ಭತ್ತದ ಬಗ್ಗೆ ಔಪಚಾರಿಕ ಪರಿಚಯ ಅನಗತ್ಯ. ಏಕೆಂದರೆ ನಮಗೆಲ್ಲಾ ಭತ್ತ ಅತ್ಯಂತ ಚಿರಪರಿಚಿತ ಬೆಳೆ. ಗದ್ದೆ ಬಯಲುಗಳ ನೋಟ ನಮಗೆ ಹೊಸದಲ್ಲ, ಅಪರೂಪವೂ ಅಲ್ಲ. ಜಗತ್ತಿನ ಅತಿ ಹೆಚ್ಚು ಜನರ ಆಹಾರ ಮತ್ತು ಹೆಚ್ಚು ಪ್ರದೇಶದಲ್ಲಿ ಬೆಳೆಯುತ್ತಿರುವ ಬೆಳೆ ಎಂಬ ಹಿರಿಮೆ ಭತ್ತದ್ದು. ಪ್ರತಿ ವರ್ಷ ಅಂದಾಜು ೧೮೫ ರಿಂದ ೨೦೦ ಮಿಲಿಯನ್ ಟನ್ ಅಕ್ಕಿ ಜಗತಿನಾದ್ಯಂತ ಬಳಸಲ್ಪಡುತ್ತಿದೆ. ಅಂದರೆ ಒಟ್ಟು ಜನಸಂಖ್ಯೆಯ ಅರ್ಧದಷ್ಟು ಜನರಿಗೆ ಅಕ್ಕಿ ಮತ್ತು ಅದರ ಇತರ ಉತ್ಪನ್ನಗಳೇ ಮುಖ್ಯ ಆಹಾರ.

ಎಂತಹ ವಾತಾವರಣಕ್ಕೆ ಬೇಕಾದರೂ ಒಗ್ಗಿಕೊಂಡು ಬೆಳೆಯುವ ಗುಣ ಭತ್ತದ್ದು. ಸಮುದ್ರ ಮಟ್ಟಕ್ಕಿಂತ ೭೦೦೦ ಅಡಿ  ಎತ್ತರದ ನೇಪಾಳದಿಂದ ಹಿಡಿದು ಸಮುದ್ರ ಮಟ್ಟಕ್ಕಿಂತ ೧೦ ಅಡಿ ಕೆಳಮಟ್ಟದ ಕೇರಳದಲ್ಲಿಯೂ ಭತ್ತ ಬೆಳೆಯಲ್ಪಡುತ್ತಿದೆ. ಅಲ್ಲದೆ ವಾರ್ಷಿಕ ೫೦೦ ಮಿ.ಮೀ ಮಳೆ ಬೀಳುವ ಪ್ರದೇಶದಿಂದ ಹಿಡಿದು ೫೦೦೦ ಮಿ.ಮೀ. ಮಳೆ ಬೀಳುವ ಪ್ರದೇಶಗಳೆರಡರಲ್ಲೂ ಬೆಳೆಯುವ ಸಾಮರ್ಥ್ಯ ಭತ್ತಕ್ಕಿದೆ. ಈ ರೀತಿ ಹೊಂದಿಕೊಳ್ಳುವ ಗುಣವುಳ್ಳ ಕೆಲವೇ ಬೆಳೆಗಳಲ್ಲಿ ಭತ್ತಕ್ಕೆ ಮೊದಲ ಸ್ಥಾನ.

ಭತ್ತದಲ್ಲಿರುವ ಅಗಾಧ ತಳಿ ವೈವಿಧ್ಯತೆಯಿಂದ  ಇದು ಸಾಧ್ಯವಾಗಿದೆ ಎಂದರೆ ತಪ್ಪಲ್ಲ. ‘ಪೊಯೆಸಿಯೆ’ ಅಥವಾ ‘ಗ್ರಾಮಿನಿಯೇ’ ಕುಟುಂಬಕ್ಕೆ ಸೇರಿದ ಭತ್ತದ ಸಸ್ಯಶಾಸ್ತ್ರೀಯ ಹೆಸರು ‘ಒರೈಸಾ’. ಒರೈಸಾದಲ್ಲಿ ಒಟ್ಟು ೨೩ ಪ್ರಕಾರಗಳಿದ್ದು ಅವುಗಳಲ್ಲಿ ‘ಒರೈಸ ಸಟೈವಾ’ ಮತ್ತು ‘ಒರೈಸಾ ಗ್ಲಾಬರಿಮ’ ಪ್ರಕಾರಗಳು ಬೆಳೆಯಲ್ಪಡುತ್ತಿವೆ. ಉಳಿದವುಗಳೆಲ್ಲಾ ಕಾಡುತಳಿ ಭತ್ತದ ಗುಂಪಿಗೆ ಸೇರಿದವು. ಒರೈಸಾ ಸಟೈವಾದಲ್ಲಿ ಮತ್ತೆ ಎರಡು ಉಪಗುಂಪುಗಳಿವೆ, ಅವು ಕ್ರಮವಾಗಿ ‘ಇಂಡಿಕಾ’ ಮತ್ತು ‘ಜಪಾನಿಕಾ’. ತೀರಾ ಇತ್ತೀಚೆಗೆ ಜವನಿಕಾ ಎಂಬ ಮತ್ತೊಂದು ಉಪ ಗುಂಪನ್ನೂ ಸಹ ಗುರುತಿಸಿದ್ದಾರೆ.

ಇಂಡೊ-ಬರ್ಮಾ ಪ್ರದೇಶ-ಅಂದರೆ ಭಾರತ, ಬಾಂಗ್ಲಾದೇಶ, ಮ್ಯಾನ್ಮಾರ್ (ಹಿಂದಿನ ಬರ್ಮಾ), ವಿಯಟ್ನಾಮ್, ಲಾವೊಸ್, ಕಾಂಬೋಡಿಯಾ ಮುಂತಾದ ದೇಶಗಳ ಪ್ರದೇಶವು ಭತ್ತದ ಜನ್ಮ ಸ್ಥಾನ.

ಭಾರತವನ್ನೂ ಒಳಗೊಂಡಂತೆ ಪೂರ್ವ ಏಷ್ಯಾ ಮತ್ತು ಫಿಲಿಫೈನ್ಸ್‌ಗಳಲ್ಲಿ ಇಂಡಿಕಾ ಗುಂಪಿನ ಭತ್ತದ ತಳಿಗಳು ಬಳಕೆಯಲ್ಲಿವೆ. ಪ್ರತಿಕೂಲ ವಾತಾವರಣ ಮತ್ತು ರೋಗನಿರೋದಕ ಶಕ್ತಿ ಈ ತಳಿಗಳ ವಿಶೇಷ ಗುಣ. ಬೆಳವಣಿಗೆ ಮತ್ತು ತೆಂಡೆ ಹೊಡೆಯುವ ಸಾಮರ್ಥ್ಯ ಹೆಚ್ಚು ಹಾಗೂ ಕಡಿಮೆ ಹಾರೈಕೆಯಲ್ಲಿಯೂ ಉತ್ತಮ ಇಳುವರಿ ನೀಡುತ್ತವೆ. ಜಪಾನಿಕಾ ಗುಂಪಿನ ತಳಿಗಳು ಜಪಾನ್, ಕೊರಿಯಾ, ಚೀನಾ ಮತ್ತು ಯೂರೋಪಿನ ಕೆಲ ಭಾಗಗಳಲ್ಲಿ ಬಳಕೆಯಲ್ಲಿವೆ.

ಭತ್ತದ ಬೇಸಾಯಕ್ಕೆ ಸಾವಿರದೈನೂರು ವರ್ಷಗಳ ಇತಿಹಾಸ

೧೫೦೦ ವರ್ಷಗಳ ಹಿಂದೆ ಮೊಟ್ಟ ಮೊದಲ ಬಾರಿಗೆ ಪೂರ್ವ ಮತ್ತು  ದಕ್ಷಿಣ ಎಷ್ಯಾದಲ್ಲಿ ಭತ್ತದ ಸಾಗುವಳಿ ಆರಂಭವಾಯಿತೆಂದು ಅಂದಾಜು. ಇಲ್ಲಿ ಜನರು ನದಿ ಬಯಲುಗಳಲ್ಲಿ ನೆಲೆಯೂರಲು ಆರಂಭಿಸಿ ಕಾಡುತಳಿ ಭತ್ತಗಳನ್ನು ಹೊಲಗಳಲ್ಲಿ ಬೆಳೆಯಲು ಪ್ರಾರಂಭಿಸಿದರು. ಭತ್ತದ ಸಾಗುವಳಿ ಹೀಗೆ ಪ್ರಾರಂಭವಾಗಿ ಪ್ರಸ್ತುತ ಜಗತ್ತಿನ ೧೧೩ ದೇಶಗಳಲ್ಲಿ ಬೆಳೆಯಲ್ಪಡುತ್ತಿದೆ. ಅಂಟಾರ್ಟಿಕಾ ಖಂಡವನ್ನು ಹೊರತುಪಡಿಸಿ ಉಳಿದೆಲ್ಲಾ ಖಂಡಗಳಲ್ಲಿ ಭತ್ತದ ಅಸ್ತಿತ್ವವಿದೆ.

ವಿಶ್ವದ ಸರಾಸರಿ ೧೫೦ ದಶಲಕ್ಷ ಹೆಕ್ಟೇರ್ ಭೂಮಿಯಲ್ಲಿ ಭತ್ತ ಬೆಳೆಯಲ್ಪಡುತ್ತಿದೆ, ಅದರಲ್ಲಿ ಏಷ್ಯಾದ ಪಾಲು ಅಂದಾಜು ೧೩೪ ದಶಲಕ್ಷ ಹೆಕ್ಟೇರ್. ಭಾರತದಲ್ಲಿ ಇದರ ಪ್ರಮಾಣ ೪೫ ದಶಲಕ್ಷ ಹೆಕ್ಟೇರ್‌ನಷ್ಟು. ಆಫ್ರಿಕಾ ಮತ್ತು ಏಷ್ಯಾದ ೧೦೦ ಮಿಲಿಯನ್ ಕುಟುಂಬಗಳಿಗೆ ಭತ್ತವೇ ಪ್ರಮುಖ ಆದಾಯದ ಮೂಲ. ಅಭಿವೃದ್ಧಿಶೀಲ ರಾಷ್ಟ್ರಗಳ ಒಂದು ಬಿಲಿಯನ್ ಜನರಿಗೆ ಭತ್ತವು ಉದ್ಯೋಗ ನೀಡಿದೆ.

