ಫುಕುವೊಕಾ ಅಂದಾಕ್ಷಣ ‘ಒಂದು ಹುಲ್ಲಿನ ಕ್ರಾಂತಿ’ಯ ಕೃಷಿ‌ಋಷಿ ಮಸಾನೊಬು ಫುಕುವೊಕಾ ನೆನಪಾಗುತ್ತಾನೆ. ಜಪಾನಿನಲ್ಲಿ ಫುಕುವೊಕಾ ಎಂಬ ಪ್ರಾಂತವೇ ಇದೆ. ಅಲ್ಲಿ ಬಾತುಕೋಳಿಗಳ ಮೂಲಕ ಭತ್ತದ ಇಳುವರಿಯನ್ನೂ ರೈತನ ಆದಾಯವನ್ನೂ ಹೆಚ್ಚಿಸಿದ ಇನ್ನೊಬ್ಬ ಕ್ರಾಂತಿಕಾರಿ ಕೃಷಿಕ ಟಕಾವೊ ಫುರುನೊ ಇದ್ದಾನೆ. ಆತನ ಬಾತುಕೋಳಿ ವಿಧಾನ ಜಪಾನಿನಲ್ಲಿ ತುಂಬ ಜನಪ್ರಿಯವಾಗಿದೆ.

ನಾಟಿ ಮಾಡಿದ ಮರುವಾರವೇ ಈತ ಬಾತುಕೋಳಿಗಳ ಮರಿಗಳನ್ನು ಸಸಿಗಳ ಸಾಲಿನ ನಡುವೆ ಬಿಡುತ್ತಾನೆ. ಅವು ಸಸಿಗಳನ್ನು ಹಾಳುಮಾಡುತ್ತವೆ ಎಂಬ ಪ್ರತೀತಿ ಇತ್ತು. ಆದರೆ ಅದು ನಿಜವಲ್ಲ. ಬಾತುಕೋಳಿ ಮರಿಗಳು ಸಸಿಗಳ ನಡುವೆ ಚಲಿಸುತ್ತ, ಆಗಾಗ ಕೊಕ್ಕು ತೂರಿಸಿ ಕ್ರಿಮಿಕೀಟಗಳನ್ನೂ ಬಸವನ ಹುಳುಗಳನ್ನೂ ಹಿಡಿದು ತಿನ್ನುತ್ತ, ಕಳೆಮೊಳಕೆಗಳನ್ನು ತುಳಿಯುತ್ತ ಸಾಗುತ್ತವೆ. ಕಳೆ ಕೀಳುವ ಕೆಲಸವನ್ನು ಬಾತುಗಳಿಗೆ ಬಿಟ್ಟು ರೈತರು ಹಾಯಾಗಿ ಹಾಡುಹಸೆಯಲ್ಲಿ ತಲ್ಲೀನರಾಗುತ್ತಾರೆ. ಬಾತುಗಳ ನಿರಂತರ ಓಡಾಟದಿಂದ ಕೆಸರು ಗದ್ದೆಯಲ್ಲಿ ಸಣ್ಣಪ್ರಮಾಣದ ಮಂಥನ ಕ್ರಿಯೆ ನಡೆಯುತ್ತ ಅಲ್ಲೆಲ್ಲ ಆಮ್ಲಜನಕದ ಚಲನೆ ಸಲೀಸಾಗುತ್ತದೆ. ಭತ್ತದ ಎಳೆ ಸಸಿಗಳಿಗೆ ಕಚಗುಳಿ ಇಟ್ಟಂತಾಗಿ ಅವು ಬಲುಶೀಘ್ರ ಹೆಚ್ಚಿನ ತೆಂಡೆ ಒಡೆಯುತ್ತವೆ. ಭತ್ತದ ಇಳುವರಿ ಬರುವ ವೇಳೆಗೆ ಬಾತುಕೋಳಿಗಳೂ ದಷ್ಟಪುಷ್ಟವಾಗುತ್ತವೆ. ರೈತನಿಗೆ ಇಮ್ಮಡಿ ಲಾಭ!

