ಸಾವಯವ ಕೃಷಿ, ನಿಸರ್ಗಕ್ಕೆ ಹಿಂತಿರುಗುವ ಒಂದು ಆಂದೋಲನ.

– ಮಾಕಚಿ ಬಕಡಾ

ಜಪಾನಿನ ತತ್ತ್ವಜ್ಞಾನಿ

 

‘ಹಸಿರು ಕ್ರಾಂತಿ’ಯ ಚಕ್ರ ಇಷ್ಟು ಬೇಗ ದಣಿದೀತು ಎಂದು ಯಾರೂ ಎಣಿಸಿರಲಿಲ್ಲ. 1970-80ರ ದಶಕದಲ್ಲಿ ಭರ್ಜರಿ ವೇಗದಲ್ಲಿ ತಿರುಗಲು ಆರಂಭಿಸಿದ ಈ ಚಕ್ರ, ಕೇವಲ ಭ್ರಮೆಗಳನ್ನೇ ಪೋಣಿಸುತ್ತ, ರೈತನ ಮಡಿಲಿಗೆ ಕನಸುಗಳ ಮೂಟೆಯನ್ನು ಕೊಟ್ಟಿತೇ ಹೊರತೂ ಸಂತಸ-ನೆಮ್ಮದಿಯ ಬಾಳನ್ನಲ್ಲ. ‘ಅತ್ಯಧಿಕ ಇಳುವರಿ- ರೈತನಿಗೆ ಲಾಭ’ ಎಂಬ ತುತ್ತೂರಿ ಜತೆಗೆ ವಿಜ್ಞಾನಿಗಳ ಬೃಹತ್ ದಂಡು ಕೃಷಿ ಕ್ಷೇತ್ರ ಪ್ರವೇಶಿಸಿತ್ತು. ಆದರೆ ಇಂದು ವಿಜ್ಞಾನಿಗಳ ಹತಾಶೆ ಮಾತು ಕೇಳಿಯೇ ಸ್ಪಷ್ಟವಾಗುತ್ತಿದೆ; ಹಸಿರು ಕ್ರಾಂತಿ ಕುಸಿದುಬ್ದಿದಿದೆ…!

ನಮ್ಮ ದೇಶಕ್ಕೆ ಇದು ಬೇಕಿತ್ತೇ? ಸ್ವಾತಂತ್ರ್ಯ ಪಡೆದ ಒಂದೆರಡು ದಶಕಗಳಲ್ಲಿ ದೇಶವು ಆಹಾರದ ಕೊರತೆಗೆ ಈಡಾಯಿತು. ಲಕ್ಷಾಂತರ ಹೆಕ್ಟೇರ್ ಭೂಮಿಯನ್ನು ಆಪೋಶನ ತೆಗೆದುಕೊಂಡು ಅಣೆಕಟ್ಟುಗಳು ತಲೆಯೆತ್ತಿ ನಿಂತವು. ನೀರಾವರಿ ಸೌಲಭ್ಯ ಸಿಕ್ಕಿತು. ಅರೆ…! ಆಹಾರದ ಉತ್ಪಾದನೆ ಏರುತ್ತಲೇ ಇಲ್ಲವಲ್ಲ? ಎಂಬ ಚಿಂತೆ ಆಡಳಿತಗಾರರನ್ನು ಕಾಡಿತು. ಅವರು ಕೃಷಿ ತಜ್ಞರತ್ತ ನೋಡಿದರು. ಕೃಷಿತಜ್ಞರು ರಾಸಾಯನಿಕ ಉತ್ಪನ್ನಗಳ ತಯಾರಕರತ್ತ ನೋಡಿದರು… ಮತ್ತು ಈ ತಯಾರಕರು ರೈತರತ್ತ ದೃಷ್ಟಿ ಬೀರಿದರು.

