ಸಾಗರ, ಸೊರಬ, ಸಿರ್ಸಿ ತಾಲ್ಲೂಕಿನ  ವರದಾ ನದಿ ಅಂಚಿನ ಹಳ್ಳಿಗಳಲ್ಲಿ ಸೂತಕದ ವಾತಾವರಣ!  ಚಿಕ್ಕ ಮಕ್ಕಳಂತೆ ಚಂಡಿ ಹಿಡಿದು, ಕಳೆದ ಹದಿನೈದು ದಿನಗಳಿಂದ ಸುರಿದ ಮಳೆ ಈಗಷ್ಟೇ ಸುಮ್ಮನಾಗಿದೆ.  ನದಿಯಲ್ಲಿ  ಬಂದ ನೆರೆ ಇಳಿಯುತ್ತಿದೆ.  ನೆರೆ ನೀರೊಳಗೆ ಭತ್ತದ ಗದ್ದೆಗಳೆಲ್ಲಾ ಮುಳುಗಿವೆ.  “ಏನ್ಮಾಡೋದೋ ಕಾಣೆ! ಈ ವರ್ಷ ಗಂಜಿಗೂ ಭತ್ತ ಸಿಗೊಲ್ಲ ಮಾರಾಯರೇ” ಕಡಸೂರಿನ ಶೇಶಪ್ಪ ನಿಟ್ಟುಸಿರು ಬಿಡುತ್ತಾರೆ.  ಕಾಗೋಡಿನಿಂದ ಬನವಾಸಿಯ ವರೆಗಿನ ಹಳ್ಳಿಗಳಲ್ಲೆಲ್ಲ ಇದೇ ಆತಂಕ ;ನೆರೆಯದೆ ಮಾತು.

ವರದಾ ನದಿ ಎಂಬ ಜೀವನಾಡಿ

ಸಾಗರ ತಾಲ್ಲೂಕಿನ ವರದಾ ಮೂಲದಲ್ಲಿ ಜನ್ಮ ತಳೆಯುವ ವರದಾ ನದಿ ಸಾಗರ, ಸೊರಬ, ಸಿರ್ಸಿ ತಾಲ್ಲೂಕುಗಳಲ್ಲಿ ಸಣ್ಣ ಹೊಳೆಯಾಗಿ ಹರಿದು, ಧರ್ಮಾ ನದಿಯ ಜೊತೆಗೂಡಿ ಹಾವೇರಿ ಜಿಲ್ಲೆಯ ಮುಖ್ಯ ನದಿಯಾಗಿ ತುಂಗಭದ್ರಾ ಸೇರುತ್ತಾಳೆ. ಸಿದ್ಧಾಪುರದ ಕಡೆಯಿಂದ ಬರುವ ಕನ್ನೊಳೆ, ಕಣಸಹೊಳೆ, ಸಣ್ಣ ಹೊಳೆ, ಮಾವಿನ ಹೊಳೆಗಳೆಲ್ಲಾ ಒಂದುಗೂಡಿ ಸಾಗರದ ಯಲಕುಂದ್ಲಿಯ ಭತ್ತದ ಗದ್ದೆಗಳ ಮೇಲೆ ಹಾಯ್ದು ವರದಾ ನದಿ ಸೇರುತ್ತವೆ.