ಪದಭಂಡಾರ ಕೆದಕಿ, ಅಕ್ಕಿ ಭಂಡಾರ ತುಂಬಿ

ಇಂಗ್ಲಿಷ್ ಗೊತ್ತಿದ್ದವರಿಗೆ ಇಲ್ಲೊಂದು ಆಟ ಇದೆ. ಬಡವರಿಗೆ ಅಕ್ಕಿದಾನ ಮಾಡುವ ಆಟ ಅದು. ನೀವು ಮಾಡಬೇಕಾದುದು ಇಷ್ಟೆ: ಅಂತರಜಾಲದಲ್ಲಿ ‘ಫ್ರೀರೈಸ್ ಡಾಟ್ ಕಾಮ್’ ಎಂಬ ತಾಣಕ್ಕೆ ಹೋಗಿ. ಒಂದು ಇಂಗ್ಲಿಷ್ ಪದಕ್ಕೆ ನಾಲ್ಕು ಅರ್ಥಗಳನ್ನು ಕೊಡಲಾಗಿದೆ. ಸರಿಯಾದ ಅರ್ಥ ಯಾವುದೆಂದು ಗುರುತಿಸಿ. ನಿಮ್ಮ ಉತ್ತರ ಸರಿಯಾಗಿದ್ದರೆ ಪಕ್ಕದ ತಟ್ಟೆಯಲ್ಲಿ ೨೫ ಅಕ್ಕಿಕಾಳುಗಳು ಬಂದು ಕೂರುತ್ತವೆ. ಮತ್ತೊಂದು ಹೊಸ ಪದ ಹಾಗೂ ನಾಲ್ಕು ಅರ್ಥಗಳು ಗೋಚರಿಸುತ್ತವೆ. ಅದಕ್ಕೂ ಸರಿಯುತ್ತರ ಕೊಟ್ಟರೆ ಪಕ್ಕದ ತಟ್ಟೆಗೆ ಮತ್ತೆ ೨೫ ಕಾಳುಗಳು ಸೇರುತ್ತವೆ. ತಪ್ಪು ಉತ್ತರ ಕೊಟ್ಟರೆ ಶಿಕ್ಷೆಯೇನಿಲ್ಲ. ಸರಿಯಾದ ಉತ್ತರ ಏನೆಂದು ಮೂಡುತ್ತದೆ; ಜೊತೆಗೆ ಅಲ್ಲಿ ಇನ್ನೊಂದು ತುಸು ಸುಲಭದ ಹೊಸ ಪದ ಮೂಡುತ್ತದೆ. ನೀವು ಹೆಚ್ಚು ಹೊತ್ತು ಆಡುತ್ತಿರುವಂತೆ ಪ್ರೇರೇಪಿಸುತ್ತ ಹೆಚ್ಚು ಅಕ್ಕಿ ಕಾಳುಗಳು ದಾನಕ್ಕೆ ಸೇರ್ಪಡೆಯಾಗುವಂತೆ ಅಲ್ಲಿ ವ್ಯವಸ್ಥೆ ಇದೆ.

ಆಟದ ಕೆಳಗಡೆಯ ಪಟ್ಟಿಯಲ್ಲಿ ವಾಣಿಜ್ಯ ಕಂಪನಿಗಳ ಜಾಹೀರಾತು ಬರುತ್ತಿದ್ದು ಅವುಗಳಿಂದ ಬರುವ ಹಣದಿಂದಲೇ ಅಕ್ಕಿ ಖರೀದಿಸಲಾಗುತ್ತದೆ.

ಇದರಲ್ಲಿ ವಂಚನೆಯೇನೂ ಇಲ್ಲ. ಕಂಪ್ಯೂಟರ್ ಮುಂದೆ ಕೂತು ಬೋರ್ ಆದಾಗಲೆಲ್ಲ ಖುಷಿಯಿಂದ ಆಡುತ್ತಿರಬಹುದು. ಹಸಿದವರಿಗೆ ತುಸು ಅನ್ನ ನೀಡುತ್ತಿರಬಹುದು.

ಒದ್ದೆ ಗದ್ದೆಯಿಂದ ವಿದ್ಯುತ್ ಶಕ್ತಿ

ಭತ್ತದ ಗದ್ದೆಗಳಲ್ಲಿ ಸಣ್ಣ ಪ್ರಮಾಣದಲ್ಲಿ ನಿರಂತರವಾಗಿ ಮೀಥೇನ್ ಅನಿಲ ಹೊಮ್ಮುತ್ತಿರುತ್ತದೆ. ಲಕ್ಷಾಂತರ ಹೆಕ್ಟೇರುಗಳಿಂದ ಹೊರಬರುವ ಅನಿಲ ಪ್ರಮಾಣ ಸಾಕಷ್ಟು ದೊಡ್ಡದೆಂದೂ ಅದು ವಾತಾವರಣಕ್ಕೆ ಸೇರಿ ಭೂಮಿಯನ್ನು ಬಿಸಿ ಮಾಡುವಲ್ಲಿ ಗಣನೀಯ ಕೊಡುಗೆಯನ್ನು ನೀಡುತ್ತದೆಂದೂ ತಜ್ಞರು ಹೇಳುತ್ತಾರೆ. ಭೂಮಿ ಬಿಸಿಯಾಗಲು ಪಾಶ್ಚಾತ್ಯ ರಾಷ್ಟ್ರಗಳ ಬೃಹತ್ ಉದ್ಯಮಗಳಷ್ಟೇ ಅಲ್ಲ, ಏಷ್ಯದ ಭತ್ತದ ಕೃಷಿಕರೂ ಕಾರಣರೆಂಬ ಟೀಕೆ ಪ್ರಚಲಿತದಲ್ಲಿದೆ.

