ಕೃಷಿ ಕ್ಷೇತ್ರ ಮತ್ತು ರೈತರ ಬೇಸಾಯ ಪದ್ಧತಿ ಬಗ್ಗೆ ಅಧ್ಯಯನ ಮಾಡುವ ಉದ್ದೇಶದಿಂದ ಭಾರತಕ್ಕೆ ಭೇಟಿ ನೀಡಿದ್ದ ‘ಫಿಲಿಪೈನ್ಸ್ ಡೆವಲಪ್‌ಮೆಂಟ್ ಅಸಿಸ್ಟೆನ್ಸ್ ಪ್ರೋಗ್ರಾಮ್’(ಪಿಡಿ‌ಎಪಿ)ನ ಕಾರ್ಯಕಾರಿ ನಿರ್ದೇಶಕ ರೋಯಲ್ ಆರ್. ರವನೇರ ಕರ್ನಾಟಕದ ವಿವಿಧೆಡೆ ಪ್ರವಾಸ ಕೈಗೊಂಡರು. ಏಷ್ಯಾ ಸ್ವಯಂಸೇವಾ ಸಂಸ್ಥೆಗಳ ಒಕ್ಕೂಟದ ಪ್ರತಿನಿಧಿ ಮತ್ತು ಸ್ವತಃ ಸಾವಯವ ಕೃಷಿಕ ರೋಯಲ್, ಕರ್ನಾಟಕದಲ್ಲಿ ಸುಸ್ಥಿರ ಕೃಷಿಯ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯ ಹೆಚ್ಚಾಗಬೇಕಿದೆ ಎನ್ನುತ್ತಾರೆ. ಬೆಂಗಳೂರಿನಲ್ಲಿ ನಡೆದ ‘ಸಾವಯವ ಸಂಭ್ರಮ’ ಕಮ್ಮಟದಲ್ಲಿ ಪಾಲ್ಗೊಂಡ    ರೋಯಲ್ ಜತೆ ಒಂದು ಸಂವಾದ ಇಲ್ಲಿದೆ.

* ಭಾರತಕ್ಕೆ ಹಸಿರು ಕ್ರಾಂತಿ ಅನಿವಾರ್ಯವಾಗಿತ್ತೇ?

ಈ ಪ್ರಶ್ನೆಗೆ ಉತ್ತರಿಸುವ ಮುನ್ನ 50ರ ದಶಕದ ಸ್ಥಿತಿ ಗಮನಿಸೋಣ. ಆಗ ಆಹಾರಕ್ಕೆ ಎಲ್ಲೆಲ್ಲೂ ಅಭಾವ. ಅಧಿಕ ಉತ್ಪಾದನೆ ಉದ್ದೇಶದಿಂದ ಸರ್ಕಾರ ‘ಹಸಿರು ಕ್ರಾಂತಿ’ಗೆ ಚಾಲನೆ ನೀಡಿತು. ಅದೇ ಹೆಸರಿನಲ್ಲಿ ವಿವಿಧ ಉಗ್ರ ರಾಸಾಯನಿಕಗಳು ಇಲ್ಲಿಗೆ ಕಾಲಿಟ್ಟವು. ಹೌದು, ಅದೆಲ್ಲದರಿಂದ ಉತ್ಪಾದನೆ ಹೆಚ್ಚಾಯಿತು. ಇವತ್ತು ಆರ್ಥಿಕ ಮತ್ತು ಆಹಾರ ಉತ್ಪಾದನಾ ಮಟ್ಟ ಸ್ತಿಮಿತಕ್ಕೆ ಬಂದಿದೆ. ಅಂದಿನ ಪರಿಸ್ಥಿತಿ ಗಮನಿಸಿದಾಗ ಕೆಲವರು ‘ಹಸಿರು ಕ್ರಾಂತಿ ಅನಿವಾರ್ಯವಾಗಿತ್ತು’ ಎನ್ನಬಹುದಾದರೂ, ರೈತ ಶೋಷಣೆಗೆ ಈಡಾಗಲು ಪ್ರಾರಂಭವಾಗಿದ್ದು ಅದೇ ಕ್ರಾಂತಿಯ ಪ್ರತಿಫಲ ಎಂಬುದನ್ನು ಗಮನಿಸಬೇಕಷ್ಟೇ.

* ಆದರೆ ಅದರಿಂದ ಆಹಾರ ಉತ್ಪಾದನೆ ಅಧಿಕವಾಯಿತಲ್ಲ?

