ಕೂಲಿ ಶ್ರಮ ಉಳಿಸಿದ ತರಕಾರಿ ತೋಟ

ತರಕಾರಿ ಊಟಕ್ಕಷ್ಟೇ ಅಲ್ಲ, ತಿಂಗಳ ವೆಚ್ಚವನ್ನೂ ತಗ್ಗಿಸುವ ಆದಾಯದ ಬೆಳೆ. ಅದನ್ನು ಬೆಳೆಸುವ ರೀತಿ, ಮಾರಾಟದ ವಿಧಾನ ಅರಿತರೆ ಕೂಲಿ ಮಾಡುವವರು ವರ್ಷದ ಆರು ತಿಂಗಳು ಮನೆಯಲ್ಲೇ ಕುಳಿತು ಸಂಪಾದಿಸಬಹುದು. ಕೃಷ್ಣೇಗೌಡ – ಶಾಂತಮ್ಮ ದಂಪತಿ ಅನುಸರಿಸಿರುವ ಈ ವಿಧಾನ ಇತರರಿಗೂ ಮಾದರಿಯಾಗಬಹುದು.

ನಾಲ್ಕು ವರ್ಷದ ಹಿಂದಿನ ಮಾತು. ಚಿಕ್ಕಮಗಳೂರು ಜಿಲ್ಲೆಯ ತತ್ಕೊಳ ಮೀಸಲು ಅರಣ್ಯ ಪ್ರದೇಶದಿಂದ ಕೆಲವು ಗ್ರಾಮಗಳು ಸ್ಥ್ಥಳಾಂತರಗೊಂಡವು. ಅದರಲ್ಲಿ ಕುಂದೂರು ಗ್ರಾಮ ಕೂಡ ಒಂದು. ಆ ಗ್ರಾಮದವರಿಗೆ ಸರ್ಕಾರ ಮೂಡಿಗೆರೆ ತಾಲ್ಲೂಕು ಫಲ್ಗುಣಿ ಸಮೀಪ ಜಮೀನು ನೀಡಿತು. ಪ್ರತಿ ಕುಟುಂಬಕ್ಕೆ ಎರಡು ಎಕರೆ ನಾಲ್ಕು ಗುಂಟೆ ಜಮೀನು, ಕೈಗೊಂದಿಷ್ಟು ಹಣ ಕೊಟ್ಟು ಕಳುಹಿಸಿತು ಸರ್ಕಾರ. ಇಂಥ ಸಂತ್ರಸ್ಥ ಕುಟುಂಬದಲ್ಲಿ ಕೃಷ್ಣೇಗೌಡ ಮತ್ತು ಶಾಂತಮ್ಮ ಕುಟುಂಬವೂ ಒಂದು.

ಅಪ್ಪನಿಂದ ಬಂದಿದ್ದ ನಾಲ್ಕು ಎಕರೆ ಭೂಮಿಯನ್ನು ಅನಿವಾರ್ಯವಾಗಿ ಬಿಟ್ಟು, ಫಲ್ಗುಣಿಗೆ ಬಂದು ನೆಲಸಿದಾಗ ಆ ಜಮೀನಿನಲ್ಲಿ ಬರೀ ಮುಳ್ಳು, ಕಲ್ಲು, ಕುರುಚಲುಗಳ ರಾಶಿ. ಜಮೀನು ಇದ್ದರೂ ಯಾವುದೇ ಬೆಳೆ ಇಲ್ಲ. ಇಂಥ ಬರಿದಾದ ಭೂಮಿ ಕಂಡು ಕಂಗೆಡದ ಕೃಷ್ಣೇಗೌಡ, ಶಾಂತಮ್ಮ ಒಂದು ಎಕರೆ ಮೂವತ್ತು ಗುಂಟೆಯಲ್ಲಿ ಸಿಲ್ವರ್, ಕಾಫಿ, ಬಾಳೆ, ಅಡಿಕೆ ಹಾಗೂ ಕಿತ್ತಳೆಯಂಥ ಕೆಲವು ಹಣ್ಣಿನಗಿಡಗಳನ್ನು ನೆಟ್ಟರು. ‘ಇವತ್ತು ಗಿಡ ನೆಟ್ಟರೆ ನಾಳೆ ಫಲ ಕೊಡಲು ಸಾಧ್ಯವೇ? ಇಲ್ಲ. ಕನಿಷ್ಠ ಎರಡು- ಮೂರು ವರ್ಷಗಳಾದರೂ ಬೇಕು. ಅಲ್ಲಿಯವರವಿಗೆ ಜೀವನ ನಡೆಯಬೇಕಲ್ಲ. ಸರಿ, ದಂಪತಿ ಹಸಿವು ನೀಗಿಸಿಕೊಳ್ಳಲು ಕೂಲಿ ಕೆಲಸಕ್ಕೆ ಹೊರಟರು.