ಭಾರತದಲ್ಲಿ ಭತ್ತದ ಸ್ಥಿತಿ:

ಭಾರತವಂತೂ ಭತ್ತದ ತಳಿಗಳ ಕಣಜ. ಇಲ್ಲಿನ ರೈತರು ೭೦೦೦ ವರ್ಷಗಳಿಂದ ಭತ್ತದ ಕೃಷಿ ಮತ್ತು ಸಂಸ್ಕೃತಿಯನ್ನು ಪೋಷಿಸುತ್ತಾ ಬಂದಿದ್ದಾರೆ. ಆಯಾ ಪ್ರದೇಶ, ವಾತಾವರಣ, ಆಹಾರ ಪದ್ಧತಿಗೆ ಸೂಕ್ತವಾದ ವಿವಿಧ ಬಗೆಯ ತಳಿಗಳು ರೈತರಿಂದ ಅಭಿವೃದ್ಧಿಗೊಂಡು ಬೆಳೆಯಲ್ಪಡುತ್ತಿವೆ. ಎಣಿಕೆಗೆ ದಕ್ಕದಶಾಹ್ಟು ತಳಿಗಳು ರೈತರ ಗದ್ದೆಗಳಲ್ಲಿ ಮನೆ ಮಾಡಿಕೊಡಿದ್ದವು.

ಅಕ್ಕಿಗೊಂದು, ಅವಲಕ್ಕಿಗೊಂದು, ಕುಚ್ಚಲಕ್ಕಿಗೊಂದು, ತಂಬಿಟ್ಟಿಗೊಂದು, ರೊಟ್ಟಿಗೊಂದು, ಕಜ್ಜಾಯಕ್ಕೊಂದು, ಬಿರಿಯಾನಿಗೊಂದು, ಬಾಣಂತಿಯರಿಗೊಂದು… ಹೀಗೆ ಒಂದೊಂದು ಬಳಕೆಗೂ ಒಂದೊಂದು ಪ್ರತ್ಯೇಕ ತಳಿಗಳನ್ನು ನಮ್ಮಲ್ಲಿ ಕಾಣಬಹುದು. ಭತ್ತದ ತಳಿಗಳ ಮಹಾಪಟ್ಟಿಯೇ ಭಾರತದಲ್ಲಿ ಲಭ್ಯ. ಪ್ರಖ್ಯಾತ ಭತ್ತ ವಿಜ್ಞಾನಿ ಡಾ. ರಿಚಾರಿಯಾರವರ ಪ್ರಕಾರ ವೇದಗಳ ಕಾಲದಲ್ಲಿ ನಾಲ್ಕು ಲಕ್ಷ ತಳಿಗಳು ಭತ್ತದಲ್ಲಿದ್ದವಂತೆ. ಇತ್ತೀಚಿನವರೆಗೂ ಸಹ ಸುಮಾರು ಎರಡು ಲಕ್ಷ ತಳಿಗಳು ಬಳಕೆಯಲ್ಲಿದ್ದವೆಂದು ಅವರ ಅಭಿಪ್ರಾಯ. ಅವುಗಳಲ್ಲಿ ೨ ಅಡಿಯಿಂದ ಮೊದಲುಗೊಂಡು ೧೨ ಅಡಿ ಎತ್ತರ ಬೆಳೆಯುವ ಮತ್ತು ಕೇವಲ ೬೦ ದಿವಸಗಳ ಅಲ್ಪಾವಧಿ ತಳಿಯಿಂದ ಮೊದಲುಗೊಂಡು ೮ ತಿಂಗಳ ಅವಧಿಯ ಧೀರ್ಘಾವಧಿ ತಳಿಗಳ ಅಪಾರ ವೈವಿಧ್ಯವನ್ನು ಅವರು ಗುರುತಿಸಿದ್ದಾರೆ.

ಭತ್ತದಲ್ಲಿನ ಅಗಾಧ ತಳಿ ವೈವಿಧ್ಯತೆಗೆ ಒಂದು ಸರಳ ಉದಾಹರಣೆ ನೋಡುವುದಾದರೆ; ಒಬ್ಬ ವ್ಯಕ್ತಿ ವರ್ಷದ ಪ್ರತಿ ದಿವಸ ಹೊಸ ತಳಿ ಭತ್ತದ ಅಕ್ಕಿಯನ್ನು ಬಳಸುತ್ತಾ ಹೋದರೆ ಎಲ್ಲಾ ತಳಿಗಳನ್ನು ಬಳಸಲು ೫೦೦ ವರ್ಷಗಳು ಬೇಕಾಗುತ್ತವೆ. ಬೇರೆ ಯಾವ ಬೆಳೆಯಲ್ಲಿಯೂ ಇಷ್ಟೊಂದು ಅಗಾಧ ಸಂಖ್ಯೆ ಕಂಡು ಬರದು.

ಪ್ರಾಚೀನ ಸಾಹಿತ್ಯಗಳಲ್ಲಿ ಭತ್ತದ ಉಲ್ಲೇಖ:

ಭತ್ತವನ್ನು ಭೂಮಿಗೆ ತಂದವನು ಪಾಂಡವರಲ್ಲಿ ಹಿರಿಯನಾದ ಧರ್ಮರಾಯ ಎಂದು ಪ್ರತೀತಿ. ಆತನ ತಾಯಿ ಕುಂತಿದೇವಿಯ ವ್ರತಕ್ಕಾಗಿ ಅದನ್ನು ದೇವಲೋಕದಿಂದ ತರಲಾಗುತ್ತದೆ. ವ್ರತ ಮುಗಿದ ನಂತರ ಅದನ್ನು ದೇವಲೋಕಕ್ಕೆ ಹೋಗಲು ಬಿಡದೆ ಮೂಗುದಾರ ಹಾಕಿ ಕಟ್ಟಿಹಾಕಿ ಭೂಮಿಯಲ್ಲೇ ಇರುವಂತೆ ಮಾಡುತ್ತಾನೆ ಧರ್ಮರಾಯ, ಅದಕ್ಕಾಗೇ ಭತ್ತದ ತುದಿಯಲ್ಲಿ ಬಿಳಿಯ ಗುರುತು ಇರುವುದು ಎಂಬ ನಂಬಿಕೆಯಿದೆ.

ಬೌದ್ಧ ಸಾಹಿತ್ಯವಾದ ದಮ್ಮಪದದಲ್ಲಿ ಅನೇಕ ಭತ್ತದ ತಾಕುಗಳ ವಿವರಣೆಯಿದೆ. ಯಜುರ್ವೇದದ ತೈತ್ತರೇಯ ಸಂಹಿತೆಯಲ್ಲಿ ಕಪ್ಪು ಭತ್ತ ಮತ್ತು ಬಿಳಿ ಭತ್ತಗಳೆಂಬ ಕಾಡು ತಳಿಗಳ ಪ್ರಸ್ತಾಪವಿದೆ. ಜಾತಕ ಮತ್ತು ಸೂತ್ರಗಳಲ್ಲಿ ಚಂಪಾ, ಗಾಂಧಾರ, ವಾರಣಾಸಿ, ಸ್ರವಸ್ತಿ, ಮಗಧ ಮುಂತಾದುವು ಭತ್ತ ಬೆಳೆಯುವ ಪ್ರದೇಶಗಳೆಂದು ಹೇಳಲಾಗಿದೆ. ಪುರಾಣಗಳಲ್ಲಿ ಕೆಲವು ಭತ್ತದ ತಳಿಗಳ ಔಷಧೀಯ ಗುಣಗಳ ಬಗ್ಗೆಯೂ ಮಾಹಿತಿ ದೊರೆಯುತ್ತದೆ.

ಕ್ರಿ.ಶ.೧೮೦೦ ರಲ್ಲಿ ಕರ್ನಾಟಕಕ್ಕೆ ಭೇಟಿ ಕೊಟ್ಟಿದ್ದ ಪಾಶ್ಚಾತ್ಯ ಪ್ರವಾಸಿಗ ‘ಪ್ರಾನ್ಸಿಸ್ ಬುಕನನ್’ ಮೈಸೂರಿನ ಸುತ್ತ-ಮುತ್ತ ಬೆಳೆಯುತ್ತಿದ್ದ ದೊಡ್ಡಭತ್ತ, ಕೆಂಭೂತಿ, ಯಾಲಕ್ಕಿರಾಜ, ಬಿಳಿಸಣ್ಣ, ಪುಟ್ಟ ಭತ್ತದ ತಳಿಗಳನ್ನು ಹೆಸರಿಸಿದ್ದಾನೆ. ಆ ಕಾಲದಲ್ಲಿ ಮಂಗಳೂರಿನಿಂದ ಮಸ್ಕತ್ ದೇಶಕ್ಕೆ ರಫ್ತಾಗುತ್ತಿದ್ದ ಅಕ್ಕಿಗೆ ಮಸ್ಕತಿ ಎಂಬ ಹೆಸರಿತ್ತು.

ಕೆಲವು ವರ್ಷಗಳ ಹಿಂದೆ ರಾಜ್ಯವಾಗಿ ಘೋಷಿಸಲ್ಪಟ್ಟ ಛತ್ತೀಸಗಢ ನಮ್ಮ ದೇಶದಲ್ಲಿ ಅತಿ ಹೆಚ್ಚು ಭತ್ತ ಬೆಳೆಯುವ ಪ್ರದೇಶಗಳಲ್ಲೊಂದು. ವಾರ್ಷಿಕ ೬ ಮಿಲಿಯನ್ ಟನ್ ಭತ್ತವನ್ನು ಇಲ್ಲಿ ಬೆಳೆಯಲಾಗುತ್ತದೆ. ಇಲ್ಲಿನ ರಾಯಪುರದಲ್ಲಿರುವ ಇಂದಿರಾಗಾಂಧಿ ಕೃಷಿ ವಿಶ್ವವಿದ್ಯಾಲಯದಲ್ಲಿ ಸುಮಾರು ೨೨೦೦೦ ಸ್ಥಳೀಯ ಭತ್ತದ  ತಳಿಗಳ ಮಾದರಿಯನ್ನು ಸಂಗ್ರಹಿಸಿಡಲಾಗಿದೆ. ಈ ಸಂಗ್ರಹವು ಪ್ರಪಂಚದ ಎರಡನೇ ಅತಿ ದೊಡ್ಡ ಭತ್ತದ ತಳಿಗಳ ಸಂಗ್ರಹವಾಗಿದ್ದು ಭಾರತದಲ್ಲಿ ಮೊದಲನೆಯದಾಗಿದೆ. ಇಷ್ಟು ಅಗಾಧ ಮೊತ್ತದ ತಳಿಗಳನ್ನು ಸಂಗ್ರಹಿಸಿ, ಸಂರಕ್ಷಿಸಿದ ಯಶಸ್ಸು ಡಾ.ರಿಚಾರಿಯಾರವರಿಗೆ ಸಲ್ಲಬೇಕು.