ನಮ್ಮ ದೇಶದಲ್ಲಿ ಸಾವಿರಾರು ವರ್ಷಗಳಿಂದ ನಡೆದುಕೊಂಡು ಬರುತ್ತಿದ್ದ ‘ಕೃಷಿ’ ಎಂಬ ಪರಂಪರಾಗತ ವ್ಯವಸ್ಥೆ ಹಾಳಾಗಲು ಸಮಯ ಕೂಡಿಬಂದಿತ್ತು…

ನಿಮ್ಮ ನೆನಪನ್ನು ಮೂರ್ನಾಲ್ಕು ದಶಕಗಳಷ್ಟು ಹಿಂದಕ್ಕೆ ಓಡಿಸಿ. ಕೃಷಿಯು ಆಗ ಕೇವಲ ನೌಕರಿಯಂತೆ ಜೀವನೋಪಾಯ ಆಗಿರಲಿಲ್ಲ. ಬಿತ್ತನೆಯಿಂದ ಹಿಡಿದು ಕೊಯಿಲಿನವರೆಗೆ ನೇಗಿಲು, ಹೊಲದ ಪೂಜೆ, ರಾಶಿ ಪೂಜೆ, ನವಧಾನ್ಯ ಪೂಜೆ, ಚರಗ ಏನೆಲ್ಲ ಸಂಭ್ರಮ! ಇವೆಲ್ಲವೂ ಬೇಸಾಯ ನಂಬಿ ಬದುಕುತ್ತ್ದಿದ ಭೂತಾಯಿಯ ಮಕ್ಕಳ ಬದುಕಿನ ಒಂದು ಭಾಗವಾಗಿತ್ತು. ನಿಸರ್ಗದೊಂದಿಗೆ ಹೊಂದಿಕೊಂಡು ಮಾಡುತ್ತಿದ್ದ ‘ಸಾವಯವ ಕೃಷಿ’ ಕೇವಲ ಬೇಸಾಯವಲ್ಲ; ಅದೊಂದು ಜೀವನ ಪದ್ಧತಿ. ಇಲ್ಲಿ ಭೂಮಿಗೆ ಹಾನಿ ಮಾಡುವ ಪ್ರಶ್ನೆಯೇ ಇಲ್ಲ. ಶತಮಾನಗಳಿಂದ ನಡೆದುಬರುತ್ತಿದ್ದ ಈ ಅದ್ಭುತ ಸಂಬಂಧ ಒಮ್ಮೆಲೇ ಬದಲಾಗಿದ್ದು ಹೇಗೆ?

ಮತ್ತದೇ ‘ಅಧಿಕ ಇಳುವರಿ’ ಆಸೆಯಿಂದ.

ಈಗ ನಡೆಯುತ್ತಿರುವ ಆಧುನಿಕ ಅಥವಾ ವೈಜ್ಞಾನಿಕ ಅಥವಾ ರಾಸಾಯನಿಕ ಕೃಷಿಗೆ ನಾಂದಿ ಹಾಡಿದ್ದು ಬ್ಯಾರನ್ ಜಸ್ಟಸ್ ವ್ಯಾನ್ ಲೀಬಿಗ್ ಎಂಬ ಸಂಶೋಧಕ. ಈತ ತನ್ನ ಸಂಶೋಧನೆಗೆ ವಿಲಕ್ಷಣ ವಿಧಾನ ಬಳಸಿದ. ಒಂದು ಗಿಡವನ್ನು ಜೀವಂತವಾಗಿರುವಾಗಲೇ ಸುಟ್ಟು, ಅದರ ಬೂದಿಯನ್ನು ಅಭ್ಯಸಿಸಿದ. ಇದರ ಆಧಾರದ ಮೇಲೆ ಪ್ರಬಂಧವೊಂದನ್ನು ಬರೆದು, ‘ಜೀವಂತ ಸಸ್ಯಗಳಿಗೆ ಬೇಕಾದ ಎಲ್ಲ ಖನಿಜಲವಣಗಳೂ ಆ ಗಿಡಗಳ ಬೂದಿಯಲ್ಲಿವೆ’ ಎಂದು ಪ್ರತಿಪಾದಿಸಿದ. ಈ ಲವಣಗಳನ್ನು ಮಣ್ಣಿಗೆ ಸೇರಿಸುವುದರಿಂದ, ಸಸ್ಯಗಳು ಹುಲುಸಾಗಿ ಬೆಳೆಯುತ್ತವೆ ಎಂದು ಪ್ರಕಟಿಸಿದ.

