ಒಂದೂರಲ್ಲಿ ಒಬ್ಬ ರಾಜ ಇದ್ದ. ಅವನಿಗೊಬ್ಬ ಮುದ್ದಾದ ಮಗ ಇದ್ದ. ಆ ರಾಜಕುಮಾರ ಆಡ್ತಾ ಆಡ್ತಾ ಉದ್ಯಾನದ ಆಳಿನ ಮಗನ ಜತೆಗೆ ದೋಸ್ತಿ ಬೆಳೆಸಿದ. ಇಬ್ಬರೂ ಒಟ್ಟಿಗೆ ಆಡೋರು, ಒಟ್ಟಿಗೇ ಹಾಡೋರು, ಒಟ್ಟಿಗೇ ಸುತ್ತಾಡೋರು, ಒಟ್ಟಿಗೇ ಊಟ ಮಾಡೋರು. ರಾಜ-ರಾಣಿಗೆ ಕಸಿವಿಸಿ. ಇವರ ದೋಸ್ತಿ ಬಿಡಿಸೋಕೆ ಇಬ್ರೂ ಏನೆಲ್ಲ ಉಪಾಯ ಮಾಡಿದರು ಆಗಲಿಲ್ಲ. ದೋಸ್ತಿ ಬಿಗಿ ಆಗ್ತಾನೇ ಹೋಯ್ತು.

‘ಮಲಗೋಕೂ ಆಳಿನ ಮನೆಗೇ ಹೋಗ್ತೀನಿ’ ಅಂತ ರಾಜಕುಮಾರ ಹಠ ಹಿಡಿದ. ರಾಜಂಗೆ ರೇಗಿ ಹೋಯ್ತು. ಡಂಗುರಾನೇ ಹೊಡೆಸಿದ. ‘ಯಾರಾದ್ರೂ ಇವರ ದೋಸ್ತಿ ಬಿಡಿಸಿದ್ರೆ ಅರ್ಧ ರಾಜ್ಯಾನೇ ಕೊಡ್ತೀನಿ’ ಅಂದ. ಯಾರ‍್ಯಾರೋ ಬಂದ್ರು. ಏನೆಲ್ಲ ಉಪಾಯ ಮಾಡಿದ್ರು. ಊಹೂಂ. ಈ ಇಬ್ಬರು ಹುಡುಗರ ಮೈತ್ರಿ ಬೆಳೀತಾ ಬೆಳೀತಾ ಯುವಕರೇ ಆಗಿಬಿಟ್ರು.

ಕೊನೆಗೆ ಒಬ್ಬ ಅಜ್ಜಿ ಬಂದ್ಲು; ತಾನು ಇವರಿಬ್ಬರ ಗೆಳೆತನಾನ್ನ ಒಡಿತೀನಿ ಅಂದ್ಲು.

ಇಬ್ರೂ ಒಂದೇ ಕುದುರೆ ಮೇಲೆ ಹೋಗ್ತಾ ಇದ್ದಾಗ ಅಜ್ಜಿ ಆ ಆಳುಮಗನ್ನ ಕರೆದ್ಲು. ‘ಮಗೂ ಏನೋ ರಹಸ್ಯ ಹೇಳ್ತೀನಿ ಬಾ’ ಅಂದ್ಲು. ಆಳು ಮಗ ಇಳಿದು ಬಂದ. ಅಜ್ಜಿ ಅವನ ಕಿವೀಲಿ ಏನೋ ಸುಳ್ಳೇಪಳ್ಳೇ ಮಟಮಣಮಣಮಣ ಮಾಡಿ ಕೊನೆಗೆ ಸಣ್ಣ ದನೀಲಿ ‘ಭತ್ತ ಸುಲಿದರೆ ಅಕ್ಕಿ’ ಅಂದ್ಲು.

ರಾಜಕುಮಾರನಿಗೆ ಕುತೂಹಲ.

‘ಏನಂದ್ಲೊ ಅಜ್ಜಿ?’ ಕೇಳ್ದ.

‘ಏನಿಲ್ಲ ಕಣೊ. ಭತ್ತ ಸುಲಿದರೆ ಅಕ್ಕಿ ಅಂದ್ಲು’ ಅಂದ ಆಳು ಮಗ.

ರಾಜಕುಮಾರ ನಂಬಲೇ ಇಲ್ಲ. ಭತ್ತ ಸುಲಿದರೆ ಅಕ್ಕಿ ಅನ್ನೋದು ಲೋಕಕ್ಕೇ ಗೊತ್ತಿದೆ. ಕಿವೀಲಿ ಯಾಕೆ ಹೇಳಬೇಕು? ಬೇರೇನೋ ಹೇಳಿದ್ದಾಳೆ. ‘ಏನು ಹೇಳಿದ್ಲೊ ನಿಜ ಹೇಳೋ’ ಅಂದ ರಾಜಕುಮಾರ.

ಅವನಿಗೆ ಸಿಟ್ಟು ಬಂದಿತ್ತು. ಮೊದಲ ಬಾರಿ ಆಳು ಮಗನ ಮೇಲೆ ಸಿಟ್ಟು.

ಆಳು ಮಗ ಏನು ಹೇಳ್ತಾನೆ ಪಾಪ! ಮತ್ತೆ ಮತ್ತೆ ಅದನ್ನೇ ಹೇಳಿದ. ‘ಭತ್ತ ಸುಲಿದರೆ ಅಕ್ಕಿ ಅಂದ್ಲು. ಬೇಕಾದ್ರೆ ಆ ಅಜ್ಜೀನೆ ಕೇಳು’ ಅಂದ.

ರಾಜಕುಮಾರ ನಂಬಲಿಲ್ಲ. ಕೋಪದಿಂದ ಗೆಳೆಯನಿಗೆ ಠೂ ಮಾಡಿದ. ಮಾತು ಕತೆ ಬಿಟ್ಟ. ಆಳುಮಗನ ಜತೆ ಊಟ ಬಿಟ್ಟ. ಆಟ ಬಿಟ್ಟ; ಓಡಾಟ ಬಿಟ್ಟ. ದೋಸ್ತಿಯನ್ನೇ ಬಿಟ್ಟ.

ಎಂದಿನ ರಾಜಕುಮಾರ ಆದ. ವಿದ್ಯಾಭ್ಯಾಸ ಆರಂಭ ಮಾಡಿದ. ಆಳುಮಗನಿಗೆ ಬೇಸರ ತಂದ; ಆದರೆ ಆಳುವ ದೊರೆಗೆ ಸಂತಸ ತಂದ. ನೆಮ್ಮದಿ ತಂದ.

ಭತ್ತ ಸುಲಿದರೆ ಅಕ್ಕಿ! ನೋಡಲು ತುಂಬಾ ಸಿಂಪಲ್ಲು. ಆದರೆ ಅದರಲ್ಲಿ ಏನೆಲ್ಲ ರಹಸ್ಯ ಅಡಗಿದೆ. ಎಷ್ಟೆಲ್ಲ ಕತೆಗಳಿವೆ. ನಾವೂ ಭತ್ತದ ಈ ಕತೆ ಕೇಳಿ, ಅಕ್ಕಿಯ ಬಗ್ಗೆ ಒಂದು ಹೊಸ ವಿದ್ಯಾಭ್ಯಾಸ ಆರಂಭ ಮಾಡೋಣವೆ?

ಕನ್ನಡದ ಮೊದಲನೆಯ ಅಕ್ಷರ ‘ಅ’ ಅಂದರೆ ಅಕ್ಕಿ ಅಥವಾ ‘ಅ’ ಅಂದರೆ ಅನ್ನದಿಂದಲೇ ಆರಂಭ ಆಗುತ್ತದೆ ತಾನೆ? ಮಗುವಿನ ಬಾಯಿಗೆ ಅನ್ನದ ಮೊದಲ ಅಗುಳನ್ನು ತಿನ್ನಿಸುವ ಮುಂಚೆ ಅಥವಾ ಮೊದಲ ಅಕ್ಷರ ಕಲಿಸುವಾಗ ಒಂದು ಬಟ್ಟಲಲ್ಲಿ ತುಸು ಅಕ್ಕಿ ಹರಡಿ ಅದರ ಮೇಲೆ ‘ಓಂ’ ಎಂದು ಬರೆಯುತ್ತಾರೆ. ಇಲ್ಲವೆ ‘ಅ’ ಎಂದೇ ಬರೆಸುವ ಸಂಪ್ರದಾಯ ಕೆಲವೆಡೆ ಇದೆ. ಕೆಲವು ಕುಟುಂಬಗಳು ಮಗುವಿಗೆ ಹೆಸರಿಡುವ ಸಂದರ್ಭದಲ್ಲೇ ಅಕ್ಕಿಯ ಬಟ್ಟಲಲ್ಲಿ ಆ ಹೆಸರನ್ನು ಮೊದಲು ಬರೆಯುತ್ತಾರೆ.

ಅಕ್ಕಿ ಮತ್ತು ಅನ್ನದ ಬಗ್ಗೆ ನಮ್ಮ ಸಂಸ್ಕೃತಿಯಲ್ಲಿ ಅಷ್ಟೊಂದು ಅಕ್ಕರೆ, ಆದರ, ಗೌರವ ಇದೆ. ಅದು ನಮ್ಮ ಬದುಕಿಗೆ ಮೂಲಾಧಾರ. ನಮಗೆ ದುಡಿಯುವ ಶಕ್ತಿಯನ್ನೂ ಆರೋಗ್ಯವನ್ನೂ ನೀಡುವ ಮೂಲಬಲ ಅದು.

ಕನ್ನಡದ ಪಡಿಯೇ ಇಂಗ್ಲಿಷ್‌ನ ಪ್ಯಾಡಿ

ನಾವೀಗ ರಾಜನ ಕತೆಯಿಂದ ಆರಂಭಿಸಿ ಅಕ್ಕಿಯವರೆಗೆ ಬಂದೆವು ಸರಿಯಷ್ಟೆ? ದೂರದ ಜಪಾನ್ ದೇಶದಲ್ಲೂ ರಾಜನಿಂದಲೇ ಭತ್ತದ ಬೇಸಾಯ ಆರಂಭವಾಗುತ್ತದೆ. ಜಪಾನಿನಲ್ಲೂ ಭತ್ತ, ಅಕ್ಕಿ ಮತ್ತು ಅನ್ನದ ಬಗೆಗೆ ಅಪಾರ ಭಕ್ತಿ, ಗೌರವ ಇದೆ. ಅಲ್ಲಿನ ಚಕ್ರವರ್ತಿ ತನ್ನ ಕೈಯಾರೆ ಒಂದು ಪವಿತ್ರ ಬಟ್ಟಲಲ್ಲಿ ಭತ್ತವನ್ನು ನೆನೆಸಿ, ಮೊಳಕೆ ಬರಿಸಿ, ಸಸಿ ಮಾಡಿ, ಪೂಜೆ ಮಾಡಿದ ನಂತರವೇ ಅಲ್ಲಿ ಪ್ರತಿವರ್ಷ ಭತ್ತದ ಬೇಸಾಯ ಆರಂಭವಾಗುತ್ತದೆ. ಭತ್ತವನ್ನು ಬೆಳೆಯುವ ರೈತರಿಗೆ ಜಪಾನಿನಲ್ಲಿ ತುಂಬ ಗೌರವ ಇದೆ. ಯಾವ ಸಂದರ್ಭದಲ್ಲೂ ಅವನಿಗೆ ತೊಂದರೆ- ಮೋಸ ಆಗದಂತೆ ಸರಕಾರ ಬೆಂಬಲ ನೀಡುತ್ತದೆ. ಆತ ಬೆಳೆದ ಭತ್ತ ಮತ್ತು ಅಕ್ಕಿ ಪೂರ್ತಿ ಮಾರಾಟವಾಗುವವರೆಗೆ ಜಪಾನ್ ಬೇರೆ ಯಾವ ದೇಶದಿಂದಲೂ ಅಕ್ಕಿಯನ್ನು ಆಮದು ಮಾಡಿಕೊಳ್ಳುವುದಿಲ್ಲ.

ಭತ್ತಕ್ಕೆ ಇಂಗ್ಲಿಷ್‌ನಲ್ಲಿ ‘ಪ್ಯಾಡಿ’ (paddy) ಅನ್ನುತ್ತಾರೆ. ಅದು ನಮ್ಮದೇ ‘ಪಡಿ’ ಎಂಬ ಪದದಿಂದ ಬಂದುದು. ಮಲೆನಾಡಿನ ಹಳ್ಳಿಗಳಲ್ಲಿ ಯಾರಾದರೂ ಭಿಕ್ಷೆಗೆ ಬಂದರೆ, ‘ಒಂದು ಪಡಿ ಭಿಕ್ಷೆ ಹಾಕು’ ಎಂದು ಮನೆಯ ಯಜಮಾನ ತನ್ನ ಮನೆಯವರಿಗೆ ಹೇಳುತ್ತಾನೆ. ‘ಪಡಿ’ ಅಂದರೆ ಬೊಗಸೆ ಅಕ್ಕಿ. ಇಂಡೊನೇಶ್ಯದಲ್ಲಿ ಭತ್ತಕ್ಕೆ ‘ಪಡಿ’ ಎನ್ನುತ್ತಾರೆ. ಇಂಗ್ಲಿಷ್ ಭಾಷೆ ಉಗಮಿಸುವ ಮೊದಲಿನಿಂದಲೂ ‘ಪಡಿ’ ಎಂಬ ಪದ ಚಾಲ್ತಿಯಲ್ಲಿತ್ತು. ಅಷ್ಟೇ ಅಲ್ಲ, ಅದು ಭಾರತ, ಬರ್ಮಾ, ಥಾಯ್ಲೆಂಡ್, ಕೊರಿಯಾ, ವಿಯಟ್ನಾಂ ದಾಟಿ ಇಂಡೊನೇಶ್ಯವರೆಗಿನ ಅರ್ಧ ಜಗತ್ತನ್ನೇ ಆವರಿಸಿತ್ತು.

ಹಾಗಿದ್ದರೆ ಭತ್ತದ ಇತಿಹಾಸ ಎಷ್ಟು ಹಳೆಯದಿರಬಹುದು? ‘ಭತ್ತ ಸುಲಿದರೆ ಅಕ್ಕಿ’ ಎಂಬ ಸಂಗತಿ ಮೊದಲ ಬಾರಿಗೆ ಯಾರಿಗೆ ಗೊತ್ತಾಗಿರಬಹುದು?

ಅದೇನೊ ಗೊತ್ತಿಲ್ಲ. ಆದರೆ ಮನುಷ್ಯ ಅವತರಿಸುವ ತುಂಬ ಮೊದಲೇ ಭತ್ತ ಈ ಜಗತ್ತಿಗೆ ಬಂದಿತ್ತು. ಎಷ್ಟು ಮೊದಲು ಅಂದರೆ, ಡೈನೊಸಾರ್ ಎಂಬ ದೈತ್ಯ ಮೃಗಗಳ ವಿಕಾಸ ಆಗುವುದಕ್ಕಿಂತ ಮೊದಲೇ. ಸುಮಾರು ಇಪ್ಪತ್ತು ಕೋಟಿ ವರ್ಷಗಳ ಹಿಂದೆ ಏಷ್ಯಾ ಖಂಡ, ಆಸ್ಟ್ರೇಲಿಯಾ, ಯುರೋಪ್, ಅಮೆರಿಕ, ಅಂಟಾರ್ಕ್‌ಟಿಕ ಮುಂತಾದ ಎಲ್ಲ ಖಡಗಳೂ ಒಂದಕ್ಕೊಂದು ಅಂಟಿಕೊಂಡಿದ್ದಾಗಲೇ ಭತ್ತದ ಸಸ್ಯ ಅಲ್ಲಲ್ಲಿ ಕಣಿವೆಗಳಲ್ಲಿ, ಹುಲ್ಲು ಬೆಳೆಯುವಲ್ಲಿ ತಾನೂ ಬೆಳೆದು ನಿಂತಿತ್ತು. ಮುಂದೆ ಅದೆಷ್ಟೊ ಲಕ್ಷೋಪಲಕ್ಷ ವರ್ಷಗಳಲ್ಲಿ ಭೂಮಿ ಬಿರುಕು ಬಿಟ್ಟು, ಖಂಡ- ಉಪಖಂಡಗಳಾಗಿ, ಅವೆಲ್ಲ ಪರಸ್ಪರ ದೂರ ಚಲಿಸುತ್ತ ಹೋದಂತೆ, ಭತ್ತ ಬೆಳೆಯತ್ತಿದ್ದ ನೆಲವೂ ಭಾಗವಾಗಿ ದೂರದ ಖಂಡಗಳಿಗೆ ವ್ಯಾಪಿಸಿತು. ಅದಕ್ಕೇ ಇಂದು ನಮ್ಮ ಕೊಂಕಣಪಟ್ಟಿಯಲ್ಲಿ ಬೆಳೆಯಬಲ್ಲ ಭತ್ತವೇ ದೂರದ ಮಡಗಾಸ್ಕರ್‌ನಲ್ಲಿ, ಮಾರಿಷಸ್‌ನಲ್ಲಿ, ಆಫ್ರಿಕಾ ಖಂಡದಲ್ಲಿ ಕೂಡ ಕಾಣಸಿಗುತ್ತದೆ. ಹಾಗೆಯೇ ಆಂಧ್ರ, ಒರಿಸ್ಸಾ, ಬಂಗಾಳಗಳಲ್ಲಿ ಕಾಣುವ ಭತ್ತವೇ ಪೂರ್ವದ ಮಲೇಷ್ಯ, ಕೊರಿಯಾ, ಇಂಡೊನೇಶ್ಯ ಮತ್ತು ಜಪಾನ್‌ನಲ್ಲೂ ಕಾಣಲು ಸಿಗುತ್ತದೆ. ಅಲ್ಲಲ್ಲಿನ ಇಂದಿನ ಹವಾಗುಣಕ್ಕೆ ತಕ್ಕಂತೆ ಹೊಸ ಹೊಸ ತಾಕತ್ತನ್ನು ರೂಢಿಸಿಕೊಂಡಿದೆ. ಜಗತ್ತಿನ ಅರ್ಧಕ್ಕರ್ಧಕ್ಕಿಂತ ತುಸು ಹೆಚ್ಚು ಜನರಿಗೆ ಅಕ್ಕಿಯೇ ಬಹುಮುಖ್ಯ ಆಹಾರವಸ್ತುವಾಗಿದೆ.

ಅಕ್ಕಿಯಿಂದ ಅಕ್ಷತೆಯವರೆಗಿನ ಅಕ್ಷಯ ಕತೆ

ದಕ್ಷಿಣ ಭಾರತದಲ್ಲ್ಲಿ ಬಹುಪಾಲು ಜನರಿಗೆ ಬೆಳಿಗ್ಗೆ, ಮಧ್ಯಾಹ್ನ, ರಾತ್ರಿ ಊಟಕ್ಕೆ ಅಕ್ಕಿ ಬೇಕೇ ಬೇಕು. ಕೆಲವು ಜಿಲ್ಲೆಗಳಲ್ಲಿ ರಾಗಿಯ ಮದ್ದೆ, ಜೋಳದ ರೊಟ್ಟಿ, ಗೋಧಿಯ ಚಪಾತಿ ತಿನ್ನುತ್ತಾರೆ ನಿಜ. ಆದರೆ ಬಹಳಷ್ಟು ಜನರಿಗೆ ಪ್ರತಿದಿನವೂ ದೋಸೆ, ಇಡ್ಲಿ ಜತೆ ಅನ್ನ ಬೇಕೇ ಬೇಕು. ಬೇರೆ ಏನನ್ನೇ ತಿಂದರೂ ತುಸುವಾದರೂ ಅನ್ನವನ್ನು ತಿಂದರೆ ಮಾತ್ರ ಅವರಿಗೆ ಸಮಾಧಾನವಾಗುತ್ತದೆ. ಅಕ್ಕಿ, ಅವಲಕ್ಕಿ, ಮಂಡಕ್ಕಿ (ಚುರುಮುರಿ ಅಥವಾ ಕಳ್ಳೇಪುರಿ), ಕುಸುಬಲ ಅಕ್ಕಿ…. ಒಂದಲ್ಲ ಒಂದು ಸದಾಕಾಲ ಮನೆಯಲ್ಲಿ ಇರಲೇಬೇಕು. ತೀರ ಕಡು ಬಡವನಾಗಿದ್ದ ಸುಧಾಮ ತನ್ನ ಬಾಲ್ಯದ ಸಹಪಾಠಿ ಗೆಳೆಯ ಕೃಷ್ಣನಿಗೆಂದು ಅವಲಕ್ಕಿಯ ಪೊಟ್ಟಣವನ್ನೇ ಕೊಂಡೊಯ್ದ ಕತೆ ಮಹಾಭಾರತದಲ್ಲಿ ಬರುತ್ತದೆ. ನಮ್ಮ ದೇಶದ ಸುಮಾರು ಅರವತ್ತು ಕೋಟಿ ಜನರಿಗೆ ಭತ್ತ, ಅಕ್ಕಿ ಮತ್ತು ಅದರ ಬಹುರೂಪಿ ಉಪ ಉತ್ಪನ್ನಗಳು ನಿತ್ಯವೂ ಬೇಕಾಗುತ್ತದೆ. ಬಡವರ ಬೇರೆ ಏನೇ ಸಿಗಲಿ, ಸಿಗದಿರಲಿ, ಅಗ್ಗದ ದರದಲ್ಲಿ ಅಕ್ಕಿಯನ್ನು ಒದಗಿಸುವುದಾಗಿ ರಾಜಕಾರಣಿಗಳು ಪ್ರತಿ ಚುನಾವಣೆಯಲ್ಲೂ ಆಶ್ವಾಸನೆ ನೀಡುತ್ತಾರೆ. ಆದ್ದರಿಂದಲೇ ಅಕ್ಕಿಗೆ ‘ರಾಜಕೀಯ ಧಾನ್ಯ’ ಎಂತಲೂ ಹೇಳುತ್ತಾರೆ.