ಜುಲ್ಲೈ-ಆಗಸ್ಟ್ ತಿಂಗಳಲ್ಲಿ ವರದಾ ನದಿಯಲ್ಲಿ ನೆರೆ ಸರ್ವೇಸಾಮಾನ್ಯ.  ನೆರೆಪೀಡಿತ ಹಳ್ಳಿಗಳಾದ ಮಂಡಗಳಲೆ, ಶುಂಠಿಕೊಪ್ಪ, ಮಾಡಗದ್ದೆ, ಕಾಗೋಡು, ಹಿರೇನೆಲ್ಲೂರು, ತಡಗಳಲೆ, ಸಣ್ಣಮನೆ, ಯಲಕುಂದ್ಲಿ, ಬಾಳೆಕೊಪ್ಪ, ತಟ್ಟೀಗುಂಡಿ, ಕಾರೆಹೊಂಡ, ಕಡಸೂರು, ಗುನ್ನೂರು, ಚಂದ್ರಗುತ್ತಿ, ಬನವಾಸಿ, ಮೊಗಳ್ಳ್ಳಿ , ಎಡೂರು ಬೈಲು, ಬಂಕಸಾಣ, ಜಡೆ, ಬಾಸಿ, ಅಜ್ಜರಣಿ, ಹೊಸಕೇರಿ, ಲಿಂಗನ ಮಟ್ಟಿ, ತಿಗಣೆ ಮೊದಲಾದ ಹಳ್ಳಿಗಳಲ್ಲಿ ನೆರೆ ಸದಾ ತಲೆ ಮೇಲೆ ತೂಗಾಡುವ ಕತ್ತಿ.  ಒಮ್ಮೆ ನೆರೆ ಬಂದರೆ ೨೦ ರಿಂದ ೩೦ ದಿನ ಇಡೀ ಭತ್ತದ ಗದ್ದೆಗಳು ಜಲಸಮಾಧಿಯಾಗುತ್ತವೆ.  ಈ ವಿಶಿಷ್ಠ ಜೀವ ಪರಿಸರಕ್ಕೆ ಹೊಂದಿಕೊಳ್ಳುವ, ಒಂದು ತಿಂಗಳವರೆಗೆ ನೀರೊಳಗೆ ಬದುಕುಳಿಯುವ ಸಾಮರ್ಥ್ಯ ಇರುವ ಆಳನೀರಿನ ಭತ್ತದ ತಳಿಗಳ (ಆeeಠಿ ತಿಚಿಣeಡಿ ಡಿiಛಿe vಚಿಡಿieಣies) ಭಂಡಾರವೇ ಇಲ್ಲಿದೆ.

ಆಳನೀರಿನ ಭತ್ತದ ಬಯೋಡೇಟ!

ನೆರೆ ಪೀಡಿತ ಪ್ರದೇಶಗಳಲ್ಲಿ ನೆಲೆ ಮಾಡಿಕೊಂಡು ಬೆಳೆಯುವ ಆಳನೀರಿನ ಭತ್ತದ ತಳಿಗಳು, ಜೀವವೈವಿಧ್ಯದ ದೃಷ್ಟಿಯಿಂದ ವಿಶೇಷ ಮಹತ್ವ ಪಡೆದಿವೆ.  ಬಾಂಗ್ಲಾದೇಶ, ಪಶ್ಚಿಮ ಬಂಗಾಳ, ಗೋಧಾವರಿ ನದಿ ಪಾತ್ರ ಮತ್ತು ಪೂರ್ವ ಘಟ್ಟದ ಕಾಡು ಪ್ರದೇಶಗಳಲ್ಲಷ್ಟೇ ಕಂಡು ಬರುವ ಈ ಆಳನೀರಿನ ಭತ್ತದ ತಳಿಗಳು ಕರ್ನಾಟಕದ ವರದಾ ನದಿ ಪ್ರದೇಶದಲ್ಲಿ ಮನೆ ಮಾಡಿಕೊಂಡಿವೆ.  ಎಂಧ ನೆರೆಯನ್ನಾದರೂ ಎದುರಿಸಿ ಬೆಳೆಯಬಲ್ಲ ನೆರೆಮುಳುಗ, ನೆರೆಗುಳಿ, ಕರಿಭತ್ತ, ಸಣ್ಣವಾಳ್ಯ, ಕರಿಜಡ್ಡು ಸೋಮಸಾಲೆ, ಕರೆಕಾಲ್ ದಡಿಗ, ಮೊದಲಾದ ಭತ್ತದ ತಳಿಗಳನ್ನು ನೂರಾರು ವರ್ಷಗಳಿಂದ ವರದಾ ನದಿ ಅಂಚಿನ ಭತ್ತದ ಗದ್ದೆಗಳ ರೈತರು ಬೆಳೆಯುತ್ತಾರೆ.

ನೆರೆಯನ್ನು ಸಮರ್ಥವಾಗಿ ಎದುರಿಸಬಲ್ಲ ‘ನೆರೆಗೂಳಿ’ ಇಲ್ಲಿಯ ಜನಪ್ರಿಯ ತಳಿ. ನೆರೆ ಬಂದಾಗ, ೨೫ ದಿನಗಳ ಕಾಲ ಈ ತಳಿಯ ಭತ್ತದ ಸಸಿಗಳು ಜಪ್ಪೆನ್ನದೆ ನೀರೊಳಗೆ ಧೃಡವಾಗಿ ನಿಲ್ಲುತ್ತವೆ. ೨೫ ದಿನಗಳ ನಂತರ, ಪೈರಿನ ತುದಿಭಾಗ ಕೊಳೆಯಲು ಆರಂಭವಾಗುತ್ತದೆ.  ತಿಂಗಳೊತ್ತಿಗೆ ಗರಿಗಳೆಲ್ಲಾ ಕೊಳೆತುಹೋಗಿ ಬರಿಯ ದಂಟು ಮಾತ್ರ ಉಳಿಯುತ್ತದೆ.  ಆಗ ನೆರೆ ಇಳಿದರೆ ಸಾಕು, ಪೈರುಗಳು ಮತ್ತೆ ಚಿಗುರುತ್ತವೆ. ನೆರೆ ತಂದ ಕೊಳೆ-ಮೆಕ್ಕಲು ಮಣ್ಣು ಗೊಬ್ಬರವಾಗುತ್ತದೆ. ನೆರೆ ಬಂದ ಗದ್ದೆ ರೋಗದಿಂದ ಮುಕ್ತವಾಗಿರುವುದರಿಂದ ಔಷಧಿ ಸಿಂಪಡಣೆ ಅಗತ್ಯವೂ ಇಲ್ಲ. ಅಪ್ಪಟ ಸಾವಯವಕ್ಕೆ ಒಗ್ಗಿ ಬೆಳೆಯುವ ತಳಿಗಳಿವು.