ಅತ್ಯಂತ ಅಸಂಗತ, ಅಪ್ರಬುದ್ಧವಾದ ಈ ಸಂಶೋಧನೆಯು ಸಾವಿರಾರು ವರ್ಷಗಳ ಸುಸ್ಥಿರ ಕೃಷಿಗೆ ಕೊಡಲಿಯೇಟು ಹಾಕಿತು. ಮಣ್ಣು ಎಂದರೆ ಸಸ್ಯಗಳನ್ನು ಬೀಳದಂತೆ ತಡೆಯುವ ಕೇವಲ ಜಡವಸ್ತು ಎಂದು ತೀರ್ಮಾನಿಸಲಾಯಿತು. ‘ರಾಸಾಯನಿಕ ಕೃಷಿ ನಿಂತಿರುವುದೇ ಸತ್ತ ಗಿಡದ ಬೂದಿಯ ಮೇಲೆ’ ಎಂಬುದನ್ನು ಎಷ್ಟು ಜನ ಅರ್ಥೈಸಿಕೊಂಡಾರು? ತಕ್ಷಣವೇ ರಾಸಾಯನಿಕ ಕಂಪೆನಿಗಳು ಹುಟ್ಟಿಕೊಂಡವು. ಅನೂಚಾನವಾಗಿ ನಡೆದುಬಂದ ಕೃಷಿ ಪದ್ಧತಿಯೊಂದು ಅವನತಿಯತ್ತ ಸಾಗಿತು.

ನಮ್ಮ ದೇಶದಲ್ಲಿ 60ರ ದಶಕದಲ್ಲಿ ಬಂದ ‘ಹಸಿರುಕ್ರಾಂತಿ’ ಉದ್ದೇಶವೇ- ಅಧಿಕ ಆಹಾರ ಉತ್ಪಾದನೆ. ಆದರೆ ಆ ನೆಪದಲ್ಲಿ ರೈತನ ಶೋಷಣೆ ಎಷ್ಟೊಂದು ದೊಡ್ಡ ಪ್ರಮಾಣದಲ್ಲಿ ನಡೆಯಿತು ಎಂಬುದು ಯಾರ ಅಧ್ಯಯನಕ್ಕೂ ಸಿಗದ ಸಂಗತಿ. ಮೊದಲೆಲ್ಲ ರೈತ ಹೊಲದಲ್ಲಿ ಬೆಳೆದು ತನ್ನ ಕುಟುಂಬದವರನ್ನು ಸಾಕುತ್ತಿದ್ದ. ಈಗ? ಬೀಜ ಕಂಪೆನಿಗಳು, ರಾಸಾಯನಿಕ ಗೊಬ್ಬರ, ಕೀಟನಾಶಕ ತಯಾರಕರನ್ನು ಆತ ಸಾಕಬೇಕಿದೆ; ಜತೆಗೆ ಟ್ರಾಕ್ಟರ್, ಟಿಲ್ಲರ್, ಹೈಟೆಕ್ ಉಪಕರಣಗಳ ನಿರ್ಮಾತೃರನ್ನೂ! ಏಕೆಂದರೆ, ಒಂದೊಮ್ಮೆ ರೈತ ಏನನ್ನು ಖರೀದಿಸದಿದ್ದರೆ ಇವರೆಲ್ಲ ದಿವಾಳಿಯಾಗಿ ಬಿಡುತ್ತಾರೆ. ಎಷ್ಟೊಂದು ಹೊರೆ ನಮ್ಮ ಅನ್ನದಾತನ ಮೇಲೆ!

ಆದರೆ ನಮ್ಮ ಅದೃಷ್ಟ ಚೆನ್ನಾಗಿದೆ. ಈ ರಾಸಾಯನಿಕ ರಕ್ಕಸನ ಅಟ್ಟಹಾಸದ ಮಧ್ಯೆಯೂ ಸಾವಯವ ಕೃಷಿ ಪ್ರೀತಿಯ ರೈತರು ನಮ್ಮ ನಡುವೆ ಇ್ದದಾರೆ. ಕೆಲವರು ರಾಸಾಯನಿಕಕ್ಕೆ ಮರುಳಾದರೂ, ಅದರ ಹಾನಿಯನ್ನು ತಕ್ಷಣವೇ ಅರಿತು ಸಾವಯವಕ್ಕೆ ಮರಳ್ದಿದಾರೆ.