ಅಷ್ಟೇ ಅಲ್ಲ, ಅಕ್ಕಿಯ ಮಹತ್ವ ಇನ್ನಷ್ಟಿದೆ. ಅದು ಅನೇಕ ದೇಶಗಳ ಮಟ್ಟಿಗೆ ‘ಪವಿತ್ರ ಧಾನ್ಯ’ ಕೂಡ ಹೌದು. ಜನಜೀವನದ ಸಾಂಸ್ಕೃತಿಕ ಪರಂಪರೆಯ ಜತೆ ಭತ್ತ, ಅಕ್ಕಿ, ಅನ್ನ ಈ ಮೂರೂ ತೀರ ಗಾಢವಾಗಿ ಬೆಸೆದುಕೊಂಡಿವೆ. ಭತ್ತದ ತೆನೆಯನ್ನು ಹೆಣೆಯುವುದಿರಲಿ ಅಥವಾ ಧಾನ್ಯ ಸಂಗ್ರಹಿಸಿಡುವ ಪಣತವನ್ನು ನಿರ್ಮಿಸುವುದಿರಲಿ ಅಲ್ಲಿ ಎಷ್ಟೊಂದು ಬಗೆಯ ಕಲೆ ಮತ್ತು ಕೌಶಲ ಮೇಳವಿಸುತ್ತವೆ. ಹಬ್ಬ ಹರಿದಿನಗಳಲ್ಲಿ ಅಕ್ಕಿ ಹಿಟ್ಟಿನ ನಾನಾ ವಿಧವಾದ ಸಿಹಿ ತಿಂಡಿ, ಕುರಕಲು ಖಾರ, ಹಪ್ಪಳ ಸಂಡಿಗೆಗಳು ಮೈದಳೆಯುತ್ತವೆ. ನಮ್ಮಲ್ಲಿ ಬಹುತೇಕ ಎಲ್ಲ ಧಾರ್ಮಿಕ ಶುಭ ಕಾರ್ಯಗಳಲ್ಲಿ ಅಕ್ಕಿ ಕಾಳಿನ ಅಕ್ಷತೆ ಇರಲೇಬೇಕು. ಕುಂಕುಮ ಅಥವಾ ಅರಿಶಿಣ ಲೇಪಿಸಿದ ಅಕ್ಕಿಕಾಳು (ಅಕ್ಷತೆ) ಇಲ್ಲದೆ ಮಂಗಲ ಕಾರ್ಯಗಳು ನಡೆಯುವುದೇ ಇಲ್ಲ. ದೇವರ ಪೂಜೆಗೆ ಹೂಗಳು ಇಲ್ಲದಿದ್ದರೂ ಪರವಾಗಿಲ್ಲ, ಅಕ್ಕಿಕಾಳಿನ ಅಕ್ಷತೆ ಇದ್ದರೆ ಸಾಕು. ಅಕ್ಕಿಕಾಳಿನ ಬದಲು ಜೋಳ ಅಥವಾ ಗೋಧಿಕಾಳುಗಳ ಅಕ್ಷತೆಯನ್ನು ನಾವು ಊಹಿಸುವುದೂ ಸಾಧ್ಯವಿಲ್ಲ. ನಮ್ಮ ದೇಶದಲ್ಲಷ್ಟೇ ಅಲ್ಲ, ಇಂಡೊನೇಶ್ಯ, ಥಾಯ್ಲೆಂಡ್, ಕಾಂಬೋಡಿಯಾ, ಕೊರಿಯಾದಿಂದ ಹಿಡಿದು ಜಪಾನ್, ಫಿಲಿಪ್ಪೀನ್ಸ್‌ವರೆಗೆ ಅಕ್ಕಿ ಅಲ್ಲಲ್ಲಿನ ಜನಪದದ ಸಂಸ್ಕೃತಿಯೊಂದಿಗೆ ಗಾಢವಾಗಿ ಬೆಸೆದುಕೊಂಡಿದೆ. ಜಪಾನ್‌ನಲ್ಲಿ ಭತ್ತದ ಜೀವಂತ ತೆನೆಗಳ ಮೂಲಕ ಗದ್ದೆಗಳಲ್ಲೇ ದೇವರ ಹಾಗೂ ಭೂತಗಳಗಳ ಚಿತ್ರವನ್ನು ರಚಿಸುವ ಪದ್ಧತಿ ಇದೆ. ನಮ್ಮಲ್ಲೂ ಬಾಗಿಲಿನ ತೋರಣಗಳಾಗಿ ಭತ್ತದ ಗೊಂಚಲಿನ ಮಾಲೆಗಳನ್ನೇ ಕಲಾತ್ಮಕವಾಗಿ ಹೆಣೆದು ಜೋಡಿಸುವ ಪದ್ಧತಿ ಇದೆ. ಅಗಲಿದ ಪಿತೃಗಳಿಗೆಂದು ಅನ್ನದ ಉಂಡೆಗಳನ್ನು (ಪಿಂಡಗಳನ್ನು) ಮಾಡಿ ಅರ್ಪಿಸಲಾಗುತ್ತದೆ. ನವಜಾತ ಶಿಶುವಿಗೆ ಹೆಸರಿಡುವಾಗಲೂ ಅಕ್ಕಿ ಕಾಳು ಬೇಕು; ಹಿರಿಯ ಜೀವಗಳು ನಮ್ಮನ್ನು ಅಗಲಿದಾಗಲೂ ಅಕ್ಕಿ ಬೇಕು.

‘ಅನ್ನದ ಋಣ’ ಎಂಬ ಮಾತನ್ನು ಆಗಾಗ ಕೇಳುತ್ತೇವೆ. ಅನ್ನವನ್ನು ಕೊಟ್ಟವರನ್ನು ನಾವು ಸದಾ ನೆನಪಿನಲ್ಲಿ ಇಟ್ಟಿರಬೇಕು ಎಂಬ ಸೌಜನ್ಯದ, ಸದ್ಗುಣದ ಮಾತು ಅದು.

ಅಂದಹಾಗೆ, ನಮಗೆ ಅನ್ನವನ್ನು ಕೊಡುವವರಲ್ಲಿ ಆತ್ಯಂತ ಪ್ರಮುಖರು ಯಾರು? ರೈತರು ತಾನೆ? ಒಂದು ಹಿಡಿ ಭತ್ತದ ಬೀಜದಿಂದ ಒಂದು ಮೂಟೆ ಅಕ್ಕಿಯನ್ನು ತಯಾರಿಸುವವರೆಗಿನ ಅವರ ಶ್ರಮವನ್ನು, ದುಡಿಮೆಯನ್ನು, ಅವರ ಹೋರಾಟಗಳನ್ನು, ಅವರ ಕಷ್ಟನಷ್ಟಗಳನ್ನು ನೆನಪುಮಾಡಿಕೊಳ್ಳುವುದು ಅನ್ನವನ್ನು ತಿನ್ನುವ ಎಲ್ಲರ ಕರ್ತವ್ಯ.

ಅದಕ್ಕಿಂತ ಮುಖ್ಯವಾದ ಸಂಗತಿ ಇನ್ನೊಂದಿದೆ. ನಮಗೆ ಅನ್ನವನ್ನು ಕೊಡುವವರಲ್ಲಿ ರೈತನಿಗಿಂತ ಮುಖ್ಯವಾದುದು ಭತ್ತದ ಸಸ್ಯ. ಅದರ ಹೋರಾಟದ ಕತೆಯೂ ತುಂಬ ರೋಚಕವಾಗಿದೆ.

ಮೊದಲು ಭತ್ತದಿಂದಲೇ ಆರಂಭಿಸೋಣ.

ಭತ್ತ ಮೂಲತಃ ಹುಲ್ಲಿನ ಜಾತಿಗೆ ಸೇರಿದ ಸಸ್ಯ. ಗೋಧಿ, ನವಣೆ, ಜೋಳ, ರಾಗಿ, ಕಬ್ಬು, ಬಿದುರು ಕೂಡ ಹುಲ್ಲಿನ ಜಾತಿಗೆ ಸೇರಿವೆ. ಬೆಟ್ಟದಲ್ಲಿ ತಾನಾಗಿ ಹುಟ್ಟಿ ಬೆಳೆಯುವ ಅನೇಕ ಹುಲ್ಲು ಸಸ್ಯಗಳೂ ತೆನೆ ಬಿಡುತ್ತವೆ; ತೆನೆಯಲ್ಲಿ ಬೀಜವಿರುತ್ತದೆ. ಭತ್ತ ಎಂಬುದು ವಿಶೇಷ ಗುಣವುಳ್ಳ ಹುಲ್ಲು ಸಸ್ಯ.

ಎಲ್ಲ ಜೀವಿಗಳಲ್ಲೂ ‘ವಂಶವಾಹಿ ಸೂತ್ರ’ ಇರುತ್ತದೆ. ಅಂದರೆ ತಾನು ಎಷ್ಟೆತ್ತರ ಬೆಳೆಯಬೇಕು, ಎಷ್ಟು ಕಾಲ ಬದುಕಬೇಕು; ಯಾವ ಯಾವ ಗುಣಗಳು ತನ್ನಲ್ಲಿರಬೇಕು ಎಂಬುದರ ಚರಿತ್ರೆ ಪ್ರತಿಯೊಂದು ಜೀವಿಯ ವಂಶವಾಹಿ ಸೂತ್ರದಲ್ಲಿ ಬರೆದಿರುತ್ತದೆ. ಈ ಸೂತ್ರಗಳನ್ನು ವಿವರಿಸುವ ‘ಪುಟ’ಗಳಿಗೆ ‘ಗುಣಾಣು’ ಎನ್ನುತ್ತಾರೆ. ಇಂಗ್ಲಿಷ್‌ನಲ್ಲಿ ಅದಕ್ಕೆ ‘ಜೀನ್ಸ್’ ಎನ್ನುತ್ತಾರೆ.

ಮನುಷ್ಯನಿಗಿಂತ ಹೆಚ್ಚಿನ ಗುಣಾಣು ಭತ್ತದಲ್ಲಿ!

ಮನುಷ್ಯರ ದೇಹದ ವಂಶವಾಹಿ ಸೂತ್ರವನ್ನು ವಿಜ್ಞಾನಿಗಳು ಬಿಚ್ಚಿ ನೋಡಿ, ಅದರಲ್ಲಿ ಸುಮಾರು ೩೨ ಸಾವಿರ ಗುಣಾಣುಗಳಿವೆ ಎಂದು ಲೆಕ್ಕ ಮಾಡಿದ್ದಾರೆ. ಅದೇರೀತಿ ಸಸ್ಯಗಳಲ್ಲೂ ಮೊದಲಿಗೆ ಭತ್ತದ ಸಸ್ಯದ್ದೇ ವಂಶವಾಹಿ ಸೂತ್ರವನ್ನು ಬಿಚ್ಚಿನೋಡಿ, ಅದರಲ್ಲಿ ೫೦ ಸಾವಿರ ಗುಣಾಣು ಇವೆ ಎಂದು ಹೇಳಿದ್ದಾರೆ. ಮನುಷ್ಯರಿಗಿಂತ ಹೆಚ್ಚಿನ ಸಂಖ್ಯೆಯ ಗುಣಾಣುಗಳು ಈ ಭತ್ತದ ಸಸ್ಯದಲ್ಲಿ ಏಕೆ ಇವೆ ಎಂದು ಮೊದಮೊದಲು ಎಲ್ಲರೂ ಅಚ್ಚರಿಪಟ್ಟರು. ಆಮೇಲೆ ಉತ್ತರ ಗೊತ್ತಾಯಿತು. ಈ ಬಡಪಾಯಿ ಸಸ್ಯ ತಾನು ಬದುಕಿ ಉಳಿಯಲು ಎಷ್ಟೆಲ್ಲ ವಿಧವಾದ ಹೋರಾಟ ನಡೆಸಬೇಕು. ಬರಗಾಲ ಬಂದರೆ ಅದು ನೀರನ್ನು ಹುಡುಕುತ್ತ ಗುಳೆ ಹೋಗುವಂತಿಲ್ಲ. ಪ್ರವಾಹದ ಅಥವಾ ಸುಂಟರಗಾಳಿಯ ಹೊಡೆತ ತಾಳಿಕೊಳ್ಳಬಲ್ಲ ದಪ್ಪ ಕವಚವೂ ಅದಕ್ಕಿಲ್ಲ. ಮೇಯಲು ಬಂದ ವೈರಿಗಳನ್ನು ಬೆದರಿಸಿ ಓಡಿಸೋಣ ವೆಂದರೆ ಮುಳ್ಳೂ ಇಲ್ಲ, ತುರಿಕೆಯ ಗುಣವೂ ಇಲ್ಲ, ವಿಷವಂತೂ ಮೊದಲೇ ಇಲ್ಲ. ಇಂಥ ಬಡಪಾಯಿ, ನಿರಾಡಂಬರ, ನಗ್ನ ಸಸ್ಯವೊಂದು ಈ ಭೂಮಿಯ ಮೇಲೆ ಬದುಕಿ ಬಾಳಬೇಕೆಂದರೆ ಏನೆಲ್ಲ ಬಗೆಯ ಶಕ್ತಿಯನ್ನು ತನ್ನೊಳಗೆ, ತನ್ನ ಬೇರಿನೊಳಗೆ, ಬೀಜದೊಳಗೆ ಇಟ್ಟುಕೊಂಡಿರಬೇಕಾಗುತ್ತದೆ. ಅದಕ್ಕೇ ಅಷ್ಟೆಲ್ಲ ಗುಣಾಣುಗಳು ಭತ್ತದಲ್ಲಿವೆ.

ಆದ್ದರಿಂದಲೇ ಭತ್ತ ಜಗತ್ತಿನ ಎಂಥದ್ದೇ ಕಠಿಣ ಪರಿಸರದಲ್ಲೂ ಬೆಳೆಯಬಲ್ಲ ಶಕ್ತಿಯನ್ನು ಪಡೆದಿದೆ. ನೇಪಾಳದಲ್ಲಿ ಮೈಕೈ ಮರಗಟ್ಟಿಸುವ ಹಿಮಾಲಯದ ಚಳಿಯಲ್ಲೂ ಅದು ಬೆಳೆಯುತ್ತದೆ. ಕೊರಿಯಾ, ಜಪಾನಿನ ಕಡಿದಾದ ಗುಡ್ಡಗಳ ಬದಿಯಲ್ಲೂ ಬೆಳೆಯುತ್ತದೆ; ಮನುಷ್ಯನೇ ಮುಳುಗಬಹು ದಾದಷ್ಟು ಆಳದ ನೀರಿನಲ್ಲೂ ಅದು ಬೆಳೆಯುತ್ತದೆ, ಈಜಿಪ್ತ್, ಇರಾನ್, ಪಾಕಿಸ್ತಾನಗಳ ಉರಿಬಿಸಿಲಿನ ಮರುಭೂಮಿ ಸದೃಶ ಪ್ರಾಂತಗಳಲ್ಲೂ ಅದು ಬೆಳೆಯುತ್ತದೆ. ದಕ್ಷಿಣ ಅಮೆರಿಕದಲ್ಲಿ ಒಣಭೂಮಿ ಬೇಸಾಯದ ಮುಖ್ಯ ಬೆಳೆಯಾಗಿ ಭತ್ತ ಬೆಳೆಯುತ್ತದೆ. ಪೃಥ್ವಿಯ ಒಟ್ಟೂ ಸುಮಾರು ೩೬ ಕೋಟಿ ಎಕರೆ (ಭೂಗ್ರಹದ ಶೇಕಡಾ ೧೧ ಭಾಗ) ಭೂಮಿಯಲ್ಲಿ ಭತ್ತ ತನ್ನ ಸಾಮ್ರಾಜ್ಯವನ್ನು ವಿಸ್ತರಿಸಿಕೊಂಡಿದೆ. ಬೇರೆ ಯಾವ ಸಸ್ಯ ಇಷ್ಟೊಂದು ವೈವಿಧ್ಯಮಯ ಭೂಪ್ರದೇಶದಲ್ಲಿ ಬೇರು ಬಿಟ್ಟು ಬೆಳೆಯಲು ಸಾಧ್ಯ?

ಆದರೆ ಮನುಷ್ಯನೆಂಬ ಪ್ರಾಣಿ ಗದ್ದೆಗೆ ಇಳಿದು ಕೃಷಿವಿದ್ಯೆ ಯನ್ನು ಕಲಿತ ಮೇಲೆ ಭತ್ತಕ್ಕೆ ನಿಜಕ್ಕೂ ಅಪಾಯ ಬಂದಿದೆ.

ಅದು ಹೇಗೆ ಅಂತೀರಾ? ಅಕ್ಕಿ ಈ ಪ್ರಪಂಚದ ಅರ್ಧಕ್ಕರ್ಧ ಜನರ ಮುಖ್ಯ ಆಹಾರವಾಗಿದ್ದ ರಿಂದ ವಾಣಿಜ್ಯದ ದೃಷ್ಟಿಯಿಂದ ಅದು ತುಂಬ ಮಹತ್ವದ ಸಾಮಗ್ರಿಯಾಗಿದೆ. ಭತ್ತದ ಬೇಸಾಯ, ಅಕ್ಕಿಯ ಪೂರೈಕೆ ಮತ್ತು ಬೆಲೆಯನ್ನು ತಮ್ಮ ನಿಯಂತ್ರಣದಲ್ಲಿ ಇಟ್ಟುಕೊಳ್ಳಲು ಜಗತ್ತಿನ ಎಲ್ಲ ಶಕ್ತಿಶಾಲಿ ರಾಷ್ಟ್ರಗಳೂ, ಪ್ರಭಾವೀ ವಾಣಿಜ್ಯ ಕಂಪನಿಗಳೂ ಯತ್ನಿಸುತ್ತವೆ. ಕೆಲವು ಬಹುರಾಷ್ಟ್ರೀಯ ಕಂಪನಿಗಳು ಬುದ್ಧಿವಂತ ವಿಜ್ಞಾನಿಗಳನ್ನೂ ಭತ್ತದ ಸಂಶೋಧನೆಗೆಂದೇ ತಮ್ಮ ಊಳಿಗದಲ್ಲಿ ಇಟ್ಟುಕೊಳ್ಳುತ್ತವೆ. ಆದ್ದರಿಂದಲೇ ಸಸ್ಯಗಳಲ್ಲಿ ಎಲ್ಲಕ್ಕಿಂತ ಮೊದಲು ಭತ್ತದ್ದೇ ತಳಿನಕ್ಷೆಯನ್ನು ಸಿದ್ಧಪಡಿಸಲಾಗಿದೆ.

ಇಷ್ಟೆಲ್ಲ ಮಹತ್ವ ಪಡೆದು ಎಲ್ಲರ ಕೈಗೊಂಬೆಯಾಗುವ ಭತ್ತಕ್ಕೆ ಅದು ಹೇಗೆ ಅಪಾಯ ಬಂದಿದೆ? ಅದನ್ನು ತುಸು ತುಸು ವಿವರವಾಗಿ ನೋಡೋಣ.

ಭತ್ತದ ತಳಿ ತರಾವರಿ

ಭತ್ತದಲ್ಲಿ ಅನೇಕ ಉಪಜಾತಿಗಳಿವೆ, ಅದು ನಮಗೆ ಸುಮಾರಾಗಿ ಗೊತ್ತಿದೆ. ಪರಿಮಳದ ‘ಬಾಸ್ಮತಿ ಭತ್ತ’, ಪುಟ್ಟ ಕಾಳಿನ ‘ಜೀರಿಗೆ ಸಣ್ಣ’ ಭತ್ತ; ಮೆಲು ಸುವಾಸನೆ ಬೀರುವ ‘ಗಂಧಸಾಲೆ’ ಭತ್ತ, ಕೆಂಪು ಕಾಳಿನ ‘ರತ್ನಚೂಡ’ ಭತ್ತ… ಹೀಗೆ.

ನಮಗೆ ಗೊತ್ತಿರುವುದು ಹೆಚ್ಚೆಂದರೆ ಹತ್ತೊ ಹದಿನೈದೊ ಜಾತಿಗಳು ಅಷ್ಟೆ. ಆದರೆ ಐವತ್ತು ವರ್ಷಗಳ ಹಿಂದೆ ನಮ್ಮ ದೇಶದಲ್ಲಿ ಸುಮಾರು ಐದು ಲಕ್ಷ, ನೆನಪಿಡಿ, ಐದು ಲಕ್ಷ ಜಾತಿಯ ಭತ್ತಗಳಿದ್ದವು. ಆಧುನಿಕ ಬೇಸಾಯ ವಿಧಾನಗಳು ಜಾರಿಗೆ ಬಂದಮೇಲೆ ಭತ್ತದ ತಳಿವೈವಿಧ್ಯ ಕ್ರಮೇಣ ಕಡಿಮೆಯಾಗುತ್ತ ಬಂದು ಈಗಂತೂ ಚಿಂತಾಜನಕ ಹಂತಕ್ಕೆ ಬಂದಿದೆ.