ಇದಲ್ಲದೆ ಬುಡ್ಡ ಭತ್ತ, ಏಡಿಕುಣಿ, ಜೇನುಗೂಡು, ನೆಟ್ಟಿ ಭತ್ತ, ಕರಿ ಎಸಡಿ, ಮುಳ್ಳಾರಿ ಮೊದಲಾದ ಅಪರೂಪದ ತಳಿಗಳೂ ಈ ಪ್ರದೇಶದಲ್ಲಿ ನೆಲೆಯೂರಿವೆ. ಯಾವ ಅಧಿಕ ಇಳುವರಿ ತಳಿಯೂ ಇಲ್ಲಿ ಉದ್ಧಾರವಾಗಿಲ್ಲ ! “ಸರ್ಕಾರಿ ಬೀಜ ಹಾಕಿದರೆ ನೆರೆ ನೀರಿಗೆ ಸಸಿ ಜಿಗಿಯುವಿದಿಲ್ಲ. ನಮಗೆ ಮನೆಬೀಜವೇ ಸರಿ” ಯಲಕುಂದ್ಲಿಯ ನಾರಾಯಣ ಮನೆ ಬೀಜಕ್ಕೆ ಶಭಾಷ್‌ಗಿರಿ ಕೊಡುತ್ತಾರೆ.

ಕೈಕೊಟ್ಟ ಮುಂಗಾರು, ಮುಳುವಾದ ನೆರೆ

ಪ್ರತಿ ವರ್ಷದಂತೆ ಈ ವರ್ಷವೂ ಸಕಾಲಕ್ಕೆ ಮಳೆ ಬಂದಿದ್ದರೆ ಯಾವ ಸಮಸೈಯೂ ಇರುತ್ತಿರಲಿಲ್ಲ.  ವಾಡಿಕೆಯಂತೆ ರೋಹಿಣಿ ಮಳೆಗೆ ಒಣಬಿತ್ತನೆಮಾಡಿ, ಒಂದು ತಿಂಗಳು ಕಾದರೂ ಮಳೆ ಬರಲೇ‌ಇಲ್ಲ.  ಜೂನ್ ಕೊನೆಗೆ ಸಣ್ಣದಾಗಿ ಶುರುವಾದ ಮಳೆ, ಭತ್ತದ ಸಸಿ ಹುಟ್ಟಿ ಎರಡೆಲೆ ಹಾಕುವ ಹೊತ್ತಿಗೆ, ಜೋರಾಗಿ ನದಿಯಲ್ಲಿ ನೆರೆ ಬಂತು. ಭತ್ತದ ಸಸಿಗಳು ಬೇರುಬಿಟ್ಟು, ತಲೆ ಎತ್ತಲಿಕ್ಕೆ ಅವಕಾಶವೇ ಸಿಗಲಿಲ್ಲ.  “ಸಣ್ಣ ಮಕ್ಕಳಿಗೆ ಕಾಯಿಲೆ ಬಂದಂಗಾಯ್ತು, ಪೈರೆಲ್ಲಾ ಕೊಳೀತಿದೆ. ನನ್ನ ಸರ್ವಿಸ್‌ನಲ್ಲಿ ನೆರೆಗೂಳಿ ಸೋತಿದ್ದೇ ನಾವು ಕಂಡಿಲ್ಲ.  ಈ ವರ್ಷ ಹಿಂಗಾಯ್ತು” ಯಲಕುಂದ್ಲಿಯ ದೇವೇಂದ್ರಪ್ಪ ಪೇಚಾಡುತ್ತಾರೆ.  ನೆರೆಗೆ ಸಿಕ್ಕಿ ಸಮುದ್ರವಾದ ಗದ್ದೆ ಬಯಲಿನಲ್ಲಿ ನೆರೆ ನೀರು ಈಗ ಇಳಿಯುತ್ತಿದೆ. ಕೊಳೆತು ಖಾಲಿ ಬಿದ್ದ ಗದ್ದೆಗಳಿಗೆ ಮತ್ತೆ ನೆಟ್ಟಿ ಭತ್ತ ಹಾಕಬೇಕು.  ಮುಂಗಾರು ಬಿತ್ತನೆಗೆಂದು ಸಾಲ ಮಾಡಿಕೊಂಡಿರುವ ರೈತರು, ನೆಟ್ಟಿ ಮಾಡಲು ಮತ್ತೆ ಸಾಲ ಮಾಡಬೇಕಾದ ಪರಿಸ್ಥಿತಿ ಎದುರಾಗಿದೆ.