ಕೈತೋಟದ ಪರಿಚಯ

ವರ್ಷಗಳು ಕಳೆದವು. ಆದರೂ ಜೀವನದ ಪಥ ಮಾತ್ರ ಬದಲಾಗಲಿಲ್ಲ. ಇದೇ ಸಂದರ್ಭದಲ್ಲಿ ಭೂಮಿ ಸುಸ್ಥಿರ ಅಭಿವೃದ್ಧಿ ಸಂಸ್ಥೆ ಫಲ್ಗುಣಿಯಲ್ಲಿ ಸಾವಯವ ಗ್ರಾಮ ಯೋಜನೆ ಅನುಷ್ಠಾನಕ್ಕೆ ಮುಂದಾಯಿತು. ಫಲಾನುಭವಿಗಳ ಆಯ್ಕೆ ನಡೆಯುತ್ತಿದ್ದ ಸಮಯದಲ್ಲಿ ಕೃಷ್ಣೇಗೌಡರು ಪರಿಚಯವಾದರು. ಕೃಷಿಯಲ್ಲಿ ಗೌಡರು ಮತ್ತು ಶಾಂತಮ್ಮ ಅವರಿಗೆ ಇದ್ದ ಉತ್ಸಾಹದಿಂದ ಯೋಜನೆಯ ಫಲಾನುಭವಿಗಳಾದರು.

ಕೃಷ್ಣೇಗೌಡರು ಎರೆಗೊಬ್ಬರ ತಯಾರಿಕೆ ಕುರಿತು ತರಬೇತಿ ಪಡೆದರೆ. ಶಾಂತಮ್ಮ, ಔಷಧಿ ಸಸ್ಯಗಳ ಬೆಳವಣಿಗೆ, ಕೈತೋಟ ನಿರ್ಮಾಣ ಕುರಿತು ಸಾಕಷ್ಟು ಅನುಭವಗಳಿಸಿದರು. ಆ ವರ್ಷ ಭೂಮಿ ಸಂಸ್ಥೆ ವಿಶ್ವ ಕೈತೋಟ ದಿನವನ್ನು ಅರ್ಥಪೂರ್ಣವಾಗಿ ಆಚರಿಸುವ ಸಲುವಾಗಿ ಪ್ರತಿಯೊಬ್ಬ ಫಲಾನುಭವಿ ಮನೆಯ ಅಂಗಳದಲ್ಲಿ ಕೈತೋಟ ನಿರ್ಮಿಸಲು ತೀರ್ಮಾನಿಸಿತು. ಕಾರ್ಯಕ್ರಮದ ದಿನ ಕೈತೋಟದ ಅವಶ್ಯಕತೆ, ಅದರಿಂದಾಗುವ ಆರ್ಥಿಕ ಹಾಗೂ ಆರೋಗ್ಯದ ಲಾಭ,  ನಿರ್ಮಾಣ ಕುರಿತು ತರಬೇತಿ ನೀಡಿತು. ಕಾರ್ಯಕ್ರಮದಲ್ಲಿ ಕೈತೋಟ ನಿರ್ಮಾಣದ ಪ್ರಾತ್ಯಕ್ಷಿಕೆ ಹಾಗೂ ಜೊತೆಗೆ ಸ್ಥಳೀಯ (ನಾಟಿ) ತರಕಾರಿ ಬೀಜಗಳ ವಿತರಣೆ ಮಾಡಿತು.