ನೀವು ಕೇಳಬಹುದು: ಸತ್ಯಾಂಶ ಏನೆಂದರೆ ಭತ್ತದ ಉತ್ಪಾದನೆ ನಮ್ಮಲ್ಲಿ ವರ್ಷ ವರ್ಷವೂ ಹೆಚ್ಚುತ್ತಿದೆ. ಸ್ವಾತಂತ್ರ್ಯ ಬಂದ ಹೊಸದರಲ್ಲಿ ನಮ್ಮ ದೇಶದಲ್ಲಿ ಎರಡು ಕೋಟಿ ಟನ್ ಭತ್ತ ಬೆಳೆಯುತ್ತಿದ್ದೆವು. ಈಗ ಸುಮಾರು ೯ ಕೋಟಿ ಟನ್ ಬೆಳೆಯುತ್ತಿದ್ದೇವೆ. ಅಂದರೆ ಈ ಐವತ್ತು ವರ್ಷಗಳಲ್ಲಿ ನಮ್ಮ ಭತ್ತದ ಉತ್ಪಾದನೆ ನಾಲ್ಕೂವರೆ ಪಟ್ಟು ಹೆಚ್ಚಾಗಿದೆ. ಚೀನಾ ಬಿಟ್ಟರೆ ಜಗತ್ತಿನಲ್ಲಿ ಅತಿ ಹೆಚ್ಚು ಭತ್ತ ಉತ್ಪಾದಿಸುವ ದೇಶ ನಮ್ಮದು. ಮೂರನೆಯ ಶ್ರೇಯಾಂಕ ಇಂಡೊನೇಶ್ಯದ್ದು. ಅಂದಮೇಲೆ ತಳಿವೈವಿಧ್ಯ ಕಡಿಮೆ ಆಗಿದೆ ಎಂದು ಏಕೆ ಚಿಂತಿಸಬೇಕು ಎಂದು ನೀವು ಕೇಳಬಹುದು.

ಅದಕ್ಕೆ ಉತ್ತರ ಹೀಗಿದೆ: ಹಿಂದೆ ಆಯಾ ಪ್ರದೇಶಕ್ಕೆ ತಕ್ಕಂತೆ ಭತ್ತದ ಸಶಕ್ತ ತಳಿ ಅಲ್ಲಲ್ಲಿ ಗುಡ್ಡ ಬೆಟ್ಟಗಳ ತಪ್ಪಲಲ್ಲಿ, ನದಿ ಕಣಿವೆಗಳಲ್ಲಿ, ಅರಣ್ಯದ ಅಂಚಿನಲ್ಲಿ, ಕೆರೆಕುಂಟೆಗಳ ಜವುಗು ಭೂಮಿಯಲ್ಲಿ ತಾನಾಗಿ ವಿಕಾಸವಾಗಿದ್ದವು. ಅತಿ ಕಡಿಮೆ ಮಳೆ ಬೀಳುವಲ್ಲಿ ಬರಗಾಲವನ್ನು ತಾಳಿಕೊಳ್ಳಬಲ್ಲ ಭತ್ತದ ತಳಿ ಇತ್ತು. ಸಮುದ್ರದ ಸಮೀಪದ ಕೊಳ್ಳಗಳಲ್ಲಿ, ಗಝನಿ ಭೂಮಿಯಲ್ಲಿ, ಉಪ್ಪುನೀರಿನಲ್ಲೂ ಬೆಳೆಯಬಲ್ಲ ಭತ್ತ ಇತ್ತು. ನಮ್ಮ ವರದಾ ನದಿಯ ಕೊಳ್ಳದಲ್ಲಿ ಅತಿ ಪ್ರವಾಹವನ್ನು ತಡೆದುಕೊಳ್ಳಬಲ್ಲ ‘ನೆರೆಗೂಳಿ’ ಭತ್ತ ಇತ್ತು. ನದಿಯ ಪಕ್ಕದಲ್ಲಿ ಮಳೆಗಾಲದಲ್ಲಿ ನೆರೆ ಹಾವಳಿ ಬಂದು ಇಡಿ ಇಡೀ ಗದ್ದೆಯೇ ತಿಂಗಳುಗಟ್ಟಲೆ ನೀರಲ್ಲಿ ಮುಳುಗಿದರೂ ಭತ್ತದ ಸಸಿಗಳು ಕೊಳೆಯದೆ ಜೀವಂತ ಇದ್ದು, ನೆರೆ ಇಳಿದ ನಂತರ ಚಿಗುರಿ ಎದ್ದು ಫಸಲು ಕೊಡುತ್ತಿದ್ದವು.

ಅದರ ಅರ್ಥ ಏನೆಂದರೆ, ಎಂಥದ್ದೇ ಕಷ್ಟದ ಸನ್ನಿವೇಶದಲ್ಲೂ ಭತ್ತವನ್ನು ಬೆಳೆದ ರೈತರು ಉಪವಾಸ ಬೀಳುವ ಪ್ರಸಂಗ ಬರುತ್ತಿರಲಿಲ್ಲ. ಕೆಲವು ತಳಿಗಳ ಭತ್ತದ ಸಸ್ಯಗಳು ಎತ್ತರಕ್ಕೆ ಬೆಳೆದು, ದನಕರುಗಳಿಗೆ ವರ್ಷವಿಡೀ ಮೇವು ಸಿಗುತ್ತಿತ್ತು. ಇನ್ನು ಕೆಲವು ತಳಿಗಳು ಎಂಥದ್ದೇ ರೋಗರುಜಿನೆ ಬಂದರೂ ತಾಳಿಕೊಂಡು ಬದುಕುತ್ತಿದ್ದವು. ಅಂತಹ ಅಪರೂಪದ ತಳಿಗಳಲ್ಲಿ ಬಹುಪಾಲು ತಳಿಗಳು ಹೇಳ ಹೆಸರಿಲ್ಲದಂತೆ ಈ ಭೂಗ್ರಹದಿಂದಲೇ ಕಣ್ಮರೆಯಾಗಿ ಹೋದವು.

ಅಷ್ಟೆಲ್ಲ ಭತ್ತದ ತಳಿಗಳು ಕೇವಲ ಐವತ್ತು ವರ್ಷಗಳಲ್ಲಿ ಹೇಗೆ ಕಣ್ಮರೆ ಆದವು?

ಅದು ನಮ್ಮ ದೇಶದ ಅಭಿವೃದ್ಧಿಯ ಫಲ! ಮುಖ್ಯವಾಗಿ ‘ಹಸಿರು ಕ್ರಾಂತಿ’ಯ ಫಲ.

ಈ ಹಸಿರು ಕ್ರಾಂತಿಯ ಹೆಸರಿನಲ್ಲಿ ತಜ್ಞರು ಏನು ಮಾಡಿದರು ಗೊತ್ತೆ? ಹೆಚ್ಚು ಇಳುವರಿ ನೀಡುವ ಕೆಲವೇ ಕೆಲವು ಭತ್ತದ ತಳಿಗಳಿಗೆ ಪ್ರಚಾರ ನೀಡಿ, ಅದರ ಬೀಜಗಳನ್ನೇ ದೇಶದ ಎಲ್ಲ ಹೊಲಗಳಲ್ಲಿ ಬೆಳೆಯುವಂತೆ ಪ್ರೇರಣೆ ನೀಡುತ್ತ ಹೋದರು. ರೈತರು ತಮ್ಮ ಊರಲ್ಲಿ ಅನೇಕ ತಲೆಮಾರಿನಿಂದ ಬೆಳೆಯುತ್ತ ಬಂದಿದ್ದ ಭತ್ತದ ತಳಿಗಳನ್ನು ಮರೆತು ಹೊಸ ತಳಿಗಳನ್ನು ಬೆಳೆಯಲು ಹೊರಟರು. ಅಂಥ ಹೊಸ ಬೀಜಗಳನ್ನು ಬೆಳೆಯುವ ಮೊದಲು ನೀರಾವರಿ ವ್ಯವಸ್ಥೆ ಆಗಬೇಕಲ್ಲ? ಅದಕ್ಕೆಂದು ನದಿ ಕಣಿವೆಗಳಲ್ಲಿ ಡ್ಯಾಮ್ ಕಟ್ಟಿ ನೂರಾರು ಕಿಲೊಮೀಟರ್ ಉದ್ದನ್ನ ನದಿದಂಡೆಗಳನ್ನು ಮುಳುಗಿಸಿದರು. ನದಿಗಳ ಪಕ್ಕದಲ್ಲಿ ಬೆಳೆಯುತ್ತಿದ್ದ ನಾಟಿ ತಳಿಗಳ ನಾಶಕ್ಕೆ ಕಾರಣರಾದರು. ಡ್ಯಾಮ್ ಕಟ್ಟಲಿಕ್ಕೆ ಗ್ರಾನೈಟ್ ಕಲ್ಲುಗಳು ಬೇಕೆಂದು ಅನೇಕ ಕಡೆಗಳಲ್ಲಿ ಡೈನಮೈಟ್ ಸಿಡಿಸಿದರು. ಕಲ್ಲುಗಳನ್ನು ಕುಟ್ಟಲಿಕ್ಕೆ ಕ್ರಶರ್ ಬೇಕು, ಅದಕ್ಕೆ ವಿದ್ಯುತ್ ಬೇಕು, ಅದನ್ನು ಸಾಗಿಸಿ ತರಲು ತಂತಿ ಮಾರ್ಗ ಬೇಕು; ಆಮೇಲೆ ಸಿಮೆಂಟ್ ಫ್ಯಾಕ್ಟರಿ ಬೇಕು, ಅದಕ್ಕೆ ಸುಣ್ಣದ ಕಲ್ಲು ಬೇಕು; ಅದರ ಗಣಿಗಾರಿಕೆ ಮಾಡುವಲ್ಲಿ ಕಾರ್ಮಿಕರ ಕಾಲೊನಿ ಕಟ್ಟಬೇಕು; ಅಲ್ಲಿಗೆ ರಸ್ತೆ ನಿರ್ಮಿಸಬೇಕು….

ಹಸಿರು ಕ್ರಾಂತಿಗೆ ರಸಗೊಬ್ಬರ ಕಾರ್ಖಾನೆ ಬೇಕು; ಅದಕ್ಕೆ ಮೊದಲು ಉಕ್ಕು ಕಾರ್ಖಾನೆ, ಅದಕ್ಕೆ ಮೊದಲು ಕಬ್ಬಿಣದ ಅದುರಿನ ಗಣಿಗಾರಿಕೆ; ಆಮೇಲೆ ಕೀಟನಾಶಕ ವಿಷ ರಸಾಯನಗಳ ತಯಾರಿಕೆಗೆ ಮತ್ತೊಂದಿಷ್ಟು ಫ್ಯಾಕ್ಟರಿಗಳನ್ನು ನಿರ್ಮಿಸಬೇಕು. ಆ ಎಲ್ಲ ಕಾರ್ಖಾನೆಗಳ ಕಾರ್ಮಿಕರಿಗೆ ಕಾಲೊನಿ ನಿರ್ಮಿಸಬೇಕು; ಅಷ್ಟೆಲ್ಲ ಕಟ್ಟಡ ನಿರ್ಮಾಣ ಮಾಡಲು ಮರಮುಟ್ಟು ಬೇಕು. ಸರ್ವೆ ಮರ, ನೀಲಗಿರಿ, ಅಕೇಶಿಯಾ ವನಗಳನ್ನು ಬೆಳೆಸಬೇಕು.

ಹಸಿರು ಕ್ರಾಂತಿಯೆಂಬ ಅಭಿವೃದ್ಧಿಯ ಈ ಒಂದೊಂದು ಹಂತದಲ್ಲೂ ಸಾಂಪ್ರದಾಯಿಕ ಕೃಷಿ ಭೂಮಿ ನಾಶವಾಗುತ್ತ, ಅಲ್ಲಿದ್ದ ಬೇಸಾಯ ಪರಂಪರೆ, ಬೀಜ ವೈವಿಧ್ಯ ನಾಶವಾಗುತ್ತ ಹೋಯಿತು. ಭತ್ತದ ತಳಿನಾಶಕ್ಕೆ ಎಲ್ಲಕ್ಕಿಂತ ದೊಡ್ಡ ಕಾರಣ ಏನೆಂದರೆ ಭತ್ತದ ‘ಅಧಿಕ ಇಳವರಿ’ ತಳಿಗಳು. ಅದಕ್ಕೆ ಬೇಕಾದ ಹೊಸ ಬೇಸಾಯ ತಂತ್ರಗಳು.

ಈಚಿನ ಉದಾಹರಣೆ ಎಂದರೆ, ಮ್ಯಾನ್ಮಾರ್ (ಹಿಂದಿನ ಬರ್ಮಾ) ದೇಶಕ್ಕೆ ಇತ್ತೀಚೆಗೆ ಅಂದರೆ ೨೦೦೮ರ ಮೇ ತಿಂಗಳಲ್ಲಿ ‘ನರ್ಗಿಸ್’ ಹೆಸರಿನ ಚಂಡಮಾರುತ ಬೀಸಿ ಬಂತು. ಲಕ್ಷಕ್ಕೂ ಹೆಚ್ಚು ಜನರು ಪ್ರಾಣ ಕಳೆದುಕೊಂಡರು. ಮುಖ್ಯವಾಗಿ ಭತ್ತ ಬೆಳೆಯುವ ಪ್ರಾಂತ ಎನ್ನಿಸಿದ ಇರಾವತಿ ಮತ್ತು ಅಂಡಮಾನ್ ನದಿಯ ಡೆಲ್ಟಾ ಭೂಮಿಯ ಬೇಸಾಯಭೂಮಿ ತೊಳೆದೇ ಹೋಯಿತು. ಅಲ್ಲಿನ ರೈತರ ಸಾಂಪ್ರದಾಯಿಕ ಬೀಜದ ಭತ್ತದ ದಾಸ್ತಾನು ಕೂಡ ಉಳಿಯಲಿಲ್ಲ. ಆದರೂ ಅಷ್ಟಿಷ್ಟು ಅಲ್ಲಿಂದಿಲ್ಲಿಂದ ಕಡ ಪಡೆದು ಮೂಲ ತಳಿಗಳ ಭತ್ತವನ್ನು ಬೆಳೆಯುತ್ತಿದ್ದರೊ ಏನೊ, ಆದರೆ ವಿಜ್ಞಾನಿಗಳು ನೆರವಿನ ಹೆಸರಿನಲ್ಲಿ ತಾವೇ ರೂಪಿಸಿದ ವಿಶೇಷ ತಳಿಗಳ ಭತ್ತದ ಬೀಜಗಳನ್ನು ಪೂರೈಸು ತ್ತಾರೆ. ಜವಾರಿ ತಳಿಗಳು ಆ ಪ್ರದೇಶದಿಂದ ಕಾಲು ಕೀಳುತ್ತವೆ. ನೆರವಿನ ಹೆಸರಿನಲ್ಲಿ ಸ್ಥಳೀಯ ತಳಿ ಗಳು ಕಣ್ಮರೆ ಆಗಿಬಿಡುತ್ತವೆ.

ಸಾಲು ಡೊಂಕಾದರೆ ಇಳುವರಿ ಡೊಂಕೆ?

ಇನ್ನು, ಅಧಿಕ ಇಳುವರಿಯ ಹೆಸರಿನಲ್ಲಿ ಏನೆಲ್ಲ ನಡೆದು ಹೋದುವೆಂಬ ಬಗ್ಗೆ ಒಂದು ತಮಾಷೆಯ ಕತೆ ಇದೆ: ದೇವೇಂದ್ರ ಶರ್ಮಾ ಹೇಳಿದ್ದು.

ಹಿಂದೆಲ್ಲ ರೈತರು ಬೀಜದ ಭತ್ತದ ಮೊಳಕೆ ಬರಿಸಿ, ಒಂದೆಡೆ ಒತ್ತಾಗಿ ಚೆಲ್ಲಿ, ಗೇಣುದ್ದ ಸಸಿಗಳನ್ನು ಆ ಮೇಲೆ ಎತ್ತಿ ಕೆಸರು ಗದ್ದೆಗೆ ಇಳಿದು ನಾಟಿ ಮಾಡುತ್ತಿದ್ದರು. ಅಲ್ಲಿಗೆ ಕೃಷಿ ತಜ್ಞರು ಬಂದು ನೋಡಿ, ‘ಛೆ ಛೆ, ಹಾಗೆಲ್ಲ ಅಡ್ಡಾದಿಡ್ಡಿ ನಾಟಿ ಮಾಡಬಾರದು. ಈ ಹೊಸ ತಳಿಗಳ ಫಸಲು ಚೆನ್ನಾಗಿ ಬರಬೇಕೆಂದರೆ, ಸಸಿಗಳೆಲ್ಲ ಸಾಲಿನಲ್ಲಿರಬೇಕು. ಒಂದೊಂದು ಸಾಲೂ ನೇರವಾಗಿರಬೇಕು’ ಎಂದರು. ರೈತರು ಅದನ್ನು ನಂಬಿ ಇನ್ನಷ್ಟು ಕೂಲಿ ವೆಚ್ಚ ಮಾಡಿ, ಇನ್ನಷ್ಟು ಶ್ರಮ ವಿನಿಯೋಗಿಸಿ, ಹಗ್ಗ ಹಿಡಿದು ಸಾಲಾಗಿ ನಾಟಿ ಮಾಡಲು ಆರಂಭಿಸಿದರು. ನೇರ ಸಾಲಿಗೂ ಅಧಿಕ ಇಳುವರಿಗೂ ಏನು ಸಂಬಂಧ ಎಂದು ಯಾರೂ ಯೋಚಿಸಲು ಹೋಗಲಿಲ್ಲ. ನೋಡಲು ಚಂದ ಕಾಣುತ್ತದೆ, ಅಷ್ಟೆ. ಸಾಲು ಡೊಂಕಾದರೆ ಇಳುವರಿ ಡೊಂಕೆ?

ಅನೇಕ ವರ್ಷಗಳ ನಂತರ ಒಬ್ಬ ಬುದ್ಧಿವಂತ ಕೊನೆಗೂ ಕೃಷಿ ಅಧಿಕಾರಿಗೆ ಈ ಪ್ರಶ್ನೆಯನ್ನು ಕೇಳಿಯೇ ಬಿಟ್ಟ. ಆಗ ಬಂತು ಪ್ರಾಮಾಣಿಕ ಉತ್ತರ: ‘ಗದ್ದೆಯಲ್ಲಿ ಟ್ರಾಕ್ಟರ್ ಚಕ್ರ ಸಲೀಸಾಗಿ ಚಲಿಸಲಿ ಅಂತ  ಕಂಪನಿಯವರು ನೀಡಿದ ಸಲಹೆ ಅದು. ಅದನ್ನೇ ಎಲ್ಲರಿಗೂ ಶಿಫಾರಸು ಮಾಡ್ತಾ ಇದಾರೆ….’

ಈ ಉತ್ತರದ ಹಿಂದೆ ಒಂದು ನಿಚ್ಚಳ ಸತ್ಯ ನಮಗೆ ಕಾಣಬೇಕು. ಟ್ರಾಕ್ಟರ್ ಕಂಪನಿ ಹೇಳಿದ್ದನ್ನು ಸರಕಾರಿ ಕೃಷಿ ತಜ್ಞರು ಕಣ್ಮುಚ್ಚಿ ರೈತರಿಗೆ ಹೇಳುತ್ತ ಬಂದರು. ಹಾಗೆಯೇ ರಸಗೊಬ್ಬರ ಕಂಪನಿ ಹೇಳಿದ್ದನ್ನೂ  ರೈತರಿಗೆ ಹೇಳುತ್ತ ಬಂದರು. ಬೀಜ ಕಂಪನಿಗಳು ಹೇಳಿದ್ದನ್ನೂ ಮಕ್ಕೀಕಾ ಮಕ್ಕಿ ಹೇಳುತ್ತ ಬಂದರು. ಕೊನೆಗೂ ರೈತನ ಕಲ್ಯಾಣದ ಬದಲು ಆ ಕಂಪನಿಗಳ ಈ ಕಂಪನಿಗಳ ಉದ್ಧಾರಕ್ಕೆ ಗ್ರಾಮೀಣ ಜನರು ಬೆವರು ಸುರಿಸಿ ದುಡಿಯಬೇಕಾಗಿ ಬಂದರು. ಸರಕಾರಿ ಗೋದಾಮಿಗೆ ಅಧಿಕ ಇಳು-ವರಿ ಬಂತು; ರೈತರ ಪಾಲಿಗೆ ಬರೀ ‘ವರಿ’ ಉಳಿಯಿತು.

ಹಿಂದೆ ಕೇಳಿದ ಪ್ರಶ್ನೆಯನ್ನೇ ಈಗ ಮತ್ತೊಮ್ಮೆ ಕೇಳಬಹುದು: ‘ಅಧಿಕ ಇಳುವರಿ’ಯ ಹೊಸ ತಳಿಗಳು ಬಂದಿದ್ದು ಒಳ್ಳೆಯದೇ ಅಲ್ಲವೆ? ಆಹಾರ ಧಾನ್ಯದ ಅಭಾವ ನೀಗಿತು. ಹಿಂದೆಲ್ಲ ಧಾನ್ಯ ಹೊತ್ತ ವಿದೇಶೀ ಹಡಗು ಬಂದರೆ ಮಾತ್ರ ನಮ್ಮ ಹೊಟ್ಟೆಗೆ ಹಿಟ್ಟು ಸಿಗುವಂಥ ಸ್ಥಿತಿ ಇತ್ತು. ಈಗ ನಾವು ಸ್ವಾವಲಂಬಿ ಆಗಿದ್ದೇವೆ ಒಳ್ಳೆಯದೇ ತಾನೆ? ಅಧಿಕ ಇಳುವರಿಯ ತಳಿಗಳು ಬಾರದೇ ಇದ್ದಿದ್ದರೆ, ಹಸಿರು ಕ್ರಾಂತಿ ಆಗದೇ ಇದ್ದಿದ್ದರೆ ಅಕ್ಕಿಯ ಬೆಲೆ ಈಗಿಗಿಂತ ಅದೆಷ್ಟೊ ಹೆಚ್ಚಾಗಿರುತ್ತಿತ್ತು. ಅಂಥದ್ದೇನೂ ಆಗಿಲ್ಲ. ಅವೆಲ್ಲ ಅನುಕೂಲಗಳೇ ತಾನೆ? ಮೂಲ ತಳಿಗಳು ನಾಶವಾದರೆ ಏನಾಯ್ತೀಗ?

