತಿದ್ವೋ ಏನೋ? ರೈತರನ್ನು ಕಾಡಿಬೇಡಿ ತಂದು ಇಲ್ಲಿ ಬೆಳಿಸಿದ್ದೇನೆ’’ ಎನ್ನುತ್ತ ತೆಂಗಿನ ಗಾತ್ರದ ಹಣ್ಣು ಕಿತ್ತು  ಕೈಯಲ್ಲಿಟ್ಟು, ‘ಇದು ಕುಂಬಳ ನಿಂಬೆ’ ಎಂದು ಮತ್ತೊಮ್ಮೆ ಅಚ್ಚರಿ ಮೂಡಿಸುತ್ತಾರೆ.

‘ಬೇಸಾಯದ ಖರ್ಚು ಹೆಚ್ಚಿರಬಾರದು. ಎಷ್ಟೇ ವೆಚ್ಚವಾದರೂ ಅದು ಹೊಲದ ಆದಾಯದಿಂದಲೇ ಆಗಬೇಕು’ ಎನ್ನುವ ಸದಾಶಿವಯ್ಯ, ಮೇವಿಗಾಗಿ ವಿವಿಧ ಬಗೆಯ ಹುಲ್ಲು, ಗ್ಲಿರಿಸೀಡಿಯಾ, ಸೀಮೆತಂಗಡಿ ಬೆಳೆಸಿದ್ದಾರೆ. ತಮ್ಮ ಕೆಲಸಗಳ ಮಧ್ಯೆಯೇ ಇಳುವರಿ, ಲಾಭ-ನಷ್ಟ ಎಲ್ಲವನ್ನೂ ವ್ಯವಸ್ಥಿತವಾಗಿ ದಾಖಲಿಸುವುದು ಇವರ ಹವ್ಯಾಸ. ‘‘ಇದರಿಂದ ಮುಂದಿನ ಕೃಷಿಕೆಲಸಕ್ಕೆ ಸಹಾಯವಾಗುತ್ತದೆ ಹಾಗೂ ನನ್ನ ವಿಧಾನದ ಬಗ್ಗೆ ಇದರಿಂದ ಇತರ ರೈತರಲ್ಲಿ ನಂಬಿಕೆಯನ್ನೂ ಮೂಡಿಸಬಹುದು’’ ಎಂದು ನುಡಿಯುತ್ತಾರೆ.

ಸಾವಯವ ಕೃಷಿಯಲ್ಲಿ ಯಶಸ್ಸು ಕಂಡವರು ಸಾಕಷ್ಟು ಮಂದಿ. ಆದರೆ ಸಹಜ ಕೃಷಿಯತ್ತ ಹೊರಳುವ ಸಾಹಸ ಮಾಡಿದವರು ತೀರಾ ಕಡಿಮೆ. ‘ಇಲ್ಲೇ ಸಿಗುವ ವಸ್ತು ಬಳಸಬೇಕು. ಆದರೆ ಹಾಗೆಂದು ನಿಸರ್ಗಕ್ಕೆ ಕನ್ನ ಹಾಕಬಾರದು. ನಾವು ಅದಕ್ಕೆ ಸಹಕಾರ ಮಾಡಿದರೆ, ಅದು ನಮಗೆ ಹತ್ತರಷ್ಟು ಲಾಭ ಕೊಡುತ್ತದೆ’ ಎಂದು ಸದಾಶಿವಯ್ಯ ಪುನರುಚ್ಚರಿಸುತ್ತಾರೆ.

ಹತ್ತು ವರ್ಷಗಳ ಕಾಲ ಕಟ್ಟುನಿಟ್ಟಾಗಿ ಅಳವಡಿಸಿಕೊಂಡು ಬಂದ ಅವರ ಅನುಭವದ ಮಾತು ಅದು.

(ಕೃಷಿರಂಗ- ಜುಲೈ 27, 2005)