ಕೈತೋಟ ನಿರ್ಮಾಣ

ಕಾರ್ಯಕ್ರಮದಲ್ಲಿ ಭಾಗವಹಿಸಿದ ಕೃಷ್ಣೇಗೌಡ ರಿಗೆ ಕೈತೋಟದ ಬಗ್ಗೆ ಅತೀವ ಆಸಕ್ತಿ ಮೂಡಿತು. ಅಷ್ಟು ಹೊತ್ತಿಗೆ ಯೋಜನೆಯಿಂದ ಸಹಾಯಧನ ಪಡೆದ ಗೌಡರು ಎರೆತೊಟ್ಟಿ, ಹಸಿರೆಲೆಗೊಬ್ಬರ ತಯಾರಿಕೆಯ ತೊಟ್ಟಿಗಳನ್ನು ನಿರ್ಮಿಸಿದರು.

ಹಾಗಾಗಿ ಗೊಬ್ಬರದ ಚಿಂತೆ ಇರಲಿಲ್ಲ. ನೀರು ಹತ್ತಿರದಲ್ಲೇ ದಂಡಿಯಾಗಿತ್ತು. ಸರಿ,  ಗೌಡರು- ಶಾಂತಮ್ಮ ಸೇರಿ ತಮ್ಮ ಮನೆಯ ಸಮೀಪದಲ್ಲೇ ಕೈತೋಟ ನಿರ್ಮಾಣಕ್ಕೆ ನಕ್ಷೆ ಹಾಕಿದರು. ಮೊದಲು ಚಪ್ಪರದ ತರಕಾರಿಗಳನ್ನು ನಾಟಿ ಮಾಡಿದರು. ನಂತರ ಧಂಡಿಯಾಗಿ ಬೆಳೆಯುವ ಬಸಳೆ, ರಾಜಗೀರ ಕುಂಬಳ, ಮಂಗಳೂರು ಸೌತೆ, ಹೀರೆ, ಸೋರೆ ಇತ್ಯಾದಿ ಹಾಕಿದರು. ಬಳ್ಳಿಗಳೆಲ್ಲಾ ಬೆಳೆದು ಕಾಯಿ ಕಚ್ಚಬೇಕು, ಎನ್ನುವಷ್ಟರಲ್ಲಿ ಸಿಕ್ಕಾಪಟ್ಟೆ ಮಳೆ ಸುರಿಯಿತು. ತರಕಾರಿ ಬೆಳೆಗಳೆಲ್ಲ ಮಳೆಯಲ್ಲಿ ಕೊಚ್ಚಿ ಹೋಯಿತು.

ಪ್ರಕೃತಿಯ ಮುನಿಸಿಗೆ ತೋಟ ಹಾಳಾದರೂ ಈ ದಂಪತಿ ಎದೆಗುಂದಲಿಲ್ಲ. ಮಳೆ ನಿಂತ ಮೇಲೆ ಕೈತೋಟ ಕಟ್ಟೋಣ ಎಂದು ತೀರ್ಮಾನಿಸಿದರು. ಬಹುಶಃ ಇವರಿಬ್ಬರ ಉತ್ಸಾಹ ಪ್ರಕೃತಿಗೆ ಕೇಳಿಸಿರಬೇಕು. ಕೊಚ್ಚಿ ಹೋದ ತರಕಾರಿ ಬೆಳೆಗಳ ಬೀಜಗಳು ಜಮೀನಿನಲ್ಲಿ ಅಲ್ಲಲ್ಲಿ ಉಳಿದವು. ಅವು ಮರಿ ತರಕಾರಿಗಳಾಗಿ ಗೊಬ್ಬರದ ಗುಂಡಿ ಮೇಲೆ ಹಾಗೂ ಸುತ್ತ ಮೊಳಕೆಯೊಡೆಯಲು ಆರಂಭಿಸಿದವು.