ನೂರಾರು ಚದರ ಕಿಲೊಮೀಟರ್ ವಿಸ್ತೀರ್ಣದಲ್ಲಿ ಒಂದೇ ತಳಿಯ ಭತ್ತ ಇದ್ದರೆ ಅಪಾಯ ಏನು ಗೊತ್ತೆ? ಅಕಸ್ಮಾತ್ ಯಾವುದೋ ಹೊಸ ವೈರಸ್ ಕಾಯಿಲೆ ಬಂದರೆ ಅದು ಆ ಇಡೀ ವಿಶಾಲ ಪ್ರದೇಶದ ಭತ್ತದ ಗದ್ದೆಗಳಿಗೆ ಏಕಕಾಲಕ್ಕೆ ವ್ಯಾಪಿಸಬಹುದು, ಕಾಡಿನ ಬೆಂಕಿಯ ಹಾಗೆ. ಹಿಂದೆಲ್ಲ ಹಾಗೆ ಆಗಲು ಸಾಧ್ಯ ಇರಲಿಲ್ಲ. ಏಕೆಂದರೆ ಈ ಊರಲ್ಲಿ ಒಂದು ತಳಿ, ಪಕ್ಕದ ಊರಲ್ಲಿ ಇನ್ನೊಂದು ತಳಿ ಇರುತ್ತಿತ್ತು. ಇದಕ್ಕೆ ರೋಗ ಬಂದರೆ ಪಕ್ಕದ ಊರಿನ ಬೇರೆ ತಳಿಯ ಭತ್ತಕ್ಕೆ ಅದೇ ರೋಗ ದಾಳಿ ಮಾಡುವ ಸಂಭವ ತೀರ ಕಡಿಮೆ ಇತ್ತು. ದಾಳಿ ಮಾಡಿದರೂ ತಾಳಿಕೊಳ್ಳುವ ಶಕ್ತಿ ಅದಕ್ಕಿರುವ ಸಾಧ್ಯತೆ ಇತ್ತು. ಇಂದು ಹಾಗಿಲ್ಲ; ಎಲ್ಲ ಕಡೆ ಒಂದೇ ಜಾತಿಯ ಭತ್ತ.

ಒಂದು ಸತ್ಯಕಥೆ ಕೇಳಿ: ಭತ್ತದ ಬೆಳೆಗೆ ‘ಗ್ರಾಸ್ಸಿ ಸ್ಟಂಟ್ ವೈರಸ್’ ಹೆಸರಿನ ರೋಗ ಕೆಲವೊಮ್ಮೆ ಬರುತ್ತದೆ. ಒಂದು ಗದ್ದೆಯಿಂದ ಇನ್ನೊಂದು ಗದ್ದೆಗೆ ಬಲುಶೀಘ್ರ ವ್ಯಾಪಿಸುತ್ತ ಇದು ಸಾವಿರಾರು ಚದರ ಕಿಲೊಮೀಟರ್ ವಿಸ್ತೀರ್ಣದ ಎಲ್ಲ ಭತ್ತದ ಪೈರನ್ನೂ ನಾಶ ಮಾಡುತ್ತದೆ. ೧೯೬೩ರಲ್ಲಿ ಈ ರೋಗ ಇಂಡೊನೇಶ್ಯ, ಮಲೇಶ್ಯ, ಭಾರತ, ಶ್ರೀಲಂಕಾ, ವಿಯೆಟ್ನಾಂ, ಫಿಲಿಪ್ಪೀನ್ಸ್ ಹೀಗೆ ಅನೇಕ ದೇಶಗಳ ಲಕ್ಷಾಂತರ ಹೆಕ್ಟೇರ್ ಭತ್ತದ ಗದ್ದೆಗೆ ವ್ಯಾಪಿಸಿ ಇಡೀ ಜಗತ್ತಿಗೆ ತಲ್ಲಣ ಎಬ್ಬಿಸಿತ್ತು. ಈ ರೋಗವನ್ನು ತಡೆಗಟ್ಟಬಲ್ಲ ತಳಿಯನ್ನು ತುರ್ತಾಗಿ ಹುಡುಕಬೇಕಿತ್ತು. ಅವಸರದಲ್ಲಿ ಸಾವಿರಾರು ಭತ್ತದ ತಳಿಗಳನ್ನು ತಜ್ಞರು ಹುಡುಕುತ್ತ ಹೋದರು. ಉತ್ತರ ಪ್ರದೇಶದ ಸಸ್ಯವಿಜ್ಞಾನಿ ಎಸ್‌ಡಿ ಶರ್ಮಾ ಎಂಬವರು ತನ್ನ ಬಳಿ ಅಂಥದೊಂದು ತಳಿ ಇದೆ ಎಂದರು. ಅದರ ತಳಿಗುಣವನ್ನೇ ಇಂದು ಅನೇಕ ಬಗೆಯ ಭತ್ತದ ಸಂಕರ ತಳಿಗಳಲ್ಲಿ ಸೇರಿಸಲಾಗಿದೆ. ತಕ್ಷಣಕ್ಕೆ ಶರ್ಮಾ ಸಂಗ್ರಹದ ತಳಿ ಸಿಗದೇ ಇದ್ದಿದ್ದರೆ ಆಹಾರದ ಅಭಾವದಿಂದಾಗಿ ಎಲ್ಲೆಡೆ ಹಾಹಾಕಾರ ಏಳಬಹುದಿತ್ತು.

ಭತ್ತದ ತಳಿ ವೈವಿಧ್ಯವನ್ನು ರಕ್ಷಣೆ ಮಾಡುವುದರಿಂದ ಇನ್ನೂ ಅನೇಕ ಪ್ರಯೋಜನಗಳು ಇವೆ. ತುಸು ಹಿಂದೆ ಹೇಳಿದ ‘ನೆರೆಗೂಳಿ ಭತ್ತ’ವನ್ನೇ ನೆನಪಿಸಿಕೊಳ್ಳಿ. ವರ್ಷವರ್ಷವೂ ನೆರೆಹಾವಳಿಗೆ ತುತ್ತಾಗುವ ಕಣಿವೆಗೆ ಹೇಳಿ ಮಾಡಿಸಿದ ಭತ್ತದ ತಳಿ ಅದು. ಅಲ್ಲಿನ ರೈತರು ಅದನ್ನು ಉಳಿಸಿಕೊಳ್ಳದೇ ಅತಿ ಆಸೆಯಿಂದ ಹೆಚ್ಚು ಇಳುವರಿಯ ಭತ್ತವನ್ನೆ ಬೆಳೆಯಲು ಹೋದರೆ ನೆರೆ ಬಂದಾಗ ಎಲ್ಲವೂ ತೊಳೆದು ಹೋಗಬಹುದು. ಅದೇ ರೀತಿ, ಸಮುದ್ರದ ಸಮೀಪದ ಗದ್ದೆಗಳಲ್ಲಿ ಉಪ್ಪಿನ ಅಂಶವನ್ನು ತಾಳಿಕೊಳ್ಳಬಲ್ಲ ಭತ್ತದ ತಳಿಯೇ ಎಲ್ಲ ವಿಧದಿಂದಲೂ ಸೂಕ್ತವಾಗಿರುತ್ತದೆ. ಕಡಿಮೆ ಮಳೆ ಬೀಳುವ ಪ್ರದೇಶದಲ್ಲಿ ಬರನಿರೋಧಕ ತಳಿಯೇ ಪ್ರಶಸ್ತವಾಗಿರುತ್ತದೆ.

ಇನ್ನಂತೂ ಮುಂಬರುವ ವರ್ಷಗಳಲ್ಲಿ ಭೂಮಿಯ ಉಷ್ಣತೆ ಏರುತ್ತ ಹೋಗಿ ಋತುಮಾನಗಳು ಏರುಪೇರು ಆಗಲಿವೆ ಎಂದು ವಿಜ್ಞಾನಿಗಳು ಎಚ್ಚರಿಸುತ್ತಿದ್ದಾರೆ. ಅದು ನಿಜವಾದರೆ ಮಳೆಬೆಳೆಗಳ ವಿಚಾರ ಈ ಊರಿನಲ್ಲಿ ಹೀಗೇ ಇರುತ್ತದೆ ಎಂದು ಹೇಳಲು ಬರುವುದಿಲ್ಲ. ಜಲಾಶಯಗಳು ಬತ್ತಿ ಹೋಗಬಹುದು. ನೀರಾವರಿ ಕಾಲುವೆಗಳೆಲ್ಲ ಅನೇಕ ವರ್ಷಗಳ ಕಾಲ ಸತತವಾಗಿ ಒಣಗಿ ನಿಲ್ಲಬಹುದು. ರೈತರು ಮಳೆ ನೀರಲ್ಲೇ ಬೆಳೆ ತೆಗೆಯಬೇಕಾಗಿ ಬರಬಹುದು. ಅಜ್ಜ ಮುತ್ತಜ್ಜನ ಕಾಲದಲ್ಲಿ ನಮ್ಮೂರ ಗದ್ದೆಗಳಲ್ಲಿ ಇಂಥ ತಳಿ ಚೆನ್ನಾಗಿ ಬೆಳೆಯುತ್ತಿತ್ತು ಈಗ ಆ ತಳಿಯೇ ಕಣ್ಮರೆ ಆಗಿದೆ ಎಂದು ಹಳಹಳಿಸುವ ಪರಿಸ್ಥಿತಿ ಬರ ಬಾರದು. ಅದಕ್ಕೇ ಪ್ರತಿ ಯೊಂದು ಗ್ರಾಮದಲ್ಲೂ ಆಯಾ ಊರಿನ ತಳಿ ವಿಶೇಷ ಗಳನ್ನು ಉಳಿಸಿಕೊಳ್ಳುವ ಸಮು ದಾಯ ಬೀಜ ಬ್ಯಾಂಕ್‌ಗಳನ್ನು ಆರಂಭಿಸಬೇಕು. ತಮ್ಮ ಊರಿನ ಭತ್ತದ ತಳಿಯ ವಿಶಿಷ್ಟ ಗುಣ ಲಕ್ಷಣಗಳನ್ನು ಬರೆದು ರಜಿಸ್ಟರ್‌ನಲ್ಲಿ ದಾಖಲು ಮಾಡಿ ಇಡಬೇಕು.

ಬಾಸ್ಮತಿ ಮತ್ತು ಟೆಕ್ಸ್‌ಮತಿ

ಯಾಕೆ ದಾಖಲು ಮಾಡಿ ಇಡಬೇಕು? ಅದಕ್ಕೊಂದು ಕತೆ ಇದೆ: ಅದೇ ಬಾಸ್ಮತಿ ಅಕ್ಕಿಯ ಕತೆ. ಜೀವಂತ ತಳಿಗಳಿಗೂ ಪೇಟೆಂಟ್ ಹಕ್ಕು ಸ್ವಾಮ್ಯ ಪಡೆಯುವ ವ್ಯವಸ್ಥೆ ಜಾರಿಗೆ ಬಂದ ಹೊಸದರಲ್ಲಿ ಅಮೆರಿಕದ ಕಂಪನಿಯೊಂದು ಪರಿಮಳಭರಿತ ಬಾಸ್ಮತಿ ಭತ್ತದ ತಳಿಗೆ ಪೇಟೆಂಟ್ ಕೋರಿ ಅರ್ಜಿ ಹಾಕಿಬಿಟ್ಟರು. ಬಾಸ್ಮತಿ ಎಂದರೆ ಅಪ್ಪಟ ಭಾರತದ ತಳಿ. ಉತ್ತರ ಭಾರತದಲ್ಲಿ ಅನೇಕ ಶತಮಾನಗಳಿಂದ ಅದನ್ನು ಬೆಳೆಯುತ್ತಿದ್ದಾರೆ. ಆದರೆ ಅಲ್ಲಿನ ರೈತರ ಬಳಿ ಲಿಖಿತ ದಾಖಲೆಯೇ ಇರಲಿಲ್ಲ. ಅಂತ ಬಾಸ್ಮತಿಗೆ ಅಮೆರಿಕದವರು ಪೇಟೆಂಟ್ ಪಡೆದುಬಿಟ್ಟರೆ ರೈತರು ಅದನ್ನು ಬೆಳೆಯುವ ಹಾಗಿಲ್ಲ. ಭಾರೀ ರಾಯಧನ ಕೊಟ್ಟು ಬೀಜಗಳನ್ನು ಆ ಕಂಪನಿಯಿಂದಲೇ ಖರೀದಿಸಿ ಆ ವರ್ಷದ ಬೆಳೆ ಮಾತ್ರ ಬೆಳೆಯಬಹುದು. ಫಸಲನ್ನು ಕಂಪನಿ ಹೇಳಿದ ದರಕ್ಕೆ ಕಂಪನಿಗೇ ಕೊಡಬೇಕು ತಪ್ಪಿದ್ದರೆ ಎಲ್ಲ ಬೆಳೆಯೂ ಜಪ್ತಿ ಆಗುತ್ತದೆ ಎಂಬಂಥ ಪರಿಸ್ಥಿತಿ ಬರಬಹುದಿತ್ತು. ಆದರೆ ವಂದನಾ ಶಿವಾ ಅವರಂಥ ನಮ್ಮ ಕೆಲವು ಹೋರಾಟಗಾರ್ತಿಯರು ಶತಾಯಗತಾಯ ಯತ್ನಿಸಿ ಅಂತರರಾಷ್ಟ್ರೀಯ ನ್ಯಾಯಾಲಯದಲ್ಲಿ ದಾವೆ ಹೂಡಿದರು. ‘ಉತ್ತರ ಪ್ರದೇಶದ ಇಂಥದ್ದೇ ಊರಲ್ಲಿ ಬಾಸ್ಮತಿ ಹಿಂದಿನಿಂದಲೂ ಬೆಳೆಯುತ್ತಿತ್ತು ಎಂಬುದರ ಬಗ್ಗೆ ದಾಖಲೆಗಳಿದ್ದರೆ, ಬಾಸ್ಮತಿ ಎಂಬುದು ಅಲ್ಲಿ ತಲೆತಲಾಂತರದಿಂದ ಬಂದ ಒಂದು ತಳಿ ಪರಂಪರೆ ಎಂದು ಸಾಕ್ಷ್ಯಾಧಾರ ಸಮೇತ ವಾದಿಸಲು ಸಾಧ್ಯವಿದ್ದರೆ ಅದಕ್ಕೆ ಯಾರೂ ಪೇಟೆಂಟ್ ಹಕ್ಕುಸ್ವಾಮ್ಯ ಪಡೆಯುವ ಹಾಗಿಲ್ಲ’ ಎಂಬ ನಿಯಮವೊಂದಿದೆ. ಆ ನಿಯಮದ ಅಡಿಯಲ್ಲಿ ಸಾಕಷ್ಟು ದಾಖಲೆಯನ್ನು ಸಂಗ್ರಹಿಸಿ, ಪೇಟೆಂಟ್ ಕಚೇರಿಗಳಲ್ಲಿ ವಾದ ಮಾಡಿ ನಮ್ಮವರು ಬಾಸ್ಮತಿ ಭತ್ತಕ್ಕೆ ಪೇಟೆಂಟ್ ಸಿಗದ ಹಾಗೆ ಮಾಡಿದರು. ನಿರಾಶೆಗೊಂಡ ಟೆಕ್ಸಾಸ್‌ನ ಕಂಪನಿಯೊಂದು ಈಗ ‘ಟೆಕ್ಸ್‌ಮತಿ’ ಎಂಬ ಹೆಸರಿನಲ್ಲಿ ಬಾಸ್ಮತಿ ಅಕ್ಕಿಯ ವಹಿವಾಟು ನಡೆಸುತ್ತಿದೆ. ಬಾಸ್ಮತಿಯನ್ನು ಬಿತ್ತನೆ ಮಾಡುವ ಯಾವ ರೈತನ ಮೇಲೂ ನಿರ್ಬಂಧ ಹೇರುವ ಅಧಿಕಾರ ಅದಕ್ಕಿಲ್ಲ.

ಆದರೆ ಸದಾಕಾಲ ನಮ್ಮ ಎಲ್ಲ ಅಪರೂಪದ ಭತ್ತದ ತಳಿಗಳಿಗೂ ಇಂಥ ರಕ್ಷಣೆ ಸಿಕ್ಕೇ ಸಿಗುತ್ತದೆಂದು ಹೇಳುವಂತಿಲ್ಲ. ಕೇರಳದ ಕೆಲವು ಕಣಿವೆಗಳಲ್ಲಿ ಔಷಧೀಯ ಗುಣವಿರುವ ಭತ್ತದ ತಳಿ ಇದೆಯಂತೆ. ಅಸ್ಸಾಂನ ಒಂದು ಕಡೆ ಬೆಳೆಯುವ ಭತ್ತ ಹೇಗಿದೆಯೆಂದರೆ ಅದರ ಅಕ್ಕಿಯನ್ನು ನೀರಲ್ಲಿ ನೆನೆಸಿಟ್ಟರೆ ಸಾಕು, ಕುದಿಸಬೇಕೆಂದೂ ಇಲ್ಲ, ತಣ್ಣೀರಲ್ಲೂ ಅನ್ನ ಬೇಯುತ್ತದೆ! ಅಂಥ ಭತ್ತವನ್ನು ಯಾವುದೋ ಕಂಪನಿ ಎಗರಿಸಿ ತಳಿಬೆರಕೆ ಮಾಡಿ ಅದಕ್ಕೆ ಪೇಟೆಂಟ್ ಪಡೆಯುವ ಸಾಧ್ಯತೆ ಇದೆ. ನಮ್ಮ ಊರಿನ ಭತ್ತದಲ್ಲಿ ನಮಗೇ ಗೊತ್ತಿಲ್ಲದ ವಿಶಿಷ್ಟ ಗುಣ ಇರಬಹುದು. ಭವಿಷ್ಯದಲ್ಲಿ ಭತ್ತವನ್ನು ಬಾಧಿಸುವ ಅಥವಾ ಮನುಷ್ಯರನ್ನು ಬಾಧಿಸುವ ಯಾವುದೋ ಕಾಯಿಲೆಗೆ ಔಷಧ ಅದರಲ್ಲಿರಬಹುದು. ನಮಗೆ ಗೊತ್ತಿಲ್ಲದ ವಿಶೇಷ ಗುಣವೊಂದು ನಮ್ಮೂರಿನ ಭತ್ತದಲ್ಲಿದ್ದು, ಆ ರಹಸ್ಯ ಹೊರಗಿನ ಯಾವುದೋ ಬಹುರಾಷ್ಟ್ರೀಯ ಕಂಪನಿಯ ವಿಜ್ಞಾನಿಗೆ ಗೊತ್ತಾಗಬಹುದು. ನಮ್ಮೂರಿನ ಭತ್ತಕ್ಕೆ ಬೇರೆ ಯಾರೋ ಪೇಟೆಂಟ್ ಪಡೆಯಬಹುದು. ಹಾಗೆ ಆಗದಂತೆ ನಮ್ಮ ಭತ್ತವನ್ನು ರಕ್ಷಿಸಿಕೊಳ್ಳಬೇಕೆಂದರೆ ಅದು ನಮ್ಮೂರಿನಲ್ಲಿ ಹಿಂದಿನಿಂದಲೂ ಇದೆ ಎಂಬ ದಾಖಲೆ ಇರಬೇಕು.

ತನ್ನ ಗದ್ದೆಯಲ್ಲೇ ರೈತ ಯಾರದೋ ದಾಸ!

ಕಣ್ಮರೆಯಾಗುವ ಹಂತದಲ್ಲಿರುವ ನಮ್ಮೂರಿನ ಭತ್ತದ ತಳಿಯನ್ನು ಉಳಿಸಿಕೊಳ್ಳಲು ಇನ್ನೂ ಒಂದು ಬಲವಾದ ಕಾರಣವಿದೆ. ಹಿಂದೆ ಹೇಳಿದಂತೆ, ಜಗತ್ತಿನ ಅನ್ನದ ಮೇಲೆ ನಿಯಂತ್ರಣ ಸಾಧಿಸಲು ಏನೆಲ್ಲ ಶಕ್ತಿಗಳು ಹುನ್ನಾರ ನಡೆಸುತ್ತಿವೆ. ಏನೆಲ್ಲ ಹೊಸಬಗೆಯ ಭತ್ತದ ತಳಿಗಳನ್ನು ಗದ್ದೆಗೆ ಬಿಡುತ್ತಿವೆ (ಈ ಬಗ್ಗೆ ತುಸು ಮುಂದೆ ನೋಡೋಣ). ರೈತ ತನಗಿಷ್ಟ ಬಂದ ತಳಿಯ ಭತ್ತವನ್ನು, ತನಗಿಷ್ಟ ಬಂದ ವಿಧಾನದಲ್ಲಿ ಬೆಳೆಯುವ ಸ್ವಾತಂತ್ರ್ಯವನ್ನು ಕ್ರಮೇಣ ಕಳೆದುಕೊಳ್ಳುತ್ತಿದ್ದಾನೆ.