ನೆರೆಯ ಹಿಂದಿನ ನಗ್ನಸತ್ಯ

ವರದಾ ನದಿಯಲ್ಲಿ ನೆರೆ ಬರುವುದು ವಿಶೇಷವೂ ಅಲ್ಲ. ಹೊಸತೂ ಅಲ್ಲ. ಆದರೆ ಇತ್ತೀಚಿನ ವರ್ಷಗಳಲ್ಲಿ ನೆರೆ ನೀರು ಹೆಚ್ಚು ಭತ್ತದ ಗದ್ದೆಗಳಿಗೆ ನುಗ್ಗುವುದು ಸಾಮಾನ್ಯವಾಗಿದೆ.  “ನದಿಯ ದಂಡೆಯಲ್ಲಿ ಬಿದಿರು, ಆಲ, ಮಾವು, ನೇರಳೆ, ಹತ್ತಿ ಮರಗಳು ಸಾಕಷ್ಟಿದ್ದವು. ನೆರೆಯ ನೀರನ್ನು ಒಳಗೆ ಬಿಡದಂತೆ ಇವು ತಡೆಗೋಡೆ ನಿರ್ಮಿಸಿದ್ದವು.  ಯಾವಾಗ ನದಿ ದಂಡೆಯ ಮರಗಳೆಲ್ಲಾ ಕಾಣೆಯಾದವೂ, ಆವಾಗಿನಿಂದ ನೆರೆ ನೀರು ಭತ್ತದ ಗದ್ದೆಗಳಿಗೆ ನುಗ್ಗುವುದು ಸಾಮಾನ್ಯವಾಗಿದೆ.  ೩೦ ವರ್ಷಗಳಿಂದೀಚೆಗೆ ನದಿ ತನ್ನ ಮೂಲ ನೆಲೆ ಬಿಟ್ಟು ೨೦೦ ಅಡಿಗಳಷ್ಟು ಹೊರಗೆ ಸರಿದಿದೆ.  ನದಿಯ ಎರದೂ ಮಗ್ಗುಲಿಗೆ ಒಂದೂವರೆ ಕಿ.ಮಿ. ವರೆಗೆ ನೀರು ನಿಲ್ಲುತ್ತದೆ”  ವರದಾ ನದಿ ಪಾತ್ರದುದ್ದಕ್ಕೂ ಸುತ್ತಾಡಿ ಅನುಭವವಿರುವ ಬನವಾಸಿಯ ಪತ್ರಕರ್ತ ರಘುನಂದನ ಭಟ್ ನೆರೆಯ ಹಿಂದಿನ ನಗ್ನ ಸತ್ಯ ಬಿಚ್ಚಿಡುತ್ತಾರೆ. ಭಟ್ಟರ ಮಾತಿಗೆ ಪೂರಕರವಾಗಿ ಯಲಕುಂದ್ಲಿಯ ದೇವೇಂದ್ರಪ್ಪ “ಹೊಳೆ ಆಳ ಇತ್ತು, ದಂಡೆ ಉದ್ದಕ್ಕೂ ಬಿದಿರುಮಟ್ಟೆ ಇತ್ತು. ಬಿದಿರು ಕಡಿದೂ, ಕಡಿದೂ ಖಾಲಿ ಮಾಡಿದರು. ಗಿಡ ಹಿಸಿದು, ಮಣ್ಣು ತುಂಬಿ ಗಾತ ಕಮ್ಮಿ ಆಯ್ತು. ಅಗಲ ಜಾಸ್ತಿ ಆಯ್ತು” ಎನ್ನುತ್ತಾರೆ.