ಮೊಳಕೆಯೊಡೆಯುತ್ತಿದ್ದ ಬಳ್ಳಿಗಳಿಗೆ ಚಪ್ಪರ ಮಾಡಿದ್ವಿ. ಬಸಳೆ ಸೊಂಪಾಗಿ ಬಂತು. ಎರೆಗೊಬ್ಬರದ ಗುಂಡಿ ಮೇಲೆ ಕುಂಬಳ ಸೊಂಪಾಗಿ ಬೆಳೆಯಿತು. ಗುಂಡಿ ಪಕ್ಕ ಸೋರೆ ಬಳ್ಳಿ ಹರಡಿಕೊಂಡಿತು ಎಂದು ತೋಟ ನೋಡೋಕೆ ಬಂದವರಿಗೆಲ್ಲ ಶಾಂತಮ್ಮ ಸಂತಸದಿಂದ ವಿವರಣೆ ನೀಡೋದಕ್ಕೆ ಶುರು ಮಾಡಿದರು. ತರಕಾರಿ ಕೃಷಿ ಆ ವರ್ಷ ಶಾಂತಮ್ಮ ಕುಟುಂಬಕ್ಕೆ ಉತ್ತಮ ಆದಾಯ ತಂದು ಕೊಟ್ಟಿತು.

ಖರ್ಚಿಲ್ಲದ ಕೈ ತೋಟ

ಖರ್ಚಿಲ್ಲದೇ ಕೈತೋಟ ಮಾಡಬಹುದು ಅಂತ ಗೊತ್ತಾಗಿದ್ದೆ ಈಗ ಎನ್ನುವ ಶಾಂತಮ್ಮ ಮೊದಲನೇ ವರ್ಷದಲ್ಲೇ ತಮ್ಮ ಕೈತೋಟದಲ್ಲಿ ಹದಿಮೂರು ವಿಧದ ತರಕಾರಿಗಳನ್ನು ಬೆಳೆದರು. ಬೀಜ ಉಚಿತವಾಗಿ ಸಿಕ್ಕಿತು. ಗೊಬ್ಬರ ನಾವೇ ಮಾಡ್ಕೊಂಡೆವು. ಸಮಯ ಸಿಕ್ಕಾಗ ಒಂದಷ್ಟು ಆರೈಕೆ ಮಾಡಿದೆವು, ಅಷ್ಟೇ. ಬೇಕಾದಷ್ಟು ತರಕಾರಿ ಸಿಕ್ಕಿತು – ಶಾಂತಮ್ಮ ಲೆಕ್ಕಚಾರ ಮುಂದಿಟ್ಟರು.

ಜಮೀನಿಟ್ಟುಕೊಂಡು ತಿಂಗಳಿಗೆ 250 ರೂಪಾಯಿ ತರಕಾರಿಗೆ ಹಣ ಖರ್ಚು ಮಾಡುತ್ತಿದ್ದ ಕೃಷ್ಣೇಗೌಡ ಕುಟುಂಬಕ್ಕೀಗ ತರಕಾರಿ ಬೆಳೆಯುತ್ತಿರುವುದರಿಂದ ಪ್ರತಿ ತಿಂಗಳ ತರಕಾರಿ ಹಣ ಉಳಿಯುತ್ತಿದೆ. ಅರ್ಧ ತಿಂಗಳು ಅಂದರೆ ಹದಿನೈದು ದಿನ ಕೂಲಿ ಕೆಲಸಕ್ಕೆ ಹೋಗುವುದು ತಪ್ಪಿದೆ. ಅಷ್ಟು ಆದಾಯ ತರಕಾರಿಯಿಂದ ಲಭ್ಯವಾಗುತ್ತಿದೆ ಎನ್ನುತ್ತಾರೆ ಕೃಷ್ಣೇಗೌಡ.