ಹಿಂದೆ ನಮ್ಮ ಊರುಗಳಲ್ಲಿ ಬೀಜದ ಭತ್ತದ ಉಚಿತ ವಿನಿಮಯ ಪದ್ಧತಿ ಇತ್ತು. ಊರಿನ ವಿವಿಧ ಕುಟುಂಬಗಳ ಮಧ್ಯೆ ಸಂಬಂಧ ಚೆನ್ನಾಗಿರುತ್ತಿತ್ತು. ಕ್ರಮೇಣ ಆ ಪದ್ಧತಿ ಹೊರಟು ಹೋಗಿ ಈಗ ಎಲ್ಲರೂ ಸರಕಾರಿ ಕೃಷಿ ಇಲಾಖೆ ನೀಡುವ ಭತ್ತದ ಬೀಜವನ್ನು ಅವಲಂಬಿಸಿದರು. ತುಸು ಹೆಚ್ಚು ಇಳುವರಿ ನೀಡುವ ಹೈಬ್ರಿಡ್ ಭತ್ತ ಬಂದ ಮೇಲಂತೂ, ಪ್ರತಿ ವರ್ಷ ಕಡ್ಡಾಯವಾಗಿ ಕೃಷಿ ಇಲಾಖೆಯಿಂದ ಬೀಜದ ಭತ್ತವನ್ನು ಖರಿದಿಸಿ ತರಬೇಕಾಗಿ ಬಂತು. ಈಗ ಖಾಸಗಿ ಕಂಪನಿಗಳು ಬೀಜದ ಭತ್ತವನ್ನು ನೀಡುತ್ತಿವೆ. ಅವರು ಹೇಳಿದ ದರವನ್ನು ತೆತ್ತು ತರಬೇಕು. ಅಷ್ಟು ಮಾಡಿದರೆ ಸಾಲದು. ಅವರು ಶಿಫಾರಸು ಮಾಡಿದ ರಸಗೊಬ್ಬರ, ಸಿಂಪಡನೆ ಸಾಮಗ್ರಿ, ಕೀಟನಾಶಕ, ಕಳೆನಾಶಕ ಎಲ್ಲವನ್ನೂ ಅವರು ಹೇಳಿದ ಬೆಲೆಯನ್ನು ತೆತ್ತೇ ತರಬೇಕು. ಅದರರ್ಥ ಏನು? ರೈತ ಮೊದಲು ತನ್ನ ಸ್ವಾತಂತ್ರವನ್ನು ಸರಕಾರಿ ಇಲಾಖೆಗೆ ನೀಡಿದ. ಆಮೇಲೆ ಖಾಸಗಿ ಕಂಪನಿಗೆ ನೀಡಿದ. ಗದ್ದೆ ತನ್ನದೇ ಆದರೂ ಅದರಲ್ಲಿ ಬೆಳೆ ತೆಗೆಯುವ ಹಕ್ಕನ್ನೆಲ್ಲ ಕಂಪನಿಗೆ ಒಪ್ಪಿಸಿ ತಾನು ಅದರ ದಾಸನಾದ. ಇಂಥ ಪರಿಸ್ಥಿತಿ ಈಗ ಬಂದಿಲ್ಲದಿದ್ದರೂ ನಾಳೆ ಬಂದೀತು. ಸ್ವಂತದ ಭತ್ತವನ್ನು ಸ್ವಂತದ ವಿಧಾನದಲ್ಲಿ ಬೆಳೆಯುವ ಸ್ವಾತಂತ್ರ್ಯ ನಮ್ಮ ಕೈಯಲ್ಲಿರಬೇಕೆಂದರೆ ಸ್ಥಳೀಯ ತಳಿಗಳನ್ನು ಜೋಪಾನವಾಗಿ ಕಾದಿರಿಸಬೇಕು. ಅದನ್ನು ಸ್ಥಳೀಯ ಸಾವಯವ ವಿಧಾನದಲ್ಲಿ ಬೆಳೆಯುವ ಸಂಪ್ರದಾಯವನ್ನೂ ರಕ್ಷಿಸಿಕೊಳ್ಳಬೇಕು.

ಭತ್ತದ ಗದ್ದೆಯ ಜೀವವೈಭವ

ಸಾವಯವ ವಿಧಾನದಲ್ಲಿ ಭತ್ತವನ್ನು ಬೆಳೆಯುವ ರೈತರು ಇಡೀ ಜೀವಲೋಕವನ್ನೇ ಪೋಷಣೆ ಮಾಡುತ್ತಾರೆ. ಅದು ಹೇಗೆ ಗೊತ್ತೆ? ಅತಿ ಮಳೆ ಬೀಳುವ ಪ್ರದೇಶದಲ್ಲಿ ಭತ್ತದ ಗದ್ದೆಗಳಲ್ಲಿ ನೀರನ್ನು ಹಿಡಿದಿಡುತ್ತಾರೆ. ಆ ನೀರು ನಿಧಾನಕ್ಕೆ ನೆಲದೊಳಕ್ಕೂ ಇಳಿದು, ಅಂತರ್ಜಲವನ್ನು ಭರ್ತಿ ಮಾಡುತ್ತದೆ. ವರ್ಷವಿಡೀ ಹಳ್ಳ ತೊರೆಗಳಿಗೆ ನೀರನ್ನು ಹರಿಸುತ್ತಿರುತ್ತದೆ. ಜಲಚರಗಳಿಗೆ ಸದಾಕಾಲ ಆಸರೆ ಕೊಡುತ್ತದೆ. ಉತ್ತ ಗದ್ದೆಗೆ ಕೊಳೆತ ತರಗೆಲೆ, ಸೆಗಣಿ ಮತ್ತು ಎರೆಹುಳುಗಳ ಕಾಂಪೋಸ್ಟ್ ಗೊಬ್ಬರವನ್ನು ಹಾಕುತ್ತಾರೆ. ಎರೆಹುಳುಗಳು ಮಣ್ಣಿನ ಉಳುಮೆ ಮಾಡುತ್ತವೆ. ಗದ್ದೆಯಲ್ಲಿ ನೀರನ್ನು ನಿಲ್ಲಿಸಿದ ಮೇಲೆ ಅಲ್ಲಿನ ಎರೆಹುಳು, ಸಂಧಿಪದಿಗಳ ಭಕ್ಷಣೆಗೆಂದು ನಾನಾ ಬಗೆಯ ಏಡಿಗಳು, ಮೀನು-ಕಪ್ಪೆಗಳ ಜೀವಲೋಕ ತಾನಾಗಿಯೇ ನಿರ್ಮಾಣ ವಾಗುತ್ತದೆ. ಭತ್ತ ಬೆಳೆಯುತ್ತ ಹೋದಂತೆ ಸೂರ್ಯನ ಕುದುರೆ, ಮಿಡತೆ, ಜಿಗಿಹುಳಗಳಂಥ ಜೀವಜಂತುಗಳು ಬಂದು ಸೇರಿದಾಗ ಬಕಪಕ್ಷಿಗಳಿಗೆ ಅಲ್ಲಿ ದಂಡಿಯಾಗಿ ಆಹಾರ ಸಿಗುತ್ತದೆ. ಭತ್ತದ ಕದಿರು ಅರಳಿದ ಮೇಲೆ ಅದೆಷ್ಟೊ ತರದ ಜೇನ್ನೊಣ, ದುಂಬಿಗಳು ಅಲ್ಲಿಗೆ ಬರುತ್ತವೆ. ತೆನೆ ಬಂದಮೇಲಂತೂ ಎಷ್ಟೊಂದು ಬಗೆಯ ಪಕ್ಷಿಗಳು ಅಲ್ಲಿಗೆ ಮುತ್ತಿಗೆ ಹಾಕುತ್ತವೆ. ಕೊಯ್ಲು ಮುಗಿಸಿದ ಮೇಲೆ ಕೂಡ ಅಲ್ಲಿಗೆ ಗುಬ್ಬಚ್ಚಿ, ಗೊರವಂಕ, ಗೀಜಗಗಳು ಬರುತ್ತಿರುತ್ತವೆ. ಗೀಜಗ ಹೆಚ್ಚಿನದಾಗಿ ಗೂಡು ಕಟ್ಟುವುದು ಭತ್ತದ ಗದ್ದೆಯ ಪಕ್ಕದಲ್ಲೇ. ಇನ್ನು ಕೊಯ್ಲು ಮುಗಿದ ಮೇಲೆ ಅಲ್ಲಿಗೆ ಇಲಿ ಹೆಗ್ಗಣಗಳೂ ದಾಳಿ ಇಡುತ್ತವೆ. ಅಂಥ ದಂಶಕ ಪ್ರಾಣಿಗಳನ್ನು ತಿನ್ನಲೆಂದು ಹಾವು, ಗಿಡುಗ, ಗೂಬೆಗಳು ಬರುತ್ತವೆ. ಅಂತೂ ಖಾಲಿ ಭತ್ತದ ಗದ್ದೆಯಲ್ಲಿ ಎತ್ತುಗಳು ಉಳುಮೆ ಮಾಡುವುದರಿಂದ ಹಿಡಿದು, ಕೊಯಿಲು ಮುಗಿದು ಗದ್ದೆ ಮತ್ತೆ ಖಾಲಿಯಾಗುವವರೆಗೂ ಅಲ್ಲಿ ಜೀವಲೋಕ ರಂಗ ಪ್ರದರ್ಶನವೇ ನಡೆಯುತ್ತಿರುತ್ತದೆ.

ಇಂಥ ಸಾವಯವ ವಿಧಾನಕ್ಕೆ ಹೋಲಿಸಿ ನೋಡಿದರೆ ಭತ್ತದ ರಾಸಾಯನಿಕ ಕೃಷಿಯಲ್ಲಿ ಏನಾಗುತ್ತದೆ ನೋಡಿ:

ಬಹಳಷ್ಟು ರೈತರು ಭತ್ತದ ಹೆಚ್ಚಿನ ಇಳುವರಿ ಪಡೆಯಲೆಂದು ಗದ್ದೆಗೆ ಯೂರಿಯಾ, ನೈಟ್ರೇಟ್, ಫಾಸ್ಫೇಟ್‌ಗಳಂಥ ರಾಸಾಯನಿಕ ಗೊಬ್ಬರಗಳನ್ನು ಸುರಿಯುತ್ತಾರೆ. ಎರೆಹುಳುಗಳಾಗಲೀ ಸಂಧಿಪದಿಗಳಾಗಲೀ ಅಲ್ಲಿ ಬದುಕಲಾರವು. ಹಾಗಾಗಿ ಏಡಿ, ಮೀನು, ಕಪ್ಪೆಗಳ ಸಂಖ್ಯೆ ಕೂಡ ಕಡಿಮೆಯಾಗುತ್ತದೆ. ಇನ್ನು ಬೆಳೆದು ನಿಂತ ಭತ್ತದ ಪೈರಿಗೆ ರೋಗ ಬಾರದಿರಲಿ ಎಂದು ಉಗ್ರ ರಸಾಯನ ಔಷಧಗಳ ಸಿಂಪಡನೆ ಮಾಡುತ್ತಾರೆ. ಅಲ್ಲಿ ಘಾಟು ವಾಸನೆಗೆ ಜೇನ್ನೊಣ, ದುಂಬಿ, ಪಾತರಗಿತ್ತಿಗಳೂ ಅತ್ತ ಸುಳಿಯುವಂತಿಲ್ಲ. ಕೊನೆಗೆ ಭತ್ತದ ಕದಿರು ಬಂದ ನಂತರವೂ ಕೆಮಿಕಲ್ ಸಿಂಪಡನೆ ನಡೆಯುತ್ತದೆ. ಸಣ್ಣಪುಟ್ಟ ಪಕ್ಷಿ ಪ್ರಾಣಿಗಳಿಗೆ ಏನನ್ನೂ ಬಿಡಬಾರದಲ್ಲ? ಹೀಗೆ ಗದ್ದೆಯ ಮೇಲೆ ಪದೇ ಪದೇ ನಡೆಯುವ ರಾಸಾಯನಿಕ ದಾಳಿಯಿಂದಾಗಿ ಜೀವಲೋಕ ಅಲ್ಲಿ ಮೌನವಾಗುತ್ತದೆ. ನೀರಿಗೂ ಘಾಟು ಔಷಧಗಳು ಸೇರ್ಪಡೆ ಆಗುವುದರಿಂದ ಅಂತರ್ಜಲದ ಮೂಲಕ ಹೊಳೆ ಹಳ್ಳಗಳಿಗೂ ರಸಾಯನ ದ್ರವ್ಯಗಳು ಸೇರಿ ಅಲ್ಲಿನ ಜಲಚರಗಳಲ್ಲೂ ಕ್ರಮೇಣ ವಿಷ ಸಂಚಯವಾಗುತ್ತದೆ. ಅಂಥ ಏಡಿ ಮೀನುಗಳನ್ನು ತಿಂದ ಪಕ್ಷಿಗಳ ದೇಹಕ್ಕೂ ವಿಷ ಸೇರ್ಪಡೆ ಆಗುವುದರಿಂದ ಕ್ರಮೇಣ ಪಕ್ಷಿಗಳ ಸಂತತಿ ಕ್ಷೀಣವಾಗುತ್ತ ಹೋಗುತ್ತದೆ.

ಶಿವಮೊಗ್ಗದ ಬಳಿಯ ಸಾಗರದ ಸಮೀಪ ‘ಹಂದಿಗೋಡು’ ಎಂಬ ಹಳ್ಳಿಯ ಗದ್ದೆಗಳಲ್ಲಿ ೭೦ರ ದಶಕದಲ್ಲಿ ಪೈರಿಥ್ರಾಯಿಡ್ ವಿಷ ಸಿಂಪಡನೆ ಮಾಡಿದ್ದರಿಂದ ಗದ್ದೆಯ ಚಿಕ್ಕಪುಟ್ಟ ಮೀನು-ಏಡಿಗಳನ್ನು ಹಿಡಿದು ತಿನ್ನುವ ಕೂಲಿಕಾರರಿಗೆ ಲಕ್ವದಂಥ ಕಾಯಿಲೆ ಬಂದಿದ್ದು ವರದಿಯಾಗಿತ್ತು. ಎಂದೂ, ಯಾವ ಔಷಧದಿಂದಲೂ ವಾಸಿಯಾಗದ ಈ ವಿಲಕ್ಷಣ ಕಾಯಿಲೆಯ ಲಕ್ಷಣಗಳಿಗೆ ‘ಹಂದಿಗೋಡು ಸಿಂಡ್ರೋಮ್’ ಎಂಬ ಹೆಸರೇ ಬಂದಿದೆ.

ವೆಸ್ಟ್ ಇಂಡೀಸ್‌ನಿಂದ ವ್ಹಿಸ್ಲಿಂಗ್ ಡಕ್ ಎಂಬ ಶಿಳ್ಳೆ ಬಾತುಕೋಳಿಗಳು ಕ್ಯೂಬಾ ದೇಶಕ್ಕೆ ವಲಸೆ ಬರುತ್ತವೆ. ಅವು ಅಲ್ಲಿಗೆ ಬರಲಿಕ್ಕೆ ಕ್ಯೂಬಾದ ಭತ್ತದ ಗದ್ದೆಗಳೇ ಮುಖ್ಯ ಕಾರಣವೆಂದು ಪಕ್ಷಿತಜ್ಞರು ಹೇಳಿದ್ದಾರೆ. ವಿನಾಶದ ಅಂಚಿನಲ್ಲಿರುವ ಈ ಕೌತುಕಮಯ ಪಕ್ಷಿಗಳ ಅಳಿವು ಉಳಿವು ಎರಡೂ ಭತ್ತದ ಬೆಳೆಗಾರರ ಕೈಯಲ್ಲೇ ಇವೆಯೆಂದು ಗುರುತಿಸಲಾಗಿದೆ. ಈ ಪಕ್ಷಿಗಳು ಉಳಿದು ಸಂತಾನ ವೃದ್ಧಿ ಮಾಡುತ್ತಿದ್ದರೆ ರೈತರೂ ಆರೋಗ್ಯದಿಂದ ಉಳಿದು, ಭವಿಷ್ಯವನ್ನು ಸುದೃಢ ಮಾಡಬಹುದೆಂಬ ಸಂಗತಿ ಈಗ ಎಲ್ಲರಿಗೂ ಗೊತ್ತಾಗಿದೆ. ಗದ್ದೆಗಳಿಗೆ ವಿಷ ಔಷಧಗಳ ಸಿಂಪಡನೆ ಮಾಡದೆ, ಪರಿಸರಪ್ರೇಮಿ ವಿಧಾನಗಳಿಂದ ಭತ್ತ ಬೆಳೆಯುವುದನ್ನು ಎಲ್ಲರೂ ಈಗ ಕಲಿತಿದ್ದಾರೆ.

ಭತ್ತದ ಬೆಳೆಯುತ್ತಲೇ ನಿಸರ್ಗ ಸಂಪತ್ತನ್ನೂ ಜೀವಿವೈವಿಧ್ಯವನ್ನೂ ರಕ್ಷಣೆ ಮಾಡುವ ರೈತರು ಈ ಭೂಗ್ರಹದ ಜೈವಿಕ ಪರಂಪರೆಯ ಕಾವಲುಗಾರರೆನಿಸುತ್ತಾರೆ. ಆದುದರಿಂದ ಅಂಥ ಸಾವಯವ ಬೆಳೆಗಾರರಿಗೆ ವಿಶೇಷ ನಿಸರ್ಗ ರಕ್ಷಣಾ ಭತ್ಯೆ ನೀಡುವಂತೆ ಸುಮಾತ್ರಾದಲ್ಲಿ ನಿಸರ್ಗಪ್ರೇಮಿಗಳು ಸರಕಾರವನ್ನು ಒತ್ತಾಯಿಸುತ್ತಿದ್ದಾರೆ.

ಆಹಾರವೆಂಬ ಆಯುಧ

ಭತ್ತವೆಂಬ ಬ್ರಹ್ಮಾಸ್ತ್ರ

ಭತ್ತದ ಹಾಗೂ ಅಕ್ಕಿಯ ವಹಿವಾಟಿನ ಮೇಲೆ ನಿಯಂತ್ರಣ ಪಡೆಯಲು ಎಷ್ಟೆಲ್ಲ ಬಗೆಯ ಹುನ್ನಾರಗಳು ಜಾಗತಿಕ ಮಟ್ಟದಲ್ಲಿ ನಡೆಯುತ್ತಿವೆ. ೧೯೪೨ರಲ್ಲಿ ಭಾರತದಲ್ಲಿ ಬಹುದೊಡ್ಡ ಕ್ಷಾಮ ಬಂದಿತ್ತು. ‘ಕ್ಷಾಮ’ ಅಂದರೆ ‘ಬರಗಾಲ’ ಅಲ್ಲ. ಅದೆಷ್ಟೊ ಬಾರಿ ಬರಗಾಲ ಇಲ್ಲದಿದ್ದರೂ ಆಹಾರದ ಅಭಾವ ಉಂಟಾಗುತ್ತದೆ. ಅಥವಾ ಕಾಳಸಂತೆಕೋರರ ಅಥವಾ ಇನ್ನೂ ದೊಡ್ಡ ಕುಳಗಳ ಹುನ್ನಾರಗಳಿಂದಾಗಿ ಆಹಾರ ಧಾನ್ಯಗಳ ಕೃತಕ ಅಭಾವವನ್ನು ಸೃಷ್ಟಿಯಾಗುತ್ತದೆ. ಆಗಿನ ಕ್ಷಾಮದಲ್ಲಿ ಕೋಲ್ಕತ್ತದ ಬೀದಿಗಳಲ್ಲಿ ವರ್ತಕರ ಅಂಗಡಿಗಳ ಎದುರು ಜನರು ಇರುವೆಗಳಂತೆ ಸಾಯುತ್ತಿದ್ದರು ಎಂಬ ಕಥೆಗಳಿವೆ. ಅಕ್ಕಿ ಅನ್ನೋದು ಏಷ್ಯದ ಜನರನ್ನು ನಿಯಂತ್ರಿಸಬಲ್ಲ ಬಹುಮುಖ್ಯ ಆಯುಧವಾಗಿ ಪಾಶ್ಚಾತ್ಯ ಶಕ್ತಿಗಳಿಗೆ ಕಂಡಿರಬೇಕು. ಎರಡನೆ ವಿಶ್ವಸಮರ ಮುಗಿಯುವ ವೇಳೆಗೆ ಅಮೆರಿಕದ ಫೋರ್ಡ್ ಫೌಂಡೇಶನ್ ಮತ್ತು ರಾಕಿಫೆಲರ್ ಫೌಂಡೇಶನ್‌ನಂಥ ಸಂಸ್ಥೆಗಳು ಏಷ್ಯದ ಜನರ ಈ ಸಂಕಷ್ಟನ್ನು ನೀಗಿಸುವ ಉಪಾಯ ಹುಡುಕಲು ಹೊರಟವು. ಅವು ೧೯೬೦ರಲ್ಲಿ ಫಿಲಿಪ್ಪೀನ್ಸ್‌ನಲ್ಲಿ ‘ಅಂತರರಾಷ್ಟ್ರೀಯ ಭತ್ತ ಸಂಶೋಧನ ಸಂಸ್ಥೆ’ (ಇಂಟರ್‌ನ್ಯಾಶನಲ್ ರೈಸ್ ರೀಸರ್ಚ್ ಇನ್ಸ್ಟಿಟ್ಯೂಟ್- IಖಖI- ‘ಇರ್ರಿ’) ಹೆಸರಿನ ಸಂಸ್ಥೆಯನ್ನು ಸ್ಥಾಪಿಸಿದವು. ಇದು ಜಗತ್ತಿನ ಮೊತ್ತಮೊದಲ ಹಾಗೂ ಅತಿ ದೊಡ್ಡ ಭತ್ತದ ತಳಿದಾಸ್ತಾನಿನ ಹಾಗೂ ಸಂಶೋಧನೆಯ ಕೇಂದ್ರವಾಗಿದೆ. ಅದರ ನಂತರ ಈ ಐವತ್ತು ವರ್ಷಗಳಲ್ಲಿ ಏಷ್ಯದ ಅನೇಕ ರಾಷ್ಟ್ರಗಳು ಭತ್ತದ ತಳಿಬ್ಯಾಂಕ್‌ಗಳನ್ನು, ಭತ್ತದ ಜ್ಞಾನನಿಧಿಯನ್ನು ಸ್ಥಾಪಿಸಿಕೊಂಡಿವೆ.