– ಹಾಗೆ ಪಡೆದ ಲಾಭವನ್ನು ವೈದ್ಯರಿಗೆ ಸುರಿಯುತ್ತಿದ್ದೇವಲ್ಲ?! ಅಪಾರ ಪ್ರಮಾಣದ ಆಹಾರ ಉತ್ಪಾದಿಸಿದರೂ ಅದರಲ್ಲಿರುವ ಅಪಾಯಕಾರಿ ವಿಷಗಳ ಮಟ್ಟ ಗಮನಿಸಿದಾಗ ಭಯವಾಗುತ್ತದೆ. ಇದು ನಿಲ್ಲಲೇಬೇಕು. ರಾಸಾಯನಿಕಗಳ ಬದಲಾಗಿ ಬೇರೆ  ವಿಧಾನದಿಂದ ಅಷ್ಟೇ ಪ್ರಮಾಣದ ಆರೋಗ್ಯಯುತ ಆಹಾರವನ್ನು ಉತ್ಪಾದಿಸಬೇಕು. ಅದು ಸಾವಯವ ಕೃಷಿಯಿಂದ ಖಂಡಿತ ಸಾಧ್ಯ.

* ಈ ಪದ್ಧತಿ ಬಗ್ಗೆ ನಿಮ್ಮ ಅನುಭವವೇನು?

– ಸಾವಯವ ಕೃಷಿ ಸುಲಭ ಅಥವಾ ಅಲ್ಪ ಕೆಲಸವೆಂದೇ ಬಹುತೇಕ ಜನರು ತಿಳಿದ್ದಿದಾರೆ. ಕೇವಲ ನೀರು-ಗೊಬ್ಬರ ಹಾಕಿಬಿಟ್ಟರೆ ಅದು ಸಾವಯವ ಕೃಷಿ ಅಲ್ಲ. ಅದಕ್ಕಾಗಿ ದಿನದ 24 ತಾಸೂ ಶ್ರಮಿಸಬೇಕು. ಇಲ್ಲಿ ನೆಲದ ಜತೆ ಸಂಭಾಷಿಸಬೇಕು; ಪ್ರತಿ ಸಸ್ಯದ ಜತೆ ಸಂವಾದಿಸಬೇಕು.

* ಕರ್ನಾಟಕದಲ್ಲಿ ವಿವಿಧೆಡೆ ಪ್ರವಾಸ ಕೈಗೊಂಡ್ದಿದೀರಿ. ನಿಮ್ಮ ಅನಿಸಿಕೆ?

– ಇಲ್ಲಿ ಸಾಕಷ್ಟು ಜನರು ಬಡತನ ರೇಖೆಗಿಂತ ಕೆಳಗಿದ್ದಾರೆ. ಅವರಲ್ಲಿ ಸಾಕಷ್ಟು ಜನರಿಗೆ ಕೃಷಿಭೂಮಿಯೂ ಇದೆ. ಸಮಸ್ಯೆ ಎಂದರೆ ಅವರ ಕೃಷಿ ಪದ್ಧತಿ. ರೈತ ತನ್ನ ಕುಟುಂಬಕ್ಕೆ ಅಗತ್ಯವಾದ ಆಹಾರವನ್ನು ತಾನೇ ಬೆಳೆದುಕೊಳ್ಳಬೇಕು. ಒಂದೇ ಬೆಳೆ(ಮೊನೊ ಕ್ರಾಪಿಂಗ್)ಯಿಂದ ಆತನ ಸಮಸ್ಯೆ ಜಾಸ್ತಿಯೇ ಹೊರತೂ ಅಭಿವೃದ್ಧಿ ಅಸಾಧ್ಯ.

* ಕೃಷಿಕನನ್ನು ಆಕರ್ಷಿಸುವ ಹೊಸ-ಹೊಸ ಯೋಜನೆ, ಬೆಳೆ ಮಾರುಕಟ್ಟೆಗೆ ಬರುತ್ತಲೇ ಇವೆ. ಆತನ ನಿರ್ಧಾರ ಹೇಗಿರಬೇಕು?

– ಕರ್ನಾಟಕದ ಮಟ್ಟಿಗೆ ಹೇಳಬೇಕೆಂದರೆ- ವೆನಿಲ್ಲಾ ತೆಗೆದುಕೊಳ್ಳಿ. ಕಾಫಿ, ತೆಂಗು, ಅಡಿಕೆ… ಹೀಗೆ ತೋಟದಲ್ಲಿ ಇದ್ದ ಏನೇನೋ ಬೆಳೆಗಳನ್ನು ಕಡೆಗಣಿಸಿ ವೆನಿಲ್ಲಾ ನೆಟ್ಟರು. ಮೂರು ವರ್ಷಗಳ ಪೋಷಣೆ, ಪರಾಗ ಸ್ಪರ್ಶ, ಸಂಸ್ಕರಣೆ ಮತ್ತಿತರ ಸಂಕೀರ್ಣ ವಿಧಾನಗಳಿಂದ ವೆನಿಲ್ಲಾ ಬೀನ್ಸ್ ಸಿಕ್ಕಾಗ ದರ ಸಾವಿರಾರು ರೂಪಾಯಿಗಳಿಂದ 350ಕ್ಕೆ ಇಳಿದಿರುತ್ತದೆ. ಆಗ ಆತನ ಪಾಡು…?