ಕೀಟ-ರೋಗಕ್ಕೆ ಸಾವಯವ ಮದ್ದು

ಕೃಷ್ಣೇಗೌಡರು ವರ್ಷಕ್ಕೆ ಹೆಚ್ಚು ಕಡಿಮೆ ಆರು ಟನ್ ಎರೆಗೊಬ್ಬರ ತಯಾರಿಸುತ್ತಾರೆ. ಒಂದರಿಂದ ಒಂದೂವರೆ ಸಾವಿರ ಲೀಟರ್‌ನಷ್ಟು ಜೀವಾಮೃತ ತಯಾರಿಸುತ್ತಾರೆ. ತರಕಾರಿ ಬೆಳೆ ಜೊತೆಗೆ ಬಾಳೆ, ಅಡಿಕೆ, ಕಿತ್ತಳೆ ಹಣ್ಣಿನ ಬೆಳೆಗೂ ಎರೆಗೊಬ್ಬರ ಹಾಗೂ ಜೀವಾಮೃತವನ್ನು ಮುಂಗಾರಿಗೆ ಮುನ್ನ ನಂತರ ಮಳೆ ನಿಂತ ಮೇಲೆ ಕೊಡುತ್ತಾರೆ.

ನಿಯಮಿತವಾಗಿ ಗೊಬ್ಬರ ಕೊಡುವುದರಿಂದ ತೋಟದ ಮಣ್ಣು ಫಲವತ್ತಾಗಿದೆ. ಹಾಗಾಗಿ ತರಕಾರಿಗಳಿಗೆ ಕೀಟ- ರೋಗ ಬಾಧೆ ಕಡಿಮೆ ಇದೆ. ಹತ್ತಾರು ಬೆಳೆಗಳು, ತರಕಾರಿಗಳ ಮಿಶ್ರ ಕೃಷಿ ಪದ್ಧತಿ ಅಳವಡಿಸಿರುವುದರಿಂದ ಇವರ ತೋಟದಲ್ಲಿ ಕೀಟ ಬಾಧೆ ಕಡಿಮೆ ಎನ್ನುತ್ತಾರೆ ಭೂಮಿ ಸಂಸ್ಥೆಯ ಯೋಜನಾ ನಿರ್ದೇಶಕ ಕೆ.ರವಿ.

ಅಷ್ಟಿಷ್ಟು ಕೀಟ, ರೋಗ ಬಂತು. ರೋಗ ಕಾಣಿಸಿಕೊಳ್ಳುತ್ತಿದ್ದಂತೆ ಬೇವಿನ ಎಣ್ಣೆ ಸಿಂಪಡಿಸುತ್ತಿದ್ದೆವು. ಕೆಲವು ತರಕಾರಿಗಳಿಗೆ ರೋಗ ಬರಲೇ ಇಲ್ಲ.ಒಂದು ವರ್ಷ ಭೂಮಿಗೆ ಸಾಕಷ್ಟು ಎರೆಗೊಬ್ಬರ, ಹಸಿರೆಲೆಗೊಬ್ಬರ ಕೊಟ್ಟಿದ್ದರಿಂದಲೋ ಏನೋ, ಯಾವುದೇ ತರಕಾರಿ ಬೀಜ ಹಾಕಿದರೂ ಫೇಲ್ ಆಗ್ತಿರಲಿಲ್ಲ ಕೃಷ್ಣೇಗೌಡರು ಕೀಟ-ರೋಗ ಬಾಧೆ ಕಡಿಮೆಯಾಗಿದ್ದಕ್ಕೆ ಕಾರಣ ನೀಡಿದರು.