ಕನ್ನಡ ನಾಡಿನ ಭತ್ತದ ಜಾಡು:

ಹೆಚ್ಚು ಭತ್ತ ಬೆಳೆಯುವ ರಾಜ್ಯಗಳಲ್ಲಿ ಕರ್ನಾಟಕವೂ ಒಂದು. ರಾಜ್ಯದ ಬಿಜಾಪುರ, ಬೀದರ್, ಮತ್ತು ಗದಗ ಜಿಲ್ಲೆಗಳನ್ನು ಹೊರತುಪಡಿಸಿ ಉಳಿದ ಜಿಲ್ಲೆಗಳ ೧,೪೨ ದಶಲಕ್ಷ ಹೆಕ್ತೇರುಗಳಲ್ಲಿ ಭತ್ತ ಬೆಳೆಯಲ್ಪಡುತ್ತಿದೆ. ಸರಾಸರಿ ಉತ್ಪಾದಕತೆ ಹೆಕ್ಟೇರ್‌ಗೆ ೨೩.೫೩ ಕ್ವಿಂಟಾಲ್. ನಾಟಿ ಭತ್ತದ ತಳಿಗಳಿಗೆ ನಮ್ಮ ರಾಜ್ಯ ಹೆಸರುವಾಸಿ. ಒಂದು ಅಧಿಕೃತ ಉದಾಹರಣೆಯನ್ನು ನೋಡುವುದಾದರೆ; ೧೯೬೫ ರಲ್ಲಿ ಭಾರತ ಆಹಾರ ನಿಗಮವು ಅಂದು ಲಭ್ಯವಿದ್ದ ಭತ್ತದ ತಳಿಗಳನ್ನು ನಾಲ್ಕು ಗುಂಪುಗಳಾಗಿ ವಿಂಗಡಿಸಿದೆ. ಆ ಪ್ರಕಾರ ಬೆಳೆಯಲ್ಪಡುತ್ತಿದ್ದ ತಳಿಗಳ ವಿವರ ಹೀಗಿದೆ.

೧. ಅತೀ ಸಣ್ಣ ಭತ್ತದ ತಳಿಗಳು- ೫೬

೨. ಸಣ್ಣ ಭತ್ತದ ತಳಿಗಳು- ೩೮

೩. ದಪ್ಪ ಭತ್ತದ ತಳಿಗಳು- ೬೩

೪. ಮಧ್ಯಮ ಗಾತ್ರದ ತಳಿಗಳು- ೮೭

ಇವುಗಳಲ್ಲಿ ಕೆಲವು ಸುಧಾರಿತ ತಳಿಗಳು ಸೇರಿದ್ದರೂ ಸಹ ಬಹುಪಾಲು ನಾಟಿ ತಳಿಗಳೇ. ಈ ಪಟ್ಟಿಯನ್ನು ನಿಗಮವು ರಾಜ್ಯದ ಎಲ್ಲಾ ಅಕ್ಕಿ ಮಿಲ್ಲುಗಳಿಗೆ ಕಳುಹಿಸಿ ಆ ಪಟ್ಟಿಯ ಪ್ರಕಾರ ಮಿಲ್ಲಿಗೆ ಬಂದ ಭತ್ತವನ್ನು ಪ್ರತ್ಯೇಕಿಸಿ ಸಂಗ್ರಹಿಸಲು ತಿಳಿಸಿತ್ತು. ಅಂದರೆ ಕೇವಲ ೪೦ ವರ್ಷಗಳ ಹಿಂದೆ ೨೪೪ ತಳಿಗಳು ಅಪಾರ ಪ್ರಮಾಣದಲ್ಲಿ ಬೆಳೆಯಲ್ಪಡುತ್ತಿದ್ದವು. ೧೯೬೦ ರ ಹಸಿರು ಕ್ರಾಂತಿಯ ದೆಸೆಯಿಂದ ಈ ತಳಿಗಳು ಬಹುತೇಕ ನಾಶವಾಗಿವೆ.

ರಾಜ್ಯದ ಮಲೆನಾಡು ಪ್ರದೇಶವಂತೂ ಭತ್ತದ ಸಾಗರ. ಸಿಹಿ ಕೆಂಪಕ್ಕಿಯ ಸಿದ್ದಸಾಲೆ, ಸಿರಿವಂತರ ಅಕ್ಕಿಯೆಂದೇ ಹೆಸರುವಾಸಿಯಾಗಿದ್ದ ರಾಜಭೋಗ, ಪಾಯಸಕ್ಕೆ ಸೂಕ್ತವಾದ ಪರಿಮಳ ಸಾಲೆ, ಜೀರಿಗೆ ಸಾಲೆ, ಗಂಧಸಾಲೆ, ಮಲೆನಾಡಿಗರ ಭತ್ತದ ತಾಯಿ ಎನಿಸಿಕೊಂಡ ಜೋಳಗ, ಚಕ್ಕುಲಿ ಮಾಡಲು ಬೇಕಾದ ಕರೆಕಾಲ್ ದಡಿಗ, ಬುತ್ತಿ ಊಟಕ್ಕೆ ಹೇಳಿ ಮಾಡಿಸಿದ ಸಣ್ಣವಾಳ್ಯ, ತೆಳು ಸಿಪ್ಪೆಯ ಪಟ್ಟಹೆಗ್ಗೆ, ನೆರೆಗೆ ತಡೆಯುವ ನೆರೆಗುಳಿ, ಜೆಡ್ಡುಭತ್ತ, ಗಂಡು ಭತ್ತ ತೆಗೆಯಲು ಸಹಕರಿಸುವ ನ್ಯಾರೆಮಿಂಡ… ಮುಂತಾದ ನೂರಾರು ತಳಿಗಳು ಮಲೆನಾಡಿನಲ್ಲಿದ್ದವು. ಆದರೆ ಸುಧಾರಿತ ತಳಿಗಳ ವ್ಯವಸ್ತಿತ ಪ್ರಚಾರ ಮತ್ತು ಪ್ರಸಾರದಿಂದ ಬಹುತೇಕ ಹಳೆಯ ತಳಿಗಳು ಕತ್ತಲೆಗೆ ಸರಿದು ಬೆರಳೆಣಿಕೆಯಷ್ಟು ಮಾತ್ರ ಉಳಿದುಕೊಂಡಿವೆ.

ರಾಜ್ಯದ ಇತರ ಭಾಗಗಳಲ್ಲೂ ಇದೇ ಕತೆ. ಕೇವಲ ಮೂರ‍್ನಾಲ್ಕು ದಶಕಗಳ ಹಿಂದೆ ಆಯಾಯ ಪ್ರದೇಶದ ಮಣ್ಣು, ನೀರು, ಹವಾಗುಣಗಳಿಗೆ ಒಗ್ಗಿಕೊಂಡ ವೈವಿಧ್ಯಮಯ ಭತ್ತದ ತಳಿಗಳಿದ್ದವು. ಆಯಾ ಪ್ರದೇಶಗಳ ಸಂಪತ್ತು ಮತ್ತು ಸಮೃದ್ಧಿಗಳ ಪ್ರತೀಕವಾಗಿದ್ದ ಈ ತಳಿ ವೈವಿಧ್ಯ ನಶಿಸಿ ಇಂದು ಕೃಷಿಕರು ಕೇವಲ ಏಳೆಂಟು ತಳಿಗಳನ್ನು ಅವಲಂಬಿಸಿದ್ದಾರೆ. ಭತ್ತದ ವೈವಿಧ್ಯ ನಾಶವಾದ ಬೆನ್ನಲ್ಲೇ ಕೃಷಿಕರ ಬೀಜ ಸ್ವಾವಲಂಬನೆ, ಸ್ವಾತಂತ್ರ್ಯಗಳೂ ನಾಶವಾಗಿ ಅವರ ಬದುಕು ಅಭದ್ರಗೊಂಡಿರುವುದು ನಮ್ಮೆಲ್ಲರ ಕಣ್ಣ ಮುಂದಿದೆ.

ರಾಜ್ಯದಲ್ಲಿ ಎಂತಹ ಅದ್ಭುತ ಭತ್ತ ವೈವಿಧ್ಯವಿತ್ತು ಎಂಬುದರ ಮತ್ತಷ್ಟು ಮಾಹಿತಿ ಮುಂದಿನ ವಿವರಗಳಲ್ಲಿದೆ.

ಒಣಭೂಮಿ ಭತ್ತಗಳೆಂಬ ಅದ್ಭುತ!

ಭತ್ತ ಎಂದ ತಕ್ಷಣ ಎಲ್ಲರ ಮನಸ್ಸಿಗೆ ಬರುವುದು ನೀರಾವರಿ ಪ್ರದೇಶಗಳ ಭತ್ತದ ತಾಕುಗಳ ಚಿತ್ರಣ. ಆದರೆ ರಾಗಿ, ಜೋಳದಂತೆಯೇ ಬೆಳೆಯಬಲ್ಲ  ಒಣಭೂಮಿ ತಳಿಗಳ  ಅದ್ಭುತ ಲೋಕವೇ ಇದೆ. ಇಳುವರಿ ಕಡಿಮೆ ಎಂಬ ಕಾರಣಕ್ಕೆ ಯಾರೂ ಇವುಗಳತ್ತ ಗಮನಹರಿಸಿಲ್ಲ.