ಸಿರ್ಸಿ ತಾಲ್ಲೂಕಿನಲ್ಲಿ ಬರೀ ೬ ಕಿ. ಮೀ. ಹರಿಯುವ ವರದಾ ನದಿ ಎಷ್ಟು ಮಹತ್ವಪೂರ್ಣ ಎಂದರೆ ೨೧ ಗ್ರಾಮಗಳ ೨೫ ಸಾವಿರ ಜನಸಂಖೈ ಭತ್ತದ ಕೃಷಿಗೆ ವರದಾ ನದಿಯನ್ನೇ ನೆಚ್ಚಿಕೊಂಡಿದೆ.  ಅವ್ಯಾಹತ ಅರಣ್ಯನಾಶ, ಆಕೇಶಿಯಾದಂತ ಏಕಪ್ರಭೇದದ ಗಿಡಗಳನ್ನು ನೆಡುವ ಅರಣ್ಯ ಇಲಾಖೆಯ ಅತಿಬುದ್ಧಿವಂತಿಕೆ ದೆಸೆಯಿಂದ ಮಳೆ ನೀರು ನೆಲದೊಳಗೆ ಇಂಗದೆ ನದಿಗೆ ಬರುತ್ತಿದೆ. ವರದಾ ನದಿಗೆ ಜೀವ ಸೆಲೆಯಾಗಿದ್ದ ಸಿರ್ಸಿ ಭಾಗದ ೮೩ ಕೆರೆಗಳು ಶಿಥಿಲಗೊಂಡಿವೆ. ಇದೆಲ್ಲದರ ಪರಿಣಾಮ ೬ ತಿಂಗಳು ನೀರಿಲ್ಲದ ಒಣಗುವ ವರದೆ, ಇನ್ನಾರು ತಿಂಗಳು ತುಂಬಿ ಹರಿಯುತ್ತಾಳೆ.

ನೆರೆ ಪರಿಹಾರ ಎಂಬ ನಾಟಕ

ವರದಾ ನದಿ ಪಾತ್ರದ ಪ್ರದೇಶಗಳಲ್ಲಿ ನೆರೆಬರುವುದು, ಒಂದಷ್ಟು ಹಳ್ಳಿಗಳು ದ್ವೀಪವಾಗಿ ಸುದ್ದಿಯಾಗುವುದು, ನೆರೆ ವೀಕ್ಷಣಾ ಸಮಿತಿ ಸಮೀಕ್ಷೆ ನಡೆಸಿದಂತೆ ಮಾಡುವುದು ಪ್ರತಿವರ್ಷ ನಡೆಯುವ ನಾಟಕ. ಬಿತ್ತನೆ ಮುಗಿವ ಹೊತ್ತಿಗೆ ರೈತನಿಗೆ ಎಕರೆಗೆ ಎರಡೂವರೆ ಸಾವಿರ ಖರ್ಚು ಬಂದಿರುತ್ತದೆ.ಸರ್ಕಾರ ನೆರೆಯಿಂದ ಬೆಳೆ ಹಾಳಾದ ರೈತರಿಗೆ ಎಕರೆಗೆ ೩೦೦-೪೦೦ ರೂ ಕೊಟ್ಟು ಕೈ ತೊಳೆದುಕೊಳ್ಳುತ್ತಾರೆ.    ಸರ್ಕಾರಿ ಕಛೇರಿ ಸುತ್ತಿ ಹಣ ರೈತನ ಕೈಗೆ ಬರುವ ಹೊತ್ತಿಗೆ ಅದು ಅರೆಕಾಸಿನ ಮಜ್ಜಿಗೆಯಾಗಿರುತ್ತದೆ.

ನೆರೆ ಪರಿಹಾರಕ್ಕೆ ಯಾವುದೇ ಶಾಶ್ವತ ಉಪಾಯ ಹುಡುಕದೆ, ನೆರೆ ಭತ್ತದ ಸಾಂಪ್ರದಾಯಿಕ ಕೃಷಿ ಅಭಿವೃದ್ಧಿಗೆ ಪೂರಕವಾದ ಯೋಜನೆ ರೂಪಿಸದ ರಾಜಕಾರಣೆ, ಪುಡಾರಿಗಳು ನೆರೆ ಸಮಸೈಯನ್ನು ಓಟ್ ಬ್ಯಾಂಕ್ ಮಾಡಿಕೊಂಡಿರುವುದು ದುರಂತ