ಹಿಂದೆಲ್ಲ ಜನರ ಹಸಿವೆಯನ್ನು ನೀಗಿಸಬೇಕೆಂಬ ಒಂದೇ ಉದ್ದೇಶ ಸರಕಾರಗಳಿಗಿತ್ತು. ಆಗ ‘ಅಧಿಕ ಇಳುವರಿ’ ಎಂಬ ಏಕೈಕ ಮಂತ್ರವನ್ನು ಪಠಿಸುತ್ತ ಹೋದರೆ ಸಾಕಿತ್ತು. ಈಗ ದೃಷ್ಟಿಕೋನ ಬದಲಾಗಿದೆ.  ‘ಅಧಿಕ ಆರೋಗ್ಯ’, ‘ಅಧಿಕ ದೃಢಕಾಯ’ ‘ಅಧಿಕ ಸೌಂದರ್ಯ’ ಮುಂತಾದ ಕನಸುಗಳನ್ನೂ ಈ ಅನ್ನದ ಮೂಲಕವೇ ಈಡೇರಿಸಲು ವಿಜ್ಞಾನ ಸನ್ನದ್ಧವಾಗಿದೆ. ಪ್ರಪಂಚದ ಮುನ್ನೂರು ಕೋಟಿ ಜನರ ಹೊಟ್ಟೆಗೆ ಹೋಗುವ ಈ ಭತ್ತದ ತಳಿಸೂತ್ರವನ್ನು ಬಿಚ್ಚಿ ನೋಡಿದ ಮೇಲೆ ಕಂಪನಿಗಳು ಹೊಸ ಹೊಸ ಕನಸುಗಳನ್ನು ಹೆಣೆಯುತ್ತಿವೆ. ಬನ್ನಿ, ನೋಡೋಣ, ವಿಜ್ಞಾನಿಗಳ ಕೈಯಲ್ಲಿ ಭತ್ತ ಹೇಗೆ ಬದಲಾಗುತ್ತಿದೆ ಅಂತ.

ರೈತ ವಿಜ್ಞಾನಿಗಳ ತಳಿಗಳು:

ಅನಾದಿ ಕಾಲದಿಂದಲೂ ರೈತರು ತಮ್ಮದೇ ವಿಧಾನದಲ್ಲಿ ತಳಿಗಳ ಆಯ್ಕೆ ಮಾಡಿಕೊಳ್ಳುತ್ತಿದ್ದರು. ತಮ್ಮ ಗದ್ದೆಯಲ್ಲಿ ಬೆಳೆಯುವ ಭತ್ತಕ್ಕಿಂತ ಪಕ್ಕದ ಊರಿನಲ್ಲಿ ಬೆಳೆಯುವ ತಳಿ ಉತ್ತಮ ಎನ್ನಿಸಿದಾಗ ಅದನ್ನೇ ಎರವಲು ತಂದು ಫಸಲು ಬೆಳೆಯುತ್ತಿದ್ದರು. ಆಗಿನ ಕಾಲದಲ್ಲಿ ಅಧಿಕ ಇಳುವರಿಗೆ ಅಷ್ಟೇನೂ ಆದ್ಯತೆ ಇರಲಿಲ್ಲ. ರೋಗ ಬಾರದ ತಳಿಗಳು, ದೊಡ್ಡ ತೆಂಡೆ ತಳಿಗಳು, ಬಣ್ಣದ ಅಕ್ಕಿಯ ತಳಿಗಳು, ಅಧಿಕ ಮೇವಿನ ತಳಿಗಳು, ಪರಿಮಳ ಅಕ್ಕಿಯ ತಳಿಗಳು, ಉದ್ದ ಕದಿರಿನ ತಳಿಗಳು ಹೀಗೆ ತಮಗೆ ಪ್ರಿಯವೆನಿಸಿ ದ್ದನ್ನು ಆಯ್ದು ಬೇಸಾಯ ಮಾಡಿ ಬೀಜ ವಿನಿಮಯ, ತಳಿ ರಕ್ಷಣೆ ಮಾಡಿಕೊಂಡು ಬಂದಿದ್ದರು. ಅದಕ್ಕೇ ಆಗಿನ ಕಾಲದಲ್ಲಿ ಲಕ್ಷಾಂತರ ಬಗೆಯ ಭತ್ತದ ತಳಿಗಳಿದ್ದವು. ಈಗಲೂ ಕೆಲವು ರೈತರು ತಮ್ಮ ಸ್ವಂತ ಆಸಕ್ತಿ ಮತ್ತು ಶ್ರಮವನ್ನು ವಿನಿ ಯೋಗಿಸಿ ಅಪರೂಪದ ತಳಿಯನ್ನು ಹುಡುಕಿ, ಬೆಳೆಸಿ ಜನಪ್ರಿಯಗೊಳಿಸುತ್ತಾರೆ. ಕನ್ನಡಿಗ ಲಿಂಗಮಾದಯ್ಯ ನವರು ‘ಮೈಸೂರು ಮಲ್ಲಿಗೆ’ ಹೆಸರಿನ ಸ್ವಂತ ತಳಿಯನ್ನು ರೂಪಿಸಿ, ಮಂಡ್ಯ-ಮೈಸೂರು ಜಿಲ್ಲೆಗಳಲ್ಲಿ ಕೃಷಿಕರ ಮನಸ್ಸನ್ನು ಗೆದ್ದು ರಾಷ್ಟ್ರ ಪ್ರಶಸ್ತಿಯನ್ನೂ ಪಡೆದಿದ್ದಾರೆ.

ವಿಜ್ಞಾನಿಗಳ ಅಧಿಕ ಇಳುವರಿ ತಳಿಗಳು:

ಹೆಚ್ಚುತ್ತಿರುವ ಜನಸ್ತೋಮದ ಹೊಟ್ಟೆ ತುಂಬಿಸುವುದು ಸರಕಾರದ ಆದ್ಯತೆಯಾದಾಗ ಕೃಷಿ ಸಂಶೋಧನೆಗೆ ವಿಶೇಷ ಆದ್ಯತೆ ಸಿಕ್ಕಿತು. ಅಮೆ ರಿಕದ ರಾಕಿಫೆಲ್ಲರ್ ನಿಧಿಯಂಥ ಘನಂದಾರಿ ಸಂಸ್ಥೆಗಳು ಯುದ್ಧದೋಪಾದಿಯಲ್ಲಿ ಏಷ್ಯದಲ್ಲಿ ಹಸಿರು ಕ್ರಾಂತಿಯ ಬೀಜ ಬಿತ್ತಲು ಧನ ಸಹಾಯ ನೀಡಿದವು. ದೇಶ ವಿದೇಶಗಳ ಕೃಷಿ ವಿಜ್ಞಾನಿಗಳು ಹಳಿ ಗಳಿಗೆ ಬಂದರು. ಅಧಿಕ ಇಳುವರಿ ಮಾತ್ರ ಅವರ ಗಮನವಾಗಿತ್ತು. ಜಗತ್ತಿನ ಬೇರೆ ಬೇರೆ ರಾಷ್ಟ್ರಗಳ ಹಳ್ಳಿ ಹಳ್ಳಿಗಳಲ್ಲಿ ಓಡಾಡಿ ಯಾವ ತಳಿಯಿಂದ ಜಾಸ್ತಿ ಇಳುವರಿ ಬರುತ್ತದೆ, ಯಾವುದರಿಂದ ಶೀಘ್ರ ಇಳುವರಿ ಬರುತ್ತದೆ ಎಂಬುದನ್ನು ನೋಡಿ, ಅದನ್ನೇ ಜಾಸ್ತಿ ಜಾಸ್ತಿ ಎಕರೆಗಳಲ್ಲಿ ಬೆಳೆಸಿ, ಬೀಜೋತ್ಪಾದನೆ ಮಾಡಿ, ಅದಕ್ಕೇ ರಸಗೊಬ್ಬರ, ಕಳೆನಿಯಂತ್ರಕಗಳ ಪೂರಕ ನೆರವು ನೀಡಿ ಇನ್ನಷ್ಟು ಹೆಚ್ಚು ಇಳುವರಿ ಸಿಗುವಂತೆ ಮಾಡಿ ಭತ್ತ ಬೆಳೆಯುವ ಜಗತ್ತಿಗೆಲ್ಲ ವಿತರಣೆ ಮಾಡಿದರು. ಇಂಥದ್ದೇ ಬೀಜವನ್ನು ಬಿತ್ತಬೇಕೆಂದು ಪ್ರಚಾರ ಮಾಡಿ, ಹಳ್ಳಿಗಳ ಸಾಂಪ್ರದಾಯಕ ತಳಿಗಳು ಕಣ್ಮರೆಯಾಗುವಂತೆ ಮಾಡಿದರು. ಕ್ರಮೇಣ ಬಹುರಾಷ್ಟ್ರೀಯ ಕಂಪನಿಗಳು ಬೀಜದ ಭತ್ತದ ಸ್ವಾಮ್ಯವನ್ನು ಪಡೆದವು.

ವಿಜ್ಞಾನಿಗಳ ಹೈಬ್ರಿಡ್ ತಳಿಗಳು:

ಅಧಿಕ ಒಳಸುರಿಯ, ಅಧಿಕ ಇಳುವರಿ ಭತ್ತವೂ ತನ್ನ ಗರಿಷ್ಠ ಮಿತಿಯನ್ನು ತಲುಪಿತು. ಇಳುವರಿಯನ್ನು ಮತ್ತಷ್ಟು ಹೆಚ್ಚಿಸಬೇಕೆಂದರೆ ಹೈಬ್ರಿಡ್ (ಸಂಕರ) ತಳಿಗಳನ್ನು ಸೃಷ್ಟಿಸಬೇಕು. ಅಂದರೆ, ಎರಡು ಭಿನ್ನ ಗುಣಗಳ ತಳಿಗಳನ್ನು ಒಂದುಗೂಡಿಸಿ ಹೊಸ ವಿಶೇಷ ಗುಣಗಳ ತಳಿಯನ್ನು ಸೃಷ್ಟಸುವುದು. ಆದರೆ ಭತ್ತದ ಮಟ್ಟಿಗೆ ಅದು ಸುಲಭವಲ್ಲ. ಏಕೆಂದರೆ ಅದು ಸ್ವಯಂ ಪರಾಗಸ್ಪರ್ಶ ಮಾಡಿಕೊಳ್ಳುತ್ತದೆ. ಬೇರೊಂದು ತಳಿಯ ಭತ್ತದ ಸಸ್ಯದ ಪರಾಗವನ್ನು ಈ ಸಸ್ಯಕ್ಕೆ ಮಿಲನ ಮಾಡಿಸಬೇಕೆಂದರೆ ಮೊದಲು ಈ ಸಸ್ಯವನ್ನು ಏಕಲಿಂಗಿಯನ್ನಾಗಿ ಮಾಡಬೇಕು. ಹೇಗೋ ಸರ್ಕಸ್ ಮಾಡಿ ವಿಜ್ಞಾನಿಗಳು ೧೯೮೦ರಲ್ಲಿ ಅದನ್ನೂ ಸಾಧಿಸಿಬಿಟ್ಟರು. ಈ ಹೊಸ ಹೈಬ್ರಿಡ್ ತಳಿಯಿಂದ ಇಳುವರಿ ಇಮ್ಮಡಿ ಆಗಲು ಸಾಧ್ಯವೆಂದು ತೋರಿಸಿಕೊಟ್ಟರು. ಪೈಪೋಟಿಯಲ್ಲಿ ಇಂದು ನಮ್ಮ ದೇಶದಲ್ಲಿ ಭತ್ತದ ನೂರಾರು ಹೈಬ್ರಿಡ್ ತಳಿಗಳು ಸೃಷ್ಟಿಯಾಗಿವೆ. ಹೈಬ್ರಿಡ್ ಬೆಳೆಯಲು ಪ್ರತ್ಯೇಕ ತಾಕುಗಳಲ್ಲಿ ಗಂಡು ಹೆಣ್ಣು ಭತ್ತದ ಸಸ್ಯಗಳನ್ನು ಬೆಳೆಸಿ, ಹೂಬಿಡುವ ದಿನಗಳಲ್ಲಿ ಹುಷಾರಾಗಿ ಪರಾಗಸ್ಪರ್ಶ ಮಾಡಿಸಬೇಕು. ಖಾಸಗಿ ಕಂಪನಿಗಳು ತಮ್ಮ ಬೀಜವೇ ಶ್ರೇಷ್ಠವೆಂದು ತಾಕೀತು ಮಾಡುತ್ತಾರೆ.

ಸನ್ಯಾಸಿಯ ಶ್ರೀ ವಿಧಾನ:

ಯಾವ ಕೃತಕ ಒಳಸುರಿಯೂ ಇಲ್ಲದೆ, ನೀರು ನಿಲ್ಲಿಸುವ ಅಗತ್ಯವೂ ಇಲ್ಲದೆ, ಭತ್ತವನ್ನು ದೂರ ದೂರ ನೆಡುವುದರ ಮೂಲಕ ಇಮ್ಮಡಿ ಇಳುವರಿ ಸಾಧಿಸಲು ಸಾಧ್ಯವೆಂದು ಕ್ರಿಸ್ತ ಪಾದರಿಯೊಬ್ಬ ಮಡಗಾಸ್ಕರ್‌ನಲ್ಲಿ ತೋರಿಸಿಕೊಟ್ಟಿದ್ದು ಇಂದು ಅನೇಕ ರಾಷ್ಟ್ರಗಳಲ್ಲಿ ರೈತರು ಈ ವಿಧಾನವನ್ನು ಅನುಸರಿಸುತ್ತಿದ್ದಾರೆ. ಇದಕ್ಕೆ ಅಪಖ್ಯಾತಿ ತರುವ ಹುನ್ನಾರ ಕೂಡ ನಡೆದಿತ್ತು

ಶ್ರೀ ಎಂಬ ಸಿರಿಭತ್ತ:

ಭತ್ತಕ್ಕೆ, ಅಕ್ಕಿಗೆ ವರ್ಷವರ್ಷಕ್ಕೆ ಬೇಡಿಕೆ ಹೆಚ್ಚುತ್ತಿದೆ. ಆದರೆ ಗದ್ದೆಯ ವಿಸ್ತೀರ್ಣ ಹೆಚ್ಚುವಂತಿಲ್ಲ. ಇದ್ದಷ್ಟು ಸ್ಥಳದಲ್ಲೇ ಹೆಚ್ಚಿನ ಇಳುವರಿ ಪಡೆಯಲೆಂದು ವಿಜ್ಞಾನಿಗಳು ಏನೆಲ್ಲ ಯತ್ನ ನಡೆಸುತ್ತಿದ್ದಾರೆ. ಈ ಮಧ್ಯೆ ಮಡಗಾಸ್ಕರಿನ ಫಾದರ್ ಹೆನ್ರಿ ಡಿ ಲಾಲೇನಿ ಹೆಸರಿನ ಪಾದರಿಯೊಬ್ಬ (ಕ್ರಿಸ್ತ ಸನ್ಯಾಸಿ) ತನ್ನ ಪಾಡಿಗೆ ತಾನು ‘ಮನೋನ್ನತಿ’ ಹೆಸರಿನ ಸಂಘ ಕಟ್ಟಿಕೊಂಡು ಭತ್ತದ ಹೆಚ್ಚಿನ ಇಳುವರಿಗೆ ಯತ್ನಿಸುತ್ತಿದ್ದ. ಆತ ಪಡೆದ ಯಶಸ್ಸು ಇಡೀ ಜಗತ್ತಿಗೆ ಮಾದರಿಯಾಗಿ ಇಂದು ಬಹಳಷ್ಟು ದೇಶಗಳಲ್ಲಿ ಈ ವಿಧಾನ ಜಾರಿಗೆ ಬರುತ್ತಿದೆ.

ಎಲ್ಲ ಕಡೆ ಭತ್ತ ಬೆಳೆಯುವ ಎಲ್ಲರೂ ಪೈರಿನ ಸುತ್ತ ನೀರು ನಿಲ್ಲಿಸುತ್ತಾರೆ. ೧೯೮೩ರಲ್ಲಿ ಮಡಗಾಸ್ಕರನಲ್ಲಿ ಬರಗಾಲ ಬಂದಿದ್ದರಿಂದ ನೀರು ಕಟ್ಟಲು ಅನೇಕರಿಗೆ ಸಾಧ್ಯವಾಗಲಿಲ್ಲ. ಆದರೆ ಫಸಲು ಚೆನ್ನಾಗಿಯೇ ಬಂತು. ರಹಸ್ಯ ಏನಿದ್ದೀತೆಂದು ಪಾದರಿ ಅಧ್ಯಯನ ಮಾಡಿ ತನ್ನದೇ ಐದು ಸೂತ್ರಗಳ ಹೊಸ ವಿಧಾನವನ್ನು ರೂಪಿಸಿದ. ಅದಕ್ಕೆ ‘ಸಿಸ್ಟಮ್ ಆಫ್ ರೈಸ್ ಇಂಟೆನ್ಸಿಫಿಕೇಶನ್’ (SಖI) ಅಂದರೆ ಭತ್ತದ ತೀವ್ರಬೆಳೆ ಪದ್ಧತಿ’ ಎಂದು ಹೆಸರಿಟ್ಟ. ಆತನ ಪಂಚ ಸೂತ್ರಗಳೆಂದರೆ:

೧. ಭತ್ತದ ಸಸಿಯನ್ನು ೮-೧೦ ದಿನಗಳಲ್ಲೇ ನಾಟಿ ಮಾಡಬೇಕು (ಸಾಮಾನ್ಯವಾಗಿ ಮೊಳಕೆ ಬಂದ ೨೫-೩೦ ದಿನಗಳ ನಂತರ ಮಾಡುತ್ತಾರೆ);

೨. ಪ್ರತಿ ಸಸಿಯೂ ಪಕ್ಕದ ಸಸಿಗಿಂತ ಅರ್ಧ ಮೀಟರ್ ದೂರ ಇರಬೇಕು (ಸಾಮಾನ್ಯವಾಗಿ ೨೦-೨೫ ಸೆಂಟಿ ಮೀಟರ್ ದೂರದಲ್ಲಿ ಒತ್ತೊತ್ತಾಗಿ ನೆಡುತ್ತಾರೆ);

೩. ಒಂಟೊಂಟಿ ಸಸ್ಯವನ್ನೇ ನೆಡಬೇಕು (ಸಾಮಾನ್ಯವಾಗಿ ಎರಡು ಮೂರು ಸಸಿಗಳನ್ನು ಒಟ್ಟೊಟ್ಟಿಗೆ ಕೆಸರು ನೀರಲ್ಲಿ ನೆಡುತ್ತಾರೆ;

೪. ನೀರನ್ನು ಕಟ್ಟಿ ನಿಲ್ಲಿಸಬಾರದು, ಆದರೆ ನೆಲದಲ್ಲಿ ತೇವಾಂಶ ಸದಾ ಇರಬೇಕು (ಎಲ್ಲರೂ ನೀರಿನಲ್ಲೇ ನೆಡುತ್ತಾರೆ; ನೀರು ಸದಾ ನಿಲ್ಲುವಂತೆ ಮಾಡುತ್ತಾರೆ);

೫. ಸಾವಯವ -ಅಂದರೆ ಕಳಿತ ಸೊಪ್ಪು ಸೆಗಣಿಯ ಗೊಬ್ಬರವನ್ನು ಬಳಸಬೇಕು (ಹೆಚ್ಚಿನವರು ರಸಗೊಬ್ಬರ ಪುಡಿಯನ್ನು ಎರಚುತ್ತಾರೆ).

ಈ ವಿಧಾನದಲ್ಲಿ ಬೆಳೆದರೆ ಭತ್ತದ ಇಳುವರಿ ಒಂದೂವರೆ ಎರಡು ಪಟ್ಟು ಹೆಚ್ಚುತ್ತದೆ ಅಷ್ಟೇ ಅಲ್ಲ, ರೈತನ ಬೀಜದ ಉಳಿತಾಯ, ನೀರಿನ ಉಳಿತಾಯ, ಗೊಬ್ಬರವೆಚ್ಚದ ಉಳಿತಾಯವಾಗುತ್ತದೆ; ನಿಸರ್ಗಕ್ಕೂ ಒಳ್ಳೆಯದೇ ಆಗುತ್ತದೆ ಎಂದು ಗೊತ್ತಾಗಿ ಮಡಗಾಸ್ಕರಿನ ರೈತರು ಹಳೇ ಪದ್ಧತಿಯನ್ನು ಕೈಬಿಟ್ಟರು. ಕೃಷಿ ವಿಜ್ಞಾನಿಗಳ ಶಿಫಾರಸಿನಂತೆ ಹೆಕ್ಟೇರಿಗೆ ೪-೫ ಟನ್ ಇಳುವರಿ ಸಿಗುತ್ತಿದ್ದ ಜಮೀನಿನಲ್ಲಿ ಈಗ ಪಾದರಿಯ ವಿಧಾನದಲ್ಲಿ ೮-೧೦ ಟನ್ ಫಸಲು ಸಿಗತೊಡಗಿತು. ನಿಧಾನವಾಗಿ, ೧೫-೨೦ ವರ್ಷಗಳ ನಂತರ ಹೊರ ಪ್ರಪಂಚಕ್ಕೆ ಇದು ಗೊತ್ತಾಯಿತು. ೨೦೦೪ರ ವೇಳೆಗೆ ಸುಮಾರು ೧೯ ದೇಶಗಳಲ್ಲಿ ಇದು ಭರದಿಂದ ಪ್ರಚಾರಕ್ಕೆ ಬಂತು. ಭಾರತದಲ್ಲೂ ಆಂಧ್ರ ಪ್ರದೇಶ ಮತ್ತು ಕರ್ನಾಟಕದಲ್ಲಿ ರೈತರು ಉತ್ಸಾಹದಿಂದ ಹೊಸ ಪದ್ಧತಿ ಜಾರಿಗೆ ತಂದರು. ಅಲ್ಲಲ್ಲಿ ರೈತ ಚರ್ಚಾ ವೇದಿಕೆಗಳು ಅಸ್ತಿತ್ವಕ್ಕೆ ಬಂದವು. ನಾಡೋಜ ನಾರಾಯಣ ರೆಡ್ಡಿಯವರೂ ತಮ್ಮ ಗದ್ದೆಯಲ್ಲಿ ಚದುರಂಗದ ಮನೆಗಳಂತೆ ದಾರ ಕಟ್ಟಿ ಶ್ರೀ ವಿಧಾನದ ನಾಟಿ ಮಾಡಿ ಅದರ ಸದ್ಗುಣಗಳನ್ನು ಪತ್ರಿಕೆಗಳಲ್ಲಿ ಪ್ರಚುರಪಡಿಸಿದರು.

