ಯಶೋದಾ – ವಸಂತ ದಂಪತಿಗೆ ಇರುವುದೊಂದೇ ಎಕರೆ ಜಮೀನು. ಅಷ್ಟರಲ್ಲೇ ಭತ್ತ, ರಾಗಿ, ಮೆಣಸಿನಕಾಯಿ ಇತ್ಯಾದಿ ಬೆಳೆಗಳನ್ನು ಸಾವಯವ ಪದ್ಧತಿಯಲ್ಲಿ ಬೆಳೆಯುತ್ತಾರೆ. ಸದ್ದುಗದ್ದಲವಿಲ್ಲದೆ ತಮ್ಮಷ್ಟಕ್ಕೇ ದುಡಿಯುವ ಇಂತಹ ಸಣ್ಣ ರೈತರಿಗೆ ನೀಡುವ ಸವಲತ್ತು ನೀಡಿಕೆಗಿರುವ ಪಾಲಿಸಿಗಳು ಸರಳವಾಗಬೇಕಾಗಿದೆ.

ಸಕಲೇಶಪುರ ಸನಿಹದ ಯೆಡೇಹಳ್ಳಿಯ ಯಶೋದಾರಿಗೆ  ನಾಗಮಲೆ ತಳಿ ರಾಗಿಯ ಮೂರು ತೆನೆ ಸಿಕ್ಕಿತು. ಅದನ್ನು ಬಿತ್ತಿ, ಬೆಳೆದಾಗ ಇಪ್ಪತ್ತಾರು ಸೇರು (24 ಕಿಲೋ) ರಾಗಿ ಮಡಿಲಿಗೆ ಬಂತು.

ಕಳೆದ ವರ್ಷ ಈ  ಬೀಜವನ್ನು ಪುನಃ ಬಿತ್ತಿದಾಗ ಅವರಿಗೆ ಒಂದೂವರೆ ಕ್ವಿಂಟಾಲ್ ಇಳುವರಿ. ಇದರಲ್ಲಿ ತೆನೆ ಆಯ್ಕೆ ಮಾಡಿ ಒಂದು ಕ್ವಿಂಟಾಲ್ ರಾಗಿಯನ್ನು ಬೀಜಕ್ಕಾಗಿ ಆಯ್ದರು. ಏನಿಲ್ಲವೆಂದರೂ ಮೂವತ್ತು ಮಂದಿ ರೈತರು ಇವರಿಂದ ಬೀಜ ಒಯ್ದಿದ್ದಾರೆ.

ನೆಲಮೂಲ ಜ್ಞಾನದೊಂದಿಗೆ ಬೆಳೆದ ಹಳ್ಳಿಯ ರೈತ ಮಹಿಳೆ ರಾಗಿಯನ್ನು ಅಭಿವೃದ್ಧಿಗೊಳಿಸಿದ ಕಾಯಕದಲ್ಲಿ ಹೇಳುವಂತಹ ವಿಶೇಷವಿಲ್ಲದಿರಬಹುದು! ಆದರೆ ಬೀಜ ಕಂಪೆನಿಗಳ ದೂರವಾಣಿ ಸಂಖ್ಯೆ ಜೋಪಾನವಾಗಿಡುವ ನಮಗೆ ಯಶೋದಾ ಅವರ ಈ ಕೆಲಸ ಮಸುಕಾಗಿ ಕಂಡರೆ ಆಶ್ಚರ್ಯವಿಲ್ಲ.

ಮಧುಗಿರಿ ಕೊರಟಗೆರೆ ಭಾಗದ ಗುಡ್ಡಗಾಡಿನಲ್ಲಿ ಚೆನ್ನಾಗಿ ಬೆಳೆಯುವ ನಾಗಮಲೆ, ಗುಡ್ಡಕಿಂಡಾಲ, ಮಳಲಿ, ಕುಳ್ಳು, ಕರಿಮುಂಡುಗ ರಾಗಿ ತಳಿಗಳ ಮೂರ್ಮೂರು ತೆನೆ ಸಿಕ್ಕಿತು. ಇವೆಲ್ಲವನ್ನೂ ನಾಟಿ ಮಾಡಿ ಇಳುವರಿ, ಗಿಡಗಳ ಆರೋಗ್ಯ ಇವೆಲ್ಲವನ್ನೂ ನೋಡಿದಾಗ ಈ ಭಾಗಕ್ಕೆ ನಾಗಮಲೆ ತಳಿ ಸರಿಹೊಂದುತ್ತದೆ ಎನ್ನುತ್ತಾರೆ ಭೂಮಿ ಸುಸ್ಥಿರ ಆಭಿವೃದ್ಧಿ ಸಂಸ್ಥೆಯ ಜಯಪ್ರಸಾದ್. ಕಳೆದ ಮೂರು ವರ್ಷಗಳಿಂದ ಈ ಸಂಸ್ಥೆ ರೈತರೊಂದಿಗೆ ಕೆಲಸ ಮಾಡುತ್ತಿದೆ.