ಮಳೆ ಆಶ್ರಿತ ಭೂಮಿಯ ತಗ್ಗು ಪ್ರದೇಶಗಳಲ್ಲಿ ಮಳೆ ಬಂದಾಗ ಒಂದೆರಡು ದಿನ ನೀರು ನಿಲ್ಲುತ್ತದೆ. ಉಳಿದಂತೆ ಸದಾ ತೇವಾಂಶವಿರುತ್ತದೆ. ಈ ಭಾಗದಲ್ಲಿ ರಾಗಿ, ಜೋಳ ಯಾವುದೂ ಸರಿಯಾಗಿ ಬೆಳೆಯದು. ಇಂತಹ ಜಾಗಕ್ಕೆ ಒಣಭೂಮಿ ಭತ್ತ ಬಿತ್ತುವುದನ್ನು ನಮ್ಮ ರೈತರು ಪರಂಪರೆಯಿಂದ ಅನುಸರಿಸುತ್ತಿದ್ದಾರೆ. ಇದಕ್ಕೆ ಪುಣಜಿ ನೆಲ್ಲು ಬೆಳೆಯುವುದು ಎಂಬ ಹೆಸರಿದೆ. ಮಲೆನಾಡು ಪ್ರದೇಶ ಬಿಟ್ಟರೆ ರಾಜ್ಯದ ಉಳಿದೆಲ್ಲಾ ಕಡೆ ಒಣಭೂಮಿ ಭತ್ತದ ಕೃಷಿಯನ್ನು ಕಾಣಬಹುದು.  ದಪ್ಪ ಕಾಳಿನ, ಕೆಂಪಕ್ಕಿಯ ಈ ತಳಿಗಳು ಎಕರೆಗೆ ೧೦ ರಿಂದ ೧೨ ಚೀಲ ಇಳುವರಿ ನೀಡುತ್ತವೆ. ಬಿತ್ತನೆ ಮತ್ತು ಬೇಸಾಯಗಳೆರಡೂ ಬಹು ಸುಲಭ. ಉಳುಮೆಯಾದ ನೆಲಕ್ಕೆ ಮಳೆ ಬಿದ್ದಾಗ ಭತ್ತವನ್ನು ಎರಚಿ ಅಥವಾ ಸಾಲು ಬಿತ್ತನೆ ಮಾಡಿ ಹಲುವೆ ಹೊಡೆಯುತ್ತಾರೆ. ನಂತರ ಒಂದೆರಡು ಬಾರಿ ಕಳೆ ತೆಗೆದರೆ ಮುಗಿಯಿತು. ನಾಲ್ಕೈದು ಹದ ಮಳೆ ಬಿದ್ದರೆ ಸಾಕು ಮನೆಗಾಗುವಷ್ಟು ಭತ್ತ ಗ್ಯಾರಂಟಿ.  ಕೆಲವೆಡೆ ಒಣ ಭೂಮಿ ಭತ್ತದ ಮಧ್ಯೆ ಸಾಲು ಬೆಳೆ ಹಾಕುವುದನ್ನೂ ಕಾಣಬಹುದು.

ಕರಿ ಮುಂಡುಗ, ದೊಡ್ಡಭೈರನೆಲ್ಲು, ದೊಡ್ಡಿಭತ್ತ, ಸಾಲುಭತ್ತ, ಒಂದೂವರೆಭತ್ತ, ಆನೆಕೊಂಬಿನ ಭತ್ತ. ಕೆಂಪುಮುಂಡುಗ, ಮರೂಡಿ, ಮರನೆಲ್ಲು, ಜೇನುಗೂಡು, ಕರಿಬಿಜವಿಲಿ, ಕಳವಿ ಮುಂತಾದವು ಜನಪ್ರಿಯ ಒಣಭೂಮಿ ತಳಿಗಳಲ್ಲಿ ಕೆಲವು.

ನೆರೆ ಪ್ರದೇಶಕ್ಕೂ ಸೈ, ಚೌಳು ಮಣ್ಣಿಗೂ ಜೈ!

ನಾಟಿ ಭತ್ತದ ಮತ್ತೊಂದು ಅಚ್ಚರಿ ಈ ವರ್ಗ. ನದಿಗಳು ಉಕ್ಕಿ ಹರಿದು ೧೫ ರಿಂದ ೩೦ ದಿನ ತಾತ್ಕಾಲಿಕ ನೆರೆ ಉಂಟಾಗುವ ಸಾಗರ, ಸೊರಬದ ಕಡೆ ನೆರೆಯಲ್ಲೂ ಕೊಳೆಯದೆ ಉಳಿದು, ನೆರೆ ಇಳಿದ ಮೇಲೆ ಮತ್ತೆ ಸಹಜವಾಗಿ ಬೆಳೆದು ಉತ್ತಮ ಇಳುವರಿ ನೀಡುವ ಅನೇಕ ತಳಿಗಳಿವೆ. ನೆರೆಗೂಳಿ, ಸೋಮಸ್ಯಾಲೆ, ಜಡ್ಡುಭತ್ತ ಈ ವರ್ಗಕ್ಕೆ ಸೇರಿದ ಕೆಲವು ತಳಿಗಳು. ಈಗಲೂ ಈ ತಳಿಗಳೇ ನೆರೆ ಪ್ರದೇಶಕ್ಕೆ ಆಧಾರ.

ನೆರೆ ನೀರಲ್ಲದೆ ಸೊಂಟದವರೆಗೆ ನೀರು ನಿಲ್ಲುವ ಕೆರೆಮುಂದಂಡೆ, ವಿಪರೀತ ಜೌಗು ನೆಲದಲ್ಲಿಯೂ ಸಮೃದ್ಧವಾಗಿ ಬೆಳೆಯುವ ತಳಿಗಳಿವೆ. ಪಶ್ಚಿಮ ಬಂಗಾಳದ ಲಕ್ಷ್ಮಿಕಾಜಲ್ ಇಂತಹ ತಳಿಗಳಲ್ಲೊಂದು. ನೀರಿನಲ್ಲಿ ತೇಲುತ್ತಾ ಬೆಳೆಯುವ ಇದನ್ನು ಕೊಯ್ಲು ಮಾಡಲು ತೆಪ್ಪಗಳನ್ನು ಬಳಸುತ್ತಾರೆ. ಆರರಿಂದ ಎಳು ಅಡಿ ಎತ್ತರ ಬೆಳೆಯುತ್ತದೆ. ನೀಲಿ ಮಿಶ್ರಿತ ಕಪ್ಪು ಗರಿಗಳು, ಬಿಳಿ ಅಕ್ಕಿ ಈ ತಳಿಯ ವಿಶೇಷ. ಆನೇಕಲ್, ಥಳಿ ಪ್ರದೇಶಗಳಲ್ಲಿ ಇದೇ ಗುಣಗಳುಳ್ಳ ನೀರುಮುಳುಗಣ ಭತ್ತ ಬಹು ಜನಪ್ರಿಯ. ೬ ಅಡಿಯಷ್ಟು ಎತ್ತರ ಬೆಳೆಯುತ್ತದೆ. ಹುಲ್ಲಿನ ಇಳುವರಿಗೆ ಹೆಸರುವಾಸಿ.

ಮಣ್ಣಿನಲ್ಲಿ ಚೌಳಿನ ಅಂಶ ಹೆಚ್ಚಾದರೆ ಏನೊ ಬೆಳೆಯುವುದಿಲ್ಲ. ಅಂತಹ ಕಡೆಯೂ ಹೊಂದಿಕೊಂಡು ತಕ್ಕಮಟ್ಟಿಗೆ ಉತ್ತಮ ಇಳುವರಿಯನ್ನೇ ನೀಡುವ ಭತ್ತದ ತಳಿಗಳಿವೆ. ಚಿತ್ರದುರ್ಗ ಭಾಗದ ಕಾರಸ ಮುಂಡೊಡ್ಲು, ಮುಳ್ಳುಭತ್ತ, ಪಾವಗಡದ ಪಿಚ್ಚೊಡ್ಲು ಅಥವಾ ಪಿಚ್ಚನೆಲ್ಲು ಮುಂತಾದವು ಮುಖ್ಯವಾದ ಚೌಳುಭೂಮಿ ತಳಿಗಳು. ಅಲ್ಲದೆ ಸಮುದ್ರದ ಹಿನ್ನೀರು ನುಗ್ಗಿ ಮಣ್ಣಿನಲ್ಲಿ ಉಪ್ಪಿನಂಶ ಹೆಚ್ಚಾದ ನೆಲಕ್ಕೆ ಸೂಕ್ತವಾದ ಕಗ್ಗ, ಬಿಳಿಕಗ್ಗ, ಕರಿಕಗ್ಗ ಇತ್ಯಾದಿ ತಳಿಗಳಿವೆ.

ಈ ಸಮಸ್ಯೆಗಳಿರುವ ರೈತರಿಗೆ ಬದುಕು ರೂಪಿಸುವುದೇ ಈ ಅಪರೂಪದ ಗುಣವುಳ್ಳ ಭತ್ತದ ತಳಿಗಳು. ಭತ್ತದ ಸ್ಥಳೀಯ ತಳಿಗಳ ವಿಶೇಷತೆ ಮತ್ತು ಅನಿವಾರ‍್ಯತೆ ಕಾಣುವುದೇ ಇಲ್ಲಿ. ಭತ್ತದಲ್ಲಿ ಇಂತಹ ವೈವಿಧ್ಯ ಇಲ್ಲದೇ ಹೋಗಿದ್ದರೆ ಈ ಭೂಮಿಯೆಲ್ಲಾ ಬರಡು ಬೀಳುತ್ತಿದ್ದವು.

ಘಮಗುಟ್ಟುವ ಭತ್ತದ ತಳಿಗಳು:

ನೀರಾವರಿಯಲ್ಲಿ ಬೆಳೆಯುವ ಭತ್ತದ ತಳಿಗಳಲ್ಲಿ ಪರಿಮಳ ಬೀರುವ ಹಲವಾರು ತಳಿಗಳಿವೆ. ಎಲ್ಲವೂ ನಾಟಿ ತಳಿಗಳೇ. ಜೀರಿಗೆ ಸಣ್ಣ, ಗಂಧಸಾಲೆ, ಗೋದಾವರಿ ಇಸುಕುವಡ್ಲು, ರಸಕದಂ, ಘಂಗಡಲೆ, ಬಾಸುಮತಿ, ಕಳಮೆ ಮುಂತಾದವು ಈ ಗುಂಪಿಗೆ ಸೇರುತ್ತವೆ. ಹೊಲದಲ್ಲಿ ಹೂಕಾಯುವಾಗಲೇ ಗದ್ದೆಯೆಲ್ಲಾ ಘಮಗುಟ್ಟುತ್ತಿರುತ್ತದೆ. ಬಹುದೂರದವರೆಗೂ ಸುವಾಸನೆ ವ್ಯಾಪಿಸುವುದು ವಿಶೇಷ. ಈ ಅಕ್ಕಿಯ ಅನ್ನ ಬೇಯುವಾಗಲಂತೂ ಇಡೀ ಮನೆ ಸುವಾಸನೆಯುಕ್ತ. ಮಾಮೂಲಿ ಅಕ್ಕಿಗೆ ಒಂದು ಹಿಡಿ ಈ ಅಕ್ಕಿ ಸೇರಿಸಿದರೂ ಸಹ ಅನ್ನ ಸುವಾಸನೆಯುಕ್ತವಾಗಿರುತ್ತದೆ. ಇವು ಹೆಚ್ಚಾಗಿ ಕಜ್ಜಾಯ, ತಂಬಿಟ್ಟು, ಚಕ್ಕುಲಿ, ಬಿರಿಯಾನಿ, ಪಲಾವ್ ಮುಂತಾದ ತಿನಿಸುಗಳಿಗೆ ಬಳಕೆಯಾಗುತ್ತವೆ. ಈ ಉದ್ದೇಶಕ್ಕಾಗಿಯೇ ಹಿಂದೆ ರೈತರು ತಮ್ಮ ಹೊಲದ ಸ್ವಲ್ಪ ಭಾಗದಲ್ಲಿ ಈ ತಳಿಗಳನ್ನು ಹಾಕಿ ಬೆಳೆದುಕೊಳ್ಳುತ್ತಿದ್ದರು. ಈಗ ಆ ಅಭ್ಯಾಸ ಬಹುತೇಕ ನಿಂತುಹೋಗಿದೆ.