ನೆರವಿಗೆ ಬಾರದ ಕೃಷಿ ಇಲಾಖೆ ; ನಿದ್ದೆ ಮಾಡಿದ ನಿಜ್ಞಾನಿಗಳು

ಮೂರು ತಾಲ್ಲೂಕುಗಳ ನೂರಾರು ಎಕರೆ ಪ್ರದೇಶದಲ್ಲಿ ನೆರೆ ಭತ್ತದ ಕೃಷಿ ನಡೆಯುತ್ತಿದ್ದರೂ, ಇದಕ್ಕೆ ಪೂರಕವಾಗಿ ಯಾವುದೇ ಕಾರ್ಯಕ್ರಮಗಳನ್ನು ರೂಪಿಸದಿರುವುದು ನಮ್ಮ ಕೃಷಿ ಇಲಾಖೆಯ ನಿರ್ಲಕ್ಷ್ಯಕೊಂದು ಉದಾಹರಣೆ. ಕೃಷಿ ಇಲಾಖೆ ಸಬ್ಸಿಡಿ ದರದಲ್ಲಿ ಅಧಿಕ ಇಳುವರಿ ಭತ್ತದ ತಳಿಗಳ ಬಿತ್ತನೆ ಬೀಜ ವಿತರಿಸುತ್ತಿದೆ. ಪುಕ್ಕಟೆ ಕೊಟ್ಟರೂ ಯಾವ ರೈತನೂ ಇದನ್ನು ನೆರೆ ಗದ್ದೆಗಳಲ್ಲಿ ಬೆಳೆಯುವ ಧೈರ್ಯ ಮಾಡರು. ಇಂಥ ಪ್ರಯತ್ನಗಳು ಈ ಹಿಂದೆ ವಿಫಲವಾಗಿವೆ.  ರೈತರಿಗೆ ಅಗತ್ಯವಿರುವ ಉತ್ತಮ ಗುಣಮಟ್ಟದ ಸ್ಥಳೀಯ ನೆರೆ ಭತ್ತದ ತಳಿ ಕೊಡಬಾರದೇಕೆ ಎಂಬ ಪ್ರಶ್ನೆಗೆ “ಕೃಷಿ ವಿಶ್ವವಿದ್ಯಾಲಯ ಬಿಡುಗಡೆ ಮಾಡಿದ ತಳಿಗಳನ್ನಷ್ಟೇ ಇಲಾಖೆ ರೈತರಿಗೆ ವಿತರಿಸುತ್ತದೆ.  ಜಯಭತ್ತ ವಿತರಿಸಿದ್ದೇವೆ.  ಸ್ಥಳೀಯ ಭತ್ತದ ಬೀಜ ಕೊಡುವ ವ್ಯವಸ್ಥೆ ಇಲ್ಲ” ಸಿರ್ಸಿಯ ಸಹಾಯಕ ಕೃಷಿ ನಿರ್ದೇಶಕ ಶಿವಪ್ರಸಾದ್ ಕೈಚೆಲ್ಲುತ್ತಾರೆ.  ಈ ಭಾಗದ ಭತ್ತದ ತಳಿಗಳ ಬಗ್ಗೆ ಸಂಶೋಧನೆ ನಡೆಸಿರುವ ಧಾರವಾಡದ ಕೃಷಿ ವಿಶ್ವವಿದ್ಯಾಲಯದ ವಿಜ್ಞಾನಿ ಡಾ. ರಮೇಶ ಭಟ್ ಅಧಿಕ ಇಳುವರಿ ತಳಿಗಳಾದ ಅಭಿಲಾಷ್, ಇಂಟಾನ್, ಜಯ ಮತ್ತು ಫಾಲ್ಲುಣ ಸ್ಥಳೀಯ ತಳಿಗಳನ್ನ ಸಂಪೂರ್ಣವಾಗಿ ಬದಲಾವಣೆ ಮಾಡಲಾಗಿಲ್ಲ.  ಸ್ಥಳೀಯ ಪರಿಸರಕ್ಕೆ ಒಗ್ಗಿರುವ ಭತ್ತದ ತಳಿಗಳ ವಿಶೇಷ ಗುಣಗಳಿಂದಾಗಿ ರೈತರು ಅವನ್ನು ಈಗಲೂ ಕೃಷಿ ಮಾಡುತ್ತಿದ್ದಾರೆ ಎಂಬ ಅಂಶವನ್ನು ಸಂಶೋಧನಾ ಪ್ರಬಂಧದಲ್ಲಿ ದಾಖಲಿಸಿದ್ದಾರೆ.  ಸತ್ಯ ಹೀಗಿದ್ದೂ, ವಿಜ್ಞಾನಿಗಳು ಅಭಿವೃದ್ಧಿ ಪಡಿಸಿದ ತಳಿಗಳಷ್ಟೇ ಶ್ರೇಷ್ಠ ಎಂಬ ಓಬೀರಾಯನ ಕಾಲದ ನಂಬಿಕೆಯನ್ನು ನೆಚ್ಚಿಕುಳಿತಿರುವ ಕೃಷಿ ಇಲಾಖೆ ನಿಯಮಗಳನ್ನು ಆ ದೇವರೇ ಬದಲಿಸಬೇಕು. ನೆರೆಹಾವಳಿ ಇರುವ ಬನವಾಸಿ ಭಾಗದ ರೈತ ಸಂಪರ್ಕ ಕೇಂದ್ರದಲ್ಲಿ ಕೃಷಿ ಅಧಿಕಾರಿಯೇ ಇಲ್ಲ.  ಇರುವ ಇಬ್ಬರು ಸಹಾಯಕರು ೭೪ ಗ್ರಾಮಗಳ ಉಸ್ತುವಾರಿ ನೋಡಿಕೊಳ್ಳಬೇಕು.  ನೆರೆಗದ್ದೆಗಳ ರೈತರ ಮಾರ್ಗದರ್ಶನಕ್ಕೆ ಇಲಾಖೆಗೆ ಎಳ್ಳಷ್ಟೂ ಕಾಳಜಿ ಇಲ್ಲ.