ತೆನೆ ಆಯ್ಕೆ ಹೇಗೆ? ಯಶೋದಾ ಹೇಳುತ್ತಾರೆ – ತೆನೆಯು ಬಲಿತಿದ್ದು, ಮಧ್ಯಮ ಎತ್ತರ, ಹೆಚ್ಚು ತೆಂಡೆ ಬಂದಿರಬೇಕು. ತೆನೆಯ ಇಲುಕು ಒಳಭಾಗಕ್ಕೆ ಮಡಚಿದಂತಿರಬೇಕು. ಕೆಲವೊಂದು ಸಲ ಇಲುಕು ನೆಟ್ಟಗಿದ್ದರೂ ಪರವಾಗಿಲ್ಲ. ಇಂತಹ ತೆನೆಯನ್ನು ಬೀಜಕ್ಕಾಗಿ ಆಯ್ಕೆ ಮಾಡುತ್ತೇವೆ. ಇದನ್ನು ಪುನಃ ಬಿತ್ತಿದಾಗ ತೆನೆಯ ಗಾತ್ರ, ಇಳುವರಿ ಒಂದೇತೆರನಾಗಿ ಬರುತ್ತೆ.

ಮೊದಲಿಗೆ ಮಡಿ ಮಾಡಿಟ್ಟುಕೊಂಡು ಕೊಟ್ಟಿಗೆ ಗೊಬ್ಬರ, ಎರೆ ಗೊಬ್ಬರವನ್ನು ಮಣ್ಣಿನೊಂದಿಗೆ ಮಿಶ್ರ ಮಾಡಿ ರಾಗಿ ಬೀಜ ಬಿತ್ತುತ್ತಾರೆ. ಬಿತ್ತಿ 20-22 ದಿವಸಕ್ಕೆ ನಾಟಿಗೆ ಸಸಿ ರೆಡಿ. ನಾಟಿ ಮಾಡಿದ 120ನೇ ದಿವಸಕ್ಕೆ ಕಟಾವ್. ಅರ್ಧ ಕಿಲೋ ಬೀಜವು ಐದು ಗುಂಟೆಗೆ ಸಾಕಾಗುತ್ತದೆ ಯಶೋದಾ ಅನುಭವ.

ಸಾವಯವದಲ್ಲಿ ಬೆಳೆದ, ಉತ್ತಮ ಇಳುವರಿ ನೀಡುವ, ಈ ಭಾಗಕ್ಕೆ ಹೊಸದಾದ ನಾಗಮಲೆ ತಳಿಯನ್ನು ಅಭಿವೃದ್ಧಿಪಡಿಸಲು ಕೃಷಿ ಇಲಾಖೆ ಆಸಕ್ತವಾಗಿದೆಯಂತೆ. ಯೆಡೇಹಳ್ಳಿಯಲ್ಲಿ ಐದು ಗುಂಟೆಯಿಂದ ಹದಿನೈದು ಗುಂಟೆ ತನಕ ಹೊಸದಾಗಿ ರಾಗಿ ಕೃಷಿ ಮಾಡುವ ಸುಮಾರು ಐವತ್ತು ಮಂದಿ ರೈತರು ರೂಪು ಗೊಂಡಿದ್ದಾರೆ. ಅಕ್ಕಪಕ್ಕದ ಗ್ರಾಮಗಳ ರೈತರು ಆಸಕ್ತರಾಗಿ ಬೆಳೆಯುತ್ತಿದ್ದಾರೆ.

ಈ ರಾಗಿಯ ಮುದ್ದೆ ಬಹಳ ರುಚಿ. ಬಿಸಿ ಆರಿದಾಗ ಮುದ್ದೆ ಬಿರಿಯುವುದಿಲ್ಲ. ಬಣ್ಣವೂ ಚೆನ್ನಾಗಿದೆ. ಈ ವರ್ಷ ಒಂದೆಕ್ರೆಯಲ್ಲಿ ಇಪ್ಪತ್ತು ಕ್ವಿಂಟಾಲ್ ಇಳುವರಿ ಬರ್ಬೋದು ಎಂಬ ಸಂತಸದಲ್ಲಿ ದ್ದಾರೆ ಯಶೋದಾ.