೧೫೦೦ ವರ್ಷಗಳ ದೀರ್ಘ ಪರಂಪರೆಗೆ ೪೦ ವರ್ಷಗಳಲ್ಲಿ ಎಳ್ಳುನೀರು!

ಐ‌ಆರ್-೮ ಎಷ್ಯಾದಲ್ಲಿ ಜನಪ್ರಿಯವಾದ ಮೊದಲ ಸುಧಾರಿತ ಭತ್ತದ ತಳಿ. ಇದು ೧೯೬೬ರಲ್ಲಿ ಪರಿಚಯವಾಯಿತು. ಈಗ ಭಾರತವು ಅತಿಹೆಚ್ಚು ಹೈಬ್ರಿಡ್ ಭತ್ತ ಬೆಳೆಯುವ ಪ್ರದೇಶ ಹೊಂದಿದ ರಾಷ್ಟ್ರಗಳ ಪೈಕಿ ೨ನೇ ಸ್ಥಾನದಲ್ಲಿದೆ. ವಿಯತ್ನಾಂಗೆ ಮೊದಲ ಸ್ಥಾನ. ಹೀಗೆ ಶುರುವಾದ ಸುಧಾರಿತ ತಳಿಗಳ ಹಾವಳಿ ಇಂದು ಅಗಾಧವಾಗಿ ಬೆಳೆದುನಿಂತಿದೆ.  ೬೦ರ ದಶಕದ ಹಸಿರುಕ್ರಾಂತಿಯ ನೆಪದಲ್ಲಿ ಇದು ಪ್ರಾರಂಭವಾಯಿತು. ಅದರ ಮುಂದುವರಿಕೆಯಾಗಿ ಭತ್ತದ ಮೂಲ ತಳಿಗಳನ್ನು ಹೊಸಕಿ ನಾವು ಅಭಿವೃದ್ಧಿಯ ಮೆಟ್ಟಿಲುಗಳನ್ನೇರುತ್ತಿದ್ದೇವೆ. ಅಥವಾ ಹಾಗೆಂದು ಭ್ರಮಿಸಿದ್ದೇವೆ.  ಹೆಚ್ಚು ಇಳುವರಿ ಬರುತ್ತದೆಂದು ಬೆರಳೆಣಿಕೆಯ ಕೆಲವು ತಳಿಗಳೇ ದೇಶಾದ್ಯಂತ ಬೆಳೆಯಲ್ಪಡುತ್ತಿವೆ. ಇವೆಲ್ಲಾ  ಅತಿಯಾಗಿ ಒಳಸುರಿಗಳನ್ನು ಬೇಡುವ, ಅಂತರ್ಜಲವನ್ನು ಬತ್ತಿಸಿ, ಮಣ್ಣು-ನೀರಿಗೆ ವಿಷತುಂಬುವ, ರೈತರನ್ನು ಸಾಲದ ಬಲೆಗೆ ನೂಕಿರುವ  ತಳಿಗಳು. ಜೊತೆಗೆ ರಾಸಾಯನಿಕಗಳ ಬಳಕೆ ಪ್ರಾರಂಭವಾಗಿ ಭತ್ತದ ಗದ್ದೆಗಳೆಲ್ಲಾ ವಿಷದ ಹೊಂಡಗಳಾಗಿವೆ.

ಭಾರತದ ಭತ್ತದ ತಳಿ ಚರಿತ್ರೆಯಲ್ಲಿ ನಡೆದ ಒಂದು  ಅನನ್ಯ ಘಟನೆಯ ಬಗ್ಗೆ ಹಿರಿಯ ಪತ್ರಕರ್ತರಾದ ನಾಗೇಶ್ ಹೆಗಡೆಯವರು ಹೀಗೆ ಬರೆಯುತ್ತಾರೆ. ೧೯೬೩ ರಲ್ಲಿ ಎಸ್.ಡಿ.ಶರ್ಮಾ ಎಂಬ ಕೃಷಿ ವಿಜ್ಞಾನಿ   ಅಪರೂಪದ ಭತ್ತದ ತಳಿಯ ಸ್ವಲ್ಪ ಬೀಜಗಳನ್ನು ಸಂಗ್ರಹಿಸಿಟ್ಟಿದ್ದರು. ಇದು ‘ಗ್ರಾಸಿಸ್ಟಂಟ್’ ಎಂಬ ವೈರಸ್ ರೋಗ ನಿರೋಧಕ ಗುಣವುಳ್ಳದ್ದಾಗಿತ್ತು. ಅದಾಗಿ ಏಳು ವರ್ಷಗಳ ನಂತರ ವಿಯಟ್ನಾಂ, ಇಂಡೊನೇಶ್ಯಾ, ಮ್ಯಾನ್ಮಾರ್, ಭಾರತ, ಶ್ರೀಲಂಕಾ ದೇಶಗಳ ಭತ್ತದ ಬೆಳೆಗೆ ಇದೇ ವೈರಸ್ ರೋಗ ತೀವ್ರವಾಗಿ ವ್ಯಾಪಿಸಿ ಸುಮಾರು ೧.೨೫ ಲಕ್ಷ ಹೆಕ್ಟೇರ್ ಭತ್ತದ ತಾಕುಗಳು ನಾಶವಾದವು. ಕಂಗಲಾದ ವಿಜ್ಞಾನಿಗಳು ಆ ವೈರಸ್ ನಿರೋಧಕ ಶಕ್ತಿಯಿರುವ ತಳಿ ಯಾವುದಾದರೂ ಇದೇಯೇ ಎಂದು ತಮ್ಮಲ್ಲಿದ್ದ ೬೭೨೩ ತಳಿಗಳನ್ನೆಲ್ಲಾ ಹುಡುಕಿದರು, ಸಿಗಲಿಲ್ಲ. ಆಗ ಶರ್ಮಾರವರು ತಮ್ಮಲ್ಲಿದ್ದ ವೈರಸ್ ನಿರೋಧಕ ಭತ್ತದ ಬೀಜಗಳನ್ನು ಕೊಟ್ಟರು. ಅದರ ತಳಿಗುಣವನ್ನು ಇತರ ಜನಪ್ರಿಯ ತಳಿಗಳ ಜತೆ ಸಂಕರಗೊಳಿಸಿ ಏಷ್ಯದ ಭತ್ತದ ಕಣಜವನ್ನು ಮತ್ತೆ ತುಂಬುವಂತೆ ಮಾಡಲಾಯಿತು. ಇಂದು ಈ ತಳಿಗುಣವನ್ನು ಹೊಂದಿದ ಭತ್ತದ ಕ್ಷೇತ್ರ ಮೂರು ಕೋಟಿ ಹೆಕ್ಟೇರ್ ವ್ಯಾಪಿಸಿದೆ.

ಹೈಬ್ರಿಡ್ ಹೋಯ್ತು, ಕುಲಾಂತರಿ ವಕ್ಕರಿಸ್ತು ಡುಂ ಡುಂ!

ಸುಧಾರಿತ ತಳಿಗಳ ಇಳುವರಿ ಒಂದು ಹಂತಕ್ಕೇರಿ ನಿಂತ ಮೇಲೆ ವಿಜ್ಞಾನಿಗಳು ಕುಲಾಂತರಿ ತಳಿಗಳ ಸೃಷ್ಟಿಗೆ ಕೈಹಾಕಿದ್ದಾರೆ. ಅದಕ್ಕಾಗಿ ಸಸ್ಯಗಳಲ್ಲಿಯೇ ಮೊದಲ ಬಾರಿಗೆ ಭತ್ತದ ತಳಿನಕ್ಷೆ ಬಿಡಿಸಿದ್ದಾರೆ. ಚೀನಾ ಮತ್ತು ಅಮೆರಿಕಾದ ವಿಜ್ಞಾನಿಗಳು ಸೇರಿ ಇಂಡಿಕಾ ಮತ್ತು ಜಪಾನಿಕಾ ಹೆಸರಿನ ಎರಡು ತಳಿಗಳ ಭತ್ತದಲ್ಲಿರುವ ಎಲ್ಲಾ ಗುಣಾಣು (ಜೀನ್) ಗಳ ಪಟ್ಟಿ ಮಾಡಿದ್ದಾರೆ. ಮನುಷ್ಯನ ಪ್ರತಿ ಜೀವ ಕೋಶದಲ್ಲಿ ೩೨ ಸಾವಿರ ಗುಣಾಣು ಇದ್ದರೆ ಭತ್ತದಲ್ಲಿ ೫೦ ಸಾವಿರ ಗುಣಾಣುಗಳಿರುವುದು ಇದರಿಂದ ಪತ್ತೆಯಾಗಿದೆ. ಇವರ ಹಿಂದೆ ಬಹುರಾಷ್ಟ್ರೀಯ ಕಂಪನಿಗಳ ಧನಬಲವಿದೆ.  ಕುಲಾಂತರಿ ತಳಿ ರೂಪಿಸಿ ಅದರ ಮೇಲೆ ಪೇಟೇಂಟ್ ಪಡೆದು ಅ ತಳಿಯೇ ಎಲ್ಲೆಡೆ ವ್ಯಾಪಿಸುವಂತೆ ಮಾಡಿ ಏಕಸ್ವಾಮ್ಯ ಸಾಧಿಸುವ ಹುನ್ನಾರವಿದು.

ಬಂದಿದೆ ಬಂಗಾರದ ಅಕ್ಕಿ!