ಕೃಷಿ ಇಲಾಖೆಯ ಕತೆ ಇದಾದರೆ, ವಿಜ್ಞಾನಿಗಳ ಕತೆ ಇನ್ನೊಂದು ಬಗೆಯದು.  ಸಾವಿರಾರು ಕೃಷಿಕರ ಅನ್ನದ ಬಟ್ಟಲು ತುಂಬುವ ನೆರೆ ಭತ್ತದ ತಳಿಗಳ ಬಗ್ಗೆ ವಿಜ್ಞಾನಿಗಳಿಗೆ ಆಸಕ್ತಿಯೇ ಇಲ್ಲ.  ಡಾ. ರಮೇಶ್ ಭಟ್‌ರು ಇಲ್ಲಿನ ತಳಿಗಳ ಸಂಗ್ರಹ ಮತ್ತು ಗುಣದಾಖಲಾತಿ ಮಾಡಿದ್ದು ಬಿಟ್ಟರೆ ಆಳನೀರಿನ ಭತ್ತದ ತಳಿಗಳ ಸಂಶೋಧನೆ ನಡೆದಿರುವುದು ಕಮ್ಮಿ, ಇಲ್ಲವೆಂದೇ ಹೇಳಬಹುದು. ರೈತರ ಜ್ಞಾನವನ್ನು ಮೂಲವಾಗಿಟ್ಟುಕೊಂಡು ಸಹಬಾಗಿತ್ವ ತಳಿ ಅಭಿವೃದ್ಧಿ ಮೂಲಕ ನೆರೆಭತ್ತದ ತಳಿಯನ್ನು ಅಭಿವೃದ್ಧಿ ಮಾಡುವ ಅವಕಾಶಗಳಿದ್ದರೂ ವಿಜ್ಞಾನಿಗಳು ಈ ನಿಟ್ಟಿನಲ್ಲಿ ಆಸಕ್ತ ತೋರಿಲ್ಲ.  ಶಿವಮೊಗ್ಗದ ನವಿಲೆಯ ಸಂಶೋಧನಾ ಕೇಂದ್ರದಲ್ಲಿ ಆಳನೀರಿನ ಅಧಿಕ ಇಳುವರಿ ತಳಿಯೊಂದನ್ನು ಅಭಿವೃದ್ಧಿಗೊಳಿಸುವ ಪ್ರಯತ್ನ ನಡೆದಿದೆಯಂತೆ. ನೆರೆಗೂಳಿಯನ್ನು ಮೀರಿಸುವ ಗುಣ ಈ ಅಧಿಕ ಇಳುವರಿ ತಳಿಗೆ ಇಲ್ಲ ಎಂಬುದನ್ನು ವಿಜ್ಞಾನಿಗಳೇ ಒಪ್ಪಿಕೊಳ್ಳುತ್ತಾರೆ. ಅಧಿಕ ಇಳುಚರಿ ತಳಿ ಸಂಶೋಧನೆಗಿನ್ನ, ಸ್ಥಳೀಯ ನೆರೆ ಭತ್ತದ ತಳಿಗಳನ್ನೇ ಅಭಿವೃದ್ಧಿ ಪಡಿಸುವ ಕೆಲಸ ತುರ್ತಾಗಿ ಆಗಬೇಕಿದೆ.