ಸಾವಯವ ಕೃಷಿಯ ಮೂಲತತ್ತ್ವ- ಸ್ವಾವಲಂಬನೆ. ಇಲ್ಲಿ ರೈತ ಹೊರಗಿನಿಂದ ಕೃತಕವಾದ ಏನನ್ನೂ ತರುವ ಹಾಗಿಲ್ಲ. ತಿಪ್ಪೆಗೊಬ್ಬರ, ಹಸಿರೆಲೆ, ತ್ಯಾಜ್ಯಗಳನ್ನು ಭೂಮಿಗೆ ಸೇರಿಸುವುದರಿಂದ ನೆಲ ಫಲವತ್ತಾಗುತ್ತದೆ. ಕೀಟ, ರೋಗ ಬಾಧೆ ಉಂಟಾದರೆ ಹೊಲದಲ್ಲಿನ ಔಷಧೀಯ ಗುಣದ ಮೂಲಿಕೆಗಳಿಂದ ಕೀಟನಾಶಕ ತಯಾರಿಸಿ ಸಿಂಪಡಿಸುತ್ತಾನೆ. ಒಂದೇ ಬೆಳೆಗೆ ಶರಣಾಗದೇ, ಬೆಳೆವೈವಿಧ್ಯ ಅನುಸರಿಸುವುದರಿಂದ ಮನೆಗೆ ಬೇಕಾದ ಎಲ್ಲ ಆಹಾರವನ್ನು ರಾಸಾಯನಿಕ ಮುಕ್ತ ವಿಧಾನದಲ್ಲಿ ಪಡೆಯುತ್ತಾನೆ.

ಪ್ರಕೃತಿಗೆ ಇರುವ ಅದ್ಭುತ ಶಕ್ತಿ- ಸಮತೋಲನ. ಕೀಟಗಳ ಹಾವಳಿ ಹೆಚ್ಚಾದರೆ ತಕ್ಷಣವೇ ಕಾಗೆ-ಕಪ್ಪೆ ಕಾಲಿಡುತ್ತವೆ. ಇಲಿ ಕಾಟ ಹೆಚ್ಚಾದರೆ ಭಕ್ಷಿಸಲು ಹಾವುಗಳು ಬರುತ್ತವೆ. ಒಂದು ಕೀಟ ತಿನ್ನಲು ಇನ್ನೊಂದು ಕೀಟ ಬರುತ್ತದೆ. ನಿಮ್ಮ ಬೆಳೆಗೆ ಬರುವ ಕೀಟ ನಿಮಗೆ ವೈರಿ; ಆದರೆ ನಿಸರ್ಗಕ್ಕೆ ನೀವು ಹೇಗೆಯೋ, ಆ ಕೀಟವೂ ಹಾಗೆಯೇ! ಈ ಮಿತ್ರತ್ವದ ಅನುಪಮ ಭಾವನೆಯು ಸಾವಯವ ಕೃಷಿ ಜತೆ ನಂಟು ಹೊಂದಿದೆ.