ಯಾವುದೇ ಹೊಸಬೆಳೆ ಕಾಲಿಟ್ಟಾಗ ಮೊದಲಿಗೆ ಅದರ ಪೂರ್ವಾಪರ, ಲಾಭ-ನಷ್ಟ, ಪರಿಣಾಮ ಗಮನಿಸಿ. ಸೂಕ್ತವೆನಿಸಿದರೆ ಮಾತ್ರ ಬೆಳೆಯಲು ಮುಂದಾಗಿ.

* ಗ್ರಾಮೀಣ ಪ್ರದೇಶದಲ್ಲಿನ ಸಾಂಪ್ರದಾಯಿಕ ಜ್ಞಾನವನ್ನು ಹೈಜಾಕ್ ಮಾಡಲಾಗುತ್ತಿದೆ. ಅಥವಾ ಅದನ್ನು ವಿದೇಶಿ ಕಂಪೆನಿಗಳು ತಮ್ಮದಾಗಿಸಿಕೊಳ್ಳುತ್ತಿವೆ. ಇದಕ್ಕೆ ತಡೆ ಹೇಗೆ?

– ಇದೂ ಕೊಂಚ ಸಂಕೀರ್ಣ ವಿಷಯವೇ. ನನ್ನ ಹಿತ್ತಲಲ್ಲಿ ಬೆಳೆದ ಸಸ್ಯವನ್ನು ನಾನು ಪೇಟೆಂಟ್ ಮಾಡಿಸಿಕೊಳ್ಳುವ ಮುನ್ನವೇ, ಬಹುರಾಷ್ಟ್ರೀಯ ಕಂಪೆನಿಯೊಂದು ಹಣಬಲದಿಂದ  ಪೇಟೆಂಟ್ ಮಾಡಿಕೊಂಡುಬಿಡುತ್ತದೆ. ಇದು ತಪ್ಪಬೇಕು. ಬಾಸುಮತಿ ಅಕ್ಕಿಯನ್ನು ಇಲ್ಲಿನ ಹಿರಿಯರು ಬಾಲ್ಯದಲ್ಲಿ ಸವಿದವರು. ಈಗ ಅಮೆರಿಕ ಅದರ ಪೇಟೆಂಟ್ ಪಡೆದಿದೆ. ಅದನ್ನು ಬಿತ್ತಲು ಬೀಜ ಬೇಕೆಂದರೂ ಅಮೆರಿಕವನ್ನೇ ಕೇಳಿ ತರಬೇಕು. ಎಂಥ ದುರಂತ!

* ಸಾವಯವ ಕೃಷಿಗೆ ಉತ್ತೇಜನ ನೀಡುವ ಬಗೆ ಹೇಗೆ?

– ನಮ್ಮ ದೇಶದಲ್ಲಿ (ಫಿಲಿಪೈನ್ಸ್) ಸರ್ಕಾರ ಈ ಪದ್ಧತಿಗೆ ಸಾಕಷ್ಟು ಪ್ರೋತ್ಸಾಹ ನೀಡುತ್ತಿದೆ. ಕರ್ನಾಟಕ ಸರ್ಕಾರವೂ ಈಗ ನೀತಿಯೊಂದನ್ನು ಜಾರಿಗೆ ತಂದಿರುವುದು ಶ್ಲಾಘನೀಯ. ಇದೆಲ್ಲಕ್ಕಿಂತ ಮುಖ್ಯವಾಗಿ ಜೀವವೈವಿಧ್ಯದ ಮಹತ್ವವನ್ನು ರೈತರಿಗೆ ತಿಳಿಸಿಕೊಟ್ಟರೆ ಸಾಕು.

ಇಲ್ಲಿ ಮರಗಳಿಂದ ಜೀವದ್ರವ್ಯ- ಜೀವದ್ರವ್ಯದಿಂದ ಗೊಬ್ಬರ- ಗೊಬ್ಬರ ಬಳಕೆಯಿಂದ ನೀರಿನ ಮಿತವ್ಯಯ ಮತ್ತು ಸಂರಕ್ಷಣೆ ಹೀಗೆ ಸರಣಿ ಸಾಗುತ್ತದೆ. ಇದೇ ಸುಸ್ಥಿರ ಕೃಷಿ ಪದ್ಧತಿ. ಆಧುನಿಕ ಕೃಷಿಯ ಹೆಸರಿನಲ್ಲಿ ಈವರೆಗೆ ನಾವೆಲ್ಲರೂ ತಪ್ಪು ಮಾಡ್ದಿದೇವೆ. ಅದಕ್ಕೆ ಪ್ರಾಯಶ್ಚಿತ್ತವೆಂದರೆ ಮಣ್ಣು ಮತ್ತು ನೀರಿನ ಸಂರಕ್ಷಣೆ. ಇದರ ಜತೆಗೆ ಸಾವಯವ ಕೃಷಿಯಿಂದ ಆಗುವ ಲಾಭಗಳ ಬಗ್ಗೆ ರೈತ ಸಂಘಟನೆಗಳು ಸಾಮಾನ್ಯ ಕೃಷಿಕನಿಗೆ ಮಾಹಿತಿ ನೀಡಬೇಕು.