ವಿಜ್ಞಾನಿಗಳು ಅಕ್ಕಿಯಲ್ಲಿ ತಂತಾನೆ ಎ ಅನ್ನಾಂಗ ಸೇರ್ಪಡೆಯಾಗುವಂತೆ ಡ್ಯಾಫೊಡಿಲ್ ಎಂಬ ಕಳೆಸಸ್ಯದ ಗುಣಾಣು ಮತ್ತು ಮತ್ತೊಂದು ಬ್ಯಾಕ್ಟೀರಿಯಾದ ಅಂಶವನ್ನು ಸೇರಿಸಿ ಬಂಗಾರದ ಭತ್ತ (ಗೋಲ್ಡನ್ ರೈಸ್)ವನ್ನು ಸೃಷ್ಟಿಸಿದ್ದಾರೆ. ಬೀಟಾ ಕೆರೋಟಿನ್ ಕೊರತೆಯಿಂದಾಗಿ ಇರುಳುಗಣ್ಣಿನ ಸಮಸ್ಯೆಯಿಂದ ಬಳಲುವವರಿಗೆ ಇದು ವರದಾನವೆಂದು ಅವರ ಹೇಳಿಕೆ. ಸತತ ೧೦ ವರ್ಷ ಶ್ರಮಿಸಿ, ಭರ್ತಿ ೧೦೦ ದಶಲಕ್ಷ ಡಾಲರ್ ವ್ಯಯಿಸಿ ಸಂಶೋಧಿಸಲಾಗಿದೆ. ಆದರೆ ಒಂದು ಅಂಶವನ್ನು ಗಮನಿಸಬೇಕು, ದೇಹಕ್ಕೆ ಅಗತ್ಯವಿರುವ ಶೇ ೧ ಅಂಶದಷ್ಟು ಬೀಟಾ ಕೆರೊಟಿನ್ ಅನ್ನು ಮಾತ್ರ ಈ ಅಕ್ಕಿ ಉಂಡು ಪಡೆಯಬಹುದು. ಉಳಿದ ಭಾಗವನ್ನು ಪಡೆಯಬೇಕೆಂದರೆ ನುಗ್ಗೆ, ಪರಂಗಿ ಹಣ್ಣು, ಕರಿಬೇವು, ಸೊಪ್ಪುಗಳನ್ನು ತಿನ್ನಲೇಬೇಕು. ಹಾಗಾದರೆ ಬಂಗಾರದ ಭತ್ತದ ಸೃಷ್ಟಿಗೆ ಬೇರೇನೋ ಕಾರಣವಿರಬೇಕಲ್ಲವೇ, ಇದು ಯಾರಿಗೆ ಚಿನ್ನದ ಮೊಟ್ಟೆ ಇಡುವ ಕೋಳಿಯಾಗಲಿದೇಯೋ?

ಭತ್ತ ಸಂಸ್ಕೃತಿ ಏಷ್ಯಾದಲ್ಲಿ ತೀವ್ರ ಅಪಾಯವನ್ನೆದುರಿಸುತ್ತಿದೆ. ಒಂದೆಡೆ ಅಪಾರ ತಳಿ ವೈವಿಧ್ಯವನ್ನು ಹೈಬ್ರಿಡ್ ಮತ್ತು ಕುಲಾಂತರಿ ತಳಿಗಳು ನಾಶಮಾಡಿದ್ದರೆ, ಮತ್ತೊಂದೆಡೆ ಭತ್ತದ ತಾಕುಗಳನ್ನು ವಾಣಿಜ್ಯ ಬೆಳೆಗಳು ಆಕ್ರಮಿಸುತ್ತಿವೆ. ಉದಾಹರಣೆಗೆ ನಮ್ಮ ಕೊಡಗು, ಮಲೆನಾಡುಗಳಲ್ಲಿ ಸಾವಿರಾರು ಎಕರೆ ಭತ್ತ ಬೆಳೆಯುವ ಜಾಗವನ್ನು ಇಂದು ಶುಂಠಿ ಮತ್ತು ಅಡಿಕೆಗಳು ಆಕ್ರಮಿಸಿವೆ. ಬಯಲು ಸೀಮೆಯಲ್ಲಿಯೂ ಸಹ ಭತ್ತ ಬೆಳೆಯುವ ಕಡೆ ಅಡಿಕೆ, ವೆನಿಲ್ಲಾ, ಮಿಡಿಸೌತೆ, ಮ್ಯಾರಿಗೋಲ್ಡ್ ಬೆಳೆಗಳು ಬಂದು ಕೂತಿವೆ.

ಇದರಿಂದ ಭತ್ತದ ಬೆಳೆಯ ಸುಸ್ಥಿರತೆಯ ಅಡಿಪಾಯ ಅಲುಗಾಡುತ್ತಿದೆ. ಸರ್ಕಾರದ ಒಪ್ಪಂದ (ಕಾಂಟ್ರಾಕ್ಟ್) ಬೇಸಾಯದ ಕಾನೂನುಗಳು, ವಿಶೇಷ ಆರ್ಥಿಕ ವಲಯಗಳಿಗಾಗಿ ಅಪಾರ ಪ್ರಮಾಣದ ಭೂಮಿಯ ವಶಪಡಿಸಿಕೊಳ್ಳುವಿಕೆ ಮುಂತಾದ ಕೈಗಾರಿಕಾ ಪರ ನಿಲುವುಗಳು ರೈತರು ಭತ್ತದ ಬೆಳೆಯನ್ನು ಕೈಬಿಡುವ ಸ್ಥಿತಿಗೆ ತಂದು ನಿಲ್ಲಿಸಿವೆ. ವಿಶ್ವ  ವ್ಯಾಪಾರ ಸಂಘಟನೆಯ ಸುಳಿಗೆ ಸಿಲುಕಿರುವ ಸರ್ಕಾರಗಳು ಬಲವಂತವಾಗಿ ಕುಲಾಂತರಿ ತಳಿಗಳನ್ನು ನಮ್ಮ ರೈತರ ಮೇಲೆ ಹೇರುತ್ತಿದ್ದಾರೆ.

ಭತ್ತದ ಕಣಜವೆನಿಸಿದ್ದ ಕೇರಳದ ಉದಾಹರಣೆಯನ್ನೇ ನೋಡಿ:

೧೯೭೦ ರಲ್ಲಿ ೮.೮ ಲಕ್ಷ ಹೆಕ್ಟೇರ್‌ನಲ್ಲಿ ಭತ್ತ ಬೆಳೆಯುತ್ತಿದ್ದರೆ ೨೦೦೩ರಲ್ಲಿ ಅದು ಕೇವಲ ೩.೧ ಲಕ್ಷ ಹೆಕ್ಟೇರ್‌ಗೆ ಇಳಿದಿದೆ. ಇದರಿಂದಾಗಿ ಇಂದು ಕೇರಳ ಆಹಾರ ಧಾನ್ಯದಲ್ಲಿ ಪರಾವಲಂಬಿಯಾಗುವ ಸ್ಥಿತಿ. ೪೪ ನದಿಗಳಿರುವ ಕೇರಳಕ್ಕೆ ಸಾಂಪ್ರದಾಯಿಕ ಭತ್ತದ ಗದ್ದೆಗಳು ನೀರಿನ ಮೂಲಗಳಾಗಿದ್ದವು. ಭತ್ತದ ಗದ್ದೆಗಳ ನಾಶದಿಂದ ಇಂದು ನದಿಗಳು ಬತ್ತುತ್ತಿದ್ದು ನೀರಿನ ಕೊರತೆ ತೀವ್ರವಾಗಿದೆ.

ಭತ್ತದ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿದ್ದ ಪಶ್ಚಿಮ ಬಂಗಾಳ, ಚತ್ತೀಸಘಢ, ಒರಿಸ್ಸಾ ರಾಜ್ಯಗಳು ಅಪಾರ ತಳಿ ವೈವಿಧ್ಯ ಮತ್ತು ಶ್ರೀಮಂತ ಭತ್ತ ಸಂಸ್ಕೃತಿಯನ್ನು ಹೊಂದಿದ್ದವು. ಆದರೆ ಸುಧಾರಿತ ಭತ್ತದ ತಳಿಗಳ ಹಾವಳಿಯಿಂದ ಈ ವ್ಯವಸ್ತೆಯೇ ಇಂದು ವಿನಾಶದ ಅಂಚಿನಲ್ಲಿದೆ. ಉದಾಹರಣೆಗೆ ಪಶ್ಚಿಮ ಬಂಗಾಳದಲ್ಲಿ ೧೯೬೬ಕ್ಕಿಂತ ಮುಂಚೆ ೫೬೦೦ ತಳಿಗಳನ್ನು ಬೆಳೆಯಲಾಗುತ್ತಿತ್ತು, ಈಗ ಅ ಸಂಖ್ಯೆ ಕೇವಲ ೫೦೦ಕ್ಕಿಳಿದಿದೆ.

ಅಲ್ಲದೆ ಭತ್ತದ ಬೀಜೋತ್ಪಾದನೆಗೆ ಮಾನ್ಸಂಟೊ, ಸಿಂಜಂಟಾದಂತಹ ಬಹುರಾಷ್ಟ್ರೀಯ ಕಂಪನಿಗಳು ಮುಂದಾಗಿ ರೈತರ ಸ್ವಾತಂತ್ರ್ಯಕ್ಕೆ ಸಂಚಕಾರ ತಂದಿವೆ. ವಿಪರೀತ ರಾಸಾಯನಿಕಗಳನ್ನು ಸುರಿದು ಭತ್ತ ಬೆಳೆಯುತ್ತಿರುವುದರಿಂದ ಅನ್ನದ ಸತ್ವವೂ ಹಾಳಾಗಿದೆ, ಭೂಮಿಯೂ ಸಹ ಹದಗೆಟ್ಟಿದೆ. ರೈತರು ಈ ಬದಲಾದ ಪರಿಸ್ಥಿತಿಗೆ ಹೊಂದಿಕೊಳ್ಳಲಾರದೆ ಅತಂತ್ರ ಸ್ಥಿತಿ ತಲುಪಿದ್ದಾರೆ. ಅದರ ಪರಿಣಾಮವೇ ನಮ್ಮ ಕಣ್ಣ ಮುಂದಿರುವ ರೈತರ ಸರಣಿ ಆತ್ಮಹತ್ಯೆಗಳು.