ಇದು ಹೆಚ್ಚು ಹೆಚ್ಚು ಜನಪ್ರಿಯವಾಗುತ್ತಿದ್ದ ಹಾಗೆ ಬೀಜ-ರಸಗೊಬ್ಬರ ಕಂಪನಿಗಳಂಥ ಪಟ್ಟಭದ್ರ ಹಿತಾಸಕ್ತಿಗಳಿಗೆ ಆತಂಕ ತಲೆದೋರಿತು. ಅಮೆರಿಕ, ಇಂಗ್ಲಂಡ್ ಮತ್ತು ಚೀನೀ ವಿಜ್ಞಾನಿಗಳು ಸೇರಿ ಚೀನಾದಲ್ಲಿ ಎರಡೆರಡು ಗುಂಟೆಗಳ ಎರಡು ಪ್ರಾಯೋಗಿಕ ತಾಕುಗಳಲ್ಲಿ ಶ್ರೀ ವಿಧಾನ ಹಾಗು ಮಾಮೂಲು ವಿಧಾನಗಳ ಇಳುವರಿ ಹೋಲಿಕೆ ಪರೀಕ್ಷೆ ನಡೆಯಿತು. ಒಂದರಲ್ಲಿ ಮಾಮೂಲಿಗಿಂತ ಶೇಕಡಾ ೮ರಷ್ಟು ಇಳುವರಿ ಹೆಚ್ಚು ಬಂತು, ಇನ್ನೊಂದರಲ್ಲಿ ಶೇ. ೮ ಕಡಿಮೆ ಬಂತು. ಹೆಸರಾಂತ ನೇಚರ್ ಪತ್ರಿಕೆಯಲ್ಲಿ ‘ಶ್ರೀ ಅಲ್ಲ, ಭತ್ತದ ಇತಿಶ್ರೀ’ ಎಂಬರ್ಥದ ಸಂಶೋಧನ ಲೇಖನ ಬಂತು. ಶ್ರೀ ವಿಧಾನವನ್ನು ಅಳವಡಿಸಿದರೆ ಮೊದಲು ಸಿಗುತ್ತಿದ್ದ ಫಸಲೂ ಕ್ರಮೇಣ ಕೈತಪ್ಪುತ್ತದೆ ಎಂಬರ್ಥದ ಮಾತುಗಳು ಅದರಲ್ಲಿದ್ದವು.

ರೈತಪರ ವಿಜ್ಞಾನಿಗಳು ಸುಮ್ಮನೆ ಕೂರಲಿಲ್ಲ. ಅವರೂ ಮಾಹಿತಿಗಳನ್ನು ಸಂಗ್ರಹಿಸಿದರು. ಅನೇಕ ದೇಶಗಳ ಶ್ರೀ ಇಳುವರಿಯನ್ನು ಮುಂದಿಟ್ಟರು. ಭತ್ತದ ಕೆಲವು ತಳಿಗಳು ಶ್ರೀ ವಿಧಾನಕ್ಕೆ ಒಗ್ಗುವುದಿಲ್ಲ. ಚೀನಾದಲ್ಲಿ ಇಂಥ ಒಗ್ಗದ ತಳಿಯನ್ನೇ ಪ್ರಯೋಗಕ್ಕೆ ಆಯ್ಕೆ ಮಾಡಲಾಗಿತ್ತು. ಅದೂ ಅಲ್ಲದೆ, ಹಿಂದೆ ಅನೇಕ ವರ್ಷಗಳಿಂದ ರಾಸಾಯನಿಕ ದ್ರವ್ಯಗಳನ್ನು ಉಣಿಸಿದ್ದ ಗದ್ದೆಯಲ್ಲಿ ಸೂಕ್ಷ್ಮಾಣುಗಳೆಲ್ಲ ಮಾಯವಾಗಿದ್ದು, ಅಲ್ಲಿನ ಮಣ್ಣು ತನ್ನ ಸತ್ವವನ್ನು ಮರಳಿ ಪಡೆಯಲು ಕೆಲ ಸಮಯ ಬೇಕು. ಮೊದಲ ವರ್ಷದ ಶ್ರೀ ವಿಧಾನದಲ್ಲಿ ಇಳುವರಿ ಗಣನೀಯವಾಗಿ ಹೆಚ್ಚದಿದ್ದರೂ ಕ್ರಮೇಣ ಹೆಚ್ಚುತ್ತ ಹೋಗುತ್ತದೆ ಎಂದು ವಿವರಿಸಲಾಯಿತು. ಮಾಮೂಲು ವಿಧಾನದಲ್ಲಿ ಹೆಕ್ಟೇರಿಗೆ ೬೦-೭೦ ಕಿಲೊ ಬೀಜದ ಭತ್ತ ಬೇಕಾಗಿದ್ದರೆ ಶ್ರೀ ವಿಧಾನದಲ್ಲಿ ಕೇವಲ ಐದು ಕಿಲೊ ಭತ್ತ ಸಾಕು ಎಂತಲೂ ತಿಳಿಸಲಾಯಿತು.

ಆದರೆ ನಾವು ಆಧುನಿಕ ಬದುಕಿನಲ್ಲಿ ಎಷ್ಟು ದೂರ ಸಾಗಿದ್ದೇವೆಂದರೆ ಹಿಂದಕ್ಕೆ ಹೆಜ್ಜೆ ಹಾಕಲು ತುಸು ಕಷ್ಟವೇ ಆಗುತ್ತಿದೆ. ಶ್ರೀ ವಿಧಾನದಲ್ಲಿ ಇಮ್ಮಡಿ ಫಸಲು ಸಿಗುತ್ತದೆ ನಿಜ. ಅದು ಪ್ರಕೃತಿ ಸಹಜ ವಿಧಾನವೂ ಹೌದು. ಆದರೂ ಕರ್ನಾಟಕದ ರೈತರು ಒಂದೆರಡು ವರ್ಷ ಶ್ರೀ ಪದ್ಧತಿಯನ್ನು ಪ್ರಯೋಗಿಸಿ ನಂತರ ಕೈಬಿಡುತ್ತಾರೆ. ಏಕೆ ಗೊತ್ತೆ? ಕಳೆ ನಿಯಂತ್ರಣ ಕಷ್ಟದ ಕೆಲಸ. (ಭತ್ತ ಮೂಲತಃ ನೀರಿನಲ್ಲಿ ಬೆಳೆಯುವ ಪೈರಲ್ಲ; ಆದರೆ ಕಳೆ ನಿಯಂತ್ರಣ ಮಾಡಲೆಂದೇ ಅದನ್ನು ನೀರಲ್ಲಿ ನಾಟಿ ಮಾಡುವ ವಿಧಾನ ಹಿಂದೆಂದೋ ಜಾರಿಗೆ ಬಂತು. ಕಡಿಮೆ ಇಳುವರಿಯಾದರೂ ಸರಿ, ಕಳೆ ಕೀಳುವ ಕೆಲಸ ಯಾರಿಗೆ ಬೇಕು?) ಅದಕ್ಕೆ ಕೂಲಿಯಾಳುಗಳು ಜಾಸ್ತಿ ಬೇಕು. ವಾರಕ್ಕೆ ಎರಡು ಬಾರಿಯಾದರೂ ಗದ್ದೆಯತ್ತ ಓಡಾಡಬೇಕು. ಹಸಿರುಕ್ರಾಂತಿಯ ಐವತ್ತು ವರ್ಷಗಳಲ್ಲಿ ಕೃಷಿಯಲ್ಲಿ ಯಾಂತ್ರಿಕತೆ ತೀರ ಹೆಚ್ಚಾಗಿದ್ದರಿಂದ ಕೂಲಿಗಾಗಿ ನಗರಗಳತ್ತ ವಸಲೆ ಹೋಗುವವರ ಸಂಖ್ಯೆ ಹೆಚ್ಚಾಯಿತು. ಹೊಲಗಳಲ್ಲಿ ಮೈಮುರಿದು ದುಡಿಯುವದೇ ದುಸ್ತರವೆನ್ನಿಸತೊಡಗಿತು. ಪ್ರಕೃತಿಯ ಜತೆ ಸಹಬಾಳ್ವೆ ಎಂಬುದು ಕೇವಲ ಕವಿಕಲ್ಪನೆಯಾಗಿ ಉಳಿಯಿತು.

ಈಗಲೂ ಶ್ರೀ ವಿಧಾನ ಸಾರ್ವತ್ರಿಕವಾಗಿ ಜಾರಿಗೆ ಬಂದರೆ, ದೇಶದ ಧಾನ್ಯದ ಇಳುವರಿ ಹೆಚ್ಚಾಗಿ, ಒಳಸುರಿ ಕಡಿಮೆಯಾಗಿ, ನಿಸರ್ಗ ಸಮೃದ್ಧವಾಗಿ, ಗ್ರಾಮಜೀವನ ಸಮೃದ್ಧವಾಗಲು ಸಾಧ್ಯವಿದೆ. ಆದರೆ ಸರಕಾರವೇ ಕೈಬೀಸಿ ಶ್ರೀ ವಿಧಾನದತ್ತ ರೈತರನ್ನು ಆಕರ್ಷಿಸಲು ಯತ್ನಿಸಿದರೂ ಅದು ತೀರ ತಡವಾದ ಕ್ರಮವೆಂದೆನಿಸುತ್ತಿದೆ.

ಕಂಪನಿಗಳ ಕುಲಾಂತರಿ ಬಂಗಾರ ಭತ್ತ:

ಏಷ್ಯದ ರಾಷ್ಟ್ರಗಳ ಲಕ್ಞಾಂತರ ಬಡವರ ಮಕ್ಕಳು ‘ಎ’ ಅನ್ನಾಂಗದ ಕೊರತೆಯಿಂದಾಗಿ ನಾನಾ ಬಗೆಯ ದೌರ್ಬಲ್ಯಗಳೊಂದಿಗೆ ಬೆಳೆಯುತ್ತಾರೆ. ‘ಎ’ ಅನ್ನಾಂಗ ಮುಖ್ಯವಾಗಿ ನಮ್ಮ ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ನಮ್ಮ ಆಹಾರದಲ್ಲಿ ಇದು ಸಾಕಷ್ಟು ಪ್ರಮಾಣದಲ್ಲಿ ಇಲ್ಲದ ಕಾರಣ ಅದೆಷ್ಟೋ ಬಡ ಮಕ್ಕಳು ಅಂಧರಾಗಿ ಇಲ್ಲವೆ ದೃಷ್ಟಿಮಾಂದ್ಯದಿಂದಾಗಿ ಜೀವನವಿಡೀ ಬಳಲುತ್ತಾರೆ.

ಗರ್ಭಿಣಿಯರಿಗೆ ನಿತ್ಯದ ಊಟದ ಅನ್ನದಲ್ಲೇ ಹೆಚ್ಚಿನ ಪ್ರಮಾಣದ ‘ಎ’ ಅನ್ನಾಂಗವನ್ನು ಸೇರಿಸಬೇಕೆಂಬ ಕಳಕಳಿಯಿಂದ ಸ್ವಿತ್ಸರ್ಲೆಂಡ್ ಮತ್ತು ಜರ್ಮನಿಯ ಇಬ್ಬರು ನಿರ್ಧರಿಸಿದರು. ಡ್ಯಾಫೊಡಿಲ್ಸ್ ಎಂಬ ಕಳೆಸಸ್ಯದಲ್ಲಿ ಬೀಟಾ ಕ್ಯಾರೊಟಿನಿನ್ ಎಂಬ ಅಂಶವಿದೆ. ಅದರಲ್ಲಿ ‘ಎ’ ಜೀವಸತ್ವ ಜಾಸ್ತಿ ಇದೆ. ಆ ಕಳೆಸಸ್ಯದ ಒಂದು ಗುಣಾಣುವನ್ನು ಕಳಚಿ, ಭತ್ತದ ವರ್ಣತಂತುವಿಗೆ ಸೇರಿಸಿ, ಹೊಸ ಕುಲಾಂತರಿ ಭತ್ತದ ಸಸ್ಯವನ್ನು ಇವರು ಸೃಷ್ಟಿ ಮಾಡಿದರು. ಹತ್ತು ವರ್ಷಗಳ ಶ್ರಮದ ನಂತರ ಅವರು ೨೦೦೦ದಲ್ಲಿ ಸೃಷ್ಟಿಸಿದ ಭತ್ತದ ಸಸ್ಯದಲ್ಲಿ ಅಕ್ಕಿಕಾಳುಗಳು ನಿಜಕ್ಕೂ ‘ಎ’ ಅನ್ನಾಂಗವನ್ನು ಸೇರಿಸಿಕೊಂಡು ಚಿನ್ನದ ಬಣ್ಣದಲ್ಲಿ ಹೊಳೆಯು ತ್ತಿದ್ದವು. ಅವರು ತಮ್ಮ ಶ್ರಮಕ್ಕೆ ಪೇಟೆಂಟ್ ಪಡೆಯಲಿಲ್ಲ. ಲೋಕಕಲ್ಯಾಣಕ್ಕಾಗಿ ಉಚಿತವಾಗಿ ಈ ಧಾನ್ಯವನ್ನು ಸೃಷ್ಟಿಸಿದ್ದೇವೆ ಎಂದು ಹೇಳಿದರು.

ಇದುವರೆಗೆ ಕುಲಾಂತರಿ ಜೋಳ, ತಂಬಾಕಿನಂಥ ಸಸ್ಯಗಳಿಗೆ ಪಾಶ್ಚಾತ್ಯ ಜಗತ್ತಿನ ಬಳಕೆದಾರರಿಂದ ಪ್ರತಿರೋಧ ವ್ಯಕ್ತವಾಗಿತ್ತು. ಇದು ಮಾತ್ರ ಟೀಕೆ ಮಾಡುವ ಎಲ್ಲರ ಬಾಯಿ ಮುಚ್ಚಿಸುವ ಸಂಶೋಧನೆ ಎಂದು ಮೊದಮೊದಲು ಮೆಚ್ಚುಗೆ ವ್ಯಕ್ತವಾಯಿತು. ಆದರೆ ಕ್ರಮೇಣ ಇದಕ್ಕೂ ಟೀಕೆಗಳ ಸುರಿಮಳೆ ಬಂದವು. ಬಡವರ ಕಣ್ಣೊರೆಸುವ ನೆಪದಲ್ಲಿ ಕುಲಾಂತರಿ ತಂತ್ರಜ್ಞಾನಕ್ಕೆ ಮಾನ್ಯತೆ ಪಡೆಯುವ ಹುನ್ನಾರ ಇದು ಎಂದು ಗ್ರೀನ್‌ಪೀಸ್‌ನಂಥ ಸಂಸ್ಥೆಗಳು ಹೇಳಿದವು. ಈ ಭತ್ತವನ್ನು ಎಲ್ಲೆಡೆ ಬೆಳೆಯಬೇಕೆಂದರೆ ಲಕ್ಷಗಟ್ಟಲೆ ಟನ್ ಬೀಜದ ಭತ್ತವನ್ನು ವಿಜ್ಞಾನಿಗಳು ಉತ್ಪಾದನೆ ಮಾಡುತ್ತ ಕೂರುವಂತಿಲ್ಲ. ಹೆಚ್ಚೆಂದರೆ ಅವರು ಉಚಿತವಾಗಿ ಆ ತಂತ್ರಜ್ಞಾನವನ್ನು ನೀಡಬಹುದು. ನಂತರ ಯಾವುದೋ ಖಾಸಗಿ ಕಂಪನಿಯೇ ಬೀಜದ ಭತ್ತ ಬೆಳೆಸಲು ಮುಂದೆ ಬರಬೇಕು. ಅದು ತನ್ನ ಲಾಭಾಂಶವನ್ನು ಇಟ್ಟುಕೊಂಡೇ ರೈತರಿಗೆ ಬೀಜವನ್ನು ಮಾರಬೇಕು. ರೈತರು ಬೆಳೆದ ಈ ಬಂಗಾರ ಭತ್ತಕ್ಕೆ ಗಿರಾಕಿ ಯಾರು? ಸರಕಾರವೇ ಅದನ್ನು ಖರೀದಿಸಿ, ಬಡ ಜನರಿಗೆ ಉಚಿತವಾಗಿ ವಿತರಿಸಬೇಕು. ನಮ್ಮ ದೇಶದಲ್ಲಿ ಮೊನ್ಸಾಂಟೊ-ಮಹೈಕೊ ಕಂಪನಿ ಇದನ್ನು ಬೆಳೆಯಲು ಮುಂದೆ ಬಂತಾದರೂ ಎಲ್ಲೆಲ್ಲಿ ಏನೆಲ್ಲ ಪ್ರತಿಭಟನೆಗಳು ಬಂದುವೆಂಬುದನ್ನು ಮುಂದೆ ಓದಬಹುದು.

ಬಂಗಾರ ಭತ್ತದ ಈ ಎಲ್ಲ ರಗಳೆಗಳ ನಡುವೆ ಇನ್ನೊಂದು ಅಂಶವೂ ಗಮನಕ್ಕೆ ಬಂತು: ಈ ಭತ್ತದಿಂದ ಲಭಿಸುವ ಅಕ್ಕಿಯಲ್ಲಿ ‘ಎ’ ಅನ್ನಾಂಗದ ಅಂಶ ತೀರಾ ಕಡಿಮೆ ಇರುತ್ತದೆ. ಅದೂ ಶುದ್ಧ ಬೀಜವಾಗಿದ್ದರೆ. ಗರ್ಭಿಣಿ ಮಹಿಳೆ ಪ್ರತಿ ದಿನವೂ ಮೂರುವರೆ ಕಿಲೊ ಅಕ್ಕಿಯ ಅನ್ನವನ್ನು ಉಂಡರೆ ಮಾತ್ರ ಅವಳ ದೇಹಕ್ಕೆ ಅಗತ್ಯ ಪ್ರಮಾಣದಲ್ಲಿ ‘ಎ’ ಅನ್ನಾಂಗ ಸೇರ್ಪಡೆಯಾಗುತ್ತದೆ. ಅಂದರೆ ಅವಳು ದಿನವೂ ಉಣ್ಣುವ ಅನ್ನಕ್ಕಿಂತ ಹತ್ತು ಪಟ್ಟು ಹೆಚ್ಚಿಗೆ ಉಣ್ಣಬೇಕು! ಅದರ ಬದಲು ದಿನಾಲು ಅರ್ಧ ಚಮಚೆಯಷ್ಟು ಕೆಂಪು ಪಾಮೆಣ್ಣೆಯನ್ನು ಸೇವನೆ ಮಾಡಿದರೆ ಅಗತ್ಯ ಪ್ರಮಾಣದ ‘ಎ’ ಜೀವಸತ್ವ ಸೇರ್ಪಡೆಯಾಗುತ್ತದೆ.

ಅವೆಲ್ಲಕ್ಕಿಂತ ದೊಡ ಆಕ್ಷೇಪಣೆ ಏನೆಂದರೆ, ಇಂದು ಸರಕಾರಿ ವಿತರಣಾ ವ್ಯವಸ್ಥೆ ಹೇಗಿದೆ ಎಂದರೆ, ಗೋದಾಮಿನಲ್ಲಿ ಅಕ್ಕಿ ಭರ್ತಿ ಇದ್ದರೂ ಅದು ಬಡವರಿಗೆ ಸಿಗುತ್ತಿಲ್ಲ. ಇನ್ನು ಬಂಗಾರದ ಅಕ್ಕಿಯನ್ನು ಪ್ರತ್ಯೇಕವಾಗಿ ತೆಗೆದಿಟ್ಟು, ಗರ್ಭಿಣಿಯರಿಗೆ ಪೂರೈಕೆ ಮಾಡುವ ವ್ಯವಸ್ಥೆ ಅಚ್ಚುಕಟ್ಟಾಗಿ ಜಾರಿಗೆ ಬರಲು ಸಾಧ್ಯವೆ? ಅಂಧತ್ವದ ನಿವಾರಣೆಗೆ ಆಡಳಿತ ವ್ಯವಸ್ಥೆ ಸುಧಾರಿಸಬೇಕೆ ವಿನಾ ಭತ್ತದ ತಂತ್ರಜ್ಞಾನ ಸುಧಾರಣೆ ಸರಿಯಾದ ಉತ್ತರವಾದೀತೆ?