ಸಕಲೇಶಪುರ ಸುತ್ತಮುತ್ತ ರಾಗಿ ಬೆಳೆಯುವವರ ಸಂಖ್ಯೆ ವಿರಳ. ಖರೀದಿಸಿ ಬಳಸುವವರೇ ಹೆಚ್ಚು. ವಾರಕ್ಕೆ ಕನಿಷ್ಠ ಎರಡ್ಮೂರು ದಿನ ರಾಗಿಮುದ್ದೆ ತಯಾರಾಗುವ ಅಡುಗೆ ಮನೆಗಳೇ ಅಧಿಕ.

ಭೂಮಿ ಸಂಸ್ಥೆಯ ಮುಂದಾಳ್ತನದಲ್ಲಿ ಯೆಡೇಹಳ್ಳಿಯ ಬಹುತೇಕ ರೈತರಲ್ಲಿ ಎರೆಗೊಬ್ಬರ, ಕೊಟ್ಟಿಗೆ ಗೊಬ್ಬರ, ಕಾಂಪೋಸ್ಟ್, ಕಡ್ಡಿಕಾಂಪೋಸ್ಟ್‌ಗಳಿವೆ. ಯಶೋದಾ ಅವರು ಕೃಷಿಗೆಂದೇ ಆರು ರಾಸುಗಳನ್ನು ಸಾಕಿದ್ದಾರೆ. ಕೊಟ್ಟಿಗೆಯ ಪಕ್ಕದಲ್ಲಿ ಕಲ್ಲಿನ ತೊಟ್ಟಿ ಕಾಂಪೋಸ್ಟ್. ಸಗಣಿ, ಗ್ಲಿರಿಸಿಡಿಯಾ, ಹಸಿರೆಲೆ, ಕಾಡುಮಣ್ಣು, ತೊಟ್ಟಿಯ ಕಸ, ತರಕಾರಿ ಸಿಪ್ಪೆ ಬೆರೆಸಿ ಸಾವಯವ ಗೊಬ್ಬರ ತಯಾರಿಸುತ್ತಾರೆ. ಜೊತೆಗೆ ಮೂರು ತೊಟ್ಟಿಗಳ ಕಾಂಪೋಸ್ಟ್ ತಯಾರಿಕಾ ಘಟಕವೂ ಇದೆ. ಒಂದು ವರ್ಷಕ್ಕೆ ಸುಮಾರು 15 ಟ್ರಾಕ್ಟರ್‌ಗೂ ಅಧಿಕ ಗೊಬ್ಬರ ತಯಾರಾಗುತ್ತದೆ. 2 ತೊಟ್ಟಿಗಳಲ್ಲಿ ಪ್ರತ್ಯೇಕವಾಗಿ ಎರೆಹುಳು ಗೊಬ್ಬರವನ್ನೂ ತಯಾರಿಸಿ, ವಾರ್ಷಿಕವಾಗಿ ಶೇ. 50ರಷ್ಟು ಗೊಬ್ಬರವನ್ನು ಮಾರಾಟ ಮಾಡುತ್ತಾರೆ. ಈ ಸಲ ನಾವು ಹನ್ನೆರಡು ಟ್ರಾಕ್ಟರ್ ಕಾಂಪೋಸ್ಟ್ ಮಾರಾಟ ಮಾಡಿದ್ವಿ ಎನ್ನುತ್ತಾರೆ ಯಶೋದಾ ಅವರ ಪತಿ ವಸಂತ.

ಭೂಮಿ ಸಂಸ್ಥೆಯವರು ಮಾಹಿತಿ ನೀಡುವ ಮುನ್ನ ಕೊಟ್ಟಿಗೆ ಗೊಬ್ಬರವನ್ನು ಯಾವುದೋ ಒಂದು ಮೂಲೆಯಲ್ಲಿ ಗುಂಡಿ ತೆಗೆದು ಸುರಿಯುತ್ತಿದ್ದೆವು. ಮಳೆ ನೀರಿಗೆ ಗೊಬ್ಬರವೆಲ್ಲ ಕೊಚ್ಚಿ ಹೋಗಿ ಗೊಬ್ಬರದ ಸಾರ ನಾಶವಾಗುತ್ತಿತ್ತು. ಸಂಸ್ಥೆಯ ಆರ್ಥಿಕ ನೆರವಿನಿಂದ ಕಲ್ಲಿನ ಚಪ್ಪಡಿಯ ತೊಟ್ಟಿಗಳನ್ನು ಮಾಡಿಕೊಂಡು ಅದರೊಳಗೆ ಮೂರು ತಿಂಗಳಲ್ಲಿ ಟೀ ಪುಡಿಯಂತಹ ಗೊಬ್ಬರ ತಯಾರಾಗುತ್ತದೆ ಎಂದು ಗೆಲುವಿನ ನಗೆ ಬೀರುತ್ತಾರೆ ಯಶೋಧಮ್ಮ .