ಹಣ್ಣಿನ ಗಿಡಗಳು, ಕಾಡು ಮರಗಳು, ತರಕಾರಿ ಬೆಳೆಗಳ ಮನೆಗೆ ಬೇಕಾಗುವ ಸಾಸಿವೆ, ರಾಜಗೀರ, ಕೋಲು ಗೆಣಸು, ಸಿಹಿಗೆಣಸಿನಂಥ ಗೆಡ್ಡೆ-ಗೆಣಸುಗಳನ್ನು ಬೆಳೆಯುತ್ತಾರೆ. ಕೈತೋಟ ಬೆಳೆಯುತ್ತಾ ಬೆಳೆಯುತ್ತಾ ನಾವೀಗ ಬಿತ್ತನೆ ಬೀಜ, ಗೊಬ್ಬರದ ವಿಚಾರದಲ್ಲಿ ನಾಲ್ಕು ಎಕರೆ ಜಮೀನು ಇದ್ದಾಗ ಇಲ್ಲದ ಸ್ವಾವಲಂಬಿತನ ಎರಡೂವರೆ ಎಕರೆಯಲ್ಲಿ ಲಭ್ಯವಾಗಿದೆ ಎಂದು ಸಂತೋಷದಿಂದ ನುಡಿಯುತ್ತಾರೆ.

ಕೃಷ್ಣೇಗೌಡರ ತೋಟದ ತರಕಾರಿ ನೋಟ

ಕ್ರ., ತರಕಾರಿಯ ಅಳವಡಿಸಿದ     ಇಳುವರಿ    ಮಾರಾಟ ಸ್ವಂತಕ್ಕೆ

ಸಂ.   ಹೆಸರು       ಸ್ಥಳ  ಕೆ,ಜಿ ಗಳಲ್ಲಿ ಕೆ.ಜಿಗಳಲ್ಲಿ ರೂಗಳಲ್ಲಿ

1    ಮೆಣಸಿನ ಕಾಯಿ 20*20         28         8    64/-     20

2    ಅಲಸಂದೆ       20*20         22         7       105      15

3    ಮುಳಗಾಯಿ      10ಗಿಡ           8                            8

4    ಸೀಮೆ ಬದನೆ    1ಬೀಳು         45        25      250     20

5    ಕೆಸುವಿನ ಗಡ್ಡೆ  100 ಗಿಡ         40        20      200     20

6    ಅರಿಶಿಣ           10ಗಿಡ           2                            2

7    ಕಬ್ಬು            36ಗುಳಿ   70ಜೊಲ್ಲೆ        50      500     20

8    ಸೋರೆ ಕಾಯಿ  2ಬೀಳು         55        10       120     45

9    ಕುಂಬಳ ಕಾಯಿ 2ಬೀಳು   52ಕಾಯಿ       40     1400      12

10    ಸಿಹಿ ಸೊರೆ      2ಬೀಳು        150       120     1440     30

11    ಅರಿವೆ ಸೊಪ್ಪು   20*20    80ಕಟ್ಟು       60       120     20

12    ಟೊಮೇಟೊ       5ಗಿಡ         20                          20

13    ಬಸಳೆ ಸೊಪ್ಪು   20*20    80ಕಟ್ಟು       60       120     20

* ಬೀಳು ಎಂದರೆ ಬಳ್ಳಿ

* ಗುಳಿ ಎಂದರೆ ಕೂಳೆ

ಗಮನಿಸಿ : ಕೃಷ್ಣೇಗೌಡ – ಶಾಂತಮ್ಮ ದಂಪತಿಯ ಕೈತೋಟದ ಯಶೋಗಾಥೆ ಬರೆದಿದ್ದು ವರ್ಷದ ಹಿಂದೆ. ಇದಾದ ನಂತರದಲ್ಲಿ ಕೃಷ್ಣೇಗೌಡರು ಅಕಾಲಿಕ ಮರಣಕ್ಕೆ ತುತ್ತಾದರು. ಈಗ ಶಾಂತಮ್ಮ ಒಬ್ಬರೇ ತೋಟದಲ್ಲಿದ್ದಾರೆ. ಪತಿಯ ಅಗಲಿಕೆಯಿಂದ ತೋಟ ತುಸು ಸೊರಗಿದೆ. ಆದರೆ ದಂಪತಿಯ ಉತ್ಸಾಹ, ಅನುಭವಗಳನ್ನು ಇಲ್ಲಿ ದಾಖಲಿಸಲಾಗಿದೆ.