ಮುಂದೇನು?

ವರದಾ ನದಿಯ ದಂಡೆಯ ನೆರೆಗದ್ದೆಗಳಂಥ ಸೂಕ್ಷ್ಮ ಪರಿಸರಕ್ಕೆ ಹೊಂದಿಕೊಳ್ಳುವ ತಳಿಗಳನ್ನು ವಿಜ್ಞಾನಿಗಳು ಸೃಷ್ಟಿಸುವುದಿಲ್ಲ.  ನೂರಾರು ವರ್ಷಗಳಿಂದ ನೆರೆಯೊಂದಿಗೆ ಸೆಣಸಿದ ನಿಸರ್ಗವೇ ರೂಪಿಸುತ್ತದೆ ಎಂಬ ಸತ್ಯ ಈ ಭಾಗದ ರೈತರೊಂದಿಗೆ ಒಡನಾಡಿದವರಿಗೆ ಸಾಕಾರವಾಗುತ್ತದೆ. ಸಾಂಪ್ರದಾಯಿಕ ಕೃಷಿಯಲ್ಲಿ ಬೆಳೆಯುವ ರುಚಿಕರ, ಪೌಷ್ಠಿಕ, ರಾಸಾಯನಿಕ ರಹಿತ, ದಪ್ಪ ಭತ್ತದ ನೆರೆಗೂಳಿ ತಳಿಗಳು ಕರ್ನಾಟಕದ ಹೆಮ್ಮೆಯ ಸಂಪತ್ತು.  ಗೋವ, ಕೇರಳದ ಮಾರುಕಟ್ಟೆಯಲ್ಲಿ ಒಳ್ಳೆಯ ಬೇಡಿಕೆ ಇರುವ, ಅಧಿಕ ಇಳುವರಿ ತಳಿಗಳಿಗಿನ್ನ ಹೆಚ್ಚು ಬೆಲೆಗೆ ಮಾರಾಟವಾಗುವ ಈ ಭತ್ತಕ್ಕೆ ‘ಸಾವಯವ ಮುದ್ರೆ’ ಸಿಕ್ಕರೆ ನೆರೆಯ ನಡುವೆ ಬದುಕುವ ರೈತ ಇನ್ನಷ್ಟು ನೆಮ್ಮದಿಯಿಂದ ಉಸಿರಾಡಬಹುದು.

ಇದೆಲ್ಲಾ ಸಾಧ್ಯವಾಗ ಬೇಕಾದರೆ ನೆರೆ ಭತ್ತದ ತಳಿಗಳ ವ್ಯವಸ್ಥಿತ ದಾಖಲಾತಿ, ತಳಿ ಅಭಿವೃದ್ಧಿ, ಸಾಂಪ್ರದಾಯಿಕ ಕೃಷಿ ಉನ್ನತಿಯ ಕಾರ್ಯಕ್ರಮಗಳನ್ನು ಚುರುಕುಗೊಳಿಸಬೇಕಾಗಿದೆ.

ಕೃಷಿ ಇಲಾಖೆ ಮತ್ತು ಕಷಿ ವಿಜ್ಞಾನಿಗಳಿಗೆ ಅದೆಷ್ಟರಮಟ್ಟಿಗೆ ಇದಕ್ಕೆಲ್ಲಾ ಆಸಕ್ತಿ ಇದೆಯೋ ಗೊತ್ತಿಲ್ಲ.  ಜನಸಾಮಾನ್ಯರಾದ ನಾವು ನೀವೇ ಇದಕ್ಕೆ ಮುಂದಾಗಬೇಕು. ಸಹಜ ಸಮೃದ್ಧ- ಸಾವಯವ ಕೃಷಿಕರ ಬಳಗ ಯುವ ವಿಜ್ಙಾನಿ ಮಂಜುನಾಥ್ ಎಂ.ಎಚ್‌ರ ಮಾರ್ಗದರ್ಶನದಲ್ಲಿ ನೆರೆಭತ್ತದ ಕೃಷಿ- ಸಂಸ್ಕೃತಿಯ ದಾಖಲಾತಿ, ತಳಿ ಅಭಿವೃದ್ಧಿ ಕಾರ್ಯಾಕ್ರಮಕ್ಕೆ ಮುಂದಾಗಿದೆ.

ನೆರೆ ಭತ್ತದ ಬಗೆಗಿನ ನಿಮ್ಮ ಅನುಭವ ಮತ್ತು ಮಾಹಿತಿ ಹಂಚಿಕೊಳ್ಳಿ.