ಮಲೆನಾಡು ಮತ್ತು ಮೈಸೂರು ಪ್ರಾಂತಗಳಲ್ಲಿ ಸಾವಯವ ಕೃಷಿಕರ ಸಂಖ್ಯೆ ಸಾಕಷ್ಟಿದೆ. ಅವರೇ ಕೂಡಿ ರಚಿಸಿಕೊಂಡ ಬಳಗಗಳೂ ಇವೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ‘ಸಹಜ ಸಮೃದ್ಧ’, ಹಾಸನದ ‘ಪರಿಸರ ಪ್ರಿಯ ಕೃಷಿಕರ ಕೂಟ’, ತುಮಕೂರಿನ ‘ಸಿರಿ ಸಮೃದ್ಧಿ’, ಕೋಲಾರದ ‘ಜೈಮಿನಿ’ ಬಳಗಗಳು ಸಾವಯವ ಕೃಷಿ ಅನುಸರಿಸಲು ಉತ್ತೇಜನ ನೀಡುತ್ತಿವೆ. ರೈತರ ತೋಟಗಳಲ್ಲಿ ನಡೆಯುವ ಸಭೆಗಳಲ್ಲಿ ರೈತರು ಸಮಸ್ಯೆ ಹೇಳಿಕೊಂಡರೆ, ಇನ್ನೊಬ್ಬ ರೈತ ಪರಿಹಾರ ನೀಡುತ್ತಾನೆ. ಇತ್ತ ಉತ್ತರ ಕರ್ನಾಟಕದಲ್ಲಿ ರೈತರು ಬರನಿರೋಧಕ ಕ್ರಮ ಅನುಸರಿಸುತ್ತಿದ್ದಾರೆ. ಇದೂ ಸಾವಯವ ಕೃಷಿಯ ಒಂದು ಭಾಗ. ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲ್ಲೂಕಿನ ಕೆಲವೆಡೆ ಹೊಲಕ್ಕೆ ಉಸುಕು ಸೇರಿಸುತ್ತಾರೆ. ಇದರಿಂದ ನೀರು ಇಂಗಿ, ಬರದಲ್ಲೂ ಬೆಳೆ ತೆಗೆಯಲು ಸಾಧ್ಯವಿದೆ. ಹುನಗುಂದದ ನಾಗರಾಳ ಕುಟುಂಬವು ಮೂರು ತಲೆಮಾರುಗಳಿಂದ ಹೊಲಕ್ಕೆ ಒಡ್ಡು ಹಾಕುತ್ತ ಅತ್ಯುತ್ತಮ ಇಳುವರಿ ತೆಗೆದಿದ್ದಾರೆ. ಎಲ್ಲೆಡೆ ‘ಬರ… ಬರ’ ಎಂದು ರೈತರು ಒದ್ದಾಡುತ್ತಿದ್ದರೆ, ಈ ಎಲ್ಲ ಕೃಷಿಕರು ಸಾವಯವ ವಿಧಾನಕ್ಕೆ ಮೆರುಗು ನೀಡಿದ್ದಾರೆ. ನಕಲಿ ಬೀಜ, ಗೊಬ್ಬರ ಅಭಾವ ಇವರನ್ನು ಎಳ್ಳಷ್ಟೂ ಬಾಧಿಸಿಲ್ಲ.

ಅಧಿಕ ಇಳುವರಿ ನೀಡುವ ಹೈಬ್ರಿಡ್ ಬೀಜಗಳನ್ನು ತರುವ ರೈತ, ಅವುಗಳೊಡನೆ ರೋಗದ ಅಂಶಗಳನ್ನೂ ಅರಿವಿಲ್ಲದೆ ತಂದಿರುತ್ತಾನೆ. ರೋಗ ನಿಯಂತ್ರಿಸಲು ಗೊಬ್ಬರ, ಕೀಟನಾಶಕಕ್ಕೆ ಇನ್ನಷ್ಟು ಹಣ ಸುರಿಯಬೇಕು. ಆದರೆ ಸಾವಯವ ಕೃಷಿಯಲ್ಲಿ ಇದಕ್ಕೆಲ್ಲ ಆಸ್ಪದವಿಲ್ಲ. ರೋಗನಿರೋಧಕ ಶಕ್ತಿ ಹೊಂದಿರುವ ನಾಟಿ(ಜವಾರಿ) ಬೀಜಗಳೇ ಇಲ್ಲಿ ಜೀವಾಳ. ಎರೆಹುಳು ವಿಸರ್ಜನೆಯೇ ಗೊಬ್ಬರ. ಸೆಗಣಿ, ಗಂಜಲು ಪೋಷಕಾಂಶದ ನಿಧಿ. ಆರೋಗ್ಯಕರ ಪರಿಸರದಲ್ಲಿ ಬೆಳೆದ ಆಹಾರ ಸೇವಿಸಿದರೆ ಮನುಷ್ಯನನ್ನು ಅದ್ಯಾವ ರೋಗ ಕಾಡೀತು?