ಕಂಪನಿಗಳ ಕುಲಾಂತರಿ ಪ್ರಸಾಧನ ಭತ್ತ:

೨೦೦೪ರ ವೇಳೆಗೆ ಭತ್ತದ ಸಂಪೂರ್ಣ ತಳಿನಕ್ಷೆಯ ಚಿತ್ರಣ ಸಿಕ್ಕಿತು. ಅಂದರೆ ಯಾವುದೇ ಭತ್ತದ ಸಸ್ಯದ ತಳಿಗುಣಗಳನ್ನು ಬದಲಿಸ ಬಹುದು, ಭತ್ತದ್ದಲ್ಲದ ಗುಣ ಗಳನ್ನು ಅದರಲ್ಲಿ ಸೇರಿಸ ಬಹುದು. ಹೀಗೆ ತನ್ನ ಜನ್ಮರಹಸ್ಯವನ್ನು ವಿಜ್ಞಾನಿಗಳಿಗೆ ಬಿಚ್ಚಿ ತೋರಿಸಿದ ಮೊದಲ ಸಸ್ಯವೆಂದೂ ಭತ್ತಕ್ಕೆ ಖ್ಯಾತಿ ಬಂತು. ತಳಿನಕ್ಷೆಯ ಚಿತ್ರಣ ಸಿಕ್ಕಿದ್ದೇ ತಡ, ಭತ್ತದ ತಳಿಗುಣವನ್ನು ಜಾಲಾಡಿ, ಬೇರೆ ಬೇರೆ ಸದ್ಗುಣಗಳನ್ನು ಅದಕ್ಕೆ ಸೇರಿಸುವ ಕೆಲಸ ಪೈಪೋಟಿಯಲ್ಲಿ ಆರಂಭವಾಯಿತು. ಉದಾಹರಣೆಗೆ,

ಅಕ್ಕಿಯನ್ನೇ ಔಷಧದ ಮತ್ರೆಯಾಗಿ ಮಾಡಲು, ಅಂದರೆ ಅನ್ನದ ಮೂಲಕವೇ ಔಷಧವನ್ನೂ ದೇಹಕ್ಕೆ ಕಳುಹಿಸಬಹುದು. ಇಲ್ಲಾಂದರೆ ನಿಮ್ಮ ಎತ್ತರವನ್ನು ಹೆಚ್ಚಿಸುವ, ನಿಮ್ಮ ಚರ್ಮದ ಬಣ್ಣವನ್ನು ಬದಲಿಸುವ, ನಿಮ್ಮ ಅಲರ್ಜಿಯನ್ನು ದೂರಮಾಡುವಂಥ ಔಷಧೀಯ ಇಲ್ಲವೆ ಪ್ರಸಾಧನ ಗುಣಗಳ ಭತ್ತದ ತಳಿಗಳನ್ನು ರೂಪಿಸುವ ಕನಸು ಅದು. ಆ ಕನಸು ನನಸಾದರೆ ನಾಳೆ ಸೂಪರ್ ಮಾರ್ಕೆಟ್‌ಗಳಲ್ಲಿ ಬೇರೆ ಬೇರೆ ಬಗೆಯ ಔಷಧೀಯ ಅಕ್ಕಿಗಳು ಮಾರಾಟಕ್ಕೆ ಬರಲಿವೆ. ನಿಮ್ಮ ಮಗುವಿನ ಆಳ್ತನದ ಎತ್ತರ ಹೆಚ್ಚಬೇಕೆ,  ನಿಮಗೆ ವೀರ್ಯ ವೃದ್ಧಿ ಆಗಬೇಕೆ, ದೂಳಿನ ಅಲರ್ಜಿ ನಿವಾರಣೆ ಆಗಬೇಕೆ…? ಅಂಥ ಗುಣಗಳಿರುವ ಅಕ್ಕಿ ಆಗ ವಿಶೇಷ ಅಂಗಡಿಗಳಲ್ಲಿ ಸಿಗಲಿವೆ. ಅನ್ನ ಉಣ್ಣುವ ಮೂಲಕ ಅಂಥ ಬಯಕೆಗಳೆಲ್ಲ ಈಡೇರುವಂತೆ ಭತ್ತದಲ್ಲಿ ಬೇರೆ ಜೀವಿಗಳ ಗುಣಾಣುಗಳನ್ನು ಸೇರಿಸಲಾಗುತ್ತಿದೆ.

ಒಂದೆಡೆ ಅಕ್ಕಿಯ ಬಳಕೆದಾರರಿಗೆ ಅನುಕೂಲ ಮಾಡುವ ವ್ಯವಸ್ಥೆಯಾದರೆ, ಇನ್ನೊಂದೆಡೆ ಭತ್ತ ಬೆಳೆಯುವ ರೈತರಿಗೆ ಅನುಕೂಲ ಆಗುವಂಥ ಹೊಸ ತಳಿಗಳ ಸೃಷ್ಟಿ ಕೆಲಸ ನಡೆದಿದೆ. ಭತ್ತಕ್ಕೆ ಬರುವ ರೋಗಗಳನ್ನೇ ತಡೆಗಟ್ಟುವ ನಿಟ್ಟಿನಲ್ಲಿ ಇನ್ನಷ್ಟು ವಿಧದ ಗುಣಾಣುಗಳ ಸೇರ್ಪಡೆ ಕೆಲಸ ನಡೆಯುತ್ತಿದೆ. ಕಾಂಡ ಕೊರೆಯುವ ಹುಳುಗಳನ್ನು ತಡೆಗಟ್ಟುವ ಭತ್ತ, ಶಿಲೀಂಧ್ರ ರೋಗವನ್ನು ದೂರ ಇಡುವ ಭತ್ತ, ನೀರಿನ ಕೊರತೆಯನ್ನು ಸಹಿಸುವ ಭತ್ತ, ಉಪ್ಪು ನೀರಲ್ಲೂ ಬೆಳೆಯುವ ಭತ್ತ….

ಸುಂದರ ಕನಸುಗಳ ಈ ಸರಮಲೆಯೇ ಅನೇಕರ ಪಾಲಿಗೆ ದುಸ್ವಪ್ನದ ರುಂಡಮಲೆ ಆಗುತ್ತಿದೆ. ಬಳಕೆದಾರರಿಗೂ ಶಂಕೆ, ಬೆಳೆಗಾರರಿಗೂ ಭಯ. ಉದಾಹರಣೆಗೆ ಮಗುವಿನ ಎತ್ತರವನ್ನು ಹೆಚ್ಚಿಸುವ ಗುಣ ಇರುವ ಅಕ್ಕಿಯ ಕ್ಯಾನ್ಸರ್ ಸಾಧ್ಯತೆಯನ್ನು ಹೆಚ್ಚಿಸುವ ಇನ್ಸೂಲಿನ್ ಅಂಶ ಇದೆ ಎಂದು ಕೆಲವು ವಿಜ್ಞಾನಿಗಳು ಹೇಳುತ್ತಿದ್ದಾರೆ (ಪ್ರಾಯೋಗಿಕವಾಗಿ ಹಾಗೆ ಎತ್ತರಕ್ಕೆ ಬೆಳೆಸಿದ ೩೮೬ ಹಂದಿಗಳ ಮಂಸ ಅಮೆರಿಕದ ಫ್ಲಾರಿಡಾದಲ್ಲಿ ಮರುಕಟ್ಟೆಗೆ ಬಂದಾಗ ಭಾರೀ ಗಲಾಟೆ ಎದಿತ್ತು). ಬೇರೆ ಜೀವಿಗಳ ಅಥವಾ ಮನುಷ್ಯರದೇ ಗುಣಾಣುಗಳನ್ನು ಸೇರ್ಪಡೆ ಮಡಿದ ಭತ್ತದಿಂದ ಯರಿಗೆ ಯವ ಅಲರ್ಜಿ ಉಂಟಾಗುತ್ತದೆ ಎಂದು ಹೇಳುವಂತಿಲ್ಲ.

ಕೃಷಿರಂಗದಲ್ಲಿ ಇನ್ನೊಂದು ಬಗೆಯ ಭಯ ತಲೆದೋರಿದೆ. ಕುಲಾಂತರಿ ಭತ್ತದ ತಳಿಗಳ ಪರಾಗ ಕಣಗಳು ಎ ಹಾರಿ ನಮ್ಮ ಸ್ಥಳೀಯ ತಳಿಗಳನ್ನೂ ಕುಲಗೆಡಿಸೀತು ಎಂಬ ಭಯ ಅದು. ಮುಸುಕಿನ ಜೋಳದ ಕುರಿತ ಇಂಥ ಭಯದಿಂದಾಗಿಯೇ ಯುರೋಪ್ ಮತ್ತು ಅನೇಕ ಇತರ ಖಂಡಗಳ ದೇಶಗಳಲ್ಲಿ ಈಗಲೂ ಕುಲಾಂತರಿ ಸಸ್ಯಗಳನ್ನು ಬೆಳೆಯಲು ಬಿಡುತ್ತಿಲ್ಲ. ಭತ್ತದ ವಿಷಯವಂತೂ ಇನ್ನೂ ಸೂಕ್ಷ್ಮವಾದುದು. ಲಕ್ಷಾಂತರ ವರ್ಷಗಳಿಂದ ನಿಸರ್ಗ ತಾನಾಗಿ ನಾನಾ ಬಗೆಯ ಭತ್ತದ ತಳಿಗಳನ್ನು ವಿಕಾಸ ಮಡಿದೆ.  ಅವು ಈ ಕುಲಾಂತರಿ ತಳಿ ಗಳಿಂದಾಗಿ ಕ್ರಮೇಣ ತಮ್ಮ ಗುಣವನ್ನು ಕಳೆದು ಕೊಂಡರೆ, ಪ್ರತಿ ರೈತನೂ ದೊಡ್ಡ ಕಂಪನಿಗಳ ದುಬಾರಿ ಬೀಜಗಳನ್ನೇ ಪ್ರತಿ ವರ್ಷ ಖರೀದಿಸ ಬೇಕಾದೀತೆಂಬ ಭಯ ಅದು. ಮೇಲಾಗಿ ಜಗತ್ತಿನೆಡೆ ಪ್ರಸಿದ್ಧಿ ಪಡೆದ ಬಾಸ್ಮತಿ ಭತ್ತ ಕ್ರಮೇಣ ಇಂಥ ಕಲಬೆರಕೆ ತಳಿಗಳಿಂದಾಗಿ ತನ್ನ ಪರಿಮಳವನ್ನು ಕಳೆದುಕೊಂಡೀತೆಂಬ ಭಯ.

ಇತ್ತ ಅಕ್ಕಿಯನ್ನು ರಫ್ತು ಮಡುವವರಿಗೆ ಇನ್ನೊಂದು ಬಗೆಯ ಭಯ ಆವರಿಸಿದೆ. ಕುಲಾಂತರಿ ಆಹಾರ ವಸ್ತುಗಳನ್ನು ಅನೇಕ ಪಾಶ್ಚಾತ್ಯ ದೇಶಗಳಲ್ಲಿ ನಿಷೇಧಿಸಲಾಗಿದೆ. ಕ್ಯಾಲಿಫೋರ್ನಿ ಯದ ಅಲ್ಲಲ್ಲಿ ‘ಕುಲಾಂತರಿ ಮುಕ್ತ’ ಮರುಕಟ್ಟೆ ಗುರುತಿಸಲಾಗಿದೆ. ಐರೋಪ್ಯ ದೇಶಗಳಲ್ಲಿ ಕುಲಾಂತರಿ ಬೆಳೆಗಳಿಗೆ ಭಾರೀ ವಿರೋಧವಿದೆ. ಭಾರತದಂಥ ದೇಶಗಳಲ್ಲಿ ಭತ್ತದ ಕುಲಾಂತರಿ ತಳಿಗಳು ಕಾಲಿಟ್ಟರೆ, ಅವು ಕ್ರಮೇಣ ಎಲ್ಲ ಶುದ್ಧ ನೈಸರ್ಗಿಕ ತಳಿಗಳನ್ನು ಕೂಡ ಕಲಸುಮೇಲೋಗರ ಮಾಡಿಬಿಟ್ಟರೆ ಅಕ್ಕಿಯನ್ನು ರಫ್ತು ಮಡುವವರಿಗೆ ಮರುಕಟ್ಟೆಯೇ ಇಲ್ಲದಂತಾದೀತೆಂಬ ಭಯ ಅದು.

ಈ ಎಲ್ಲ ಭಯಗಳ ನಡುವೆಯೂ ನಮ್ಮಲ್ಲಿ ಮೊನ್ಸಾಂಟೊ- ಮಹೈಕೊ ಕಂಪನಿ ಕುಲಾಂತರಿ ಭತ್ತ ಬೆಳೆಯಲು ಮುಂದಾಗಿವೆ. ೨೦೦೬ನೇ ಇಸವಿಯ ನವಂಬರಿನಲ್ಲಿ ಕೊಯಂಬತ್ತೂರು ಮತ್ತು ಪಂಜಾಬಿನ ಕರ್ನಾಲ್‌ಗಳಲ್ಲಿ ಬೆಳೆಸಿದ್ದ ಭತ್ತದ ಪೈರನ್ನು ರೈತರು ಕಿತ್ತು ಸುಟ್ಟಿದ್ದಾರೆ. ದೇಶದ ಇನ್ನೂ ಹತ್ತು ತಾಣಗಳಲ್ಲಿ ಈ ಕಂಪನಿ ಪ್ರಾಯೋಗಿಕ ಸ್ತರದಲ್ಲಿ ಕುಲಾಂತರಿ ಭತ್ತವನ್ನು ಬೆಳೆಯತೊಡಗಿದ್ದು ಬೆಂಕಿ ಹಚ್ಚುವ ಚಳವಳಿ ಅಲ್ಲ ಹಬ್ಬದಂತೆ ಬಂದೋಬಸ್ತು ಮಡಲಾಗಿತ್ತು. ಆದರೆ ಚಳವಳಿಯ ಬಿಸಿ ಈಗ ವಾಣಿಜ್ಯ ರಂಗಕ್ಕೂ ಹಬ್ಬುತ್ತಿದೆ. ಅಕ್ಕಿ ರಫ್ತು ಮಡುವ ಸಂಘಟನೆಯೂ ಕುಲಾಂತರಿ ಭತ್ತಕ್ಕೆ ವಿರೋಧ ಒಡ್ಡುತ್ತಿದೆ.

ಚೀನಾದಲ್ಲೂ ಕುಲಾಂತರಿ ಭತ್ತವನ್ನು ಕಟ್ಟುನಿಟ್ಟಾಗಿ ಸರಕಾರಿ ನಿಗಾದಲ್ಲಿ ಬೆಳೆಸಲಾಗುತ್ತಿದೆ. ಆದರೆ ರೈತರಿಗೆ ಅದನ್ನು ಬೆಳೆಸಲು ಅನುಮತಿಯನ್ನು ಈವರೆಗೂ (ಏಪ್ರಿಲ್ ೨೦೦೮) ನೀಡಿಲ್ಲ.

ಕುಲಾಂತರಿ ತಳಿಗಳು ಎಷ್ಟರಮಟ್ಟಿಗೆ ಸುರಕ್ಷಿತ ಎಂಬ ಪ್ರಶ್ನೆ ಹೇಗೂ ಇರಲಿ. ಅದಕ್ಕೆ ಉತ್ತರ ತಳಿ ವಿಜ್ಞಾನಿಗಳ ಬಳಿ ಕೂಡ ಇಲ್ಲ. ನಮ್ಮನ್ನು ಕಾಡಬೇಕಾದ ಪ್ರಶ್ನೆ ಏನೆಂದರೆ, ಈ ವಿಜ್ಞಾನಿಗಳು ಪಾಶ್ಚಾತ್ಯರ ಮೂಲ ಆಹಾರವಾದ ಗೋಧಿಯಲ್ಲಿ ಇಂಥ ಸೋ ಕಾಲ್ಡ್ ಸದ್ಗುಣಗಳನ್ನು ಏಕೆ ತುಂಬುತ್ತಿಲ್ಲ? ಭತ್ತಕ್ಕೇ ಏಕೆ ತುಂಬುತ್ತಾರೆ? ಏಕೆಂದರೆ ಅನ್ನ ಉಣ್ಣುವ ಜನರಲ್ಲಿ ಹೆಚ್ಚಿನವರೆಲ್ಲ ಏಷ್ಯನ್ನರು. ಗೋಧಿ ತಿನ್ನುವ ಜನರಿಗೆ ಹೋಲಿಸಿದರೆ ತುಸು ಕುಳ್ಳರು. ಕಪ್ಪು ಬಣ್ಣದವರು. ಅವರಲ್ಲಿ   ಇನ್ನೂ ಎತ್ತರ ಬೆಳೆಯುವ ಹಂಬಲ, ಚರ್ಮ ಬೆಳ್ಳಗಾಗಬೇಕೆಂಬ ಹಂಬಲ, ಕಣ್ಣು ಹಸಿರಾಗಬೇಕೆಂಬ ಹಂಬಲವನ್ನು ತುಂಬಿದರೆ ಅಂಥ ಅಕ್ಕಿಯ ಮಾರಾಟ ಸುಲಭವಾಗುತ್ತದೆ ತಾನೆ?

ಬೆಳ್ಳಗಿರುವುದೆಲ್ಲ ಆಕರ್ಷಕ ಎಂಬ ಯುಗದಲ್ಲಿ ನಾವಿದ್ದೇವೆ. ನಾವು ತಿನ್ನುವ ಉಪ್ಪೂ ಬೆಳ್ಳಗಿರಬೇಕು; ಬೆಲ್ಲವೂ ಬೆಳ್ಳಗಿರಬೇಕು. ಹಾಗೆಯೇ ನಮ್ಮ ಊಟದ ತಟ್ಟೆಯಲ್ಲಿನ ಅನ್ನ ಕೂಡ ಬೆಳ್ಳಗಿರಬೇಕು ಎಂದು ಬಯಸುತ್ತೇವೆ. ಕಳೆದ ಸುಮಾರು ೫೦ ಸಾವಿರ ವರ್ಷಗಳಿಂದ ಸಹಜ ಭತ್ತದ ಸಾಗುವಳಿ ಮಾಡಿಕೊಂಡು ಅದರ ಅನ್ನವನ್ನೇ ಉಣ್ಣುತ್ತಿದ್ದ ನಾವು ಇಂದು ಅಕ್ಕಿಗೆ ನಾನಾ ಬಗೆಯ ಪಾಲಿಶ್ ಕೊಟ್ಟು, ಅದರ ಸತ್ವಭರಿತ ಹೊರಗವಚವನ್ನೆಲ್ಲ ನಾಶ ಮಾಡಿ, ಬೆಳ್ಳಗಿನ, ನುಣುಪಾದ ಅಕ್ಕಿಯ ಅನ್ನವನ್ನು ಉಣ್ಣುತ್ತೇವೆ. ಅನ್ನಕ್ಕೆ ಇರುವ ಮೂಲ ರುಚಿಯನ್ನೂ ಮರೆತಿದ್ದೇವೆ; ಅದರಲ್ಲಿರುವ ಜೀವಪೋಷಕ ಸತ್ವವನ್ನೇ ಮರೆಮಾಚಿದ್ದೇವೆ. ನಾನಾ ಬಗೆಯ ಕೆಮಿಕಲ್‌ಗಳ ಸಿಂಪಡನೆ ಮಾಡಿ ಬೆಳೆಸಿದ ಭತ್ತದ ಅನ್ನವನ್ನೇ ಉಣ್ಣುತ್ತ ಹೃದ್ರೋಗ, ಕ್ಯಾನ್ಸರ್, ಮೂತ್ರಪಿಂಡ ವೈಫಲ್ಯ, ಸಂತಾನಹೀನತೆ ಮುಂತಾದ ನಾನಾ ಸಮಸ್ಯೆಗಳಿಗೆ ಸಿಕ್ಕು ತೊಳಲುತ್ತ, ಅವೆಲ್ಲವುಗಳ ಪರಿಹಾರಕ್ಕೆ ಈಗ ಮತ್ತೆ ಭತ್ತದಲ್ಲೇ ಔಷಧೀಯ ಗುಣಗಳನ್ನು ತುಂಬುವವರೆಗೆ ನಾವು ಬಂದಿದ್ದೇವೆ. ನಿಸರ್ಗದಿಂದ ದೂರ ದೂರ ಸಾಗುತ್ತಲೇ ಭತ್ತದ ಸಸ್ಯವನ್ನೂ ಲ್ಯಾಬ್‌ಗಳತ್ತ, ಫ್ಯಾಕ್ಟರಿಗಳತ್ತ ಎಳೆದು ತರುತ್ತಿದ್ದೇವೆ.

ಹೀಗಿದೆ ಭತ್ತದ ಕತೆ, ಹೀಗಿದೆ ಅಕ್ಕಿಯ ಕತೆ. ಹೀಗೆಯೇ ಸಾಗುತ್ತಿದ್ದರೆ ಇನ್ನು ಕೆಲವೇ ದಶಕಗಳಲ್ಲಿ ಭತ್ತದ ಮೂಲ ತಳಿಗಳೆಲ್ಲ ನಿಸರ್ಗದಿಂದ ಕಣ್ಮರೆಯಾಗಬಹುದು. ಅಥವಾ ಯಾರೂ ಖಾಸಗಿಯಾಗಿ ಭತ್ತವನ್ನು ಬೆಳೆಯಕೂಡದೆಂಬ ಕಾನೂನು ಬರಬಹುದು. ಅಂಥ ದಿನಗಳು ಬಾರದ ಹಾಗೆ, ಭತ್ತದ ಮೇಲಿನ ಪ್ರೀತಿ ಎಂದೂ ಬತ್ತದ ಹಾಗೆ ನಾವು ಎಚ್ಚರದಿಂದಿರುವುದು ಮೇಲಲ್ಲವೆ?