ಹಾಡು

ಆಹಾ ಹಂದಿಗೂ ಬದನೆಕಾಯಿಗೂ ಮದುವೆಯಂತೆ

* ಜನಾರ್ದನ ಕೆಸರಗದ್ದೆ

ಆಹಾ ಹಂದಿಗೂ ಬದನೆಕಾಯಿಗೂ ಮದುವೆಯಂತೆ

ಲ್ಯಾಬಿನಲ್ಲಿ ಪ್ರಣಾಳದೊಳಗೆ ಸೋಬನವಂತೆ ॥ಆಹಾ ॥

ಮಾನ್ಸಾಂಟೋದ ಗೆಸ್ಟೌಸಲ್ಲಿ ಎಂಗೇಜ್ಮೆಂಟಂತೆ

ಕಾರ್ಗಿಲ್ ಕಂಪನಿ ಕಾರಿಡಾರಲ್ಲಿ ಮುಹೂರ್ತವಿದೆಯಂತೆ

ಡಬ್ಲ್ಯೂಟಿಓ ಪುರೋಯಿತರಿಂದ ಮಂತ್ರಘೋಷವಂತೆ

ಅಮೇರಿಕಾದ ವೈಟೌಸಲ್ಲಿ ಹನಿಮೂನು ಅಂತೆ ॥ಆಹಾ ॥

ಐಟಿ ಬಿಟಿ ಸಂಗೀತ ನೃತ್ಯ ಶುರುವಾಗಿದೆಯಂತೆ

ಜಿಎಮ್ ಜಿಎಮ್ ಎಂಬಾನಾದ ಕೇಳಿಸುತ್ತಿದೆಯಂತೆ

ವಿಜ್ಞಾನಿಗಳು ಬಹಳ ಮುಂದೆ ಹೋಗ್ಯಾರಂತೆ

ಸೃಷ್ಠಿಯನ್ನೇ ಗೆಲ್ಲುತ್ತೀವಿ ಅನ್ತಿದ್ದಾರಂತೆ ॥ಆಹಾ ॥

ಹಂದಿಯ ದೇಹದ ಜೀವದ ತಂತು ತೆಗೆದಿದ್ದಾರಂತೆ

ಬದನೆಕಾಯಿಯ ಜೀವದ ತಂತಿಗೆ ಸೇರಿಸ್ತಾರಂತೆ

ಮದುವೆಯೆಂದರೆ ಮದುವೆಯಲ್ಲ ಅಗ್ರಿಮೆಂಟಂತೆ

ಹುಟ್ಟುವ ಮಕ್ಕಳಿಗೆಲ್ಲಾ ಪೇಟೆಂಟ್ ಕೊಡಲೇ ಬೇಕಂತೆ ॥ಆಹಾ ॥

ವಿಷಯ ತಿಳಿದ ಬದನೆಕಾಯಿಗೆ ಬಲು ಬೇಜಾರಂತೆ

ಬದುಕುವುದಿಲ್ಲ ಸಾಯುತ್ತೀನಿ ಅನ್ನುತ್ತಿತ್ತಂತೆ

ಸಾವಿಗೂ ಮುಂಚೆ ಸುಸೈಡು ನೋಟು ಬರೆದಿಟ್ಟಿದೆಯಂತೆ

ಸಾವಿನ ಸುದ್ದಿಗೆ ಊರಿಗೇ ಊರೇ ದಂಗಾಗಿದೆಯಂತೆ ॥ಆಹಾ ॥

ಅಂತೆ ಕಂತೆ ಸುದ್ದಿಯಲ್ಲ ನಿಜದಲು ನಿಜವಂತೆ

ಮೆಣಸಿನಕಾಯಿ ಟೊಮೇಟೋಗಳಿಗೂ ಇದುವೇ ಗತಿಯಂತೆ

ಹೀಗಾದ್ರೇಗೆ ಎಂಬುವುದೀಗ ಎಲ್ಲಾರಿಗೂ ಚಿಂತೆ

ಹೇಳಿ ಕೇಳಿ ತಿಳ್ದೋರ್ ನೀವು ನಿಮಗಿಲ್ವಾ ಚಿಂತೆ ॥ಅಹಾ ॥