ಪ್ರತಿಯೊಂದನ್ನು ವೈಜ್ಞಾನಿಕ ದೃಷ್ಟಿಕೋನದಿಂದ ನೋಡುವ ಪದ್ಧತಿಯಿಂದ ‘ಹಸಿರು ಕ್ರಾಂತಿ’ ಎಂಬ ಅನಾಹುತ ಸೃಷ್ಟಿಯಾಯಿತು ಎಂದು ಜಪಾನಿನ ಕೃಷಿ‌ಋಷಿ ಮಸನೊಬು ಫುಕುವೊಕ ಟೀಕಿಸುತ್ತಾರೆ. ‘ಒಬ್ಬ ವಿಜ್ಞಾನಿ ಒಂದು ಬೆಳೆಯ ಎಲೆಗೆ ಬರುವ ಕೀಟದ ಬಗ್ಗೆ ಮಾತ್ರ ಸಂಶೋಧನೆ ನಡೆಸುತ್ತಾನೆ. ಅದೇ ಗಿಡದ ಬೇರಿಗೆ ಬಾಧಿಸುವ ಹುಳದ ಬಗ್ಗೆ ಆತನಿಗೆ ಏನೂ ಗೊತ್ತಿರುವುದಿಲ್ಲ. ಆದರೆ ಪ್ರಕೃತಿ ಎಲ್ಲವನ್ನೂ ಸಮನಾಗಿ ನೋಡುತ್ತದೆ. ಅಖಂಡ ದೃಷ್ಟಿ ನಮ್ಮದಾದರೆ, ಕೃಷಿ ನೆಮ್ಮದಿ ತಂದೀತು’ ಎನ್ನುತ್ತಾರೆ ಫುಕುವೊಕ.

ರಾಸಾಯನಿಕ ಬಳಸಿದ ಆಹಾರದಿಂದ ದೇಹವು ರೋಗಗಳ ಗೂಡಾಗುತ್ತದೆ ಎಂಬ ಅಂಶ ಈಗ ಜಗಜ್ಜಾಹೀರಾಗಿದೆ. ಅದಕ್ಕೆಂದು ಸಾವಯವ ಕೃಷಿ ಉತ್ಪನ್ನಗಳಿಗೆ ಬೇಡಿಕೆ ಹೆಚ್ಚುತ್ತಿದೆ. ರೈತ ಪರ ವಿಜ್ಞಾನಿಗಳ ನೆರವಿನಿಂದ ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಲಕ್ಷಗಟ್ಟಲೇ ಹೆಕ್ಟೇರ್ ಭೂಮಿಯನ್ನು ಸಾವಯವಕ್ಕೆ ಪರಿವರ್ತಿಸಲಾಗಿದೆ. ಉಗ್ರ ವಿಷಗಳನ್ನು ಖಡ್ಗ- ಗುರಾಣಿಯಂತೆ ಬಳಸಿ, ನಿಸರ್ಗದ ವಿರುದ್ಧ ಯುದ್ಧ ಮಾಡುವುದು ವ್ಯರ್ಥ ಕಸರತ್ತು ಎಂಬ ವಾಸ್ತವ ಅರಿತ ಆ ದೇಶಗಳು, ನಮ್ಮ ದೇಶದ ಸರಳ, ಸುಂದರ ಕೃಷಿ ಪದ್ಧತಿಗೆ ಮಾರು ಹೋಗಿದ್ದರೆ, ನಾವಿನ್ನೂ ಅವರ ವಿಧಾನಕ್ಕೆ ಜೋತುಬ್ದಿದ್ದಿದೇವೆ. ಇದಕ್ಕೆ ಪೂರಕವೆಂಬಂತೆ ಬಹುತೇಕ ವಿಜ್ಞಾನಿಗಳು ಉಗ್ರ ರಾಸಾಯನಿಕಗಳನ್ನು ಶಿಫಾರಸು ಮಾಡುತ್ತಲೇ ಇದ್ದಾರೆ. ಇದರಿಂದ ಭೀಕರ ಅಪಾಯವಿದೆ ಎಂಬುದು ಎಲ್ಲರಿಗೂ ಗೊತ್ತು. ಆದರೂ ಏಕೆ ಈ ಆಷಾಢಭೂತಿ ವರ್ತನೆ?