ಮನೆಯಂಗಳದಲ್ಲಿಯೆ 200 ಲೀಟರ್ ನೀರು, 10 ಕೆಜಿ ಸಗಣಿ, 10 ಲೀಟರ್ ಗಂಜಲ, 2 ಕೆಜಿ ಧ್ವಿದಳ ಧಾನ್ಯದ ಹಿಟ್ಟು, 2 ಕೆಜಿ ಬೆಲ್ಲ ಜೊತೆಗೆ ಒಂದು ಹಿಡಿ ಕಾಡು ಮಣ್ಣು ಮಿಶ್ರಣ ಮಾಡಿ ಜೀವಾಮೃತ ತಯಾರಿಸುತ್ತಾರೆ. ಮೆಣಸಿನ ಬಳ್ಳಿ, ಹಸಿರುಮೆಣಸಿನ ಗಿಡ, ಶುಂಠಿ, ಕಾಫಿ ಬೆಳೆ ಸೇರಿದಂತೆ ಎಲ್ಲ ಬೆಳೆಗಳಿಗೂ ಜೀವಾಮೃತ ಬಳಸುತ್ತಾರೆ.

ಈ ಕುಟುಂಬಕ್ಕೆ ಎರಡೆಕ್ರೆಯೊಳಗಿನ ಚಿಕ್ಕ ಭೂಮಿ. ಹೆಚ್ಚುವರಿಯಾಗಿ ಗುತ್ತಿಗೆಗೆ ಒಂದೆಕ್ರೆ ಗದ್ದೆ ಪಡೆದು ಭತ್ತದ ಕೃಷಿ. ಬಂದ ಇಳುವರಿಯಲ್ಲಿ ಬಹ್ವಂಶ ಗೇಣಿಗೆ ಸಮ. ಪೂರ್ತಿ ಸಾವಯವದಲ್ಲಿ ಒಂದೆಕ್ರೆ ಗದ್ದೆಯಲ್ಲಿ ಭತ್ತ ಬೆಳೆದಿದ್ದಾರೆ. ತಾವೇ ತಯಾರಿಸಿದ ಹಟ್ಟಿಗೊಬ್ಬರ, ಎರೆಗೊಬ್ಬರಗಳ ಉಣಿಕೆ. ರಾಸಾಯನಿಕಗಳನ್ನು ಬಳಸುತ್ತಿದ್ವಿ. ಸ್ವಲ್ಪ ಜಾಗದಲ್ಲಿ ಸಾವಯವ ಮಾಡಿದ್ದರಿಂದ ಇಳುವರಿ ಕಡಿಮೆಯಾಗಿಲ್ಲ ಎನ್ನುತ್ತಾರೆ. ಮೆಣಸು, ಶುಂಠಿ, ಕಾಫಿ ಇತರ ಕೃಷಿಗಳು.

ಮನೆ ಮಂದಿಯ ದುಡಿಮೆ. ಹೆಚ್ಚುವರಿ ಕೆಲಸಗಳಿಗೆ ಕೂಲಿಯವರ  ಅವಲಂಬನೆ. ಅದೂ ದುಬಾರಿ. ಟಿಲ್ಲರ್ ಇದ್ದರೆ ಕೃಷಿ ಕೆಲಸ ಹಗುರ ಮಾಡ್ಬೋದು. ಮೂರೆಕ್ರೆಗಿಂತ ಕಡಿಮೆ ಜಾಗ ಇದ್ದವರಿಗೆ ಲೋನ್ ಕೊಡೋದಿಲ್ಲಾರಿ ವಸಂತ್ ಅಸಹಾಯಕತೆ.

ಯಶೋದಾರಂತಹ ಚಿಕ್ಕ ರೈತರು ನಮ್ಮ ನಡುವೆ ಎಷ್ಟಿಲ್ಲ? ಸದ್ದುಗದ್ದಲವಿಲ್ಲದೆ ತಮ್ಮಷ್ಟಕ್ಕೇ ದುಡಿಯುವ ಇಂತಹ ರೈತರಿಗೆ ನೀಡುವ ಸವಲತ್ತು ನೀಡಿಕೆಗಿರುವ ಪಾಲಿಸಿಗಳು ಸರಳವಾಗಬೇಕು.