* ರಾಸಾಯನಿಕಮುಕ್ತ ಆಹಾರ ಪದಾರ್ಥಗಳ ಮಾರುಕಟ್ಟೆ ಹೇಗೆ?

– ಇತ್ತೀಚೆಗೆ ದೊಡ್ಡ ಕಂಪೆನಿಗಳೇ ಈ ರಂಗಕ್ಕೆ ಇಳಿಯುವುದರಿಂದ ರೈತರಿಗೆ ತೊಂದರೆಯಾಗುತ್ತಿದೆ. ಇದಕ್ಕಾಗಿ ಒಂದು ಪ್ರದೇಶದ ಕೆಲವು ರೈತರು ಸೇರಿಕೊಂಡು ತಮ್ಮದೇ ಆದ ಪ್ರಾಂತೀಯ ಮಾರುಕಟ್ಟೆ ರೂಪಿಸಿಕೊಳ್ಳಬೇಕು. ತನ್ನ ಉತ್ಪನ್ನದ ಬೆಲೆಯನ್ನು ರೈತ ತಾನೇ ನಿಗದಿ ಮಾಡಬೇಕು. ಗ್ರಾಹಕ ಅಲ್ಲಿಗೇ ಬಂದು ಖರೀದಿಸುವಂತಿರಬೇಕು.

ನಾನು ಗಮನಿಸಿದ ಹಾಗೆ, ಇಲ್ಲಿನ ‘ಸಹಜ ಸಮೃದ್ಧ’ ಸಾವಯವ ಕೃಷಿಕರ ಬಳಗವು ಈ ನಿಟ್ಟಿನಲ್ಲಿ ಸಾಕಷ್ಟು ಯಶಸ್ವಿಯಾಗಿದೆ. ಸುಸ್ಥಿರ ಕೃಷಿಗೆ ಉತ್ತೇಜನ ನೀಡುವ ಜತೆಗೆ, ತನ್ನದೇ ಆದ ‘ಸಾವಯವ ಸಿರಿ’ ಎಂಬ ಪ್ರತ್ಯೇಕ ಮಾರುಕಟ್ಟೆ ರೂಪಿಸಿಕೊಂಡಿರುವುದು ದೊಡ್ಡ ಸಾಧನೆ.

* ಭಾರತದಲ್ಲಿನ ಕೃಷಿಕನ ಒಟ್ಟಾರೆ ಸ್ಥಿತಿ-ಗತಿ?

– ತಾನು ಬೆಳೆದ ಉತ್ಪನ್ನವನ್ನು ರೈತ ಇನ್ನೊಬ್ಬರು ಹೇಳಿದ ಬೆಲೆಗೆ ಮಾರುತ್ತಾನೆ. ನಂತರ ತನಗೆ ಬೇಕಾದ ಉತ್ಪನ್ನಗಳನ್ನು ಅವರು ಹೇಳಿದ ಬೆಲೆಗೇ ಖರೀದಿಸುತ್ತಾನೆ. ಎಂಥ ವಿಪರ್ಯಾಸದ ಸಂಗತಿ ಅಲ್ಲವೇ? ಇದನ್ನು ತಪ್ಪಿಸಲು ಬಹುಬೆಳೆ ಪದ್ಧತಿ ಅನುಸರಿಸಿ, ತನ್ನ ಕುಟುಂಬದ ಅಗತ್ಯ ತಾನೇ ಪೂರೈಸಿಕೊಳ್ಳಬೇಕು. ಹೊರಗಿನಿಂದ ಪದಾರ್ಥ ತರುವ ಸಂದರ್ಭ ತೀರಾ ಕಡಿಮೆಯಾಗಬೇಕು. ಸದ್ಯ ದಿಕ್ಕುಗೆಟ್ಟಿರುವ ಆತನಿಗೆ ಸಾವಯವ ಕೃಷಿ ಮಾತ್ರ ದಾರಿ ತೋರಬಲ್ಲದು.

(ಕೃಷಿರಂಗ- ಫೆಬ್ರವರಿ 2, 2005)