ಪೇಟೇಂಟ್ ಹಾವಳಿ:

ಇದು ಮತ್ತೊಂದು ಗಂಡಾಂತರ. ಅಪಾರ ತಳಿ ವೈವಿಧ್ಯವನ್ನು ಹೊಂದಿರುವ ಭಾರತದತ್ತ ಬಹುರಾಷ್ಟ್ರೀಯ ಕಂಪನಿಗಳು ಪೇಟೆಂಟ್ ಪಡೆಯಲು ಹೊಂಚು ಹಾಕುತ್ತಿವೆ. ಸಂಶೋಧಕರ ಪ್ರಕಾರ ಈಗಾಗಲೇ ೯೦೦ ಕ್ಕೂ ಅಧಿಕ ಜೀನಗಳು ಪೇಟೇಂಟ್ ಆಗಿವೆ. ಚತ್ತೀಸಘಡದ ಇಂದಿರಾಗಾಂದಿ ಕೃಷಿ ವಿಶ್ವವಿದ್ಯಾಲಯದಲ್ಲಿ ಸಂಗ್ರಹಿಸಲಾದ ೨೨.೦೦೦ ಕ್ಕೂ ಅಧಿಕ ತಳಿಗಳನ್ನು ತಮ್ಮ ತೆಕ್ಕೆಗೆ ತೆಗೆದುಕೊಳ್ಳಲು ಸಿಂಜೆಂಟಾ ಮತ್ತು ಇತರ ಕಂಪನಿಗಳು ಹುನ್ನಾರ ನಡೆಸಿದವು. ಭತ್ತ ವಿಜ್ಞಾನಿ ಡಾ.ರಿಚಾರಿಯಾರವರ ವಿರೋಧ ಮತ್ತು ರೈತರ ಸತ್ಯಾಗ್ರಹದಿಂದ ಇದು ಸಾಧ್ಯವಾಗಲಿಲ್ಲ. ಭತ್ತದಲ್ಲಿಯೇ ಅತ್ಯಂತ ಹೆಚ್ಚು ಬೆಲೆಯುಳ್ಳ ತಳಿ ಬಾಸುಮತಿ. ಹೊರದೇಶಗಳಿಗೆ ಹೆಚ್ಚು ರಫ್ತಾಗುವ ಅಕ್ಕಿ ಇದು. ಉತ್ತರಪ್ರದೇಶ ಮತ್ತು ಪಾಕಿಸ್ಥಾನದ ಸ್ಥಳೀಯ ತಳಿಯಾದ ಬಾಸುಮತಿಯನ್ನು ಅಮೆರಿಕದ ಕಂಪನಿ ಪೇಟೇಂಟ್ ಪಡೆದು ನಂತರ ಕಾನೂನಿನ ಹೋರಾಟದ ಮೂಲಕ ನಾವು ಅದರ ಸ್ವಾಮ್ಯವನ್ನು ಮರಳಿ ಪಡೆದೆವು.

ಮುಂದಿನ ದಾರಿ?

ಈಗ ನಮಗಿರುವ ದಾರಿ ಒಂದೇ! ನಮ್ಮ ಗ್ರಾಮಗಳ ಸುಸ್ಥಿರತೆಗಾಗಿ, ಪರಿಸರ ಸಮತೋಲನಕ್ಕಾಗಿ, ಸಾಂಸ್ಕೃತಿಕ ಶ್ರೀಮಂತಿಕೆಯ ಸಂರಕ್ಷಣೆಗಾಗಿ ಮತ್ತು ನಮ್ಮ ಮುಂದಿನ ಜನಾಂಗಕ್ಕಾಗಿ ಶ್ರೀಮಂತ ಭತ್ತ ಸಂಸ್ಕೃತಿ ಮತ್ತು ಪರಂಪರೆ ಬತ್ತದಂತೆ ನೋಡಿಕೊಳ್ಳುವುದು. ಬಹಳ ಮುಖ್ಯವಾದ ಮತ್ತು ತುರ್ತಾಗಿ ಆಗಬೇಕಾದ ಕೆಲಸವಿದು. ಭತ್ತದ ಉತ್ಪಾದನೆಯ ಸಂಪೂರ್ಣ ನಿಯಂತ್ರಣ ಸಣ್ಣ ಮತ್ತು ಮಧ್ಯಮ ರೈತರದ್ದಾಗಬೇಕು, ಭತ್ತವನ್ನು ಕಾರ್ಪೊರೇಟ್ ಕಪಿಮುಷ್ಟಿಯಿಂದ ಬಿಡುಗಡೆಗೊಳಿಸಬೇಕು, ರಾಸಾಯನಿಕಗಳಿಂದ, ಕುಲಾಂತರಿ ತಂತ್ರಜ್ಞಾನದಿಂದ ಮತ್ತು ಪೇಟೆಂಟ್ ಹಾವಳಿಯಿಂದ ಮುಕ್ತಗೊಳಿಸಬೇಕು.

ಇತ್ತೀಚಿನ ವರ್ಷಗಳಲ್ಲಿ ಕೆಲವು ಜನರಾದರೂ ಭತ್ತಕ್ಕೆದುರಾಗಿರುವ ಗಂಡಾಂತರವನ್ನು ಅರ್ಥ ಮಾಡಿಕೊಳ್ಳಲು ಹಾಗೂ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಪ್ರಾರಂಭಿಸಿದ್ದಾರೆ.  ಹಸಿರುಕ್ರಾಂತಿಯಿಂದ ಇಂದಿನ ಕುಲಾಂತರಿ ತಳಿಗಳವರೆಗಿನ ಅನಾಹುತಗಳ ವಿಶ್ಲೆಷಣೆ ನಡೆಯುತ್ತಿದೆ. ಪರ್ಯಾಯ ವಿಧಾನಗಳನ್ನು ಹುಡುಕಿ, ಪಾರಂಪರಿಕ ಪದ್ಧತಿಗಳನ್ನು ಪುನರುಜ್ಜೀವನಗೊಳಿಸಿ ಅಳವಡಿಕೊಳ್ಳುವ ಪ್ರಯತ್ನಗಳಿಗೆ ಜೀವ ಬರುತ್ತಿದೆ. ಇದೊಂದು ಚಳುವಳಿಯಾಗಿ ರೂಪುಗೊಳ್ಳುತ್ತಿದೆ. ನಾವೆಲ್ಲಾ-ಅಂದರೆ ರೈತರು, ಬಳಕೆದಾರರು, ಸರ್ಕಾರೇತರ ಸಂಸ್ಥೆಗಳು, ಮಾಧ್ಯಮಗಳು, ವಿಜ್ಞಾನಿಗಳು, ವಿದ್ಯಾರ್ಥಿಗಳು, ಶಿಕ್ಷಕರು, ಕಾನೂನು ರೂಪುಗೊಳಿಸುವವರು ಹಾಗೂ ಎಲ್ಲಾ ಸಾರ್ವಜನಿಕರು ಸೇರಿ ಇದನ್ನು ಬಲಗೊಳಿಸಬೇಕು, ಇದು ನಿರಂತರವಾಗಿ ನಡೆಯುವಂತೆ ಕಾರ್ಯಕ್ರಮ ರೂಪಿಸಬೇಕು.

ಎಲ್ಲರೂ ಪರಸ್ಪರ ಕೈಜೋಡಿಸಿ ಭತ್ತದ ಉಳಿವಿನ ಬಗ್ಗೆ ಮಾತನಾಡಬೇಕು. ಚರ್ಚಿಸಬೇಕು. ಪರಿಹಾರ ಮಾರ್ಗಗಳನ್ನು ಕಂಡುಕೊಳ್ಳಬೇಕು. ಭತ್ತದ ಉಳಿವು ಕೇವಲ ಕೃಷಿ ವಲಯಕ್ಕೆ ಸೀಮಿತವಾದುದಲ್ಲ. ಅದು ನಮ್ಮ ಸಮಾಜಕ್ಕೆ ಸಂಬಂಧಿಸಿದ್ದು. ಎಲ್ಲರ ಆಹಾರ ಭದ್ರತೆಗೆ ಸಂಬಂದಿಸಿದ್ದು.  ಇದಕ್ಕೆ ತಕ್ಷಣ ಆಗಬೇಕಾದ್ದು, ನಮ್ಮ-ನಮ್ಮ ಭಾಗದ ಭತ್ತದ ತಾಕುಗಳ ಸಂರಕ್ಷಣೆ, ಅದಕ್ಕೆ ಹೊಂದಿಕೊಡಂತಿರುವ ಪದ್ಧತಿಗಳು, ನಾಟಿ ತಳಿಗಳು, ಅವುಗಳ ಬಿತ್ತನೆ, ಬೆಳವಣಿಗೆ, ಆಹಾರ ತಯಾರಿಕೆಗೆ ಸಂಬಂಧಿಸಿದ ಜ್ಞಾನದ ಗುರುತಿಸುವಿಕೆ, ದಾಖಲಾತಿ ಮತ್ತು ಸಂರಕ್ಷಣೆ.

ನಮಗೆ ಬೇಕು ದೇವರಾಯರಂತಹ ಭತ್ತ ಪ್ರಿಯರು!

ಸ್ವ-ಇಚ್ಚೆಯಿಂದ ೨೦ ಕ್ಕೂ ಅಧಿಕ ನಾಟಿ ತಳಿಗಳನ್ನು ತಮ್ಮ ಹೊಲದಲ್ಲಿ ಉಳಿಸುತ್ತಿರುವ ಬಂಗಾಡಿ ಕಿಲ್ಲೂರು ದೇವರಾವ್ ಭತ್ತ ಸಂರಕ್ಷಣೆಗೆ ಉನ್ನತ ಮಾದರಿ. ಬೆಳ್ತಂಗಡಿ ತಾಲ್ಲೂಕು ಮಿತ್ತಬಾಗಿಲಿನಲ್ಲಿ ೩೦ ಎಕರೆ ಜಮೀನುಳ್ಳ ಇವರು ೪ ಎಕರೆಯಲ್ಲಿ ಭತ್ತ ಬೆಳೆಯುತ್ತಾರೆ. ಯಾವ ವಿಶ್ವ ವಿದ್ಯಾಲಯವೂ ಮಾಡಿರದ ಪಾರಂಪರಿಕ ಭತ್ತದ ತಳಿಗಳ ಸಂಗ್ರಹ, ಅವುಗಳ ಗುಣ-ವಿಶೇಷಗಳ ದಾಖಲಾತಿ, ರಕ್ಷಣೆ ಹಾಗೂ ಪ್ರಸಾರ ಇವರ ಭೂಮಿಯಲ್ಲಿ ನಡೆಯುತ್ತಿದೆ. ಇವರಿಗೆ ಇದು ಕೇವಲ ಹವ್ಯಾಸವಲ್ಲ, ಬದಲಿಗೆ ನಮ್ಮ ತಳಿಗಳನ್ನು ಪೀಳಿಗೆಗಳಿಗೆ ಕಾಯ್ದಿಡುವ ದೂರದೃಷ್ಟಿಯ ಪ್ರಯತ್ನ.