ವಿಜ್ಞಾನದಿಂದ ಜ್ಞಾನ ವಿಕಾಸವಾಗಬೇಕು. ನಿಜ. ಆದರೆ ಅದೇ ಭಸ್ಮಾಸುರನ ಹಸ್ತವಾಗಬಾರದು. ಈಗ ಕೃಷಿ ಕ್ಷೇತ್ರದಲ್ಲಿ ಕೋಟ್ಯಂತರ ವೆಚ್ಚದಲ್ಲಿ ನಡೆಯುವ ಸಂಶೋಧನೆಗಳು ಕಂಪೆನಿಗಳಿಗೆ ವರದಾನವಾಗಿವೆಯೇ ಹೊರತೂ, ರೈತನಿಗಲ್ಲ. ಹಗಲೂ-ರಾತ್ರಿ ದುಡಿದರೂ ಉತ್ಪನ್ನಕ್ಕೆ ಬೆಲೆ ಸಿಗದೇ ನೇಣಿಗೆ ಕೊರಳೊಡ್ಡುವ ಸ್ಥಿತಿ ಆತನದು. ವಿಜ್ಞಾನ ತಂದಿಟ್ಟ ಕೊಡುಗೆ ಇದೇಯೇನು? ‘ಮಾನವ ಚಂದ್ರನಲ್ಲಿಗೆ ಹೋಗಿ ಕಲ್ಲು-ಮಣ್ಣು ತಂದನೇ ಹೊರತೂ ಹಿಡಿ ಬೆಳದಿಂಗಳನ್ನಲ್ಲ’ ಎಂಬ ಫುಕವೊಕ ಅವರ ಮಾತು ಇದೇ ಕಾರಣಕ್ಕಾಗಿ ಮತ್ತೆ ಮತ್ತೆ ನೆನಪಾಗುತ್ತದೆ.

ಮಣ್ಣು ಕೃಷಿಕನ ಜೀವನವಾಗಬೇಕು. ಮಣ್ಣಿಗೆ ಘೋರ ವಿಷ ಸುರಿದು, ವಿಷಯುಕ್ತ ಆಹಾರ ತಯಾರಿಸಿ, ಇನ್ನೊಬ್ಬರಿಗೆ ರೋಗ ನೀಡಿ, ಮಣ್ಣನ್ನು ಸಾಯಿಸುವ ಬದಲು ರೈತ ಸಾವಯವ ಪ್ರೀತಿ ತಳೆಯಲಿ. ಎರೆಹುಳು ಆತನ ಹೊಲದಲ್ಲಿ ಮೆಲ್ಲಗೆ ಹರಿದಾಡಲಿ. ಜೇನುಗಳ ಝೇಂಕಾರ, ಬಣ್ಣದ ಪತಂಗಗಳ ಹಾರಾಟ, ಹಕ್ಕಿ-ಪಕ್ಷಿಗಳ ಕಲರವ ಎಲ್ಲವೂ ಮತ್ತೆ ಕಾಣಸಿಗಲಿ. ತನ್ನ ಅಹಂ ತೊರೆದು ‘ನಿಸರ್ಗದ ಮುಂದೆ ನಾನೆಷ್ಟು ಸಮರ್ಥ!’ ಎಂದು ವಿನೀತನಾಗಿ ಪ್ರಕೃತಿಗೆ ಶರಣಾಗಲಿ; ಭೂಮಿಯತ್ತ ವಾತ್ಸಲ್ಯದ ದೃಷ್ಟಿ ಹರಿಯಲಿ…

ಈ ಪ್ರೀತಿಯೇ ಆತನಿಗೆ ಹೊನ್ನಿನ ಧಾರೆ ಹರಿಸಲಿ…