ಈ ಮೀಥೇನನ್ನೇ ಶಕ್ತಿಮೂಲವಾಗಿ ಜಪಾನ ಯಮಾಗಾಟಾ ವಿವಿಯ ತಜ್ಞರು ಬಳಸಲು ಸಾಧ್ಯವೆಂದು ತೋರಿಸಿದ್ದಾರೆ. ಕೆಸರು ಗದ್ದೆಗಳಲ್ಲಿ ಭತ್ತದ ಸಸ್ಯಗಳು ಸಹಜ ಉಸಿರಾಟ ಕ್ರಿಯೆ ಎಂಬಂತೆ ತಮ್ಮ ಬೇರುಗಳ ಮೂಲಕ ಸಾವಯವ ದ್ರವ್ಯಗಳನ್ನು ಮಣ್ಣಿಗೆ ಸೇರಿಸುತ್ತಿರುತ್ತವೆ. ಸೂಕ್ಷ್ಮಾಣುಗಳ ಕ್ರಿಯೆಯಿಂದ ಅದು ಮೀಥೇನ್ ಅನಿಲವಾಗಿ ಹೊಮ್ಮುತ್ತದೆ. ಸಸ್ಯದ ಬುಡಕ್ಕೆ ಪುಟ್ಟ ಬಿಲ್ಲೆಯಂಥ ವಿದ್ಯುತ್ ದಂಡವನ್ನು ಹೂತಿಟ್ಟು (ಧನ ವಿದ್ಯುತ್ ಧ್ರುವ) ಅದರ ಮೂಲಕ ವಿದ್ಯುತ್ ಉತ್ಪಾದನೆ ಸಾಧ್ಯವೆಂದು ಈಚೆಗೆ ವರದಿಯಾಗಿದೆ. ವಿದ್ಯುತ್ ದಂಡದ (ಋಣ ವಿದ್ಯುತ್ ಧ್ರುವ) ತಲೆ ಮಾತ್ರ ನೀರಿನಲ್ಲಿ ತೇಲುತ್ತಿರುತ್ತದೆ. ಅಲ್ಪ ಪ್ರಮಾಣದ ಕರೆಂಟ್ ಹೊಮ್ಮಿಸುವ ಇಂಥ ಬಿಲ್ಲೆಗಳನ್ನು ಸರಣಿಯಲ್ಲಿ ಜೋಡಿಸಿದರೆ ಹೆಕ್ಟೇರಿಗೆ ೩೬೦ ವ್ಯಾಟ್ ವಿದ್ಯುತ್ ಉತ್ಪಾದನೆ ಸಾಧ್ಯವೆಂದು ಅಂದಾಜು ಮಾಡಲಾಗಿದೆ. ಅಂದರೆ ೧೫ ವಾಟ್ ಸಾಮರ್ಥ್ಯದ ೨೪ ಸಿ‌ಎಫ್‌ಎಲ್ ಬಲ್ಬ್‌ಗಳನ್ನು ಏಕಕಾಲಕ್ಕೆ ಉರಿಸಬಹುದು. ಇದಕ್ಕೆ ‘ಸೆಡಿಮೆಂಟ್ ಮೈಕ್ರೊಬಿಯಲ್ ಫ್ಯುಯೆಲ್ ಸೆಲ್ (ಎಸ್‌ಎಮ್‌ಎಫ್‌ಸಿ) ಎನ್ನುತ್ತಾರೆ. ವಿದ್ಯುತ್ ಉತ್ಪಾದನೆಯಾಗುತ್ತಲೇ ಬೇರುಮೂಲದಲ್ಲಿ ಮಿಥೇನ್ ಉತ್ಪಾದನೆ ಗಣನೀಯವಾಗಿ ಕಡಿಮೆಯಾಗುತ್ತದೆ ಎನ್ನಲಾಗಿದೆ. ಅಂದರೆ ಒಂದೇ ಬಾಣದಲ್ಲಿ ಎರಡು ಗುರಿಗಳನ್ನು ಸಾಧಿಸಲು ಸಾಧ್ಯವೆಂದಾಯಿತು. ಕೊಯ್ಲು ಮಾಡುವ ತುಸು ಮುಂಚೆ ಪ್ರಾಯಶಃ ಭತ್ತದ ಬೇರುಗಳ ಬುಡದಲ್ಲಿ ಬಿಲ್ಲೆಗಳನ್ನೂ ಸರಣಿಯಲ್ಲಿ ಜೋಡಿಸಿದ ತಂತಿಗಳನ್ನೂ ಎತ್ತಿ ಸುತ್ತಿಟ್ಟುಕೊಂಡರೆ ಆಯಿತು.