ರಾಯರು ಉಳಿಸುತ್ತಿರುವ ಕೆಲವು ವಿಶಿಷ್ಟ ತಳಿಗಳೆಂದರೆ; ಗಂಧಸಾಲೆ, ಮಸ್ಸೂರಿ, ಕಯಮೆ, ಅಲ್ಯಂಡೆ, ಕಾವಳಕಣ್ಣು, ಸುಗ್ಗಿಕಯಮೆ, ಅತಿಕಾಯ, ಗುಲ್ವಾಡಿ ಸಣ್ಣ, ಅಜಿಪ್ಪ ಸಾಲೆ ಮುಂತಾದವು.

ರಾಯರ ವಿಳಾಸ: ಶ್ರೀ ಬಿ.ಕೆ.ದೇವರಾವ್, ಅಮೈಮನೆ

ಮಿತ್ತಬಾಗಿಲೆ ಗ್ರಾಮ, ಕಿಲ್ಲೂರು ಅಂಚೆ, ಬೆಳ್ತಂಗಡಿ ತಾಲ್ಲೂಕು

ದೂರವಾಣಿ: ೨೭೩೨೧೭ (೦೮೨೫೬)

ದೇವರಾಯರಲ್ಲದೆ ಚನ್ನಪಟ್ಟಣದ ಲಿಂಗಮಾದಯ್ಯ, ನರಸೀಪುರದ ಶಂಕರ್‌ಗುರು ಮುಂತಾದ   ಅನೇಕ ರೈತರು ಭತ್ತದ ಸಂರಕ್ಷಣೆ ಮಾಡುತ್ತಿದ್ದಾರೆ. ಇದೊಂದು ಉತ್ತಮ ಬೆಳವಣಿಗೆ.

ಭತ್ತದೊಂದಿಗೆ ಬೆರೆತಿರುವ ಕೃಷಿ ಆಚರಣೆಗಳು:

ಹಸನು ಮಾಡಿದ ಗದ್ದೆಗೆ ಮೂಗುಮೊಳಕೆ ಬಂದ  ಭತ್ತವನ್ನು ಬಿತ್ತುವ ಮುನ್ನ ಕೆಸರಿನ ಪುಟ್ಟ ದಿಂಡು ಮಾಡಿ ಐದು ಕಲ್ಲುಗಳನ್ನಿಟ್ಟು ಬೆನವನಿಗೆ ಹಣ್ಣು-ಕಾಯಿ ಇಟ್ಟು ‘ತಾಯೀ ಕಾಪಾಡವ್ವ’ ಎನ್ನುವಲ್ಲಿಂದ ಹಿಡಿದು, ಚಿನ್ನದ ಹೊಳಪಿನ ಭತ್ತವನ್ನು ತೂರಿ, ಬಿದ್ದ ಆಳೆತ್ತರದ ರಾಶಿಗೆ ಹೂಪತ್ರೆ ಇಟ್ಟು, ನಾಲ್ಕು ಜನರಿಗೆ ದಾನ ಮಾಡಿ ಹೆಚ್ಚಲಿ ಎಂಬ ಆಶಯದೊಂದಿಗೆ ಭತ್ತವನ್ನು ಮನೆಗೆ ಸಾಗಿಸುವವರೆಗೆ ಹತ್ತಾರು ಆಚರಣೆ, ಪೂಜೆಗಳು ಭತ್ತದ ಜೊತೆ ತಳುಕು ಹಾಕಿಕೊಂಡಿವೆ.

ಕೊಡವರ ಹುತ್ತರಿ ಹಬ್ಬ, ಮಲೆನಾಡಿಗರ ಭೂಮಿಹುಣ್ಣಿಮೆ, ಮಗೆಮುಂಡುಗನ ಹಾಕುವುದು, ಕರಾವಳಿಯ ಹೊಸಪೈರಿನ ಹಬ್ಬ, ಕದಿರು ತೆಗೆಯುವುದು, ದೀಪಾವಳಿಯಲ್ಲಿ ಮಾಡುವ ದೀವೋಳಿಗೆ, ಗದ್ದೆಗೆ ಗೊಡ್ಡೀಚಲು ಗರಿ ನೆಡುವುದು, ತಮಿಳಿನಾಡಿನ ಪೊಂಗಲ್ ಮುಂತಾದ ಹಬ್ಬ-ಆಚರಣೆಗಳಲ್ಲಿ ಭತ್ತವೇ ಕೇಂದ್ರ ಬಿಂದು.

ಮಲೆನಾಡಿನ ದೇವಾಲಯ ಮತ್ತು ಮನೆಗಳಲ್ಲಿ ಭತ್ತದ ಕದಿರಿನಿಂದ ಹೆಣೆದ ವಿವಿಧ ಆಕಾರದ, ಶೈಲಿಯ ತೋರಣಗಳನ್ನು ನೋಡಬಹುದು.  ಇನ್ನು ನಮ್ಮ ಶುಭ ಕಾರ್ಯಗಳಿಗೆಲ್ಲಾ ಅಕ್ಕಿಯಿಂದ ಮಾಡಿದ ಅಕ್ಷತೆ ಇರಲೇಬೇಕು. ನವಗ್ರಹಗಳಲ್ಲಿ ಸೋಮಗ್ರಹಕ್ಕೆ ಅಕ್ಕಿಯನ್ನು ಸಂಕೇತವಾಗಿ ಬಳಸಲಾಗುತ್ತದೆ. ಇದು ಭತ್ತ ಸಾಂಸ್ಕೃತಿಕವಾಗಿ ನಮ್ಮ ನಿತ್ಯದ ಬದುಕನ್ನು ಆವರಿಸಿಕೊಂಡಿರುವ ಪರಿ.

ಪುರಿ ಜಗನ್ನಾಥ ದೇವರ ಭತ್ತ ಸಂರಕ್ಷಣೆ:

ಒರಿಸ್ಸಾದ ಪ್ರಖ್ಯಾತ ಪುರಿ ಜಗನ್ನಾಥ ದೇವರಿಗೆ ಪ್ರತಿನಿತ್ಯ ಹೊಸದಾಗಿ ಕುಯಿಲು ಮಾಡಿದ ಭತ್ತದ ಅಕ್ಕಿಯ ನೈವೇದ್ಯವೇ ಆಗಬೇಕು. ಇಂದಿಗೂ ಈ ವಿಶಿಷ್ಠ ಪದ್ಧತಿ ಚಾಲ್ತಿಯಲ್ಲಿದೆ. ಇದು ಯಾವುದೇ ಕಾರಣಕ್ಕೂ ತಪ್ಪಬಾರದು, ಹಾಗೇನಾದರೂ ತಪ್ಪಿದರೆ ದೇವರು ಕೋಪಗೊಳ್ಳುತ್ತಾನೆಂಬ ಭಯಂದಿದ ಅಲ್ಲಿನ ರೈತರು ನೂರಾರು ತಳಿಗಳನ್ನು ಉಳಿಸಿ ಬೆಳೆಯುತ್ತಿದ್ದಾರೆ.

ತುಮಕೂರು ಜಿಲ್ಲೆ ಮಧುಗಿರಿ ತಾಲ್ಲೂಕಿನ ಕೆಲವು ಹಳ್ಳಿಗಳಲ್ಲಿ ಸ್ವಲ್ಪ ಮಟ್ಟಿಗೆ ಇದನ್ನೇ ಹೋಲುವ ನಂಬಿಕೆಯಿದೆ. ಇಲ್ಲಿನ ಚೌಡಮ್ಮ ದೇವತೆಗೆ ಜೌಗು ನೆಲದಲ್ಲಿ ಬೆಳೆದ ಅಕ್ಕಿಯ ಪದಾರ್ಥಗಳೇ ಎಡೆ ಹಾಕಬೇಕು. ಕೆರೆ ನೀರು ಅಥವಾ ಬಾವಿ ನೀರಿಗೆ ಬೆಳೆದ ಅಕ್ಕಿ ನಿಷಿದ್ಧ.

ಅಪಾರ ಪ್ರಮಾಣದ ಸ್ಥಳೀಯ ಭತ್ತ ವೈವಿಧ್ಯ ಉಳಿಯಲು ನಮ್ಮ ಹಿರೀಕರು ಅನುಸರಿಸುತ್ತಿದ್ದ ಇಂತಹ ಪದ್ಧತಿ, ನಂಬಿಕೆಗಳೇ ಕಾರಣ ಎನ್ನುವುದರಲ್ಲಿ ಎರಡು ಮಾತಿಲ್ಲ. ಭತ್ತದ ತಳಿ ವೈಭವವನ್ನು ಮರಳಿ ತರಲು ಪ್ರಯತ್ನಿಸುವವರು ಇಂತಹ ಪದ್ಧತಿಗಳನ್ನು ಪುನರುಜ್ಜೀವನಗೊಳಿಸಿದರೆ  ಎಷ್ಟೋ ತಳಿಗಳು ಉಳಿಯುತ್ತವೆ, ಮತ್ತು ಆ ಪ್ರಯತ್ನದಲ್ಲಿ ಬೇಗ ಯಶಸ್ಸು ಕಾಣಲು ಸಾಧ್ಯ.

ಗ್ರಂಥ ಋಣ:

೧. ಭತ್ತ ಕೃಷಿ ಲೋಕದ ಅನರ್ಘ್ಯರತ್ನ- ಸುಧಾ ವಾರಪತ್ರಿಕೆ, ೧೬ ಡಿಸೆಂಬರ್ ೨೦೦೪.

೨. ಕದಿರು ಭತ್ತದ ನಾಟಿತಳಿಗಳ ದಾಖಲೆ- ಕೃಷಿ ಪ್ರಯೋಗ ಪರಿವಾರ, ತೀರ್ಥಹಳ್ಳಿ.

೩. ಸಾಧಕ-ಸಾಧನೆ- ಬಿ.ಕೆ.ದೇವರಾವ್ ಸನ್ಮಾನ ಸಂಚಿಕೆ- ಕೃಷಿ ಪ್ರಯೋಗ ಪರಿವಾರ, ತೀರ್ಥಹಳ್ಳಿ.

೪. ಬೀಜದ ಬುಟ್ಟಿ- ಗ್ರೀನ್ ಪ್ರತಿಷ್ಠಾನ, ಬೆಂಗಳೂರು.

೫. ಬೀಜದ ಹಕ್ಕು ಜೀವ ವೈವಿಧ್ಯತೆ ಮಸೂದೆ ಮತ್ತು ರೈತರ ಹಕ್ಕಿನ ಮಾರ್ಗದರ್ಶಿ- ಗ್ರೀನ್ ಪ್ರತಿಷ್ಠಾನ, ಬೆಂಗಳೂರು.